ಏ ಹಾಗಲ್ವೋ, ಸುಮ್ನೆ ಪುಸ್ತಕದ ಹಾಳೆ ತಿರುಗಿಸ್ತಿರಬೇಕಾದ್ರೆ ಎಲ್ಲೋ ಮಧ್ಯೆ ಕಣ್ಮುಚ್ಚಿ ಇಟ್ಬಿಡಬೇಕು. ಆಮೇಲೆ ಏನಾದ್ರೂ ಒಂದು ಬೇಡ್ಕೊ. ಬೆಳಗ್ಗೆ ತನಕ ಪುಸ್ತಕ ತೆಗೀಬೇಡ. ಬೆಳಗ್ಗೆಗೆ ನವಿಲಿಗರಿ ಮರಿ ಹಾಕಿದ್ರೆ ನಾವ್ ಕೇಳ್ಕೊಂಡಿದ್ದು ನಿಜವಾಗುತ್ತಂತೆ.
ನಾನು ನಕ್ಕಿದ್ದೆ. ಹೋಗೇ ಹುಚ್ಚಿ, ಅದ್ಹೇಗೇ ನವಿಲುಗರಿ ಮರಿ ಹಾಕುತ್ತೆ? ನವಿಲೇ ಇರಲ್ಲ ಕಾವು ಕೊಡೋಕೆ?
ಹೌದಲ್ವೇ, ಅವಳೂ ಸ್ವಲ್ಪ ಹೊತ್ತು ಯೋಚನೆ ಮಾಡಿದ್ದಳು. ಏನೂ ಗೊತ್ತಾಗ್ಲಿಲ್ಲ ಅಂತ ಕಾಣುತ್ತೆ. ಏ ಹೋಗೋ ಅದೆಲ್ಲಾ ಆಗುತ್ತೆ. ರಾಗಿಣಿ, ಅವಳ ಪುಸ್ತಕದಲ್ಲಿ ಮರಿ ಹಾಕಿದ್ದನ್ನ ಎಲ್ರಿಗೂ ತೋರಿಸಿದ್ಳು ಮೊನ್ನೆ. ನಾನೂ ನೋಡಿದ್ದೆ. ಅವ್ರಪ್ಪ ಮಾರನೇ ದಿನಾನೇ ಶೆಟ್ರ ಅಂಗಡಿಯಿಂದ ಸರ ಬೇರೆ ಕೊಡ್ಸಿದ್ರು.
ನಾನಾಗ ಎಷ್ಟನೇ ಕ್ಲಾಸೋ ನೆನಪಿಲ್ಲ. ಅವಳೆದುರು ನಕ್ಕಿದ್ರೂ ನಾನೂ ಬಹಳ ದಿವಸ ಪುಸ್ತಕದ ಮಧ್ಯೆ ನವಿಲುಗರಿ ಇಡ್ತಿದ್ದೆ. ನವಿಲುಗರಿ ಮೊಟ್ಟೆ ಇಟ್ಟಿದೆಯಾ ಆಂತ ರಾತ್ರಿ ಎದ್ದು ಪುಸ್ತಕ ಅಲ್ಲಾಡಿಸಿ ಶಬ್ದ ಬರುತ್ತಾ ಅಂತ ಕೇಳ್ತಿದ್ದೆ. ಒಂದಿನಕ್ಕೂ ಅದು ಮರಿ ಹಾಕಲಿಲ್ಲ. ನನ್ಹತ್ರ ಇರೋದು ಗಂಡು ನವಿಲುಗರಿ ಕಣೇ. ಹೆಣ್ಣು ಮಾತ್ರ ಮರಿ ಹಾಕುತ್ತೆ ಅಂತ ಒಂದಿನ ಹೇಳಿದ್ದೆ.
ಗಂಡ್ಯಾವ್ದು, ಹೆಣ್ಯಾವ್ದು ಅಂತ ಗುರುತಿಸೋದು ಹೇಗೆ? ಕೇಳಿದ್ಳು.
ಇಬ್ರೂ ಸ್ವಲ್ಪ ಹೊತ್ತು ಯೊಚಿಸಿ ಗೊತ್ತಾಗ್ದಿದ್ದ ಮೇಲೆ ರಾಗಿಣಿನೀನ ಕೇಳಿದ್ರಾಯ್ತು ಅಂತ ಸುಮ್ಮನಾದ್ವಿ.
ರಾಗಿಣೀಗೆ ಭಾರೀ ಜಂಬ, ಎಷ್ಟ್ ಕೇಳಿದ್ರೂ ಹೇಳ್ಲಿಲ್ಲ.
ಹೈಸ್ಕೂಲಿಗೆ ಬರೋ ಹೊತ್ತಿಗೆ ನನ್ಹತ್ರ ನವಿಲುಗರಿ ಇರಲಿಲ್ಲ. ಅವಳು ಮಾತ್ರ ಅದೊಂದು ದೊಡ್ಡ ಆಸ್ತಿಯೇನೋ ಅನ್ನಂಗೆ, ಕ್ಲಾಸಿಂದ ಕ್ಲಾಸಿಗೆ, ಪುಸ್ತಕದಿಂದ ಪುಸ್ತಕಕ್ಕೆ ದಾಟಿಸ್ತಾನೇ ಬಂದಿದ್ಳು.
ಏ ಇನ್ನೂ ನಂಬ್ತಿಯೇನೇ ಅದನ್ನೆಲ್ಲಾ ಅಂತ ಕೇಳಿದ್ರೆ, ನೀ ಸ್ವಲ್ಪ ಸುಮ್ನಿರ್ತೀಯಾ ಅಂತ ಗದರಿಸೋಳು.
ಕಾಲೇಜಿಗೆ ಹೋಗೋವಾಗ ’ಏನೇ ಮರಿ ಹಾಕ್ತಾ’ ಅಂತ ಕೇಳಿದ್ರೆ? ’ಅವಾಗೆಲ್ಲ ಎಷ್ಟು ಮಜ ಇರ್ತಿತ್ತು ಅಲ್ವಾ’ ಅಂತ ಗರೀನ ತನ್ನ ಕೆನ್ನೇಗೆ ಒತ್ತಿಕೊಳ್ಳೋಳು.
ನಾನಾದ್ರೂ ಆ ಗರಿ ಆಗ್ಬಾರ್ದಾ ಅಂತ ಆ ಗರಿ ಮೇಲೆ ಹೊಟ್ಟೆಕಿಚ್ಚು ನಂಗೆ.
ಒಂದಿನ. ಗರೀನ ಕದ್ದು ಮನೆಗೊಯ್ದಿದ್ದೆ. ಅವಳದೆಷ್ಟು ಸಂಕಟ ಪಟ್ಟು ಅದನ್ನು ಹುಡುಕಿದ್ಳೂಂದ್ರೆ, ನಂಗೇ ತಡಕೊಳ್ಳೋಕಾಗ್ದೆ, ’ತಗೋಳೇ ಮನೆಗೆ ಹೋಗೋ ದಾರೀಲಿ ಸಿಕ್ತು’ ಅಂತ ವಾಪಸ್ ಕೊಟ್ಬಿಟ್ಟಿದ್ದೆ. ಅವಳ ಕಣ್ಣಲ್ಲಿ ಮಿಂಚು.
ಓದು ಮುಗಿದ ಮೇಲೆ ಅವಳು ಮನೇಲಿಳುದಳು. ನಾನು ಊರು ಬಿಟ್ಟು ಬೇರೆ ಕಡೆ ಕೆಲಸಕ್ಕೆ ಹೋದೆ. ಊರಿಗ್ಹೋದಾಗೆಲ್ಲಾ ಸಿಗೋಳು.
ನೀನಿಲ್ದಿದ್ರೂ ಅವಾಗವಾಗ ಮನೇಗೆ ಬಂದು ಹೋಗ್ತಾಳೆ ಕಣೋ ಅಂತ ಅಮ್ಮ ಹೇಳ್ತಿದ್ರು.
ಕಣ್ಣು ಮುಚ್ಚಿ ತೆಗೆಯೋದರಳೊಗೆ ಅವಳಿಗೆ ಪ್ರಸ್ತಾಪ ಬಂದು, ನಿಶ್ಚಿತಾರ್ಥ ಆಗಿ ಮದುವೇನೂ ಆಗ್ಹೋಯ್ತು. ಅವಳೇ ಖುದ್ದಾಗಿ ಬಂದು ಕಾರ್ಡು ಕೊಟ್ಟಿದ್ದಳು. ಅವಳ ಕಣ್ಣು ತುಂಬಿ ಬಂದಿತ್ತಾ? ಬರ್ತೀನಿ ಕಣೋ ಅಂತ ಓಡ್ಹೋಗ್ ಬಿಟ್ಟಿದ್ದಳು.
ಈಗ್ಲೂ ಊರಿಗೆ ಹೋದಾಗ ಸಿಕ್ತಾಳೆ. ಈಗ ನವಿಲುಗರಿ ಮರಿ ಹಾಕಿದೆ. ಅವಳದನ್ನ ಕಂಕುಳಲ್ಲಿ ಎತ್ತುಕೊಂಡು ಅಡ್ಡಾಡುತ್ತಿರುತ್ತಾಳೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!