ಸಂಪದದ ಗೆಳೆಯರು ಒಮ್ಮನಸ್ಸಿನಿಂದ ಜೊತೆಗೂಡಿದರೆ ಏನೆಲ್ಲಾ ಕೆಲಸ ಮಾಡಲು ಸಾಧ್ಯ ಎಂಬುದನ್ನು ನಾವೆಲ್ಲಾ ನೋಡಿದ್ದೇವೆ. ಗ್ನು/ಲಿನಕ್ಸ್ ಹಬ್ಬ, ಸಂಪದ ಸಂವಾದ, ಸಂಪದದಲ್ಲೇ ದಿನನಿತ್ಯ ನಡೆಯುವ ಅನೇಕ ಮಾತುಕತೆ, ಚರ್ಚೆ ಇತ್ಯಾದಿ ಒಂದಲ್ಲಾ ಒಂದು ರೀತಿಯ ಫಲಿತಾಂಶವನ್ನು ಅನೇಕ ವಿಧಗಳಲ್ಲಿ ನಮ್ಮೆಲ್ಲರ ಮುಂದೆ ತಂದಿದೆಯಲ್ಲವೇ?
ಇದೇ ರೀತಿ, ಮಕ್ಕಳಿಗೂ ಕಂಪ್ಯೂಟರ್, ತಂತ್ರಜ್ಞಾನ ಇತ್ಯಾದಿ ವಿಷಯಗಳ ಮಾಹಿತಿಯನ್ನು ಹಂಚಿಕೊಳ್ಳುವ ಬಯಕೆಯಿಂದ ಮತ್ತೊಮ್ಮೆ ಸಂಪದದ ನಾವು ಕೆಲವು ಮಂದಿ ಸದ್ದಿಲ್ಲದೆ ಒಂದಿಷ್ಟು ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇವೆ. ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಸಂಪದಿಗರಿಗೆ ಮತ್ತೊಂದು ಸಂತಸದ ಸುದ್ದಿ ಕೊಡಲು ಇದೇ ಸುಸಮಯ. ಪುಟಾಣಿಗಳೆ, ನಿಮಗಾಗಿ "ಕಂಪ್ಯೂಟರ್ ಮಸ್ತಿ" ಪುಸ್ತಕವನ್ನು ಸಂಪದದ ಕೆಲ ಗೆಳೆಯರು ಸಿದ್ದಪಡಿಸಿದ್ದೇವೆ...
ಕನ್ನಡದಲ್ಲಿ ಕಂಪ್ಯೂಟರ್ ಕಲಿಕೆ ಬಗ್ಗೆ ಹಲವಾರು ಪುಸ್ತಕಗಳು ಬಂದಿರಬಹುದು. ಆದರೆ, ಅತ್ಯಂತ ಸರಳ ಭಾಷೆಯಲ್ಲಿ, ಚಿತ್ರಸಹಿತ ಕಂಪ್ಯೂಟರ್ ಕಲಿಸುವ ಪುಸ್ತಕಗಳು ಕನ್ನಡದಲ್ಲಿ ಇಲ್ಲವೆಂದೇ ಹೇಳಬಹುದು. ‘ಕಂಪ್ಯೂಟರ್ ಮಸ್ತಿ’ ಪುಸ್ತಕ ಆ ಕೊರತೆಯನ್ನು ನಿವಾರಿಸಲಿದೆ. ಅಂಗೈಯಲ್ಲಿ ಆನೆಯನ್ನು ತಂದಂತೆ, ಕಂಪ್ಯೂಟರಿನ ಅದ್ಭುತ ದೈತ್ಯ ಶಕ್ತಿಯನ್ನು ಅತ್ಯಂತ ಸರಳ ಭಾಷೆಯಲ್ಲಿ ನಿಮ್ಮ ಮುಂದೆ ತರುತ್ತಿದ್ದೇವೆ.
ಅದರ ಒಂದು ಝಲಕ್ ಇಲ್ಲಿದೆ ನೋಡಿ...

ಕಂಪ್ಯೂಟರ್ ಮಸ್ತಿ... ಹಾಗೂ ಪುಟಾಣಿ ಸಂಪದ ..... ಹೊ ಹೊ ಹೊ.. ಏನೆಲ್ಲಾ ಹೊಸತು ಅಂದು ಕೊಳ್ತಿದ್ದೀರಾ? ಇದೆಲ್ಲಾ ಏನು ಅಂತ ಇನ್ನು ಕೆಲವೇ ದಿನಗಳಲ್ಲಿ ನಿಮಗೆ ತಿಳಿಯುತ್ತದೆ. ಸ್ವಲ್ಪ ಕಾಯ್ತೀರಲ್ಲಾ? ಮಕ್ಕಳ ಸಾಹಿತ್ಯ (ಕಥೆ, ಕವನ, ಚುಟುಕ, ಚಿತ್ರಪುಟ, ಮಕ್ಕಳೇ ಬರೆದ ನನ್ನ ಪುಟ), ವಿಜ್ಞಾನ, ಆಟ-ಪಾಠ, ನೋಡಿ ಕಲಿ, ಮಾಡಿ ತಿಳಿ, ಇತ್ಯಾದಿ ಅಂಕಣಗಳಲ್ಲಿ ಬರಹಗಳನ್ನು ಸೇರಿಸುವ ಆಸಕ್ತಿ ಇದೆಯೇ? ಹಾಗಿದ್ದರೆ ಕಾಮೆಂಟ್ ಸೇರಿಸಿ ನಿಮ್ಮ ಮತ ಹಾಕಿ.
- ಪುಟಾಣಿ ಸಂಪದ ತಂಡ
-- ಕಂಪ್ಯೂಟರ್ ಮಸ್ತಿ ವಿಭಾಗ
ಪ್ರತಿಕ್ರಿಯೆ (5)