ರಾತ್ರಿ ನಿದ್ದೆ ಮಾಡಬೇಕಾದರೆ ನಾನು ಈ ದಿನ ಏನೆಲ್ಲಾ ಮಾಡಿದೆ ಎಂಬುದನ್ನು ಒಮ್ಮೆ ಅವಲೋಕಿಸುವುದು ನನ್ನ ದಿನಚರಿಯ ಭಾಗಗಳಲ್ಲೊಂದು. ಹೀಗೆ ಆಲೋಚಿಸಬೇಕಾದರೆ ಸಿಗುವ ಉತ್ತರ ಬರೀ ಮಾತು..ಮಾತು..ಮಾತು. ಹೌದು, ದಿನಾ ನಾವು ಎಷ್ಟು ಮಾತಾಡುತ್ತೇವಲ್ವಾ? ಮಾತನಾಡದೆ ಕುಳಿತು ಕೊಳ್ಳುವುದು ಅಂತೂ ನನ್ನ ಪಾಲಿಗೆ ಅಸಾಧ್ಯದ ಮಾತು. ಹೇಗೋ ಮಾತು ಕಡಿಮೆ ಮಾಡಿ ಮೌನದ ಸುಖ ಅನುಭವಿಸಬೇಕು ಎಂದು ಕೊಂಡು ಒಂದು ಶುಭ ಗಳಿಗೆಯಲ್ಲಿ ನಿರ್ಧರಿಸಿದೆ. ನಿಜವಾಗಿಯೂ ಈ ಮೌನ ಒಂದು ಒಳ್ಳೆಯ ಅನುಭವವನ್ನೇ ನೀಡುತ್ತದೆ ಎಂದು ನನಗೆ ತಿಳಿದು ಬಂದದ್ದೇ ಈ ಮೌನ ಪ್ರಯೋಗದಿಂದ. ಮೌನದ ಒಳಹೊಕ್ಕಾಗ ನನಗೆ ಕೇಳಿಸಿದ ಶಬ್ದಗಳು ಅಷ್ಟಿಷ್ಟಲ್ಲ. ಅರೆ, ದಿನಾ ಚಾಟರ್್ಬಾಕ್ಸ್ ತರ ಸದ್ದು ಮಾಡಿಕೊಂಡಿರುವ ನಾನು ಇಷ್ಟೊಂದು ಶಬ್ದಗಳನ್ನು ಈವರೆಗೆ ಗಮನಿಸಲೇ ಇಲ್ಲ ಅಂತಾ ಅನಿಸಿತು.
ನಾನು ಚಿಕ್ಕವಳಿರುವಾಗ ನಮ್ಮೂರ ಜನ ಎದ್ದೇಳ ಬೇಕಾದರೆ ಕೋಳಿ ಕೂಗಬೇಕು. ಆವಾಗ ಯಾರೂ ಅಲರಾಂ ಇಟ್ಟು ನಿದ್ದೆ ಹೋಗುತ್ತಿರಲಿಲ್ಲ. ಬೆಳಗ್ಗೆ ಸುಮಾರು 5 ಗಂಟೆಗೆ ಸರಿಯಾಗಿ ಆ ಊರಲ್ಲಿರುವ ಹುಂಜವೊಂದು ಕೂಗಿದರೆ ಸಾಕು, ಊರಿಗೆ ಊರೇ ಎಚ್ಚರವಾಗುತ್ತಿತ್ತು. ನನ್ನೂರು ಪುಟ್ಟ ಹಳ್ಳಿಯಾಗಿದ್ದರಿಂದ ಈಗಲೂ ಇಲ್ಲಿ ಬೆಳಗ್ಗೆ ಕೋಳಿ ಕೂಗು ಕೇಳಿಸುತ್ತದೆ. ಸರಿ, ನಮ್ಮ ಮನೆಯಲ್ಲಾದರೆ ಮೊದಲು ಅಮ್ಮ ಎದ್ದೇಳುತ್ತಾರೆ. ಅಮ್ಮ ಎದ್ದು ಬಾಗಿಲು ತೆರೆಯುವ ಸದ್ದು ಕೇಳಿದ ಕೂಡಲೇ ಮನೆಯ ಹಿಂದೆ ಮುಂದೆ ಕಾವಲಾಗಿ ಕುಳಿತಿದ್ದ ನಾಯಿಗಳು ಬಂದು ಕುಯ್ಯಿಂ ಕುಯ್ಯಿಂ ಅನ್ನುತ್ತವೆ. ಬಾಗಿಲು ತೆರೆದು ಹೊರಗೆ ಕಾಲಿಡಬೇಕಾದರೆ ಹತ್ತಿರದಲ್ಲೇ ಇರುವ ಕೊಟ್ಟಿಗೆಯಿಂದ ದನ ಕರುಗಳು ಮೈಕೊಡವಿ ನಿಲ್ಲುವ ಸದ್ದು ಕೇಳಿಸುತ್ತದೆ. ಆಮೇಲೆ ಅಮ್ಮನ ದಿನಚರಿ ಆರಂಭ...ಕೋಳಿ ಗೂಡಿನ ಬಾಗಿಲು ತೆರೆದಾಗ ಕುಕ್ಕುಟಗಳ ಸದ್ದು, ಎಲ್ಲೋ ಮರದಲ್ಲಿ ಉಲಿಯುತ್ತಿರುವ ಕೋಗಿಲೆ, ಕಾ..ಕಾ...ಎಂದು ಕೂಗುತ್ತಿರುವ ಕಾಗೆ ಇನ್ನು ಹಲವಾರು ಹಕ್ಕಿಗಳ ಚಿಲಿಪಿಲಿ ತೆರೆದ ಕಿಟಿಕಿಯ ಮೂಲಕ ಕೇಳಿ ಬರುತ್ತದೆ. ಇದು ಮಾತ್ರವಲ್ಲದೆ ಬೆಳಗ್ಗಿನ ಆ ಥಂಡಿ ವಾತಾವರಣದಲ್ಲಿ ಒಂದಷ್ಟು ದೂರದಲ್ಲಿರುವ ಅಯ್ಯಪ್ಪ ಕ್ಷೇತ್ರದಿಂದ "ಶರಣಂ ಅಯ್ಯಪ್ಪ..... ಸ್ವಾಮಿ ಶರಣಂ ಅಯ್ಯಪ್ಪ "ಎಂಬ ಭಕ್ತಿಗೀತೆ ಕೇಳಿಬರುತ್ತದೆ. ಜೊತೆಗೆ ಮನೆಯಲ್ಲಿ "ಎದ್ದೇಳು ಗಣಪಾ.... ಬೆಳಗಾಯಿತೇಳು" ಎಂಬ ಸುಪ್ರಭಾತ ಬೇರೆ. ಇನ್ನೇನು ಬೆಳಗ್ಗೆ 6 ಗಂಟೆಯಾಗಬೇಕಾದರೆ ಮನೆ ಮಂದಿಯೆಲ್ಲಾ ಎದ್ದೇಳಲೇ ಬೇಕು ಇದು ನಮ್ಮ ಮನೆಯಲ್ಲಿರುವ ಅಲಿಖಿತ ನಿಯಮ. ಮತ್ತೆ ಶುರುವಾಗುತ್ತದೆ ಅಡುಗೆ ಮನೆಯಲ್ಲಿ ಪಾತ್ರೆಗಳ ಸದ್ದು, ಮೊಟಾರ್ ಆನ್ ಮಾಡಿ ನೀರು ತುಂಬಿಸುವುದು, ದನ ಕರುಗಳನ್ನು ಸ್ನಾನ ಮಾಡಿಸುವುದು ಎಲ್ಲೆಲ್ಲಿಯೂ ಸದ್ದು ...ಸದ್ದು... ಸದ್ದು...
ಈ ಎಲ್ಲಾ ಗದ್ದಲಗಳ ನಡುವೆ ಒಂದೆಡೆ ಟಿವಿ ನ್ಯೂಸ್ ನೋಡುತ್ತಾ ಅಪ್ಪ ಕುಳಿತರೆ, ಬೈಕು, ಆಟೋ ರಿಕ್ಷಾ ತೊಳೆದು ಅಣ್ಣ ರೆಡಿಯಾಗುತ್ತಾನೆ. ಅಡುಗೆ ಮನೆಯಲ್ಲಿ ಅಮ್ಮ ಏನು ತಿಂಡಿ ಮಾಡುತ್ತಾರೆ ಎಂಬುವುದು ಕೂಡಾ ಅಲ್ಲಿಂದ ಕೇಳಿಬರುವ ಸದ್ದಿನಿಂದಲೇ ಗೊತ್ತಾಗುತ್ತದೆ. ನೀರು ದೋಸೆಯಾದರೆ ಕಾವಲಿಯ ಚುಯಿಂಗುಟ್ಟುವ ಸದ್ದು, ಪುಟ್ಟುಂ ಕಡಲೆ ಮಾಡುತ್ತಿದ್ದರೆ ಆವಿ ತೆಗೆಯುವ ಸದ್ದು, ಇನ್ನೇನು ಉಪ್ಪಿಟ್ಟು ಮಾಡುತ್ತಿದ್ದರೆ ಒಗ್ಗರಣೆ ಸದ್ದು ಹೀಗೆ...
ಗಂಟೆ 8 ಆಗಬೇಕಾದರೆ ಎಲ್ಲರಿಗೂ ಹೊರಡಬೇಕಾದ ಗಡಿಬಿಡಿ. ಅಮ್ಮನಂತೂ ಅತ್ತಿಂದಿತ್ತ ಓಡುತ್ತಾ, ಅಡುಗೆ ಮನೆ ಸಂಭಾಳಿಸಬೇಕು, ಟಿಫಿನ್ ಬಾಕ್ಸ್ ತುಂಬಿಸಿಕೊಡಬೇಕು, ಅಣ್ಣ, ಅಕ್ಕ, ತಮ್ಮ ಮತ್ತು ನಾನೂ ಸೇರಿದಂತೆ ಎಲ್ಲರೂ ಕರೆಯುವ ಕೂಗಿಗೆ ಓ ಗೊಡಬೇಕು. ಅದರ ನಡುವೆ ಮನೆಗೆ ಏನೆಲ್ಲಾ ಸಾಮಾನುಗಳನ್ನು ತರಬೇಕು ಎಂದು ಅಪ್ಪನಿಗೆ ವರದಿ ಹೇಳಬೇಕು. ನಾನು ಶಾಲೆಗೆ ಹೋಗಬೇಕಾದರೆ ಅಪ್ಪನ ಜೊತೆಯೇ ಹೊರಡುತ್ತಿದ್ದೆ. ರಸ್ತೆ ಮನೆಯಿಂದ ಒಂದಷ್ಟು ದೂರ ಇದ್ದುದರಿಂದ ಇನ್ನೇನು ನಮ್ಮ ಬಸ್ಸಿನ ಹಾರ್ನ್ ಕೇಳಿಸುತ್ತಿದೆಯೇ ಎಂದು ಕಿವಿ ನೆಟ್ಟಗೆ ಮಾಡುತ್ತಿದ್ದೆ. ನಮ್ಮೂರಲ್ಲಿ ಓಡಾಡುವ ಅಂದರೆ ನನ್ನೂರಿನಿಂದ ಕಾಸರಗೋಡು ಪೇಟೆಗೆ ತಲುಪಲಿರುವ ಬಸ್ಸುಗಳ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು .ಆದುದರಿಂದ ಪ್ರತಿಯೊಂದು ಬಸ್ಸಿನ ಹಾರ್ನ್ ಯಾವುದು ಎಂದು ನಮಗೆಲ್ಲರಿಗೂ ಗೊತ್ತೇ ಇರುತ್ತದೆ. ಆ ಬಸ್ಸಿನ ಹಾರ್ನ್ ಹತ್ತಿರದ ಸ್ಟಾಪ್್ನಿಂದ ಕೇಳಿದರೆ ಸಾಕು, ಬಸ್ಸು ಬಂತು ಅಂತ ನಾನು ಮತ್ತು ಅಪ್ಪ ಮನೆಯಿಂದ ಹೊರಡುತ್ತಿದ್ದೆವು. ಇದು ಮಾತ್ರವಲ್ಲದೆ ಪ್ರತಿಯೊಂದು ಬಸ್ಸಿನ ಹಾರ್ನ್ ಕೇಳಿದರೆ ಸಾಕು ಗಂಟೆ ಇಷ್ಟಾಯಿತು ಎಂದು ವಾಚು ನೋಡದೆ ಹೇಳುತ್ತಾರೆ ನಮ್ಮೂರಿನ ಜನರು.
ಈ ಮೊದಲೇ ಹೇಳಿದಂತೆ ನನ್ನೂರು ಹಳ್ಳಿಯಾಗಿದ್ದರಿಂದ ಹೆಂಗಸರೆಲ್ಲಾ ಮನೆಯಲ್ಲೇ ಇರುತ್ತಾರೆ. ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ಮನೆ ಚೊಕ್ಕವಾಗಿಟ್ಟುಕೊಳ್ಳುವುದು ಹೀಗೆ ಎಲ್ಲರ ಮನೆಯಲ್ಲಿ ಗೌಜಿಯೇ ಗೌಜಿ. ಮನೆಗೆಲಸ ಮಾಡುವ ಸದ್ದು, ಕೆಲವೊಂದು ಮನೆಯಿಂದ ಕೇಳಿ ಬರುವ ಶಾಸ್ತ್ರೀಯ ಸಂಗೀತದಿಂದ ಹಿಡಿದು ಜಾನಪದ, ಭಕ್ತಿಗಾನ, ರಾಕ್ ಮ್ಯೂಸಿಕ್ ಹೀಗೆ ಎಲ್ಲ ಸಂಗೀತಗಳ ಸ್ವರ ಸಂಗಮ. ಗಂಟೆ 10 ಆದ ಕೂಡಲೇ ಪಕ್ಕದಲ್ಲೇ ಇರುವ ಶಾಲೆಯಿಂದ ಕೇಳಿ ಬರುವ ಪ್ರಾರ್ಥನೆ, ಅಸೆಂಬ್ಲಿಯಲ್ಲಿ ಮಕ್ಕಳು ಹೇಳುವ ಪ್ರತಿಜ್ಞೆ, ಗಂಟೆ ಸದ್ದು, ಶಾಲೆಯ ಬಳಿಯಲ್ಲೇ ಇರುವ ಅಂಗನವಾಡಿಯಿಂದ ಕೇಳುವ ಮಕ್ಕಳ ಕಿಲ ಕಿಲ ಸದ್ದು, ಒಂದಿಷ್ಟು ನಗು, ಅಳು ಇದೆಲ್ಲಾ ನೆನಪಿಸಿಕೊಂಡಾಗ ಬಾಲ್ಯದ ನೆನಪು ಕಣ್ಮುಂದೆ ನಿಲ್ಲುತ್ತದೆ.
ಮನೆಯ ಮುಂದಿನ ರಸ್ತೆಯಲ್ಲಿ ಬಸ್ಸು, ಕಾರು, ಬೈಕುಗಳ ಅಬ್ಬರದ ಓಡಾಟವೇನೂ ಇಲ್ಲ. ಈ ನಡುವೆ "ಮೀನೇ...ಐಲ, ಮತ್ತಿ, ಮುಳ್ಳನ್..." ಅಂತಾ ಮೀನು ಮಾರುವವ ಸೈಕಲ್್ನಲ್ಲಿ ಹಾರ್ನ್ ಹಾಕುತ್ತಾ ಬರುತ್ತಾನೆ. ಶಾಕಾಹಾರಿಗಳಲ್ಲದ ಮನೆಯ ಹೆಂಗಸರು "ಏಯ್..ಮೀನೇ...."ಅಂತಾ ಆತನನ್ನು ಕರೆದು ಅಲ್ಲಿಯೂ ಚೌಕಾಶಿ ಮಾಡಿಕೊಂಡು ತಮಗಿಷ್ಟವಾದ ಮೀನನ್ನು ತೆಗೆದುಕೊಂಡು ಮನೆಗೆ ಮರಳುತ್ತಾರೆ. ಇನ್ನೊಂದೆಡೆ, ಪ್ಲಾಸ್ಟಿಕ್, ಬೆಳ್ಳಿ, ಸ್ಟೀಲ್ ಪಾತ್ರೆ ಮಾರುವವರು "ಪಾತ್ರೆ..."ಎಂದು ಕೂಗುತ್ತಾರೆ, ಚಳಿಗಾಲವಾದರೆ "ಕಂಬಲ್ ಚಾಹಿಯೇ ಮಾ.."ಎಂದು ಕೂಗುವ ಕಂಬಳಿ ಮಾರುವ ಭಯ್ಯಾ..."ಪಳಯ ಪ್ಲಾಸ್ಟಿಕ್,ಪೇಪರ್, ಕುಪ್ಪಿ, ಇರುಂಬ್ ಇಂಡೋ"( ಹಳೆ ಪ್ಲಾಸ್ಟಿಕ್, ಪೇಪರ್,ಗಾಜಿನ ಬಾಟಲ್, ಕಬ್ಬಿಣ ಇದೆಯಾ) ಎಂದು ಕೂಗುವ ಗುಜರಿಯವನು, "ಪೊರಿ... ಪೊರಿ... ಪೊರಿಯೇ .."ಎಂದು ಹಳೆ ಪೇಪರ್ ತೆಗೆದುಕೊಂಡು ಹಣದ ಬದಲು ಹುರಿಯಕ್ಕಿ ಕೊಟ್ಟು ಮಾರಾಟ ಮಾಡುವ ಅಜ್ಜ...ಹೀಗೆ ದೈನಂದಿನ ಜೀವನದಲ್ಲಿ ನಮ್ಮೊಂದಿಗೆ ಸದ್ದು ಮಾಡುವ ಜನರೆಷ್ಟು?
ಇದೀಗ ಕೆಲಸ ನಿಮಿತ್ತ ಮನೆ ಬಿಟ್ಟು ಬೆಂಗಳೂರು ಮಹಾನಗರಿಗೆ ಬಂದಾಗಿದೆ. ಮಹಾನಗರಿ ಅಂದ ಮೇಲೆ ಸದ್ದು ಗದ್ದಲದ ಬಗ್ಗೆ ಹೇಳಬೇಕೇ? ನಗರದ ಸದ್ದು ಗದ್ದಲ ಬದಿಗಿರಲಿ. ನಾನು ಹೇಳಲಿಕ್ಕೆ ಹೊರಟಿರುವುದು ನಮ್ಮ ಪಿ.ಜಿ ಬಗ್ಗೆ. ಮೊನ್ನೆ ಮೊನ್ನೆಯಷ್ಟೇ ನಮ್ಮ ಪಿ.ಜಿಯಲ್ಲಿ ದೆವ್ವ ಬಂದಿದೆ, ಕೆಲವರಿಗೆ ಗೆಜ್ಜೆ ಸದ್ದು ಕೇಳಿದೆ ಎಂಬ ಸುದ್ದಿ ಹರಡಿತ್ತು. ರಾತ್ರಿ 12 ಗಂಟೆ ಹೊತ್ತಿಗೆ ದೆವ್ವ ಬರುತ್ತದೆ ಎಂಬ ಸುದ್ದಿ ಹಬ್ಬಿದೊಡನೆ ಎಲ್ಲರಿಗೂ ಭಯ. ನನಗಂತೂ ಆ ದೆವ್ವವನ್ನು ನೋಡಲೇಬೇಕೆಂಬ ಹಂಬಲ. ದೆವ್ವ, ಅಂತದ್ದೇನೂ ಇಲ್ಲ ಎಂದು ನಾವೊಂದಿಬ್ಬರು ಹೇಳಿದರೂ ಯಾರೂ ಕೇಳುವ ಗೋಜಿ ಬರಲಿಲ್ಲ. ಅಂತೂ ಇಂತೂ ರಾತ್ರಿ 12 ಗಂಟೆಯವರೆಗೆ ಕಾದು ಕುಳಿತು ನೋಡಿದರೆ ನಮಗೆ ಕೇಳಿದ್ದು ಫ್ಯಾನಿನ ಸದ್ದು, ಏನೋ ಸ್ಕ್ರೂ ಸಡಿಲವಾಗಿ ಫ್ಯಾನ್ ತಿರುಗುವಾಗ ರಾತ್ರಿ ವೇಳೆ ಅಂದು ಗೆಜ್ಜೆ ನಾದದಂತೆ ಕೇಳಿ ಬರುತ್ತಿತ್ತು. ಅದೇ ನಮ್ಮ ಪಿಜಿಯ ಫ್ಯಾನ್ ದೆವ್ವ!.
ಪಿಜಿ ಅಂದ ಮೇಲೆ ರಾತ್ರಿ ಬೆಳಗ್ಗೆ ಎನ್ನದೆ ಮೊಬೈಲ್ ಅಂತೂ ಚಾಲು ಇದ್ದೇ ಇರುತ್ತದೆ. ವಿಧ ವಿಧದ ರಿಂಗ್ ಟೋನ್, ಮೆಸೇಜ್ ಟೋನ್, ಹುಡುಗಿಯರ ಪಿಸು ಮಾತು, ನಗು, ಅಳು, ಗುಸುಗುಸು ಹೀಗೆ ಹಲವಾರು ಬಗೆಯ ಸದ್ದು ಕಿವಿಗೆ ಬೀಳದಿರದು. ಬೆಳಗ್ಗೆ ಎದ್ದ ಕೂಡಲೇ ಯಾವ ರೂಮಿನ ಬಾಗಿಲು ಬೇಗ ತೆರೆದು ಕೊಳ್ಳುತ್ತದೆ, ಸ್ನಾನಕ್ಕಾಗಿ ಯಾರು ಮೊದಲು ಗೀಜರ್ ಆನ್ ಮಾಡುತ್ತಾರೆ, ಯಾರು ಬಾತ್ ರೂಮಿನಲ್ಲಿ ಮೊದಲು ಬಕೆಟ್ ಇಡುತ್ತಾರೆ ಎಂಬುದನ್ನೆಲ್ಲಾ ಸದ್ದಿನಿಂದಲೇ ಅರಿಯಬೇಕು. ಹಾಸಿಗೆಯಲ್ಲಿ ಇನ್ನೂ ಮುಸುಕೆಳೆದು ಮಲಗಿಕೊಂಡಿರುವಾಗ ಬಾತ್್ರೂಮಿನಲ್ಲಿ ನೀರಿನ ಸದ್ದು ಕೇಳಿದರೆ ಇನ್ನು ಒಳಹೊಕ್ಕವರು ಹೊರಗೆ ಬರಬೇಕಾದರೆ ಇನ್ನರ್ಧ ಅಥವಾ ಕೆಲವೊಮ್ಮೆ ಒಂದು ಗಂಟೆ ಬೇಕು. ಬೇಕಾದರೆ ಆ ಹೊತ್ತಲ್ಲಿ ಚೆನ್ನಾಗಿ ನಿದ್ದೆ ಮಾಡಬಹುದು. ಇತ್ತ ಅಡುಗೆ ಮನೆಯಲ್ಲಿ ಪಾತ್ರೆಗಳ, ಕೆಲಸದವರ ಸದ್ದು. ಪಿಜಿಯ ಹೊರಗೆ ಹೂವಾ....ಎಂದು ಹೂ ಮಾರುವವ(ಳು), ಸೊಪ್ಪು, ತರಕಾರಿ ಮಾರುವವರ ಕೂಗು, ಒಂದಿಷ್ಟು ವಾಹನಗಳ ಸದ್ದು ಮಲಗಿದ್ದಲ್ಲಿಗೇ ಕೇಳಿ ಬರುತ್ತದೆ. ಆಮೇಲೆ ಟೀವಿ ಚಾಲೂ ಆದರೆ ಮುಗಿಯಿತು, ಅದರ ಸದ್ದು ಬೇರೆಯೇ.. ತರಾತುರಿಯಲ್ಲಿ ಓಡುವ ಹುಡುಗಿಯರು, ಬಾತ್್ರೂಮ್್ಗಾಗಿ ಜಗಳವಾಡುವ ಹುಡುಗಿಯರು, ಹೈ ಹೀಲ್ಡ್ ಚಪ್ಪಲಿ ಹಾಕಿ ಟಕ್ ಟಕ್ ಸದ್ದು ಮಾಡುತ್ತಾ ಮೆಟ್ಟಲಿಳಿಯುವ ಹುಡುಗಿಯರು... ಹೇಗೆ ಏನೆಲ್ಲಾ ಸದ್ದುಗಳು!. ಈ ಸದ್ದುಗಳು ನಮ್ಮ ಜೀವನದಲ್ಲಿ ಎಂದೂ ಕೇಳಿಸುವವುಗಳೇ. ಆದರೂ ಒಂದಿಷ್ಟು ಸಮಯ ಎಲ್ಲಾ ಸದ್ದು ಗದ್ದಲಗಳಿಂದ ದೂರವಾಗಿ ಪ್ರಶಾಂತ ವಾತಾವರಣದಲ್ಲಿ ಸುಮ್ಮನೆ ಮೌನವಾಗಿ ಒಂದಷ್ಟು ತಾಸು ಇದ್ದು ಬಿಡೋಣ. ಆಗಲೇ ಮೌನದ ಸಂತೋಷ ಅನುಭವಿಸಲು ಸಾಧ್ಯ. ಅದಕ್ಕೆ ಬಲ್ಲವರು ಮಾತು ಬೆಳ್ಳಿ, ಮೌನ ಬಂಗಾರ ಅಂತಾ ಅಂದಿದ್ದು.
ಪ್ರತಿಕ್ರಿಯೆ (1)