ಓಂ ಬೀಚಿನ ಗುಂಗಿನಲ್ಲಿ ಹೊರಟ ನನಗೆ ಗುಂಡಿಗಳಿಂದ ತುಂಬಿದ್ದ ರಸ್ತೆ, ದಾರಿ ತಪ್ಪಿಸಿತು. ಗೋಕರ್ಣದಿಂದ ಸೀದಾ ಮಂಗಳೂರಿಗೆ ಹೋಗಬೇಕೆಂದಿದ್ದವನಿಗೆ ಆ ಗುಂಡಿಗಳಿಂದ ಹದಗೆಟ್ಟ ರಸ್ತೆ, ಯಮದೂತರಂತೆ ಮೈ ಮೇಲೇ ಬರುತ್ತಿದ್ದ ಲಾರಿಗಳು, ಅಡ್ಡಾದಿಡ್ಡಿಯಾಗಿ ಓಡುತ್ತಿದ್ದ ಸರ್ಕಾರಿ ಬಸ್ಸುಗಳು, ನಡುವೆ ಜಪ್ಪಯ್ಯ ಎಂದರೂ ಜಗ್ಗದೆ " ಎಮ್ಮೆ ನಿನಗೆ ಸಾಟಿಯಿಲ್ಲ, ನಿನ ನೆಮ್ಮದಿಗೆ ಭಂಗವಿಲ್ಲ " ಎಂದು ಅಣ್ಣಾವ್ರು ಹಾಡಿದ ಸಂಪತ್ತಿಗೆ ಸವಾಲ್ ಚಿತ್ರದ ಗೀತೆಯನ್ನು ಅಡಿಗಡಿಗೂ ನೆನಪಿಸುತ್ತಿದ್ದ ಆ ಭಯಂಕರ ಎಮ್ಮೆ-ಎತ್ತುಗಳ ಹಿಂಡು, ರಾಷ್ಟ್ರೀಯ ಹೆದ್ದಾರಿ - ೧೭ ಎಂದು ಕರೆಸಿಕೊಳ್ಳುವ ಆ ರಸ್ತೆಯ ದುರವಸ್ಥೆ ನನ್ನನ್ನು ಮತ್ತೊಮ್ಮೆ ಚಿಂತಿಸುವಂತೆ ಮಾಡಿ, ಅನಾಮತ್ತಾಗಿ ಕುಮಟದಿಂದ ನನ್ನ ಐ-ಟೆನ್ ಕಾರನ್ನು ಶಿರಸಿಯ ಕಡೆಗೆ ತಿರುಗಿಸಿಬಿಟ್ಟೆ. ಹೆದ್ದಾರಿಯಲ್ಲಿ ಹೋಗುತ್ತಿದ್ದ ಕಾರು ಇದ್ದಕ್ಕಿದ್ದಂತೆ ಚಿಕ್ಕ ರಸ್ತೆಗೆ ನುಗ್ಗಿದ್ದನ್ನು ನೋಡಿ ಗಾಭರಿಯಾದ ಮಡದಿ ಮಕ್ಕಳು ಬೆಪ್ಪಾಗಿ " ಮುಂದೆ ಎಲ್ಲಿಗೆ ಹೋಗ್ತಿರೋದು " ಅಂತ ಒಂದೇ ಸಮನೆ ಕುಯ್ಯತೊಡಗಿದಾಗ, ಅದು "ಸಸ್ಪೆನ್ಸ್" ಎಂದು ಮಾತ್ರ ಹೇಳಿ ನೆಮ್ಮದಿಯಾಗಿ ಮಲಗಲು ಹೇಳಿದೆ. ತಗ್ಗು ದಿಣ್ಣೆಗಳಿಂದ ಅಂಕು ಡೊಂಕಾಗಿ ಹೆಬ್ಬಾವಿನಂತೆ ಮಲಗಿದ್ದ ರಸ್ತೆಯಲ್ಲಿ ಒಂದೇ ಒಂದು ಗುಂಡಿಯೂ ಇರಲಿಲ್ಲ, ಆ ಭಯಂಕರ ೧೭ನೆ ಹೆದ್ದಾರಿಗೆ ಹೋಲಿಸಿದರೆ ಇದು ನೂರು ಪಟ್ಟು ಉತ್ತಮವಾಗಿತ್ತು. "ಅಘನಾಶಿನಿ"ಯ ದಡದ ಸುಂದರ ಚಿತ್ರಗಳನ್ನು ಕಣ್ತುಂಬಾ ತುಂಬಿಕೊಳ್ಳುತ್ತಾ, ಆ ನಿರ್ಜನ ಕಾನನದ ಅಂದವನ್ನು ಸವಿಯುತ್ತಾ ಆರಾಮಾಗಿ ೧೦೦ ರ ವೇಗದಲ್ಲಿ ನುಗ್ಗಿದ ಕಾರು ಕುಮಟ - ಶಿರಸಿ ನಡುವಿನ ’ಯಾಣ’ ದ ತಿರುವಿಗೆ ಬಂದಾಗ ಘಂಟೆ ಎರಡಾಗಿತ್ತು. ಎಡಕ್ಕೆ ತಿರುಗಿ ಪಶ್ಚಿಮ ಘಟ್ಟಗಳ ದಟ್ಟ ಕಾನನದ ನಡುವೆ ಸಾಗಿದ್ದ ಸಣ್ಣ ರಸ್ತೆಯಲ್ಲಿ ಜಾಗರೂಕತೆಯಿಂದ ಸುಮಾರು ೧೫ ಕಿ.ಮೀ. ಸಾಗಿ ಡಾಂಬರು ರಸ್ತೆ ಮುಗಿದು ಮಣ್ಣು ರಸ್ತೆ ಶುರುವಾದಾಗ, ಅಲ್ಲಿ ನಿಂತಿದ್ದ ನಾಲ್ಕಾರು ಕಾರುಗಳನ್ನು ನೋಡಿ ಕುತೂಹಲದಿಂದ ಕಾರು ನಿಲ್ಲಿಸಿ ಕೆಳಗಿಳಿದು ಒಂದು ಸಿಗರೇಟು ಹಚ್ಚಿದೆ.



ಮೊದಲು ಕೆಳಗಿಳಿದ ಮಗ ಕುತೂಹಲದಿಂದ ಸುತ್ತಲೂ ನೋಡುತ್ತಾ " ಇದ್ಯಾವೂರಪ್ಪ, ಎಲ್ಲಿದ್ದೀವಿ " ಅಂದ. ’ಈಗ ನಿಮಗೊಂದು ವಿಚಿತ್ರ ತೋರಿಸ್ತೀನಿ, ನೋಡ್ತಾ ಇರಿ’ ಅಂದೆ. ಹಾಗೆಯೇ ಮುಂದೆ ನಡೆದು ನೋಡಿದಾಗ ರಸ್ತೆಯ ಎರಡೂ ಕಡೆ ಹಳ್ಳ ಬಿದ್ದು ಕೆಸರು ರಾಡಿಯಾಗಿ, ಕಾರಿನ ನಾಲ್ಕೂ ಚಕ್ರಗಳು ಹೂತುಹೋಗುವ ಸಂಭವವಿತ್ತು. ಹಾಗೇ ದೂರದ ಅಡಿಕೆ ತೋಟದ ಮಧ್ಯೆ ಕಂಡ ಮನೆಯ ಹತ್ತಿರ ಹೋಗಿ " ಯಾರಾದರೂ ಇದ್ದೀರಾ " ಎಂದು ಕೂಗಿದ್ದಕ್ಕೆ ಉತ್ತರಿಸಿದ್ದು ಇಬ್ಬರು ಸಣ್ಣ ಮಕ್ಕಳು. ಮುಂದೆ ಕಾರು ಹೋಗುತ್ತಾ ಮರಿ, ದಾರಿ ಹೇಗಿದೆ? ಅಂದಿದ್ದಕ್ಕೆ ಅವರಿಬ್ಬರೂ ಒಕ್ಕೊರಲಿನಿಂದ " ಮುಂದೆ ದಾರಿ ಸರಿಯಿಲ್ಲ, ಕಾರು ಇಲ್ಲೇ ಬಿಟ್ಟು ನಾಲ್ಕು ಕಿ.ಮೀ.ನಡೆದು ಹೋಗ್ಬೇಕು" ಅಂದಾಗ ಹಿಂದೆ ನಿಂತಿದ್ದ ಮಡದಿ ಬಿಟ್ಟ ನಿಟ್ಟುಸಿರು ನನಗೆ ತುಂಬಾ ಜೋರಾಗೇ ಕೇಳಿಸಿತು. ಕಾರನ್ನು ಅಲ್ಲೇ ನಿಲ್ಲಿಸಿ "ಯಾಣ"ದ ಶಿಖರಗಳನ್ನು ನೋಡಲೇಬೇಕೆಂಬ ಹಠದಿಂದ ನಡೆದೇ ಹೊರಟೆವು. " ನಮ್ಮೂರ ಮಂದಾರ ಹೂವೇ " ಚಿತ್ರದಲ್ಲಿ ಮಡದಿ-ಮಕ್ಕಳು ನೋಡಿದ್ದ ಯಾಣದ ಚಿತ್ರಗಳನ್ನು ಮತ್ತೊಮ್ಮೆ ಕಲ್ಪಿಸಿಕೊಂಡು ವರ್ಣಿಸುತ್ತಾ ನಡೆದದ್ದೇ ಗೊತ್ತಾಗಲಿಲ್ಲ. ಯಾಣದ ತಳ ತಲುಪಿದಾಗ ಎಲ್ಲರಿಗೂ ಸಾಕಷ್ಟು ಆಯಾಸವಾಗಿತ್ತು. ಅದಾಗಲೇ ಯಾಣದ ದರ್ಶನ ಮಾಡಿ ಹಿಂತಿರುಗುತ್ತಿದ್ದವರನ್ನು ಕೇಳಿದೆ, ಮುಂದೆ ಹೇಗೆ ಅಂತ, ಅದಕ್ಕವರು ಹೇಳಿದರು, ಸುಮಾರು ಇನ್ನೂರೈವತ್ತು ಮೆಟ್ಟಿಲು ಹತ್ತಬೇಕೆಂದು. ಅದನ್ನು ಕೇಳಿ ಮೊದಲೇ ಸುಸ್ತಾಗಿದ್ದ ನನ್ನ ಪ್ರೀತಿಯ ಮಡದಿ ನಾನೊಲ್ಲೆ ಅಂದು ಬಿಟ್ಟಳು!



ಕೊನೆಗೂ ಮಕ್ಕಳ ಒತ್ತಾಯಕ್ಕೆ ಮಣಿದು ನಮ್ಮ ಜೊತೆಗೂಡಿ ನಡೆಯಲು ಮುಂದಾದಳು ನನ್ನ ಅರ್ಧಾಂಗಿ, ಅವಳನ್ನು ಹರ್ಷಚಿತ್ತಳನ್ನಾಗಿಸಲು ಹಲವಾರು ಜೋಕುಗಳನ್ನು ಹೇಳುತ್ತಾ, ನಗಿಸುತ್ತಾ ಕೊನೆಗೂ ಆ ಇನ್ನೂರೈವತ್ತು ಮೆಟ್ಟಿಲುಗಳನ್ನು ಹತ್ತಿ ಯಾಣದ ಬೃಹತ್ ಶಿಖರಗಳ ಮುಂದೆ ನಿಂತಾಗ, ನಮ್ಮ ಶ್ರಮ ಸಾರ್ಥಕವೆನ್ನಿಸಿತು. ಆ ನೀರವ ಮೌನದಲ್ಲಿ " ಚಂಡಿಕಾ " ನದಿ ಹರಿಯುವ ಜುಳುಜುಳು ನಾದ, ತಾಯಿಯ ಜೋಗುಳದಂತೆ ಭಾಸವಾಗಿ ನಮ್ಮ ದಣಿವನ್ನು ಮರೆಸಿತ್ತು. ನಾನೂ ಇದ್ದೇನೆ ಎಂದು ಪುಸಕ್ಕನೆ ನಮ್ಮ ಹಾದಿಗೆ ಅಡ್ಡ ಬಂದ ಹಸಿರು ಹಾವನ್ನು ನೋಡಿ ಮಕ್ಕಳು ಬೆಚ್ಚಿ ಬಿದ್ದದ್ದೂ ಆಯಿತು! ನಿಸರ್ಗಮಾತೆಯ ಆ ವೈಚಿತ್ರ್ಯವನ್ನು ಕಣ್ತುಂಬಾ ತುಂಬಿಕೊಳ್ಳುತ್ತಾ, ಭೈರವೇಶ್ವರನ ಗುಡಿಯಲ್ಲೊಮ್ಮೆ ಕೈ ಮುಗಿದು ಅರ್ಚಕರಿಂದ ಸ್ಥಳ ಪುರಾಣವನ್ನು ಮಕ್ಕಳಿಗೆ ಕೇಳಿಸಿ, ಒಂದು ಸುತ್ತು ಹೊಡೆದು ಅಲ್ಲಿಂದ ಕೆಳಗಿಳಿಯತೊಡಗಿದೆವು. ಅದಾಗಲೇ ಕತ್ತಲು ಆವರಿಸತೊಡಗಿತ್ತು. ದಾರಿಯಲ್ಲಿ ಸಿಕ್ಕ ಝರಿಗಳಲ್ಲಿ ನೀರಾಟವಾಡುತ್ತಾ, ಕೆಳಗಿಳಿದು ಬರುವ ಮಧ್ಯೆ, ಅದುವರೆಗೂ ಬಿಡುವು ಕೊಟ್ಟಿದ್ದ ಮಳೆರಾಯ ಒಮ್ಮೆಗೇ ಧೋ ಎಂದು ಸುರಿಯತೊಡಗಿದ. ವಿಚಿತ್ರವೆಂದರೆ ಅಷ್ಟು ಜೋರಾಗಿ ಮಳೆ ಬಂದರೂ ನಮ್ಮ ಬಟ್ಟೆಗಳು ತೋಯಲೇ ಇಲ್ಲ! ಬಿದ್ದ ಮಳೆಯ ನೀರೆಲ್ಲಾ ಎತ್ತರಕ್ಕೆ ಬೆಳೆದು ನಿಂತಿದ್ದ ಬೃಹತ್ ಮರಗಳ ಎಲೆಗಳ ಮೇಲೆ ಬಿದ್ದು ಅದೆಲ್ಲೋ ಕಾಣೆಯಾದಂತೆ ಅನಿಸುತ್ತಿತ್ತು! ಕೆಸರಿನ ಬಗ್ಗಡವಾಗಿದ್ದ ರಸ್ತೆಯಲ್ಲಿ ಜಾರದಂತೆ ಜಾಗ್ರತೆಯಾಗಿ ನಡೆದು ಕಾರಿನ ಬಳಿ ಬಂದಾಗ ಘಂಟೆ ಆರೂವರೆಯಾಗಿತ್ತು, ಅಲ್ಲಿಂದ ಕಾರನ್ನೆತ್ತಿ ಸುರಿಯುವ ಮಳೆಯಲ್ಲಿ ನಿಧಾನಕ್ಕೆ ಚಾಲಿಸುತ್ತಾ ಶಿರಸಿಯ ದಾರಿ ಹಿಡಿದು ಹೊರಟೆವು. ಆ ಕುಂಭದ್ರೋಣ ಮಳೆಯಲ್ಲಿ ಶಿರಸಿ ತಲುಪಿದಾಗ ಘಂಟೆ ಒಂಭತ್ತಾಗಿತ್ತು. ಅಂದು ಅಲ್ಲಿಯೇ ಉಳಿದುಕೊಂಡೆವು, ಹತ್ತಿರದ ಹೋಟೆಲಿನಲ್ಲಿ ಗಡದ್ದಾಗಿ ಊಟ ಮಾಡಿ, ನಿದಿರೆಗೆ ಶರಣಾದೆವು.