ಸುರಿವ ಮಳೆಯನ್ನು ಲೆಕ್ಕಿಸದೆ ’ಯಾಣ’ದ ದರ್ಶನ ಮುಗಿಸಿ ಶಿರ್ಸಿಗೆ ಬಂದು ತಂಗಿದ ನಾವು ಮರುದಿನ ಬೆಳಿಗ್ಗೆ ಬೇಗ ಎದ್ದು ಸ್ನಾನಾದಿಗಳನ್ನು ಮುಗಿಸಿ ಪ್ರಖ್ಯಾತ "ಮಾರಿಕಾಂಬೆ" ದೇವಾಲಯಕ್ಕೆ ಭೇಟಿಯಿತ್ತೆವು. ನವರಾತ್ರಿಯ ಪ್ರಯುಕ್ತ ಮಾಡಿದ್ದ ವಿಶೇಷ ಅಲಂಕಾರವನ್ನು ಕಣ್ತುಂಬಾ ನೋಡಿ ಆನಂದಿಸಿ ಸಕಲರಿಗೂ ಸನ್ಮಂಗಳವನ್ನುಂಟು ಮಾಡೆಂದು ಪ್ರಾರ್ಥಿಸಿ ಅಲ್ಲಿಂದ ಇತಿಹಾಸ ಪ್ರಸಿದ್ಧ "ಬನವಾಸಿ"ಯ ಕಡೆಗೆ ಪ್ರಯಾಣ ಬೆಳೆಸಿದೆವು. ಸುಸ್ಥಿತಿಯಲ್ಲಿದ್ದ ಪುಟ್ಟ ರಸ್ತೆಯಲ್ಲಿ ದಾರಿಯುದ್ಧಕ್ಕೂ ’ಮೋಟು’ ದನಗಳ ಹಿಂಡು ನಮ್ಮ ಆರ್.ಟಿ.ಓ.ಗಳನ್ನು ನಾಚಿಸುವಂತೆ ನಮ್ಮ ಕಾರಿಗೆ ಬ್ರೇಕ್ ಹಾಕಿಸುತ್ತಿದ್ದವು. ಅವುಗಳನ್ನೆಲ್ಲಾ ದಾಟಿಕೊಂಡು ಬನವಾಸಿ ತಲುಪುವ ಮಧ್ಯೆ ದಾರಿಯುದ್ಧಕ್ಕೂ ಗುಂಪು ಗುಂಪಾಗಿ " ರಂಜಾನ್" ನ ವಿಶೇಷ ಪ್ರಾರ್ಥನೆಗೆಂದು ಹೊರಟಿದ್ದ ಮುಸ್ಲಿಂ ಬಾಂಧವರಿಗೆಲ್ಲಾ " ಈದ್ ಮುಬಾರಕ್ " ಹಾರೈಸುತ್ತಾ ಬಂದಾಗ ಹಾದಿ ಮುಗಿದದ್ದೇ ಗೊತ್ತಾಗಲಿಲ್ಲ. ಮಕ್ಕಳಿಗಂತೂ ಇದೊಂದು ಅತ್ಯಂತ ಕುತೂಹಲಕಾರಿ ದೃಶ್ಯವಾಗಿತ್ತು.

ಬನವಾಸಿಯ " ಮಧುಕೇಶ್ವರ" ದೇವಸ್ಥಾನದ ಮುಂದೆ ಕಾರು ನಿಲ್ಲಿಸಿ ಇಳಿಯುವ ಹೊತ್ತಿಗೆ ನಮ್ಮ ಆದಿ ಕವಿ ಪಂಪ ತನ್ನ ಚಾರಿತ್ರಿಕ ಕೃತಿಯಲ್ಲಿ ಅಡಿಗಡಿಗೂ " ನೆನೆವುದೆನ್ನ ಮನಂ, ಬನವಾಸಿ ದೇಶಮಂ " ಎಂದು ಹಾಡಿದ್ದೇಕೆಂದು ಮಕ್ಕಳಿಗೆ ವಿವರವಾಗಿ ವರ್ಣಿಸಿದ್ದೆ, ಬನವಾಸಿಗೆ ಬರುವ ಹೊತ್ತಿಗೆ ಅವರಿಗೆ ಅರ್ಥವಾಗಿತ್ತು, ಆ ಸ್ಥಳದ ಮಹಾತ್ಮೆ. ದೇವಾಲಯದ ಅರ್ಚಕರು ನಮ್ಮನ್ನು ಒಂದು ಸುತ್ತು ಕರೆದುಕೊಂಡು ಹೋಗಿ ಆ ಮಹಾನ್ ದೇವಾಲಯದ ಇತಿಹಾಸವನ್ನು ಸೋದಾಹರಣವಾಗಿ ವರ್ಣಿಸಿ ಹೇಳಿದಾಗ ನನ್ನ ಮಕ್ಕಳೊಡನೆ ನಾನೂ ಮಗುವಾಗಿ ಬಿಟ್ಟೆ. ಬ್ರಾಹ್ಮಣನಾಗಿ ಜನಿಸಿದ ಮಯೂರ ಶರ್ಮ ಕಂಚಿಗೆ ವಿದ್ಯಾಭ್ಯಾಸಕ್ಕೆಂದು ಹೋಗಿ ಅಲ್ಲಿ ಪಲ್ಲವ ರಾಜಕುಮಾರರಿಂದ ಅಪಮಾನಿತನಾಗಿ ಬಂದು, ಅವರ ದುರಾಡಳಿತವನ್ನು ಕೊನೆಗಾಣಿಸುವ ಪಣ ತೊಟ್ಟು " ಮಯೂರವರ್ಮ " ನಾಗಿ ತನ್ನದೇ ಆದ ಕದಂಬ ಸಾಮ್ರಾಜ್ಯ ಕಟ್ಟಿದ ವೀರಭೂಮಿಯ ಕಥೆ ಮಕ್ಕಳ ಮನದಲ್ಲಿ ಅಚ್ಚಳಿಯದೆ ನಿಲ್ಲುವಂತಾಯ್ತು. ಅಲ್ಲಿದ್ದ ಪೂರ್ತಿ ಕಲ್ಲಿನಲ್ಲಿ ಕೆತ್ತಿದ ಮಂಟಪವೊಂದು ಅದೆಷ್ಟು ನೋಡಿದರೂ ಸಾಲದೆಂಬಂಥ ಸೂಕ್ಷ್ಮ ಕುಸುರಿಯ ಕೆತ್ತನೆಗಳಿಂದ ಕೂಡಿತ್ತು. ದೇವಾಲಯವನ್ನು ಮನತಣಿಯೆ ನೋಡಿ, ಅಲ್ಲಿಂದ ಪಕ್ಕದಲ್ಲೇ ಇದ್ದ ಪ್ರಾಚೀನ ಹಾಗೂ ನವೀನ ರಥಗಳೆರಡನ್ನೂ ನೋಡಿಕೊಂಡು, ವರದಾ ನದಿಯ ದಂಡೆಗೆ ಬಂದೆವು. ಬಹಳ ಕಡಿಮೆ ನೀರಿದ್ದ ನದಿಯಲ್ಲಿ ಇಳಿಯುವುದು ಅಪಾಯಕರ, ಅಲ್ಲಿ ಮೊಸಳೆಗಳಿವೆ ಎಂದ ನಮ್ಮ ಪುಟಾಣಿ ಗೈಡ್ ನ ಮಾತಿಗೆ ಹೆದರಿ ಯಾರೂ ನೀರಿಗಿಳಿಯಲಿಲ್ಲ!

ಅಂದು ಮಯೂರವರ್ಮ ವರದಾ ನದಿಯಲ್ಲಿ ಸ್ನಾನ ಮಾಡಿ, ಪೂಜೆ ಸಲ್ಲಿಸುತ್ತಿದ್ದನೆನ್ನಲಾದ ಶಿವಲಿಂಗವನ್ನು ಈಗಲೂ ನದಿಯ ದಡದಲ್ಲಿ ಕಾಣಬಹುದು, ಜೊತೆಗೆ ಒಂದು ಅತಿ ಪ್ರಾಚೀನ ಹನುಮನ ಮೂರ್ತಿಯನ್ನೂ ಪಕ್ಕದಲ್ಲಿಟ್ಟಿದ್ದಾರೆ, ಆದರೆ ಅದರ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಇತಿಹಾಸ ಪ್ರಸಿದ್ಧ ಸ್ಥಳಗಳ ಜೊತೆಗೆ ಅಲ್ಲಿನ ಪ್ರಕೃತಿಯ ಸೊಬಗನ್ನು ಸವಿದು ಪ್ರಫುಲ್ಲವಾದ ಮನದೊಡನೆ ಕಾರನ್ನು ಮತ್ತೆ ಶಿವಮೊಗ್ಗೆಯ ಕಡೆಗೆ ತಿರುಗಿಸಿದೆ. ಸೊರಬ, ಶಿರಾಳಕೊಪ್ಪ,ಶಿಕಾರಿಪುರಗಳನ್ನು ನೋಡಿಕೊಂಡು ಶಿವಮೊಗ್ಗೆಯಿಂದ ಸೀದಾ ಬಂದಿದ್ದು ಚನ್ನರಾಯಪಟ್ಟಣಕ್ಕೆ, ಸೋದರ ಶಿವಿ ಕಟ್ಟಿಸಿದ್ದ ಹೊಸಮನೆಯನ್ನು ನೋಡಿ, ಆ ದಂಪತಿಗಳನ್ನೂ ಜೊತೆಯಲ್ಲಿ ಕರೆದುಕೊಂಡು ಹೊಳೆ ನರಸೀಪುರಕ್ಕೆ ಹೋಗಿ, ಚಿಕ್ಕಮ್ಮನೊಡನೆ ಮಾತಾಡಿ, ಅವರ ಕೈಯಿಂದಲೇ ಮಾಡಿಸಿ " ಬೆಳ್ಳುಳ್ಳಿ ಚಿತ್ರಾನ್ನ " ತಿಂದು, ತಮ್ಮನ ಮಕ್ಕಳೊಡನೆ ಸ್ವಲ್ಪಕಾಲ ಕಳೆದು ಬೆಂಗಳೂರಿಗೆ ಹೊರಟೆವು.

ಅಲ್ಲಿಯವರೆಗೂ ಬರದಿದ್ದ ಮಳೆ, ಅದೆಲ್ಲಿತ್ತೋ, ನಾವು ಮತ್ತೆ ಚನ್ನರಾಯಪಟ್ಟಣ ತಲುಪುವ ಹೊತ್ತಿಗೆ ರಚ್ಚೆ ಹಿಡಿದ ಮಗುವಿನಂತೆ ಧೋ ಎಂದು ಸುರಿಯತೊಡಗಿತು. ರಸ್ತೆಯ ಮೇಲೆ ಏನಿಲ್ಲವೆಂದರೂ ಎರಡು ಅಡಿ ನೀರು ಹರಿಯುತ್ತಿತ್ತು. ಹುಶಾರಾಗಿ ಕಾರು ಚಾಲನೆ ಮಾಡುತ್ತಾ ಬಂದರೂ ನನ್ನ ಕಣ್ಣುಗಳು ಸೋತು, ಹಿರೀಸಾವೆಯಲ್ಲಿ ಸರಿಯಾಗಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆಯುವವನಿದ್ದೆ. ಪಕ್ಕದಲ್ಲಿ ಕುಳಿತಿದ್ದ ಮಗಳು ಅನಾಮತ್ತಾಗಿ ಸ್ಟಿಯರಿಂಗ್ ವ್ಹೀಲನ್ನು ತನ್ನೆಡೆಗೆ ಎಳೆದುಕೊಂಡು ಕಾರು ನಿಲ್ಲಿಸುವಂತೆ ಕಿರುಚದಿದ್ದರೆ, ಬಹುಶ: ಆ ವಿಭಜಕಕ್ಕೆ ಹೊಡೆದು ಕಾರು ಉರುಳಿ ಬೀಳುತ್ತಿತ್ತೇನೋ ! ಅರ್ಧ ಘಂಟೆ ಅಲ್ಲಿಯೇ ಕಾರು ನಿಲ್ಲಿಸಿ, ಮಳೆ ಸ್ವಲ್ಪ ಕಡಿಮೆಯಾದ ನಂತರ ಹೊರಟೆ. ಕುಣಿಗಲ್ ದಾಟಿ ಬಂದರೆ ಒಂದು ಹನಿಯೂ ಮಳೆ ಬಿದ್ದಿರಲಿಲ್ಲ. ಮನೆಗೆ ತಲುಪಿದಾಗ ರಾತ್ರಿ ಎರಡು ಘಂಟೆಯಾಗಿತ್ತು. ಆ ಪ್ರವಾಸದ ಸುಮಧುರ ನೆನಪುಗಳೊಂದಿಗೆ ನಿದಿರೆಗೆ ಜಾರಿದ ನಮಗೆ ಮತ್ತೆ ಎಚ್ಚರಾದದ್ದು ಬೆಳಿಗ್ಗೆ ಬೆಂಗಳೂರಿನಲ್ಲಿ ಧೋ ಎಂದು ಕುಂಭದ್ರೋಣ ಮಳೆ ಸುರಿಯತೊಡಗಿದಾಗಲೇ!