ಬಾಬ್ರಿ ಮಸ್ಜಿದ್ ಅನ್ನು ಧ್ವಂಸಗೊಳಿಸಿ ವಿಶ್ವದ ಎದುರಿಗೆ ನಾವು ನಮ್ಮ ಜಾತ್ಯಾತೀತ ಮೌಲ್ಯಗಳೊಂದಿಗೆ ನಗ್ನರಾಗಿ ನಗೆಪಾಟಲಿಗೀಡಾಗಿದ್ದು ಸಾಕು. ಮುಸ್ಲಿಮರು ವಿಶಾಲ ಹೃದಯ ಮೆರೆಯಲು ಇದು ಸಕಾಲ. ನೆಲಕ್ಕುರುಳಿದ ಮಸೀದಿ ತಲೆಯೆತ್ತಲು ಸಾಧ್ಯವಿಲ್ಲ. ನಮಾಜ್ ಮಾಡಲು ನಾಲ್ಕು ಗೋಡೆಗಳ ಕಟ್ಟಡವೇ ಬೇಕೆಂದೇನಿಲ್ಲ. ಇಡೀ ವಿಶ್ವವನ್ನೇ ನನ್ನನ್ನು ಆರಾಧಿಸಲು ಹರಡಿ ಇಟ್ಟಿದ್ದೇನೆ ಎಂದು ಕರುಣಾಮಯನೂ ದಯಾಮಯನೂ ಆದ ಅಲ್ಲಾಹ್ ತನ್ನ ಪವಿತ್ರ ಗ್ರಂಥದಲ್ಲಿ ಹೇಳಿದ್ದಾನೆ. ಹಿಂದೂಗಳು ನಮ್ಮ ಹಿರಿಯ ಸೋದರರು. ಹಿಂದೂ ಅಂದರೆ ಬರೀ ನಾವು ಶಂಕಿಸುವ ಸಂಘಟನೆಗಳಿಗೆ ಸೇರಿದವರಲ್ಲ. ನಮ್ಮನ್ನು ಎಲ್ಲ ರೀತಿಯಲ್ಲಿ ಬೆಂಬಲಿಸುವ, ಸಹಕರಿಸುವ ಹಿಂದೂಗಳಿಂದ ನಮ್ಮ ಬದುಕು ಸರಾಗವಾಗಿ ನಡೆಯುತ್ತಿದೆ.
ಮಸೀದಿಯ ಸ್ಥಳ ತೆರವುಗೊಳಿಸಿ ಅಲ್ಲಿ ಒಂದು ಬೃಹತ್ತಾದ ಕಾಂಬೋಡಿಯಾ ದೇಶದಲ್ಲಿರುವ “ಅಂಗ್ಕೊರ್ ವಾತ್” (Angkor Vat ) ಮಾದರಿಯ ರಾಮ ಮಂದಿರ ನಿರ್ಮಾಣವಾಗಲು ನಾವು ಮುಸ್ಲಿಂ ಸಹೋದರರು ಹಿಂದೂಗಳಿಗೆ ಅನುವು ಮಾಡಿಕೊಟ್ಟು ಹಿಂದೂ ಮುಸ್ಲಿಮರ ಮಧ್ಯೆ ಕಂದಕ ನಿರ್ಮಿಸಲು ಹೊರಟ ಶಕ್ತಿಗಳನ್ನು ಪರಾಭವಗೊಳಿಸೋಣ. ಮತ್ತು ಮುಂದೆ ಇಂಥ ಪರಿಸ್ಥಿತಿ ನಿರ್ಮಾಣವಾಗಲು ಯಾರಿಗೂ ಆಸ್ಪದ ಕೊಡದಿರುವಂತೆ ನಮ್ಮ ಹಿಂದೂ ಸಹೋದರರಲ್ಲಿ ಮನವಿ ಮಾಡಿಕೊಳ್ಳೋಣ.
ಪ್ರತಿ ವರ್ಷ ಡಿಸಂಬರ್ ಆರರಂದು " ಧಿಕ್ಕಾರ ದಿವಸ", "ಕಳಂಕ ದಿನ" ಮತ್ತು "ಶೌರ್ಯ ದಿವಸ" ಎಂದು ಆಚರಿಸಿ ಹಗೆತನವನ್ನು ನವೀಕರಣ ಮಾಡುವುದನ್ನು ಬಿಡೋಣ. ನಮ್ಮ ಪ್ರೀತಿಯ ದೇಶಕ್ಕಂಟಿದ ಕೋಮುವಾದದ ಕಳಂಕವನ್ನು ಕಿತ್ತೊಗೆದು, ಹಗೆತನಕ್ಕೆ ಧಿಕ್ಕಾರ ಕೂಗಿ, ಸಾಮರಸ್ಯ ಮತ್ತು ಒಡನಾಟಕ್ಕೆ ಬೇಕಾದ ಶೌರ್ಯವನ್ನು ಪ್ರದರ್ಶಿಸಿ ಹೊಸ ಅಧ್ಯಾಯವೊಂದನ್ನು ತೆರೆಯೋಣ.
ಪ್ರತಿಕ್ರಿಯೆ (5)