ಇಂದಿನಿಂದ ಮೂರು ದಿನಗಳ ಕಾಲ ಗದಗ ನಗರದಲ್ಲಿ ’೭೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ನಡೆಯಲಿದೆ. ಸಮ್ಮೇಳನದ ಅಧ್ಯಕ್ಷತೆಯ ಅವಕಾಶ ನಾಡೋಜ ಗೀತಾ ನಾಗಭೂಷಣ ಅವರಿಗೆ ಲಭಿಸಿದೆ. ಈ ಸಂದರ್ಭದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಸಮ್ಮೇಳನ ಇವು ಹೇಗಿವೆ, ಹೇಗಿರಬೇಕು ಎಂಬುದನ್ನು ಕುರಿತು ಒಂದು ಮಂಥನ ಈ ಲೇಖನ.
  ಚಂದ್ರಶೇಖರ ಪಾಟೀಲರು (’ಚಂಪಾ’) ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ದಿನಗಳಲ್ಲಿ ಆ ಸಂಸ್ಥೆಯು ’ಕನ್ನಡ ಚಳವಳಿ ಪರಿಷತ್ತು’ ಆಗಿ ವಿಜೃಂಭಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ನಾಡು-ನುಡಿಗಾಗಿ ಇಂದು ಚಳವಳಿಗಳು ಅನಿವಾರ್ಯವಾಗಿರುವುದು ದಿಟವಾದರೂ, ’ಕಸಾಪ’ದಂಥ ಸಾಹಿತ್ಯ ಸಂಘಟನೆಯ ಅಧ್ಯಕ್ಷರು ಸಾಹಿತ್ಯಕ್ಕಿಂತ ಚಳವಳಿ, ಹೋರಾಟಗಳಿಗೇ ಹೆಚ್ಚು ಆದ್ಯತೆ ನೀಡುತ್ತಿದ್ದಾರೆಂಬ ಅಭಿಪ್ರಾಯ ಕೆಲ ವಲಯಗಳಲ್ಲಿ ಉಂಟಾಗಿ ಅದರಿಂದಾಗಿ ಪರಿಷತ್ತಿನ ಕರ್ತವ್ಯದ ಬಗ್ಗೆಯೇ ಆ ದಿನಗಳಲ್ಲಿ ಹಲವರಲ್ಲಿ ಗೋಜಲು ಸೃಷ್ಟಿಯಾಗಿತ್ತು. ’ಸಾಹಿತ್ಯ ಪರಿಷತ್ತು ಸಾಹಿತ್ಯದ ಕೆಲಸ ಬಿಟ್ಟು ಬೇರೆಲ್ಲ ಕೆಲಸಗಳನ್ನೂ ಮಾಡುತ್ತಿದೆ’ ಎಂಬ ಅಸಮಾಧಾನವೂ ಕೆಲವು ಸಾಹಿತಿಗಳಲ್ಲಿ ಹಾಗೂ ಸಾಹಿತ್ಯಪ್ರೇಮಿಗಳಲ್ಲಿ ಮನೆಮಾಡಿತ್ತು. ’ಕಸಾಪ’ದ ಹೆಸರನ್ನು ’ಕನ್ನಡ ಸಂಸ್ಕೃತಿ ಪರಿಷತ್ತು’ ಎಂದು ಬದಲಾಯಿಸಬೇಕೆಂದು ಎಂ.ಎಂ.ಕಲಬುರ್ಗಿ ಅವರು ಪರಿಷತ್ತಿನದೇ ಸಮಾರಂಭವೊಂದರಲ್ಲಿ ಅರ್ಥಗರ್ಭಿತ ಸಲಹೆ ನೀಡಿದ್ದರು. (ಕೆಲ ಪತ್ರಿಕೆಗಳಲ್ಲಿ ಪ್ರಕಟಗೊಂಡಂತೆ ಅವರು ಇತ್ಯಾತ್ಮಕವಾಗಿ ಆ ರೀತಿ ಸಲಹೆ ಮಾಡಿದ್ದಲ್ಲ. ನೊಂದು ನುಡಿದದ್ದು. ಅಂದು ಅವರೊಡನೆ ವೇದಿಕೆ ಹಂಚಿಕೊಂಡಿದ್ದ ನಾನು ಅವರ ಭಾಷಣವನ್ನು ಸಂಪೂರ್ಣ ಆಲಿಸಿದ್ದೇನೆ.)
  ಸಾಹಿತ್ಯವಲಯದ ಈ ಅಸಮಾಧಾನವನ್ನು ನಿವಾರಿಸುವ ಕೆಲಸವನ್ನು ಪರಿಷತ್ತು ಇಂದು ಮಾಡಬೇಕಾಗಿದೆ. ಸಾಹಿತ್ಯ ಪರಿಚಾರಿಕೆಯೇ ಸಾಹಿತ್ಯ ಪರಿಷತ್‌ನ ಮುಖ್ಯ ಕೆಲಸವಾಗಬೇಕಾಗಿದೆ.


  ಅಪಕಲ್ಪನೆ
  ’ಕನ್ನಡ ಸಾಹಿತ್ಯ ಪರಿಷತ್ತು’ ಎಂದರೆ ಸಾಮಾನ್ಯ ಜನರ ಮನಸ್ಸಿನಲ್ಲಿರುವ ಕಲ್ಪನೆ, ’ಅದು ವರ್ಷಕ್ಕೊಂದು ಅದ್ದೂರಿಯ ಸಮ್ಮೇಳನ ಏರ್ಪಡಿಸಲಿಕ್ಕೋಸ್ಕರ ಇರುವ ಸಂಸ್ಥೆ’, ಎಂದು! ಈ ಅಪಕಲ್ಪನೆ ದೂರಾಗಬೇಕು. ಅದಕ್ಕಾಗಿ, ಸಾಹಿತ್ಯವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವ ಗಟ್ಟಿ ಯೋಜನೆಗಳು ಪರಿಷತ್ತಿನಿಂದ ರೂಪುಗೊಂಡು ಅನುಷ್ಠಾನಕ್ಕೆ ಬರಬೇಕು. ಉದಾಹರಣೆಗೆ ಹೇಳಬೇಕೆಂದರೆ, ಈ ಹಿಂದಿನ ಅಧ್ಯಕ್ಷ ’ಚಂಪಾ’ ಅವರು ಬೆಂಗಳೂರಿನ ಕೇಂದ್ರ ಕಚೇರಿ ಆವರಣದಲ್ಲಿ ವಾರದಲ್ಲೊಂದು ದಿನದಂತೆ ನಡೆಸಿದ ’ಪುಸ್ತಕ ಸಂತೆ’ ಅಂಥದೊಂದು ಉಪಯುಕ್ತ ಯೋಜನೆ. ಆರಂಭದಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿತಾದರೂ ಕ್ರಮೇಣ ಇದು ’ನಾಮ್ ಕೇ ವಾಸ್ತೇ’ ಕಾರ್ಯಕ್ರಮದ ಅವಸ್ಥೆಗಿಳಿಯಿತು. ಹಾಗಾಗಲು ಕಾರಣ ಜನರಲ್ಲಿ ಪುಸ್ತಕಪ್ರೇಮದ ಕೊರತೆ ಅಲ್ಲ. ’ಕನ್ನಡ ಪುಸ್ತಕ ಪ್ರಾಧಿಕಾರ’ದ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಈಚೆಗೆ ನಡೆದ ಕನ್ನಡ ಪುಸ್ತಕ ಮೇಳದಲ್ಲಿ ಓದುಗರು ಜಾತ್ರೆಯೋಪಾದಿ ಬಂದು ಮುಗಿಬಿದ್ದು ಕನ್ನಡ ಪುಸ್ತಕಗಳನ್ನು ಖರೀದಿಸಿರುವುದು ಕನ್ನಡಿಗರ ಪ್ರಖರ ಪುಸ್ತಕಪ್ರೇಮಕ್ಕೆ ಸಾಕ್ಷಿ. ಸಾಹಿತ್ಯ ಪರಿಷತ್ತು ತನ್ನ ಆವರಣದಲ್ಲಿ ನಡೆಸುತ್ತಿದ್ದ ’ಪುಸ್ತಕ ಸಂತೆ’ಯಲ್ಲಿ ಹೆಚ್ಚು ಶೀರ್ಷಿಕೆಗಳಾಗಲೀ ವಿಷಯ ವೈವಿಧ್ಯವಾಗಲೀ ಇರಲಿಲ್ಲವಾದ್ದರಿಂದ ಅದು ಕ್ರಮೇಣ ಜನಾಕರ್ಷಣೆ ಕಳೆದುಕೊಂಡಿತು. ಉತ್ತಮ ಪುಸ್ತಕಗಳ ಅವಿರತ ಪ್ರಕಟಣೆ ಮತ್ತು ರಾಜ್ಯಾದ್ಯಂತ ಸದಾಕಾಲ ಮಾರಾಟದ ಸೂಕ್ತ ವ್ಯವಸ್ಥೆ ಇವು ಸಾಹಿತ್ಯ ಪರಿಷತ್ತಿನ ಆದ್ಯ ಕರ್ತವ್ಯಗಳು.
  ’ಪುಸ್ತಕ ಸಂತೆ’ಯಂಥ ಯೋಜನಾಬದ್ಧ ಕಾರ್ಯಕ್ರಮಗಳು ಕೇವಲ ರಾಜಧಾನಿಯಲ್ಲಿ ಮಾತ್ರ ನಡೆದರೆ ಸಾಲದು. ಎಲ್ಲ ಜಿಲ್ಲಾ ಕೇಂದ್ರದಲ್ಲೂ ಮತ್ತು ದೊಡ್ಡ ತಾಲ್ಲೂಕು ಕೇಂದ್ರಗಳಲ್ಲೂ ನಡೆಯಬೇಕು. ಅಲ್ಲಿಯ ಜನರು ಸಾಹಿತ್ಯ ಓದುವುದು ಬೇಡವೆ?
  ಕೃತಿ ಪ್ರಕಟಣೆ, ಸಾಹಿತ್ಯಿಕ ಪರೀಕ್ಷೆಗಳು, ಪ್ರಶಸ್ತಿ ಪ್ರದಾನ, ಉಪನ್ಯಾಸ, ವರ್ಷಕ್ಕೊಂದು ಸಮ್ಮೇಳನ ಇವುಗಳ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತು ಪುಸ್ತಕಗಳ ಪರಿಚಯ, ವಾಚನ, ಮಂಥನ, ವಿವಿಧ ಕಮ್ಮಟಗಳು, ಓದುಗರಿಗಾಗಿ ಮತ್ತು ಬರಹಗಾರರಿಗಾಗಿ ಪ್ರತ್ಯೇಕ ಶಿಬಿರಗಳು, ಲೇಖಕ ಮತ್ತು ಓದುಗನ ಮಧ್ಯೆ (ಲೇಖಕನ ಭಾಷಣವನ್ನು ಮೀರಿ) ಸಂಪರ್ಕ ಏರ್ಪಡಿಸುವ ಕಾರ್ಯಕ್ರಮಗಳು, ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಕಾರ್ಯಕ್ರಮಗಳು, ಅವರಲ್ಲಿನ ಸುಪ್ತ ಸಾಹಿತ್ಯ ಪ್ರತಿಭೆಯನ್ನು ಪ್ರಕಾಶಗೊಳಿಸುವಂಥ ಯೋಜನೆಗಳು, ಅವರಲ್ಲಿ ಸಾಹಿತ್ಯಾಸಕ್ತಿ ಹುಟ್ಟುವಂತ ಸ್ಪರ್ಧಾದಿ ಕಾರ್ಯಕ್ರಮಗಳು, ಹಳ್ಳಿಗಳೆಡೆಗೆ ಸಾಹಿತ್ಯವನ್ನು ಕೊಂಡೊಯ್ಯುವಂಥ ಯೋಜನೆಗಳು, ಇಂಥ ಅನೇಕ ಕಾರ್ಯಯೋಜನೆಗಳನ್ನೂ ರೂಪಿಸಿ ಅನುಷ್ಠಾನಕ್ಕೆ ತರಬೇಕಾದುದು ಅಪೇಕ್ಷಣೀಯ. ಇವೂ ಕೂಡ ಪರಿಷತ್ತಿನ ಆದ್ಯ ಕರ್ತವ್ಯಗಳೇ. ಹಲವು ಉತ್ತಮ ಕಾರ್ಯಕ್ರಮಗಳು ಪರಿಷತ್ತಿನ ಕೇಂದ್ರ ಸ್ಥಳಕ್ಕಿಂತ ಕೆಲವು ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಆಶ್ರಯದಲ್ಲೇ ಹೆಚ್ಚು ನಡೆಯುತ್ತಿರುವುದನ್ನು ನಾವು ಗಮನಿಸಬಹುದು. ಈ ದಿಸೆಯಲ್ಲಿ ಕೇಂದ್ರ ಕಚೇರಿಯು ಹೆಚ್ಚು ಚುರುಕಾಗಬೇಕಾಗಿದೆ.
  ನಾಡಿನಾದ್ಯಂತ ಪುಸ್ತಕ ಪರಿಚಯದ ಮತ್ತು ವಿತರಣೆಯ (ಮಾರಾಟದ) ಸಮರ್ಪಕ ಸಾಂಸ್ಥಿಕ ಜಾಲವೇ ಇಲ್ಲವಾಗಿರುವಾಗ ’ಕಸಾಪ’ವೂ ಒಳಗೊಂಡಂತೆ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಛತ್ರಿಯಡಿ ಬರುವ ಎಲ್ಲ ಅನುದಾನಿತ ಸಂಸ್ಥೆಗಳೂ ಇಂದು ಅಂಥದೊಂದು ಜಾಲ ರೂಪಿಸುವತ್ತ ಗಮನ ಹರಿಸಬೇಕಾಗಿದೆ.
  ಮೇಲೆ ಹೇಳಿದಂಥ ಎಲ್ಲ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರಲ್ಲಿ ಕನ್ನಡ ಸಾಹಿತ್ಯಾಭಿರುಚಿ ಹೆಚ್ಚಿಸುವಂತಾದರೆ ಆ ಕೊಡುಗೆಯು ಯಾವ ಚಳವಳಿಗೂ ಕಡಿಮೆಯಿಲ್ಲದ ಕೊಡುಗೆಯಾಗುತ್ತದೆ.
  ಈ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಸಾಕಷ್ಟು ಧನಸಹಾಯ ಹಾಗೂ ಸಿಬ್ಬಂದಿ ವ್ಯವಸ್ಥೆ ಬೇಕಾಗುತ್ತದೆ. ಇದರ ಪೂರೈಕೆಯ ಹೊಣೆ ಸರ್ಕಾರದ್ದು.. ದುರಂತವೆಂದರೆ, ನಮ್ಮ ಇದುವರೆಗಿನ ಯಾವ ಸರ್ಕಾರಕ್ಕೂ, ಸಾಹಿತ್ಯ ಪ್ರಸಾರವೂ ಒಂದು ಪ್ರಮುಖ ಸಾಮಾಜಿಕ ವಿಷಯವೆಂದು ಅನ್ನಿಸಿಯೇ ಇಲ್ಲ! ಸಮ್ಮೇಳನಕ್ಕೆ ಒಂದೆರಡು ಕೋಟಿ ಕೊಟ್ಟು ಕೈತೊಳೆದುಕೊಳ್ಳುವ ಸರ್ಕಾರಕ್ಕೆ ಪರಿಷತ್ತಿನ ವರ್ಷಪೂರ್ತಿಯ ಚಟುವಟಿಕೆಗಳ ಬಗ್ಗೆ ಯಾವುದೇ ಕಾಳಜಿ ಇಲ್ಲವಾಗಿದೆ. ಇಂಥ ಸರ್ಕಾರಗಳನ್ನು ನಂಬಿ ಕೂರುವುದಕ್ಕಿಂತ ಪರಿಷತ್ತು ಸಂಪೂರ್ಣ ಸ್ವಾವಲಂಬಿಯಾಗಿ ಮುನ್ನಡೆಯುವ ಯೋಚನೆ ಮಾಡುವುದೊಳ್ಳಿತು.


  ಸಮ್ಮೇಳನ
  ಇನ್ನು, ’ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ವೆಂಬ ವಾರ್ಷಿಕ ಜಾತ್ರೆಯ ಬಗ್ಗೆ ಕೊಂಚ ಗಮನ ಹರಿಸೋಣ.
  ಅಂಥ ಜಾತ್ರೆ ನಿಷ್ಪ್ರಯೋಜಕವೆಂದು ಯಾರೇನೇ ಟೀಕಿಸಲಿ, ’ಕನ್ನಡ ಸಾಹಿತ್ಯ ಸಮ್ಮೇಳನ’ವೆಂಬುದು ಇರಬೇಕು. ಸಾಹಿತ್ಯೋದ್ಧಾರಕ್ಕಲ್ಲದಿದ್ದರೂ ಸಾಹಿತ್ಯಸೇವೆಗೆ, ಸಾಹಿತ್ಯಪ್ರಸಾರಕ್ಕೆ, ಸಾಹಿತ್ಯಾಸಕ್ತಿಯ ಉದ್ದೀಪನಕ್ಕೆ, ಸಾಹಿತ್ಯ ಸಮಾಲೋಚನೆಗೆ, ಸಾಹಿತಿ, ಓದುಗರ ಮಧ್ಯೆ ಸೇತುವಾಗಲಿಕ್ಕೆ ಮತ್ತು ಅಷ್ಟೇ ಮುಖ್ಯವಾಗಿ ಇಂದು ನಾಡಿನ ಒಳಗೂ ಹೊರಗೂ ಕನ್ನಡದ-ಕನ್ನಡಿಗನ ಗುರುತಿನ ರಕ್ಷಣೆಗಾಗಿ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯವಶ್ಯ.  
  ಸಮ್ಮೇಳನ ನಡೆಯುವ ಸಂದರ್ಭದಲ್ಲಿ, ಪ್ರತಿ ವರ್ಷವೂ, ಅದು ಹೇಗಿರಬೇಕೆಂಬ ಜಿಜ್ಞಾಸೆ-ಚರ್ಚೆ ಕೂಡ ನಡೆಯುತ್ತಿರುವುದು ಸಾಹಿತ್ಯ-ಸಂಸ್ಕೃತಿ ಮತ್ತು ನಾಡು-ನುಡಿಗಳ ಹಿತದೃಷ್ಟಿಯಿಂದ ಸ್ವಾಗತಾರ್ಹ. ಅಂಥ ಜಿಜ್ಞಾಸೆ-ಚರ್ಚೆಗಳ ಫಲವಾಗಿ ಸಮ್ಮೇಳನವು ತನ್ನ ಸ್ವರೂಪದಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿರುವುದೂ ಪ್ರಶಂಸಾರ್ಹ.
  ಯಾವುದೇ ಸಾಹಿತ್ಯ ಸಮ್ಮೇಳನವು ಸಾಧಿಸಬೇಕಾದ ಮುಖ್ಯ ಗುರಿಯೆಂದರೆ, ಸಾಹಿತ್ಯದ ಒಲವುಳ್ಳವರಲ್ಲಿ ಆ ಒಲವು ಉದ್ದೀಪನಗೊಳ್ಳುವಂಥ ಮತ್ತು ಅವರ ತಜ್ಜನ್ಯ ಪಿಪಾಸೆಯು ತಣಿಯುವಂಥ ಅವಕಾಶವನ್ನು ಸೃಷ್ಟಿಸುವುದು ಹಾಗೂ ಇತರ ಶ್ರೀಸಾಮಾನ್ಯರಲ್ಲಿ ಸಾಹಿತ್ಯದ ಬಗ್ಗೆ ಒಲವು ಹುಟ್ಟಿಸುವುದು. ಸಮ್ಮೇಳನದಲ್ಲಿ ಈಚಿನ ವರ್ಷಗಳಲ್ಲಿ ಸಾಹಿತ್ಯದ ಜೊತೆಗೆ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ವಿಷಯಗಳೂ ಸೇರಿಕೊಂಡಿವೆ. ಇವು ಬೇಡವೆನ್ನುವ ಸ್ಥಿತಿಯನ್ನು ದಾಟಿ ನಾವು ತುಂಬ ಮುಂದೆ ಹೋಗಿಬಿಟ್ಟಿದ್ದೇವೆ, ಇರಲಿ. ಈ ಎಲ್ಲ ವಿಷಯಗಳನ್ನೂ ಒಳಗೊಂಡಂತೆ ಸಮ್ಮೇಳನವು ಜನಮಾನಸಕ್ಕೆ ಸ್ಪಷ್ಟ ಮಾರ್ಗಗಳನ್ನು ತೋರಿದರೆ ಆಗ ಸಮ್ಮೇಳನ ಸಾರ್ಥಕ.
  ಹೀಗಾಗಬೇಕಾದರೆ ಸಮ್ಮೇಳನಕ್ಕೆ ಒಂದು ವರ್ಗೀಕರಣ ಮತ್ತು ಒಂದು ಮಿತಿ ಅವಶ್ಯ. ಬೀದರ್‌ನಲ್ಲಿ ನಡೆದ ೭೨ನೆಯ ಸಾಹಿತ್ಯ ಸಮ್ಮೇಳನವು ತನ್ನೆಲ್ಲ ಕಾರ್ಯಕ್ರಮಗಳನ್ನೂ ಒಂದೇ ವೇದಿಕೆಯಮೇಲೆ ಪ್ರಸ್ತುತಪಡಿಸಿದ್ದರಿಂದಾಗಿ ನಿರೀಕ್ಷಿತ ಫಲ ನೀಡಲಿಲ್ಲ. ಸಾಹಿತ್ಯಾಸಕ್ತರು ಹಾಗೂ ಇತರ ಉತ್ಸವಪ್ರೇಮಿಗಳು ಒಟ್ಟಿಗೇ ಒಂದೇ ಕಾರ್ಯಕ್ರಮವನ್ನು ಅನುಭವಿಸಬೇಕಾಗಿ ಬಂದದ್ದರಿಂದ ಮತ್ತು ಒಂದೇ ವೇದಿಕೆಯಿಂದಾಗಿ ಸಮಯದ ಕೊರತೆಯುಂಟಾದ್ದರಿಂದ ಹಾಗೂ ತತ್ಫಲವಾಗಿ ಬೆಳಗಿನ ಜಾವದವರೆಗೂ ಕಾರ್ಯಕ್ರಮಗಳು ಮುಂದುವರಿದದ್ದರಿಂದ ಸಮ್ಮೇಳನವು "ವೈಭವಪೂರ್ಣ ಕಾಟಾಚಾರ"ವಾಗಿ ಸಂಪನ್ನವಾಯಿತು! ಇದರಿಂದ ಪಾಠ ಕಲಿತೋ ಎಂಬಂತೆ ಶಿವಮೊಗ್ಗೆಯ (೭೩ನೆಯ) ಸಮ್ಮೇಳನದಲ್ಲಿ ಮುಖ್ಯ ವೇದಿಕೆಯಲ್ಲದೆ ಮತ್ತೆರಡು ಸಮಾನಾಂತರ ವೇದಿಕೆಗಳಲ್ಲೂ ಕಾರ್ಯಕ್ರಮ ನಡೆಸಲಾಯಿತು. ಇದು ಉತ್ತಮ ಪರಿಣಾಮ ಬೀರಿತು. ಈ ಮಾದರಿಯನ್ನು ಉಡುಪಿಯ (೭೪ನೆಯ) ಸಮ್ಮೇಳನದಲ್ಲಿ ಮತ್ತು ಚಿತ್ರದುರ್ಗದ (೭೫ನೆಯ) ಸಮ್ಮೇಳನದಲ್ಲಿ ಮುಂದುವರಿಸಿಕೊಂಡುಹೋಗಲಾಯಿತಾದರೂ ಸಮಾನಾಂತರ ವೇದಿಕೆಯ ಸಂಖ್ಯೆ ಒಂದಕ್ಕೆ ಇಳಿಯಿತು.
  ಬಹುಜನರಿಗೆ ಪ್ರಿಯವಾಗುವ ಕವಿಗೋಷ್ಠಿ, ಗೀತ ಸಂಗೀತದಂಥ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶಾಲ ಸಭಾಂಗಣ ಹೊಂದಿದ ಮುಖ್ಯ ವೇದಿಕೆಯಲ್ಲಿ ನಡೆದು, ಗಂಭೀರ ಸಾಹಿತ್ಯ ಸಭೆಗಳು, ಸಾಧ್ಯವಾದಷ್ಟೂ, ಆಸಕ್ತರಿಗಷ್ಟೇ ಸ್ಥಳವಿರುವ ಸಮಾನಾಂತರ ವೇದಿಕೆಯಲ್ಲಿ ನಡೆಯುವುದು ಹಿತಕರ.
  ಸಮ್ಮೇಳನದ ವಿವಿಧ ಗೋಷ್ಠಿಗಳ ಅಳತೆ, ಆಯಾಮಗಳಲ್ಲೂ ಸುಧಾರಣೆ ಆಗಬೇಕಾಗಿದೆ. ಒಬ್ಬ ಸಾಹಿತಿ ಅಥವಾ ಸಂಶೋಧಕ ಒಂದು ವಿಷಯದ ಬಗ್ಗೆ ವಿಷದವಾಗಿ ಕನಿಷ್ಠ ಒಂದು ಗಂಟೆ ಮಾತಾಡಬೇಕಾದ ಸ್ಥಾನದಲ್ಲಿ ನಾಲ್ವರು, ಬೇರೆಬೇರೆ ವಿಷಯಗಳ ಬಗ್ಗೆ, ತಲಾ ಹದಿನೈದು ನಿಮಿಷ ಮಾತಾಡಿ ಮುಗಿಸಿಬಿಟ್ಟರೆ ಹೇಗಿರುತ್ತದೆ? ಆಸಕ್ತ ಕೇಳುಗನಿಗಾಗಲೀ, ಗಂಭೀರ ಚಿಂತಕನಿಗಾಗಲೀ, ಕೊನೆಗೆ, ವಿಷಯ ಮಂಡಿಸಿದ ಸಾಹಿತಿ/ಸಂಶೋಧಕನಿಗಾಗಲೀ ಇದರಿಂದ ಏನಾದರೂ ಪ್ರಯೋಜನವುಂಟೇ? ತೃಪ್ತಿಯಾದರೂ ಉಂಟೇ? ಪ್ರತಿ ಸಮ್ಮೇಳನದಲ್ಲೂ ಈ ಬಗ್ಗೆ ಕೇಳುಗರಿಂದಲೂ ಮತ್ತು ವೇದಿಕೆಯಿಂದಲೂ ಅತೃಪ್ತಿ ಹೊಮ್ಮುವುದನ್ನು ನಾವು ಕಂಡಿದ್ದೇವಷ್ಟೆ. ಬೀದರ್ ಮತ್ತು ಶಿವಮೊಗ್ಗೆಯ ಸಮ್ಮೇಳನಗಳಲ್ಲಿ ಮೂರು ದಿನಗಳಲ್ಲಿ ತಲಾ ನಾಲ್ಕು ನೂರು ಮಂದಿ ವೇದಿಕೆಯಲ್ಲಿ ಮಾತಾಡಿದ್ದಾರೆಂದರೆ, ವಿಷಯ ಮಂಡನಕಾರರಿಗೆ ಇನ್ನದೆಷ್ಟು ವಿಷದವಾಗಿ ವಿಷಯಗಳನ್ನು ತಿಳಿಸಲು ಸಾಧ್ಯವಾಗಿದೆ ಮತ್ತು ಕೇಳುಗರಿಗೆ ಅದೆಷ್ಟು ಗೋಜಲಾಗಿರಬೇಡ! ಉಡುಪಿಯಲ್ಲಿಯೂ ಅಜಮಾಸು ನಾಲ್ಕು ನೂರು ಮಂದಿ ಆಹ್ವಾನಿತರು ಮತ್ತು ಚಿತ್ರದುರ್ಗದಲ್ಲಿ ಸುಮಾರು ಮುನ್ನೂರೈವತ್ತು ಮಂದಿ ಆಹ್ವಾನಿತರು ವೇದಿಕೆಯಲ್ಲಿ ರಾರಾಜಿಸಿದರು!
  ಹೆಚ್ಚೆಚ್ಚು ಜನರಿಗೆ ವೇದಿಕೆಯಮೇಲೆ ಮಾತಾಡಲು ಅವಕಾಶ ನೀಡುವುದೇ ಸಮ್ಮೇಳನದ ಉದ್ದೇಶವಾಗಬಾರದು. ಇದರಿಂದಾಗಿ ಜೊಳ್ಳುಗಳೇ ಕೇಳುಗನ ಕಾಲಹರಣಮಾಡುವುದನ್ನೂ ನಾವು ನೋಡಿದ್ದೇವೆ. ಯಾವ ಕಾರಣಕ್ಕೂ ಜೊಳ್ಳುಗಳಿಗೆ ಸಾಹಿತ್ಯ ಸಮ್ಮೇಳನಗಳ ವೇದಿಕೆ ಕೊಡುವುದು ತರವಲ್ಲ. ಪ್ರಾಜ್ಞರು ಮಾತ್ರ ವೇದಿಕೆಯಿಂದ ಮಾತಾಡಬೇಕು. ಹೆಚ್ಚೆಚ್ಚು ವಿಷಯಗಳನ್ನು ತುರುಕುವುದೂ ಸಮ್ಮೇಳನದ ಆಶಯಕ್ಕೆ ಧಕ್ಕೆ. ಭಾಷಣಕಾರರು ಮತ್ತು ವಿಷಯಗಳು ಜಾಸ್ತಿಯಾದಲ್ಲಿ, ಸಮಯಾಭಾವ ಮತ್ತು ಒತ್ತಡಗಳಿಂದಾಗಿ ಯಾವೊಂದು ವಿಷಯದ ಬಗ್ಗೆಯೂ ದೃಢವಾದ ಅಭಿಪ್ರಾಯವಾಗಲೀ ತಿಳಿವಳಿಕೆಯಾಗಲೀ ಮೂಡುವುದಿಲ್ಲ. ಕೇವಲ ಮೂರು ದಿನಗಳಲ್ಲಿ ನಾಡಿನೆಲ್ಲ ವಿಷಯವಿಶೇಷಗಳನ್ನೂ ಚರ್ಚಿಸುವುದು ಅಸಾಧ್ಯ. ಆದ್ದರಿಂದ, ಅತ್ಯಂತ ಮುಖ್ಯವಾದ ಮತ್ತು ಪ್ರಸ್ತುತವಾದ ಕೆಲವೇ ವಿಷಯಗಳನ್ನಾಯ್ದುಕೊಂಡು ವಿವರವಾಗಿ ಚರ್ಚಿಸುವುದು ಉತ್ತಮ.
  ’ಚರ್ಚಿಸುವುದು’ ಎಂದು ನಾನು ನಿರ್ದಿಷ್ಟ ಪದ ಬಳಸುತ್ತಿರುವುದಕ್ಕೆ ಕಾರಣವಿದೆ. ಸಮ್ಮೇಳನದ ಗೋಷ್ಠಿಗಳೆಲ್ಲ ಏಕಮುಖವಾಗಿ ನಡೆಯುತ್ತಿವೆ. ವೇದಿಕೆಯ ಮೇಲಿನವ ಹೇಳಿದ್ದನ್ನು ಕೇಳುವುದಷ್ಟೇ ಸಭಾಸದರ ಕೆಲಸವಾಗಿದೆಯೇ ಹೊರತು ತಮ್ಮ ಸಂದೇಹಗಳನ್ನು ವ್ಯಕ್ತಪಡಿಸಿ ಸೂಕ್ತ ಉತ್ತರಗಳನ್ನು ಪಡೆಯುವುದಕ್ಕಾಗಲೀ, ಮಂಥನ ನಡೆಸುವುದಕ್ಕಾಗಲೀ ಸಭಾಸದರಿಗೆ ಅವಕಾಶವೇ ಇಲ್ಲವಾಗಿದೆ. ಹೆಸರು ನೋಂದಾಯಿಸಿಕೊಂಡ ಪ್ರತಿನಿಧಿಗಳೂ ಭಾಷಣ ಕೇಳಿ ಎದ್ದು ನಡೆಯಬೇಕು; ಬಾಯ್ತೆರೆಯುವಂತಿಲ್ಲ! ಯಾರಾದರೂ ಬಾಯ್ತೆರೆದರೆ ಅಂಥವರನ್ನು ಅಧಿಕಪ್ರಸಂಗಿಗಳೆಂಬಂತೆ ಕಂಡು ಬಾಯ್ಮುಚ್ಚಿಸಿ ಕುಳ್ಳಿರಿಸಲಾಗುತ್ತದೆ! ಪರ್ವತೋಪಮ ಕಾರ್ಯಕ್ರಮಗಳ ಒತ್ತಡ ಮತ್ತು ಸಮಯಾಭಾವ ಇವುಗಳೇ ಇದಕ್ಕೆ ಕಾರಣವೆನ್ನುವುದು ಸ್ಪಷ್ಟ. ಆದರೆ, ಶ್ರೋತೃವಿನ ಸಂದೇಹ ಪರಿಹಾರವಾಗದಿದ್ದರೆ ಯಾವ ಗೋಷ್ಠಿಯ ಉದ್ದೇಶವೂ ಈಡೇರಿದಂತಾಗುವುದಿಲ್ಲ. ಅದ್ದರಿಂದ, ಭಾಷಣಕಾರನ ಭಾಷಣದ ನಂತರ ಚರ್ಚೆ ಏರ್ಪಡಬೇಕು ಮತ್ತು ಶ್ರೋತೃಗಳಿಗೆ ಚರ್ಚೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿರಬೇಕು.
  ವೇದಿಕೆಯಮೇಲಿನ ವಿದ್ವಾಂಸರೂ ಸಹ, ಆಯಾ ಗೋಷ್ಠಿಯಲ್ಲಿ, ತಂತಮ್ಮ ಪ್ರಬಂಧ ಮಾತ್ರ ತಮಗೆ ಸಂಬಂಧ ಎನ್ನುವಂತಿರುವ ಬದಲು ಗೋಷ್ಠಿಯ ಮುಖ್ಯ ವಿಷಯದ ಬಗ್ಗೆ ಅವರೆಲ್ಲರೂ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಕಾರ್ಯಕ್ರಮ ಯೋಜಿಸಲ್ಪಡಬೇಕು. ಸಮಯ ಪೋಲಾಗದಂತೆ ಹಾಗೂ ವಿಷಯವು ಹಳಿ ತಪ್ಪದಂತೆ ನೋಡಿಕೊಳ್ಳಲು ತಿಳಿವಳಿಕಸ್ತ ವ್ಯಕ್ತಿಯೋರ್ವನು ನಿಯಂತ್ರಕನ ಕಾರ್ಯ ನಿರ್ವಹಿಸಬೇಕು. ಉಡುಪಿ ಸಮ್ಮೇಳನದ ಗೋಷ್ಠಿಗಳಲ್ಲಿ ’ಪ್ರತಿಸ್ಪಂದನ’ದ ವ್ಯವಸ್ಥೆಯಾಗಿತ್ತಾದರೂ ಅದರಲ್ಲಿ ಸಭಾಸದರ ಪಾತ್ರ ಎಂದಿನಂತೆ ಗೌಣವಾಗಿತ್ತು. ಸಭಾಸದರಿಗೆ ಸೂಕ್ತ ಅವಕಾಶವಿರುವಂತೆ ಕಾರ್ಯಕ್ರಮ ರೂಪಿಸಲ್ಪಡಬೇಕು.
  ಹ್ಞಾ, ಸಮ್ಮೇಳನದ ಉಪನ್ಯಾಸಗಳಿಗೆ (ಮತ್ತು ಸನ್ಮಾನಕ್ಕೆ) ವಿದ್ವಾಂಸರನ್ನು ಆಯ್ಕೆಮಾಡುವಲ್ಲಿ ಪ್ರಜ್ಞೆ, ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತ ಅತ್ಯವಶ್ಯ. ಅವಶ್ಯವಾದಲ್ಲಿ ನಿಷ್ಠುರ ನಿಲುವೂ ತಪ್ಪೇನಲ್ಲ. ಪ್ರತಿ ಸಮ್ಮೇಳನದಲ್ಲೂ ಇವುಗಳ ಕೊರತೆ ನಮ್ಮ ಗಮನಕ್ಕೆ ಬರುತ್ತಿದೆ.


  ರಾಜಕಾರಣಿಗಳು
  ಸಾಹಿತ್ಯ ಸಮ್ಮೇಳನಗಳ ವೇದಿಕೆಗಳಮೇಲೆ ರಾಜಕಾರಣಿಗಳು ರಾರಾಜಿಸುವುದರ ಬಗ್ಗೆ ಸಾಕಷ್ಟು ಅಪಸ್ವರಗಳಿವೆ. ನನ್ನ ಅಭಿಪ್ರಾಯದಲ್ಲಿ ಇದೊಂದು ತಲೆಕೆಡಿಸಿಕೊಳ್ಳಬೇಕಾಗಿರುವ ವಿಷಯವೇ ಅಲ್ಲ. ರಾಜಕಾರಣಿಗಳು ಬರಲಿ, ಕೂತೆದ್ದು ಹೋಗಲಿ. ವಿನಾಕಾರಣ ಅವರಿಗೆ ಧ್ವನಿವರ್ಧಕದೆದುರು ನಿಲ್ಲುವ ಅವಕಾಶ ನೀಡದಿದ್ದರಾಯಿತು. ಜನಸಾಮಾನ್ಯರನ್ನು ಆಕರ್ಷಿಸುವ ಕಾರ್ಯಕ್ರಮಗಳು ನಡೆಯುವ ಮುಖ್ಯ ವೇದಿಕೆಗೆ ಮಾತ್ರ ಅವರು ಸೀಮಿತರಾಗಿರಲಿ. ಗಂಭೀರ ಚರ್ಚೆ ನಡೆಯುವ ಸಮಾನಾಂತರ ವೇದಿಕೆಯಿಂದ ಅವರನ್ನು ದೂರವಿಡೋಣ. ಇಷ್ಟವಿದ್ದರೆ ಅವರು ಅಂಥಲ್ಲಿ ಶ್ರೋತೃಗಳ ಜೊತೆಗೆ ಕುಳಿತು ಆಲಿಸಲಿ. ಸಮ್ಮೇಳನದ ನಿರ್ಣಯಗಳನ್ನು ಕೇಳಿಸಿಕೊಂಡು ಉತ್ತರಿಸಲು ಮುಖ್ಯಮಂತ್ರಿ ಹಾಜರಿದ್ದರೇ ಒಳ್ಳೆಯದಷ್ಟೆ. ಅಂದಹಾಗೆ, ಇಂದು ಉದ್ಘಾಟನೆಗೆ ಮುಖ್ಯಮಂತ್ರಿ ಬರುತ್ತಿಲ್ಲ. ಸಮಾರೋಪಕ್ಕೆ ಬರುತ್ತಿದ್ದಾರೆ. ಸಮ್ಮೇಳನದ ನಿರ್ಣಯಗಳು ಅವರೆದುರಿನಲ್ಲೇ ಸ್ವೀಕಾರಗೊಳ್ಳಲಿವೆ.
  ಸಮ್ಮೇಳನದಲ್ಲಿ ವಿವಿಧ ನಿರ್ಣಯಗಳನ್ನು ಕೈಕೊಳ್ಳುವ ಪ್ರಕ್ರಿಯೆಯ ಬಗ್ಗೆಯೂ ಹೇಳಬೇಕಾಗಿದೆ. ಶಾಸ್ತ್ರಕ್ಕೆ ಸಾರ್ವಜನಿಕರಿಂದ ನಿರ್ಣಯಗಳನ್ನು ಸ್ವೀಕರಿದಂತೆ ಮಾಡಿ, ಪರಿಷತ್ತು (ಅದರಲ್ಲೂ ಮುಖ್ಯವಾಗಿ ರಾಜ್ಯಾಧ್ಯಕ್ಷರು) ಸ್ವನಿರ್ಣಯಗಳನ್ನು ಸಕಲ ಕನ್ನಡಿಗರ ನಿರ್ಣಯಗಳೆಂಬಂತೆ ಮಂಡಿಸಿ ಅಂಗೀಕರಿಸಿ ಕೈತೊಳೆದುಕೊಳ್ಳುವುದು ತರವಲ್ಲ. ಸಮ್ಮೇಳನಕ್ಕೆ ಸಾಕಷ್ಟು ಮೊದಲೇ ಸಾರ್ವಜನಿಕರಿಂದ ನಿರ್ಣಯಗಳನ್ನು ಆಹ್ವಾನಿಸಿ, ಪ್ರಾಜ್ಞರ ಸಮಿತಿಯೊಂದು ಅವುಗಳನ್ನು ಪರಾಮರ್ಶಿಸಿ, ಜೊತೆಗೆ, ಸಮಿತಿಯು ತಾನು ಇಚ್ಛಿಸುವ ವಿಷಯಗಳನ್ನೂ ಚರ್ಚಿಸಿ, ಪರಿಷತ್ತಿನ ಸೂಚನೆಗಳನ್ನೂ ಪರಿಗಣಿಸಿ ಕರಡು ಸಿದ್ಧಪಡಿಸುವುದು, ಈ ಕರಡಿನ ಆಧಾರದಮೇಲೆ, ಹಾಗೂ, ಆಹ್ವಾನದನುಸಾರ ಸಮ್ಮೇಳನದ ಸಭಾಸದರಿಂದ ಮೊದಲೇ ಬಂದಂಥ ಸೂಚನೆಗಳನ್ನೂ ಪರಿಗಣಿಸಿ ಪರಿಷತ್ತು ಅಂತಿಮ ಕರಡನ್ನು ಸಿದ್ಧಪಡಿಸಿ ಸಮ್ಮೇಳನದಲ್ಲಿ ಮಂಡಿಸುವುದು ಅತ್ಯುತ್ತಮ ವಿಧಾನ. ಹೀಗೆ ಮಾಡುವುದರಿಂದ ನಿರ್ಣಯಗಳು ವ್ಯಾಪಕವೂ ಪ್ರಾತಿನಿಧಿಕವೂ ಆಗುತ್ತವಲ್ಲದೆ ಈ ಸುದೀರ್ಘ ಪ್ರಕ್ರಿಯೆಯಿಂದ ಸರ್ಕಾರಕ್ಕೆ ಮುಂಚಿತವಾಗಿಯೇ ಚುರುಕೂ ಮುಟ್ಟುತ್ತದೆ.
  ಹೀಗೆ ಅಂಗೀಕಾರಗೊಂಡ ನಿರ್ಣಯಗಳ ಅನುಷ್ಠಾನ ಮತ್ತೊಂದು ಮುಖ್ಯ ವಿಷಯ. ಇದುವರೆಗೂ ವಿವಿಧ
ಸಮ್ಮೇಳನಗಳಲ್ಲಿ ಅಂಗೀಕೃತವಾದ ನಿರ್ಣಯಗಳ ಹಣೆಬರಹ ಏನಾಗಿದೆಯೆಂದು ನಮಗೆಲ್ಲ ಗೊತ್ತೇ ಇದೆ. ’ಅನುಷ್ಠಾನ ಸಮಿತಿ’ಯ ಹಣೆಬರಹವನ್ನೂ ಕಂಡಾಯಿತು. ನಿರ್ಣಯವೊಂದು ಅನುಷ್ಠಾನಗೊಳ್ಳಬೇಕೆಂದರೆ ಸಂಬಂಧಿಸಿದವರನ್ನು ಈ ದಿನಗಳಲ್ಲಿ ನಕ್ಷತ್ರಿಕನಂತೆ ಕಾಡಬೇಕಾಗುತ್ತದೆ! ಇದಕ್ಕಾಗಿ ನಾಡಿನ ವಿವಿಧೆಡೆಗಳ ಜನರನ್ನೊಳಗೊಂಡ ವಿವಿಧ ಪಡೆಗಳನ್ನು (ಒತ್ತಡ ಸಮಿತಿ(!)ಗಳನ್ನು) ರಚಿಸುವುದವಶ್ಯ. ಜಿದ್ದಿನಿಂದ ಕಾರ್ಯ ನಿರ್ವಹಿಸುವ ಜನರು ಈ ಪಡೆಗಳಲ್ಲಿರಬೇಕು. ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳು ಮನಸ್ಸು ಮಾಡಿದರೆ ಇಂಥ ಪಡೆಗಳ ರಚನೆ ಹಾಗೂ ಕಾರ್ಯ ನಿರ್ವಹಣೆ ಅಸಾಧ್ಯವೇನಲ್ಲ. ಇಚ್ಛಾಶಕ್ತಿ ಮತ್ತು ಸೂಕ್ತ ಯೋಜನೆ ಬೇಕಷ್ಟೆ. ಇದೆಲ್ಲ ಅಸಾಧ್ಯವೆನ್ನಿಸಿದರೆ ನಿರ್ಣಯಗಳ ಬಾಬತ್ತನ್ನೇ ಕೈಬಿಟ್ಟುಬಿಡುವುದೊಳ್ಳೆಯದು. ನಿಷ್ಫಲಕಾರಿ ನಿರ್ಣಯಗಳಿಂದ ಸುಮ್ಮನೆ ಪರಿಷತ್ತಿಗೆ ಅವಮಾನ!
  ಕೊನೆಯದಾಗಿ, ಸಾಹಿತ್ಯ ಸಮ್ಮೇಳನದ ಭೂರಿ ಭೋಜನದ ಬಗ್ಗೆ ಒಂದು ಮಾತು. ಭಕ್ಷ್ಯ ಭೋಜ್ಯಯುತ ಭೋಜನವು ಸಮ್ಮೇಳನವನ್ನು ಹಬ್ಬವನ್ನಾಗಿಸಿ ಜನರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತ ಅವರನ್ನು ಸಾಹಿತ್ಯಾಸಕ್ತಿಯಿಂದ ವಿಮುಖಗೊಳಿಸುತ್ತಿದೆಯೆಂಬ ದೂರೊಂದಿದೆ. ಈ ದೂರು ಅರ್ಥರಹಿತವಾದದ್ದು. ಸಾಹಿತ್ಯಾಸಕ್ತರಾದವರು ಭಕ್ಷ್ಯ ಭೋಜ್ಯ ಬಿಟ್ಟಾದರೂ ಗೋಷ್ಠಿಗಳಿಗೆ ಅಂಟಿಕೊಂಡಿರುತ್ತಾರೆ. ಭಕ್ಷ್ಯ ಭೋಜ್ಯವೇ ಮುಖ್ಯವಾಗುವವರಿಗೆ ಸಾಹಿತ್ಯ ಅಷ್ಟಕ್ಕಷ್ಟೆ. ಅವರಿಂದ ಸಾಹಿತ್ಯಕ್ಕೂ ಅಷ್ಟಕ್ಕಷ್ಟೆ. ಹಾಗಾಗಿ ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಭಕ್ಷ್ಯ ಭೋಜ್ಯಯುತ ಭೋಜನ ಅದರ ಪಾಡಿಗದು ಇರಲಿ. (ಬೀದರ ಸಾಹಿತ್ಯ ಸಮ್ಮೇಳನದಲ್ಲಿ ಉದ್ಘಾಟನಾ ಸಮಾರಂಭದ ನಿರೂಪಕನಾಗಿ ವೇದಿಕೆಯಮೇಲೆ ಮಿಂಚಿದ ನಾನು ಬಹುಶಃ ಅದೇ ಹುಮ್ಮಸ್ಸಿನಿಂದ ಭೋಜನಶಾಲೆಯ ಜನಸಂದಣಿಯನ್ನು ನಿಯಂತ್ರಿಸಲು ಹೋಗಿ ಜೇಬುಗಳ್ಳತನಕ್ಕೀಡಾಗಿ ೪೭೦೦ ರೂಪಾಯಿ ಹಣ ಕಳೆದುಕೊಂಡೆ!)
  ನೆರೆಯ ಹಿನ್ನೆಲೆಯಲ್ಲಿ ಈ ಬಾರಿ ಸಮ್ಮೇಳನದ ಊಟ ತಿಂಡಿ ಸರಳವಾಗಿರುತ್ತದೆಂದು ಆರಂಭದಲ್ಲಿ ಹೇಳಲಾಗಿತ್ತು. ಇದೀಗ ಭರ್ಜರಿ ಊಟ ತಿಂಡಿಯ ವ್ಯವಸ್ಥೆಯೇ ಆಗಿದೆ. ನೆರೆ ಸಂತ್ರಸ್ತರ ಸ್ಥಿತಿಯನ್ನು ಗಮನಿಸಿ ಈ ಸಲ ಸರಳ ಊಟ ತಿಂಡಿಯ ಏರ್ಪಾಟು ಮಾಡಬಹುದಿತ್ತು. ಈ ಸಲ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಇರುವುದಿಲ್ಲವೆಂದು ಹೇಳಿದ್ದರೂ ಇದೀಗ ಸಣ್ಣ ಪ್ರಮಾಣದ ಮೆರವಣಿಗೆ ನಡೆಯುತ್ತಿದೆ. ಭರ್ಜರಿ ಊಟದ ಬದಲು ಭರ್ಜರಿ ಮೆರವಣಿಗೆ ಹಮ್ಮಿಕೊಳ್ಳಬಹುದಿತ್ತೆಂಬುದು ನನ್ನ ಅಭಿಪ್ರಾಯ. ಏಕೆಂದರೆ ಇದು ನುಡಿಜಾತ್ರೆ.
  ಸಾಹಿತ್ಯ ಸಮ್ಮೇಳನದ ಬಗ್ಗೆ ನನ್ನಳವಿಗೆ ದಕ್ಕಿದಷ್ಟನ್ನು ಇಲ್ಲಿ ದಾಖಲಿಸಿದ್ದೇನೆ. ಪ್ರತಿ ವರ್ಷವೂ ಇದೇ ರೀತಿ ಹಲವು ಬಗೆಯ ಸಲಹೆ-ಸೂಚನೆಗಳು ಹರಿದುಬರುತ್ತವೆ. ಇವುಗಳೆಡೆಗೆ ಪರಿಷತ್ತು ಗಮನ ಹರಿಸಿ, ಪ್ರಾಜ್ಞರೊಡನೆ ಚರ್ಚಿಸಿ, ಸಮ್ಮೇಳನದ ಈಗಿನ ಸ್ವರೂಪದಲ್ಲಿ ಸೂಕ್ತ ಮಾರ್ಪಾಟು ತರಬೇಕಾದ್ದು ಅಪೇಕ್ಷಣೀಯ.
  ಅಷ್ಟೇ ಅಲ್ಲ, ಪ್ರತಿವರ್ಷವೂ ’ಕಸಾಪ’ ತನಗೆ ತೋಚಿದಂತೆ ಸಮ್ಮೇಳನದ ಕಾರ್ಯಕ್ರಮಗಳನ್ನು ರೂಪಿಸುವ ಬದಲು ಹಿರಿಯ ಸಾಹಿತಿಗಳು, ತಜ್ಞರು ಹಾಗೂ ಚಿಂತಕರ ಸಭೆ ಕರೆದು ಅವರ ಅಭಿಪ್ರಾಯಗಳನ್ನು ಪಡೆದು, ತನ್ನ ಚಿಂತನವನ್ನೂ ಸಭೆಯ ಎದುರಿಟ್ಟು ಚರ್ಚಿಸಿ, ಸಮ್ಮೇಳನಾಧ್ಯಕ್ಷರ ಅಭಿಪ್ರಾಯವನ್ನೂ ಪಡೆದು ಇವೆಲ್ಲದರನುಸಾರ ಆಯಾ ವರ್ಷದ ಸಮ್ಮೇಳನದ ಕಾರ್ಯಕ್ರಮಗಳನ್ನು ರೂಪಿಸುವುದುತ್ತಮ.