ವಿಶಿಷ್ಟ ಗುರುತು ಯೋಜನೆ ಅನುಷ್ಠಾನದತ್ತ
ಭಾರತೀಯರಿಗೆಲ್ಲರನ್ನೂ ಗುರುತಿಸಲು ನೆರವಾಗುವ ಭಾರತದ ವಿಶಿಷ್ಠ ಗುರುತು ಪ್ರಾಧಿಕಾರದ ಯೋಜನೆಗೆ ಬಜೆಟ್ ಮೂಲಕ 1900 ಕೋಟಿ ರೂಪಾಯಿಗಳ ಮಂಜೂರಾದ ಕಾರಣ,ಯೋಜನೆಗೆ ಚಾಲನೆ ದೊರೆತಿದೆ.ನಂದನ್ ನೀಲೆಕಣಿ ಅವರ ನೇತೃತ್ವದ ಯುಐಡಿಎಐ Unique Identification Authority of Indiaವು ಯೋಜನೆಯ ಅನುಷ್ಠಾನಕ್ಕ್ಕೆ ಅಗತ್ಯವಾದ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲು ಉತ್ಸಾಹವಿರುವವರಿಂದ ಟೆಂಡರುಗಳನ್ನು ಆಹ್ವಾನಿಸಿದೆ.ಮಾರ್ಚ್ ಎರಡಕ್ಕೆ ಟೆಂಡರ್ ದಿನಾಂಕ ಮುಗಿದಿದ್ದು,ಹತ್ತೊಂಭತ್ತು ಅರ್ಜಿಗಳು ಬಂದಿವೆ.ವಿಪ್ರೋ,ಟಿಸಿಎಸ್,ಇನ್ಫೋಸಿಸ್,ಐಬಿಎಂ,ಎಕ್ಸೆಂಚರ್,ಮಾಸ್ಟೆಕ್,ಮೈಂಡ್ಟ್ರೀ,ಲಾಜಿಕಾ,ಸಿಮನ್ಸ್,ಮಹಿಂದ್ರಾ ಸತ್ಯಮ್ ಕಂಪೆನಿಗಳನ್ನು ತಂತ್ರಾಂಶ ಅಭಿವೃದ್ಧಿ ಪಡಿಸಲು ಆರಿಸಲಾಗಿದೆ.ಅವರುಗಳ ಪ್ರಸ್ತಾವಗಳನ್ನು ಪರಿಶೀಲಿಸಿ,ತಾಂತ್ರಿಕ ಮೌಲ್ಯಮಾಪನ ನಡೆದ ಬಳಿಕ ಮುಂದಿನ ತೀರ್ಮಾನ ಆಗಲಿದೆ.ಅಂದಹಾಗೆ ಅರ್ನ್ಸ್&ಯಂಗ್ ಕಂಪೆನಿಯು ಯೋಜನೆಯ ಯೋಜನೆಯ ಸಲಹಾಕಾರರಾಗಿ ನಿಯೋಜಿತರಾಗಿದ್ದಾರೆ.
-------------------------------------------------------
ಕಡಿಮೆ ಕಾಗದ ಬಳಸುವ ಕಚೇರಿಗಳತ್ತ
ಕಚೇರಿಗಳು ಕಂಪ್ಯೂಟರೀಕರಣವಾದ ಬಳಿಕವೂ ಕಾಗದರಹಿತ ಕಚೇರಿಗಳು ಎಂಬ ಕಲ್ಪನೆ ಕಲ್ಪನೆಯಾಗಿಯೇ ಉಳಿದಿದ್ದು,ನಿಜವಾಗಿಲ್ಲ.ವಾಸ್ತವ ಎಂದರೆ ಕಾಗದ ರಹಿತ ಎನ್ನುವುದಕ್ಕಿಂತ ಕಡಿಮೆ ಕಾಗದ ಬಳಸುವತ್ತ ಗುರಿಯಿಡುವುದೇ ಸರಿ ಎನ್ನುವ ನಿಜ ಈಗ ಮನದಟ್ಟಾಗಿದೆ.ತೊಂಭತ್ತರ ದಶಕದಲ್ಲಿ ಕಂಪ್ಯೂಟರುಗಳ ಬಳಕೆ ಹೆಚ್ಚಾದಂತೆ,ಕಚೇರಿಗಳಲ್ಲಿ ಕಾಗದದ ಬಳಕೆ ಇಳಿಯಬಹುದೆಂಬ ಭಾವನೆ ಬಲವಾಗಿತ್ತು.ಆದರೆ,ಜನರು ಕಾಗದದ ಬಳಕೆಗೆ ಒಗ್ಗಿ ಹೋಗಿದ್ದ ತಲೆಮಾರಿನವರಾದ ಕಾರಣವೋ ಏನೋ,ಹಾಗಾಗುವುದಕ್ಕೆ ಬದಲಾಗಿ,ಕಚೇರಿಗಳಲ್ಲಿ ಹೆಚ್ಚೆಚ್ಚು ಕಂಪ್ಯೂಟರ್ ಮುದ್ರಕಗಳು ಬಳಕೆಯಾಗ ಹತ್ತಿ,ಕಾಗದದ ಬಳಕೆ ಇಳಿಕೆ ಗಮನಾರ್ಹವಾಗಿಯೇನೂ ಇರಲಿಲ್ಲ.ಯುಎಸ್ನಲ್ಲಿ ಆರ್ಥಿಕ ಹಿನ್ನಡೆಯ ಮೊದಲು ವಾರ್ಷಿಕ ಒಂದು ಟ್ರಿಲಿಯನ್ ಕಾಗದಗಳು ಫ್ಯಾಕ್ಸ್,ಮುದ್ರಕಯಂತ್ರಗಳಲ್ಲಿ ಬಳಕೆಯಾದುವು ಎಂದು ಮ್ಯಸಾಚುಸೆಟ್ನ ಮಾರುಕಟ್ಟೆ ಸಮೀಕ್ಷಾ ಕಂಪೆನಿಯು ಅಂದಾಜು ಮಾಡಿದೆ.ಸುಮಾರು ಒಂಭೈನೂರು ಕಂಪೆನಿಗಳ ಸಮೀಕ್ಷೆ ನಡೆಸಿದಾಗ ತಿಳಿದು ಬಂದ ಅಂಶವೆಂದರೆ,ಕಂಪೆನಿಗಳು ಕಾಗದದ ಬಳಕೆಯು ಕಾನೂನಿನ ಅನ್ವಯ ಅನಿವಾರ್ಯ ಎಂದು ಪರಿಗಣಿಸಿವೆ.ಹಾಗೆಂದು ಟ್ರೆಂಡ್ಹಂಟರ್ ಅಂತಹ ಆನ್ಲೈನ್ ಪತ್ರಿಕೆಯ ಕಚೇರಿಯಲ್ಲಿ ಕಾಗದದ ಬಳಕೆಯೇ ಇಲ್ಲ.ಅದರ ಕಚೇರಿಗಳಲ್ಲಿ ಕಡತಗಳನ್ನಿಡುವ ಸೌಲಭ್ಯದ ಅಗತ್ಯವೇ ಇಲ್ಲವಾಗಿದೆ.ಮುದ್ರಕ,ಸ್ಕ್ಯಾನರುಗಳೂ,ಫ್ಯಾಕ್ಸ್ ಯಂತ್ರಗಳೂ ಅವರಿಗೆ ಬೇಡ,ಕಚೇರಿಯಲ್ಲಿ ಸ್ಥಳಾವಕಾಶದಲ್ಲಿ ಹೆಚ್ಚಳ,ಖರ್ಚು ಕಡಿಮೆ ಹೀಗೆ ಕಾಗದ ರಹಿತ ಕಚೇರಿಯ ಧನಾತ್ಮಕ ಅಂಶಗಳು ಬಹಳ.ಕಾಗದ ಅನಿವಾರ್ಯ ಎನ್ನುವುದು ನಂಬಿಕೆಯಾದರೆ,ಕಡಿಮೆ ಕಾಗದ ಬಳಸುವತ್ತಲಾದರೂ ಹೆಜ್ಜೆಯಿಡುವುದು ಒಳಿತು ಎನ್ನುವುದು ಹೆಚ್ಚಿನವರ ಅಭಿಪ್ರಾಯ.
---------------------------------------------
ವಿವೇಕ ರೈಗಳು ಬರೆಯುತ್ತಾರೆ
___LINK_OPEN_ href="http://4.bp.blogspot.com/_PU7BmR35lao/S6awWQKR4dI/AAAAAAAABRk/UGbWotHkWJA/s1600-h/vivekrai.JPG"___
ಕರ್ನಾಟಕ ರಾಜ್ಯ ಮುಕ್ತ ವಿವಿ,ಹಂಪಿ ವಿವಿಗಳ ಉಪಕುಲಪತಿಗಳಾಗಿದ್ದ ಸಾಹಿತಿ ವಿವೇಕ ರೈ ಸದ್ಯ ಜರ್ಮನಿಯ ವೂಜ್ಬರ್ಗ್ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ.ಅಲ್ಲಿಂದ ಅವರು ಕನ್ನಡಿಗರ ಸಂಪರ್ಕದಲ್ಲಿರಲು ಬಯಸಿ,ತಮ್ಮ ಬ್ಲಾಗನ್ನು ಅಂತರ್ಜಾಲದ http://bavivekrai.wordpress.com/ನ ವಿಳಾಸದಲ್ಲಿ ಬ್ಲಾಗ್ ಬರೆಯುತ್ತಾರೆ.ಜರ್ಮನಿಯ ತಮ್ಮ ಕೊಟಡಿಯಿಂದ ಹೊರಗಡೆಯ ನೋಟದ ಚಿತ್ರಗಳು,ಎಸ್ವಿ ಪರಮೇಶ್ವರ ಭಟ್ಟರ ನೆನಪಿನ ಮೆಲುಕು ಇತ್ಯಾದಿ ಬರಹಗಳು ಬ್ಲಾಗಿಗೆ ಇತ್ತೀಚೆಗೆ ಸೇರ್ಪಡೆಯಾಗಿವೆ.
-------------------------------------
ಗೂಗಲ್-ಇಂಟೆಲ್ ಟಿವಿ ಕ್ಷೇತ್ರಕ್ಕೆ ಲಗ್ಗೆ ಯತ್ನ
ಟಿವಿಯಲ್ಲಿ ಇಂಟೆಲ್ ಕಂಪೆನಿಯ ಆಟಂ ಸಂಸ್ಕಾರಕವೊಂದನ್ನು ಸೇರಿಸುವುದು,ಆ ಮೂಲಕ ಆಂಡ್ರಾಯಿಡ್ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ಟಿವಿಯಲ್ಲಿ ಅನುಸ್ಥಾಪಿಸುವುದು. ತನ್ಮೂಲಕ ಟಿವಿಯಲ್ಲಿ ತಂತ್ರಾಂಶ ಬಳಕೆಯನ್ನು ಸಾಧ್ಯವಾಗಿಸಿ,ವಿವಿಧ ಸೇವೆಗಳನ್ನು ಪಡೆಯಲು ಸಾಧ್ಯವಾಗಿಸುವುದು-ಜತೆಗೆ, ಅಂತರ್ಜಾಲ ಸಂಪರ್ಕವನ್ನು ಕೇಬಲ್ ಜಾಲದಲ್ಲಿ ಒದಗಿಸಿ,ಟಿವಿಯ ಮೂಲಕವೂ ಅಂತರ್ಜಾಲಾಟವನ್ನು ಸುಲಭವಾಗಿಸುವುದು. ಇದು ಗೂಗಲ್-ಇಂಟೆಲ್ ಜಂಟಿ ಕಾರ್ಯಯೋಜನೆ ಎಂಬ ಸುದ್ದಿಗಳು ಹರಡಿವೆ.ಇಂಟೆಲ್ನ ಸಂಸ್ಕಾರಕವಾದ ಆಟಂ ಅನ್ನು ಸೋನಿ ಟಿವಿಯಲ್ಲಿ ಅಳವಡಿಸುವ ಮೂಲಕ ಇದನ್ನು ಸಾಧಿಸಲು ಮಾತುಕತೆ ನಡೆದಿವೆ ಎಂದು ಗುಸುಗುಸು ಹಬ್ಬಿದ್ದರೂ,ಕಂಪೆನಿಗಳು ಈ ಬಗ್ಗೆ ಮುಗುಂ ಆಗಿವೆ.ಸೆಲ್ಫೋನ್ಗಾಗಿ ಗೂಗಲ್ ಅಭಿವೃದ್ಧಿ ಪಡಿಸಿರುವ ಆಂಡ್ರಾಯಿಡ್ ಕಾರ್ಯನಿರ್ವಹಣಾ ವ್ಯವಸ್ಥೆಯನ್ನು ಟಿವಿಗಾಗಿ ತುಸು ಮಾರ್ಪಡಿಸಿ,ಬಳಿಕ ಟಿವಿಯಲ್ಲೂ ವಿವಿಧ ತಂತ್ರಾಂಶಗಳನ್ನು ಅಳವಡಿಸಿ,ವಿನೂತನ ಸೇವೆಗಳನ್ನು ಲಭ್ಯವಾಗಿಸುವುದು,ಜತೆಗೆ ಟ್ವಿಟರ್,ಫೇಸ್ಬುಕ್,ಪಿಕಾಸ,ಯುಟ್ಯೂಬ್ ಅಂತಹ ತಾಣಗಳನ್ನು ಜನರು ಟಿವಿಯ ಮೂಲಕವೂ ಜಾಲಾಡಲು ಸಾಧ್ಯವಾಗಿಸಿ ಜಾಹೀರಾತುದಾರರು ಈ ಹೊಸ ಪ್ರೇಕ್ಷಕರಡೆಗೆ ಗುರಿಯಿರಿಸಿ,ನೀಡುವ ಜಾಹೀರಾತುಗಳ ಲಾಭ ಪಡೆಯುವುದರತ್ತ ಕಂಪೆನಿಗಳ ಗಮನ ಕೇಂದ್ರೀಕರಿಸಿದಂತಿದೆ.
----------------------------------------
ಅಂತರ್ಜಾಲ ಮೂಲಕ ಕಾರು ವಶೀಕರಣ
ಡಲಾಸ್ ಎಂಬ ಯುಎಸ್ನ ನಗರದಲ್ಲಿ ಟೆಕ್ಸಸ್ ಕಾರು ಕಂಪೆನಿಯು ಸಾಲ ನೀಡಿ,ಕಾರು ಖರೀದಿಗೆ ಅನುವು ಮಾಡುತ್ತದೆ.ಖರೀದಿದಾರರು ಸಾಲ ಮರುಪಾವತಿ ಸರಿಯಾಗಿ ಮಾಡದಿದ್ದರೆ,ಅವರ ಕಾರು ಚಾಲೂ ಆಗದಂತೆ ಮಾಡುವ ಜಿಪಿಎಸ್ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಅವರ ಕಾರಿಗೆ ಅಳವಡಿಸುವ ಪದ್ಧತಿಯನ್ನು ಕಂಪೆನಿಯು ಬಳಸುತ್ತಿದೆ.ಜತೆಗೆ ಹಾರನ್ ಅನ್ನೂ ಕೂಡಾ ನಿಶ್ಶಕ್ತಗೊಳಿಸಲೂ ಸಾಧ್ಯ.ಇತ್ತೀಚೆಗೆ ಕಂಪೆನಿಯು ರಾಮೋಸ್ ಎನ್ನುವ ತನ್ನ ಉದ್ಯೋಗಿಯನ್ನು ಕೆಲಸದಿಂದ ಉಚ್ಚಾಟಿಸಿತ್ತು.ಈ ಉದ್ಯೋಗಿ ತನ್ನ ಮಾಜೀ ಸಹೋದ್ಯೋಗಿಯ ಪಾಸ್ವರ್ಡ್ ಕದ್ದು,ಅದರ ಮೂಲಕ ಕಂಪೆನಿಯ ಅಂತರ್ಜಾಲ ತಾಣ ಪ್ರವೇಶಿಸಿ,ಕಂಪೆನಿಯ ನೂರಾರು ಗ್ರಾಹಕರ ಕಾರುಗಳನ್ನು ನಿಷ್ಕ್ರಿಯಗೊಳಿಸಿಬಿಟ್ಟಿದ್ದ.ಗ್ರಾಹಕರು ತಮ್ಮ ಕಾರುಗಳು ವಿನಾ ಕಾರಣ ನಿಂತು ಬಿಟ್ಟು,ಹಾರನ್ ಕೈಕೊಡುವ ತೊಂದರೆಗೀಡಾಗಿ ಫಜೀತಿ ಪಟ್ಟು,ಕಂಪೆನಿಗೆ ದೂರಿಕೊಂಡಾಗಲಷ್ಟೇ ಕಂಪೆನಿಗೆ ವಿಷಯ ತಿಳಿಯಿತು.ರಾಮೋಸ್ ಈಗ ಕಂಬಿ ಎಣಿಸಬೇಕಾಗಿದೆ.
___LINK_OPEN_title="ಉದಯವಾಣಿ" href="http://www.udayavani.com/epaper/ViewPDf.aspx?Id=32574" target="_blank"___ಉದಯವಾಣಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!