ಅವಳು ಈವರೆಗಿನ ನನ್ನ ಏಕಮೇವ ಹಾಗೂ ಮೊದಲ ಪ್ರೀತಿ..ಅವಳ ಹೆಸರು ನಿವೇದಿತ.ಸಾಫ್ಟವೇರ್ ತಂತ್ರಜ್ನ್ಯೆ.ಕೆಲ ದಿನಗಳಲ್ಲಿ ೨೬ ವರ್ಷ ವಯಸ್ಸಿನವಳಾಗುವ ಅವಳು ನಿಸ್ಸಂದೇಹವಾಗಿ ಜಗತ್ತಿನ ಅಪ್ರತಿಮ ಸುಂದರಿ.ಇಂದು ಅವಳ ಜೊತೆ ನನ್ನ ಮನದಾಳದ ಪ್ರೀತಿಯನ್ನು ಅಭಿವ್ಯಕ್ತ ಮಾಡಬೇಕೆಂದುಕೊಂಡಿರುವೆ.ಈ ಪತ್ರ,ಆ ಪ್ರಯತ್ನವನ್ನು ಸಾಕಾರಗೊಳಿಸುವುದೆಂಬ ಆಸೆ.ಇದು ನನ್ನ ಮೊದಲ ಪತ್ರ.ನನ್ನ ಮನಸ್ಸಿನಲ್ಲಿರುವ ಆಸೆ ಹಾಗು ಆಕಾಂಕ್ಷೆಗಳನ್ನು ಜಗತ್ತಿನಲ್ಲಿ ನಾನು ಅತಿಯಾಗಿ ಪ್ರೀತಿಸುವವರಿಗಾಗಿ ಬರೆಯುತ್ತಲಿದ್ದೇನೆ.

ನಾವು ಭೆಟ್ಟಿಯಾಗಿ ಸುಮಾರು ನಾಲ್ಕು ವರ್ಷಗಳಾಗಿವೆ.ಅಂದಿನಿಂದ ಇಂದಿನವರೆಗೆ ನಮ್ಮಿಬ್ಬರ ನಡುವಿನ ಸಂಬಂಧ ದಿನೇ ದಿನೆ ಘಟ್ಟಿಯಾಗುತ್ತ ಬಂದದ್ದು.ಅವಳು ನನ್ನ ಪ್ರೀತಿಸುತ್ತಾಳೆ ಎಂದು ನನಗೆ ಎಷ್ಟೋ ದಿನಗಳವರೆಗೆ ತಿಳಿದಿರಲೇ ಇಲ್ಲಾ .ನಿಜಹೇಳಬೇಕೆಂದರೆ ನಾವು ಭೆಟ್ಟಿಯಾಗಿ ಒಂದು ವರ್ಷಗಳ ವರೆಗೆ ನಾನು ಅವಳ ಜೊತೆ ಮಾತೂ ಸಹ ಆಡಿರಲಿಲ್ಲ..ಅವಳು ನನ್ನ ಪ್ರೀತಿಸುವ ವಿಷಯ ಅರಿವಾಗಿದ್ದು ಒಂದು ವರುಷದ ಮೊದಲು ಒಂದು ಸುದೀರ್ಘ ರೈಲಿನ ಪಯಣದಲ್ಲಿ.

ಅದೇನಾಯಿತು ಎಂದರೆ,

ಅಂದು ನಾವು ಕನ್ಯಾಕುಮಾರಿ ಇಂದ ಚೆನ್ನೈ ಗೆ ಕನ್ಯಾಕುಮಾರಿ express ನಲ್ಲಿ ಬರುತ್ತಾ ಇದ್ದೆವು.ವಿಜುರಪುರಮ್ ಎಂಬ ನಿಲ್ದಾಣ ದಾಟಿದ್ದೆವು ಆಗ ಸಮಯ ನಸುಕಿನ ೩ ಘಂಟೆ.ನಾನು ಒಬ್ಬನೇ ಆ ನಸುಕಿನ ಸಮಯದಲ್ಲಿ ಎಚ್ಚರವಾಗಿರುವೆನು ಎಂದು ಕೊಂಡಿದ್ದೆ.ಆದರೆ ನನ್ನ ಅಚ್ಚರಿಗೆ ಅವಳೂ ಸಹ ಎಚ್ಚರವಾಗಿದ್ದಳು.ನನ್ನ ಸಲುವಾಗಿಯೇ ಅವಳು ಅಷ್ಟು ಬೇಗ ಎದ್ದಿರುವಳೆಂದು ನನಗೆ ಗೊತ್ತಿರಲಿಲ್ಲ.ನನ್ನೆಡೆಗೆ ನೆಟ್ಟ ಆ ನೋಟವನ್ನು ಅವಳು ಕದಲಿಸುತ್ತಲೂ ಇರಲಿಲ್ಲ.

ನಾನು ಅವಳನ್ನು ನೋಡಿದಾಗೊಮ್ಮೆ ಮಂದಹಾಸ ಬೀರುತ್ತಿದ್ದಳು.ಅವಳ ಆ ನಗೆಗೆ ಹಾಗೂ ಅವಳ ಕಣ್ಣಿನಲ್ಲಿನ ಮಿಂಚಿಗಾಗಿ ನಾನೂ ಸಹ ಪದೇ ಪದೆ  ಕಣ್ಣು ಸಂಧಿಸುತ್ತಿದ್ದೆನು.ಅವಳ ಆ ಮುಗುಳ್ನಗೆಯಲ್ಲಿ ಅಪ್ರತಿಮ ಪ್ರೀತಿ,ಕಾಳಜಿ ಎಲ್ಲವೂ ಇದ್ದುವು.ಆ ಕ್ಷಣದಿಂದ ಇಲ್ಲಿಯವರೆಗೆ ನಾನೂ ಅವಳನ್ನು ತುಂಬಾನೇ ಪ್ರೀತಿಸುತ್ತಿರುವೆನು.ನಮ್ಮೊಳಗಿನ ಈ ಪ್ರೀತಿಯನ್ನು ಇಬ್ಬರೂ ಒಬ್ಬರಿಗೊಬ್ಬರು ತಿಳಿಸಿಲ್ಲವಾದರೂ..ಶಬ್ದಗಳಲ್ಲಿ ಬಣ್ಣಿಸಲಾಗದಷ್ಟು ಪ್ರೀತಿ ನಮ್ಮಲ್ಲಿದೆ. ನಮ್ಮ ನಡುವಿನ ಈ ರೀತಿಯ ಮಧುರ ಪ್ರೀತಿಯು ಜೀವಮಾನದವರೆಗೂ ಇರುವುವಂಥದ್ದೆಂದು ನಂಬಿದ್ದೆ..ಕಳೆದ ಮೂರು ತಿಂಗಳವರೆಗೆ ಇದು ನಿಜವೂ ಸಹ ಆಗಿತ್ತು  .ಆಗ ನಮ್ಮ ಜೀವನದಲ್ಲಿ ಬಂದವನೇ ವಿವೇಕ್.

ನಿಜ ಹೇಳಬೇಕೆಂದರೆ ನಾನೂ ಸಹ ಅವನ ಬರುವಿಗಾಗಿ ಕಾಯುತ್ತಲಿದ್ದೆ.ಆದರೆ ಅವನು ಬಂದಾಗಿಂದ ನನಗೊಬ್ಬ ಬಧ್ಧ ವೈರಿಯಂತಾಗಿದ್ದಾನೆ. ನಿವೇದಿತ ಹಾಗು ಅವನು ಈಗೀಗ ತುಂಬಾನೇ ಹತ್ತಿರವಾಗಿದ್ದಾರೆ.ಇದೆ ಕಾರಣಕ್ಕೆ ಅವಳು ನನ್ನ ಜೊತೆ ತುಂಬಾ ಕಡಿಮೆ ಸಮಯ ಕಳಿಯುತ್ತಿದ್ದಾಳೆ .ನಮ್ಮ ನಡುವಿನ ನಾಲ್ಕು ವರ್ಷದ ಗಾಢ ಸಂಬಂಧದ ಹೊರತಾಗಿಯೂ ಇದು ಅಕಸ್ಮಾತಾಗಿ ಹೇಗೆ ಆಗುತ್ತಿದೆ ಎಂದು ನನ್ನಿಂದ ಇನ್ನೂ ತಿಳಿಯಲಾಗುತ್ತಿಲ್ಲ.

ಕೆಲವೊಂದು ಬಾರಿ ಆ ವಿವೇಕನನ್ನು ಕೊಂದೇ ಬಿಡಬೇಕೆಂದು ಅನ್ನಿಸಿದರೂ ನನ್ನಲ್ಲಿ ಅಷ್ಟು ಶಕ್ತಿ ಇಲ್ಲಾ ಹಾಗು ಧೈರ್ಯವೂ ಬರುತ್ತಿಲ್ಲ.ಇದರಲ್ಲಿ ಅವನದೂ ಏನೂ ತಪ್ಪಿಲ್ಲ, ತುಂಬಾ ಮುದ್ದಾಗಿ ಹಾಗೂ ಆಕರ್ಷವಾಗಿ ಇರುವನು.

ಎರಡು ದಿನಗಳ ಹಿಂದೆ ಅವಳು ಅವನಿಗೆ ಊಟಮಾಡಿಸುವುದನ್ನು ನೋಡಿದಾಗಲಂತೂ ನನ್ನ ಹೃದಯಕ್ಕೆ ಬಹಳವೇ ನೋವಾಯಿತು.ನನ್ನ ಸಿಟ್ಟು ಕಣ್ಣೀರಾಗಿ ಹರಿಯಿತು.ನಾನು ಹುಟ್ಟಿದಾಗಲೂ ಇಷ್ಟು ಅತ್ತಿರಲಿಕ್ಕಿಲ್ಲ.ನನ್ನ ಆ ದುಖದ ಅಳುವನ್ನು ಮುಗಿಸಿ ನನ್ನನ್ನು ನಾನು ಸಮಾಧಾನ ಪಡಿಸಿಕೊಳ್ಳಲು ನನಗೆ ೩ ಘಂಟೆಗಳೇ ಹಿಡಿದವು..   

ಕೊನೆಗೆ,ಅವಳ ಪ್ರತಿಕ್ರಿಯೆ ಏನೇ ಬಂದರೂ ನನ್ನ ಮನದಾಳದ ಮಾತುಗಳನ್ನು ಅವಳಿಗೆ ಹೇಳಿಯೇ ತೀರಬೇಕೆಂದು ತೀರ್ಮಾನಿಸಿದೆ.ನನ್ನ ತಂದೆ ಆಗಾಗ ಹೇಳ್ತಿರುತ್ತಾರೆ   'Something is better than nothing!' ಅಂತಾ.ಆ 'something' ಅನ್ನಾದರೂ ಮಾಡಬೇಕೆಂದು ನನಗನ್ನಿಸಿತು.ಇವತ್ತೇ ಆ ಸುದಿನವೆಂದು ಅವಳ ಜೊತೆ 'DATE' ಫಿಕ್ಸ್ ಮಾಡಿದೆ.ನನ್ನ ನಿಜ ಪ್ರೀತಿಯನ್ನು ಅವಳ ಮುಂದೆ ಇಡಬೇಕೆಂದು ನಿರ್ಧರಿಸಿದೆ.

ನನಗೆ ಸಕಾರಾತ್ಮಕ ಉತ್ತರ ಬರುತ್ತದೆಯೋ ಇಲ್ಲವೋ ಗೊತ್ತಿಲ್ಲ..ಆದರೆ ಒಳ್ಳೆಯದನ್ನು ಮಾಡು ಎಂದು ದೇವರಲ್ಲಿ ಮೊರೆಯಿಟ್ಟೆ..

ಅಷ್ಟೊತ್ತಿಗೆ Trrrrriinnnnnnggggg…ಎಂದು ನನ್ನ ಶಾಲೆಯ ಕರೆಗಂಟೆ ಬಾರಿಸಿತು.ಊಟದ ಸಮಯ ಮುಕ್ತಾಯವಾಯಿತು.ನನ್ನ 'UKG' ಸಹಪಾಠಿಗಳು ಅದೇ ಮುಗ್ಧ ನಗೆಯೊಂದಿಗೆ ನನ್ನನ್ನು ಕರೆಯುತ್ತಿದ್ದರು.

ಆದರೆ,ನನ್ನಲ್ಲೊಂದು ವಿಶ್ವಾಸ ಇದೆ,,

ನನ್ನ ತಾಯಿ 'ನಿವೇದಿತ' ಇವನ್ನೆಲ್ಲ ತಾನಾಗಿಯೇ ತಿಳಿದುಕೊಂಡು ನನ್ನ ಆ ರಾಸ್ಸ್ಕಲ್ ತಮ್ಮ 'ವಿವೇಕ'ನ ಜೊತೆ ಜೊತೆಗೆ ನನಗೂ ಸಾಕಷ್ಟು ಸಮಯ ಕೊಟ್ಟು ಪ್ರೀತಿ ಮಾಡುವಳೆಂದು..

 

**ಮೊನ್ನೆ ಆಂಗ್ಲ ಭಾಷೆಯಲ್ಲಿ ಬಂದ ಒಂದು ಮಿಂಚಂಚೆ ಯಲಿ ಓದಿದ್ದು.ಬರಹಗಾರನ ಕಲ್ಪನೆಗೆ ಹಾಗು ಆ ಮುಗ್ಧ ಮಗುವಿನ ಮನದ ಮಾತುಗಳನ್ನ ಯಥಾವತ್ತಾಗಿ ಅನುವಾದಿಸಲು ಪ್ರಯತ್ನಪಟ್ಟಿದ್ದೇನೆ..'nice one 'ಎಂಬ ಶೀರ್ಷಿಕೆಯ ಅಡಿ ಬಂದಿತ್ತು,ಅದನ್ನೊಂದು ನಾನು ಬದಲಿಸಿರುವೆ..