ನನ್ನ ತೂಗಿದ ಒಡಲು ಇಂದು ಕಾಡುವ ಬಯಲು
ಯಾವ ನಂಟದು ಮತ್ತೆ ಗರ್ಭ ಕಟ್ಟೀತು
ಮುಗಿಲ ಕಾವಣ ಕೂಡ ನಾಚಿದಂಗಳ ಮುಂದೆ
ಇನ್ಯಾವ ನಾಕವಿದೆ ಆ ಮನೆಯ ಮುಂದೆ
ಬೆಳ್ಳಿ ಬೆಳಕನು ತೂರಿ ಒಡಲ ಬೆಳಗಿದ ಕಿಂಡಿ
ನಭದ ಯಾನಕೆ ಕೊಟ್ಟ ಬಿಸಿಲ ಕೋಲಿನ ಬಂಡಿ
ಅದನೇ ಏರುತ ಇಳಿದು ನೇಸರನ ಹಿಡಿದಂತ
ಸೌರಯಾನದ ಕುರುಹ ಇನ್ನೆಲ್ಲಿ ಹುಡುಕಲಿ
ಗಂಧಗಾಳಿಯ ಸೂಸಿ ಮಾಯದೂಟವನುಣಿಸೊ
ಜಗದ ಚಿತ್ರಕೆ ಕಿಟಕಿ ಕಟ್ಟು ಚೌಕಟ್ಟು
ಅದರಡಿಯೇ ಕೈ ಚಾಚಿ ಚಂದಮಾಮನೂ ಕೂಡ
ತಿಂದ ಕೈತುತ್ತಿನ ನೆನಪ ಎಲ್ಲಿ ತೋರಿಸಲಿ
ತಂಗಾಳಿ ಹುಟ್ಟಿಸುತ ಬಯಲ ತೋರುವ ಜಂತಿ
ಜೋಕಾಲಿ ಅದರ ಹಾಡು
ಜೀಕುಜೀಕಿಗೂ ಬೆಳಸಿ ಮುಗಿಲ ತವಕಕೆ
ತೆರೆದ ಕೈವಲ್ಯ ಮೂಲವನು ಎಲ್ಲಿ ನಾ ಅರಸಲಿ..
-ಸತ್ಯಬೋಧ ಜೋಶಿ
ಪ್ರತಿಕ್ರಿಯೆ (5)