ದೃಷ್ಟಿಯೆತ್ತಿದರೆ
ಆಕಾಶದೆತ್ತರಕೆ ತಲೆಯೆತ್ತಿ
ನಿಂತ ಪರ್ವತಪಂಕ್ತಿ
ಅದರಲ್ಲೊಂದು ಕೆಂಪು ಕೋಟೆ

ದೃಷ್ಟಿಯುದ್ದಕ್ಕೂ ಹರಿಯುತಿಹ ಶಾಂತಿ
ಇಕ್ಕೆಲಗಳಲ್ಲಿ ಹುಟ್ಟಿ ಆವರಿಸುತಿಹ
ಬಂದಳಿಕೆಗಳ ನಿರಂತರತೆ
ನೇರ ಮಾತಿನ ದಿಟ್ಟ ಶಾಸನ
ಅದರ ಕೆಳಗೇ ಧಿಕ್ಕರಿಸಿದ ತ್ಯಾಜ್ಯಗಳು
ಬೇಲಿಯೇ ಮೇಯುತಿಹ ಹೊಲ
ಮಾನವತೆಯ ನಿರ್ವಾತದಲ್ಲಿ

ಮೇಲೆ ತಿಳಿನೀಲ ಆಗಸ
ಕೆಳಗೆ ನೆಲಗದ್ದೆ ಮನೆ ತೋಟ
ಎಲ್ಲವ ಸೆಳೆದು ಬಳಸಿ
ಕಬಳಿಸೋ  ಛಲದೇ ಮುನ್ನುಗ್ಗುತಿಹ
ಕಡು ಕೆಂಪು ತುಂಬು ನೀರು
ಮತ್ತು ಉಸಿರುಗಟ್ಟಿಸುವ ಅಸಹಾಯಕತೆ

ಗೋಡೆಯಂತಾದ ಬಾಗಿಲು
ದೃಶ್ಯಕೆ ಸಂಬಂಧಿಸದ ಶೃವ್ಯ
ಮೌನವೇದ(ನಿ)ನೆಯಾಗಿ ಪ್ರತಿಧ್ವನಿಪ ಹಾಗೇ
ದಟ್ಟಿರುಳ ಗರ್ಭವ ಸೀಳಿ
ಬೆತ್ತಲೆ ಜಗವ ಸ್ಪರ್ಶಿಸಿ ಉದ್ದೀಪಿಸಿ
ಎಚ್ಚರಿಸೋ ಕೋಲ್ಮಿಂಚಿನ
ಬೆಳಕಿನ ನಿರೀಕ್ಷೆ