ಸ್ವಾಯತ್ತ ತಾಂತ್ರಿಕ ಕಾಲೇಜುಗಳು:ವಿದ್ಯಾರ್ಥಿಗಳಿಗೆ ಸೂಕ್ತವೇ?
ಕರ್ನಾಟಕದಲ್ಲಿ ತಾಂತ್ರಿಕ ಕಾಲೇಜುಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ(ವಿಟಿಯು)ಯಡಿ ಕೆಲಸ ಮಾಡುತ್ತಿದ್ದುವು.ಈಗ ಕೆಲ ಕಾಲೇಜುಗಳು ಸ್ವಾಯತ್ತ ಕಾಲೇಜುಗಳಾಗಿ ಕೆಲಸ ಮಾಡುತ್ತಾ,ಪಠ್ಯಕ್ರಮ,ಪರೀಕ್ಷೆಗಳನ್ನು ತಾವೇ ಮಾಡುವ ಸ್ವಾತಂತ್ರ್ಯ ಹೊಂದಿವೆ.ಸ್ವಾಯತ್ತ ಕಾಲೇಜುಗಳ ವಿದ್ಯಾರ್ಥಿಗಳು ವಿಟಿಯು ಪದವಿಯನ್ನೇ ಪಡೆಯುತ್ತಾರೆ.ಇಂತಹ ಸ್ವಾಯತ್ತೆ ಹೇಗೆ ಪ್ರಯೋಜನಕಾರಿ?ಪಠ್ಯಕ್ರಮವನ್ನು ಸ್ವಾಯತ್ತ ಕಾಲೇಜುಗಳು ತಮ್ಮ ಅಗತ್ಯಾನುಸಾರ ರಚಿಸಲು ಸ್ವತಂತ್ರವಾಗಿವೆ.ಪಠ್ಯಕ್ರಮವನ್ನು ಪಠ್ಯಕ್ರಮ ಸಮಿತಿಯು ಅಂಗೀಕರಿಸಬೇಕು.ಪಠ್ಯಕ್ರಮವನ್ನು ಪರಿಷ್ಕರಿಸುವುದು ಸುಲಭವಾದ್ದರಿಂದ ಅಗತ್ಯ ಕಂಡಾಗಲೆಲ್ಲಾ ಅದರಲ್ಲಿ ಬದಲಾವಣೆಗಳನ್ನು ತರುವುದು ಸಾಧ್ಯ.ನೂರಕ್ಕೂ ಅಧಿಕ ಕಾಲೇಜುಗಳು ಇರುವ ವಿವಿಯ ಪಠ್ಯಕ್ರಮವನ್ನು ಬದಲಿಸುವ ಮುನ್ನ ಕರಡು ಪಠ್ಯಕ್ರಮವನ್ನು ಕಾಲೇಜುಗಳಿಗೆ ಕಳಿಸಿ,ಅವರ ಅಭಿಪ್ರಾಯಗಳನ್ನೂ ಪಡೆಯುವುದು ಅಗತ್ಯವಾಗುವುದರಿಂದ,ಪ್ರಕ್ರಿಯೆ ನಿಧಾನವಾಗುತ್ತದೆ.
ಈ ಕಾಲೇಜುಗಳಲ್ಲಿ,ಪರೀಕ್ಷೆಗಳು ನಡೆದು,ಎರಡು ವಾರಗಳೊಳಗೆ ಫಲಿತಾಂಶ ನೀಡಲು ಸಾಧ್ಯವಾಗುವುದು,ವಿದ್ಯಾರ್ಥಿಗಳ ದೃಷ್ಟಿಯಿಂದ ಅತ್ಯಂತ ಸ್ವಾಗತಾರ್ಹ ಕ್ರಮವಾಗುತ್ತದೆ.ಯೆರ್ರಾಬಿರ್ರಿ ಮೌಲ್ಯಮಾಪನ ನಡೆಯುವ ಭಯವಿಲ್ಲ.ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದರೆ,ಅದೂ ಅತ್ಯಂತ ಶೀಘ್ರವಾಗಿ ನಡೆಯುತ್ತದೆ.ಪರೀಕ್ಷೆಯಲ್ಲಿ ನಪಾಸಾದವರಿಗೆ,ಮುಂದಿನ ಸೆಮಿಸ್ಟರ್ ವರೆಗೆ ಕಾಯದೆ,ತಕ್ಷಣ ಪರೀಕ್ಷೆ ಬರೆಯುವ ಸೌಕರ್ಯವೂ ಸಿಗುತ್ತದೆ.ಸೆಮಿಸ್ಟರ್ ಪರೀಕ್ಷೆಗಳಿಗೆ ಮಾತ್ರಾ ಅತ್ಯಂತ ಮಹತ್ತ್ವ ನೀಡದೆ,ಆಗಾಗ ನಡೆಯುವ ಕಿರುಪರೀಕ್ಷೆಗಳಿಗೂ ಪ್ರಾಧಾನ್ಯ ಕಲ್ಪಿಸುವ ಮೂಲಕ ಪರೀಕ್ಷೆಗಳು ಲಾಟರಿಯಾಗುವುದು ತಪ್ಪುತ್ತದೆ.ಪ್ರಯೋಗಾಲಯಗಳಲ್ಲೂ ಇದೇ ರೀತಿ ಪ್ರತಿ ತರಗತಿಯಲ್ಲೂ ಮೌಲ್ಯಾಂಕನ ನಡೆಸುವ ಮೂಲಕ,ಸೆಮಿಸ್ಟರ್ ಉದ್ದಕ್ಕೂ ವಿದ್ಯಾರ್ಥಿಯ ನಿರ್ವಹಣೆಗೆ ಬೆಲೆ ಸಿಗುತ್ತದೆ.ಪರೀಕ್ಷೆಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ನಪಾಸಾಗುವುದು,ಕಡಿಮೆ ಅಂಕ ಗಳಿಸುವುದು ವಿವಿಯ ಗುಣಮಟ್ಟದ ಮಾನದಂಡಗಳು ಎಂಬ ತಪ್ಪು ಅಭಿಪ್ರಾಯ ಹೊಂದಿದವರು,ಸ್ವಾಯತ್ತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಸುಮ್ಮನೆ ಪಾಸು ಮಾಡುತ್ತಾರೆ ಎಂದು ಮಿಥ್ಯಾರೋಪ ಹೊರಿಸುವುದಿದೆ.ಉತ್ತಮ ವಿದ್ಯಾಸಂಸ್ಥೆಗಳು ಮಾತ್ರಾ ಸ್ವಾಯತ್ತೆ ಗಳಿಸಿವೆಯಾದ್ದರಿಂದ ಅಂತಹ ಅಕ್ರಮಗಳು ನಡೆಯುವುದಿಲ್ಲ.ಮಾತ್ರವಲ್ಲ,ವಿಟಿಯು ಸ್ವಾಯತ್ತ ಕಾಲೇಜುಗಳ ಚಟುವಟಿಕೆಗಳ ಮೇಲೆ ನಿಯಂತ್ರಣ ಹೊಂದಿದೆ.
-----------------------------------------------------
ಸ್ವಾಗತಾರ್ಹ "ಸ್ವಾಗತ್"
___LINK_OPEN_ href="http://3.bp.blogspot.com/_PU7BmR35lao/TCc6lqVpuMI/AAAAAAAABUk/sSfU9GPYIFw/s1600/swagat.JPG"___
State Wide Attention on Grievances with Application of Technology (SWAGAT-ಸ್ವಾಗತ್)ಎನ್ನುವುದು ಜನರ ದೂರುಗಂಟೆಯನ್ನು ಆಲಿಸಲು ಗುಜರಾತ್ನ ರಾಜ್ಯ ಸರಕಾರ ಮಾಡಿಕೊಂಡಿರುವ ಆನ್ಲೈನ್ ವ್ಯವಸ್ಥೆ.ಜನರು ತಮ್ಮ ದೂರು ದುಮ್ಮಾನಗಳನ್ನು ಆನ್ಲೈನ್ನಲ್ಲಿ ದಾಖಲಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.ದೂರು ದಾಖಲಾದೊಡನೆ,ಅದು ಅಧಿಕಾರಿಗಳ ಪ್ರತಿಕ್ರಿಯೆಗೆ ಲಭ್ಯವಿರುತ್ತದೆ.ಅಧಿಕಾರಿಗಳು ಪ್ರತಿ ದೂರಿಗೂ ತಮ್ಮ ಪ್ರತಿಕ್ರಿಯೆಯನ್ನು ದಾಖಲಿಸಬೇಕು.ಪ್ರತಿ ತಿಂಗಳೂ ನಡೆಯುವ ಸಭೆಯಲ್ಲಿ ಅವುಗಳನ್ನು ಚರ್ಚಿಸಿ,ಬಗೆಹರಿಸಲಾಗುತ್ತದೆ.ಮುಖ್ಯಮಂತ್ರಿಯೇ ಸಭೆಯಲ್ಲಿ ಖುದ್ದು ಹಾಜರಿರುವುದರಿಂದ,ಸಭೆಗೆ ಹೆಚ್ಚಿನ ಗಾಂಭಿರ್ಯ ಬರುತ್ತದೆ.ವಿಶ್ವಸಂಸ್ಥೆಯ ಸಾರ್ವಜನಿಕ ಸೇವೆಗಾಗಿ ಪ್ರಶಸ್ತಿಯನ್ನು ಈ ಯೋಜನೆ ಗೆಲ್ಲಲು ಸಾಧ್ಯವಾಗಿರುವುದು ಸ್ವಾಗತ್ ಯೋಜನೆಯ ಸಫಲತೆಗೆ ಸಾಕ್ಷಿ.http://swagat.guj.nic.inನಲ್ಲಿ ಈ ಯೋಜನೆಯ ಅಂತರ್ಜಾಲ ತಾಣವಿದೆ.ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯದ 26 ಸಚಿವಾಲಯಗಳ, 26 ಜಿಲ್ಲಾಕಚೇರಿಗಳು ಮತ್ತು 239 ಉಪಜಿಲ್ಲಾಕಚೇರಿಗಳಲ್ಲಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆಯನ್ನು ಅಳವಡಿಸಿ,ಮುಖ್ಯಮಂತ್ರಿಯ ಜತೆ ಎಲ್ಲಾ ಕೇಂದ್ರಗಳು ಭಾಗವಹಿಸಲು ಅನುಕೂಲತೆ ಕಲ್ಪಿಸಲಾಗಿದೆ.ಇಪ್ಪತ್ತಮೂರು ಸಾವಿರಕ್ಕೂ ಅಧಿಕ ಅಧಿಕಾರಿಗಳು ಸ್ವಾಗತ್ ವ್ಯವಸ್ಥೆಯಲ್ಲಿ ಭಾಗವಹಿಸುತ್ತಾರೆ.ಬಹಳ ಕಾಲದಿಂದ ವಿಲೇವಾರಿ ಆಗದ ಪ್ರಕರಣಗಳಿಗೆ ಆದ್ಯತೆಯಿರುವಂತೆ,ಮೊದಲ ಬಾರಿಗೆ ದೂರು ಸಲ್ಲಿಸುವವರೂ ದೂರು ದಾಖಲಿಸಬಹುದು.ಯೋಜನೆಯಲ್ಲಿ ಸುಮಾರು ಒಂದು ಲಕ್ಷ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.
--------------------------------------------------------------------
ಆಸು-ಮನ
ಆತ್ರಾಡಿ ಸುರೇಶ್ ಹೆಗ್ಡೆಯವರು http://athradi.wordpress.com/ ಬ್ಲಾಗು ಬರಹಗಳ ಮೂಲಕ ಅಂತರ್ಜಾಲ ಬಳಸುವ ಕನ್ನಡಿಗರನ್ನು ರಂಜಿಸುತ್ತಿರುವ ಕವಿ,ಬರಹಗಾರ.ಹಾಸ್ಯ ಪ್ರಧಾನ ಕವನಗಳು ಇವರ ವಿಶಿಷ್ಟತೆ.ಸಿರಿ ಸಂಪದ ತಾಣದಲ್ಲೂ ಓತಪ್ರೋತವಾಗಿ ಇವರ ಬರಹಗಳು ಬೆಳಕು ಕಾಣುತ್ತಿರುತ್ತವೆ.ಸಂಪದ ಸಮುದಾಯದಲ್ಲಿ ಲವಲವಿಕೆ ಮೂಡಿಸುವುದರಲ್ಲಿ ಇವರ ಕಾಣಿಕೆಯೂ ಇದೆ.ವಾಯುಸೇನೆಯ ನಿವೃತ್ತ ಅಧಿಕಾರಿ.ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
-------------------------------------------------------------------------------------------
2013:ಸೂರ್ಯನಿಂದ ಭೂಮಿಗೆ ವಿಪತ್ತು?
2012ದಲ್ಲಿ ಪ್ರಳಯ ಸಂಭವಿಸುವುದು ನಿಶ್ಚಿತ ಎಂದು ಭಾವಿಸುವವರು 2013ರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.ಆದರೆ, ನೀವದನ್ನು ನಂಬುವುದಿಲ್ಲವಾದರೆ,2013ರಲ್ಲಿ ಸೂರ್ಯನ ಮೇಲಿನ ಚಟುವಟಿಕೆಗಳು ಭೂಮಿಯ ಮೇಲೆ ದುಷ್ಪರಿಣಾಮ ಬೀರಬಹುದು ಎನ್ನುವ ಅನಿಸಿಕೆ ಇದೆ.ಒಂದು ಗಂಟೆಯಿಂದ ಹತ್ತು ಗಂಟೆಗಳ ಕಾಲ ಸೂರ್ಯನಿಂದ ಭೂಮಿಯತ್ತ ವಿಕಿರಣಗಳು ಬರುವ ಸಾಧ್ಯತೆಯನ್ನು ಪೂರ್ತಿ ಅಲ್ಲಗಳೆಯಲಾಗದು ಎಂದು ಸಂಶೋಧಕರ ಅಭಿಪ್ರಾಯವಾಗಿದೆ.ಇದರಿಂದ ಸಂಪರ್ಕ ಉಪಗ್ರಹಗಳು,ಇಲೆಕ್ಟ್ರಾನಿಕ್ ಸಾಧನಗಳು,ಕಂಪ್ಯೂಟರುಗಳು ಸರಿಯಾಗಿ ಕೆಲಸ ಮಾಡದಿರಬಹುದು.ಹನ್ನೊಂದು ವರ್ಷಗಳಿಗೊಮ್ಮೆ ಸೂರ್ಯನ ಮೇಲೆ ಚಟುವಟಿಕೆಗಳು ಗರಿಷ್ಠ ಮಟ್ಟಕ್ಕೇರುವುದು ಮಾಮೂಲಿ.ಆದರೆ,ಅದರ ಪ್ರಮಾಣವನ್ನು ಈಗಲೇ ಲೆಕ್ಕ ಹಾಕುವುದು ಕಷ್ಟಸಾಧ್ಯ.ಮುನ್ನೆಚ್ಚರಿಕೆ ತೆಗೆದುಕೊಂಡು,ಜಾಗ್ರತೆ ವಹಿಸಿದರೆ,ಈ ಅವಧಿಯನ್ನು ಹೆಚ್ಚಿನ ಹಾನಿಯಾಗದಂತೆ ಕಳೆಯಲು ಸಾಧ್ಯ ಎಂದು ತಜ್ಞರು ಧೈರ್ಯ ಹೇಳುತ್ತಾರೆ.ನ್ಯಾಷನಲ್ ಅಕಾಡೆಮಿ ಆಫ್ ಸಯನ್ಸ್ ಸ್ಟಡಿ ಈ ಸಾಧ್ಯತೆ ಬಗ್ಗೆ ಮುನ್ಸೂಚನೆ ನೀಡಿದ ಸಂಸ್ಥೆಗಳಲ್ಲೊಂದಾಗಿದೆ.
--------------------------------------------------------
ಐಫೋನ್4ದಲ್ಲಿ ಏಂಟೆನಾ ಸಮಸ್ಯೆ
___LINK_OPEN_ href="http://1.bp.blogspot.com/_PU7BmR35lao/TCc6Y7HuV3I/AAAAAAAABUc/BHxqnXneakU/s1600/iphone4_2up_front_side.jpg"___
ಐಫೋನ್4 ಸಾಧನವನ್ನು ಏಪಲ್ ಬಿಡುಗಡೆ ಮಾಡಿದೆ.ಸಾಧನವು ವಿಡಿಯೋ ಚಾಟಿಂಗ್ ಸವಲತ್ತನ್ನು ಒದಗಿಸುತ್ತವೆ.ಹೈ ಡೇಫಿನಿಷನ್ ಟೀವಿ ವೀಕ್ಷಣೆ ಇದರಲ್ಲಿ ಸಾಧ್ಯ.ಇದರ ಮಾರಾಟ ಆರಂಭವಾದ ಕೂಡಲೇ ಜನ ಅಂಗಡಿಗಳಿಗೆ ಮುಗಿಬಿದ್ದು ಖರೀದಿಸಿದರು.ಮೊದಲ ಬಳಕೆದಾರರು,ಐಫೋನ್4ನಲ್ಲಿ ಸಂಕೇತಗಳು ದುರ್ಬಲವಾಗಿ ಸ್ವೀಕರಿಸಲ್ಪಡುವುದನ್ನು ವರದಿ ಮಾಡಿದ್ದಾರೆ.ಸ್ಟೀಲ್ ಕವಚಕ್ಕೆ ಎಡಬದಿಯಲ್ಲಿ ಏಂಟೆನಾ ಅಳವಡಿಸಲಾಗಿದ್ದು,ಇದನ್ನು ಕೈಯಲ್ಲಿ ಸ್ಪರ್ಶಿಸಿದರೆ,ಸಂಕೇತ ಸ್ವೀಕಾರ ದುರ್ಬಲಗೊಳ್ಳುತ್ತದೆ.ಕೈಯಲ್ಲಿ ಸ್ಪರ್ಶಿಸದಿದ್ದರೆ,ಸಮಸ್ಯೆಯಿಲ್ಲ ಎಂದು ಜನರು ದೂರಿದ್ದಾರೆ.ಕಂಪೆನಿಯೂ ಹೀಗಾಗುವುದು ಹೌದು ಎಂದು ಪರೀಕ್ಷೆಯ ನಂತರ ಒಪ್ಪಿಕೊಂಡಿದೆ.ಐಫೋನಿನ ಕೆಳಗೆ-ಎಡಬದಿಯಲ್ಲಿರುವ ಏಂಟೆನಾಕ್ಕೆ ದೇಹದ ಭಾಗಗಳು ನೇರ ಸಂಪರ್ಕಕ್ಕೆ ಬರದಂತೆ ಜಾಗ್ರತೆ ವಹಿಸಬೇಕಾಗುತ್ತದೆ ಎಂದು ಆಪಲ್ ವಕ್ತಾರ ಸ್ಪಷ್ಟಪಡಿಸಿದ್ದಾರೆ.ಸಾಧನವನ್ನು ಸ್ಪರ್ಶಿಸದಿದ್ದರೆ ಸಮಸ್ಯೆಯಿಲ್ಲ,ಇನ್ನೊಂದು ರೀತಿ ಹೇಳುವುದಿದ್ದರೆ,ಐಫೋನ್ ಬಳಸದಿದ್ದರೆ ಸಮಸ್ಯೆಯಿರದು ಎಂದು ಕುಹಕಿಗಳು ಉದ್ಘರಿಸಿದ್ದಾರೆ.ಸಾಧನದ ಕ್ಯಾಮರಾ ಐದು ಮೆಗಾಪಿಕ್ಸೆಲ್ನಾಗಿದ್ದು,ಗುಣಮಟ್ಟದ ಚಿತ್ರ ಮತ್ತು ವಿಡಿಯೋಗಳನ್ನು ಸೆರೆ ಹಿಡಿಯಬಲ್ಲುದು.ವಿಡಿಯೊ ಸಂಕಲನವೂ ಸಾಧ್ಯವಿರುವುದು ಪ್ಲಸ್ಪಾಯಿಂಟ್.ಅಮೆರಿಕಾದಲ್ಲಿ ಹದಿನಾರು ಜಿಬಿ ಸಾಮರ್ಥ್ಯದ ಸಾಧನದ ಬೆಲೆ ನೂರತೊಂಭತ್ತೊಂಭತ್ತು ಡಾಲರುಗಳಾದರೆ,ಮೂವತ್ತೆರಡು ಜಿಬಿ ಸಾಮರ್ಥ್ಯದ್ದಕ್ಕೆ ಇನ್ನೂರತೊಂಭತ್ತೊಂಭತ್ತು ಡಾಲರು ಬೆಲೆಯಿದೆ.
---------------------------------------------------------
ಸೆಲ್ಫೋನ್ ಬಳಸಿ ಕಣ್ಣುಪರೀಕ್ಷೆ
ಸೆಲ್ಫೋನ್ ಬಳಸಿಕೊಂಡು ಅತ್ಯಂತ ಕಡಿಮೆ ಖರ್ಚಿನಲ್ಲಿ ಕಣ್ಣಿನ ವಕ್ರೀಭವನ ಸಂಬಂಧಿ ತೊಂದರೆಗಳನ್ನು ಪತ್ತೆ ಹಚ್ಚುವ ವಿಧಾನ "ನೇತ್ರ"ವನ್ನು ಮಸಾಚ್ಯುಸೆಟ್ಸಿನ ತಾಂತ್ರಿಕ ಮಹಾವಿದ್ಯಾಲಯದ ಸಂಶೋಧಕರು ಸಂಶೋಧಿಸಿದ್ದಾರೆ.ಭಾರತೀಯ ಮೂಲದ ರಮೇಶ್ ರಾಸ್ಕರ್ ತಮ್ಮ ಸಹಚರರೊಂದಿಗೆ ಕಣ್ಣು ಪರೀಕ್ಷೆ ಮಾಡುವ ವಿಧಾನವನ್ನು ಅಭಿವೃದ್ಧಿ ಪಡಿಸಿದ್ದಾರೆ.ಇದನ್ನು ಮೊಬೈಲ್ ಫೋನಿನಲ್ಲಿ ಅಳವಡಿಸಿ,ಒಂದು ಪ್ಲಾಸ್ಟಿಕ್ ಲೆನ್ಸ್ ಬಳಸಿ,ಕಣ್ಣಿನ ಪರೀಕ್ಷೆಯನ್ನು ಮಾಡಬಹುದು.ಲೆನ್ಸ್ ಬೆಲೆ ಒಂದು ಡಾಲರಿನಷ್ಟಾಗಬಹುದು.ಲೆನ್ಸನ್ನು ಮೊಬೈಲ್ ತೆರೆಯ ಮುಂದೆ ಅಳವಡಿಸಿ,ಅದರ ಮೂಲಕ ನೋಡುತ್ತಾ ಕಣ್ಣಿನ ಪರೀಕ್ಷೆ ಮಾಡಬೇಕು.ಮೊಬೈಲಿನಲ್ಲಿ ಒಂದು ಗೆರೆಯನ್ನು ಮೂಡಿಸಿ,ಅದನ್ನು ಲೆನ್ಸಿನ ಗೆರೆಯ ಅಕ್ಷದಲ್ಲಿ ಬರುವಂತೆ ಮಾಡಲು,ಮೊಬೈಲ್ ಸಾಧನದ ಬಾಣದ ಗುರುತಿನ ಕೀಲಿಗಳನ್ನು ಎಷ್ಟು ಚಲಿಸಬೇಕು ಎನ್ನುವ ಆಧಾರದಲ್ಲಿ,ಕಣ್ಣಿನ ತೊಂದರೆಯನ್ನು ಅಂದಾಜು ಮಾಡುವುದು "ನೇತ್ರ" ಪರೀಕ್ಷೆಯ ವಿಧಾನವಾಗಿದೆ.
Udayavani Bangalore
ಉದಯವಾಣಿ Udayavani
*ಅಶೋಕ್ಕುಮಾರ್ ಎ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!