ಶಾಂಘೈಗೆ ಬಂದಾಗಿಂದಲೂ (ಜುಲೈ ೦೯) ಎಲ್ಲಾ ಕಡೆಗೆ ಒಂದು ರೀತಿಯ ಹಬ್ಬದ ತಯ್ಯಾರಿ.ಅಗಲವಾಗುತ್ತಿರುವ ರಸ್ತೆಗಳು,ಹೊಸ ಹೊಸ ಮೆಟ್ರೋ ಮಾರ್ಗಗಳು,ಒಂದು ಮುಗಿಯುತ್ತಲೇ ಶುರುವಾಗುವ ಮತ್ತೊಂದು ಫ್ಲೈ ಓವರ್ಗಳು,ಎಲ್ಲಾ ರಸ್ತೆಗಳ ಪಕ್ಕಕ್ಕೂ ಎಲ್ಲಿಂದಲೋ ಬೆಳೆದು ತಂದು ನೆಡುತ್ತಿರುವ 'ಮರ'ಗಳು.ನಗರದ ಸುಂದರತೆಯನ್ನು ಇಮ್ಮಡಿಗೊಳಿಸುತ್ತಿದ್ದುವು.ಅಂತೆಯೇ,ರಸ್ತೆಯ ಪಕ್ಕದಲ್ಲಿ,ಪ್ಲಾಸ್ಟಿಕ್ ಕವರ್ ಗಳ ಮೇಲೆ,ಪಾವತಿಗಳ ಮೇಲೆ,ಹುಲ್ಲು ಹಾಸಿನ ಕಟಿಂಗ್ ಗಳಲ್ಲಿ ಎಲ್ಲೆಂದರಲ್ಲಿ ಕಾಣುತ್ತಿದ್ದವನೇ 'ಹೈಬೋ'.ಇದೆಲ್ಲ ನಡೆಯುತ್ತಿದ್ದುದು ಶಾಂಘೈ ವರ್ಲ್ಡ್ ಎಕ್ಸ್ಪೋ ೨೦೧೦,ಎಂಬ ಸುಮಾರು ೧೫೦ ಕ್ಕೂ ಹೆಚ್ಚಿಗೆ ದೇಶಗಳು ಪಾಲ್ಗೊಳ್ಳುತ್ತಿರುವ ೬ ತಿಂಗಳುಗಳ ಸಮಾರಂಭಕ್ಕೆ.ಹೈಬೋ ಈ ಸಮ್ಮೇಳನದ ಮಾಸ್ಕಾಟ್ ಮನುಷ್ಯ..ನಮ್ಮ ಬೆಂಗಳೂರಿನ ರಾಷ್ಟ್ರೀಯ ಕ್ರೀಡಾಕೂಟದ 'ನಂದು' ಇದ್ದ ಹಾಗೆ.
- ___LINK_OPEN_href="http://teredamana.files.wordpress.com/2010/07/hai_bo1.jpg"___

- hai bo
ಈ ಹಬ್ಬದ ಉದ್ಘಾಟನ ದಿನದ 'ಕ್ಷಣ'ಗಣನೆ ಆರು ತಿಂಗಳಿಂದ ಶುರುವಾಗಿತ್ತು! ನಿಜ ,ಪೀಪಲ್ ಸ್ಕ್ವೇರ್ ('ಜನರ ಚೌಕ' ಅಂತ ನಾವು ಕನ್ನಡಿಗರು ಕರಿಯೋದು)ಎನ್ನುವ ಶಾಂಘೈ ನ ಮಧ್ಯಭಾಗದ ಮೆಟ್ರೋ ನಿಲ್ದಾಣದಲ್ಲಿ ಆಳೆತ್ತರದ ಒಂದು ಕಟಾಂಜನ ಹಾಕಿ ಅದರ ಮೇಲೆ ಇಷ್ಟು ದಿನ,ಇಷ್ಟು ಘಂಟೆ,ಇಷ್ಟು ನಿಮಿಷ,ಇಷ್ಟು ಸೆಕಂಡ್ ಗಳು ಇವೆ ಅಂತ ತೋರಿಸುತ್ತಿತ್ತು.ಕೊನೆಗೆ ಆ ದಿನ ಬಂದೇ ಬಿಟ್ಟಿತು.ಅಂದು ಶನಿವಾರ,೧ ಮೇ ೨೦೧೦.ಇಂತಹ ಮಹಾ ಉದ್ಘಾಟನ ಸಮಾರಂಭಕ್ಕೆ ಸಿಕ್ಕಾಪಟ್ಟೆ ಜನ ಬರುತ್ತಾರೆ ಎಂದು ,ಶಾಂಘೈ ಸರಕಾರ ಹಿಂದಿನ ದಿನ ರಜೆಯನ್ನು ಸಹ ನೀಡಿದ್ದರು. ಟ್ರಾಫಿಕ್ ಹತೋಟಿಯಲ್ಲಿ ಇಡಲು ಸ್ಥಳೀಯರು ಮನೆಯಲ್ಲಿರಿ ಅಥವಾ ಪ್ರವಾಸಕ್ಕೆ ಹೋಗಲಿ ಎಂದು.!ನಿರೀಕ್ಷಿಸಿದಂತೆಯೇ ಸುಮಾರು ೨ ಲಕ್ಷ ಜನರು ಬಂದಿದ್ದರೆಂದು ಒಂದು ಅಂದಾಜು..
ಶಾಂಘೈ ನಗರವನ್ನು ಹುಅಂಗ್ಪು(huangpu ) ಎಂಬ ಪೂರ್ವ ಪಶ್ಚಿಮವಾಗಿ ಹರಿವ ನದಿ,ಹಳೆನಗರ(ಪುಕ್ಷಿ,PuXi),ಹೊಸ ನಗರ(ಪುಡೋಂಗ್,PuDong) ಅಂತ ಬೇರ್ಪಡಿಸುತ್ತದೆ.ಈ ಎಕ್ಸ್ಪೋ ನಡೆಯುತ್ತಿರುವುದು ಆ ನದಿಯ ಇಕ್ಕೆಲಗಳಲ್ಲಿ.ಸುಮಾರು ೫.೨೮ ಚದುರ ಕಿ.ಮಿ ಪ್ರದೇಶದಲ್ಲಿ.(೧.೩೫ ಚದುರ ಕಿ ಮಿ,ಪುಕ್ಷಿ ೩.೯೩ ಚದುರ ಕಿ ಮಿ ಪುಡೊಂಗ್).ಹಳೆಯ ನಗರದಲ್ಲಿ ಡೊಮೆಸ್ಟಿಕ್ ಪೆವಿಲಿಯನ್ ಗಳಿದ್ದರೆ ,ಹೊಸನಗರದಲ್ಲಿ ಎಲ್ಲಾ ದೇಶಗಳ ಮಳಿಗೆಗಳಿವೆ..ಒಳಗೆ ಹೋಗಲು ೮ ಮುಖ್ಯ ದ್ವಾರಗಳಿವೆ.೩ ಪುಕ್ಷಿಯಲ್ಲಿ ೫ ಪುಡೊಂಗ್ನಲ್ಲಿ.ಒಂದೊಂದು ಮುಖ್ಯ ದ್ವಾರಕ್ಕೂ ೨೦-೩೦ ಎಂಟ್ರಿಗಳಿವೆ.ಇಷ್ಟಾದರೂ ದೊಡ್ಡ ಸಾಲೇ ನಿಂತಿರುತ್ತದೆ.ದಿನವೂ ೪-೫ ಲಕ್ಷ ಜನರಿಗೆ ಆರು ತಿಂಗಳಿನವರೆಗೆ ವ್ಯವಸ್ಥೆ ಮಾಡುವುದೇನು ಸಣ್ಣ ವಿಷಯವೇ..?ಸಣ್ಣದೆಂದೆ ಅನಿಸುತ್ತದೆ ಇಲ್ಲಿ..!!ಒಳಗಡೆ ಹೋದರೆ ಉತ್ತಮವಾದ ರಸ್ತೆ,ನೀರಿನ ವ್ಯವಸ್ಥೆ,ಪಿಜ್ಜಾ ,ಕೇ ಎಪ್ಹ್ ಸಿ ಗಳು,ಚೀನಾದ ವಿವಿಧ ಜಾಗಗಳ ಪ್ರಸಿಧ್ಧ ತಿನ್ಮನೆಗಳು,ಮಾರಾಟ ಮಳಿಗೆಗಳು,ಬಸ್ ವ್ಯವಸ್ಥೆ,ನದಿ ದಾಟಲು ಕ್ರೂಸರ್ಗಳು ,ಅದಕ್ಕೆಂದೇ ಒಂದು ಮೆಟ್ರೋ ರೈಲು!ಎಲ್ಲೆಂದರಲ್ಲಿ ಸಹಾಯಕ್ಕೆ ನಿಲ್ಲುವ ಸ್ವಯಂ ಸೇವಕರು,ಇಷ್ಟೆಲ್ಲಾ ವ್ಯವಸ್ಥೆ ಮಾಡಿದ್ದಾರೆ.ನಿಜವಾಗಲೂ ಅದ್ಭುತ."ಉತ್ತಮ ಶಹರ ಉತ್ತಮ ಜೀವನ" (better city better life) ಎಂಬ ಧ್ಯೇಯ ವಾಕ್ಯ ಹೊಂದಿರುವ ಈ ಎಕ್ಸ್ಪೋ ನ ಆಯೋಜನೆ ಚೀನಿಯರು ಲಾಭಕ್ಕಾಗಿ ಮಾಡುತ್ತಿಲ್ಲ, ಜಗತ್ತಿನ ಜನರಿಗೆ ಚೀನಾದ ಶಕ್ತಿಯ ಬಗ್ಗೆ ತಿಳಿಸಲು,ನಾವು ಮೇಲೆ ಬರುತ್ತಿದ್ದೇವೆ ಎಂದು ಚೆತಾವಣಿ ಕೊಡಲೋ ಎಂಬಂತೆ ಇದೆ ವ್ಯವಸ್ಥೆ.
ಇದರ ಬಗ್ಗೆ ಇಷ್ಟೆಲ್ಲಾ ಕೇಳಿ,ನೋಡುತ್ತಿರುವಾಗ ಒಮ್ಮೆ ಹೋಗಲೇ ಬೇಕು,ಎಲ್ಲಾ ದೇಶದ ಪೆವಿಲಿಯನ್ ಗಳನ್ನು ಸುತ್ತಲೇ ಬೇಕು ಎಂಬ ಆಸೆ ಇದ್ದೇ ಇತ್ತು..ಸುಮಾರು ಆರು ತಿಂಗಳು ನಡೆಯುವ ಈ ಜಗತ್ ಉತ್ಸವಕ್ಕೆ ಹೋಗಲು ಇನ್ನೂ ಸಿಕ್ಕಾಪಟ್ಟೆ ಸಮಯ ಇದೆ, ಸ್ವಲ್ಪ ಜನಸಂದಣಿ ಕಡಿಮೆ ಆದಮೇಲೆ ಹೋಗೋಣ ಅಂತ ಅಂದುಕೊಂಡರೆ ದಿನೇ ದಿನೇ ಸಂಖ್ಯೆ ಏರುತ್ತಲೇ ಹೋಗ್ತಾ ಇದೆ.ಚೀನಾ ಸರ್ಕಾರ ಒಂದು ದಿನಕ್ಕೆ ಸುಮಾರು ೫ ಲಕ್ಷ ಜನ ವೀಕ್ಷಿಸುತ್ತಾರೆ ಅಂತ ಅಂದಾಜಿಸಿತ್ತು.ಅದು ದಿನೇ ದಿನೇ ಅಷ್ಟು ಆಗ್ತಾ ಇದೆ.!ಹೌದು, ಮೊದ ಮೊದಲು ಕಷ್ಟಪಟ್ಟು ೩ ಲಕ್ಷ ಮುಟ್ಟುತ್ತಿದ್ದ ಸಂಖ್ಯೆ ಈಗೀಗ ದಿನವೂ ೪-೫ ಲಕ್ಷ ಮುಟ್ಟುತ್ತಿದೆ.
ಈ ನಡುವೆ ಚೀನಿಯರ ಒಂದು ಹಬ್ಬಕ್ಕೆಂದು ಒಂದು ರಜೆ ಬಂತು.ರಜೆ ಇದ್ದದ್ದು ಸೋಮ,ಮಂಗಳ ಹಾಗೂ ಬುಧವಾರ(ಜೂನ್ ೧೪,೧೫,೧೬).ಸರಿ ಮೂರೂದಿನ ಹೋಗೋಣ ಎಂದು ನಾನು ನನ್ನ ಗೆಳೆಯ ಅರುಣ್ ನಿರ್ಧರಿಸಿದೆವು..ಪ್ರತಿ ಬಾರಿಯ ಹಾಗೆ ಕೊನೆಯ ಕ್ಷಣದ ಪ್ಲಾನ್ !ಎಲ್ಲಿಂದಲೋ ಒಂದೊಂದು ಟಿಕಟ್ ಸಹ ದಕ್ಕಿದವು..ಟಿಕೆಟ್ ದರ ೧೬೦ ರೇನ್ ಮಿನ್ ಬಿ (RMB ) ಸುಮಾರು ೧೦೯೦ ರೂಪಾಯಿ. ಮುಂಜಾನೆ ೮ ಕ್ಕೆ ಎಕ್ಸ್ಪೋ ನಡೆಯುವ ಸ್ಥಳಕ್ಕೆ ಹೋಗಬೇಕೆಂದು ನಿರ್ಧಾರ ಆಯಿತು.ಅಲ್ಲಿ ಮುಟ್ಟಿದಾಗ ೮-೦೫!.ಎಲ್ಲಾ ೨೦-೩೦ ಎಂಟ್ರಿ ಗಳೂ ತುಂಬಿ ತುಳುಕಾಡುತ್ತಿದ್ದವು..ಒಂದರಲ್ಲಿ ಹೋಗಿ ನಿಂತೆವು..ಸೆಕ್ಯೂರಿಟಿ ಚೆಕ್ ಮಾಡಿಸಿಕೊಂಡು ಒಳಗೆ ಹೆಜ್ಜೆ ಇಟ್ಟಾಗ ೯-೧೫.ನಿಗದಿತ ಎಕ್ಸ್ಪೋ ಸಮಯ ೯ ರಿಂದ ರಾತ್ರಿ ೧೨-೦೦.ಎಲ್ಲಾ ದೇಶಗಳ ಪೆವಿಲಿಯನ್ ನೋಡಲು ಕನಿಷ್ಠ ೧೦ ದಿನಗಳಾದರೂ ಬೇಕು ಎಂದು ನನ್ನ ಅಂದಾಜು.
ಇಲ್ಲಿ ಎಲ್ಲಾ ದೇಶಗಳೂ ತಮ್ಮ ಒಂದು ಪೆವಿಲಿಯನ್ ಕಟ್ಟಿಕೊಂಡು ಒಳಗೆ ತಮ್ಮ ಸಂಸ್ಕೃತಿ,ಕಲೆ,ಸಾಹಿತ್ಯ ಒಟ್ಟಿನಲ್ಲಿ ತಮ್ಮ ದೇಶದ ಗರಿಮೆ ತೋರಿಸುತ್ತಿದ್ದಾರೆ.ಆಯಾ ದೇಶಗಳ ಪೆವಿಲಿಯನ್ ಒಳಗೆ ಹೋಗಲೂ ಮತ್ತೆ ಸರಾಸರಿ ೩- ೪ ಘಂಟೆಗಳ ಸಾಲು.! ಪ್ರತಿ ಬಾರಿಯೂ ನನಗೆ ತಿರುಪತಿಯ ಧರ್ಮದರ್ಶನಕ್ಕೆ ನಿಂತಂಗೆ ಅನಿಸ್ತಾ ಇತ್ತು.!!ನಾವು ಸುಮಾರು ೫೦ ದೇಶಗಳ ಪೆವಿಲಿಯನ್ ಗಳನ್ನು ನೋಡಿದೆವು.ಆಸ್ಟ್ರೇಲಿಯ ಒಂದನ್ನು ಬಿಟ್ಟು ಎಲ್ಲಾ ಖಂಡಗಳ ಕೊನೆಯ ಪಕ್ಷ ಒಂದು ಪೆವಿಲಿಯನ್ ಆದರೂ ನೋಡಿದೆವು.
ನಾವು ಮೊದಲು ನೋಡಿದ ಪೆವಿಲಿಯನ್ ಭಾರತದ್ದು........
ಮುಂದಿನ ಕಂತುಗಳಲ್ಲಿ ಮುಂದುವರೆಯುತ್ತದೆ
ಪ್ರತಿಕ್ರಿಯೆ (3)