ಮುಂದುವರಿದ ಭಾಗ...
ಪೂರ್ತಿ ಕತ್ತಾಲಾಗಿತ್ತು. ಜಲಪಾತವಾಗಿ ಧಮುಕುತ್ತಿದ್ದ ಹೊಳೆಯನ್ನು ದಾಟಿ ನಾವು ಮುಂದೆ ಹೋಗಬೇಕಾಗಿತ್ತು. ಅಜ್ಜ ಆ ಹೊಳೆಗೆ ಅಡ್ಡಲಾಗಿ ಸ್ಥಳೀಯರು ಒಂದು ಉದ್ದದ ಮರದ ಬಡಿಗೆಯನ್ನ ಅಡ್ಡಲಾಗಿ ಹಾಕಿ ಮಾಡಿಕೊಂಡಿರುವ ಸೇತುವೆಯಿದೆ ಎಂದಿದ್ದರು. ತಡಕಾಡಿ ಹೇಗೋ ಅದರ ಬಳಿ ಹೋದೆವು. ಎಲ್ಲರೂ ಒಟ್ಟಿಗೆ ಹೋಗುವಂತಿರಲಿಲ್ಲ. ತುಂಬಾ ಕತ್ತಲಾಗಿದ್ದರಿಂದ ಒಬ್ಬೊಬ್ಬರೆ ಹೋಗುವುದೂ ಕಠಿಣ ಸವಾಲಾಗಿತ್ತು. ಧೈರ್ಯ ಮಾಡಿ ಹೆಜ್ಜೆಗಳನ್ನು ಮೆಲ್ಲನೆ ತೆಗೆದಿಡುತ್ತಾ ಎರಡೂ ಬದಿಗೆ ಕಟ್ಟಿದ್ದ ತಂತಿಗಳನ್ನಿಡಿದುಕೊಂಡು ಒಬ್ಬೊಬ್ಬರೆ ಹೋದೆವು. ತಳದಲ್ಲಿ ನೀರಿನ ಆಳವೆಷ್ಟು, ಬಿದ್ದರೆ ಗತಿಯೇನು ಎಂದೆಲ್ಲಾ ಯೋಚನೆಗಳು ಮನದೊಳಗೆ ಓಡಾಡ್ತಿದ್ದಿದ್ದು ನಿಜ.
ದಾಟಿದೊಡನೆ ಏಲಕ್ಕಿ ತೋಟ ಸಿಕ್ಕಿತು. ಈಗ ಖಂಡಿತ ಕುಮಾರಳ್ಳಿ ತಲುಪಲು ಸಾಧ್ಯವೇ ಇಲ್ಲ ಎನಿಸಿತು. ದಾರಿ ಕಾಣುತ್ತಿರಲಿಲ್ಲ. ಏಲಕ್ಕಿ ಗಿಡಗಳಿಗೆ ಸಿಕ್ಕಿ ಏಳುತ್ತಾ-ಬೀಳುತ್ತಾ ದಾರಿ ತಡಕಾಡಿದೆವು. ಭಯ ಓಡಿಸಲು ಜೋರಾಗಿ ಕೂಗಾಡತೊಡಗಿದೆವು. ಸ್ವಲ್ಪ ದೂರ ಹೀಗೆ ಕೂಗುತ್ತಾ ಹೋಗ್ತಿದ್ದವರಿಗೆ ಅಲ್ಲೆಲ್ಲೋ ದೂರದಲ್ಲಿ ಪ್ರತಿಧ್ವನಿಸ್ತಿತ್ತು. ಆದರೆ ಕೆಲವು ಕೂಗುಗಳು ವಿಚಿತ್ರವಾಗಿ ಕೇಳುತ್ತಿದ್ದವು. ಒಮ್ಮೆಗೆ ಎಲ್ರೂ ದಿಗಿಲುಗೊಂಡೆವು. ಹಾಗೆಯೇ ಹೆದರುತ್ತಲೆ ಮುಂದೆ ಹೋದೆವು. ಸ್ವಲ್ಪ ಬೆಳಕು ಕಂಡಂತಾಯಿತು. ಶಬ್ದವೂ ಆ ಕಡೆಯಿಂದ್ಲೇ ಬರ್ತಿತ್ತು. ಮುಂದೊಂದು ಮನೆಯಿತ್ತು, ಸುತ್ತಾ ಮತ್ತ್ಯಾವ ಮನೆಯೂ ಇರ್ಲಿಲ್ಲ. ಮನೆಯ ಯಜಮಾನ ತನ್ನೆರಡು ಮಕ್ಕಳೊಂದಿಗೆ ಹೊರಗೆ ನಿಂತಿದ್ರು. ‘ಯಾರ್ನೀವು ಯಕ್ಕಡಿಂದ ಬಂದ್ರಿ, ಯಾವುರು ನಿಮ್ದು?’ ಎಂದು ಕೇಳಿದ್ರು. ನಾವು ಸುಧಾರಿಸಿಕೊಳ್ಳುತ್ತಲೇ ನಮ್ಮ ಪರಿಚಯ ಮಾಡ್ಕೊಂಡು ಕುಮಾರಳ್ಳಿ ಇನ್ನು ಎಷ್ಟು ದೂರ ಎಂದು ಕೇಳಿದ್ವಿ. ಅದಕ್ಕವರು ‘ಇನ್ನೂ ಒಂದ್ಕಿಲೋ ಮೀಟರ್ ಮೇಲಾಗುತ್ತೆ. ನೀವು ಈ ಕತ್ಲೇಲಿ ಹೋಗಕಾಕ್ಕುಲ್ಲ ಬಿಡಿ’ ಅಂದ್ರು ಉಸಿರು ನಿಂತಂತಾಗಿತ್ತು.
ಗೌಡ್ರು ‘ಎಲ್ರೂ ಇಲ್ಲೇ ಉಳ್ಕಂಡು ಬೆಳ್ಗೆ ಅಷ್ಟೊತ್ಗೆ ಎದ್ ಹೋಗ್ಬೌದು’ ಎಂದೊಡನೆ ಪುನಹ ಉಸಿರು ಬಂದಿತ್ತು. ‘ನಮ್ಮನೆಲೆ ಅಡ್ಗೆ ಮಾಡ್ತಿವಿ ಊಟ ಮಾಡಿ’ ಅಂದ್ರು. ‘ಇಲ್ಲ ನಾವೇ ಅಕ್ಕಿ, ಎಲ್ಲಾ ತಂದಿದೀವಿ ಮಾಡ್ಕತಿವಿ’ ಅಂದ್ವಿ. ಗೌಡ್ತಿ ನಮ್ಮ ಪಾತ್ರೆಗಳನ್ನು ಹೊರ ತೆಗೆಯಲು ಬಿಡ್ಲಿಲ್ಲ. ಇಸ್ಟೆಲ್ಲದ್ರೊಳಗೆ ಅವರ ಎರಡು ಮಕ್ಳು ನಮ್ ಜೊತೆ ಹೊಂದ್ಕಂಡ್ರು. ಅವರ ಮನೆಯ ಎರಡು ಹೊಸ ಅಲ್ಯೂಮಿನಿಯಂ ಪಾತ್ರೆ ತಂದ್ಕೊಟ್ರು. ಒಂದು ಅನ್ನಕ್ಕೆ ಮತ್ತೊಂದು ಸಾಂಬರ್ಗೆ. ಮನೆಯ ಮುಂದೆ ದೊಡ್ಡ ಕಣ ಅದರ ಎಡಭಾಗದಲ್ಲಿ ಕಲ್ಲುರಾಶಿಯಿದ್ದಂಥ ಜಾಗದಲ್ಲೇ ಕಲ್ಲುಗಳನ್ನಿಟ್ಟು ಒಲೆ ಹಾಕಿಕೊಂಡೆವು. ಬೆಳಕಿಗೆ ಗ್ಯಾಸ್ ಲೈಟೊಂದನ್ನ ಕೊಟ್ರು. ಹಾಗೆಯೇ ಒಂದು ದೊಡ್ಡ ನೀಲಿ ಟಾರ್ಪಲ್ಲನ್ನೂ ಕೊಟ್ಟು ‘ಇದ್ನ ಹಾಸ್ಕೊಳ್ಳಿ’ ಅಂದ್ರು. ಟಾರ್ಪಲ್ ಮೇಲೆ ಅವರು ಕೊಟ್ಟ ಆಲೂಗೆಡ್ಡೆ, ಟೊಮೆಟೋ ಮತ್ತು ನಾವು ಕೊಂಡೊಯ್ದಿದ್ದ ನೀರುಳ್ಳಿ ಟೊಮೇಟೊ ಹೆಚ್ಚಿಕೊಂಡ್ವಿ. ಪಾತ್ರೆಗಳು ಹೊಸದಾಗಿದ್ದರಿಂದ ಅವುಗಳಿಗೆ ಮಸಿ ಹಿಡಿಸಿ ಕೊಡುವುದು ಇಷ್ಟವಿರಲಿಲ್ಲ. ಮಣ್ಣು-ನೀರು ಕಲಸಿ ಪಾತ್ರೆಗಳ ಹೊರಗೆಲ್ಲ ಸವರಿ, ಅಡುಗೆ ಶುರು ಮಾಡಿದ್ವಿ. ಒಣಗಿದ ಸೌದೆಗಳನ್ನು ಆಲ್ಲೆ ಇದ್ದ ಒಟ್ಲಿಂದ ತೆಗೆದುಕೊಂಡ್ವಿ. ಅನ್ನ-ಸಾರು ರೆಡಿಯಾಯಿತು. ತಟ್ಟೆಗಳನ್ನು ಕೊಟ್ರು ಎಲ್ರೂ ಊಟ ಮುಗಿಸಿಸಿದವು.
...ಅಡುಗೆ ರೆಡಿ
ತಕ್ಷಣ ಗೌಡ್ರು-ಗೌಡ್ತಿ ‘ಮಕ್ಳ್ ಜೊತೆ ನಮ್ದೊಂದು ಪೋಟ ತೆಗಿರಿ’ ಅಂದ್ರು, ತೆಗ್ದಿ, ಎರಡು-ಮೂರು. ‘ಹಾಸನಕ್ಕೋದ ತಕ್ಷಣ ಕಳ್ಸಿ ಕೊಡಿ’ ಅಂತ ಅವರ ಅಡ್ರೆಸ್ನೂ ಕೊಟ್ರು. ಪಾತ್ರೆಗಳನ್ನು ತೊಳೆದಿಟ್ಟು, ಟಾರ್ಪೆಲ್ ಹಾಸಿಕೊಂಡು ಅವರು ಕೊಟ್ಟ ಹೊದಿಕೆಗಳು ಮತ್ತು ನಮ್ಮ ಹೊದಿಕೆಗಳನ್ನು ಸೇರ್ಸಿ ಹೊದ್ಕಂಡ್ವಿ. ತುಂಬಾ ಚಳಿ ಇತ್ತು, ಡಿಸೆಂಬರ್ ಆಗಿದ್ರಿಂದ ಜೊತೆಗೆ ಇಬ್ಬನಿಯೂ ಬೀಳ್ತಿತ್ತು.
ಏಳುವ ಪ್ರಯತ್ನ ನಡೆಸುತ್ತಿದ್ದಾಗ ತಡೆಯಲಾರದಷ್ಟು ಚಳಿ ಇತ್ತು. ಜೊತೆಗೆ ಕಾಲು ಪದ ಹಾಡ್ತಿದ್ವು. ಆದ್ರೂ ಎದ್ದು ಹೊರಡ್ಲೇಬೇಕಿತ್ತು. ಎಲ್ರೂ ಹೇಗೋ ಪರ್ದಾಡ್ಕಂಡು ಎದ್ದು ರೆಡಿಯಾಗಿ ಹೊರಟ್ವಿ. ಆ ಚಳಿಯಲ್ಲಿ ಗೌಡ್ರು-ಗೌಡ್ತಿನೂ ಎದ್ದು ನಮಗೆ ದಾರಿಯ ಬಗ್ಗೆ ಮಾರ್ಗದರ್ಶನ ಮಾಡಿ ಕಳಿಸಿಕೊಟ್ಟರು. ಕರೆಯದೆ ಹೋದ ಅತಿಥಿಗಳ ಆತಿಥ್ಯಕ್ಕೆ ನಾವು ಋಣಿ.
ಕುಮಾರಳ್ಳಿ ತಲುಪಿದಾಗ 7.30ರ ಸಮಯ, ಇನ್ನೂ ಕಾವಳ ಬಿಳುತ್ತಲೇ ಇತ್ತು. ಇಬ್ಬನಿಯ ಹನಿಗಳು ಎಲ್ಲರ ಬಟ್ಟೆ ಮತ್ತು ಬೂಟುಗಳನ್ನೂ ಒದ್ದೆಯಾಗಿಸಿದ್ದವು. ಹಳ್ಳಿಯ ಕೆಲವರು ತಲೆಗೆ ಕಂಬಳಿ ಗೊಪ್ಪೆ ಹಾಕ್ಕೊಂಡು ಆಗಷ್ಟೆ ಇಳಿಸಿದ ಬೈನೆ ಸೇಂದಿಯ ಮಡಕೆಗಳನ್ನ ಹಿಡ್ಕಂಡು ಬರ್ತಿದ್ರು. ಅವರಲ್ಲಿ ಕೆಲವರು ಮಾರುವ ಇರಾದೆಯನ್ನ ತೋರ್ಸಿದ್ರು. ‘ಈಗ್ ಇಳಿಸಿದರಲ್ವಾ ಸಕ್ಕತ್ ಸ್ವೀಟಾಗಿರುತ್ತೆ’ ಅಂದ ಆದರ್ಶ, ಆದ್ರೂ ಯಾರೂ ಮನಸ್ಸು ಮಾಡ್ಲಿಲ್ಲ.
ನಮ್ಮ ಚಾರಣ ಕುಮಾರಳ್ಳಿಯ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಿಂದ ಶುರುವಾಗ್ಬೇಕಿದ್ದಿದ್ರಿಂದ ಎಲ್ರೂ ಅಲ್ಲಿಗೆ ತಲುಪಿದೆವು. ಹೊಟ್ಟೆ ಹಸಿವು ತಡೆಯಲಾಗದೆ, ದೇವಸ್ಥಾನದ ಬಳಿಯೇ ಇದ್ದ ಒಂದು ಹೆಮ್ಮರದ ಕೆಳಗೆ ಕಲ್ಲು ಜೋಡ್ಸಿ ಒಲೆ ಮಾಡಿ, ಸುತ್ತಾ ಬಿದ್ದಿದ್ದ ಒಣ ಕಡ್ಡಿಗಳನ್ನೆಲ್ಲಾ ಅರಸಿ ತಂದು, ಒಲೆ ಉರ್ಸಿ, ದೊಡ್ಡ ಪಾತ್ರೆಗೆ ಪಕ್ಕದಲ್ಲಿದ್ದೊಂದು ಹೊಂಡದ ನೀರು ಮಗೆದು ಒಲೆಯ ಮೇಲಿಟ್ಟು, ಬ್ಯಾಗಲ್ಲುಳಿದಿದ್ದ ಈರುಳ್ಳಿ ಟೊಮೇಟೊ ಹೆಚ್ಚಿ, ಕಾದ ನೀರಿಗೆ ಅಕ್ಕಿ, ಈರುಳ್ಳಿ, ಟೊಮೇಟೊ ಎಲ್ಲಾ ಸುರಿದು ಉಪ್ಪು ಕಾರಪುಡಿ ಸೇರಿಸಿ, ಕಣ್ಣಲ್ಲಿ ನೀರಿಳಿಸಿಕೊಂಡು ಒಲೆ ಊದುತ್ತಲೇ ಇದ್ದಿದ್ರಿಂದ ‘ಟೊಮೇಟೊ ಬಾತನ್ನ’ ರೆಡಿಯಾಗಿತ್ತು. ಗಬಗಬನೆ ತಿಂದೆವು, ಅಷ್ಟ್ರಲ್ಲಿ ದೇವಸ್ಥಾನದ ಭಟ್ರು ಬಂದ್ರು. ಪರಿಚಯವಾಯ್ತು. ‘ಬೆಟ್ಟದ್ಮೇಲೆ ಉಳ್ಕಳಂಗಿಲ್ಲ, ಬೇಗ ಹೊರ್ಡಿ, ಇಲ್ಲಂದ್ರೆ ಬರೊತ್ತಿಗೆ ಕತ್ಲಾಗುತ್ತೆ’ ಅಂದ್ರು ಭಟ್ರು. ನಮ್ಮ ಲಗೇಜುಗಳ್ನೆಲ್ಲಾ ದೇವಸ್ಥಾನದ ಚಾವಡಿಯ ಒಂದು ಮೂಲೆಯಲ್ಲಿಟ್ಟು, ಒಂದೆರಡು ಬಾಟ್ಲಿಗಳಲ್ಲಿ ನೀರು ತುಂಬಿಸಿಕೊಂಡು, ಕೆಲವು ತಿನಿಸುಗಳನ್ನ ಪುಟ್ಟ ಬ್ಯಾಗೊಂದ್ರಲ್ಲಿ ತುಂಬ್ಕಂಡು ಹೊರಟೆವು.
ಪುಷ್ಪಗಿರಿ ಬೆಟ್ಟದ ತುದಿಯೇರಲು ಸುಮಾರು 9 ಕಿ.ಮೀ. ಚಾರಣ 3 ರಿಂದ 4 ಗಂಟೆ ಹಾದಿ ಸವೆಸಬೇಕಿತ್ತು. ಎಲ್ರೂ ಹುಮ್ಮಸಿನಿಂದ ಚಾರಣ ಶುರುಮಾಡಿದಾಗ ಗಂಟೆ ಹತ್ತಾಗಿತ್ತು... ಒಂದೆರಡು ಕಿಲೋ ಮೀಟರ್ವರೆಗೆ ದಾರಿ ಅಗಲವಾಗಿತ್ತು ಜೊತೆಗೆ ಎರಡೂ ಬದಿಯಲ್ಲಿ ಲಂಟಾನ, ಕಮ್ಯುನಿಸ್ಟ್, ಕಾರೆಮುಳ್ಳಿನ ಗುತ್ತಿ, ಔಂಟ್ಲು, ಕಳ್ಳಿ ಇತ್ಯಾದಿ ಬೆಳೆದುಕೊಂಡಿದ್ವು. ಮುಂದೊಂದು ಗಂಡಿ ಸಿಕ್ಕಿತು, ಅದು ಕಾಡು ಪ್ರಾರಂಭವಾಗುವ ಸುಳಿವು... ಸ್ವಲ್ಪ ಮುಂದೆ ನೆಡೆದಂತೆ ಫಾರೆಸ್ಟ್ ಗಾರ್ಡೊಬ್ಬ ನಮ್ಮನ್ನ ತಡೆದು ತಪಾಸನೆಗೊಳಪಡಿಸಿದ. ‘ಬಾಟ್ಲು ಗೀಟ್ಲು ಇಲ್ಲತಾನೆ’ ಎನ್ನುತ್ತಾ ನಮ್ಮೊಂದಿಗಿದ್ದಿದ್ದ ಬ್ಯಾಗನ್ನೂ ಚೆಕ್ ಮಾಡಿ ‘ಅಲ್ಲಲ್ಲೇ ಪ್ಲಾಸ್ಟಿಕ್ ಎಸಿಬಾರ್ದು, ಇವತ್ತೆ ವಾಪಸ್ ಬಂದ್ಬಿಡ್ಬೇಕು, ಮೇಲುಳ್ಕಳಂಗಿಲ್ಲ’ ಎಂದಂದು ಹೋದ.
ಕಾಡು ನಮ್ಮನ್ನೆಲ್ಲ ತನ್ನ ತೆಕ್ಕೆಯೊಳಗೆ ಸೇರ್ಸಿಕೊಂಡೊಡನೆ ಕೆಲ ಕ್ಷಣ ನಿಶ್ಯಬ್ಧ, ಎಲ್ರಿಗೂ ಸ್ವಲ್ಪ ಭಯವಾಯಿತು. ಮಾತು ಮರೆತರೆ ಹೆದ್ರಿಕೆ ಹೆಚ್ಚಾಗುವ ಸಾಧ್ಯತೆಯಿದೆಂತರಿತು ಸ್ವಲ್ಪ ಜೋರಾಗೆ ಮಾತನಾಡಿಕೊಂಡು ಮನಡೆದೆವು. ಮುಂದೊಂದು ಹೊಳೆ ಸಿಕ್ಕಿತು, ದಾರಿಯನ್ನ ಬಿಟ್ಟು ಅದು ಹರಿಯುತ್ತಿದ್ದ ವಿರುದ್ಧ ದಿಕ್ಕಿಗೆ ದಢದಲ್ಲೇ ಹೊರಟೆವು. ಒಂದ್ಹದಿನೈದು ನಿಮಿಷ ಹೋಗುತ್ತಿದ್ದಂತೆ ಒಂದೆಡೆ ನೀರು ಎತ್ತರದಿಂದ ಧುಮುಕುವ ಧೃಶ್ಯ ಕಂಡಿತು.
ತುಂಬಾ ಚಳಿ ಆದ್ರೂ...
ಚಳಿಯಿದ್ರೂ ದೇಹ ಸ್ವಲ್ಪ ದಣಿದಿತ್ತು. ಸ್ನಾನದ ಅಗತ್ಯವೂ ಇದ್ದಿದ್ರಿಂದ ಎಲ್ರೂ ನೀರಿಗಿಳಿದೆವು. ನೀರು ಧುಮುಕುತ್ತಿದ್ದ ಸ್ಥಳದಲ್ಲಿ ಒಂದು ಬಾವಿಯಂತಾಗಿ ಆಳವಾದ ಕಂದಕವಿತ್ತು. ನೀರು ತಣ್ಣಗೆ ಕೊರಿತಿತ್ತು, ನನ್ನ ದೇಹವೆಲ್ಲ ತಿಳಿಹಳದಿ ಬಣ್ಣ, ಜಡಗಟ್ಟಿತ್ತು. ಬೇಗ ನೀರಿನಿಂದೆದ್ದು ಓಡಿ ಹೋಗಿ ಮರಗಿಡಗಳ ಸಂದಿಯಿಂದಿಣುಕುತ್ತಿದ್ದ ಸೂರ್ಯನ ಬೆಳಕಿಗೆ ಮೈಯೊಡ್ಡಿ, ಒಣಗಿಸಿಕೊಂಡು, ಅಲ್ಲಿಂದ ಕಾಲ್ಕಿತ್ತೆವು.
...ಈಗ ಫ್ರೆಶ್
ದೈತ್ಯ ಗಾತ್ರದ ಉದ್ದುದ್ದ ಮರಗಳು, ಪಸೆಯಿರುವ ಜಾಗದಲ್ಲಿದ್ದ ಬೆತ್ತದ ಗಿಡಗಳು, ಮರಬಾಳೆ, ಅಲ್ಲೊಂದು ಇಲ್ಲೊಂದು ಅಗಲವಾಗಿ ಹರಡಿಕೊಂಡ ಮರಗಳು, ಅವುಗಳ ರೆಂಬೆ ಕೊಂಬೆಗಳಾಸರೆಯಲ್ಲಿ ಉಜ್ವಲ ವರ್ಣದ ಚಿತ್ರ ವಿಚಿತ್ರ ಹೂ ಬಿಡುವಂಥ ಸಣ್ಣ ಗಿಡಗಳು ನಮ್ಮ ಕಣ್ಣುಗಳಿಗೆ ಹಬ್ಬದೂಟ ನೀಡಿದ್ರೆ ಅಲ್ಲಲ್ಲೆ ಬಿದ್ದಿದ್ದ ಬಿಯರ್ ಟಿನ್ಗಳು, ಒಡೆದ ಬಾಟ್ಲಿಗಳು ಮತ್ತು ಪ್ಲಾಸ್ಟಿಕ್ ತೊಟ್ಟೆಗಳ ದೃಶ್ಯ ನಮಗೆ ಬೇಸರ ತರಿಸಿತ್ತು. ನಮಗೆಲ್ರಿಗೂ ಗಾರ್ಡ್ ಬಗ್ಗೆ ಸಂಶಯ ಮೂಡಿತ್ತು.
...ವ್ಯಾಲಿ ವೀವ್
ಬ್ರೇಕ್(ಕಿoಗ್) ನ್ಯೂಸ್: ಪಶ್ಚಿಮ ಘಟ್ಟಗಳಲ್ಲಿ ಯಥೇಚ್ಚವಾಗಿ ದೊರೆಯುತ್ತಿದ್ದ, ಅದೆಷ್ಟೋ ಬಡ ಅಥವ ಗುಡ್ಡಗಾಡು ಕುಟುಂಬಗಳಿಗೆ ಜೀವನಾಧಾರವಾಗಿದ್ದ ಬೆತ್ತದ ಗಿಡಗಳ ಕೆಲವು ತಳಿಗಳು ಅಳಿವಿನಂಚಿನಲ್ಲಿದ್ದು ಕೆಲವೇ ವರ್ಷಗಳಲ್ಲಿ ನಿರ್ನಾಮವಾಗಬಹುದು. ಆದರೆ, 2009 ರಲ್ಲಿ ಕೇರಳದ ತ್ರಿಶೂರಿನಲ್ಲಿರುವ ‘ಕೇರಳ ಅರಣ್ಯ ಸಂಶೋಧನಾ ಸಂಸ್ಥೆ’ ಅಳಿವಿನಂಚಿನಲ್ಲಿರುವ ಬೆತ್ತದ ತಳಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವುದು ಸ್ವಾಗತಾರ್ಹ. ಪ್ರತಿ ಗಂಟೆಗೊಂದು ಸಸ್ಯ ತಳಿ ಗತಿಸುತ್ತಿದೆ ಎಂದು ಕೆಲವು ಸಂಶೋಧನೆಗಳು ಹೇಳುತ್ತವೆ. ಇದಕ್ಕೆಲ್ಲ ಕಾರಣ ಮನಸ್ಸೋ ಇಚ್ಛೆ ಕಾಡುಗಳ ನಾಶ, ನಮ್ಮಿಂದ.
ಮುಂದೊಂದು ಹೆಂಚಿನ ಮಾಡಿನ ಮಂಟಪ ಸಿಕ್ಕಿತು. ಅದರ ಕಾಂಕ್ರೀಟ್ ಕಂಬಗಳಲ್ಲಿ ಯಾವ ಕೆಟ್ಟ ಪದಗಳೂ ಬರೆಯದೆ ಉಳಿದಿರಲಿಲ್ಲ. ಅದನ್ನು ಕಂಡೊಡನೆ ಆದರ್ಶ ‘ಇಲ್ಲೊಂದು ಹೆಂಗಸನ್ನ ಯಾವನೋ ಕರ್ಕಂಡ್ ಬಂದು ಕೊಲೆ ಮಾಡಿದ್ದ, ದೊಡ್ಡ ನ್ಯೂಸ್ ಆಗಿತ್ತು’ ಎಂದೊಡನೆ ನಮ್ಗೆಲ್ಲ ಒಮ್ಮೆಲೆ ಫ್ಯೂಸ್ ಹೋಗಿತ್ತು. ಸುಸ್ತಾಗಿದ್ರೂ ಭಯ ನಮ್ಮನ್ನ ಅಲ್ಲಿಂದ ಮುಂದೆ ಬೇಗನೆ ನಡೆಸಿತು. ‘ಇನ್ನೊಂದರ್ಧ ಕಿಲೋ ಮೀಟರ್, ಅಷ್ಟೆ’ ಅಂದ ಆದರ್ಶ. ಆದರೆ ದಾರಿ ಸ್ವಲ್ಪ ಕಠಿಣವಾಗಿತ್ತು, ಎತ್ತರಕ್ಕೆ ಏರಬೇಕಾಗಿತ್ತು, ಅದೂ ಬಂಡೆಗಲ್ಲಿನ ಮೇಲಿಂದ. ಗುರಿ ತಲುಪಿದೆವು.
ಒಂದು ಹೆಲಿಪ್ಯಾಡ್ನಸ್ಟಗಲ ಜಾಗದಲ್ಲಿ ಮಧ್ಯದಲ್ಲೊಂದು ಕಾಡು ಕಲ್ಲುಗಳಿಂದ ಕಟ್ಟಿದ ಗುಡಿ ಅದರೊಳಗೊಂದು ಶಿವಲಿಂಗವಿತ್ತು.
ಗಾಳಿ ಬಿರುಸಾಗಿ ಬೀಸ್ತಿತ್ತು, ಬಿಸಿಲೂ ಇತ್ತು, ಎಲ್ಲಾ ದಿಕ್ಕುಗಳಲ್ಲೂ ಇಣುಕಿದೆವು. ಅಲ್ಲಿಯೂ ತರಹೇವಾರಿ ನಮೂನೆಯ ಬಣ್ಣಬಣ್ಣದ ಕುಪ್ಪಿಗಳು ಹಾಗು ಟಿನ್ಗಳು ಎಲ್ಲೆಡೆ ಟೈಟಾಗಿ ಬಿದ್ದಿದ್ದವು. ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯ ಕಡೆಯಿಂದ ಬರುವ ಚಾರಣಿಗರ ಕಾಲ್ದಾರಿ ಕೆಲವೆಡೆ ಸ್ಪಷ್ಟವಾಗಿ ಕಾಣುತ್ತಿತ್ತು. ನಾವು ಮೇಲೇರಿದ ವಿರುದ್ಧ ದಿಕ್ಕಿನೆಡೆಯಿಂದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯ ದೇವಾಲಯದ ಗೋಪುರ ಹಾಗು ಅದರೆದುರಿನ ರಸ್ತೆ ಕಂಡು ಖುಷಿಪಟ್ಟೆವು. ಅಲ್ಲಿಯೇ ಕೆಲ ಕ್ಷಣ ಕುಳಿತು ತಿನಿಸುಗಳನ್ನು ತಿಂದು, ಪ್ಲಾಸ್ಟಿಕ್ ಕವರ್ಗಳನ್ನೆಲ್ಲಾ ಬ್ಯಾಗಿಗೆ ತುಂಬಿತೊಂಡು, ಎದ್ದು ಆತುರಾತುರವಾಗೆ ಹೊರಟೆವು. ಆಗಲೇ ಸಮಯ ಮೂರಾಗಿತ್ತು.
ಇಳಿಯುತ್ತಲೆ, ‘ಹೆಂಗಾರೂ ಮಾಡಿ ಕತ್ಲಾಗದ್ರೊಳ್ಗೆ ಆ ಮಂಟ್ಪ್ ಒಂದ್ ದಾಟ್ ಬಿಡಣ ಕಣ್ರಲೋ’ ಎಂದ ತಮ್ಸ್ ಎಲ್ರಿಗಿಂತ್ಲೂ ಮುಂದಿದ್ದ. ಬೇಗ ಬೇಗ ಹೆಜ್ಜೆಯಿಡುತ್ತಾ, ಕೆಲವೊಮ್ಮೆ ಓಡುತ್ತಾ, ಸುಧಾರಿಸಿಕೊಳ್ಳುತ್ತಾ ಮಂಟಪವನ್ನು ಹಿಂದೆ ಹಾಕಿದೆವು. ಕತ್ತಲು ಬೆಳಕಿನಾಟ ಮುಂದುವರೆದಿತ್ತು. ದೇವಸ್ಥಾನ ಕಾಣುತ್ತಿರಲಿಲ್ಲ, ಕತ್ತಲು ಕವಿದಿತ್ತು. ದೇವಸ್ಥಾನದ ಚಾವಡಿ ಮೂಲೆಯಲ್ಲಿಟ್ಟಿದ್ದ ಲಗೇಜೆಲ್ಲವನ್ನೆತ್ತಿಕೊಂಡು, ಏನನ್ನೂ ಬಿಟ್ಟಿಲ್ಲವೆಂದು ಖಾತ್ರಿಪಡಿಸಿಕೊಂಡು ಹೊರಟೆವು... ಹೋಗುವುದೆಲ್ಲಿಗೆ ಎಂಬುದೇ ಎಲ್ರಿಗೂ ದೊಡ್ಡ ಯಕ್ಷಪ್ರಶ್ನೆಯಾಗಿತ್ತು. ಆ ರಾತ್ರಿಯಲ್ಲಿ ಅಲ್ಲಿಂದ ನಮ್ಮನ್ನು ಹೊತ್ತೊಯ್ಯಲು ಯಾವ ವಾಹನ ಸೌಕರ್ಯವೂ ಇರಲಿಲ್ಲ. ‘ಲೋ, ಒಂದ್ಕೆಲ್ಸ ಮಾಡಣ, ಯಾರ್ಮನೆಲಾದ್ರು ಒಂದು ಟಾರ್ಪಲ್ ಇಸ್ಕಂಡು ಯಾವ್ದಾದ್ರು ಕಣದಲ್ಲಿ ಮಲಗೆದ್ದು ಹೋಗಣ’ ಅಂದೆಂದೆ. ಸುಸ್ತಾಗುತ್ತಿತ್ತು, ಹೊಟ್ಟೆಯೂ ಕೂಡ ಹಸಿಯುತ್ತಿತ್ತು, ಮಧ್ಯಾಹ್ನದ ಊಟ ಆಬ್ಸೆಂಟಾಗಿದ್ದು ಇದಕ್ಕೆಲ್ಲ ಕಾರಣ. ಕೊಂಡೊಯ್ದಿದ್ದ ರೇಷನ್ ಕೂಡ ಮುಗಿದಿತ್ತು.
ಒಂದು ಮನೆಯವರಲ್ಲಿ ನಮ್ಮ ಸಮಸ್ಯೆ ಹೇಳಿಕೊಂಡೊಡನೆ ನಮಗೆ ಪರಿಹಾರ ಸಿಕ್ಕಿತ್ತು. ‘ದೇವಸ್ಥಾನದ್ ಪೂಜೆ ಭಟ್ರಿದರಲ್ಲ ಅವ್ರ್ ಮನೆಗೋಗಿ ಊಟ ಮತ್ತೆ ಉಳ್ಕಳಕೆ ಯವಸ್ಥೆ ಮಾಡ್ತರೆ’ ಅಂದ್ರು. ತಲುಪಿದೆವು. ಭಟ್ರು ಮನೆಯಲ್ಲೇ ಇದ್ರು. ಅವರೊಂದಿಗೆ ನಮ್ಮ ಪರಿಸ್ಥಿತಿಯನ್ನ ತೋಡಿಕೊಂಡೆವು, ‘ಆಯ್ತು, ವ್ಯವಸ್ಥೆ ಮಾಡಣ, ಸ್ವಲ್ಪ ಚಾರ್ಜಾಗುತ್ತೆ’ ಅಂದ್ರು. ಎಷ್ಟೆಂದು ಕೇಳಿದ್ದಕ್ಕೆ ‘ಅದೆಷ್ಟೋ ಕೊಡ್ರಂತೆ’ ಅಂದಾಗ, ಭಟ್ಟರ ಔದಾರ್ಯಕ್ಕೆ ತಲೆಬಾಗಿದ್ದೆವು. ಮಾತನಾಡಿ ಮನೆಯ ಮುಂದಿದ್ದ ಬೋರ್ವೆಲ್ಲಿಗೆ ಕೈಕಾಲೊಡ್ಡಿ ಮುಖ ತೊಳೆದು ಫ್ರೆಶ್ಶಾಗಿ ಜಗುಲಿಯೇರಿದೆವು. ಕೂಡಲೆ ಕಾಫಿ, ಕುಡಿಯುತ್ತಿದ್ದಂತೆ ಮನಸು-ದೇಹ ಎರಡೂ ಉಲ್ಲಾಸಗೊಂಡವು. ಅಡುಗೆ ಕೆಲಸದಲ್ಲಿ ನಿರತರಾಗಿದ್ದ ಭಟ್ರ ಹೆಂಡತಿ ವಿನಯದಿಂದ ‘ಅಡ್ಗೆ ಸಲ್ಪ ತಡಾಗ್ಬೊದು’ ಎಂದರು. ‘ಪರ್ವಾಗಿಲ್ಲ ಬಿಡಿ ಅಮ್ಮ’ ಎಂದ್ವಿ ಒಕ್ಕೊರೊಲಿನಿಂದ. ಹೊರಬಂದು ಹರಟೆಯಲ್ಲಿ ಮುಳುಗಿದ್ದೆವು, ‘ಅಡ್ಗೆ ಆಯ್ತು, ಬನ್ನಿ’ ಎಂದೊಡನೆ ಹರಟೆಗೆ ಪೂರ್ಣವಿರಾಮ, ಮತ್ತೆ ಜಗುಲಿಗೆ. ಅನ್ನ ಹುರುಳಿಕಾಳು ಸಾಂಬರ್, ಜೊತೆಗೆ ಹಪ್ಪಳ ಉಪ್ಪಿನಕಾಯಿ. ಊಟ ಎಲ್ರಿಗೂ ತುಂಬಾ ರುಚಿಸಿತ್ತು, ಚೆನ್ನಾಗಿ ಬಾರಿಸಿ, ಗಂಡ-ಹೆಂಡ್ರಿರಿಬ್ರಿಗೂ ಕೃತಜ್ಞತೆಗಳನ್ನು ಸಲ್ಲಿಸಿ, ಕೊಟ್ಟೆರಡು ಚಾಪೆ ಹಾಸಿ, ಕೊಂಡ್ಯೊಯ್ದಿದ್ದ ಹೊದಿಕೆಗಳನ್ನ ಮೈಮೇಲೆಳೆದುಕೊಂಡು ಮಲಗಿದ್ದಷ್ಟೆ ನಿದ್ರಾದೇವಿ ಆವರಿಸಿಕೊಂಡಳು.
ಬೇಗ ಎದ್ದು ಹೊರಡುತ್ತ ನಮ್ಮ ಕರ್ಚಿಗೆ ಬೇಕಿರುವಷ್ಟು ಹಣ ಇಟ್ಟುಕೊಂಡುಳಿದ 300 ರೂಗಳನ್ನ ಭಟ್ರ ಕೈಯಲ್ಲಿಟ್ಟೆವು, ಸಾಕು ಎಂಬ ಅವರ ಮುಖ ಭಾವ ನಮಗೂ ಸಮಾಧಾನ ತಂದಿತು. ಸುಮಾರು ಎರಡು ಕಿಲೋಮೀಟರ್ ನೆಡೆದುಕೊಂಡು ಬೀಡಳ್ಳಿ ತಲುಪಿದಾಗ ಒಂಬತ್ತಾಗಿತ್ತು ಸಮಯ. ಸಿಕ್ಕ ಜೀಪೊಂದರಲ್ಲಿ ಸೋಮವಾರಪೇಟೆ ತಲುಪಿದೆವು. ಮಧ್ಯಾಹ್ನ ಆದರ್ಶನ ಚಿಕ್ಕಪ್ಪನ ಮನೆಯಲ್ಲಿ ಊಟ. ನೇರವಾಗಿ ಹಾಸನ ಬಸ್ಸು, ಗುರುವಾರ ರಾತ್ರಿ ಏಳು ಗಂಟೆಗೆ ಗೂಡಿಗೆ ಮರಳಿದ್ದೆವು.
ತೆಗೆದ ಫೋಟೋಗಳನ್ನ ಪ್ರಿಂಟ್ ಹಾಕಿಸುವವರೆಗೂ ನೆಮ್ಮದಿಯಿರ್ಲಿಲ್ಲ, ಪ್ರಿಂಟ್ ಹಾಕಿಸಿದ್ದೂ ಆಯಿತು. ಆದರೆ, ಫೋಟೋಗಳನ್ನ ನೋಡಿ ತುಂಬಾ ಬೇಸರವಾಯ್ತು. ಗೌಡ್ರ ಫ್ಯಾಮಿಲಿ ಫೋಟೋಗಳೆಲ್ಲಾ ಔಟ್ ಆಫ್ ಫೋಕಸ್ಸಾಗಿ ಹಲ್ಲು ಬಿಟ್ಟವರ ಹಲ್ಲುಗಳು ಮಾತ್ರ ಅಲ್ಲಲ್ಲೆ ಬೆಳ್ಳಗೆ ಕಾಣಿಸುತ್ತಿದ್ದವು. ಅವರ ಆತಿಥ್ಯ ಮಾತ್ರ ಇನ್ನೂ ಮನದಲ್ಲಿ ಪ್ರಿಂಟಾಗೆ ಉಳಿದಿದೆ.
ಪ್ರತಿಕ್ರಿಯೆ (2)