ಮಾದನೆಂಬ ರೈತನೊಬ್ಬ
ಹಸಿರು ಬಯಲ ಅಂಚಿನಲ್ಲಿ
ಕುಳಿತು ಮಂದೆ ಕಾಯುತ್ತಿದ್ದ
ಎಂದಿನಂತೆಯೇ

ದಿನದ ಬೆಳ್ಳಂಬೆಳಕಿನಲ್ಲಿ
ಮಂದೆ ಕಾಯುತ್ತಿದ್ದ ಆತ
ದೊಡ್ಡದೊಂದು ಕಪ್ಪು ಕಾರು
ಬರುವುದ ಕಂಡನು

ದೊಡ್ಡದಾದ ಕಪ್ಪು ಕಾರು
ಬಯಲ ಅಂಚಿನಲ್ಲಿ ಬಂದು
ರೈತನೆದುರು ನಿಧಾನವಾಗಿ
ನಿಂತುಕೊಂಡಿತು

ದೊಡ್ಡಕಾರಿನಿಂದ ಇಳಿದ
ಗೊಂಬೆಯಂತ ಚೆಲುವೆಯನ್ನು
ಕಂಡ ನಮ್ಮಹಳ್ಳಿ ರೈತ
ಬೆರಗಾದನು

ಸಿಂಗರಿಸಿಕೊಂಡ ಲಲನೆ
ಹೆಜ್ಜೆ ಮೇಲೆಹೆಜ್ಜೆ ಇಟ್ಟು
ಹಳ್ಳಿ ರೈತ ಮಾದನೆಡೆಗೆ
ನಡೆದು ಬಂದಳು

ಬಿಟ್ಟ ಬಾಯಿ ಬಿಟ್ಟಂತೆ
ನೋಡುತಿದ್ದ ರೈತನನ್ನು
ವಯ್ಯಾರದ ಲಲನೆಯೊಂದು
ಪ್ರಶ್ನೆ ಎಸೆದಳು

ರೈತ ನೀನು ದೇಶದೆಲುಬು
ನಮ್ಮ ಅನ್ನ ದಾತ ನೀನು
ಪ್ರಶ್ನೆ ಇದೆ ನನ್ನದೊಂದು
ಕೇಳೂ ಈಗಲೇ

ನಿನ್ನ ಮಂದೆ ಎಷ್ಟು ಚಂದ
ದನದ ಕೊಂಬು ತುಂಬ ಅಂದ
ಇದಕೆ ಮಾತ್ರ ಕೊಂಬು ಇಲ್ಲ
ಏಕೆ ಹೇಳಲೇ

ಪೇಟೆ ಹುಡುಗಿ ಪ್ರಶ್ನೆ ಕೇಳಿ
ತನಗೆ ತಾನು ನಗೆಯ ತಾಳಿ
ಸುಂದರತೆ ಮಾತ್ರ ಇಲ್ಲಿ
ಎಂದು ಕೊಂಡನು

ಎತ್ತು ದನಕೆ ಮಾತ್ರ ಕೊಂಬು
ಕತ್ತೆಯದಕೆ ಇರದು ಕೊಂಬು
ದನವು ಕತ್ತೆ ಬೇರೆ ಬೇರೆ
ಎಂದು ನಕ್ಕನು

ಇದನು ಕೇಳಿ ಪೇಟೆಲಲನೆ
ಮನಸ್ಸಿನಲ್ಲೇ ನಾಚಿ ನಾಚಿ
ಜಂಬವೆಲ್ಲ ಇಳಿಸಿಕೊಂಡು
ಓಟಕಿತ್ತಳು

ಅವಳ ಓಟ ನೋಡಿ ಮಾದ
ಗಟ್ಟಿಯಾಗಿ ನಕ್ಕು ನಕ್ಕು
ಶೃಂಗಾರ ಹೊರಗೆ ಸೊಪ್ಪು ಒಳಗೆ
ಎಂದುಕೊಂಡನು