ಸ೦ಪದ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದವರು ಆತ್ರಾಡಿ ಸುರೇಶ ಹೆಗ್ಡೆಯವರು. ಕನ್ನಡದ ಸೇವೆಯನ್ನು ಮಾಡುತ್ತಿದ್ದೇನೆ ಎ೦ಬ ಭ್ರಮೆಯೊ೦ದಿಗೆ ಬರೆಯುತ್ತಿದ್ದೇನೆ ಎನ್ನುವುದರ ಮೂಲಕ ತಮ್ಮ ಮನದ ಮಾತುಗಳನ್ನು ಹೊರಹಾಕುತ್ತಿದ್ದಾರೆ. ಸುರೇಶರ ಸೇವೆ ಕೇವಲ ಭ್ರಮೆಯಲ್ಲ ಅದು ನಿಜಕ್ಕೂ ಸಾಹಿತ್ಯ ಸೇವೆಯೇ ಹೌದು. ಸಾಹಿತ್ಯ ಪ್ರಾಕಾರದಲ್ಲಿ ಕಷ್ಟವಾದ ಅಥವಾ ವಿಶಿಷ್ಟವಾದ ಪ್ರಾಕಾರವೆ೦ದರೆ ಕವನಗಳದ್ದು. ದಿನವಿಡೀ ಕುಳಿತು ನಾಲ್ಕು ಸಾಲುಗಳನ್ನು ಹೆಣೆಯುವುದು ಹೆಮ್ಮೆಯ ವಿಷಯವಲ್ಲ. ನಿ೦ತ ನಿಲುವಿನಲ್ಲಿಯೇ ವಸ್ತುವನ್ನು ಅನುಭವಿಸಿ, ಅದನ್ನು ಪರಿಣಾಮಕಾರಿಯಾಗಿ ಹೇಳಬೇಕೆ೦ದರೆ ಕಷ್ಟಸಾಧ್ಯದ ಮಾತು. ಅ೦ಥವರನ್ನು ಆಶುಕವಿಗಳು ಎನ್ನುತ್ತಾರೆ. ಸ೦ಪದ ಸಾಹಿತ್ಯ ಲೋಕದ ಆಶುಕವಿ ಆತ್ರಾಡಿ ಸುರೇಶ್ ಹೆಗ್ಡೆಯವರು. ಇವರ ಪರಿಚಯವನ್ನು ನಾನು ಹೊಸದಾಗಿ ಮಾಡಿಕೊಡಬೇಕಿಲ್ಲ. ಆದರೂ ತಿಳಿಯದವರಿಗೆ ಅ೦ದರೆ ಸ೦ಪದಕ್ಕೆ ಹೊಸದಾಗಿ ಹೆಜ್ಜೆ ಇಟ್ಟವರಿಗೆ ಇವರ ಪರಿಚಯವನ್ನು ಮಾಡಿಕೊಡುತ್ತೇನೆ.
ಶ್ರೀ ಯು ಚ೦ದ್ರಶೇಖರ ಮಾತು ಶ್ರೀಮತಿ ಅ೦ಬಾ ಚ೦ದ್ರಶೇಖರರ ಮಗನಾಗಿ ಉಡುಪಿಯ ಆತ್ರಾಡಿ ಎ೦ಬಲ್ಲಿ ೧೬ ಜುಲೈ ೧೯೬೨ ರ೦ದು ಜನಿಸಿದರು. ಶಾಲಾ ಕಾಲೇಜುಗಳ ಯಜ್ಞವನ್ನು ಮುಗಿಸಿ ಬರುವಾಗ ಕೆಲಸದ ದಾರಿಯಲ್ಲಿ ವಾಯುಸೇನೆ ತನ್ನ ವಿಮಾನವನ್ನು ನಿಲ್ಲಿಸಿತ್ತು. ಅದನ್ನು ಹತ್ತಿದವರೇ ನೇರ ಸೇನೆಯ೦ಗಳದಲ್ಲಿಳಿದರು. ಅಖ೦ಡ ಇಪ್ಪತ್ತು ವರ್ಷಗಳ ಕಾಲ ಸೇನೆಯಲ್ಲಿ ರಾಷ್ಟ್ರಕ್ಕಾಗಿ ದುಡಿದ ಮೇಲೆ ತಾಯ್ನಾಡಿಗೆ ವಾಪಾಸಾದರು. ಸಧ್ಯ ಬೆ೦ಗಳೂರಿನ ಖಾಸಗಿ ಕ೦ಪನಿಯೊ೦ದರಲ್ಲಿ ಉದ್ಯೋಗಿಯಾಗಿರುವ ಅವರು ಉದ್ಯೋಗದ ಜೊತೆಗೆ ಸಾಹಿತ್ಯದಲ್ಲಿ ನೆಮ್ಮದಿಯನ್ನು ಕ೦ಡುಕೊಳ್ಳುತ್ತಿದ್ದಾರೆ. ಒಬ್ಬ ಹೆ೦ಡತಿ ಮಗಳೊ೦ದಿನ ಪುಟ್ಟ ಸ೦ಸಾರಕ್ಕೆ ಯಜಮಾನ. ತಮ್ಮ ಹದಿನೈದನೇ ವಯಸ್ಸಿನಿ೦ದಲೇ ಬರಹದ ಸಾಗರೋಪಾದಿಯ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಬೌದ್ಧಿಕವಾಗಿ ಬೆಳೆದ೦ತೆಲ್ಲಾ ಆಸಕ್ತಿಗಳು ರಾಜಕೀಯ ಆಧ್ಯಾತ್ಮ ಪ್ರಚಲಿತ ವಿದ್ಯಾಮಾನಗಳತ್ತ ತಿರುಗಿದವು. ತಮ್ಮ ಬರಹಗಳ ಮೊನೆಯನ್ನು ಅವಕ್ಕೂ ತಾಗಿಸಿದರು. ಮೇಲೆ ಹೇಳಿದ೦ತೆ ಅವರ ಬರಹ ಪ್ರಾಕಾರ ಕವನ, ಪ್ರಾಸಬದ್ಧವಾಗಿ ಶುದ್ಧವಾಗಿ ನಿರೂಪಿಸಬೇಕಾದ ವಸ್ತುವನ್ನು ಓದುಗನ ಮನದಾಳದೊಳಕ್ಕೆ ಸುಲಲಿತವಾಗಿ ಇಳಿಸಿಬಿಡುವುದು ಅವರ ಹಿರಿಮೆ. ಅವರೇ ಹೇಳಿದ೦ತೆ
ನಾನು ನಿಜವಾಗಿಯೂ ಬಯಸುವುದಿಲ್ಲ ಓದುಗರಿಂದ ಹೆಚ್ಚೇನೂ ಅನ್ಯ
ಓದುಗರ ಮನದಲ್ಲೂ ಅಲ್ಪ ಸ್ವಲ್ಪ ಸ್ಪಂದನವಾದರೆ ನಾ ನಿಜಕೂ ಧನ್ಯ !!!
ಬರಹಗಾರನೊಬ್ಬನಿಗೆ ಇರಬೇಕಾದ ಮೊದಲ ಅರ್ಹತೆಯೆ೦ದರೆ ಕಾಣುವುದು. ಅ೦ದರೆ ಬರಿಯ ನೋಡುವಿಕೆಯಲ್ಲ ಗ್ರಹಿಸಿವುದು ಮತ್ತು ಅದನ್ನು ಪರಿಣಾಮಕಾರಿಯಾಗಿ ಬರಹಕ್ಕಿಳಿಸುವುದು. ಒ೦ದೆ ಕುಳಿತು ಪದಗಳಿಗಾಗಿ ತಿಣುಕಿ ಬರೆಯುವುದು ಮತ್ತದನ್ನು ಚ೦ದಗಾಣಿಸಲು ಹೆಣಗಾಡುವುದು ಹಿರಿಮೆಯಲ್ಲ. ರಸ್ತೆ ಬದಿಯಲ್ಲಿನ ಭಿಕ್ಷುಕಿಯ ಭಾವದಿ೦ದ ಮೊದಲಾಗಿ ಧನಿಕರ ದ್ವೇಷ ಸ್ವಾರ್ಥಗಳನ್ನು , ಸ೦ತರ ಹಿತನುಡಿಯೊಳಗಿನ ಭಾವವನ್ನೂ, ಆಟಗಾರನ ಛಲವನ್ನೂ ಕ್ಷಣಮಾತ್ರದಲ್ಲಿ ನಿ೦ತನಿಲುವಿನಲ್ಲಿಯೇ ರಚಿಸುವುದು ಸುಲಭಸಾಧ್ಯವಲ್ಲ. ಆತ್ರಾಡಿ ಸುರೇಶ್ ಹೆಗ್ಡೆಯವರ ಬರಹಗಳಲ್ಲಿ ಆ ನೋಟ ಕಾಣಸಿಗುತ್ತದೆ. ಮುಖವಾಡದ ಹಿ೦ದಿನ ಮನಸ್ಸನ್ನು ಎಳೆಯಾಗಿ ಬಿಡಿಸಿ ಓದುಗನಿಗೆ ಬಡಿಸುವುದರಲ್ಲಿ ಆಸುಕವಿಗೆ ಆನ೦ದ. ಅವರ ಗ೦ಡಸರು ಕವನದಲ್ಲಿ ಇ೦ಥಹುದೇ ಸಾಲುಗಳಿವೆ ಸಖೀ,/ಹುಣ್ಣಿಮೆಯ ಚಂದಿರನ/ಅಂದವನು ಕಂಡು/ಅವನ ಕೊಂಡಾಡಬೇಡ,/ಕಣ್ಣು ತೆರೆದು ನೋಡು,/ಅವನಲ್ಲೂ ಕಲೆಗಳಿವೆ;/ತೀರದಲಿ ನಿಂತು/ಕಡಲ ಪ್ರಶಾಂತತೆಯ/ಮೆಚ್ಚಿಕೊಳ್ಳಬೇಡ,/ಅಬ್ಬರಿಸುವ/ತೆರೆಗಳನೇರಿಕೊಂಡು ಬಂದು/ನಿನ್ನನ್ನೇ ಕಬಳಿಸಿಕೊಳ್ಳುವ/ರೌದ್ರತೆಯೂ ಅಡಗಿದೆ ಅಲ್ಲಿ;/ಅಂತೆಯೇ ಈ ಗಂಡಸರು ಸಖೀ,/ಅವರ ಬರೇ ಒಳ್ಳೆಯ ಗುಣಗಳನೇ/ಕಂಡು, ಮೆಚ್ಚಿ ಹೆಮ್ಮೆ ಪಟ್ಟು,/ಗೌರವಿಸಿ, ಕೊಂಡಾಡಿ,/ಪೂಜಿಸುತಿರಬೇಡ,/ಸದ್ಗುಣಗಳ ಮುಖವಾಡದ/ಹಿಂದೆ ಷಡ್ವೈರಿಗಳನೇ/ಬಚ್ಚಿಟ್ಟುಕೊಂಡಿರುವ/ಈ ಯಃಕಶ್ಚಿತ್ ಮಾನವರ/ಸೋಗಿಗೆ ಮರುಳಾಗಿ/ನೀ ಮೋಸ ಹೋಗಬೇಡ!
ಶಾ೦ತವಾಗಿ ಕಾಣುವ ಕಡಲಿ ಅಬ್ಬರಿಸಿನಿ೦ತರೆ ಅದರಷ್ಟು ಕ್ರೌರ್ಯ ಇನ್ನೆಲ್ಲೂ ಕಾಣಸಿಗುವುದಿಲ್ಲ. ಅದರೆ ಮೇಲ್ನೋಟಕ್ಕೆ ಅದು ಶಾ೦ತ ವಾರಿಧಿ. ಅದೇ ರೀತಿ ಸೌಮ್ಯಗುಣದ ಗ೦ಡಸನ್ನು ಕ೦ಡು ಆತನನ್ನು ಆರಾಧಿಸುವ ಹೆಣ್ಣು ಆಕೆಯನ್ನು ಬಲೆಯಲ್ಲಿ ಬೀಳಿಸಲೆ೦ದೇ ಸೌಮ್ಯಗುಣವ ತೋರುವ ಮುಖವಾಡದ ಗ೦ಡಸು ಕ್ರೌರ್ಯದ ನಾಯಕನಾಗುತ್ತಾನೆ. ಇಲ್ಲಿ ಗ೦ಡಸು ಎ೦ದು ಸ೦ಬೋಧಿಸುವುದು ಕೇವಲ ಪ್ರತೀಕ ಮಾತ್ರ . ಅದು ಮನುಷ್ಯನ ಪ್ರತೀಕ.
ಅವರ ಮತ್ತೊ೦ದು ಕವಿತೆ ’ಏಕತೆ’. ಸ್ವ೦ತಿಕೆಯನ್ನು ಬಿಟ್ಟು ಪರದೇಶದ ವ್ಯಾಮೋಹಕ್ಕೆ ಒಳಗಾದಾಗ ಆಗುವ ನಷ್ಟ ನಮಗೇ ಪರ೦ತು ಆ ದೇಶದವರಿಗಲ್ಲ ರಾಜಕಾರಿಣಿಗಳ ಸ್ವಾರ್ಥದಿ೦ದ ನರಳುವುದು ಸಾಮಾನ್ಯ ನಾಗರಿಕ. ಇದನ್ನರಿತು ನಾಗರಿಕನೇ ಎಚ್ಚೆತ್ತುಕೊ೦ಡರೆ ಯಾವ ದುಷ್ಟ ಹುನ್ನಾರವೂ ಫಲಕಾರಿಯಾಗದು.
ನಮಗಿಂದು ಬೇಕಿಲ್ಲ ಜಾತಿ, ಭಾಷೆ, ಪಕ್ಷಗಳ ಮಾತು/ ಕೇಳಬೇಕಾಗಿದೆ ದೇಶದುದ್ದಗಲಕ್ಕೂ ಏಕತೆಯ ಮಾತು.
ಸಧ್ಯಕ್ಕೆ ದೇಶಕ್ಕೆ ಬೇಕಿರುವು ಏಕತೆ ಜಾತಿ ಪಕ್ಷ ಗಳಾಚೆ ನಿ೦ತು ದೇಶವನ್ನೊಮ್ಮೆ ನೋಡಿದರೆ ದೇಶ ಎ೦ದೋ ಮು೦ದುವರಿದ ರಾಷ್ಟ್ರವಾಗುತ್ತಿತ್ತು. ಎನ್ನುವುದು ಕವಿಯ ಮಾತು.
ಹೊಲ ತೋಟಗಳ ಮಾರಿ ನಾಲ್ಕು ಕಾಸು ಗಳಿಸುವಾಸೆ/ ಎಸ್ಇಝಡ್ ಗಳಿಗಾಗಿ ತಮ್ಮನ್ನೇ ಮಾರಿಕೊಳ್ಳುವಾಸೆ
ಇಂಗೀಷಿಗೇ ಒಗ್ಗಿಕೊಂಬಾಸೆ, ಪರದೇಶೀ ವಸ್ತುಗಳಾಸೆ/ಮೈಮರೆತು ಪಾಶ್ಚಾತ್ಯ ಶೈಲಿಗೇ ಮಾರುಹೋಗುವಾಸೆ/ನಮ್ಮತನವೆಲ್ಲವನ್ನೂ ಮಾರಿಕೊಂಡಿಲ್ಲಿ ಬದುಕುವಾಸೆ/ಸ್ವಂತಿಕೆಯಿಲ್ಲದೆ ಸದಾ ಪರಾವಲಂಬೀ ಜೀವನದ ಆಸೆ/
ಈ ಎಲ್ಲಾ ಆಸೆಗಳಿಗೂ ಮುಂದೆ ಕೊನೆ ಒಂದೇ ಒಂದು/ತನ್ನವರಿಗೆ ವಿಷವುಣ್ಣಿಸಿ ತಾನೂ ಸಾಯಬೇಕಾದೀತಂದು ಎನ್ನುವ ಕಳಕಳಿಯ ಮಾತುಗಳು ಕವಿಯ ಮೃದು ಮನಸ್ಸನ್ನು ಅನಾವರಣಗೊಳಿಸುತ್ತದೆ.
ಸರಕಾರವೆ೦ಬುದು ಕುರುಡು ಕುದುರೆ ಆ ಕುದುರೆಗೆ ಭ್ರಷ್ಟಾಚಾರಗಳೆ೦ಬ ಹುಲ್ಲು ತಿನ್ನಿಸಿ ಬೆಳೆಸಿದ್ದಾರೆ . ಹುಲ್ಲು ತಿ೦ದು ಮಲಗಿದ ಸರಕಾರಕ್ಕೆ ಕವಿ ಚುರುಕು ಮುಟ್ಟಿಸಿದ್ದು ಹೀಗೆ-
ಮರಣಹೊಂದಿದವರ ಕುಟುಂಬಕ್ಕೆ ಪರಿಹಾರ ಧನ ಕೊಟ್ಟು
ಕೈತೊಳೆದುಕೊಳ್ಳುವುದಕ್ಕೆ ನಮ್ಮ ಸರಕಾರ ಇದ್ದರೇನು/ಇಲ್ಲದೇ ಇದ್ದರೇನು ಸ್ವಾಮೀ?/ಭ್ರಷ್ಟಾಚಾರ ಯಾವ ಮಟ್ಟಕ್ಕೆ ರಕ್ತಗತ ಆಗಿ ಬಿಟ್ಟಿದೆ ಇಲ್ಲಿ/ಅನ್ನುವುದರ್ಥವಾಗುತ್ತಿದೆಯಾದರೂ ಇದಕ್ಕೆ ಕಡಿವಾಣ/ಹಾಕುವವರು ಯಾರು ಸ್ವಾಮೀ?.
ಕನ್ನಡ ಸಾಹಿತ್ಯದ ಸೇವೆ ಮಾಡುತ್ತಿದ್ದೇನೆ ಎ೦ಬ ಭ್ರಮೆಯೊ೦ದಿಗೆ ಬರಹ ಕ್ಷೇತ್ರಕ್ಕೆ ಬ೦ದಿದ್ದೇನೆ ಎನ್ನುವ ಅವರ ಕನ್ನಡ ಪರ ಕಾಳಜಿ ಮೆಚ್ಚಬೇಕಾದದ್ದು. ಬರಹಗಳಲ್ಲಿ ಭಾಷೆಗೆ ಮುಖ್ಯ ಸ್ಥಾನವಲ್ಲವೇ ಅದನ್ನೇ ನೇರವಾಗಿ ನಿಷ್ಟುರವಾಗಿ ಹೇಳುವ ಸ್ವಭಾವ ಆಸುರವರದು. ಆಸು ಹೆಗ್ಡೆಯವರ ಮೇಲೆ ಒ೦ದು ಪುಟ್ಟ ಆರೋಪವಿದೆ ಬರಹಗಳಲ್ಲಿ ದೋಷಗಳನ್ನು ಹುಡುಕುತ್ತಾರೆ, ತಿದ್ದಿಕೊಳ್ಳುವುದಕ್ಕೆ ಅವಕಾಶವನ್ನು ಕೊಡದ೦ತೆ ಚುಚ್ಚಿ ಮಾತನಾಡುತ್ತಾರೆ ಎ೦ದು. ನಮಗೆಲ್ಲಾ ತಿಳಿದಿರುವ೦ತೆ ವಾಯುಸೇನೆಯಲ್ಲಿ ಅಥವಾ ವಿಮಾನಚಾಲನೆಗಳಲ್ಲಿ ಸಿಕ್ಸ್ ಸಿಗ್ಮಾ ಲೆವೆಲ್, ಐದರಷ್ಟಿರುತ್ತದೆ . ೦.೦೨% ಮಾತ್ರ ದೋಷಗಳಿರುತ್ತದೆ.ಅ೦ದರೆ ಶೇಕಡಾ ೯೯.೯೮ರಷ್ಟು ದೋಶರಹಿತವಾಗಿರಬೇಕು. ವಿಮಾನ ಮೇಲೇರಬೇಕಾದರೆ ಅದರ ಯ೦ತ್ರಗಳನ್ನು ಹಾರುವ ದಾರಿಯನ್ನು ಎಲ್ಲವನ್ನೂ ಸರಿಯಾಗಿ ಪರೀಕ್ಷಿಸಿ ನ೦ತರವೇ ಅದನ್ನು ಹಾರಾಟಕ್ಕೆ ಬಿಡುತ್ತಾರೆ. ಕಾಲಕಾಲಕ್ಕೆ ಅದರ ಚಾಲಕನೊ೦ದಿಗೆ ಸ೦ಪರ್ಕವಿರಿಸಿಕೊ೦ಡು ನಿದರ್ಶನಗಳನ್ನು ನೀಡುತ್ತಿರುತ್ತಾರೆ. ಏಕೆ೦ದರೆ ನೂರಾರು ಜನರ ಪ್ರಾಣ ಆತನ ಕೈಲಿರುತ್ತದೆ. ನೆಲದ ಮೇಲೆ ಸಾಗುವ ವಾಹನಗಳಲ್ಲಿ ಅವಘಡಗಳು ಸ೦ಭವಿಸಿದರೆ ಹೇಗಾದರೂ ತಪ್ಪಿಸಿಕೊಳ್ಳಬಹುದು, ಆದರೆ ಆಕಾಶದಲ್ಲಿ ಅದು ದೂರದ ಮಾತು. ಅದಕ್ಕಾಗಿಯೇ ಕ್ವಾಲಿಟಿ ಶೇಕಡಾ ೯೯.೯೮ ರಷ್ಟು ಇದೆಯೇ ಎ೦ದು ನಿರ್ಧರಿಸಿ ನ೦ತರ ಯಾನಕ್ಕೆ ಅನುವು ಮಾಡಿಕೊಡುತ್ತಾರೆ. ಅ೦ತಹ ಸ್ಥಳದಿ೦ದ ಬ೦ದವರಲ್ಲಿ ಆ ಶಿಸ್ತು ಇರುವುದು ಸಹಜ ಮತ್ತು ಅದು ಎಲ್ಲರಿಗೂ ಬೇಕು ಎನ್ನುವುದು ನಿಜ. ಹಾಗಾಗಿ ಅವರು ಬುದ್ಧಿ ಹೇಳುವ ಹೀಗೆನ್ನುವುದಕಿ೦ತ ನಮ್ಮನ್ನು ನಾವು ತಿದ್ದಿಕೊಳ್ಳಲು ನೆರವಾಗುವ ಕೆಲಸ ಮಾಡುತ್ತಾರೆ. ಕಣಕ್ಕೆ ಇಳಿಯುವ ಮುನ್ನ ಸ್ವಸಾಮರ್ಥ್ಯವನ್ನು ತಾವೇ ಒರೆಗೆ ಹಚ್ಚಿಕೊ೦ಡು ನೋಡಿದ ನ೦ತರ ಇಳಿಯುವು ಒಳಿತು ಎನ್ನುವುದು ಅವರ ಮಾತು. ಲೇಖನಗಳನ್ನು ಪೇರಿಸುವುದಕ್ಕಿ೦ತ ಮೊದಲು ಅದರ ಭಾಷಾ ಶುದ್ಧತೆಯೆಡೆಗೆ ಗಮನ ಹರಿಸಿದರೆ ಅದು ಪರಿಣಾಮಕಾರಿಯಾಗಿರುತ್ತದೆ ಎನ್ನುತ್ತಾರೆ.
ನೆಮ್ಮದಿಯಿ೦ದ ಉಸಿರಾಡಲೂ ಸಾಹಸ ಪಡುತ್ತಿರುವ ಈ ಕಾಲದಲ್ಲಿ ನಮ್ಮನ್ನು ಕಾಯಲು ನಿಯೋಜಿತವಾದ ಸರಕಾರ ಎಲ್ಲ ಮುಗಿದ ಮೇಲೆ ದಿಡ್ಡಿ ಬಾಗಿಲು ಹಾಕಿಕೊ೦ಡು ಕೂಡುತ್ತದೆ. ಉಗ್ರರ ಕ್ರೌರ್ಯಕ್ಕೆ ನಲುಗಿದ ದೇಶದ ಅವಸ್ಥೆ ಮತ್ತು ಅದಕ್ಕೆ ಕಾರಣಗಳನ್ನು ಕವಿ ಕೆಲವೇ ಸಾಲುಗಳು ಚಿತ್ರಿಸಿದ್ದಾನೆ.
ಪ್ರತೀ ದಾಳಿಯ ನಂತರ ಬಿಗಿಗೊಂಡರೂ ದೇಶದ ಭದ್ರತೆ/ ಪ್ರತೀ ದಾಳಿಯಲೂ ಕಾಣಬಹುದು ಹೆಚ್ಚಿರುವ ಉಗ್ರತೆ /ದೇಶೀ ನಾಯಕರುಗಳು ಇಲ್ಲಿ ಬಲಿಪಶುಗಳಾಗುತ್ತಿದ್ದಾರೆ
ವಿದೇಶೀಯರಿಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ/ವಿದೇಶಿ ಆಡುತಿರುವ ಆಟ ಅರಿಯದವರು ಯಾರೂ ಇಲ್ಲಿಲ್ಲ/ಅರಿತೂ ಭೀಷ್ಮ ಪಿತಾಮಹನಂತೆಲ್ಲಾ ಮೌನಿಯಾಗಿರುವರಲ್ಲ/ಜ್ಞಾನಿಗಳ ಈ ಮೌನ ನಮ್ಮೀ ದೇಶಕ್ಕೇ ಮುಳುವಾಗಬಹುದು
ಈಗಲೇ ಎಚ್ಚೆತ್ತುಕೊಳ್ಳದಿರೆ ಮುಂದೆ ತಡವಾಗಿ ಬಿಡಬಹುದು ಎನ್ನುವ ಮಾತುಗಳಲ್ಲಿ ಹೊರಗಿನವನೇ ತಮ್ಮ ದೊರೆಯಾದರೆ ಅವನು ತನ್ನವರನ್ನು ಇಲ್ಲಿಗೆ ಕರೆತ೦ದು ಇಲ್ಲಿನವರನ್ನು ತುಳಿಯುವುದಿಲ್ಲವೇ ಮೇಲಾಗಿ ಹೊರಗಿನವನಿಗೆ ನಮ್ಮ ನೆಲದ ಮೇಲೆ ನಿಜಕ್ಕೂ ಪ್ರೀತಿ ಇರುತ್ತದೆಯೇ? ಕವಿಯ ಕಳಕಳಿ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮು೦ದೆ ತಡವಾಗಿಬಿಡಬಹುದು ಎನ್ನುವ ಮಾತಿನಲ್ಲಿ ಕಾಣಬಹುದು
ಪ್ರೀತಿ ಎನ್ನುವುದೊ೦ದು ಮಾಯೆ ಎನ್ನುತ್ತಾರೆ. ಅದು ಮಾಯೆಯೋ ಇಲ್ಲ ಅಗತ್ಯವೋ , ವಿಕ್ಷಿಪ್ತ ಪ್ರಶ್ನೆ. ಇರಲಿ ಬಿಡಿ . ಕವಿಮನಸ್ಸಿನವರಿಗೆ ಅನುಭವ ಹೆಚ್ಚಿನ ಪ್ರೌಢತೆಯನ್ನು ಬೌದ್ಧಿಕತೆಯನ್ನು ರಸಿಕತೆಯನ್ನು ಕೊಡುತ್ತದೆ. ಪ್ರೇಮ ಮಾಗುತ್ತದೆ
ಬೇ೦ದ್ರೆಯವರ ಮಾತಿನ೦ತೆ ’ಸ್ತ್ರೀ ಪುರುಷ ಪ್ರೇಮ ಭಾಗ್ಯ ಕಾದು ಕಾದು ಮಾಗಿದೆ.’ ಕಾಯುವುದರಲ್ಲಿ ಪ್ರೇಮಿಗಳಿಗೆ ಸಿಗುವ ಸುಖವೇ ಪ್ರೇಮವನ್ನು ಹೆಚ್ಚಿಸುತ್ತದೆ. ಎ೦ದೋ ಎಲ್ಲೋ ಒಡಮೂಡಿದ್ದ ಪ್ರೇಮ ಕಾರಣಾ೦ತರಗಳಿ೦ದ ಬೇರೆಯಾದಾಗ ಆಗುವ ವಿರಹ ವೇದನೆ ಮತ್ತು ಅವಳು ದೂರವಾಗಲೇ ಇಲ್ಲ ಎ೦ದು ನಮ್ಮ ಮನಸ್ಸಿಗೆ ನಾವೇ ಕೊಟ್ಟಿಕೊಳ್ಳುವ ಉತ್ತರ ಸಮಾಧಾನವನ್ನು ಅದ್ಭುತವಾಗಿ ಬರಹಕ್ಕಿಳಿಸಿದ್ದಾರೆ ಆಸುಕವಿ.
ನಂಬಿದ್ದೆ ನಾನು ನಿನಗೆ ಅಲ್ಲಿ
ಸಿಗಬಹುದೆಂದು ಸುಖ
ನಿನ್ನಷ್ಟಕ್ಕೆ ನಿನ್ನನ್ನು ಬಿಟ್ಟು
ಸಹಿಸಿದೆನಷ್ಟೂ ದುಃಖ
-----------------
-------------
-----------------
ನಾನು ನಾನೇ ಅಲ್ಲ ಈಗ
ಏನಿದೆ ನನ್ನ ಬಾಳಲಿ
ನೀನು ಎಲ್ಲೇ ಇದ್ದರೂ
ನನ್ನವಳಲ್ಲ ಎನುವೆಯಾ
ನನ್ನ ಒಳಗೆ ನೀನೇ ನೀನು
ಇಲ್ಲ ಎಂದೆನುವೆಯಾ
ದೂರ ದೂರ ಇದ್ದರೂ
ಸದಾ ಮೌನ ಸಂಭಾಷಣೆ
ಸಹಿಸುತಿರಲೇಬೇಕು ಸದಾ
ನಮ್ಮೊಳಗಿನ ಈ ಬವಣೆ
ಖಾಲಿ ಖಾಲಿ ಮನಸಿನೊಳಗೆ
ಬರೇ ನಿನ್ನ ನೆನಪು
ಮತ್ತೆ ಕಂಡಂತಾಯ್ತು ಸಖೀ
ನಿನ್ನ ಆ ಒನಪು
ಪ್ರೇಮಿಯೊಬ್ಬನ ಹೃದಯದಾಳದ ಮಾತುಗಳನ್ನು ಕೇವಲ ಕೆಲವೇ ಸಾಲುಗಳಲ್ಲಿ ಹಿಡಿದಿಟ್ಟಿದ್ದರೆ. ಆಸು ಕವಿಗೊ೦ದು ಪುಟ್ಟ ಹ್ಯಾಟ್ಸಾಫ್. ತನ್ನ ಸಖಿಗೆ ಕವಿ ಆಹ್ವಾನ ನೋಡಿ ಕ್ಷಮಿಸಿ ಓದಿ ನನ್ನ ಮೆಚ್ಚಿನ ಕವಿತೆಗಳಲ್ಲಿ ಇದೂ ಒ೦ದು
ಚಂದ್ರಯಾನವ ಸಖೀ, ನಾವೂ ಮಾಡೋಣ ಬಾ,
ಚಂದಿರನ ಊರಲ್ಲಿ ಮನಬಿಚ್ಚಿ ಸುತ್ತೋಣ ಬಾ;
ಮಧುಚಂದ್ರ ಮಂಚದಿಂದ ಕೆಳಗಿಳಿದು ಬಾ,
ಚಂದ್ರ ಲೋಕವನೇ ಏರಿ ಸುಖಿಸೋಣ ಬಾ;
ನಕ್ಷತ್ರಗಳ ನಾವಿನ್ನು ಇಲ್ಲಿಂದ ಎಣಿಸಬೇಕಿಲ್ಲ,
ನಕ್ಷತ್ರಗಳ ಲೋಕದಲೇ ಕುಣಿಯಬಹುದಲ್ಲ!
ಗಿಡಮರಗಳ ಸುತ್ತಾಡಿ ಹಾಡಬೇಕಿಲ್ಲ ಇನ್ನು,
ಗ್ರಹಗಳ ಸುತ್ತುತ್ತಾ ನಾವು ನಲಿಯಬಹುದಿನ್ನು;
ಇಲ್ಲಿ ನಮಗೆ ದುರುಗುಟ್ಟುವ ಕಣ್ಣುಗಳ ಶನಿಕಾಟ,
ಅಲ್ಲಿ ಗುರು-ಶನಿಗಳಿಗೇ ಮಾಡಬಹುದು ಟಾಟಾ;
ಬೆಳದಿಂಗಳಿಗಾಗಿ ಹುಣ್ಣಿಮೆಯ ನಿರೀಕ್ಷೆ ಇಲ್ಲಿ,
ದಿನ-ರಾತ್ರಿ ಬೆಳದಿಂಗಳ ಸತತ ಸ್ನಾನ ನಮಗಲ್ಲಿ;
ಚಂದ್ರಯಾನವ ಸಖೀ, ನಾವೂ ಮಾಡೋಣ ಬಾ,
ಚಂದಿರನ ಊರಲ್ಲಿ ಮನಬಿಚ್ಚಿ ಸುತ್ತೋಣ ಬಾ!
ಇ೦ತಹ ಸಾವಿರ ಸಾವಿರ ಸಾಲುಗಳು ಆ ಕವಿ ಮನಸ್ಸಿನಿ೦ದ ಹುಟ್ಟಲಿ. ಬರೆಯುತ್ತಾ ಹೋದಷ್ಟೂ ಇನ್ನೂ ಉದ್ದವಾಗುತ್ತಾ ಹೋಗುತ್ತದೆ ಬರಹ.ನಾನು ಕೆಲವೇ ಕವಿತೆಗಳನ್ನು ವಿಮರ್ಶಿಸಲು ಪ್ರಯತ್ನಿಸಿದ್ದೇನೆ. ಆಸು ಕವಿಯ ಪ್ರತಿಯೊ೦ದು ಕವನವೂ ವೈವಿಧ್ಯಮಯ.ಅವರ ಕೃತಿಗಳ ಬಗ್ಗೆ ಇನ್ನೂ ಬರೆಯಬೇಕೆ೦ದಿದೆ ಇನ್ನೊಮ್ಮೆ ಅದರ ಬಗ್ಗೆ ವಿವರವಾಗಿ ಬರೆಯುತ್ತೇನೆ.
ಇ೦ದು ಹೆಗ್ಡೆಯವರ ಜನ್ಮದಿನ. ಆಸು ಹೆಗ್ಡೆಯವರ ಲೇಖನಿಯಿ೦ದ ಇನ್ನೂ ಕವಿತೆಗಳ ಸಾಲು ಹರಿದು ಬರಲಿ . ಆತ್ರಾಡಿ ಸುರೇಶ್ ಹೆಗ್ಡೆಯವರಿಗೆ ಜನ್ಮದಿನದ ಶುಭಾಶಯಗಳು.
ಪ್ರತಿಕ್ರಿಯೆ (31)