ಈ ಬಾರಿಯ ಚರ್ಚೆಯ ವಿಷಯವನ್ನು ಅತ್ಯಂತ ಪ್ರಸ್ತುತವೂ, ಪ್ರಮುಖವೂ ಆದ ಬೆಲೆ ಏರಿಕೆಯ ಬಗ್ಗೆ ಆರಿಸಿಕೊಂಡಿದ್ದೇನೆ. 

 

ಹಿಂದೆ ಬೆಲೆ ಏರಿಕೆ ಕಂಡು ಬರುತ್ತಿದ್ದುದು ಕೇವಲ ಮುಂಗಡ ಬಜೆಟ್ ಮಂಡಿಸಿದಾಗ ಮಾತ್ರ. ಎಲ್ಲರೂ ಕಾತರದಿಂದ ರೇಡಿಯೋಗೆ  ಕಿವಿಯಾನಿಸಿ, ಮಾರನೆಯ ದಿನ ದಿನಪತ್ರಿಕೆಗಳಿಗಾಗಿ ಕಾದು ಕುಳಿತಿರುತ್ತಿದ್ದುದು ಈ ಒಂದು ಮಹತ್ವದ ವಿಚಾರಕ್ಕೆ.ಈ ಬಾರಿ ಯಾವ ವಸ್ತುವಿಗೆ ಎಷ್ಟು ಬೆಲೆ ಏರಿಸಿದ್ದಾರೆ ಎಂಬ ಕುತೂಹಲ ಜನಸಾಮಾನ್ಯರಲ್ಲಿ ಮೂಡಿರುತ್ತಿತ್ತು.   ಬಸ್ಸಿನಲ್ಲಿ, ಕಚೇರಿಯಲ್ಲಿ, ಹೇರ್ ಕಟಿಂಗ್ ಸಲೂನ್ ನಲ್ಲಿ, ಅಂಗಡಿಯಲ್ಲಿ, ರಸ್ತೆಯಲ್ಲಿ, ಮಾರುಕಟ್ಟೆಯಲ್ಲಿ,  ಎಲ್ಲೆಲ್ಲೂ ಅದರ ಬಗ್ಗೆ ಚರ್ಚೆಯೇ. ನಂತರ ವಿರೋಧ ಪಕ್ಷದವರಿಂದ  ಪ್ರತಿಭಟನೆ, ಧರಣಿ, ಪ್ರತಿಕೃತಿದಹನ, ಇತ್ಯಾದಿಗಳ ಪ್ರಹಸನ. ಆಮೇಲೆ ಎಲ್ಲವೂ ಶಾಂತ. ಬಸ್ಸಿಗೆ ಒಂದು ರೂಪಾಯಿ ಹೆಚ್ಚಳವಾದರೆ ಬಸ್ಸಿಗೆ ಬೆಂಕಿ, ಹಾಲಿಗೆ ಎಂಟಾಣೆ ಹೆಚ್ಚಳ, ತೀವ್ರ ವಿರೋಧ, ಸೀಮೆ ಎಣ್ಣೆ ಬೆಲೆ ಏರಿಕೆ ಖಾಲಿ ಡಬ್ಬಗಳ ಮೆರವಣಿಗೆ, ನೀರಿನ ದರ ಹೆಚ್ಚಳ ಖಾಲಿ ಬಿಂದಿಗೆಗಳು ಬೀದಿಗೆ ಹೀಗೆಲ್ಲ ಇರುತ್ತಿತ್ತು. ಇದಕ್ಕೆ ಪ್ರತಿಯಾಗಿ ಸರಕಾರ ಬೆಲೆಯಲ್ಲಿ  ಒಂದು ಗುಲಗಂಜಿಯಷ್ಟು ಪೈಸೆಯಷ್ಟು ದರವನ್ನು  ಇಳಿಸುತ್ತಿದ್ದರು. 

 

ಆದರೆ  ಈಗ ಕಳೆದ ಕೆಲವು ದಶಕಗಳಿಂದ ನಾವು ನೋಡುತ್ತಿರುವುದೇನು? ಬರೀ ಮುಂಗಡ ಬಜೆಟ್ ಮಾತ್ರವಲ್ಲ ಪ್ರತಿ ತಿಂಗಳೂ ಬೆಲೆ ಏರುತ್ತಲೇ ಇವೆ. ಆದರೆ ಯಾರದೂ ಪ್ರತಿಭಟನೆ ಇಲ್ಲ. ಯಾರ ವಿರೋಧವೂ ಇಲ್ಲ. ವಿರೋಧ ಪಕ್ಷದವರ ಪ್ರತಿಭಟನೆ ಕೇವಲ ನಾಟಕ, ಬೂಟಾಟಿಕೆ, ಸೋಗು ಹಾಗೂ ತೋರಿಕೆಗೆ ಮಾತ್ರ.   ಬೆಂಗಳೂರಿನ ಮೈಸೂರು ಬ್ಯಾಂಕ್ ಚೌಕದಲ್ಲಿ ಒಂದ್ಹತ್ತು ಜನರ ಕೂಗಾಟ, ಘೋಷಣೆ ಅಷ್ಟೆ. ವಾಟಾಳರಿಂದ ಕತ್ತೆಗಳ ಮೆರವಣಿಗೆ.        ಅವರಿಗೂ ಗೊತ್ತು ಸಾರ್ವಜನಿಕರು ಎಷ್ಟೇ ಬೆಲೆ ಏರಿಸಿದರೂ ಹೊಂದಿಕೊಳ್ಳುತ್ತಾರೆ ಎಂದು. ಪೆಟ್ರೋಲ್, ಡೀಸೆಲ್ ಬೆಲೆ ಎರಡು ರೂಪಾಯಿ ಏರಿದರೆ ಸಾಕು, ಹಾಲಿನ ಬೆಲೆ ಒಂದು ರೂಪಾಯಿ ಏರಿದರೆ ಸಾಕು, ಹೊಟೆಲ್ ನಲ್ಲಿ ಕಾಫಿ ಒಂದು ಲೋಟಕ್ಕೆ ಒಂದು ರೂಪಾಯಿ ಹೆಚ್ಚಳವಾಗುತ್ತದೆ, ತಿಂಡಿಗಳೆಲ್ಲದರ ಬೆಲೆ ಗಗನಕ್ಕೇರುತ್ತದೆ. ದಿನಕಳೆದಂತೆ ಅದಕ್ಕೇ ನಾವು ಅಡ್ಜಸ್ಟ್ ಆಗುತ್ತೇವೆ. ಬೆಲೆ ಏರಿಕೆಗೆ ಸರಿಯಾಗಿ, ಡಾಕ್ಟರುಗಳು, ಕಂಟ್ರಾಕ್ಟರುಗಳು,  ಖಾಸಗಿ ಶಾಲೆಗಳವರು,   ಇತರ ಸೇವಾ ಕ್ಷೇತ್ರಗಳವರೂ ತಮ್ಮ   ತಮ್ಮ ಶುಲ್ಕವನ್ನು  ಸದ್ದಿಲ್ಲದೆ  ಏರಿಸಿಕೊಳ್ಳುತ್ತಾರೆ ಯಾರೂ ಅದರ ಬಗ್ಗೆ ಚಕಾರವೆತ್ತುವುದಿಲ್ಲ. ಒಮ್ಮೆ  ಡಾಕ್ಟರ್ ಶಾಪಿಗೆ ಕಾಲಿಟ್ಟರೆ ಸಾಕು, ನೂರೈವತ್ತು, ಇನ್ನೂರು ರೂಪಾಯಿಗಳ ಶುಲ್ಕ, ಇನ್ನು ನರ್ಸಿಂಗ್ ಹೋಂ ಗಳ ಬಗ್ಗೆ ಮಾತನಾಡುವ ಹಾಗೇ ಇಲ್ಲ.  ವಿಧಿಯಿಲ್ಲದೆ ಜನ ಆ ಹೆಚ್ಚಳವನ್ನು ಭರಿಸುತ್ತಾರೆ. ಕೊನೆಗೆ ಲಂಚ ಪಡೆಯುವ ಇಲಾಖೆಗಳವರೂ ತಮ್ಮ  ಲಂಚದ ಪ್ರಮಾಣವನ್ನು ಬೆಲೆಏರಿಕೆಗನುಗುಣವಾಗಿ ಏರಿಸಿಕೊಳ್ಳುತ್ತಾರೆ. ಯಾವುದೇ ರಸೀತಿ  ಕೊಡದೆ ಹಣವನ್ನು ಜೇಬಿಗಿಳಿಸಿಬಿಡುತ್ತಾರೆ. 

 

ಇನ್ನು ಐಷಾರಾಮಿ ವಸ್ತುಗಳಾದ ಕಾರು, ಟಿವಿ, ಫ್ರಿಜ್, ಕಂಪ್ಯುಟರ್, ಮೊಬೈಲ್ ಮೊದಲಾದವುಗಳ ಬೆಲೆಯಲ್ಲಿ ಸಾವಿರಗಟ್ಟಲೆ ಹೆಚ್ಚಿಸಿದರೂ ತುಟಿಪಿಟಿಕ್ಕೆನ್ನದೆ ಜನ ಮುಗಿ ಬೀಳುತ್ತಾರೆ. ಚಿನ್ನ, ಬೆಳ್ಳಿ, ರೇಷ್ಮೆ ಸೀರೆಗಳಂತೂ ಬಿಡಿ, ಆ  ಅಂಗಡಿಗಳೆಲ್ಲ ಗಿಜಿಗುಡುತ್ತಿರುತ್ತವೆ.

 

ನಾವು ಅಂದು ಕೊಳ್ಳುವುದು, ಮಧ್ಯಮ ವರ್ಗ ಅಂದರೆ salaried class ಎನ್ನುತ್ತೀವಲ್ಲ ಅವರಿಗೆ ಮತ್ತು ಕೆಳ ಮಧ್ಯಮ ವರ್ಗ, ಹಾಗೂ ಬಡವರಿಗೆ ಈ ಬೆಲೆ ಏರಿಕೆಯಿಂದ ಭಾರಿ ಹೊಡೆತ ಬೀಳುತ್ತದೆ ಎಂದು. ಆದರೆ ಯಾರೊಬ್ಬರಿಂದಲೂ ಈ ಕುರಿತು ಚಕಾರವಿಲ್ಲ.  ಸಂಬಳದಲ್ಲಿ ಹೆಚ್ಚಳ ಕಾಣುವುದು ಐದು, ಹತ್ತು ವರುಷಗಳಲ್ಲಿ ಅದೂ ಹಲವಾರು ದಿನಗಳ strike ಮಾಡಿ ಸಂಬಳ ಕಳೆದುಕೊಂಡ ನಂತರವೇ.   ಕೇವಲ ಎರಡು ದಿನ ಪತ್ರಿಕೆಗಳಲ್ಲಿ ವಾಚಕರ ವಾಣಿಗಳಲ್ಲಿ ಪತ್ರಗಳ ಸುರಿಮಳೆ ನಂತರ ಎಲ್ಲವೂ ತಣ್ಣಗಾಗುತ್ತದೆ. ಪೆಟ್ರೋಲ್ ಬೆಲೆ ನೂರು ರೂಪಾಯಿಗಳಾದರೂ ಕಾರು ಸ್ಕೂಟರ್ ಗಳ ಖರೀದಿಯಲ್ಲಿ ಇಳಿಮುಖವಾಗುವುದಿಲ್ಲ. ಆಟೋ ಬೆಲೆಯಲ್ಲಿ ಕನಿಷ್ಟ 20 ರೂಪಾಯಿಗಳಾದರೂ ಆಟೊದಲ್ಲಿ ಹೋಗುವವರ ಸಂಖ್ಯೆ ಕಡಿಮೆಯಾಗುವುದಿಲ್ಲ.

 

ಏಕೆ ಹೀಗೆ?  ಈ ಮನೋಭಾವದಲ್ಲಿ  ಸುಧಾರಣೆ ಕಾಣುವುದು ಸಾಧ್ಯವಿಲ್ಲವೇ?