ಕೆಲವರು ಇರುತ್ತಾರೆ-ಎಲೆಮರೆಯ ಕಾಯಿಯಂತೆ-ಅವರು ಮಾಡುತ್ತಿರುವ "ಸಮಾಜ ಸೇವೆ" ಜಗತ್ತಿಗೆ ಬಿಡಿ, ಜತೆಯಲಿ ಇರುವವರಿಗೂ ಗೊತ್ತೇ ಆಗುವುದಿಲ್ಲ!
ಕಳೆದವಾರ "ಪರ್ಜನ್ಯ ಹೋಮ"ದ ಬಗ್ಗೆ ನಮ್ಮ ರಾಘವೇಂದ್ರರು ಬರೆದ ಲೇಖನ http://sampada.net/article/27187 ಓದಿರುವಿರಿ. ಮಳೆ ಬರಲು ಹೋಮ ಮಾಡಬೇಕಾದರೆ ಬಹಳಷ್ಟು ವಿಧಿವಿಧಾನಗಳಿವೆ. ಖರ್ಚೂ ಜಾಸ್ತಿಯಾಗುವುದು. ಮಳೆ ಬರಿಸಿದರೂ ನಂಬುವವರು ಕಮ್ಮಿ, ವಾದಿಸುವವರು ಜಾಸ್ತಿ, ಮಾರ್ಚ್-ಎಪ್ರಿಲ್ ಬೇಸಿಗೆಯಲ್ಲಿ ಮಳೆಬರಿಸಲಿ ಎಂದು ಚಾಲೆಂಜ್ ಸಹ ಮಾಡುವರು.
ನಾನು, ಹೋಮ ಹವನದ ಹಂಗಿಲ್ಲದೇ, ನಯಾಪೈಸೆ ಖರ್ಚಿಲ್ಲದೇ ಮಳೆಬರಿಸಬಲ್ಲೆ...
ಪುನ: ಸೀಟಿನಲ್ಲಿ ಸರಿಯಾಗಿ ಕುಳಿತುಕೊಳ್ಳಿ...ಇನ್ನು ಮುಂದುವರಿಸುವೆ-
ನನಗೆ ಈ ಶಕ್ತಿ ಇದೆ ಎಂಬ ಅರಿವಾದುದು ಆಕಸ್ಮಿಕವಾಗಿ! ಕೆಲವರ್ಷಗಳ ಹಿಂದೆ ಬೆಂಗಳೂರಿನ ದೊಮ್ಮಲೂರಿನಿಂದ ಮಲ್ಲೇಶ್ವರಕ್ಕೆ ನನ್ನ ಬೈಕಲ್ಲಿ ಬರುತ್ತಿರುವಾಗ. ದೊಮ್ಮಲೂರಿನಿಂದ ಹೊರಟಾಗ ಮಳೆಯೇ ಇರಲಿಲ್ಲ. ಹಾಸ್ಪಿಟಲ್ ಬಳಿ ಬರುವಾಗ ಧಾರಾಕಾರ ಮಳೆ. ರಸ್ತೆ ಬದಿ ಬೈಕ್ ನಿಲ್ಲಿಸಿ ರೈನ್ಕೋಟ್ ಹಾಕಿ ಹೊರಟೆ-ಮಳೆ ನಿಂತೇ ಬಿಟ್ಟಿತು. ಎಮ್.ಜಿ.ರೋಡ್ ತಲುಪುವಾಗ ಉರಿಬಿಸಿಲು-ನಾನೊಬ್ಬನೇ ರೈನ್ ಕೋಟಲ್ಲಿ! ಉಳಿದ ವೆಹಿಕಲ್‌ನಲ್ಲಿರುವವರು ನನ್ನನ್ನು ನೋಡಿ ನಗುತ್ತಿದ್ದರು.
ಮಲ್ಲೇಶ್ವರ ತಲುಪುವಷ್ಟರಲ್ಲಿ ಮಳೆ-ರೈನ್‌ಕೋಟ್ on- ಬಿಸಿಲು- ರೈನ್‌ಕೋಟ್ off...ಅನೇಕ ಬಾರಿ ನಡೆಯಿತು.
ಈಗ ಒಂದು ಫ್ಲಾಶ್ ಬ್ಯಾಕ್-
ಅಂದ್ರೆ ...ಸೀದಾ ಬಾಲ್ಯ ಕಾಲಕ್ಕೆ..?
ಊಹೂಂ........ತೀರ್ಥಾಯುಗಕ್ಕೆ!!!
ಆ ಕಾಲದಲ್ಲಿ ತೀರ್ಥದ ಅಮಲಿನಲ್ಲಿ ನಾನು ಮಳೆ ದೇವತೆಯನ್ನು ನಿಂದಿಸಿದೆನಂತೆ. ಆ ದೇವತೆ "ಮುಂದೆ ಕಲಿಯುಗದಲ್ಲಿ ನೀನು ಮಾನವನಾಗಿ ಹುಟ್ಟು. ಮನೆಯಿಂದ ಹೊರಗೆ ಕಾಲಿಟ್ಟಾಗ ಮಳೆ ನಿನಗೆ ಬಾಧಿಸಲಿ" ಎಂದು ಶಾಪ ಕೊಟ್ಟರು :(
ತೀರ್ಥದ ಅಮಲಿನಲ್ಲಿ ಬಿದ್ದುದನ್ನು, ಕಾಲು ಬಿದ್ದು ಕ್ಷಮೆ ಕೇಳಿದ್ದು, ಎಂದು ತಿಳಕೊಂಡು ಆ ದೇವತೆ ಪರಿಹಾರಾನೂ ಸೂಚಿಸಿದರು-"ಹೊರಹೋಗುವಾಗ ಕೊಡೆ ಹಿಡಕೊಂಡರೆ, ಅಥವಾ ರೈನ್‌ಕೋಟ್/ ಜರ್ಕಿನ್ ಹಾಕಿದರೆ ಮಾತ್ರ ಮಳೆ ನಿಲ್ಲಲಿ".
ಅಂದಿನಿಂದ ಇಂದಿನವರೆಗೆ ನಾನಿರುವ ಏರಿಯಾದಲ್ಲಿ ಮಳೆ ಬೇಕೆಂದಿದ್ದರೆ, ಮನೆಯಿಂದ ಹೊರಗೆ ರೈನ್‌ಕೋಟ್ ಹಾಕದೇ ಬರುವೆನು. ಆ ದಿನ ಮಳೆ ಬಂದೇ ಬರುವುದು.
ಬೇಸಿಗೆಕಾಲದಲ್ಲಿ-(ರೈನ್)ಕೋಟು ಹಾಕಿಕೊಂಡೇ ಸುತ್ತಾಡುವೆನು- ಜನರ ಒಳಿತಿಗಾಗಿ..
ನಂಬದವರ, ಚಾಲೆಂಜ್ ಮಾಡುವವರ ತನಿಖೆಗೆ ನಾನು ರೆಡಿ*
-ಗಣೇಶ.
..................................................*conditions apply
ಪ್ರತಿಕ್ರಿಯೆ (10)