ಲೇ ಸುಬ್ಬಾ, ಯಡಿಯೂರಪ್ಪ ಚೈನಾದಿಂದ ನೇರವಾಗಿ ನಮ್ಮ ಹಳ್ಳಿಗೆ ಬರುತ್ತಾ ಇದ್ದಾರೆ. ಅವರು ಹೇಗೆ ವ್ಯವಸಾಯ ಮಾಡಬೇಕು. ಹಾಗೇ ಹೇಗೆ ಬದುಕಬೇಕು ಅಂತಾ ಹೇಳಿಕೊಡ್ತಾರೆ. ಅವರನ್ನ ಚೆನ್ನಾಗಿ ಸ್ವಾಗತ ಮಾಡಬೇಕು ಕಲಾ ಅಂದಾ ನಮ್ಮ ಗೌಡಪ್ಪ. ಸರಿ ಎಂದಿನಂತೆ ಕಿಸ್ನ. ಊರು ಬಾಗಿಲಿಗೆ ತಳಿರು ತೋರಣ ಹಂಗೇ ಬನ್ನಿ ಕಟ್ಟಿದ್ದ.  ಅಂಗೇ ಕತ್ತಿ ಮಡಗಿದ್ದ. ಯಾಕಲಾ ಬನ್ನಿ. ಲೇ ಫಸ್ಟ್ ಟೇಮ್ ಬರ್ತಾ ಇದಾರೆ ಅದಕ್ಕೆ ಅಂದಾ. ಲೇ ಇದೇನು ವಿಜಯದಸಮಿ ಏನಲಾ ತೆಗಿಲಾ ಬಡ್ಡೆ ಐದನೆ ಅಂತಾ ಬನ್ನಿ ತೆಗಿಸಿದ ಸುಬ್ಬ.

___LINK_OPEN_ href="http://1.bp.blogspot.com/_JufO3uU_KXE/TI5Ofbg_SWI/AAAAAAAAAEE/Cn39HBH6E3s/s1600/untitled.JPG"___

ಸರೀ ಯಡಿಯೂರಪ್ಪ ಬಂದೇ ಬಿಟ್ಟರು. ಗೌಡಪ್ಪ ಓಡಿ ಹೋಗಿ ಅವರಿಗೊಂದು ನಮಸ್ಕಾರ ಮಾಡಿ ನಿಂಬೆ ಹಣ್ಣು ಕೊಟ್ಟ. ಅದು ಒಳ್ಳೆ ದ್ರಾಕ್ಷಿ ಹಣ್ಣು ಸೈಜು ಇತ್ತು. ಯಡೂರಪ್ಪ ಅದನ್ನ ತಿಂದು ಚೈನಾ ಭಾಸೆಯಲ್ಲಿ ಇಕಾಸಾ ಸೂಸೂ ಅಂತು. ಏನಲಾ ಅಂದಾ ಗೌಡಪ್ಪ. ನಿಮ್ಮ ಕಡೆ ದ್ರಾಕ್ಷಿ ಹಣ್ಣು ಹುಳಿ ಐತೆ ಅಂದ್ರು ಅಂದ ಅವರ ಕಾರ್ಯದರ್ಸಿ. ಲೇ ಅದು ದ್ರಾಕ್ಷಿ ಅಲ್ಲ ಕಲಾ ನಿಂಬೆ ಹಣ್ಣು ಅಂದ ಗೌಡಪ್ಪ. ಹಿಂದಗಡೆ ಇದ್ದ ಅಂಗ ರಕ್ಸಕ ಗೌಡಪ್ಪನ ತಲೆಮೇಲೆ ನಾಕು ಮಟಕಿದ. ಸುಮ್ಕೆ ನಿಂತಕಾ ಅಂತ.  ಏನಲಾ ಯಡೂರಪ್ಪ ಕನ್ನಡ ಮರೆತು ಬಿಟ್ಟಾವ್ರೆ ಅಂದ ಸುಬ್ಬ. ಹೂ ಕಲಾ ಅಂಗೇ ಕುಂಗು ಫೂ, ಕರಾಟೆ, ಚೈನಾ ಭಾಸೆ ಎಲ್ಲಾ ಕಲ್ತಾವ್ರೆ ಕಲಾ ಅಂದ ನಿಂಗ.
ಸರಿ ಊಟಕ್ಕೆ ಅಂತಾ ಗೌಡಪ್ಪನ ಮನೆಗೆ ಯಡೂರಪ್ಪನ ಕರೆದುಕೊಂಡು ಹೋದರೆ. ಗೌಡಪ್ಪ ಮುದ್ದೆ, ಬಸ್ಸು ಸಾರು, ಅನ್ನ ಮಾಡಿಸಿದ್ದ. ಮುದ್ದೆ ಹೆಚ್ಚಕ್ಕೆ ಅಂತಾ ಚಾಕು ಕೊಟ್ವಿ. ಆದ್ರೂ ಯಡೂರಪ್ಪ ಏನೋ ಹುಡುಕ್ತಾ ಇದ್ರು. ಏನಲಾ ಸುಬ್ಬ. ಚೈನಾದಾಗೆ ಕಡ್ಡಿಲ್ಲಿ ತಿನ್ನೋದು ಅದನ್ನ ಹುಡಕ್ತಾವ್ರೆ ಅಂದಾ ಸುಬ್ಬ. ಹೊರಗಡೆ ಐಕ್ಳು ಐಸ್ ಕ್ಯಾಂಡಿ ತಿಂತಾ ಇದ್ವು ಅದನ್ನೇ ಇಸ್ಕಂಡ್ ಬಂದು ಕೊಟ್ವಿ. ಯಡೂರಪ್ಪ ಅದ್ರಾಗೆ ಗಬ ಗಬ ಅಂತಾ ತಿಂದು. ಇಚಿಕಾಮಾ ರೂಬಾ ಸಾರಿ ಸೂಸೂ ಅಂತು. ಅವಾಗಿಂದ ಯಡೂರಪ್ಪ ಸೂಸೂ ಅಂತಾವ್ರೆ ಕೆರೆತಾವ ಏನಾದ್ರೂ ಹೋಯ್ತಾರಾ ಕೇಳಲಾ ಅಂದ ಗೌಡಪ್ಪ. ಏ ಥೂ. ನೀವು ಮಾಡಿದ್ದು ಅಡುಗೆ ಸಂದಾಗೈತೆ ಅಂತಾವ್ರೆ ಅಂದ ಸುಬ್ಬ. ನಿಂಗೆ ಹೆಂಗಲಾ ಚೈನಾ ಭಾಸೆ ಗೊತ್ತು. ಏ ನಾನು ಜಾಕಿಚಾನ್ ಪಿಚ್ಚರ್ ಸಾನೇ ನೋಡಿ ಕಲ್ತೀವ್ನಿ ಅಂದಾ ಸುಬ್ಬ. ಸರೀ ಯಡೂರಪ್ಪನ ತರಾನೇ ಗೌಡಪ್ಪ ತಿನ್ನಕ್ಕೆ ಹೋದ ಗೌಡಪ್ಪ. ಕಡ್ಡಿ ವಸಡಿಗೆ, ಗಂಟಲಿಗೆ ಎಲ್ಲಾ ಚುಚ್ಚಿಕೊಳ್ಳೋದು. ಮಗಂದು ಬಾಯಲ್ಲಿ ರಕ್ತ ಬೇರೆ. ಮೈ ಮ್ಯಾಕೆ ಎಲ್ಲಾ ಅನ್ನ ಸಾರು ಬಿದ್ದಿತ್ತು. ಚಿಂ ಚಿಂ ತಕಾನಾ ಸೂತ ಕಾ ಅಂತು ಯಡೂರಪ್ಪ. ಏನಲಾ, ನಿಮ್ಮ ಬಾಯಿ ಬೀಡಿ ವಾಸನೆ ಬತ್ತಾ ಇದೆ ದೂರ ನಿಂತಕ ಅಂತಾವ್ರೆ ಅಂದಾ ಸುಬ್ಬ. ಒಂದು ಹತ್ತು ಮಿಂಟ್ ಹಾಕ್ಕಂಡ. ಗಂಟಲು ಎಲ್ಲಾ ಉರಿ ಅನ್ನೋನು. ನೀರು ಕುಡಿಯೋನು. ಬಚ್ಚಲು ಮನೆಗೆ ಓಡೋನು. ಮಗಂದು ಸುಗರ್ ಬೇರೆ.
ಸರೀ ಸಂಜೆ ಸಿದ್ದೇಸನ ಗುಡಿ ತಾವ ಬಹಿರಂಗ ಭಾಸಣ ಮಡಗಿದ್ವಿ. ಯಡೂರಪ್ಪ ಬಂದಾವ್ರೆ ಆರತಿ ಮಾಡಲಾ ಸೀತು ಅಂದಾ ಗೌಡಪ್ಪ. ಆರತಿ ಮಾಡ್ತಿದ್ದಾಗೆನೇ ಯಡೂರಪ್ಪ ಯಾ ಹೂ ಅಂತಾ ಗಂಟೆಗೆ ಹೊಡೆದು ನಾಕು ಪಲ್ಟಿ ಹೊಡೆದು. ಹೂಕಾ ಸಿದ್ದೇಸ ಅಂತು. ಏನಲಾ. ಸಿದ್ದೇಸ ನೀನೆ ಕಾಪಾಡಪ್ಪ ಅಂತಾ.
ಸರೀ ಉದ್ಘಾಟನೆಗೆ ಅಂತಾ ಎರಡು ಮಡಕೆ ಒಡೆಯಲಿ ಅಂತಾ ಇಟ್ಟಿದ್ವಿ. ಯಡೂರಪ್ಪ ಸ್ಟೇಜಿಗೆ ಬಂದೋರೆ ಸೀಮಾ ಸಾಕಾ ಅಂತಾ ಎಗರಿ ಎರಡು ಮಡಕೇನೂ ಒಡೆದು ಅಂಗೇ ಶಾವಲಿನ್ ಸ್ಟೈಲ್ನಾಗೆ ಜಂಪ್ ಮಾಡಿ ಸೀಟ್ ನಾಗೆ ಕುಂತರು. ಹೀಈಈಈಈಈ ಯಾ.  ಸರೀ ಗೌಡಪ್ಪನ ಭಾಸಣ ಸುರುವಾತು. ಹೊಗಳಿದ್ದೇ ಹೊಗಳಿದ್ದು. ಯಡೂರಪ್ಪ ಗೌಡಪ್ಪ ನಿಮಾ ನಾಕು ಕುಂಫಾ ಅಂತು. ಏನಲಾ ಸುಬ್ಬ ಅಂದಿದ್ದು. ಭಾಸಣ ಮಾಡಿದ್ದು ಸಾಕು ಮುಚ್ಕಂಡು ಬಂದು ಕುಂತ್ಕಾ ಅಂದ್ರು ಅಂದ ಸುಬ್ಬ, ಗೌಡಪ್ಪ ಕೆಟ್ಟ ಹರಳೆಣ್ಣೆ ಮುಖ ಮಾಡ್ಕಂಡು ಬಂದು ಕುಂತ.
ಈಗ ಯಡೂರಪ್ಪ ಭಾಸಣ. ಅನುವಾದ ಮಿ.ಸುಬ್ಬ.
ಯಡೂರಪ್ಪ : ಎಲ್ಲರಿಗೂ ನಮಾ ಚೀಚೀ
ಸುಬ್ಬ : ನಿಮಗೆಲ್ಲರಿಗೂ ನಮಸ್ಕಾರ. ಚೀಚೀ ಅಂದರೆ ಎಲ್ಲಾ ಒಸಿ ಮುಚ್ಕಂಡು ಕುಂತ್ಕಳಿ ಅಂತಾ
ಯಡೂರಪ್ಪ :  ಚೀನಾ ಸಿಮಾ ಸೀಕಾ ಥಾಯಿ ಥೀಮಾ ಚುಂ. ಅಕಾಸೀ ಕಾಯಿ ಇಗೋಂಪಾ
ಸುಬ್ಬ : ಚೀನಾದಲ್ಲಿ ನಿಮ್ಮ ತರಾ ಭಾಸಣ ಅಂತಾ ಜನಾ ಎಲ್ಲಾ ಬರಲ್ಲಾ. ನೀವೆಲ್ಲಾ ಏನು ಕ್ಯಾಮೆ ಇಲ್ಲದೆ ದರಿದ್ರ ಮುಖ ಇಡ್ಕಂಡು ಬಂದಿದೀರಾ. ಇದರಿಂದ ರಾಜ್ಯ ನಷ್ಟ ಆಯ್ತಾ ಇದೆ. ಲೇ ಸುಬ್ಬ ಅವರು ನೋಡಿದ್ರೆ ಒಂದೇ ಲೈನ್ ಹೇಳ್ತಾರೆ, ನೀನು ನೋಡಿದ್ರೆ ಒಂದು ಪ್ಯಾರಾ ಹೇಳ್ತೀಯಲಾ ಅಂದಾ ಗೌಡಪ್ಪ. ನೀ ಮುಚಾ ಗೌಡಪ್ಪ ಅಂತು ಯಡೂರಪ್ಪ. ಏನಲಾ ಸುಬ್ಬ. ನೀವು ಮುಚ್ಕಂಡು ಕೂರಬೇಕಂತೆ.
ಯಡೂರಪ್ಪ : ಚೀನಾ ಸೂನಿ ಸಾಕ ಮಾಕಾ ನಾಕ, ನೀ ಸಾಕ ಮಾಕಿ ನೀಕಿ ಚೂನಾ ಸಂ ತಾ ಕೂನಾ
ಸುಬ್ಬ : ಚೀನಾದಾಗೆ ಎಲ್ಲಾರೂ ಬಿಸಿ ಊಟ ಮಾತ್ತಾರೆ. ನಿಮಗೇನಾಗೈತೆ ದರಿದ್ರ ಬರೀ ತಮಗಳು ತಿಂದು ಹಿಂಗೆ ಇದೀರಲಾ. ಅದೂ ಗೂಬೆ ಮುಖದಾಗೆ. ಗೌಡಪ್ಪ ಯೋಸನೆ ಮಾತ್ತಾ ಇದ್ದ. ಮಗಾ ಸುಬ್ಬ ಹೆಂಗೆ ಚೀನಾ ಭಾಸೆ ಕಲಿತಾ ಅಂತಾ.
ಯಡೂರಪ್ಪ : ನೀ ಯಮಾ ಸಾಕಾಮ್ಮ ಮಾಕ ನಾಕ ರಾಜಮ್ಮ ,ಬಸಮ್ಮ, ಸೂನಾ ಸೀಕಾ ನಾಕಾ
ಸುಬ್ಬ : ಸಾಕಮ್ಮ,ರಾಜಮ್ಮ,ಬಸಮ್ಮ ನಮ್ಮ ಪಕ್ಸಕ್ಕೆ ಬಂದರೆ ಅವರನ್ನೆಲ್ಲಾ ಮಹಿಳಾ ಮೋರ್ಚಾಕ್ಕೆ ತಗೊಂಡು ಮಂತ್ರಿ ಮಾತ್ತಾರಂತೆ.
ಯಡೂರಪ್ಪ : ಚೀನಾ ಕುಂಗ್ ಫೂ, ಕರಾಟೆ ಸಾಕಾ ಮಾಕಾ ರಾಕಾ ನೀಕಾ ಯಾ ಹೂ.
ಸುಬ್ಬ : ಚೀನಾದಾಗೆ ಕುಂಗ್ ಫೂ, ಕರಾಟೆ ಎಲ್ಲಾ ಕಲಿತು ಅವರ ರಕ್ಸಣೆ ಮಾಡಿಕತಾರಂತೆ ನಿಮಗೆ ಏನಾಗೈತೆ ರೋಗ. ದರ್ಬೇಸಿ ತರಾ ಇದೀರಾ, ಬೆಳಗ್ಗೆ ಬೇಗ ಎದ್ದು ಕರೆತಾವ ಹೋಗಿ ವ್ಯಾಯಾಮ ಮಾಡಿ ಅಂದ್ರು.
ಯಡೂರಪ್ಪ : ಬಿಜೆಪಿ ಚಾಚಾ ಚೂಮಾ ನೀನಾ ಯಾ ಹೂ
ಸುಬ್ಬ : ಬಿಜೆಪಿ ಒಳ್ಳೆ ಕೆಲಸ ಮಾಡ್ತಾ ಇದೆ. ಪ್ರೋತ್ಸಾಹ ನೀಡಿ. ಇನ್ನು 20 ವರ್ಸ ಅಧಿಕಾರ ಮಾತ್ತೀವಿ ಅಂತಾವ್ರೆ. ಚಪ್ಪಾಳೆ. ಚಾಮಾ ಚೀ ಚೀ ಚೀ ಅಂತೂ ಯಡೂರಪ್ಪ. ಅಂಗಂದ್ರೆ ಏನಲಾ ಸುಬ್ಬ. ಸ್ಕೌಟ್ ನೋರು ತರಾ ಚಪ್ಪಾಳೆ ಹೊಡಿಬೇಕಂತೆ.
ಸರೀ ಭಾಸಣ ಮುಗೀತು. ಯಡೂರಪ್ಪ ಕುಂಗ್ ಫೂ ಸ್ಟೈಲ್ನಾಗೆ ಎಲ್ಲಾರಿಗೂ ನಮಸ್ಕಾರ ಮಾಡಿ ಹೋದ್ರು. ಒಂದು ವಾರ ಆದ್ ಮ್ಯಾಕೆ ಬೆಂಗಳೂರಿಂದ ಲೆಟರ್ ಬಂತು. ಮುಂದಿನ ವಿಧಾನಸಭೆ ಚುನಾವಣೆಗೆ ಸುಬ್ಬ ಕ್ಯಾಂಡಿಡೇಟ್ ಅಂತಾ. ಅಲ್ಲಲಾ ಊಟ ಮಾಡಿದ್ದು ನಮ್ಮನಾಗೆ. ಸ್ಟೇಜ್ ಹಾಕಿಸಿದ್ದು ನಾನು, ಜನನ್ನ ಕರೆಸಿದ್ದು ನಾನು ನಿಂಗೆ ಹೆಂಗಲಾ ಟಿಕೆಟ್ ಅಂದ್ರೆ. ಗೌಡಪ್ಪ ಪೆದ್ದ ಇದಾನೆ. ಅದಕ್ಕೆ ನಂಗೆ ಕೊಟ್ಟವ್ರೆ ಅಂತಾ ಸುಬ್ಬ ಖುಸಿಯಿಂದ ಹೇಳೋನು. ಸುಬ್ಬನ ಹಿಂದೆ ಗೌಡಪ್ಪ ಈಗ ಫಾಲೋಯರ್. ಗೌಡಪ್ಪಂಗೆ ಹೋಗಲಾ ಬಾರಲಾ ಅಂತಾನೆ ಸುಬ್ಬ.