* ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ೧೫೦ನೇ ಜನ್ಮದಿನ ಬಂತು, ಹೋಯಿತು.
  - ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಸೂಕ್ತ ನೆನಹಿನ ಕಾರ್ಯ(ಕ್ರಮ) ನಡೆಯಲಿಲ್ಲ. ಸರ್ಕಾರಗಳಿಗೆ ಆ ಯೋಗ್ಯತೆ ಇಲ್ಲ ಬಿಡಿ.

  * ಪಂಡಿತ ಪುಟ್ಟರಾಜ ಗವಾಯಿಗಳನ್ನು ನೋಡಲು ಜನಸಾಗರ.
  - ನಿಜವಾದ ಸೂಪರ್ ಸ್ಟಾರ್ ಎಂದರೆ ಗವಾಯಿಗಳು. ಇದು ಜನರ ಆಯ್ಕೆ.

  * ರಾಜ್ಯದ ಪರಿಶಿಷ್ಟರಿಗೆ ಭೂಮಿ.
  - ಶಿಷ್ಟರಿಗೆ, ಪರಿಶಿಷ್ಟರಿಗೆ ತುಂಡು ಭೂಮಿ. ಭ್ರಷ್ಟರಿಗೆ, ದುಷ್ಟರಿಗೆ ನುಂಗಿದಷ್ಟೂ ಭೂಮಿ!

  * ಬನ್ನೇರುಘಟ್ಟ ಉದ್ಯಾನದಲ್ಲಿ ಹುಲಿ, ಸಿಂಹಗಳ ಸಾವು.
  - ಹುಲಿ ರಕ್ಷಣೆಗೆ ಹತ್ತು ಕೋಟಿ, ಸಿಂಹಕ್ಕೆ ಇಪ್ಪತ್ತು ಕೋಟಿ ಘೋಷಿಸಿಲ್ಲ ಸಿ.ಎಂ. ಇನ್ನೂ!

  * ರಾಜ್ಯದ ಕೆಲವೆಡೆ ಆನೆಗಳ ಹಾವಳಿ ಮಿತಿಮೀರಿದೆ.
  - ಮುವ್ವತ್ತು ಕೋಟಿ?

  * ಪ್ರಕೃತಿ ವಿಕೋಪ ನಿಧಿ ಬಳಸಿಕೊಂಡು (ಮಾಜಿ) ಜಿಲ್ಲಾಧಿಕಾರಿಯಿಂದ ಬಂಗಲೆ ನಿರ್ಮಾಣ.
  - ಅದು ಆ ಅಧಿಕಾರಿಯ ಪ್ರಕೃತಿ. ಕೋಪ ಅನವಶ್ಯ.

  * ರಾಮಚಂದ್ರಗೌಡರನ್ನೀಗ ಕೇಳೋರಿಲ್ಲ.
  - ಆದ್ದರಿಂದ ಹರಿಕಥೆ ಸ್ಟಾಪ್?

  * ಅಂದು ರಾಮಾಯಣ, ಇಂದು ರಾಮಚಂದ್ರಾಯಣ.
  - ಗೌಡಾಯಣ ಅಲ್ಲ. ಏಕೆಂದರೆ ಅದು ಬೇರೆಯವರಿಗೆ ರಿಸರ್ವ್ ಆಗಿದೆ.

  * ಹರತಾಳು ಹಾಲಪ್ಪ ಮಾಡಿದ್ದು ಖಾತ್ರಿಯಾಗಿದೆ.
  - ಇನ್ನು, ಮಾಡಿದ್ದುಣ್ಣೋ ಮಹರಾಯ.

  * ತೆಲಗಿ ದೋಷಿ ಎಂದು ನ್ಯಾಯಾಲಯದ ತೀರ್ಪು.
  - ಆಸ್ತಿ ನಮ್ಮ ಮಾವನ ಸ್ವಂತದ್ದು ಎಂದು ಅದೇ ದಿನ ತೆಲಗಿಯ ಭಾವೀ ಅಳಿಯನ ಘೋಷಣೆ!

  * ವಿದ್ಯುತ್ ಕಡಿತ ಮುಂದುವರಿಯಲಿದೆ.
  - ಇದೂ ಒಂದು ಸುದ್ದಿಯೇ?

  * ಮಾದಾರ ಚನ್ನಯ್ಯ ಸ್ವಾಮೀಜಿ ಪಾದಯಾತ್ರೆ ಯಶಸ್ವಿ.
  - ಇದು ನಿಜಕ್ರಾಂತಿಗೆ ಮುನ್ನುಡಿಯಾದರೆ ಚೆನ್ನಯ್ಯ.

  * ಶ್ರೀನಗರದಲ್ಲಿ ನಿಲ್ಲದ ಹಿಂಸಾಚಾರ.
  - ಹೀಗೇ ಮುಂದುವರಿದರೆ ಕೊನೆಗೊಂದು ದಿನ ಅದು ಇತಿಶ್ರೀ ನಗರ!

  *  ಕುಸ್ತಿ ಕೋಚ್ ಸತ್ಪಾಲ್ ಸಿಂಗ್ ಅವರನ್ನು ಅವಮಾನಿಸಿದ ಕ್ರೀಡಾ ಸಚಿವ ಗಿಲ್.
  - ’ಗಿಲ್ಲು ಗಿಲ್ಲೆನುತಾ, ಎಂ.ಎಸ್. ಗಿಲ್ಲೇ ತಾನೆನುತಾ, ಬಲ್ಲಿದ ಸತ್ಪಾಲ್ ಸಿಂಗರಮೇಲೆ ಚೆಲ್ಲಿದನೋ ಕೆಸರಾ!’

  * 'ಅಕ್ಕ'ಳಿಂದ ಅವಮಾನಿತನಾಗಿ ಬಂದ ಮಿತ್ರ ಹೇಳಿದ, 'ನನ್ನದು ಅಲ್ಲಿ ನಾಯಿಪಾಡಾಗಿತ್ತು!'
  - 'ಡಬಲ್ ನಾಯಿಪಾಡು', ಎಂದೆ ನಾನು. 'ಹೇಗೆ?' ಅಂತ ಕೇಳಿದ. 'ನಿಯೋಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಇಲ್ಲಿ ನಾಯಿಪಾಡು; ನಿಯೋಗದೊಡನೆ ಹೋಗಿ ಅಲ್ಲಿ ನಾಯಿಪಾಡು', ಎಂದೆ. ಹೌದೆಂದು ಬಾಲ, ಅಲ್ಲ, ಗೋಣು ಅಲ್ಲಾಡಿಸಿದ.

  * ಒಂದೇ ದಿನದಲ್ಲಿ ಇಷ್ಟೆಲ್ಲ ಸುದ್ದಿ!
  - ಇದು ವಿಶಾಲ ಭಾರತ, ಸ್ವಾಮೀ!