ಕಿಟಕಿಯ ಸರಳುಗಳ ನಡುವೆ

ಬರಲೇಯಿಲ್ಲವೆಂಬಂತೆ ಒಳಬರಲು ಹೊಂಚುವ

ಬೆಕ್ಕಿನಂತೆ ಬರುವ

ಸಾವನ್ನು ಕಾಯುತ್ತಿರುವ ನನ್ನೊಳಗೆ

ಇರುವುದೊಂದೇ -

ನನ್ನ ಹೆಂಡತಿಯ ಬಗೆಗಿನ ಮರುಕ.

 

ಮರುಕ.

ಈ ತಣ್ಣಗಾದ, ಬಿಳುಚಿಕೊಂಡ

ದೇಹವನ್ನು ಕಂಡು,

ಅಲುಗಾಡಿಸಿ ಒಮ್ಮೆ

“ರೀ” ಎಂದು ಚೀರುವ ಅವಳ ಕರೆಗೆ

“ರೀ” ಓಗೊಡಲಾಗುವುದಿಲ್ಲ.

 

ಅಲ್ಲ.

ನನ್ನ ಸಾವಲ್ಲ ನನ್ನ ಚಿಂತೆ.

ನನ್ನ ಚಿಂತೆ – ನನ್ನ ಹೆಂಡತಿ.

ಏನೂ ಅಲ್ಲದಿದ್ದ, ಏನೇನೂ ಉಳಿಯದ

ನನ್ನನ್ನು ಮಾತ್ರ ಹೊಂದಿರುವ

ಹೊಂದಿಕೊಳ್ಳುವ ನನ್ನ ಹೆಂಡತಿ.

 

ಆದರೂ,

ಆದರೆ, ನಾನು ಅವಳಲ್ಲಿ ಅರಿಕೆ

ಮಾಡಿಕೊಳ್ಳಬಹುದಾದ್ದು

…. ಈ ಎಲ್ಲ ರಾತ್ರಿಗಳಲ್ಲಿಯೂ

ಪಕ್ಕದಲ್ಲಿ ಮಲಗಿಕೊಂಡು

ನಿಷ್ಪ್ರಯೋಜಕ ವಾಗ್ವಾದಗಳಲ್ಲಿ

ಮುಳುಗಿದ್ದೂ ಸಹ ಎಷ್ಟು ಸೊಗಸಾಗಿತ್ತು! ಎಂಬ ದಿಟ.

ಮತ್ತೆ,

ನಾನು ಎಂದೂ ಹೇಳಲು ಹೆದರುತ್ತಿದ್ದ

ಆ ಕೆಲವು ಪದಗಳು – ಪ್ರೀತಿ, ಗೀತಿ, ಸೋಲು ಮುಂತಾದವು.