ಈ ವಿಷಯ ಬರೆಯಲು ಹೊರಟಾಗ ನನಗೆ ಬಂದ ಮೊದಲ ಸಂಶಯ ಇದನ್ನು ಯಾವ ವರ್ಗದಲ್ಲಿ ಸೇರಿಸಬೇಕು ಎಂಬುದು. ರಾಜಕೀಯವೇ ಸೂಕ್ತ ಎಂದು ಅದಕ್ಕೆ ಸೇರಿಸಿದ್ದೇನೆ. ಇತ್ತೀಚೆಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ವಿಶ್ವೇಶ್ವರ ಭಟ್ ತಮ್ಮ ನೂರೆಂಟು ಮಾತು ಅಂಕಣದಲ್ಲಿ ಕರ್ನಾಟಕದ ಮಠಗಳ ಬಗ್ಗೆ ಬರೆದಿದ್ದರು. ಈ ಮಠಗಳು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಕಾಣಿಕೆಗಳು ಇತ್ಯಾದಿಗಳನ್ನು ವಿವರಿಸಿದ್ದ ಲೇಖನದಲ್ಲಿ ಮಠಗಳ ಸಾಧನೆಗಳನ್ನು ಪಟ್ಟಿ ಮಾಡಲಾಗಿತ್ತು.
ಈ ಲೇಖನ ಓದಿದಾಗ ಕೆಲಕಾಲದ ಹಿಂದೆ ನಮ್ಮ ಕಾಲೇಜಿನಲ್ಲಿ ಉಪನ್ಯಾಸ ನೀಡಿದ್ದ ಎ.ನಾರಾಯಣ ಅವರು ಎತ್ತಿದ್ದ ಪ್ರಶ್ನೆಯೊಂದು ನೆನಪಾಯಿತು. ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳಿಗಿರುವ ಇರುವ ಸ್ಥಾನ ಯಾವುದು? ಇವುಗಳನ್ನು ಎನ್.ಜಿ.ಓಗಳು ಎಂದು ಕರೆಯುವಂತೆ ಇಲ್ಲ. ಶಿಕ್ಷಣ ಸಂಸ್ಥೆಗಳೆಂದು ಹೇಳಲೂ ಸಾಧ್ಯವಿಲ್ಲ. ಇವು ರಾಜಕೀಯ ಪಕ್ಷಗಳೂ ಅಲ್ಲ. ಧರ್ಮ ಪ್ರಸಾರವನ್ನು ಮಾಡುವ ಸಂಸ್ಥೆಗಳೆಂದು ವರ್ಗೀಕರಿಸಲೂ ಸಾಧ್ಯವಿಲ್ಲ. ಏಕೆಂದರೆ ಕರ್ನಾಟಕದಲ್ಲಿ ಇರುವ ಎಲ್ಲಾ ಪ್ರಭಾವೀ ಮಠಗಳೂ ರಾಜಕೀಯದಲ್ಲೂ ತಮ್ಮ ಪ್ರಭಾವವನ್ನು ಉಳಿಸಿಕೊಂಡಿವೆ. ಕೆಲವು ಮಠಗಳಂತೂ ಅಭ್ಯರ್ಥಿಗಳ ಸೋಲು ಗೆಲುವನ್ನು ನಿರ್ಧರಿಸುವಷ್ಟು ಪ್ರಬಲ ಎನ್ನಲಾಗುತ್ತಿದೆ. ಹಾಗಿದ್ದರೆ ಈ ಮಠಗಳು ಏನು?
ಡೆವಲಪ್ ಮೆಂಟ್ ಸ್ಟಡೀಸ್ ಎಂದು ಕರೆಯುವ ಅಧ್ಯಯನ ವಿಭಾಗದಲ್ಲಿ ಈಗ ರಿಲಿಜನ್ ಮತ್ತು ಡೆವಲಪ್ ಮೆಂಟ್ ಗಳ ಮಧ್ಯೆ ಇರುವ ಸಂಬಂಧದ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳ ಸ್ಥಾನ ಏನು ಎಂಬುದನ್ನು ನಿರ್ಧರಿಸಬೇಕಾದ ಅಗತ್ಯವಿದೆ. ಮಠಗಳು ಶಿಕ್ಷಣ ಕ್ಷೇತ್ರದಲ್ಲಿ ಬಹಳ ಕೆಲಸ ಮಾಡುತ್ತಿವೆ ಎಂಬುದು ನಿಜ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಕೆಲಸ ಮಾಡಬೇಕಿರುವುದು ಸರಕಾರ. ಸರಕಾರ ಅದನ್ನು ಮಾಡದೇ ಇದ್ದರೆ ಅದು ಅದರ ವೈಫಲ್ಯವನ್ನು ಸೂಚಿಸುತ್ತದೆ. ಈ ವೈಫಲ್ಯವನ್ನು ಸರಿಪಡಿಸುವಂತೆ ಒತ್ತಡ ಹೇರಬೇಕಾದ ಸಮುದಾಯಕ್ಕೆ ಚಾರಿಟಿಯ ಮೂಲಕ ಆ ಸವಲತ್ತನ್ನು ಒದಗಿಸುವುದು ಪ್ರಜಾಪ್ರಭುತ್ವದ ಅಡಿಗಲ್ಲನ್ನೇ ಸಡಿಲಗೊಳಿಸುವುದಿಲ್ಲವೇ?
ಉದಾಹರಣೆಗೆ ಒಂದು ಊರಿನಲ್ಲಿ ಶಾಲೆ ಇಲ್ಲ ಎಂದು ಭಾವಿಸೋಣ. ಇಲ್ಲಿ ಸರಕಾರ ಒಂದು ಶಾಲೆಯನ್ನು ಸ್ಥಾಪಿಸಬೇಕು. ಅದಕ್ಕೆ ಬೇಕಾದ ಒತ್ತಡವನ್ನು ಊರಿನವರು ಹೇರಬೇಕು. ಮಠವೊಂದು ಬಂದು ಇಲ್ಲಿ ಶಾಲೆಯೊಂದನ್ನು ಸ್ಥಾಪಿಸಿದರೆ ಆ ಊರಿನಲ್ಲಿ ಶಾಲೆಯೇ ಒಂದು ಕಾರಣವಾಗಿ ಮೂಡಬಹುದಾಗಿದ್ದ ರಾಜಕೀಯ ಪ್ರಜ್ಞೆಯೇ ಇಲ್ಲವಾಗುತ್ತದೆ.
ಇದು ಸಮಸ್ಯೆಯ ಒಂದು ಮುಖ. ಈಗ ಕರ್ನಾಟಕದ ವಿಷಯವನ್ನೇ ಪರಿಗಣಿಸುವುದಾದರೆ ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಮಠಗಳು ಕುರುಡರಿಗೆ ಶಿಕ್ಷಣ ನೀಡುವ ಸಂಸ್ಥೆಗಳು, ಉಚಿತ ವಸತಿ ನಿಲಯ, ಉಚಿತ ಪ್ರಾಥಮಿಕ ಶಿಕ್ಷಣಗಳನ್ನು ನೀಡುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಪಿಟೇಷನ್ ಸಂಸ್ಥೆಗಳನ್ನೂ ಸ್ಥಾಪಿಸಿಕೊಂಡಿಲ್ಲವೇ?
ತಾತ್ವಿಕವಾಗಿ ನೋಡುವುದಾದರೆ ವಿರಕ್ತಿ ಇರಬೇಕಾದ ಜಾಗದಲ್ಲಿ ಐಷಾರಾಮ ತುಂಬಿಲ್ಲವೇ? ಧರ್ಮ ಸಂಸ್ಥಾಪನೆ ಅಥವಾ ನೀತಿ ಬದ್ಧ ಜೀವನವೊಂದನ್ನು ಬೋಧಿಸಬೇಕಾದ ಯತಿಗಳು ತಮ್ಮದೇ ಆದ ರಾಜಕೀಯ ಒಲವುಗಳನ್ನು ಪ್ರತಿಪಾದಿಸುತ್ತಿದ್ದಾರಲ್ಲವೇ? ಆದರೆ ರಾಜಕೀಯ ಪಕ್ಷವಾಗದೆ, ಎನ್ ಜಿ ಓವೂ ಆಗದೆ ಈ ಎಲ್ಲವುಗಳ ಅನುಕೂಲಗಳನ್ನು ಅನುಭವಿಸುವ ಮಠಗಳು ಸಮಾಜದ ಮೇಲೆ ನಿಜಕ್ಕೂ ಬೀರುತ್ತಿರುವ ಪರಿಣಾಮ ಏನು ಮತ್ತು ಆದುನಿಕ ಪ್ರಜಾಪ್ರಭುತ್ವದಲ್ಲಿ ಅವುಗಳ ಸ್ಥಾನವನ್ನು ಹೊಸತಾಗಿ ನಿರ್ಧರಿಸುವ ಅಗತ್ಯವಿಲ್ಲವೇ?
ಪ್ರತಿಕ್ರಿಯೆ (3)
ಅಮೇಲೆ ನನಗೆ ನಾನೆ ತರ್ಕಿಸಿಕೊಂಡಾಗ ಅದನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಾಗಲಿಲ್ಲ. ಅದನ್ನು ಒಂದು ಉದಾಹರಣೆಯೊಂದಿಗೆ ವಿವರಿಸಲು ಯತ್ನಿಸುತ್ತೇನೆ.
ಚಾಮರಾಜನಗರ ನಮ್ಮ ರಾಜ್ಯದಲ್ಲಿರುವ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದು. ಇಲ್ಲಿ ಅಭಿವೃದ್ದಿಯಿರಲಿ ನಮ್ಮ ಸರ್ಕಾರದ ಯಾವ ಮಂತ್ರಿಯು ( ಮುಖ್ಯಮಂತ್ರಿಯಂತು ಇಲ್ಲವೆ ಇಲ್ಲ ಬಿಡಿ) ಹೋಗುವುದಿಲ್ಲ ಏಕೆಂದರೆ ಅವರು ತಮ್ಮ ಅಧಿಕಾರ ಕಳೆದುಕೊಳ್ಳುತ್ತೇವೆಂಬ ವಿಚಿತ್ರವಾದ ಮೂಢನಂಬಿಕೆ. ಹಾಗಾಗಿ ಇದು ಜಿಲ್ಲಾ ಕೇಂದ್ರವಾಗಿದ್ದರೂ ಅಭಿವೃದ್ಧಿ ಕಾರ್ಯಗಳು ಕೇವಲ ಮರೀಚಿಕೆಯಾಗಿ ಉಳಿದಿದೆ. ಇಷ್ಟಾದರೂ ಇಲ್ಲಿನ ಜನ ಇದರ ವಿರುದ್ಧ ದಿನವೂ ಪ್ರತಿಭಟನೆ ಮಾಡುತ್ತಲೆ ಇದ್ದಾರೆ. ಇಂತಹ ಹಿಂದುಳಿದ ಪ್ರದೇಶದಲ್ಲೂ ಈ ಭಾಗದ ಪ್ರಸಿದ್ಧ ಮಠ(ಗಳು) ಇಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದಲ್ಲದೆ ತನ್ನ ಮಿತಿಯೊಳಗೆ ಮಾಡಬಹುದಾದ ಇನ್ನಿತರ ಸಮಾಜಮುಖಿಯಂಥ ಕೆಲಸಗಳನ್ನು ಮಾಡುತ್ತಾ ಬಂದಿದೆ. ಆಂದರೆ ಇಲ್ಲಿ ಪ್ರಜೆಗಳಿಂದಲೆ ಚುನಾಯಿತವಾದ ಸರ್ಕಾರ ಈ ಭಾಗವನ್ನು ಕಡೆಗಣಿಸಿದ್ದರೂ ಆ ಭಾಗದಲ್ಲೆ ಮಠಗಳು ಸಮಾಜವನ್ನು ಮೇಲೆತ್ತುವಲ್ಲಿ ನಿರತವಾಗಿದೆ. ಇಷ್ಟಾದರೂ ಇಲ್ಲಿನ ಜನ, ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ದಿನವೂ ಪ್ರತಿಭಟನೆ ಮಾಡುತ್ತಲೆ ಇದ್ದಾರೆ. ಅಂದ ಮೇಲೆ ಮಠಗಳು ರಾಜಕೀಯ ಪ್ರಙ್ನೆ ಬೆಳೆಯಲು ಬಿಡುತ್ತಿಲ್ಲ ಎಂದರೆ ಒಪ್ಪಿಕೊಳ್ಳಬಹುದೆ ?
೧೯೨೬ ರಲ್ಲಿ ಮೈಸೂರು- ಚಾ.ನಗರ(ಮೈಸೂರು- ನಂಜನಗೂಡು ಮಾರ್ಗ ೧೮೯೫ ರಲ್ಲೆ ಮಾಡಲಾಗಿತ್ತು) ಕ್ಕೆ ಮೀಟರ ಗೇಜ್ ರೈಲು ಮಾರ್ಗ ಮಾಡಲಾಯಿತು. ಈಗ ಅಂದರೆ ೨೦೦೭ ರಲ್ಲಿ ಇದನ್ನು ಬ್ರಾಡ್ ಗೇಜ್ ಗೆ ಪರಿವರ್ತಿಸುವ ಕಾರ್ಯ ನಡೆಯುತ್ತಿದೆ. ಅಂದರೆ ನಮ್ಮ ಸರ್ಕಾರದಿಂದ ಆಗಬೇಕಾದ ಈ ಕೆಲಸಕ್ಕೆ ಒಂದು ಶತಮಾನವೆ ಬೇಕಾಯಿತು. ಹಾಗದರೆ ನಾವು ಸರಕಾರದಿಂದಲೆ ಎಲ್ಲ ಕೆಲಸಗಳು ನಡೆಯುತ್ತವೆ ಎಂದು ಒಪ್ಪಿಕೊಳ್ಳುವುದು ಎಷ್ಟರ ಮಟ್ಟಿಗೆ ಪ್ರಾಕ್ಟಿಕಲ್ ? ಹಾಗಾದರೆ ಒಂದು ಮಠದ ಸಾಮುದಾಯಿಕ ಸೇವೆ (ಕಮ್ಯೂನಿಟಿ ಸರ್ವಿಸ್) ಯಿಂದ ಸಮಾಜಕ್ಕೆ ಒಳ್ಳೆಯದಾದರೆ ನಾವು ಏಕೆ ಅದನ್ನು ಹೊಗಳದೆ ಹೋದರೂ ಪರವಾಗಿಲ್ಲ ಒಪ್ಪಿಕೊಳ್ಳಬಾರ್ದಾ? ಇನ್ನು ಕೆಲವು ಮಠಗಳು ಗೋ ತಳಿಗಳ ಸಂರಕ್ಷಣೆ(ಶಿವಮೊಗ್ಗ ಜಿಲ್ಲೆಗೆ), 'ಮೂಢನಂಬಿಕೆ' ತೊಲಗಿಸುವುದು(ಚಿತ್ರದುರ್ಗಕ್ಕೆ ಭೇಟಿ ಕೊಡಿ) ಮತ್ತು ಗ್ರಾಮೀಣ(ಗುಡಿ) ಕೈಗಾರಿಕೆಗಳನ್ನು ನಡೆಸಲು ಪ್ರೋತ್ಸಾಹಿಸುವುದು( ದ.ಕ. ಜಿಲ್ಲೆಗೆ ಭೇಟಿ ಕೊಡಿ), ಇಂಥ ಒಳ್ಳೊಳ್ಳೆ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ನಮ್ಮ ಸರ್ಕಾರಗಳೆ ಇವುನ್ನೆಲ್ಲ ಮಾಡಿದ್ದರೆ ಮಠಗಳಿಗೆ ಇವುನ್ನ ಮಾಡಲು ಅವಕಾಶವೆ ಇರುತ್ತಿರಲಿಲ್ಲ. ಈಗಲು 'ದಾಸೋಹ' ದಂತಹ(ಙ್ನಾನ, ಅನ್ನ, ಅಕ್ಷರ) ಉತ್ತಮ ಸಂಸ್ಕೃತಿ ಉಳಿದಿರುವುದು ಈ ನಮ್ಮ ಮಠಗಳಲ್ಲಿ ಅಂದರೆ ರಾಜಕೀಯವಾಗಿ ನಾವು ಏನನ್ನು ಸಾಧಿಸಲು ಸಾಧ್ಯವಾಗಿಲ್ಲವೊ ಅಲ್ಲಿ ಮಠಗಳು ತಮ್ಮನ್ನು ಗುರುತಿಸಿಕೊಂಡಿವೆ. ಇನ್ನೊಂದು ವಿಚಾರ ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕು ....ನಮ್ಮಲ್ಲಿ ಎರಡು ಪಂಥದ ಮಠಗಳಿವೆ.. ಒಂದು ವಿರಕ್ತ ಮಠ, ಇನ್ನೊಂದು ಪಟ್ಟದ ಮಠ.
ಪಟ್ಟದ ಮಠಗಳನ್ನು ನಾವು ಆಧ್ಯಾತ್ಮ ಕೇಂದ್ರಗಳನ್ನಾಗಿ ಪರಿಗಣಿಸಬಾರದು. ಇಂದಿಗೂ ಹಲವು ವಿರಕ್ತ ಮಠಗಳು ಆಧ್ಯಾತ್ಮವನ್ನೆ ಧ್ಯೇಯವನ್ನಾಗಿಸಿಕೊಂಡಿದೆ.
ಪಟ್ಟದ ಮಠಗಳನ್ನು ನಾವು ಒಂದು ಖಾಸಗಿ ಸಂಸ್ಥೆಯಂತೆ ಪರಿಗಣಿಸಬೇಕು ಹಾಗು ಆ ಮಠಾಧೀಶ ಆ ಸಂಸ್ಥೆಯ ಮುಖ್ಯಸ್ಥ ಅಷ್ಟೆ. ಇದನ್ನು ನಮ್ಮ ಜನರು ಅರಿಯಬೇಕು. ಖಾಸಗಿ ಸಂಸ್ಥೆಗಳು ಸ್ವಲ್ಪವಾದರೂ ಲಾಭಕ್ಕಾಗೇ ನಡೆಯುತ್ತವೆ ಎಂಬುದು ನಮಗೆ ತಿಳಿದಿರುವ ವಿಚಾರವೆ. ಇನ್ನು ಮಠಗಳು ಜಾತಿ ರಾಜಕಾರಣ ಮಾಡುತ್ತವೆ ಎಂದು ದೂಷಿಸುತ್ತೇವೆ ಆದರೆ ಇದು ಎಷ್ಟರ ಮಟ್ಟಿಗೆ ಸಾರ್ವತ್ರಿಕ ಸತ್ಯ ಎಂದು ಯೋಚಿಸಬೇಕಾಗುತ್ತದೆ. ಏಕೆಂದರೆ ಮಠಾಧೀಶರು ರಾಜಕೀಯ ಮಾಡಿದರೆ ಖಂಡಿತ ಜನರು ಒಪ್ಪುವುದಿಲ್ಲ( ಇದನ್ನು ನಾನೆ ಕಣ್ಣಾರೆ ಗಮನಿಸಿದ್ದೇನೆ). ಅವರು ಗಳಿಸುವ ಗೌರವವನ್ನು ಕಳೆದುಕೊಳ್ಳುತ್ತಾರೆ ಏಕೆಂದರೆ ಈವತ್ತಿನ ರಾಜಕೀಯ ಎಷ್ಟು ಕೊಳಕಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ನಮ್ಮ ಕೆಲವು ಮುಖಂಡರು ಆ ಜಾತಿಯ ಮಠಾಧೀಶರನ್ನು ಭೇಟಿಯನ್ನು ಮಾಡಿದರೆ ಆ ಜಾತಿಯ ಮತಗಳನ್ನೆಲ್ಲ ಪಡೆಯಬಹುದು ಎಂಬ ಹುಚ್ಚು ಕಲ್ಪನೆಯಿದೆ. ಅದನ್ನೆ ಪತ್ರಿಕೆಗಳೂ ಕೂಡ ಬಿಂಬಿಸುತ್ತವೆ. ಈ ರಾಜಕಾರಣಿಗಳು ಈ ಹುಚ್ಚು ಕಲ್ಪನೆಯಿಂದ ಹೊಸ ಮಠಗಳನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಹುಟ್ಟು ಹಾಕುತ್ತಿದ್ದಾರೆ. ಇದು ನಮ್ಮ ರಾಜಕೀಯದ ದೊಡ್ಡ ದುರಂತ ಹಾಗು ಅಪಾಯಕಾರಿ ಬೆಳವಣಿಗೆ. ಇದನ್ನು ಖಂಡಿತ ನಾವು ಖಂಡಿಸಲೇಬೇಕು. ನಾವು ಸೂಚ್ಯ ಸತ್ಯಗಳನ್ನು(ಇಂಪ್ಲೈಡ್ ಟ್ರೂತ್) ಒಪ್ಪುವ ಮೊದಲು ಅದನ್ನು ವಾಸ್ತವಿಕತೆಯೆಂಬ ಮಸೂರದಿಂದ ನೋಡುವುದು ಸೂಕ್ತವಲ್ಲವೆ? -ಜೈ ಕರ್ನಾಟಕ