ಕಾಡು ಹರಟೆಯಿಂದ ತೊಡಗಿ ಗಂಭೀರ ಚರ್ಚೆಗಳವರೆಗಿನ ಎಲ್ಲಾ ಸಂದರ್ಭಗಳಲ್ಲೂ ಸದ್ಯಕ್ಕೆ ಮಂಗಳೂರಿಗರ ನಡುವೆ ಪ್ರಸ್ತಾಪವಾಗುವ ಒಂದು ಸಾಮಾನ್ಯ ವಿಷಯ ಎಂದರೆ ಮೋಹನಕುಮಾರ ಎಂಬ ಸೈನೈಡ್ ಮೋಹನಾಂಗನ ವಿಷಯ. ಈವರೆಗೆ ಮೀಡಿಯಾಗಳು ನೀಡಿರುವ ಪಟ್ಟಿಯಂತೆ ಈತ 20 ಮಂದಿ ಹೆಣ್ಣು ಮಕ್ಕಳನ್ನು ಕೊಂದಿದ್ದಾನೆ. ಇವನ ಕ್ರೌರ್ಯವನ್ನು ಹೇಗೆ ಖಂಡಿಸಿದರೂ ಸಾಲದು ಎಂದು ಒಪ್ಪಿಕೊಳ್ಳೋಣ. ಆದರೆ ಅವನಿಗೆ ಹೀಗೆ ಕೊಲ್ಲಲು ಸಾಧ್ಯವಾದದ್ದು ಹೇಗೆ?

ಈ ಪ್ರಶ್ನೆಯ ಬಗ್ಗೆ ಯಾರೂ ಹೆಚ್ಚು ಚರ್ಚಿಸಿಲ್ಲ. ಕರಾವಳಿ, ಮಲೆನಾಡಿನ ಜಿಲ್ಲೆಗಳ ಶ್ರೀಮಂತಿಕೆಯ ನೆರಳಿನಲ್ಲಿ ಕಾಣೆಯಾಗಿರುವ ಬಡತನವನ್ನು ಕಂಡುಕೊಂಡವರಿಗೆ ಮೋಹನ ಕುಮಾರನ 'ಸಾಧನೆ' ಯಾವ ಆಶ್ಚರ್ಯವನ್ನೂ ಹುಟ್ಟಿಸುವುದಿಲ್ಲ. ಈತ ಗಮನ ಸೆಳೆದದ್ದು ಎರಡು ಕಾರಣಕ್ಕೆ. ಒಂದು: ಆತ ಹೆಣ್ಣು ಮಕ್ಕಳನ್ನು ವಂಚಿಸುವುದಕ್ಕಷ್ಟೇ ತನ್ನನ್ನು ಸೀಮಿತಗೊಳಿಸದೆ ಅವರನ್ನು ಕೊಂದು ವಂಚನೆಯ ಸಾಕ್ಷ್ಯವನ್ನು ಅಳಿಸಿಹಾಕಲು ತೀರ್ಮಾನಿಸಿದ. ಎರಡು: ಕೊಲ್ಲುವುದಕ್ಕೆ ಸ್ವಲ್ಪ ಯುನೀಕ್ ಎನ್ನಬಹುದಾದ ತಂತ್ರ ಬಳಸಿದ. ಈ ಎರಡನ್ನೂ ಹೊರತು ಪಡಿಸಿದರೆ ನೋಡಿದರೆ ಇಂಥ ಅನೇಕ ಮೋಹನ್ ಕುಮಾರರು ನಮಗೆ ಈ ಪ್ರದೇಶದಲ್ಲಿ ಕಾಣ ಸಿಗುತ್ತಾರೆ.

ನಮ್ಮ ಸಮಾಜದಲ್ಲಿ ಮದುವೆ ಎಂಬ ಸಂಸ್ಥೆಗೆ ಇರುವ ಅನಗತ್ಯ ಮಹತ್ವಕ್ಕೂ ಹೆಣ್ಣು ಮಕ್ಕಳು ಈ ಮೋಹನಾಂಗರಿಗೆ ಬಲಿಯಾಗುವುದಕ್ಕೂ ಹತ್ತಿರದ ಸಂಬಂಧವಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಕರಾವಳಿ ಹೇಗೆ ಹೇಗೋ ಬದಲಾಗಿಬಿಟ್ಟಿದೆ. ಒಂದು ಕಾಲದಲ್ಲಿ ಸೌಹಾರ್ದದ ಬದುಕಿಗೆ ಹೆಸರಾಗಿದ್ದ ಈ ಜಿಲ್ಲೆಗಳು ಈಗ ಕೋಮುವಾದದ ಪ್ರಯೋಗಾಲಯಗಳಾಗಿವೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಇದೇ ಅವಧಿಯಲ್ಲಿ ಈ ಜಿಲ್ಲೆಯ ಆರ್ಥಿಕತೆ ಹೇಗೆಲ್ಲಾ ಬದಲಾಗಿದೆ ಎಂಬುದನ್ನು ಹೆಚ್ಚಿನವರು ಗಮನಿಸಿದಂತೆ ಕಾಣಿಸುವುದಿಲ್ಲ. ಬೀಡಿ ಉದ್ಯಮದ ಹಿಂಜರಿತದೊಂದಿಗೆ ಇಲ್ಲಿ ಆರ್ಥಿಕ ಸ್ವಾತಂತ್ರ್ಯ ಕಳೆದುಕೊಂಡದ್ದು ಹೆಣ್ಣು ಮಕ್ಕಳು. ಸಮಾಜ ತಮ್ಮ ಮೇಲೆ ಹೇರುವ ಮದುವೆ ಎಂಬ ಮೌಲ್ಯವನ್ನು ನೆಗೋಷಿಯೇಟ್ ಮಾಡಲು ಹೆಣ್ಣು ಮಕ್ಕಳಿಗೆ ಬೀಡಿ ಉದ್ಯಮ ಒಂದು ಆಧಾರವಾಗಿತ್ತು. ಎಷ್ಟೋ ಮಂದಿ ತಮ್ಮ ಮದುವೆಯ ಹಣವನ್ನು ತಾವೇ ಒಟ್ಟುಗೂಡಿಸಲೂ ಈ ಉದ್ಯಮ ಸಹಕರಿಸಿತ್ತು. ಅದಕ್ಕಿಂತ ಹೆಚ್ಚಾಗಿ ಮನೆಯಲ್ಲಿದ್ದ ಹೊತ್ತಿನಲ್ಲಿಯೇ ಆಕೆ ಮಾಡುತ್ತಿದ್ದ ದುಡಿಮೆ ಕುಟುಂಬದೊಳಗೇ ಆಕೆಯ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಈಗ ಅದಿಲ್ಲ.

ಮೋಹನ್ ಕುಮಾರ ಕಣ್ಣು ಹಾಕಿರುವುದೆಲ್ಲಾ 'ಮದುವೆಯ ವಯಸ್ಸು ಮೀರುತ್ತಿದೆಯೆಲ್ಲಾ' ಎಂಬ ಅಭದ್ರತೆಯಲ್ಲಿ ಬಳಲುತ್ತಿದ್ದ ಹೆಣ್ಣು ಮಕ್ಕಳನ್ನೇ ಎಂಬುದನ್ನೂ ನಾವಿಲ್ಲಿ ಗಮನಿಸಬೇಕಾಗಿದೆ. ಭಾರತೀಯ ನಾರಿ ಹೇಗಿರಬೇಕೆಂದು ಭಾಷಣ ಮಾಡುವವರೂ, ಬುರ್ಖಾ ಹಾಕುವುದು, ಅದನ್ನು ತೆಗೆಸುವುದು ಹಕ್ಕೆಂದು ವಾದಿಸುವವರು ಸಾಕಷ್ಟು ಇರುವ ನಮ್ಮೂರಿನಲ್ಲಿ 'ಮದುವೆಯಾಗಲಿಲ್ಲ' ಎಂಬ ಅಭದ್ರತೆಯಲ್ಲಿ ಬಳಲುವ ಹೆಣ್ಣು ಮಕ್ಕಳ ಕಷ್ಟ ಮಾತ್ರ ಯಾರಿಗೂ ಅರ್ಥವಾಗುವುದಿಲ್ಲ ಎಂಬುದಕ್ಕೆ ಮೋಹನ್ ಕುಮಾರ್ ಪ್ರಕರಣ ಕನ್ನಡಿ ಹಿಡಿದಿದೆ.

ದೇಶವ್ಯಾಪಿಯಾಗಿ ನಮ್ಮೂರಿನವರನ್ನು ಬುದ್ಧಿವಂತರು ಎಂದು ಕರೆಯುತ್ತಾರೆ. ನಮ್ಮಲ್ಲಿರುವ ವರದಕ್ಷಿಣೆ ಸಮಸ್ಯೆಯ ಆಳ ಅಗಲಗಳನ್ನು ನೋಡಿದರೆ  ನಮಗೆ 'ಬುದ್ಧಿ ಒಂತೆ' ಎಂಬಂತೆ ಕಾಣಿಸುತ್ತದೆ.

http://twitter.com/yaaminy