ಬೆಳಿಗ್ಗೆ ಮನೆಯ ಮುಂದಿರುವ ಪುಟ್ಟ ತೋಟದಲ್ಲಿ ನೀರು ಹಾಯಿಸುತ್ತಿದ್ದೆ. ಗಿಡಗಳ ಮಧ್ಯೆ ಏನೋ ಹೊಲಸು ಕುಳಿತಂತೆನಿಸಿತು. ಅದನ್ನು ತೆಗೆದು ಆಚೆ ಬಿಸಾಡಬೇಕೆಂದು ಕೈಗೆತ್ತಿಕೊಂಡೆ. ಯಾಕೋ ಅದು ವಿಶೇಷವೆನಿಸಿತು. ಇರುವೆಗಳ ರುಂಡ, ಮುಂಡ, ವಿವಿಧ ಎಳೆಗಳ ಗುಂಪೆನ್ನಿಸಿ, ಇರುವೆಗಳ ಶವಗಳ್ಯಾಕೆ ಈ ಪರಿ ಮೆತ್ತಿಕೊಂಡಿವೆ ಎಂದು ಕುತೂಹಲದಿಂದ ಅದನ್ನು ಮನೆಯ ಕಂಪೌಂಡ್ ಗೋಡೆಯ ಮೇಲಿಟ್ಟು ನೋಡಿದೆ. ಅದೊಂದು ಪುಟ್ಟ ಗೂಡೆನಿಸಿತು. ನೀರಿನ ಪೈಪನ್ನಲ್ಲೆ ಬಿಸಾಡಿ ಅದನ್ನು ಸೂಕ್ಷ್ಮವಾಗಿ ನೋಡಿದೆ. ಪುಟ್ಟ ಗೂಡಿನೊಳಗಿನಿಂದ ನಿಧಾನವಾಗಿ ಹುಳುವಿನ ತಲೆ ಹೊರಬಂತು, ಹಾಗೇ ಮೆಲ್ಲನೆ ಗೂಡು ಮುಂದೆ ಸರಿಯತೊಡಗಿದಾಗ ಅಚ್ಚರಿಯೆನಿಸಿತು. ತನ್ನ ಮೈಮೇಲೆ ವಿವಿಧ ಇರುವೆ ಶವಗಳ ತುಣುಕುಗಳು, ಎಳೆಗಳನ್ನು ಹೊತ್ತ ಆ ಹುಳು ಪೂರ್ತಿಯಾಗಿ ಹೊರಬರದೇ ಗೂಡಿನ ಸಮೇತವೇ ತೆವಳತೊಡಗಿತು. ಬೇಗನೇ ಮನೆಯೊಳಗಿನಿಂದ ಕ್ಯಾಮೆರಾ ತಂದು ಕ್ಲಿಕ್ಕಿಸತೊಡಗಿದೆ. ತೆವಳುತ್ತ ಹೊರಟ ಹುಳು ಆಕಸ್ಮಿಕವಾಗಿ ಗೋಡೆಯಿಂದ ಜಾರಿತು. ಗೂಡು ಕೆಳಗೆ ನೇತಾಡುತ್ತಿದ್ದರೂ, ಅದರ ಭಾರವನ್ನೆಲ್ಲ ಹೊತ್ತ ಹುಳು ಗೋಡೆಯ ಅಂಚಿಗೆ ಅಂಟಿಕೊಂಡೇ ಇತ್ತು. ಮುಂದೆ ಅದೇನು ಮಾಡಬಹುದೆಂಬ ಕುತೂಹಲದಿಂದ ಅದನ್ನು ಎತ್ತಿಡದೇ ಗಮನಿಸಿದೆ. ಕ್ಯಾಮೆರಾದ ಕಣ್ಣು ಮಿನುಗುತ್ತಲೇ ಇತ್ತು. ಹರ ಸಾಹಸ ಮಾಡಿದ ಪುಟ್ಟ ಹುಳು ತನ್ನೆಲ್ಲ ಬಲವನ್ನು ಹಾಕಿ ತನ್ನೊಂದಿಗೆ ಪುಟ್ಟ ಗೂಡನ್ನೂ ಮೇಲೆಳೆದುಕೊಂಡಿತು. ಅಬ್ಬಾ! ಎಂಥ ಸಾಹಸ. ಮತ್ತೆ ಹುಳು ಮುಂದುವರೆಯತೊಡಗಿದಾಗ, ಇದು ಏನು? ಯಾಕೆ ಹೀಗೆ? ಎಂ ಪ್ರಶ್ನೆ ತಲೆ ತಿನ್ನತೊಡಗಿತು. 
ಈ ಕುರಿತು ಮಾಹಿತಿ ಕಲೆಹಾಕಿದಾಗ, ಇದನ್ನು ಬ್ಯಾಗ್ ವರ್ಮ್ (ಸಂಚಿ ಹುಳು ಎಂದು ನಾನಿಟ್ಟ ಹೆಸರು)  ಎಂದು ಕೀಟಲೋಕದ ತಜ್ಞರು ಗುರುತಿಸುತ್ತಾರೆ. ಪ್ಸೈಕಿಡಾ ಗುಂಪಿನ ಇದನ್ನು ಚಿಟ್ಟೆ, ಪತಂಗಗಳ ಕುಟುಂಬದಲ್ಲಿ ವರ್ಗೀಕರಿಸಲಾಗಿದೆ. ಚಿಟ್ಟೆ, ಪತಂಗಗಳ ಮೊಟ್ಟೆಗಳು ಲಾರ್ವಾ ಹಂತದಲ್ಲಿದ್ದಾಗ ತಮ್ಮ ಮೈಸುತ್ತ ಗೂಡನ್ನು ನಿರ್ಮಿಸಿಕೊಳ್ಳುವಂತೆಯೇ, ಈ ಪ್ರಭೇದದ ಹುಳುಗಳು ತಮ್ಮ ಮೈಸುತ್ತ ಪುಟ್ಟ ಚೀಲವನ್ನು ನೇಯ್ದುಕೊಳ್ಳುತ್ತವೆ. ಇದಕ್ಕೆ ಇಂಥದೇ ಸಾಮಗ್ರಿ ಬೇಕೆಂದಿಲ್ಲ. ಮಣ್ಣು, ಉಸುಕು, ಒಣಗಿದ ಎಲೆ, ಇರುವೆಯಂತಹ ಜೀವಿಗಳ ತುಣುಕುಗಳು ಏನು ಬೇಕಾದರೂ ನಡೆದೀತು. ತಮ್ಮ ರೇಷ್ಮೆಯಂತಹ ನಯವಾದ ಜೊಲ್ಲಿನಿಂದ ಗೂಡನ್ನು ಹೆಣೆದುಕೊಂಡು ಜೀವನಪೂರ್ತಿ ಅದರಲ್ಲೇ ಜೀವಿಸುತ್ತವೆ. ಇವುಗಳ ಗೂಡುಗಳು ೧ ಸೆಂ.ಮೀ.ನಿಂದ ೧೫ ಸೆಂ.ಮೀ ಉದ್ದವಿರುತ್ತವೆ. ಹುಳುವಿನ ಗಾತ್ರ ಹೆಚ್ಚಾದಂತೆಲ್ಲ ಗೂಡು ಅಥವಾ ಚೀಲವನ್ನು ದೊಡ್ಡದು ಮಾಡಿಕೊಳ್ಳುತ್ತದೆ. ಇವುಗಳ ಆಹಾರ ಗಿಡದ ಎಲೆಗಳೇ. ಹೀಗಾಗಿ ಗಿಡದ ಕಾಂಡಕ್ಕೋ, ಎಲೆಗೋ ಜೋತುಬಿದ್ದಿರುತ್ತವೆ. ಅಥವಾ ಗೋಡೆ, ಬಂಡೆಗಳಿಗೂ ಜೋತುಬಿದ್ದಿರುವುದನ್ನು ಕಾಣಬಹುದುದ್. ಥಟ್ಟನೆ ನೋಡಿದಾಗ ಏನೋ ಹೊಲಸು ಎನಿಸಬಹುದಾದರೂ, ಪಕ್ಷಿಗಳಿಂದ ರಕ್ಷಣೆ ಪಡೆಯಲೂ ಇದು ಸುಲಭ ಉಪಾಯವಾಗಿದೆ.  ಹೆಣ್ಣು ಹುಳು ಅದೇ ಚೀಲದಲ್ಲಿಯೇ ಒಂದು ಸಲಕ್ಕೆ ೫೦೦ರಿಂದ ೧,೬೦೦ರವರೆಗೂ ಮೊಟ್ಟೆಗಳನ್ನಿಡುತ್ತದೆ. ಕೆಲವು ಪ್ರಭೇದಗಳಲ್ಲಿ ಗಂಡು ಹುಳುವಿನೊಂದಿಗೆ ಕೂಡಿದಾಗ ಹೆಣ್ಣು ಮೊಟ್ಟೆಯಿಟ್ಟದೆ, ಕೆಲವೊಂದಕ್ಕೆ ಗಂಡು ಹುಳುವನ್ನು ಕೂಡದೆಯೂ ಮೊಟ್ಟೆಗಳನ್ನಿಡಬಹುದು. ಬ್ಯಾಗ್ ವರ್ಮ್ಸ್‌ಗಳಲ್ಲಿ ಇಂಥದೇ ರೀತಿಯವಾಗಿರಬೇಕೆಂದಿಲ್ಲ, ಸಣ್ಣ ಕಡ್ಡಿಗಳಿಂದ ಗೂಡು ನಿರ್ಮಿಸಿಕೊಳ್ಳಬಹುದು, ಅಥವಾ ಒಣಗಿದ ಎಲೆಗಳಿಂದಾಗಿರಬಹುದು, ಹೀಗೆ ನಾನಾ ವಿಧಗಳಿವೆ. ಏನೆಂದರೂ ಹುಳುಗಳ ಲೋಕವೇ ಅದ್ಭುತ ಅಲ್ಲವೆ?
-ಚಿತ್ರ, ಲೇಖನ-ಸಿದ್ಧರಾಮ ಹಿರೇಮಠ. ಕೂಡ್ಲಿಗಿ
 

ಬೆಳಿಗ್ಗೆ ಮನೆಯ ಮುಂದಿರುವ ಪುಟ್ಟ ತೋಟದಲ್ಲಿ ನೀರು ಹಾಯಿಸುತ್ತಿದ್ದೆ. ಗಿಡಗಳ ಮಧ್ಯೆ ಏನೋ ಹೊಲಸು ಕುಳಿತಂತೆನಿಸಿತು. ಅದನ್ನು ತೆಗೆದು ಆಚೆ ಬಿಸಾಡಬೇಕೆಂದು ಕೈಗೆತ್ತಿಕೊಂಡೆ. ಯಾಕೋ ಅದು ವಿಶೇಷವೆನಿಸಿತು. ಇರುವೆಗಳ ರುಂಡ, ಮುಂಡ, ವಿವಿಧ ಎಳೆಗಳ ಗುಂಪೆನ್ನಿಸಿ, ಇರುವೆಗಳ ಶವಗಳ್ಯಾಕೆ ಈ ಪರಿ ಮೆತ್ತಿಕೊಂಡಿವೆ ಎಂದು ಕುತೂಹಲದಿಂದ ಅದನ್ನು ಮನೆಯ ಕಂಪೌಂಡ್ ಗೋಡೆಯ ಮೇಲಿಟ್ಟು ನೋಡಿದೆ. ಅದೊಂದು ಪುಟ್ಟ ಗೂಡೆನಿಸಿತು. ನೀರಿನ ಪೈಪನ್ನಲ್ಲೆ ಬಿಸಾಡಿ ಅದನ್ನು ಸೂಕ್ಷ್ಮವಾಗಿ ನೋಡಿದೆ. ಪುಟ್ಟ ಗೂಡಿನೊಳಗಿನಿಂದ ನಿಧಾನವಾಗಿ ಹುಳುವಿನ ತಲೆ ಹೊರಬಂತು, ಹಾಗೇ ಮೆಲ್ಲನೆ ಗೂಡು ಮುಂದೆ ಸರಿಯತೊಡಗಿದಾಗ ಅಚ್ಚರಿಯೆನಿಸಿತು. ತನ್ನ ಮೈಮೇಲೆ ವಿವಿಧ ಇರುವೆ ಶವಗಳ ತುಣುಕುಗಳು, ಎಳೆಗಳನ್ನು ಹೊತ್ತ ಆ ಹುಳು ಪೂರ್ತಿಯಾಗಿ ಹೊರಬರದೇ ಗೂಡಿನ ಸಮೇತವೇ ತೆವಳತೊಡಗಿತು. ಬೇಗನೇ ಮನೆಯೊಳಗಿನಿಂದ ಕ್ಯಾಮೆರಾ ತಂದು ಕ್ಲಿಕ್ಕಿಸತೊಡಗಿದೆ. ತೆವಳುತ್ತ ಹೊರಟ ಹುಳು ಆಕಸ್ಮಿಕವಾಗಿ ಗೋಡೆಯಿಂದ ಜಾರಿತು. ಗೂಡು ಕೆಳಗೆ ನೇತಾಡುತ್ತಿದ್ದರೂ, ಅದರ ಭಾರವನ್ನೆಲ್ಲ ಹೊತ್ತ ಹುಳು ಗೋಡೆಯ ಅಂಚಿಗೆ ಅಂಟಿಕೊಂಡೇ ಇತ್ತು. ಮುಂದೆ ಅದೇನು ಮಾಡಬಹುದೆಂಬ ಕುತೂಹಲದಿಂದ ಅದನ್ನು ಎತ್ತಿಡದೇ ಗಮನಿಸಿದೆ. ಕ್ಯಾಮೆರಾದ ಕಣ್ಣು ಮಿನುಗುತ್ತಲೇ ಇತ್ತು. ಹರ ಸಾಹಸ ಮಾಡಿದ ಪುಟ್ಟ ಹುಳು ತನ್ನೆಲ್ಲ ಬಲವನ್ನು ಹಾಕಿ ತನ್ನೊಂದಿಗೆ ಪುಟ್ಟ ಗೂಡನ್ನೂ ಮೇಲೆಳೆದುಕೊಂಡಿತು. ಅಬ್ಬಾ! ಎಂಥ ಸಾಹಸ. ಮತ್ತೆ ಹುಳು ಮುಂದುವರೆಯತೊಡಗಿದಾಗ, ಇದು ಏನು? ಯಾಕೆ ಹೀಗೆ? ಎಂ ಪ್ರಶ್ನೆ ತಲೆ ತಿನ್ನತೊಡಗಿತು. ಈ ಕುರಿತು ಮಾಹಿತಿ ಕಲೆಹಾಕಿದಾಗ, ಇದನ್ನು ಬ್ಯಾಗ್ ವರ್ಮ್ (ಸಂಚಿ ಹುಳು ಎಂದು ನಾನಿಟ್ಟ ಹೆಸರು)  ಎಂದು ಕೀಟಲೋಕದ ತಜ್ಞರು ಗುರುತಿಸುತ್ತಾರೆ. ಪ್ಸೈಕಿಡಾ ಗುಂಪಿನ ಇದನ್ನು ಚಿಟ್ಟೆ, ಪತಂಗಗಳ ಕುಟುಂಬದಲ್ಲಿ ವರ್ಗೀಕರಿಸಲಾಗಿದೆ. ಚಿಟ್ಟೆ, ಪತಂಗಗಳ ಮೊಟ್ಟೆಗಳು ಲಾರ್ವಾ ಹಂತದಲ್ಲಿದ್ದಾಗ ತಮ್ಮ ಮೈಸುತ್ತ ಗೂಡನ್ನು ನಿರ್ಮಿಸಿಕೊಳ್ಳುವಂತೆಯೇ, ಈ ಪ್ರಭೇದದ ಹುಳುಗಳು ತಮ್ಮ ಮೈಸುತ್ತ ಪುಟ್ಟ ಚೀಲವನ್ನು ನೇಯ್ದುಕೊಳ್ಳುತ್ತವೆ. ಇದಕ್ಕೆ ಇಂಥದೇ ಸಾಮಗ್ರಿ ಬೇಕೆಂದಿಲ್ಲ. ಮಣ್ಣು, ಉಸುಕು, ಒಣಗಿದ ಎಲೆ, ಇರುವೆಯಂತಹ ಜೀವಿಗಳ ತುಣುಕುಗಳು ಏನು ಬೇಕಾದರೂ ನಡೆದೀತು. ತಮ್ಮ ರೇಷ್ಮೆಯಂತಹ ನಯವಾದ ಜೊಲ್ಲಿನಿಂದ ಗೂಡನ್ನು ಹೆಣೆದುಕೊಂಡು ಜೀವನಪೂರ್ತಿ ಅದರಲ್ಲೇ ಜೀವಿಸುತ್ತವೆ. ಇವುಗಳ ಗೂಡುಗಳು ೧ ಸೆಂ.ಮೀ.ನಿಂದ ೧೫ ಸೆಂ.ಮೀ ಉದ್ದವಿರುತ್ತವೆ. ಹುಳುವಿನ ಗಾತ್ರ ಹೆಚ್ಚಾದಂತೆಲ್ಲ ಗೂಡು ಅಥವಾ ಚೀಲವನ್ನು ದೊಡ್ಡದು ಮಾಡಿಕೊಳ್ಳುತ್ತದೆ. ಇವುಗಳ ಆಹಾರ ಗಿಡದ ಎಲೆಗಳೇ. ಹೀಗಾಗಿ ಗಿಡದ ಕಾಂಡಕ್ಕೋ, ಎಲೆಗೋ ಜೋತುಬಿದ್ದಿರುತ್ತವೆ. ಅಥವಾ ಗೋಡೆ, ಬಂಡೆಗಳಿಗೂ ಜೋತುಬಿದ್ದಿರುವುದನ್ನು ಕಾಣಬಹುದುದ್. ಥಟ್ಟನೆ ನೋಡಿದಾಗ ಏನೋ ಹೊಲಸು ಎನಿಸಬಹುದಾದರೂ, ಪಕ್ಷಿಗಳಿಂದ ರಕ್ಷಣೆ ಪಡೆಯಲೂ ಇದು ಸುಲಭ ಉಪಾಯವಾಗಿದೆ.  ಹೆಣ್ಣು ಹುಳು ಅದೇ ಚೀಲದಲ್ಲಿಯೇ ಒಂದು ಸಲಕ್ಕೆ ೫೦೦ರಿಂದ ೧,೬೦೦ರವರೆಗೂ ಮೊಟ್ಟೆಗಳನ್ನಿಡುತ್ತದೆ. ಕೆಲವು ಪ್ರಭೇದಗಳಲ್ಲಿ ಗಂಡು ಹುಳುವಿನೊಂದಿಗೆ ಕೂಡಿದಾಗ ಹೆಣ್ಣು ಮೊಟ್ಟೆಯಿಟ್ಟದೆ, ಕೆಲವೊಂದಕ್ಕೆ ಗಂಡು ಹುಳುವನ್ನು ಕೂಡದೆಯೂ ಮೊಟ್ಟೆಗಳನ್ನಿಡಬಹುದು. ಬ್ಯಾಗ್ ವರ್ಮ್ಸ್‌ಗಳಲ್ಲಿ ಇಂಥದೇ ರೀತಿಯವಾಗಿರಬೇಕೆಂದಿಲ್ಲ, ಸಣ್ಣ ಕಡ್ಡಿಗಳಿಂದ ಗೂಡು ನಿರ್ಮಿಸಿಕೊಳ್ಳಬಹುದು, ಅಥವಾ ಒಣಗಿದ ಎಲೆಗಳಿಂದಾಗಿರಬಹುದು, ಹೀಗೆ ನಾನಾ ವಿಧಗಳಿವೆ. ಏನೆಂದರೂ ಹುಳುಗಳ ಲೋಕವೇ ಅದ್ಭುತ ಅಲ್ಲವೆ?

-ಚಿತ್ರ, ಲೇಖನ-ಸಿದ್ಧರಾಮ ಹಿರೇಮಠ. ಕೂಡ್ಲಿಗಿ