ಸರಿಸಿಬಿಡು ಮೂಢಮನ ಆವರಿತ ಪೊರೆಯಾ|

ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು||

ರೂಢಿರಾಡಿಯಡಿ ಸಿಲುಕಿ ತೊಳಲಾಡುತಿಹೆ ನಾನು|

ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು||


 

ಬಲ್ಲಿದರ ನುಡಿಕೇಳಿ ನೇರಮಾರ್ಗದಿ ನಡೆದೆ|

ಬಸವಳಿದಿದೆ ಮನವು ಕಷ್ಟಗಳ ಕೋಟಲೆಗೆ ||

ಅರಿಗಳಾರರ ಬಂದಿ ದಿಕ್ಕೆಟ್ಟು ಕುಳಿತಿರುವೆ|

ಸದ್ಗುರುವೆ ಕೃಪೆದೋರಿ ಹಿಡಿದೆತ್ತಿ ಸಂತಯಿಸು||


 

ಪಂಡಿತನು ನಾನಲ್ಲ ಪಾಂಡಿತ್ಯವೆನಗಿಲ್ಲ|

ಒಳಮನದ ನುಡಿಯೊಂದೆ ಆಸರೆಯು ನನಗೆಲ್ಲ||

ಹುಲುಮನುಜ ನಾನಾಗಿ ಭಾವಬಂಧಿಯು ನಾನು|

ಸಮಚಿತ್ತ ಕರುಣಿಸೈ ನೆಮ್ಮದಿಯ ನೀನೀಡು||

**********************

-ಕ.ವೆಂ.ನಾಗರಾಜ್.

(ನನ್ನ ಈ ರಚನೆಯನ್ನು 'ವೇದಸುಧೆ' ಅಂತರ್ಜಾಲ ತಾಣದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶ್ರೀಮತಿ ಲಲಿತಾ ರಮೇಶರು ಹಾಡಿದ್ದು, ಇದನ್ನು ___LINK_OPEN_href="http://vedasudhe.blogspot.com/2011/01/blog-post_06.html"___http://vedasudhe.blogspot.com/2011/01/blog-post_06.html  ಇಲ್ಲಿ ಕೇಳಬಹುದು.)