ಆದರ್ಶವಾದಗಳಿಂದ ಹೊರಗುಳಿದು ಯಾವುದೇ ಪ್ರಭಾವಗಳಿಗೊಳಪಡದೆ ಒಂದು ಚಿತ್ರ ಮಾಡಲು ಅತಿ ಸಹನೆ ಮತ್ತು ಕೇವಲ ಚಿತ್ರದೆಡೆಗಿನ ನಿಷ್ಠೆ ಬೇಕು. ವ್ಯಕ್ತಿಗತ ಆದರ್ಶಗಳನ್ನು ಬದಿಗಿಟ್ಟು, ಚಿತ್ರವನ್ನು ರೂಪಿಸಿ, ಸೀಮಿತ ನಿಲುವುಗಳನ್ನು ಮೀರಿ ಅರ್ಥ ಮಾಡಿಸುವುದಿದೆಯಲ್ಲ ಅದು ಸಿನೆಮಾ ಮಾಡುವ ನಿಜವಾದ ಕಲೆ ಹಾಗು ಆ ತರಹದ ಪ್ರಯತ್ನ ಯಶಸ್ವಿಯಾದರೆ ಅದು ಚಿತ್ರಕ್ಕೆ ದೊರಕುವ ನಿಜವಾದ ಮನ್ನಣೆ. ಹೀಗೆ ತಯಾರಾಗಿರುವ ಚಿತ್ರವನ್ನಷ್ಟೇ ರೆಫರೆನ್ಸ್ ನಲ್ಲಿಟ್ಟುಕೊಂಡು ಮಾತಾನಾಡಲಿಕ್ಕಾಗುವ, ಹಲವಾರು ದೃಷ್ಟಿಕೋನಗಳಿಗೆ ತೆರೆದುಕೊಂಡಂತೆ ಇರುವ ಶಾಮ್ ಬೆನೆಗಲ್ ನಿರ್ದೇಶನದ, ಸ್ಮಿತಾ ಪಾಟೀಲ್ ನಟಿಸಿರುವ, ೧೯೭೭ ರಲ್ಲಿ ನಿರ್ಮಿತವಾದ ಚಿತ್ರ ’ಭೂಮಿಕ’. ಇಲ್ಲಿ ಯಾರೂ ಕೇವಲ ಒಳ್ಳೆಯವರು ಮತ್ತು ಕೇವಲ ಕೆಟ್ಟವರಲ್ಲ. ಬದುಕುವ ರೀತಿಯಲ್ಲಿ ಅಲ್ಲಿನ ಸಂಧರ್ಭಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಪಾತ್ರಗಳು. ಮನುಷ್ಯನ ಬೇಸಿಕ್ ಇನ್ಸ್ಟಿಂಕ್ಟ್ ಗಳಾದ ಆಹಾರ ನೀರು ಮತ್ತು ಮೈಥುನ ಇವುಗಳಿಗೆ ಸಂಬಂಧಿಸಿದಂತೆ ಹುಟ್ಟುವ ಇಂಪಲ್ಸಿವ್ ರೆಸ್ಪಾನ್ಸ್ ಗಳಾದ ಸೇಡು, ಕೋಪ, ಅನುಮಾನಗಳನ್ನು ಹತ್ತಿರವೆನಿಸುವಂತೆ ಎಲ್ಲಿಯೂ ನಾಟಕೀಯವಾಗಿಸದೆ ಅಬ್ಸ್ಟ್ರಾಕ್ಟ್ ಹೋಲಿಕೆಗಳನ್ನಿಟ್ಟು ನಮಗೆ ಕಟ್ಟಿಕೊಡುವುದೇ ಈ ಚಿತ್ರದ ವಿಶೇಷ.

ಹಿಂದಿಯಲ್ಲಿನ ಭೂಮಿಕಾ, ಕನ್ನಡದ ’ಭೂಮಿಕೆ’ ಅಂದರೆ ಪಾತ್ರ. ಒಬ್ಬ ಯಶಸ್ವೀ ನಟಿ ಜೀವನದಲ್ಲಿ ನಿರ್ವಹಿಸಬೇಕಾಗಿ ಬರುವ ಹಲವಾರು ಪಾತ್ರಗಳು,ಆಕೆಯ ಜೀವನದ ಪ್ರಮುಖ ಘಟ್ಟಗಳಲ್ಲಿ ಬದಲಾಗುತ್ತಾ ಸಾಗುವ ಆಕೆಯ ಭೂಮಿಕೆ. ಕತೆ ಸರಳವಾಗಿದೆ ಮತ್ತು ಎಳೆ ಎಳೆಯಾಗಿ ಬಿಚ್ಚಿಕೊಳ್ಳುತ್ತ ಪ್ರತಿಯೊಂದು ಪಾತ್ರವೂ ಸಂಧರ್ಭಗಳಲ್ಲೇ ಪರಿಚಯಿಸಲ್ಪಡುತ್ತದೆ . ಸತಿ ಸಾವಿತ್ರಿ, ಸೀತೆ, ಖತ್ತಿ ಹಿಡಿದು ಯುದ್ಧ ಮಾಡುವ, ನ್ಯಾಯ ದೊರಕಿಸಿಕೊಡಿ ಎಂದು ಅಸಹಾಯಕಳಂತೆ ಕೇಳುವ, ಹಾಡೊಂದಕ್ಕೆ ಮೈ ಚಳಿ ಬಿಟ್ಟು ವೇದಿಕೆಯ ಮೇಲೆ ಕುಣಿಯುವ ಹೀಗೆ ಹಲವಾರು ಪಾತ್ರಗಳಲ್ಲಿ ನಟಿಸುತ್ತಿರುವ ನಟಿಯೊಬ್ಬಳು ತನ್ನ ವೈಯಕ್ತಿಕ ಜೀವನದಲ್ಲೂ ಮಗಳಾಗಿ, ಪ್ರೇಯಸಿಯಾಗಿ, ಹೆಂಡತಿಯಾಗಿ, ಜೊತೆಗಾರ್ತಿಯಾಗಿ, ತಾಯಿಯಾಗಿ ಪಾತ್ರ ಬದಲಾಯಿಸುತ್ತಿರುತ್ತಾಳೆ. ಸಿನಿಮಾದಲ್ಲಿ ಆಕೆಯ ಜೊತೆಯಿರುವ ನಾಯಕ, ನಿಜ ಜೀವನದಲ್ಲಿ ಸುಳಿಯುವ ಹಲವು ಗಂಡಸರ ಪ್ರಭಾವ, ಅದರಿಂದ ಬದಲಾಗುವ ಆಕೆಯ ಮನಸ್ಥಿತಿ, ತನ್ನ ಗೂಡು ಕಟ್ಟಿಕೊಳ್ಳಬೇಕೆಂಬ ಆಕೆಯ ಹಂಬಲ, ಸಾಧ್ಯವಾಗದಾಗ ಆಗುವ ತೊಳಲಾಟ, ಸಂಸಾರ ಬಂಧನದಲ್ಲೂ ಆಕೆ ಬಯಸುವ ವೈಯಕ್ತಿಕ ಸ್ವಾತಂತ್ರ್ಯ ಇದನ್ನೆಲ್ಲಾ ಒಳಗೊಂಡ ಒಂದು ಪ್ರಬುದ್ದ ಕತೆ.

ಉಷಾ ಎಂಬ ಮುಗ್ಧ ಹುಡುಗಿಯ ಜೀವನ ಕಥೆಯನ್ನು ಹೇಳ ತೊಡಗುವ ನಿರ್ದೇಶಕ ಶುರುವಿನಲ್ಲೇ ಆಕೆಯ ಹಾಲಿ ಜೀವನದ ಪರಿಚಯ ಮಾಡಿಸುತ್ತಾರೆ. ಫ಼ಿಲ್ಮ್ ಸೆಟ್ ಒಂದರಲ್ಲಿ ಮರಾಠಿ ಹಾಡಿಗೆ ಹೆಜ್ಜೆ ಹಾಕುತ್ತಿದ್ದ ಉಷಾ (ನಾಯಕ ನಟಿ, ಮುಖ್ಯ ಚಿತ್ರದಲ್ಲೂ ಹಾಗೂ ಸಿನೆಮಾದಲ್ಲಿ ಆಕೆ ನಟಿಸುವ ಚಿತ್ರದಲ್ಲೂ!) ಶೂಟಿಂಗ್ ಮುಗಿಸಿ ಮನೆಗೆ ಹೊರಟಾಗ ಆಕೆಯ ಸಹನಟ ಮನೆ ತಲುಪಿಸುತ್ತಾನೆ, ಅದನ್ನು ಬಾಲ್ಕನಿಯಿಂದಲೇ ನಿರುಕಿಸುತ್ತಿದ್ದ ಉಷಾಳ ಗಂಡ ಮನೆಗೆ ಬರುತ್ತಿದ್ದಂತೆ ಆಕೆಯ ಮೇಲೆ ಹರಿಹಾಯುತ್ತಾನೆ. ಜಗಳ ಮುಂದುವರೆದು ತಕ್ಷಣ ಮನೆಬಿಟ್ಟು ಹೊರಟ ಆಕೆ ಅದೇ ಸಹನಟನ ಸಹಾಯದಿಂದ ಹೋಟೇಲ್ ರೂಮಿನಲ್ಲಿ ತಂಗುತ್ತಾಳೆ. ಹೀಗೆ ಪಾತ್ರಗಳ ಮನೋವೃತ್ತಿಯನ್ನು ದೃಶ್ಯಗಳಲ್ಲಿ ವಿವರಿಸುತ್ತ, ಮಾತೇ ಇಲ್ಲದೆ ಕೇವಲ ದೃಶ್ಯಗಳಿಂದಲೇ ಕತೆ ಹೇಳುತ್ತಾ ಸಾಗುತ್ತದೆ. ಕುಡುಕ ಅಪ್ಪನ ಪ್ರೀತಿಯ ಮಗಳಾದ ಉಷಾ ಅಜ್ಜಿಯಿಂದ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿರುತ್ತಾಳೆ. ತಂದೆ ಸತ್ತನಂತರ ಸಂಬಂಧಿಕನ ಸಲಹೆಯಂತೆ ಉಷಾಳ ಅಮ್ಮ ಆಕೆಯನ್ನು ಸಿನಿಮಾ ಜಗತ್ತಿಗೆ ಪರಿಚಯಿಸಲು ಒಪ್ಪುತ್ತಾಳೆ. ಸ್ತ್ರೀಯ ಹಲವಾರು ಮುಖಗಳನ್ನು ಪ್ರಮುಖಿಸುವ ಪಾತ್ರಗಳನ್ನು ನಿರ್ವಹಿಸುತ್ತಲೇ ತನ್ನ ನಿಜ ಜೀವನದ ಘಟನೆಗಳಲ್ಲೂ ಪಾತ್ರವನ್ನು ಬದಲಾಯಿಸುತ್ತಾ ಸಾಗುತ್ತಾಳೆ. ಸ್ವಭಾವತಃ ಹಠಮಾರಿಯಾದ ಉಷಾ ಅಮ್ಮನ ಮೇಲಿನ ಕೋಪಕ್ಕೆ, ಆಕೆ ಬೇಡವೆಂದರೂ, ಸಿನಿಮಾ ಸೇರಲು ತನಗೆ ಸಹಾಯ ಮಾಡಿದ ಆ ಸಂಬಂಧಿಕನನ್ನೇ ಮದುವೆಯಾಗುತ್ತಾಳೆ. ಮುಂದೆ ಆಕೆ ಅಂದುಕೊಂಡಂತೆ ಆತ ಆಕೆಯ ಜವಬ್ದಾರಿಯನ್ನು ತೆಗೆದುಕೊಳ್ಳದೆ ಸಿನಿಮಾ ನಟನೆಯಲ್ಲಿ ಮುಂದುವರೆಯುವಂತೆ ಸೂಚಿಸುತ್ತಾನೆ.

ಪ್ರತಿ ವಿಷಯದಲ್ಲೂ ಗಂಡನಿಂದ ನಿರಾಶಳಾಗುವ ಉಷಾ ಆತನ ಅನುಮಾನ ಪ್ರವೃತ್ತಿಯ, ಕೀಳರಿಮೆಯ ಗುಣದಿಂದ ಬೇಸತ್ತು ಹೋಗಿರುತ್ತಾಳೆ. ಪರಿಸ್ಥಿತಿ ಹೇಗಿದ್ದರೂ ತನ್ನ ಮಗಳಿಗಾಗಿ ಸಂಸಾರ ಉಳಿಸಿಕೊಳ್ಳುವ ಹರಸಾಹಸ ನಡೆಸುತ್ತಿರುತ್ತಲೇ ಮನೆ ಬಿಟ್ಟು ಹೋಗುವ, ಹೋಗಿ ಮತ್ತೆ ಬಂದು ಸೇರುವ ಬೆದರಿಕೆಗಳನ್ನೊಡ್ಡಿ ಗಂಡನನ್ನು ಸಂಭಾಳಿಸುತ್ತಿರುತ್ತಾಳೆ. ಸ್ವಚ್ಛಂದ ಹಕ್ಕಿಯಂತೆ ಇದ್ದ ಆಕೆಯ ಬಾಳು ಮದುವೆಯ ನಂತರ ಪಂಜರದ ವಾಸವಾಗುತ್ತದೆ. ಪ್ರತಿಯೊಂದಕ್ಕು ಆಕ್ಷೇಪಿಸುವ ಗಂಡನನ್ನು ಸಹಿಸುತ್ತಲೇ, ತನ್ನ ಬಗ್ಗೆ ಅಪಾರ ಪ್ರೇಮವಿರಿಸಿಕೊಂಡಿರುವ ಸಹನಟನು ಮದುವೆಯಾಗದೆ ತನಗಾಗೇ ಕಾಯುತ್ತಿದ್ದಾನೆಂದು ತಿಳಿಯುತ್ತದೆ. ’ನೀನೊಬ್ಬನೆ, ನನ್ನಿಂದ ಏನನ್ನೂ ಕೇಳದೆ ಕೇವಲ ಕೊಟ್ಟಿರುವೆ, ನಿನ್ನ ಜೊತೆ ಬಂದು ನಿನ್ನನ್ನೂ ಕಳೆದುಕೊಳ್ಳುವ ಇಷ್ಟ ನನಗಿಲ್ಲ’ ಎಂದು ನಿರಾಕರಿಸುತ್ತಾಳೆ. ಅನುಮಾನ ಪ್ರವೃತ್ತಿಯ ಗಂಡ, ಎರಡನೆ ಮಗು ತನ್ನದಲ್ಲ ಎಂದು ಅದನ್ನು ತೆಗೆಸಿಯೇ ತೀರಿದಾಗ ತೀರ ರೋಸಿಹೋಗಿ ಗಂಡನ ಮೇಲಿನ ಸೇಡಿನಿಂದಲೇ ಮತ್ತೊಬ್ಬನನ್ನು ಕೂಡುತ್ತಾಳೆ! ಆತ ನಿರ್ದೇಶಕ, ವಾಸ್ತವ್ಯವನ್ನು ನಿರ್ಲಕ್ಷಿಸಿ ಅತಿರೇಕದ ಎಮೋಶನ್ಗಳಿಗಷ್ಟೇ ಉದ್ವೇಗದಿಂದ ಸ್ಪಂದಿಸುವ ಜನರನ್ನು ಮೂರ್ಖರಂತೆ ಕಾಣುವ, ಅವರ ದುರ್ಬಲತೆಯನ್ನು ಬಳಸಿಕೊಳ್ಳುವವ. ಜೀವನದ ಬಗ್ಗೆ ಆತನ ದೃಷ್ಟಿ, ವಾಸ್ತವತೆಯ ಬಗ್ಗೆ ಆತನ ಒಲವು, ಎಲ್ಲವನ್ನು ಲಾಜಿಕಲ್ ಚೌಕಟ್ಟಿನಲ್ಲಿಟ್ಟು ನೋಡುವ ಆತನ ಪ್ರವೃತ್ತಿಯಿಂದ ಉಷಾ ಆಯಸ್ಕಾಂತದಂತೆ ಸೆಳೆಯಲ್ಪಡುತ್ತಾಳೆ. ಸುಖದ ಉನ್ಮತ್ತತೆಯಲ್ಲೇ ಸತ್ತುಬಿಡಬೇಕೆಂದು ನಿರ್ಧರಿಸುವ ಇಬ್ಬರೂ ಸಾಯಲಾಗದೆ ದೂರಾಗುತ್ತಾರೆ. ಅಲ್ಲಿಂದ ಮತ್ತೆ ಪಾತ್ರ ಬದಲಿಸುವ ಉಷಾ, ಹೆಣ್ಣು ತನ್ನ ಸಂಪೂರ್ಣ ಜವಬ್ಧಾರಿಯೆಂದು ಪರಿಗಣಿಸುವ, ತಾನು ಆಕೆಯ ಸಂಪೂರ್ಣ ನಿಗಾ ವಹಿಸುವವನು ಎಂದು ನಂಬುವ ಗೃಹಸ್ಥನೊಬ್ಬನೊಂದಿಗೆ ಆತನ ಮನೆಯಲ್ಲೇ ಇರ ತೊಡಗುತ್ತಾಳೆ. ಗೃಹಸ್ಥನ ಹೆಂಡತಿ ಖಾಯಿಲೆಯಾಗಿ ವರ್ಷಗಳಿಂದ ಹಾಸಿಗೆ ಹಿಡಿದು ಮಲಗಿರುತ್ತಾಳೆ. ಅವರಿಗೊಂದು ಪುಟ್ಟ ಮಗು. ಇಲ್ಲೇ ತನಗೆ ಸರ್ವಸುಖ ಜೀವನ ಎಂದುಕೊಳ್ಳುತ್ತಿರುವಾಗಲೇ ಆ ಗೃಹಸ್ಥನ ಹೆಂಡತಿಯ ಜೊತೆ ಪರಿಚಯ ಬೆಳೆಯುತ್ತದೆ. ತನ್ನ ಗಂಡನ ಸಖಿ ಇವಳು ಎಂದು ತಿಳಿದಿದ್ದು ಆಕೆಯೊಂದಿಗೆ ಪರಿಚಯ ಮುಂದುವರೆಸುವ ಆ ಮಹಿಳೆ, ಗೃಹಸ್ಥನು ಹೆಂಡತಿಯನ್ನು ಹೊರಗೆ ಕಳಿಸಲಿಚ್ಛಿಸದ, ಹೆಣ್ಣು ಬಂಧನದೊಳಗೆ ಇರಲಷ್ಟೇ ಅರ್ಹಳು ಎನ್ನುವ ಮನೋಭಾವದವನು ಎಂದು ತಿಳಿದು ಅವನಿಂದ ದೂರಾಗ ಬಯಸುವ ಉಷಾಗೆ ’ನೀ ಇಲ್ಲಿಂದ ಹೊರಹೋದರು ಅಂತ ವ್ಯತ್ಯಾಸವೇನು ಆಗದು, ಇಲ್ಲಿಂದ ಹೊರಹೋಗಿ ನೀನು ಮತ್ತೊಬ್ಬನೊಂದಿಗೆ ಇರಬಹುದು, ಹಾಸಿಗೆ ಬದಲಾಗುತ್ತವೆ, ಆದರೆ ಅವನೂ ಗಂಡಸೇ’ ಎಂದು ಹೇಳಿ ಎಚ್ಚರಿಸುತ್ತಾಳೆ. ತನ್ನ ಗಂಡನ ನೆರವು ಪಡೆದು ಉಷಾ ಅಲ್ಲಿಂದ ಹೊರಬೀಳುತ್ತಾಳೆ.
 
ಗೃಹಸ್ಥನಿಂದ ಬಿಡಿಸಿ ವಾಪಾಸು ಕರೆದು ತಂದ ಉಷಾಳನ್ನು ಆಕೆಯ ಗಂಡ, ’ನಾವಿಬ್ಬರು ಎಲ್ಲ ಮರೆತು ಒಟ್ಟಿಗಿರೋಕೆ ಆಗೋಲ್ವೆ?’ ಎಂದು ತನ್ನನ್ನೇ ಎಂಬಂತೆ ಕೇಳಿಕೊಳ್ಳುತ್ತಾನೆ. ಆಗುವುದಿಲ್ಲ ಎಂದು ಇಬ್ಬರಿಗೂ ಮನವರಿಕೆಯಾಗಿ ದೂರವೇ ಉಳಿಯಲು ತೀರ್ಮಾನಿಸುತ್ತಾರೆ. ತನ್ನ ಜೀವನದ ಅನೇಕ ಪಾತ್ರಗಳನ್ನು ಕುರಿತು ಆಲೋಚಿಸುತ್ತಿರುವಾಗಲೇ ಅಷ್ಟು ವರ್ಷ ದೂರವಿದ್ದ ಮಗಳು ತಾನು ತಾಯಿಯಾಗುತ್ತಿರುವ ವಿಷಯ ತಿಳಿಸುತ್ತಾಳೆ, ಇದನ್ನು ಕೇಳುತ್ತಲೇ ಗಾಬರಿಯಾಗುವ ಉಷಾ, ’ಹೆಣ್ಣಿಗೇ ಶೀಲವೇ ಮುಖ್ಯ ಹೀಗೇಕೆ ಮಾಡಿಕೊಂಡೆ?!’ ಎಂದು ಇನ್ನು ಏನೇನೋ ಬಡಬಡಿಸುತ್ತಿರುವಾಗಲೇ, ’ಅಮ್ಮ ನೀನಿನ್ನು ತುಂಬಾ ಫಿಲ್ಮೀ ಕಣೇ, ನನ್ನ ಮದುವೆ ಆಗಿದೆ, ಈಗಲಾದರೂ ಸಮಧಾನ ಮಾಡಿಕೋ’ ಎಂದಂದು ಮಗಳು ಜೋರಾಗಿ ನಗುತ್ತಾಳೆ. ಹಠಾತ್ತನೆ ತಾನು ತಾಯಿಯಾಗಿ ಮಗಳ ರಕ್ಷಣೆಗೆ ನಿಂತು ಬಿಟ್ಟದ್ದು ಉಷಾಳಿಗೆ, ಹಾಗು ಸಿನೆಮಾ ನೋಡುತ್ತಿರುವ ನಮಗೂ ಒಂದೇ ಬಾರಿಗೆ ಹೊಳೆಯುತ್ತದೆ! ತನ್ನ ಜೊತೆ ಬಂದಿದ್ದುಬಿಡು ಎಂದು ಮಗಳು ಕರೆದರೂ ಹೋಗದೆ ಒಂಟಿಯಾಗಿಯೇ ಉಳಿಯಲು ಬಯಸುತ್ತಾಳೆ ಉಷಾ. ಹಿಂದೆಂದೋ ಮರೆತಿದ್ದ, ಆಕೆಗಾಗಿ ಮದುವೆಯಾಗದೇ ಉಳಿದ ಸಹನಟ ಮತ್ತೆ ಕರೆ ಮಾಡುತ್ತಾನೆ, ತೆರೆ ಬೀಳುತ್ತದೆ ಮತ್ತು ಉಷಾ ಜೀವನದ ಇನ್ನೊಂದು ಅಂಕಕ್ಕೆ ತಯಾರಾಗುತ್ತಿರುತ್ತಾಳೆ!

ಚಿತ್ರದ ನಿರ್ದೇಶಕ ಸ್ತ್ರೀ ಸಂವೇದನೆಗಳ ಸೂಕ್ಷ್ಮಗಳನ್ನು ಎಷ್ಟು ನಾಜೂಕಾಗಿ ತಾಗಿದ್ದಾರೆಂದರೆ ಯಾರಿಗೂ ಸುಲಭಕ್ಕೆ ಸಿಗದ ಒಳ ಅರ್ಥಗಳನ್ನು ಹೊಮ್ಮಿಸಿ ಹಾಗೆಯೇ ಘನಘೋರ ಸ್ತ್ರೀವಾದಿಯಾಗದೇ ಎಲ್ಲದರಿಂದ ಹೊರಗೇ ಉಳಿದು ನಿರ್ಲಿಪ್ತ ನಿರ್ದೇಶಕ ಎಂಬುದನ್ನು ಸಾಬೀತು ಪಡಿಸುತ್ತಾರೆ. ಬಟ್ಟಲು ಕಣ್ಣನ್ನು ಅಗಲಿಸಿ ಜಗಳವಾಡುವ, ಮೈಮರೆತು ನಗುವ, ನಿಂತಲ್ಲೇ ಕಳೆದು ಹೋಗುವ, ಅಳುವ, ಸಿಟ್ಟಾಗುವ ದೃಶ್ಯಗಳಲ್ಲಿ ಸ್ಮಿತಾ ಪಾಟೀಲ್ ನಟನೆ ಅತ್ಯದ್ಬುತ. ಅಷ್ಟೇ ಸಹಜತೆಯಿಂದ ನಟಿಸಿರುವ ಸಹನಟರು ಚಿತ್ರಕ್ಕೆ ಮೆರಗು ನೀಡಿದ್ದಾರೆ. ಮಹಿಳಾ ಪ್ರಧಾನ ಕತೆಯಾದರೂ ಎಲ್ಲಿಯೂ ಕ್ಲೀಷೆಯೆನಿಸುವ ಮಹಿಳಾವಾದವಿಲ್ಲದ, ಚಿಂತನಾಪೂರ್ವಕ ಕತೆಯಿರುವ ಅದ್ಬುತ ಚಿತ್ರ 'ಭೂಮಿಕಾ'.