ನಮ್ಮೂರ ಕಾಡೊಳಗೆ ಕಡೆದಿರುವ ಶಿಲ್ಪಗಳ
ಅಂದವನು ನೋಡೋಣ ಬನ್ನಿ ನೀವು.
ಕಲ್ಪನೆಯ ಕಲ್ಪಗಳು ಕಳೆದಿರುವ ಶಿಲ್ಪಗಳ
ಇತಿಹಾಸವೃತ್ತಗಳ ತನ್ನಿ ನೀವು.
ಹೂವೊಳಗೆ ತುಂಬಿರುವ ಮಕರಂದ ಕಲೆಹಾಕಿ
ನಾಲಗೆಗೆ ಸವಿಯಿತ್ತ ಜೇನಿನಲ್ಲಿ.
ಹಣ್ಣುಗಳೊಳಗಿನಾ ಬೀಜಗಳ ಬಿತ್ತುತ್ತ
ತಿರುಳಗಳ ತಿನ್ನುವಾ ಹಕ್ಕಿಯಲ್ಲಿ.
ಕೀಟಗಳು ಹೆಣೆದಿರುವ ಬಲೆಯ ಮೇಲ್ಗಡೆಯಲ್ಲಿ
ಮುತ್ತಾಗಿ ಹೊಳೆದಿರುವ ಮಂಜಿನಲ್ಲಿ.
ಆಟವಾಡಲು ಬಳ್ಳಿ ಹಿಡಿದಿರುವ ವಾನರರ
ಚುರುಕುನೋಟದ ಕಣ್ಣ ಹೊಳಪಿನಲ್ಲಿ.
ಸತ್ತಿರುವ ಎಲೆಯೊಳಗಿನಾ ಅಂತಃಸತ್ತ್ವವನು
ಚಿಗುರೆಲೆಗೆ ಕಳುಹಿಸಿದಾ ಮಣ್ಣಿನಲ್ಲಿ.
ಮಣ್ಣಿನಾ ಸತ್ತ್ವವನು ತನ್ನೊಳಗೆ ಕಲೆಸುತ್ತ
ಬೇರೊಳಗೆ ಬೆರೆಸಿರುವ ನೀರಿನಲ್ಲಿ.
ನೀರಡಿಕೆ ನೀಗಿದ ಮುಗಿಲುಗಳಾ ಅಪ್ಪುಗೆಗೆ
ಮೈಚಾಚಿ ನಿಂತಿರುವ ಮರಗಳಲ್ಲಿ.
ಮುಗಿಲುಗಳ ತಾ ಹೊತ್ತು ಮರಗಳಾ ಬಳಿಯಿತ್ತು
ಒಪ್ಪಿಗೆಯನಿತ್ತಾ ತಂಗಾಳಿಯಲ್ಲಿ.
ಬಿರುಗಾಳಿಗೆದೆಯೊಡ್ಡಿ ಮುರಿದಿರುವ ರೆಂಬೆಗಳ
ಜೀವವನು ತಳೆದಿರುವ ಬೆಂಕಿಯಲ್ಲಿ.
ಭಾವಗಳನುಕ್ಕಿಸುವ ರೂಪಗಳೊಳಹೊಕ್ಕು
ಸಾವನರಿಯದಾ ಜೀವಜೀವಗಳಲಿ.
ಕಲ್ಪನೆಗೆ ಕಸುವಿಟ್ಟ ಕವಿಗಳಾ ನುಡಿಗಳಲಿ
ಹುದುಗಿರುವ ಭಾವಗಳ ನೆನಪಿನಲ್ಲಿ.
ಕಲ್ಪನೆಯ ಕಲ್ಪಗಳು ಕಳೆದಿರುವ ಶಿಲ್ಪಗಳ
ಇತಿಹಾಸವೃತ್ತಗಳ ತನ್ನಿ ನೀವು.
ಪ್ರತಿಕ್ರಿಯೆ (2)
ಸತ್ತಿರುವ ಎಲೆಯೊಳಗಿನಾ ಅಂತಃಸತ್ತ್ವವನು ಚಿಗುರೆಲೆಗೆ ಕಳುಹಿಸಿದಾ ಮಣ್ಣಿನಲ್ಲಿ. ಮಣ್ಣಿನಾ ಸತ್ತ್ವವನು ತನ್ನೊಳಗೆ ಕಲೆಸುತ್ತ ಬೇರೊಳಗೆ ಬೆರೆಸಿರುವ ನೀರಿನಲ್ಲಿ ======================
ನಂಜುಂಡ ಅವ್ರೆ ಆ ಮೇಲಿನ ಸಾಲುಗಳು ಸಖತ್ ..!! ಮಣ್ಣು ಮತ್ತು ನೀರಿನ ಸಹಕಾರ ತತ್ವ- ಮೆಚ್ಚಿದೆ.... ಅಂದ ಹಾಗೆ ನಿಮ್ಮ ಊರಿನ ಕಾಡಿನಲ್ಲಿ ಇರುವ ಆ ಕವಿ ಕಲ್ಪನೆಯ ಶಿಲ್ಪಗಳ ಚಿತ್ರ ಇಲ್ಲವೇ?.. ಹಾಗಿದ್ದರೂ ನೀವ್ ಯಾವುದಾರ ಶಿಲ್ಪ ಕಲೆಯ ಚಿತ್ರ ಹಾಕಬಹುದು..
ಉತ್ತಮ ಆಶಯದ ಬರಹಕ್ಕೆ
ನನ್ನಿ \|/