ಒಂದು ಮನೆಯಲಿ ಒಬ್ಬನಿರಬೇಕು, ಜಗದಗಲ
ಜಾಗದಲಿ ಆ ಮನೆಯ ಜಗುಲಿಯಿರಬೇಕು
ಎಷ್ಟು ಜನ ಬಂದರೂ ಕುಳಿತು ಹರಟುವ ಹಾಗೆ
ಅವಕಾಶವಿರಬೇಕು, ಅಂಗಳವು ಬೇಕು
ಕುಸಿಯದಿಹ ಆಗಸವೆ ಮನೆಯ ಛಾವಣಿಯಾಗಿ
ಗೋಡೆಗಳು ಬರಿಗಣ್ಗೆ ಕಾಣದಿರಬೇಕು
ದಟ್ಟ ಕಾಡೇ ಗಟ್ಟಿಯಗಳಿಯಾಗಿಹ ತೆರೆದ
ಹೆಬ್ಬಾಗಿಲಿಗೆ ಹೊಲವೆ ಹೊಸಿಲಾಗಬೇಕು
ನಿದ್ದೆಗೈಯುವ ಕೋಣೆಯಲೆ ಎಚ್ಚರವು ಬೇಕು
ಆಟವಾಡುವ ಬಯಲು ಅಲ್ಲೆಯಿರಬೇಕು
ಕಸವೊತ್ತಿ ಪೇರಿಸಲು ಮೂಲೆಯಿಲ್ಲದ ಹಾಗೆ
ಎಲ್ಲವೂ ಕೊಳೆಯುತ್ತ ಮಣ್ಣಾಗಬೇಕು
ಬಂದು ಹೋಗುವ ಜನರ ಲೆಕ್ಕಗಳ ಬಿಡಬೇಕು
ತಿಂದುಳಿದುದೆಲ್ಲವೂ ಹಣ್ಣಾಗಬೇಕು
ಒಬ್ಬನಿಹ ಮನೆಯೊಳಗೆ ಮತ್ತೆ ಮನೆ ಕಟ್ಟಿದರೆ
ಒರಲೆಗಳಿಗೆಲ್ಲವನು ಕೊಟ್ಟುಬಿಡಬೇಕು
ಡಿ ನಂಜುಂಡ
24/07/2019
(ಪಯಣಗಬ್ಬ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!