ಮಾಡು ತಾಯಿ ನೀ ಸಂಹಾರ
ಹಳ್ಳಿಯಿಂದಲಾ ದಿಲ್ಲಿಯ ತನಕ ಶುಂಭ ನಿಶುಂಭರ ಸರಕಾರ
ಮಾಡು ತಾಯಿ ನೀ ಸಂಹಾರ ||ಪ||
ಪಂಚಾಯತಿ ಪುರಸಭೆ ಮೆಂಬರುಗಳ ಆದಾಯವ ನೀ ನೋಡಿಹೆಯಾ ?
ಜಿಲ್ಲಾ ಮಟ್ಟಕು ಮೇಲಿನ ಮಂದಿಯ ಊಹೆಯಾದರೂ ಮಾಡಿಹೆಯಾ ?
ಸರಕಾರಗಳೆನ್ನುವ ಉಧ್ಯಮದಲಿ ಹೂಡಿಕೆದಾರರ ನೀ ನೋಡು
ರಕ್ತಬೀಜರಂತುದಿಸಿದ ಮಂದಿಯ ಈ ಜಗದಿಂದಲೇ ಹೊರದೂಡು ||೧||
ಕೊಳ್ಳೆಗೆ ಶಾಲೆ ದೇವಸ್ಥಾನಗಳೆನ್ನುವ ಭೇದವದಿರದವರು
ಎಲ್ಲೆಡೆ ಒಂದೇ ರೀತಿಯ ಸುಲಿಗೆಯ ಮಾಡುತ ಜೀವನ ಕಳೆವವರು
ಎದೆಸೀಳಿದರೊಂದಕ್ಷರವಿಲ್ಲದ ದಡ್ಡ ಶಿಖಾಮಣಿ ನಾಯಕರು
ಪುಂಡರ ಪಡೆ ಕಟ್ಟುತ ಊರೊಳಗೆ ಚಂಡ ಮುಂಡರಂತಿರುವವರು ||೨||
ಪಾಪಿಗಳಿಗೆ ರಕ್ಷಣೆ ನೀಡುವರು ಪಾಪದವರ ಋಣ ಹಿಂಡುವರು
ಮಾಡಬಾರದ ಕಾರ್ಯಕೆ ಬಡವರ ದುಡಿಸಿ ಕೆಡಿಸಿ ಹೆಣ ಕೆಡಗುವರು
ಹಣ ಗಳಿಕೆ ಏನಾದರು ಸರಿಯದು ಎನ್ನುತ ಐಶಾರಾಮದೊಳು
ಇರುವರ ಮದವಡಗಿಸು ನೀ ಬಂದು ಉರುಳಿಸು ಕಾಲದ ಪಾಶದೊಳು ||೩||
ನೆಲವನು ಜನರನು ವಂಚನೆ ಮಾಡಿ ಮಾಳಿಗೆ ಮನೆಗಳ ಕಟ್ಟಿದರೆ
ಅದು ಸುಖ ಕೊಡದೆಂದರಿವರು ಮುಂದೆ ಇಂದಿವರನು ನೀ ಮೆಟ್ಟಿದರೆ
ಕಪಟದ ನಯ ವಂಚಕ ನಾಯಕರನು ಬಿಡಬೇಡ ನೀ ಹಿಡಿ ಕೊಲ್ಲು
ದುರ್ಮತಿ ಹೊಂದಿದ ದುರ್ಜನರಿಂದ ಬಸವಳಿಯದೆ ಮಾತೆಯೆ ಗೆಲ್ಲು ||೪||
- ಸದಾನಂದ
ಪ್ರತಿಕ್ರಿಯೆ (1)