ಇಂದೇನು ಲೇಖಕಿಯರ ದಿನವೆ?
ಹರಿದಿವೆಯಲ್ಲ ಭಾವದನುಭಾವವೆ!
ಭಾವಜೀವಿಗಳಿಗೆಲ್ಲ ಭಾವ ಯಾತನೆಯೆ?
ಕಿತ್ತೊಡೆದ ಅಣೆಕಟ್ಟಾದವೆ ಮನಛಾಯೆ!

ಹೆಪ್ಪುಗಟ್ಟಿದ ನೆನಪು ಮುಪ್ಪಾಗದ ನುಣುಪು
ಗಿರಿಗಿರಕಿ ಹೊಡೆದಿತ್ತೆ ಕಾಡಿದಾ ಮಸುಕು
ಮೇಲೆದ್ದು ಬರಲ್ಹೇಗೊ ಸಡಿಲಾದ ಉಸುಕು
ಬರಲೆದ್ದು ಹೊರಬಂತೆ ಪತ್ರ ಮಾತಾಗಿ ನಾಕು!

ಹೇಳಲೆಷ್ಟೊ ಭಾವ ಬಿಚ್ಚಿ ಹೇಳದಾ ಸ್ವಭಾವ
ಮುಖಾಮುಖಿಯಲಿತ್ತೇನೆಲ್ಲ ದುಗುಡಾ ಕಾವ
ಹೇಳಿಬಿಡಲೆಬೇಕೆನಿಸಿದರೂ ಆಗದ ಸಂಭವ
ಹೇಳದಿರಲ್ಹೇಗೆ ವಿಲವಿಲ ಹೃದಯಕದಸಂಭವ!

ಪತ್ರವಾದರೆ ಒಳಿತು ಅವಿತು ಹೇಳುವ ಗತ್ತು
ಓದುತಲೆ ಮುಖಭಾವ ಕದ್ದು ನೋಡೆ ಹೊತ್ತು
ಆಸೆ ನಿರಾಸೆಗಳ ನಡುವೆ ಆಶಾಭಾವದ ದೀಪ
ಓದಿ ಮೆಚ್ಚಿದರಾರೊ ಜಗವ ಗೆದ್ದಾ ಅಪರೂಪ!

ಹಗುರಾಗಲಿ ತನುಮನವೆಲ್ಲ ಹತ್ತಿಯ ತರ
ಇಳಿದಾದ ಮೇಲೆ ದುಗುಡ ಮಾತಿನ ಭಾರ
ಸವಿದುಣ್ಣುವ ಸೊಗಸಿನ ಆಹ್ಲಾದತೆ ನಮಗೆ
ಬಡಿಸಿದ ರುಚಿಯೂಟಕೆ ಧನ್ಯವಾದ ನಿಮಗೆ!

 

- ​ನಾಗೇಶ ಮೈಸೂರು, ಸಿಂಗಪುರದಿಂದ

(ಸುಂದರ ಬರಹಗಳಿಗೆಲ್ಲ ಧನ್ಯವಾದದ ರೂಪದಲ್ಲಿ ಸಮರ್ಪಿತ)