ಹೊತ್ತು ಕಳೆದದ್ದೇ ತಿಳಿಯಲಿಲ್ಲ
ಪ್ರಾಯದಿಂದಭಿಪ್ರಾಯದತನಕ
ಇನ್ನೂ ಬಾಲ ತಾರುಣ್ಯವೆ
ಎಂದು ಮನ ಹಪಹಪಿಸುತಿದ್ದರೂ
ಬೆಳ್ಳಿ ರೇಖೆಯಂತೆ
ಅಲ್ಲೊಂದು ಇಲ್ಲೊಂದು
ಕಾಣಿಸೆಬಿಟ್ಟಿತಲ್ಲ
ನೊರೆಗೂದಲೂ !
ನಲವತ್ತಕ್ಕೆ ಮತ್ತೈದುದುರಿ
ಹಣೆ ಸುಕ್ಕುಗಳು ಒಳಗೊಳಗೇ ಮುದುರಿ
ಕೆನ್ನೆ ಒಳಗೆಳೆದು
ಕನ್ನಡಿಯೇ ಅದುರಿ
ಕನ್ನಡಕದೊಳಗೆ ಅವಿತುಕೊಂಡಾಗ
ಶೀತಲ ನೆನಪು ಪಿಸುಗುಟ್ಟಿತು
ಕಳೆದಾಯ್ತು ಹರೆಯ, ಮುಟ್ಟಿದೆಯ ಗುರಿಯ?
ಥಟ್ಟನೆ ಹಿಂತಿರುಗಿ ನೋಡಿದರೆ ಕೆಳಗೆ
ಹೆಜ್ಜೆ ಮೊದಲ ಮೆಟ್ಟಿಲ ಒಳಗೊಳಗೇ
ಮುಂದೆ ಮತ್ತಿನ್ನೂರು ಹೊಚ್ಚ ಹೊಸ ಮಳಿಗೆ!
ಟುಸ್ಸ್ ಎಂದು ಬತ್ತಿ ಉತ್ಸಾಹವೆಲ್ಲ
ಕುಗ್ಗಿ ಕೊನರಾಡಿದರೂ
ಬಂಡನಂತೆ ಉತ್ತರ ಪೌರುಷದಲ್ಲಿ
ನುಗ್ಗಿ ಹೆಣಗಾಡುವ
ಅನಿವಾರ್ಯಕ್ಕೆ ಅಚ್ಚರಿಗೊಂಡು
ಅಕಟಕಟ!
ನಾನು ಅನಂತನೆಂಬ
ಮೂರ್ಖ ಭ್ರಮೆಯಲ್ಲಿ
ಮುಳುಗೇಳುತಿದ್ದಂತೆ
ಸಕಲೇಶಪುರದಿಂದ ಬಂತವನ ಸಾವಿನ ಸುದ್ದಿ ...
ಛೆ! ಏನಾಗಿತ್ತವನ ವಯಸ್ಸು
ಮಿಕ್ಕಿರಲಿಕ್ಕಿಲ್ಲ ಸಹ ಐವತ್ತು?
ಅರೆ ಗಂಟೆ, ಅರ್ಧ ದಿನ ಕಾಡಿತ್ತು ನ'ಮನ
ಏನಾಯಿತಾಮೇಲೆ?
ದಿನದಿನದಂತೆ ಗಮನ
ಜಗಕೆ ಹೊಸದೇನಲ್ಲ ಸಾವಿನ ಸುದ್ದಿ
ಸೋಜಿಗವು
ನಮಗನ್ವಯಿಸದೆಂಬ ಮೊಂಡ ಬುದ್ದಿ!
ನಮ್ಮೊಳಡಗಿದೆ ನಿರಂತರ ಭಯ,ಭೀತಿ
ಆದರೂ ಸದ್ಯಕ್ಕಲ್ಲ
ಮುಂದೆಂದೋ ಎಂಬ ಹುಸಿ ಭ್ರಾಂತಿ!
ಕಳೆದಂತೆ ಅರೆ ಆಯಸ್ಸು
ಉಳಿದಿದೆಯ ನಿಜಕ್ಕೂ ಅರ್ಧ?
ಅರ್ಧದಲ್ಲರ್ಧದಲ್ಲರ್ಧದಲ್ಲರ್ಧ?
ಬಲ್ಲವರಾರು? ಸಲ್ಲುವವರಾರು?
ಸಾವೆಂಬ ಸಕಲೇಶಪುರ ಸಮರ
ಗೆಲ್ಲುವವರಾರು?
ಅರಿತು ಮೆಲ್ಲುವವರಾರು?
- ನಾಗೇಶ ಮೈಸೂರು, ಸಿಂಗಾಪುರದಿಂದ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಅಹಲ್ಯಾ ಸಂಹಿತೆ - ೨೫ (ತಪೋಶಕ್ತಿಪಾತಕ್ಕೆ ನರನ ಖೇದ)
ಅಹಲ್ಯಾ ಸಂಹಿತೆ - ೨೪ (ಮಹಾನ್ ಸಂಶೋಧನೆಯ ಸಿದ್ದತೆ..)
ಅಹಲ್ಯಾ ಸಂಹಿತೆ - ೨೩ (ದೇವೇಂದ್ರ ಸಲಹೆ - ಗೌತಮನ ಆಯ್ಕೆ)
"ನೆನಪುಗಳ" ಪೋಣಿಸಿ ಬರೆದ “ಹನಿ”ಗಳು...1
ಮಾನವ ಜನ್ಮ ದೊಡ್ಡದು
ತಿಳಿಯದೋ ನಿನ್ನಾಟ..ರಚನೆ ಹೆಳವನಕಟ್ಟೆ ಗಿರಿಯಮ್ಮ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)