ಲಲಿತಾ ಸಹಸ್ರನಾಮ ೧೪೩ - ೧೪೬
Nirupaplavā निरुपप्लवा (143)
೧೪೩. ನಿರುಪಪ್ಲವಾ
ದೇವಿಯು ನಿತ್ಯ ನಿರಂತರವಾಗಿರುವವಳು; ಇದು ಬ್ರಹ್ಮದ ಇನ್ನೊಂದು ಗುಣವಾಗಿದೆ. ಇದೇ ಅರ್ಥವನ್ನು ೧೮೦ನೇ ನಾಮವು ಕೊಡುತ್ತದೆ.
ಇನ್ನೊಂದು ರೀತಿಯ ವಿಶ್ಲೇಷಣೆಯೂ ಇದೆ, ಅದು ಏನು ಹೇಳುತ್ತದೆಂದರೆ ದೇವಿಯು ಮನುಷ್ಯ ದೇಹದ ೭೨,೦೦ ನಾಡಿಗಳಲ್ಲಿ ಪಸರಿಸುವ ಅಮೃತವನ್ನು ಉತ್ಪತ್ತಿಸುತ್ತಾಳೆ. ಇದು ದೇವಿಯ ಸೂಕ್ಷ್ಮಾತಿಸೂಕ್ಷ್ಮ ರೂಪವಾದ ಕುಂಡಲಿನೀ ರೂಪದ ಬಗ್ಗೆ ಹೇಳುತ್ತದೆ. ಯಾವಾಗ ಕುಂಡಲಿನಿಯು ಸಹಸ್ರಾರವನ್ನು ಸೇರುತ್ತದೆಯೋ, ಅದು ಅಮೃತವನ್ನು ಉತ್ಪಾದಿಸುತ್ತದೆ ಮತ್ತು ಅದು ಗಂಟಲಿನ ಮೂಲಕ ತೊಟ್ಟಿಕ್ಕುತ್ತಾ ಸಂಪೂರ್ಣ ನರಮಂಡಲವನ್ನು ವ್ಯಾಪಿಸುತ್ತದೆ. ಈ ನಾಮಾವಳಿಯನ್ನು ನಿರ್(ನಿರ್ ಪ್ರತ್ಯಯಕ್ಕೆ ಹಲವಾರು ಅರ್ಥಗಳಿದ್ದು ಈ ಸಂದರ್ಭದಲ್ಲಿ ಅದು ದೇಹವನ್ನು ಸೂಚಿಸುತ್ತದೆ)+ಉಪ(ಉಪಕ್ರಮಿಸು)+ಪ್ಲವ(ತೊಟ್ಟಿಕ್ಕು). ಇದರ ಅರ್ಥವೇನೆಂದರೆ ಕುಂಡಲಿನಿಯು ಸಹಸ್ರಾರದೆಡೆಗೆ ಉಪಕ್ರಮಿಸಿದಾಗ ದೇಹ ವ್ಯವಸ್ಥೆಯೊಳಗೆ ಅಮೃತವು ತೊಟ್ಟಿಕ್ಕಲು ಪ್ರಾರಂಭಿಸುತ್ತದೆ.
Nitya-muktā नित्य-मुक्ता (144)
೧೪೪. ನಿತ್ಯ-ಮುಕ್ತಾ
ಆಕೆಯು ನಿರಂತರ ಮುಕ್ತಳಾಗಿರುವವಳು; ಇದು ಬ್ರಹ್ಮದ ಇನ್ನೊಂದು ಲಕ್ಷಣವಾಗಿದೆ. ಬ್ರಹ್ಮವನ್ನು ಅರಿಯಬೇಕಾದರೆ ಒಬ್ಬನು ಎಲ್ಲಾ ವಿಧವಾದ ಬಂಧನಗಳಿಂದ ಮುಕ್ತನಾಗಿರಬೇಕು.
Nirvikārā निर्विकारा (145)
೧೪೫. ನಿರ್ವಿಕಾರಾ
ದೇವಿಯು ಎಲ್ಲಾ ವಿಧವಾದ ವಿಕಾರಗಳಿಗೆ ಹೊರತಾಗಿದ್ದಾಳೆ (ವಿಕಾರವೆಂದರೆ ರೂಪಾಂತರ). ಬ್ರಹ್ಮವು ಬದಲಾವಣೆಗೆ ಒಳಪಡುವುದಿಲ್ಲ. ಸೃಷ್ಟಿ ಕಾರ್ಯದಲ್ಲಿ ಎರಡು ಅಂಶಗಳಿವೆ; ಅವು ಪುರುಷ ಮತ್ತು ಪ್ರಕೃತಿ. ಪುರುಷವು ಪರಮ ಚೈತನ್ಯವಾಗಿದ್ದು ಅದು ಬಂಧನಗಳಿಂದ ಮುಕ್ತವಾಗಿದೆ, ಜ್ಞಾನ ಮತ್ತು ಸೃಷ್ಟಿಸುವ ಚೈತನ್ಯದಿಂದ ತುಂಬಿದೆ. ಈ ವಿಶ್ವವನ್ನು ಸೃಷ್ಟಿಸಿದ ಕ್ರಿಯಾಶೀಲ ಅಥವಾ ದೈವೀ ಅಂಶಗಳುಳ್ಳ ಚಿಕ್ಕದಾದ ವಸ್ತುವೆಂದು ಇನ್ನೊಂದು ರೀತಿಯಾಗಿ ಇದನ್ನು ವಿಶ್ಲೇಷಿಸಬಹುದು. ಒಬ್ಬನಿಗೆ ಸೃಷ್ಟಿ ಮಾಡುವ ಶಕ್ತಿಯಿದ್ದರೆ ಅವನಿಗೆ ಸೃಷ್ಟಿ ಕಾರ್ಯವನ್ನು ಕೈಗೊಳ್ಳಬಲ್ಲ ಪೂರ್ವಭಾವಿ ಜ್ಞಾನವು ಇರಬೇಕು. ಸೃಷ್ಟಿ ಕಾರ್ಯವನ್ನು ಕೈಗೊಳ್ಳುವವನಿಗೆ ಸೂಕ್ತವಾದ ಜ್ಞಾನವಿಲ್ಲದಿದ್ದರೆ ಅವನ ಸೃಷ್ಟಿಯು ವ್ಯರ್ಥವಾಗುತ್ತದೆ (Hay Wire). ಪುರುಷನು ತನ್ನ ದೇಹ, ಮನಸ್ಸು ಮತ್ತು ಇಂದ್ರಿಯಗಳೊಂದಿಗೆ ಸಂಭಂದವನ್ನು ಹೊಂದಿಲ್ಲ. ಅದು ರೂಪಾಂತರವನ್ನು ಹೊಂದುವುದಿಲ್ಲ ಆದರೆ ಎಣೆಯಿಲ್ಲದಷ್ಟು ಉಂಟಾಗುತ್ತಿರುವ ರೂಪಾಂತರಗಳನ್ನು ಅದು ನಿರಂತರವಾಗಿ ಸಾಕ್ಷೀಭೂತವಾಗಿ ನೋಡುತ್ತಿರುತ್ತದೆ. ಪ್ರಕೃತಿಯು ಪುರುಷನಿಗೆ ವಿರುದ್ಧವಾದದ್ದಾಗಿದೆ. ಅದು ಸೃಷ್ಟಿಗೆ ಮೂಲ ಕಾರಣವಾಗಿದ್ದು ಅದು ನಿರಂತರ ಬದಲಾವಣೆಯನ್ನು ಹೊಂದುತ್ತಿರುತ್ತದೆ. ಅದು ಮೂರು ಗುಣಗಳಿಂದ ಕೂಡಿರುತ್ತದೆ. ಯಾವಾಗ ಪುರುಷ ಮತ್ತು ಪ್ರಕೃತಿಯರ ಸಂಯೋಗವುಂಟಾಗುತ್ತದೆಯೋ ಆಗ ವಿಶ್ವದ ಸೃಷ್ಟಿಯಾಗುತ್ತದೆ.
ಇಲ್ಲಿ ಬದಲಾವಣೆಗೆ ಹೊರತಾಗಿದೆ ಎಂದರೆ ಅದು ಇಪ್ಪತ್ಮೂರು ತತ್ವಗಳಿಗೆ ಮಾತ್ರ ಅನ್ವಯಿಸುತ್ತದೆ. ಮಹತ್ ಎನ್ನುವುದು ಪ್ರಕೃತಿಯ ಉತ್ಪನ್ನವಾಗಿದೆ. ಅದು ಬುದ್ಧಿ ಅಥವಾ ಮೇಧಾವಿತನದ ಮಹಾನ್ ತತ್ವವಾಗಿದೆ. ಸಾಂಖ್ಯ ಪದ್ಧತಿಯ ಅನ್ವಯ ಇಪ್ಪತ್ಮೂರು ತತ್ವಗಳಲ್ಲಿ ಮಹತ್ ಎರಡನೆಯದಾಗಿದ್ದು ಅದು ಅಹಂಕಾರ (ನಾನು ಎನ್ನುವ ಪ್ರಜ್ಞೆ) ಮತ್ತು ಮನಸ್ಸು ಇವುಗಳ ಪ್ರಮುಖ ಮೂಲವಾಗಿದೆ. ಮಹತ್, ಅಹಂಕಾರ ಮತ್ತು ಐದು ತನ್ಮಾತ್ರೆಗಳು (ಶಬ್ದ, ರಸ, ಗಂಧ, ರೂಪ ಮತ್ತು ಸ್ಪರ್ಷ). ಈ ಏಳು ವಸ್ತುಗಳು ಕಾರಣಗಳೆಂದು ಕರೆಯಲ್ಪಟ್ಟಿವೆ. ಐದು ಜ್ಞಾನೇಂದ್ರಿಗಳು (ಕಣ್ಣು, ಕಿವಿ, ನಾಲಿಗೆ, ಮೂಗು ಮತ್ತು ಚರ್ಮ), ಐದು ಕರ್ಮೇಂದ್ರಿಯಗಳು (ಕೈ, ಕಾಲು, ಬಾಯಿ, ಜನನಾಂಗ ಮತ್ತು ವಿಸರ್ಜನಾಂಗ), ಐದು ಮೂಲ ಧಾತುಗಳು (ಪಂಚ ಮಹಾಭೂತಗಳಾದ ಪೃಥ್ವಿ, ಅಪ್, ತೇಜ, ವಾಯು ಮತ್ತು ಆಕಾಶ) ಮತ್ತು ಮನಸ್ಸು ಉಳಿದ ಹದಿನಾರು ತತ್ವಗಳಾಗಿವೆ. ಈ ಹದಿನಾರು ತತ್ವಗಳು ಕಾರ್ಯಗಳಾಗಿವೆ. ಆದ್ದರಿಂದ ಪ್ರಕೃತಿಯು ಕಾರಣ ಮತ್ತು ಕಾರ್ಯಗಳಿಂದ ಕೂಡಿದ ಇಪ್ಪತ್ಮೂರು ವಸ್ತುಗಳಿಂದ ರಚಿತವಾಗಿದೆ ಮತ್ತು ಪುರುಷವು ಇದಕ್ಕೆ ಹೊರತಾಗಿದೆ. ಆದರೆ ಸೃಷ್ಟಿ ಕಾರ್ಯವನ್ನು ಕೈಗೊಳ್ಳಲು ಪುರುಷ ಮತ್ತು ಪ್ರಕೃತಿ ಎರಡರ ಅವಶ್ಯಕತೆಯೂ ಇದೆ. ಇದು ಶಿವ-ಶಕ್ತಿಯರ ಐಕ್ಯತೆಯನ್ನು ಸೂಚಿಸುತ್ತದೆ. (ಸಾಂಖ್ಯ ದರ್ಶನದ ಕುರಿತಾದ ಹೆಚ್ಚಿನ ಮಾಹಿತಿಗೆ ಈ ಬರಹವನ್ನು ನೋಡಿ http://sampada.net/blog/%E0%B2%B8%E0%B2%BE%E0%B2%82%E0%B2%96%E0%B3%8D%E0%B2%AF-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6%E0%B2%B0%E0%B3%8D%E0%B2%B6%E0%B2%A8%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%AB-%E0%B3%A7/11/04/2012/36328 )
ಆದರೆ ಈ ನಾಮದಲ್ಲಿ ದೇವಿಯನ್ನು ಪುರುಷ ಅಂದರೆ ಬ್ರಹ್ಮವೆಂದು ಸಂಭೋದಿಸಲಾಗಿದೆ. ಪುರುಷ ಮತ್ತು ಪ್ರಕೃತಿಯರ ಕುರಿತಾಗಿ ಮುಂದಿನ ನಾಮಗಳಲ್ಲಿ ವಿವರವಾಗಿ ಚರ್ಚಿಸಲಾಗಿದೆ.
Niṣprapañcā निष्प्रपञ्चा (146)
೧೪೬. ನಿಷ್ಪ್ರಪಂಚಾ
ಪ್ರಪಂಚವೆಂದರೆ ಆಕುಚನಗೊಳ್ಳುವುದು (ವಿಕಾಸವಾಗುವುದು), ಅಭಿವೃದ್ಧಿ ಹೊಂದುವುದು ಅಥವಾ ರೂಪಾಂತರ ಹೊಂದುವುದು. ದೇವಿಯು ಈ ರೀತಿಯಾದ ಗುಣಗಳಿಗೆ ಹೊರತಾಗಿದ್ದಾಳೆ. ಬ್ರಹ್ಮವು ಆದಿ (ಮೊದಲನೆಯದು) ಮತ್ತು ಅನಾದಿಯಾಗಿರುವುದರಿಂದ (ತಂದೆ-ತಾಯಿಗಳಿಲ್ಲದೆ ಇರುವುದು ಅಥವಾ ಇದರ ಪೂರ್ವದಲ್ಲಿ ಏನೂ ಇಲ್ಲದೇ ಇರುವುದು) ಅದಕ್ಕೆ ಯಾವುದೇ ರೀತಿಯ ನಿಯಂತ್ರಣವಿರುವುದಿಲ್ಲ ಮತ್ತು ಅದಕ್ಕೆ ಯಾವುದೇ ರೀತಿಯ ಬದಲಾವಣೆ ಅಥವಾ ರೂಪಾಂತರದ ಅವಶ್ಯಕತೆಯಿಲ್ಲ. ಇದು ಏಕೆಂದರೆ ಬ್ರಹ್ಮವು ತುಂಬಿದೆ ಅಥವಾ ಪೂರ್ಣತೆಯಿಂದ ಕೂಡಿದೆ ಅಂದರೆ ಪರಿಪೂರ್ಣವಾದದ್ದು. ಮಾಂಡೂಕ್ಯ ಉಪನಿಷತ್ತು (ಶ್ಲೋಕ ೭) ಹೀಗೆ ಹೇಳುತ್ತದೆ, "ಪ್ರಾಪಂಚಿಕತೆಯಿಂದ ವಿಮುಕ್ತವಾಗಿರುವುದು, ಶಾಂತಮೂರ್ತಿ (ಶಾಂತಿಯ ಬಗ್ಗೆ ವಿವರಗಳಿಗೆ ೧೪೧ನೇ ನಾಮವನ್ನು ಕೂಡಾ ನೋಡಿ), ಒಳ್ಳೆಯದರ ಸಂಪೂರ್ಣತೆ (ಮೂಲ ಶ್ಲೋಕದಲ್ಲಿ ಒಳ್ಳೆಯದು ಅಥವಾ ಶುಭಕರವಾದದ್ದನ್ನು ಸೂಚಿಸಲು ಶಿವ ಎನ್ನುವ ಶಬ್ದವನ್ನು ಬಳಸಲಾಗಿದೆ), ಅದ್ವಿತೀಯವಾದದ್ದು (ಏಕೆಂದರೆ ಇದು ಆದಿ ಮತ್ತು ಅಂತ್ಯವಿಲ್ಲದ್ದು), ನಾಲ್ಕನೆಯ ಆಯಾಮವಾದ ತುರಿಯಾವಸ್ಥೆಯುಳ್ಳದ್ದು (ತುರಿಯಾವಸ್ಥೆಯು ನಾಲ್ಕನೆಯದಾಗಿದ್ದು, ಮೊದಲ ಮೂರು ಅವಸ್ಥೆಗಳು ಎಚ್ಚರ/ನಿದ್ರೆ, ಕನಸಿನ ಸ್ಥಿತಿ ಮತ್ತು ದೀರ್ಘನಿದ್ರಾವಸ್ಥೆ ಅಥವಾ ಜಾಗ್ರತ್, ಸ್ವಪ್ನ ಮತ್ತು ಸುಷುಪ್ತಿಗಳಾಗಿವೆ); ಇದನ್ನೇ ಆತ್ಮವೆಂದು ಆಲೋಚಿಸಿ ಅದನ್ನು ಅರಿಯಬೇಕು". ಬ್ರಹ್ಮವು ಮೂರು ಅವಸ್ಥೆಗಳಿಗೆ ನಿಲಕದ್ದಾಗಿದ್ದು ಅದನ್ನು ನಾಲ್ಕನೆಯ ಹಂತವಾದ ತುರೀಯಾದಲ್ಲಿ ಮಾತ್ರ ಅರಿಯಬಹುದಾಗಿದೆ. ಈ ಅವಸ್ಥೆಯು ಶಾಂತತೆ ಮತ್ತು ಎಲ್ಲಾ ರೀತಿಯ ಮಂಗಳಕರ ವಸ್ತುಗಳ ಮೂರ್ತರೂಪವಾಗಿದೆ. ಈ ಹಂತಗಳನ್ನು ೨೫೭ನೇ ನಾಮದಿಂದ ವಿವರವಾಗಿ ಚರ್ಚಿಸಲಾಗಿದೆ.
ಈ ಎಲ್ಲಾ ವಿವರಣೆಗಳು ನಿರ್ಗುಣ ಬ್ರಹ್ಮವನ್ನು ಸೂಚಿಸುತ್ತವೆ. ಈ ನಾಮವು ದೇವಿಯು ಯಾವುದೇ ವಿಧವಾದ ಆಕುಚನಕ್ಕೆ ಒಳಗಾಗುವುದಿಲ್ಲ ಎಂದರೆ ಆಕೆಯು ಯಾವುದೇ ವಿಧವಾದ ಬದಲಾವಣೆ ಅಥವಾ ರೂಪಾಂತರಗಳನ್ನು ಹೊಂದುವುದಿಲ್ಲ ಎಂದು ತಿಳಿಸುತ್ತದೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 143-146 http://www.manblunder.com/2009/08/lalitha-sahasranamam-143-146.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
ಪ್ರತಿಕ್ರಿಯೆ (1)