ಲಲಿತಾ ಸಹಸ್ರನಾಮ ೧೪೭ - ೧೫೩
Nirāśrayā निराश्रया (147)
೧೪೭. ನಿರಾಶ್ರಯಾ
ಆಶ್ರಯವೆಂದರೆ ಅವಲಂಬನೆ (ಒಂದು ವಸ್ತುವಿಗೆ ಮತ್ಯಾವುದಾದರೂ ವಸ್ತುವು ಅಳವಡಿಸಲ್ಪಟ್ಟಿರುವುದು ಅಥವಾ ಅದರೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವುದು ಅಥವಾ ಅದರ ಮೇಲೆ ಆಧಾರವಾಗಿರುವುದು ಅಥವಾ ಅವಲಂಬಿಸಿರುವುದು). ತೈತ್ತರೀಯ ಉಪನಿಷತ್ತು (೨.೭) ’ಅನಿಲಯನೆ’ ಅಂದರೆ ಯಾವುದರ ಮೇಲೂ ಆಧಾರಪಡದೇ ಇರುವುದು ಅಥವಾ ಯಾವುದೇ ರೀತಿಯ ಮಾರ್ಪಾಡನ್ನು ಹೊಂದದೇ ಇರುವುದು ಎನ್ನುವ ಅರ್ಥವುಳ್ಳ ಶಬ್ದವನ್ನು ಉಪಯೋಗಿಸುತ್ತದೆ. ದೇವಿಯು ಯಾವುದರ ಮೇಲೆಯೂ ಅವಲಂಬಿಸಿಲ್ಲ. ದೇವಿಯು ಬ್ರಹ್ಮವಾಗಿರುವುದರಿಂದ ಆಕೆಯು ಯಾವುದರ ಮೇಲೆಯೂ ಆಧಾರ ಹೊಂದಿಲ್ಲ ಆದರೆ ವಿಪರ್ಯಾಸವೆಂದರೆ ಎಲ್ಲವೂ ಅವಳ ಮೇಲೆ ಆಧಾರಿತವಾಗಿದೆ. ಈ ನಾಮವು ಸ್ವಲ್ಪ ಹೆಚ್ಚು ಕಡಿಮೆ ೧೩೨ನೇ ನಾಮದ ಅರ್ಥವನ್ನೇ ಕೊಡುತ್ತದೆ. ಬಹುಶಃ ಈ ಸಂದರ್ಭದಲ್ಲಿ ಆಶ್ರಯವೆಂದರೆ ಆತ್ಮಕ್ಕೆ ಆಧಾರವಾಗಿರುವ ಸ್ಥೂಲ ಶರೀರವನ್ನು ಸೂಚಿಸುತ್ತದೆ. ಆಕೆಯು ಆತ್ಮಕ್ಕೆ ಅತೀತಳಾಗಿರುವವಳು (ಬ್ರಹ್ಮ ಮತ್ತು ಆತ್ಮಗಳು ವಿಭಿನ್ನವಾಗಿವೆ; ಆತ್ಮವು ಇಲ್ಲಿ ಜೀವಿಯನ್ನು ಸೂಚಿಸುತ್ತದೆ) ಆದ್ದರಿಂದ ದೇವಿಯ ಸ್ಥೂಲ ಶರೀರದ ಪ್ರಶ್ನೆಯೇ ಏಳುವುದಿಲ್ಲ. ದೇವಿಯು ಸ್ಥೂಲ ಶರೀರ ರಹಿತಳಾಗಿರುವುದರಿಂದ ಅದು ಆಕೆಯು ಬ್ರಹ್ಮದ ಸ್ವರೂಪವೆನ್ನುವುದನ್ನು ಸೂಚ್ಯವಾಗಿ ತಿಳಿಸುತ್ತದೆ.
ಛಾಂದೋಗ್ಯ ಉಪನಿಷತ್ತು (೮.೧.೫) ಹೀಗೆ ಹೇಳುತ್ತದೆ, "ದೇಹವು ಮುದಿತನದಿಂದ ಕೊಳೆಯಬಹುದು, ಆದರೆ ಒಳಗಿರುವ ಸ್ಥಳವು (ಬ್ರಹ್ಮವು) ಯಾವಾಗಲೂ ಕೊಳೆಯದು ಅಥವಾ ದೇಹದ ಅವಸಾನದೊಂದಿಗೆ ಅದು ನಾಶ ಹೊಂದುವುದಿಲ್ಲ. ಇದು ಬ್ರಹ್ಮದ ನಿಜವಾದ ವಾಸಸ್ಥಾನವಾಗಿದೆ. ನಮ್ಮ ಎಲ್ಲಾ ಆಸೆಗಳು ಇದರಲ್ಲಿ ಕೇಂದ್ರೀಕೃತವಾಗಿವೆ. ಅದು ಆತ್ಮವಾಗಿದ್ದು - ಅದು ಎಲ್ಲಾ ವಿಧವಾದ ಪಾಪಗಳು ಮತ್ತು ಮುದಿತನ, ಸಾವು, ದುಃಖ, ಹಸಿವು ಮತ್ತು ಬಾಯಾರಿಕೆಗಳಿಂದ ಮುಕ್ತವಾಗಿದೆ. ಅದು ಸತ್ಯದ ಅನ್ವೇಷಣೆಯ ಆಸೆಯನ್ನು ಹುಟ್ಟಿಸುವ ಕಾರಣವಾಗಿದೆ ಮತ್ತು ಸತ್ಯಕ್ಕೆ ಬದ್ಧವಾಗಿರುವುದರ ಕಾರಣವಾಗಿದೆ.
ಒಟ್ಟಾರೆಯಾಗಿ ಈ ನಾಮವು ದೇವಿಯು ಯಾರ ಮೇಲೂ ಅವಲಂಬಿತಳಾಗಿಲ್ಲ ಎನ್ನುವುದನ್ನು ಹೇಳುತ್ತದೆ.
Nitya-śuddhā नित्य-शुद्धा (148)
148. ನಿತ್ಯ-ಶುದ್ಧಾ
ಅವಳು ನಿರಂತವಾಗಿ ಪರಿಶುದ್ಧಳು. ಅಶುದ್ಧತೆಯು ಸ್ಥೂಲ ಶರೀರದೊಂದಿಗೆ ಸಂಭಂದ ಹೊಂದಿದೆ ಮತ್ತು ಶುದ್ಧತೆಯ ಮೂರ್ತರೂಪವು ಈ ಅಶುದ್ಧವಾದ ಸ್ಥೂಲ ಶರೀರದೊಳಗೆ ಅಡಕವಾಗಿದೆ. ಬ್ರಹ್ಮವು ಯಾವಾಗಲೂ ಶುದ್ಧವಾಗಿರುತ್ತದೆ ಏಕೆಂದರೆ ಅದು ಯಾವುದೇ ರೀತಿಯ ಬದಲಾವಣೆ ಅಥವ ರೂಪಾಂತರಗಳನ್ನು ಹೊಂದುವುದಿಲ್ಲ. ಒಂದು ವಸ್ತುವು ಬದಲಾವಣೆ ಹೊಂದಿದಾಗ ಮಾತ್ರವೇ ಅಶುದ್ಧತೆಯು ಉಂಟಾಗುತ್ತದೆ.
Nitya-buddhā नित्य-बुद्धा (149)
೧೪೯. ನಿತ್ಯ-ಬುದ್ಧಾ
ದೇವಿಯು ನಿತ್ಯ-ನಿರಂತರ ವಿವೇಕವುಳ್ಳವಳಾಗಿದ್ದಾಳೆ. ಜ್ಞಾನವೆನ್ನುವುದು ಅನುಭವದಿಂದ ಉಂಟಾಗುತ್ತದೆ ಆದರೆ ವಿವೇಕವು (ಬುದ್ಧಿವಂತಿಕೆಯು) ರಕ್ತಗತವಾಗಿ ಬರುವಂತಹುದು. ಜ್ಞಾನವನ್ನು ವಿವೇಕಿಗಳಿಂದ ಪಡೆಯಬೇಕು. ಬೃಹದಾರಣ್ಯಕ ಉಪನಿಷತ್ತು (೪.೩.೩೦) ಹೀಗೆ ಹೇಳುತ್ತದೆ, "ತಿಳುದುಕೊಳ್ಳಬೇಕೆನ್ನುವ ತಿಳಿದುಕೊಳ್ಳುವವನ ಕ್ರಿಯೆಯು ಯಾವಾಗಲೂ ಕಳೆದು ಹೋಗುವುದಿಲ್ಲ ಏಕೆಂದರೆ ಅದು ನಾಶವಿಲ್ಲದ್ದು. ಆದರೆ ಯಾವುದರಿಂದ ಅದನ್ನು(ಬ್ರಹ್ಮವನ್ನು) ತಿಳಿಯಬಹುದೋ ಅಂತಹ ಪ್ರತ್ಯೇಕವಾದ ಎರಡನೆಯ ವಸ್ತುವಿಲ್ಲ". ಬ್ರಹ್ಮವು ಸ್ವಯಂಪ್ರಕಾಶಿತ ವಿವೇಕವಾಗಿದೆ.
Niravadhyā निरवध्या (150)
೧೫೦. ನಿರವಧ್ಯಾ
ಆಕೆಯು ಸ್ಥಿರವಾಗಿರುವವಳು ಮತ್ತು ದೋಷರಹಿತಳು. ಅವಧ್ಯಾ ಎಂದರೆ ಆಕೆಯಿಂದ ತಪ್ಪು ಕೆಲಸಗಳನ್ನು ಮಾಡಿಸುವುದು ಅಸಾಧ್ಯ ಅಥವಾ ಆಕೆಯನ್ನು ಅವಮಾನ ಪಡಿಸುವುದು ಸಾಧ್ಯವಿಲ್ಲ. ದೋಷಗಳು ಅಜ್ಞಾನದಿಂದ ಉಂಟಾಗುತ್ತವೆ ಅಥವಾ ಅಜ್ಞಾನವು ದೋಷ ಮತ್ತು ದೋಷರಹಿತ ಎಂದು ಬೇಧ ಉಂಟಾಗುವುದಕ್ಕೆ ಕಾರಣವಾಗಿದೆ. ಬ್ರಹ್ಮದಲ್ಲಿ ಯಾವುದೇ ವಿಧವಾದ ದೋಷಗಳು ಇರುವುದು ಸಾಧ್ಯವಿಲ್ಲ, ಏಕೆಂದರೆ ಅದು ನಿರಂತರ ಪರಿಶುದ್ಧವಾದದ್ದು. ದೋಷಗಳು ಆಸೆ, ಅಹಂಕಾರ ಮೊದಲಾದ ಕಶ್ಮಲ ಅಥವಾ ಮಲಗಳಿಂದ ಉಂಟಾಗುತ್ತವೆ.
Nirantarā निरन्तरा (151)
೧೫೧. ನಿರಂತರಾ
ಅಂತರ ಎನ್ನುವುದಕ್ಕೆ ಹಲವಾರು ಅರ್ಥಗಳಿವೆ; ಉದಾಹರಣೆಗೆ ಮಧ್ಯ, ಒಳಗಡೆ, ಆಂತರ್ಯ, ನಡುವೆ, ಅವರೊಳಗೆ, ದಾರಿಯಲ್ಲಿರುವ, ದಾರಿ ಬದಿಯ, ಹತ್ತಿರ, ಹತ್ತಿರದಲ್ಲಿರುವ, ಬಹು ಸಮೀಪ, ತತ್ ಕಾಲದಲ್ಲಿ, ಆಗಾಗ, ಸ್ವಲ್ಪ ಸಮಯ, ಸಮಯದ ಮಧ್ಯದಲ್ಲಿ, ಸಮಯದಲ್ಲಿ, ಇಲ್ಲದಿರುವುದು ಮೊದಲಾದವು. ದೇವಿಯು ಈ ಯಾವುದೇ ವಿಧವಾದ ವಿಭಾಗಗಳಿಲ್ಲದವಳಾಗಿದ್ದಾಳೆ. ಬ್ರಹ್ಮವು ಭಾಗವೂ ಆಗುವುದಿಲ್ಲ ಅಥವಾ ಗುಣಿತವಾಗುವುದಿಲ್ಲ ಏಕೆಂದರೆ ಅದು ಬದಲಾವಣೆಗೆ ಒಳಪಡದ್ದು ಮತ್ತು ಅದು ಶಾಶ್ವತವಾದದ್ದು.
ತೈತ್ತರೀಯ ಉಪನಿಷತ್ತು (೨.೭) ಹೀಗೆ ಹೇಳುತ್ತದೆ, "ಅವನು ಬ್ರಹ್ಮಕ್ಕಿಂತ ಅತೀ ಸಣ್ಣದಾದ ಬೇಧವನ್ನು ತೋರಿದರೂ, ಅವನು ಬ್ರಹ್ಮಕ್ಕೆ ಹೆದರುತ್ತಾನೆಂದು ಅರ್ಥ (ಅಂದರೆ ಆತ್ಮವನ್ನು ಬ್ರಹ್ಮಕ್ಕಿಂತ ಭಿನ್ನವಾದುದ್ದೆಂದು ತಿಳಿಯುವುದು). ಇಲ್ಲಿ ಹೆದರಿಕೆ ಎಂದರೆ ಪುನರ್ಜನ್ಮವೆಂದು ಅರ್ಥ. ಇಲ್ಲಿ ಒಟ್ಟಾರೆಯಾಗಿ ತಿಳಿದುಕೊಳ್ಳ ಬೇಕಾದದ್ದೇನೆಂದರೆ ಬ್ರಹ್ಮವು ಸರ್ವಾಂತರ್ಯಾಮಿಯಾಗಿದೆ. ಬ್ರಹ್ಮವು ಎಲ್ಲಾ ಜೀವಿಗಳಲ್ಲಿ ಇದೆ; ಅದು ಗಿಡವಾಗಲಿ, ಕೀಟವಾಗಲಿ, ಪ್ರಾಣಿಯಾಗಲಿ ಅಥವಾ ಮಾನವರಾಗಲಿ; ಸ್ಥೂಲ ಶರೀರವು ಹೇಗೇ ಇರಲಿ, ಎಲ್ಲದರಲ್ಲೂ ಒಂದೇ ತೆರನಾಗಿ ಇರುವುದು. ಸಮಯ, ದೂರ ಮತ್ತು ಧರ್ಮವು ಬ್ರಹ್ಮವನ್ನು ಮಾರ್ಪಾಟುಗೊಳಿಸುವುದಿಲ್ಲ. ಆದರೆ ತಾನು ಅರಿತಿರುವುದಕ್ಕಿಂತಲೂ ಬ್ರಹ್ಮವು ಪ್ರತ್ಯೇಕವಾಗಿದೆಯೆಂಬ ತಿಳುವಳಿಕೆಯು ಅಜ್ಞಾನದಿಂದ ಉಂಟಾಗುತ್ತದೆ.
Niṣkāraṇā निष्कारणा (152)
೧೫೨. ನಿಷ್ಕಾರಣಾ
ದೇವಿಯು ಕಾರಣರಹಿತಳಾಗಿದ್ದಾಳೆ. ಕಾರಣವೆಂದರೆ ಯಾವುದೋ ಒಂದು ಉತ್ಪನ್ನವಾದ ವಸ್ತುವಿಗೆ ಪೂರ್ವಭಾವಿಯಾಗಿ ಇರುವುದು. ಆಕೆಯು ವಂಶಾವಳಿ ಇಲ್ಲದವಳಾಗಿದ್ದಾಳೆ; ಇದು ಬ್ರಹ್ಮದ ಮತ್ತೊಂದು ಲಕ್ಷಣವಾಗಿದೆ. ಆದರೆ ಈ ಬ್ರಹ್ಮಾಂಡವು ಆಕೆಯ ವಂಶವಾಗಿದೆ.
ಶ್ವೇತಾಶ್ವತರ ಉಪನಿಷತ್ತು (೬.೯) ಹೀಗೆ ಹೇಳುತ್ತದೆ, "ಪ್ರಪಂಚದಲ್ಲಿ ಅವನ (ಬ್ರಹ್ಮನ) ಒಡೆಯನಾರೂ ಇಲ್ಲ ಅಥವಾ ಅವನನ್ನು ಅಂಕೆಯಲ್ಲಿ ಇಡುವವರು ಯಾರೂ ಇಲ್ಲ, ಮತ್ತು ಅವನನ್ನು ಗುರುತಿಸಲು ಯಾವುದೇ ವಸ್ತುವಿಲ್ಲ. ಅವನು ಎಲ್ಲದಕ್ಕೂ ಕಾರಣನು. ಅವನು ಜೀವಕ್ಕೆ (ಆತ್ಮಕ್ಕೆ) ಒಡೆಯನಾಗಿದ್ದಾನೆ; ಅವನು ಪಂಚೇಂದ್ರಿಯಗಳಿಗೆ ಒಡೆಯನಾಗಿದ್ದಾನೆ. ಅವನ ಸೃಷ್ಟಿಕರ್ತನು ಯಾರೂ ಇಲ್ಲ ಮತ್ತು ಅವನಿಗೆ ಯಾರೂ ನಿಯಂತ್ರಕರಿಲ್ಲ".
‘ಶ್ರೀ ಚಕ್ರ’ದಲ್ಲಿ ದೇವಿಯನ್ನು ’ಕಾರಣಾನಂದ ವಿಗ್ರಹೇ’ ಎಂದು ಆವಾಹನೆ ಮಾಡಲಾಗುತ್ತದೆ. ಇದರ ಅರ್ಥವೇನೆಂದರೆ ಆಕೆಯು, ಈ ಬ್ರಹ್ಮಾಂಡದ ವಿಕಾಸಕ್ಕೆ ಕಾರಣವಾದ ಪರಮಾನಂದ ಮೂಲಭೂತ ವಸ್ತು. ಆದ್ದರಿಂದ ಆಕೆಯೇ ಈ ಬ್ರಹ್ಮಾಂಡಕ್ಕೆ ಕಾರಣಳಾಗಿದ್ದಾಳೆ ಮತ್ತು ಅವಳಿಗೆ ಯಾವುದೇ ಕಾರಣವಿಲ್ಲ (ಅವಳು ಕಾರಣಕ್ಕೆ ಅತೀತಳಾಗಿದ್ದಾಳೆ).
Niṣkalaṅkā निष्कलङ्का (153)
೧೫೩. ನಿಷ್ಕಲಂಕಾ
ಆಕೆಯು ಯಾವುದೇ ರೀತಿಯ ಕಲೆ(ಕಳಂಕ) ಇಲ್ಲದವಳಾಗಿದ್ದಾಳೆ. ಕಳಂಕಗಳು ಪಾಪದಿಂದ ಉಂಟಾಗುತ್ತವೆ. ಆದ್ದರಿಂದ ಯಾರು ಪಾಪ ಕ್ರಿಯೆಗಳನ್ನು ಮಾಡುವುದಿಲ್ಲವೋ ಅವರನ್ನು ದೈವ ಸಮಾನರೆಂದು ಪರಿಗಣಿಸುತ್ತಾರೆ; ಆದರೆ ಅಂತಹ ವ್ಯಕ್ತಿಗಳು ಸಿಗುವುದು ಬಹಳ ಅಪರೂಪ. ಈಶ ಉಪನಿಷತ್ತು (ಶ್ಲೋಕ ೮) ಕಳಂಕರಹಿತ ಬ್ರಹ್ಮವನ್ನು ವರ್ಣಿಸಲು ಎರಡು ಶಬ್ದಗಳನ್ನು ಉಪಯೋಗಿಸುತ್ತದೆ. ಮೊದಲನೆಯದು ’ಶುದ್ಧಂ’ ಅಂದರೆ ಪರಿಶುದ್ಧವಾದದ್ದು. ಮತ್ತೊಂದು ’ಅಪಾಪವಿದ್ಧಾ’ ಅಂದರೆ ಕಲೆಯಿಲ್ಲದಿರುವುದು ಅಥವಾ ಯಾವುದೇ ರೀತಿಯ ಅಜ್ಞಾನದ ಕುರುಹು ಇಲ್ಲದಿರುವುದು. ಬ್ರಹ್ಮವು ಶುದ್ಧವಾಗಿದ್ದು ಕಳಂಕರಹಿತವಾಗಿದೆ. ದ್ವೈತ ಭಾವನೆಯೇ ಎಲ್ಲಾ ಪಾಪಗಳಿಗೂ ಕಾರಣವಾಗಿದೆ. ಈ ಪಾಪಗಳು ಕಳಂಕಗಳನ್ನು ಉಂಟು ಮಾಡುತ್ತವೆ. ಈ ಕಳಂಕಗಳು ಏನು ಬೇಕಾದರೂ ಆಗಿರಬಹುದು - ಕೋಪ, ದ್ವೇಪ, ಅಸೂಯೆ ಮೊದಲಾದವು. ಈ ಕಳಂಕಗಳಿಂದಾಗಿ ಅಂತರಾಳದಲ್ಲಿರುವ ಬ್ರಹ್ಮವನ್ನು ಅರಿಯಲಾಗುವುದಿಲ್ಲ. ಇವನ್ನೇ ಕಳಂಕಗಳೆಂದು ಕರೆಯುತ್ತಾರೆ ಮತ್ತು ದೇವಿಯು ಈ ಎಲ್ಲಾ ವಿಧವಾದ ಕಳಂಕಗಳಿಂದ ಮುಕ್ತಳಾಗಿದ್ದಾಳೆ.
ಪಾಪದ ಕುರಿತಾಗಿ ಇನ್ನಷ್ಟು ವಿವರಗಳು:
ನೀತಿ ಶಾಸ್ತ್ರದಂತೆ ಒಳ್ಳೆಯ ಮತ್ತು ಕೆಟ್ಟ ಕೆಲಸಗಳು ಧಾರ್ಮಿಕ ದೃಷ್ಟಿಕೋನದಿಂದ ಒಳ್ಳೆಯ ಅಥವಾ ಕೆಟ್ಟ ಕ್ರಿಯೆಗಳಾಗಿ ಪರಿವರ್ತಿತವಾಗುತ್ತವೆ. ಯಾವುದೇ ಸಮಾಜದ ನೀತಿ ನಿಯಮಗಳಂತೆ ಯಾರು ತಪ್ಪು ಮಾಡುತ್ತಾರೋ ಅವರು ಶಿಕ್ಷೆಗೆ ಒಳಪಡಬೇಕು ಮತ್ತು ಯಾರು ಅದನ್ನು ಪಾಲಿಸುತ್ತಾರೋ ಅವರಿಗೆ ಪುರಸ್ಕಾರವು ದೊರೆಯಬೇಕು ಅದೇ ರೀತಿ ಧಾರ್ಮಿಕ ನೀತಿಯೂ ಇರಬೇಕಾಗುತ್ತದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಪುರಸ್ಕಾರ ಮತ್ತು ಶಿಕ್ಷೆಗಳಿರುವಂತೆಯೇ ಧರ್ಮದಲ್ಲಿ ಪುಣ್ಯ ಮತ್ತು ಪಾಪಗಳಿರುತ್ತವೆ. ತಪ್ಪು ಮತ್ತು ಸರಿಗಳ ಪರಿಣಾಮಗಳಿಂದ ಒಬ್ಬನಿಗೆ ಬಹುಮಾನ ಅಥವಾ ಶಿಕ್ಷೆಗಳಿರುವಂತೆ ಅದನ್ನೇ ಸಂದರ್ಭಕ್ಕನುಸಾರವಾಗಿ ಪುಣ್ಯ ಮತ್ತು ಪಾಪಗಳೆಂದು ಪರಿಗಣಿಸಬಹುದು. ಪಾಪವು ನೇರವಾಗಿ ಒಬ್ಬನ ಕರ್ಮದ ಖಾತೆಗೆ ಸಂಭಂದ ಹೊಂದಿರುತ್ತದೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 147-153
http://www.manblunder.com/2009/08/lalitha-sahasranamam-147-153.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
ಪ್ರತಿಕ್ರಿಯೆ (1)