ಪ್ರೀತಿ ,ಜಾತಿ ಎರಡಕ್ಕೂ ಆಗಿಬರದಿದ್ದರು ,ಪ್ರೀತಿ ಹುಟ್ಟುವುದು ಅಂತರ್ಜಾತಿಯ ನಡುವೆ ಜಾಸ್ತಿ ಯಾಕೆ ,ಇದು ಇಂದಿನ ಕತೆಯಲ್ಲ ಅನಾದಿ ಕಾಲದಿಂದಲೂ ಇದು ಇಂದಿಗೂ ಮುಂದುವರೆಯುತ್ತಿದೆ .. ಒಂದೇ ಜಾತಿಯವರು ಪ್ರೆಮಿಸಿದ್ದಲ್ಲಿ ಕೂಡ ಮನೆಯವರು ಅಂತಸ್ತು ,ವಯಸ್ಸಿನ ನೆಪ ಹೇಳಿ ಪ್ರೇಮ ವಿವಾಹವನ್ನು ದ್ವೇಷಿಸುವುದು ಹೊಸತೇನಲ್ಲ ಏಕೆಂದರೆ ,ತನ್ನ ಮಗ ಅಥವಾ ಮಗಳು ನಾವು ಹುಡುಕಿ ಮದುವೆ ಮಾಡಿದವರೊಂದಿಗೆ ಸುಖವಾಗಿರುತ್ತಾರೆ ,ಅವರು ಆಯ್ಕೆ ಮಾಡುವುದು ತಪ್ಪು ಎಂಬ ಗಟ್ಟಿಯಾದ ನಂಬಿಕೆಯಲ್ಲೇ ಬದುಕಿರುತ್ತಾರೆ ,ಅದರಲ್ಲೂ ಪ್ರೇಮವಿವಾಹ ವೆಂದರೆ ಅದು ತಪ್ಪು ,ನೋವುಗಳೇ ಜಾಸ್ತಿ ಎಂದು ತಮ್ಮ ಮನಸ್ಸಿನಲ್ಲಿ ಅಚ್ಚೆಯಂತೆ ಬರೆದಿಟ್ಟುಕೊಂಡಿರುತ್ತಾರೆ .ಒಂದು ಬೀಜ ಮೊಳಕೆಯೊಡೆಯಲು ನೀರಲ್ಲಿ ಸ್ವಲ್ಪ ಹೊತ್ತು ಮಿಂದು ಹೊರಗೆ ಬಂದರೆ ಸಾಕು ,ಇನ್ನೂ ಗಾಳಿ ಸಿಗದಿದ್ದರೆ ಬೇಗ ಮೊಳಕೆಯೊಡೆಯುತ್ತದೆ ,ಜೊತೆಗೆ ಉತ್ಕೃಷ್ಟ ಫಲವತ್ತಾದ ಮಣ್ಣಾಗಿದ್ದರೆ ಅದು ಬೇರು ಬಿಟ್ಟು ಭಲಿಷ್ಟವಾದ ಗಿಡ ,ಮರವಾಗುತ್ತದೆ ...
ಒಂದು ಜೀವದಲ್ಲಿ(ಬೀಜ) ಪ್ರೀತಿಯೆಂಬ ಮೊಳಕೆಯೊಡೆಯಲು ಅದನ್ನು ಅರ್ಥ ಮಾಡಿಕೊಳ್ಳೋ ಮನಸ್ಸು (ನೀರು) ಸಿಕ್ಕಿದರಾಯ್ತು ,ಅಂತಹ ಮನಸ್ಸಿನ ಜೊತೆ ಸ್ವಲ್ಪ ದಿನ ಒಡನಾಟವಾಗಿ ಬಿಟ್ಟರೆ ,ಅದರಲ್ಲೂ ತನಗೆ ಹೊಂದಿಕೊಳ್ಳದ ಪರಿಸರ ಅಥವಾ ಏನಾದ್ರು ಇಕ್ಕಟ್ಟಿನ ಪರಿಸ್ತಿತಿಯಲ್ಲಿ ಸಿಕ್ಕಿಕೊಂಡರೆ ,ತನಗೆ ಹತ್ತಿರವಾಗಿದ್ದ ಮನಸಿನ ನೆನಪು ಕಾಡಿ ಪ್ರೀತಿಯೆಂಬ ಮೊಳಕೆ ಬರಲು ಜಾಸ್ತಿ ಸಮಯ ಬೇಕಿರುವುದಿಲ್ಲ , ಆ ಮನಸ್ಸಿನ ಪ್ರೀತಿ ನಿಜವಾಗಿ ,ಹೊಂದಿಕೊಳ್ಳಲಾರಂಭಿಸಿದರೆ ( ಉತ್ಕೃಷ್ಟ ಫಲವತ್ತಾದ ಮಣ್ಣಾಗಿದ್ದರೆ) ನಾನು ಅಚ್ಚಿಕೊಂಡ ಮನಸಿನೊಂದಿಗೆ ಜೀವನ ಪೂರ ಇರಬೇಕೆಂದು (ಬೇರು ಬಿಡಲು )ನಿರ್ದರಿಸಲು ಆರಂಬಿಸುತ್ತದೆ , ಹೊಂದಿಕೊಂಡ ಜೀವಗಳಿಗೆ ಯಾವ ವಿರುದ್ದವು ಇಲ್ಲದಿದ್ದರೆ ಪ್ರೀತಿ ದೊಡ್ಡ ಮರವಾಗಿ ನಾಲ್ಕಾರು ಜನಕ್ಕೆ ನೆರಳು ನೀಡುವುದರಲ್ಲಿ ಸಂಶಯವಿಲ್ಲ ... ಮರವಾಗುವ ಮುನ್ನವೇ ಒಂದೊಂದು ಕೊಂಬೆಯನ್ನು ಚುಚ್ಚುಮಾತಿನಿಂದ ದುರ್ಬಲಗೊಳಿಸುವ ಜನರೇ ಜಾಸ್ತಿಯಾದುದರಿಂದಲೇ ,ಮರವಾಗಿ ಬಹಳಕಾಲ ಉಳಿಯದೇ ಹೋಗುತ್ತದೆ .. ಕೆಲ ಸಂದರ್ಭಗಳೆಂದರೆ ಮೊಳಕೆಯೊಡೆಯುವ ಮುನ್ನವೇ ಮುರಿದಾಕಬೇಕಿತ್ತು ನೀನು ತಪ್ಪು ಮಾಡಿದೆ ಎಂದು ನೂರಾರು ಉಪಮಾನಗಳನ್ನು ಮುಂದಿಟ್ಟು ,ಮರ್ಯಾದೆ ಎಂಬ ದೊಡ್ಡ ಪದ ಬಳಸಿ ಗಿಡವಾಗಿದ್ದಾಗಲೆ ಬೇರೆ ಕಸಿ ಮಾಡಿಬಿಡುತ್ತಾರೆ , ಪ್ರೀತಿಯನ್ನರಿತು ಬದುಕಿದ ಹೆತ್ತವರು ಕೂಡ ಕಸಿಮಾಡಿದರೆ ತನ್ನ ಭಾಗವನ್ನು ಕಳೆದುಕೊಂಡು ನೋವು ಅನುಭವಿಸುತ್ತಾರೆ ಎಂಬ ಯೋಚನೆ ಮಾಡುವುದಿಲ್ಲ ,ಏನೋ ಅವಳು /ಅವನು ಮಾಡಿದ್ದು ತಪ್ಪು ನಾವು ಮಾಡಿದರೆ ಸರಿಯಿರುತ್ತದೆ ಎಂಬ ಗಾಡ ನಂಬಿಕೆ ,ಕಸಿಮಾಡಿದ ಮತ್ತೊಂದು ಜೀವ ಏನಾದ್ರೂ ಕೆಟ್ಟದಾಗಿದ್ದು ಪ್ರಾಣ ಹೋದರು ಕೂಡ ಅವಳ/ನ ಹಣೆಬರಹ ಎಂದೋ ,ಹೊಂದಿಕೊಂಡು ಬಾಳಲು ಬರಲಿಲ್ಲ ಎಂದೋ ಹೇಳುವರೇ ಹೊರತು ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ , ತನ್ತನವನ್ನು ಉಳಿಸಿಕೊಳ್ಳಲಾಗದೇ ಸಹಜವಲ್ಲದ ಕಸಿಯಾದ ಜೀವದೊಂದಿಗೆ ತಾನು ಸಾಯುವರೆಗು ಬದುಕಬೇಕೆಂಬ ಚಿಂತೆಯಲ್ಲಿರುತ್ತದೆ , ಕಸಿಭಾಗವನ್ನೇ ಎತ್ತಿಹಿಡಿಯಬೇಕೆ ಹೊರತು ತನ್ನ ಯಾವ ಭಾವನೆಗಳನ್ನೂ ,ಕಷ್ಟಗಳನ್ನೋ ಹೇಳಲು ಹೇಗಾದರೂ ಮನಸು ಒಪ್ಪುತ್ತದೆ ಹೇಳಿ ಯಾಕೆಂದರೆ ಸಮದಾನದ ಮಾತುಗಳೆಂದರೆ "ಹೊಂದಿಕೊಂಡು ಹೋಗು "ಎಂಬುದೊಂದೇ .ಇವರುಗಳ ಖುಷಿಗೊಸ್ಕರ ತನ್ನ ಕಸಿಬಾಗವನ್ನು ಪೋಷಿಸುತ್ತಾ ತನ್ನ ಜೀವನವನ್ನು ಸವೆಸುತಿದ್ದರೆ ಮಾತ್ರ ಒಳ್ಳೆಯವರಾಗಿ ಉಳಿಯುವುದು ,ಜೊತೆಗೆ ಈ ಸ್ವಾರ್ತ ಸಮಾಜದಲ್ಲಿ ಬೆಲೆ .. ಪ್ರೀತಿ ಮೊಳಕೆಯೊಡೆದು ಬೇರು ಬಿಡುವಾಗ ಇದು ಯಾವ ದೇಶದ ಮಣ್ಣು ಎಂದು ಪರೀಕ್ಷೆ ಮಾಡಿ ಬೇರೂರಬೇಕೆ ? ಹಾಗಾಗಿದ್ದರೆ ಕೆಸರಿನಲ್ಲಿ ಹುಟ್ಟಿ ಬೆಳೆದ ಕಮಲವನ್ನೇಕೆ ಶ್ರೇಷ್ಠ ಎಂದು ದೇವರ ಮುಡಿಗೇರಿಸುವಿರಿ ? ಎಲ್ಲಿ ಬೆಳೆಯುತ್ತದೆ ಎಂಬುದಲ್ಲ ಮುಖ್ಯ ಅದರ ಗುಣ ಎಂದಲ್ಲವೇ ವಾದ ಕಮಲದ ವಿಷಯಕ್ಕೆ ,ಹಾಗೆ ಯಾರನ್ನ ಯಾವ ಜಾತಿಯವರನ್ನ ಎಂಬುದು ಮುಖ್ಯವಲ್ಲ ,ಯಾರಿಗೂ ಕೆಡುಕು ಮಾಡದೆ ತನ್ನವರೊಂದಿಗು ಸಹಬಾಳ್ವೆಯಿಂದ ಬದುಕುವಂತ ಸಂಗಾತಿಯನ್ನು ಹುಡುಕಿಕೊಂಡವರಿಗೆ ಯಾಕೆ ಬದುಕಲು ಅವಕಾಶ ಕೊಡಬಾರದು ?
ನಿಮ್ಮ ಮೆಚ್ಚುಗೆಯಿಂದ ಕೊಟ್ಟ ಅವಕಾಶವನ್ನು ಅವರು ನಿಷ್ಟೆಯಿಂದಲೇ ಉಪಯೋಗಿಸಿಕೊಳ್ಳುತ್ತಾರೆ ಅಲ್ಲವೇ ? ತಾವು ಬದುಕಿ ತೋರಿಸಬೇಕೆಂಬ ಹಟವಿರುತ್ತದಲ್ಲವೇ ? ಅವಕಾಶ ಕೊಟ್ಟು ನೋಡಿ ..
ತುಂಬಾ ಶ್ರೇಷ್ಟ ಪೋಷಕರು ಇರುತ್ತಾರೆ ಪ್ರೀತಿ ಮಾಡಿ ಮದುವೆ ಆದವರಲ್ಲಿ ಏನಾದರು ಚಿಕ್ಕ ಪುಟ್ಟ ಸಮಸ್ಯೆಗಳು ಬಂದಾಗ ನಾನು ಮೊದಲೇ ಹೇಳಿರಲಿಲ್ವ ವಿಚ್ಛೇದನ ತೆಗೆದುಕೋ ಎಂದು ಸಲೀಸಾಗಿ ಹೇಳುವ ಇವರು ತಾವು ಹುಡುಕಿ ಮಾಡಿದ್ದರಲ್ಲಿ ಕಲಹ ಬಂದರೆ ಮಾತ್ರ ಹೊಂದಿಕೊಂಡು ಬಾಳಬೇಕು ,ಇದೆಲ್ಲ ಸಾಮಾನ್ಯ ಎಂದುಬಿಡುವರು .. ಏನೇನೋ ಪ್ರಯೋಗಗಳನ್ನು ಮಾಡಿ ಒಂದು ಮಾಡಲು ಪ್ರಯತ್ನಿಸುವರು .ಇದೇ ರೀತಿಯು ಪ್ರೆಮವಿವಾಹಗಳಲ್ಲು ಒಂದೇ ಒಂದು ಬಾರಿ ಪ್ರಯತ್ನ ಮಾಡಿ ,ಅವರು ಮತ್ತೆ ಜಗಳವಾಡುವುದಿಲ್ಲ ಏಕೆಂದರೆ ನಿಮ್ಮ ಮೇಲಿನ ಭಯ ಅಭಿಮಾನ ಎರಡು ಜಾಸ್ತಿಯಾಗಿರುತ್ತದೆ .
ಹಾಗೆಂದು ಕೆಸರಿಗೆ ತಳ್ಳಿ ಬಿಟ್ಟುಬಿಡಿ ಎಂಬುದು ನನ್ನ ವಾದವಲ್ಲ ,ಕೆಸರಲ್ಲಿ ಹುಟ್ಟಿದ ಕಮಲಕ್ಕೆ ಬೇದ ಮಾಡದೆ ದೇವರಿಗೆ ಅರ್ಪಿಸುವ ನಾವು ,ಹುಡುಕಿಕೊಂಡಿರುವ ಸಂಗಾತಿಯ ಕುಲ ,ಜಾತಿಗೆ ಪ್ರಾಮುಕ್ಯತೆ ಕೊಡದೆ ,ತಾವುಗಳು ಮೂರು ತಿಂಗಳುಗಳಲ್ಲಿ ಹುಡುಕಿ ಬೀಗರ ಮನೆ ಆಸ್ತಿ ಮೇಲೆ ಅಭಿಮಾನವಿಟ್ಟುಕೊಂಡು ಮದುವೆಮಾಡುವುದರ ಬದಲಾಗಿ ,ಬಹುದಿನಗಳಿಂದ ಸ್ನೇಹಿತರಾಗಿದ್ದು -ಎಷ್ಟೋ ಜಗಳ ಮಾಡಿಕೊಂಡರು,ಮುಂದೆ ಏನೇ ಕಷ್ಟ ಬಂದರು ಅವರೊಂದಿಗೆ ಬಾಳುತ್ತೇವೆ ಎಂದು ನಿರ್ಧರಿಸಿಕೊಂಡ ಪ್ರೇಮಿಗಳಿಗೆ ಬದುಕಲು ಅವಕಾಶ ಮಾಡಿಕೊಡಿ ಎಂದಷ್ಟೇ ...
ಜಾತಿ ಎಂಬುದು ಕೆಲಸದ ಆದಾರದ ಮೇಲೆ ಶುರುವಾಗಿದ್ದು ಅಚಾರ, ಸಂಸ್ಕೃತಿ ಎಂಬ ಹೆಸರಲ್ಲಿ ಹೆಚ್ಚುತ್ತಾ ಹೋಗಿ ತಾವು ಮನುಜರು ಎಂಬುದನ್ನ ಮರೆತು ಬರಿ ದ್ವೇಷದಲ್ಲೇ ಮಿಂದುಹೋಗುತ್ತಿದೆಯೇ ಹೊರತು ನೆಮ್ಮದಿಯ ದಾರಿಯ ಕಡೆ ಕೈ ತೋರಲು ಬಿಡುತ್ತಿಲ್ಲ .ಕಟ್ಟುಪಾಡುಗಳನ್ನು ಒಂದನ್ನು ಪಾಲಿಸದೆ ತನ್ನ ಇಷ್ಟಕ್ಕೆ ಇದ್ದು ಹೆಸರಿಗೆ ಮಾತ್ರ ತನ್ನ ಜಾತಿಯನ್ನು ಹೇಳಿ ಹೊಗಳಿಕೊಳ್ಳುತ್ತಾ ಬದುಕುವವರು ಎಷ್ಟು ಜನವೋ ..
ಇದು ತಿಳಿದಿದ್ದರು ಜಾತಿಯ ನಿಯಮಗಳನ್ನು ಅನುಸರಿಸದಿದ್ದರು ಪರವಾಗಿಲ್ಲ ತನ್ನ ಜಾತಿಯವರನ್ನೇ ಮದುವೆಯಾಗಬೇಕು ಎಂಬ ಹಠ ಹಾಗಿದ್ದಲ್ಲೇ ಮರ್ಯಾದಿ ಉಳಿಯೋದು ಎಂಬ ತಪ್ಪು ನಂಬಿಕೆಯನ್ನು ದಯವಿಟ್ಟು ಮರೆತುಬಿಡಬೇಕು .
ಜಾತಿ ಬೇಧ ಬಿಟ್ಟು ಮಾನವರಾಗಿ ಸಹಬಾಳ್ವೆಯಿಂದ ಬದುಕಬೇಕು ಎಂಬುದು ನನ್ನ ನಂಬಿಕೆ ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ ......
ಪ್ರತಿಕ್ರಿಯೆ (4)
ನನ್ನ ಅಭಿಪ್ರಾಯದಲ್ಲಿ , ಪ್ರೇಮ ವಿವಾಹ ಸ್ವಿಕಾರ ಯೋಗ್ಯ , ಆದರೆ ಯಾವಾಗ ?
ಆ ಬಗ್ಗೆ ಹುಡುಗ ಹಾಗು ಹುಡುಗಿ ಇಬ್ಬರು ಸಹ ಸರಿಯಾದ ತೀರ್ಮಾನ ತೆಗೆದುಕೊಳ್ಳಲು ಸಮರ್ಥರಿದ್ದಾಗ ಆದರೆ ಈಗೆಲ್ಲ ಆಗುತ್ತಿರುವದಾದರು ಏನು. ಹುಡುಗ ಇನ್ನು ಓದು ಮುಗಿಸಿರುವದಿಲ್ಲ, ತನ್ನ ಅನ್ನ ತಾನೆ ದುಡಿಯಲು ಕೆಲಸವಿರುವದಿಲ್ಲ, ಹಾಗೆ ಹುಡುಗಿಯಾದರೊ ಹೈಸ್ಕೂಲ್ ಮುಗಿಸಿ ಇನ್ನು ಕಾಲೇಜಿನ ಹಂತ ಮುಗಿಸಿರುವದಿಲ್ಲ, ಆಗಲೆ ಅವರಲ್ಲಿ ಪ್ರೇಮ ಪ್ರಾರಂಬವಾಗುತ್ತಿದೆ, ಅವರ ಜವಾಬ್ದಾರಿ ಅರ್ಥಮಾಡಿಕೊಳ್ಳುವ ಮಟ್ಟದಲ್ಲಿ ಅವರು ಇರುವದಿಲ್ಲ. ಅದೆ ಸಮಸ್ಯೆ ಎಲ್ಲ ಕಡೆ ಸಾಗುತ್ತಿದೆ, ಪ್ರತಿ ಸಂದರ್ಬದಲ್ಲಿ ಅವರ ಅಪ್ಪ ಅಮ್ಮ ನನ್ನು ವಿಲನ್ ಗಳಂತೆ ಕಾಣಲಾಗುತ್ತಿದೆ. ನನಗೆ ಅನ್ನಿಸುವಂತೆ, ಹುಡುಗ ಹಾಗು ಹುಡುಗಿ ಸರಿಯಾದ ವಯಸ್ಸು ಮುಟ್ಟಿರಬೇಕು, ಹುಡುಗ ಒಂದು ಕೆಲಸದಲ್ಲಿದ್ದು ತನ್ನ ಸಂಸಾರ ನಿರ್ವಹಿಸುವಷ್ಟು ಶಕ್ತನಾಗಿರಬೇಕು, ಹಾಗೆ ಹುಡುಗಿ ಸಹ ಹುಡುಗನನ್ನು ತನಗೆ ಸರಿಹೊಂದುವನು ಎಂದು ನಿರ್ದರಿಸುವ ಸ್ಥಿರ ಮನಸಿನಾವಳಾರಬೇಕು ಆಗ ಅದು ಅಂತರ್ಜಾತಿಯೊ ಎಂತದೊ ಒಟ್ಟಿನಲ್ಲಿ ವಿವಾಹಕ್ಕೆ ಒಪ್ಪಬಹುದು. ಆದರೆ ಯಾವುದನ್ನು ಸಮರ್ಥವಾಗಿ ಯೋಚಿಸಲು ಸಾದ್ಯವಿಲ್ಲದ ಹುಡುಗಿಯ ಮನದಲ್ಲಿ ಪ್ರೇಮ ವೆಂಬ ಪೊಳ್ಳು ಭಾವವನ್ನು ತುಂಬಿ , ಹುಡುಗನ ಹಿಂದೆ ಹೋಗಿ ನಂತರ ಜೀವನ ಪೂರ್ಣ ಸರಿಪಡಿಸಲಾಗದ ಹಿಂದೆ ಹೆಜ್ಜೆ ಇಡಲು ಆಗದ ತಪ್ಪು ಮಾಡಿ ನಂತರ ಪರಿತಪಿಸುವುದು ಸರಿಯಲ್ಲ ಎಂದು ನನ್ನ ಭಾವ.
ಆದರೆ ಏನು ಮಾಡಲು ಸಾದ್ಯವಿಲ್ಲ ಈಗೆಲ್ಲ ಯಾರ ಬುದ್ದಿ ಮಾತುಗಳು , ವಾದಗಳು ರುಚಿಸುವದಿಲ್ಲ ಸುತ್ತಲಿನ ಪರಿಸರವೆ ಹಾಗಿದೆ . ಅವರವರ ಕಾರ್ಯಗಳಿಗೆ ಅವರೆ ಜವಾಭ್ದಾರಿ.
ಎಲ್ಲಾ ವಿವಾಹವಾದ ಒಂದೆರಡು ವರ್ಷಗಳಾದ ಮೇಲೆ ಒಂದಾಗುತ್ತಾರೆ ಎಂಬ ದೈರ್ಯದಿಂದ ಮದುವೆಯಾಗಿ ಲವ್ ಮ್ಯಾರೇಜ್ ಎಂದು ಹೇಳಿರುತ್ತಾರೆ ಹೊರತು ಆ ಒಂದು ವರ್ಷವನ್ನು ಸಂಬಂದಗಳಿಂದ ದೂರವಿದ್ದು ಕಳೆದವರಿಗೆ ಗೊತ್ತಿರುತ್ತದೆ ..
ಹೊಂದಿಕೆಯೆಂಬುದು ಎಲ್ಲರಿಗು ಅಗತ್ಯವೇ,ಇದು ಅರಂಜ್ ಮದುವೆಯಾಗಿದ್ದರೆ ಮನಸುಗಳು ಒಡೆದ ಒಂದೇ ಮನೆಯಲ್ಲಿ ಪ್ರೀತಿಯಿಲ್ಲದಿದ್ದ ಬರಡು ಜೀವನ ನಡೆಸುತಿದ್ದರು ಅದು ಕೇವಲ ಮರ್ಯಾದಿಕೊಸ್ಕರ ಅಷ್ಟೆ ,ಮೀರಿದರೆ ವಿಚ್ಚೇದನ . ಮನೆಯಲ್ಲೇ ಹುಡುಕಿ ಒಪ್ಪಿ ಮಾಡಿದ ಮದುವೆಗಳು ಯಾವುದು ವಿಚ್ಚೆದನವಾಗಿಲ್ಲವೇ ? ಇದೆಲ್ಲ ಅವರವರ ಭಾವನೆ ವ್ಯಕ್ತಿತ್ವಕ್ಕೆ ಸಂಬಂದಿಸಿದ್ದು ಅಷ್ಟೆ ..
ತಾನು ಹೋದ ಮನೆಯಲ್ಲಿಯೂ ಹೇಗೆ ಇರಬೇಕೆಂದು ಸೊಸೆ ಅರ್ಥ ಮಾಡಿಕೊಂಡು ,ತನ್ನ ಮಗಳಿಗೆ ಎಷ್ಟು ಸ್ವಾತಂತ್ರವಿರುತ್ತದೋ ಅಷ್ಟೇ ಕೊಟ್ಟರೆ ಈ ತೊಂದರೆ ಇರುವುದಿಲ್ಲ .