ಸುತ್ತಲೂ ನಿಶ್ಯಬ್ದ ಕತ್ತಲಾವರಿಸುತಿದೆ
ಏಕೆ ಹೀಗೆ ? ಒಂದೂ ತಿಳಿಯುತ್ತಿಲ್ಲ !
ಜಗದ ಯಾವ ಜಂಜಾಟವೂ ಬೇಡ
ನಿಶ್ಯಬ್ದ.! ಎಷ್ಟು ನಿಶ್ಯಬ್ದ..! ಉಸಿರಾಟದ
ಸದ್ದೂ ಕೇಳಿಸದಷ್ಟು ನಿಶ್ಯಬ್ದ...!
ನಿಶ್ಯಬ್ದ ವೆಂದರೆ ಅದು ಬರಿ ಮೌನವಲ್ಲ
ಮನದ ನಿಶ್ಯಬ್ದದ ನಡುವೆ
ನಿರೀಕ್ಷೆಯ ಹೆಜ್ಜೆಯ ಸದ್ದು ಕೇಳುತಿದೆ
ಈ ಸ್ಥಿತಿ 'ಶಬರಿಯ ಸ್ಥಿತಿ ' ಇರಬಹುದೆ?
ಮೌನ ಲೋಕದ ನಡುವೆ
ಯಾರೋ ನಡೆದು ಬರುತ್ತಿದ್ದಾರೆ
ಯಾರದೋ ನಿರೀಕ್ಷೆಯಲಿ
ನಾವು ಕಾದಿರುವೆವೆ? ಶಬರಿ
ರಾಮನ ಬರುವಿಕೆಗೆ ಕಾದಂತೆ
ಈ ವ್ಯಾಕುಲತೆಗೆ ಮೌನಕೆ
ಕಾರಣಗಳು ತಿಳಿಯುತ್ತಿಲ್ಲ ಎಲ್ಲಿ
ಯಾರಿಗಾಗಿ ಕಾಯುತ್ತಿದ್ದೇವೆ?
ಯಾರು ಬರಲಿದ್ದಾರೆ ? ಸಣ್ಣ
ಸುಳಿವೂ ಇಲ್ಲ ಈ ನಿರೀಕ್ಷೆಯ
ಅಂತ್ಯ ಎಲ್ಲಿ ಯಾವತ್ತು ಹೇಗೆ?
ಶಬರಿಗಾದರೋ ರಾಮನ
ಬರುವಿಕೆಯ ನಿರೀಕ್ಷೆಯಿತ್ತು
ಅದರೆ ನಮಗೆ ಯಾರ ನಿರೀಕ್ಷೆ?
ಪ್ರತಿಯೊಬ್ಬನ ನಿಶ್ಯಬ್ದ ಲೋಕದಲಿ
ಶಬರಿಯೊಬ್ಬಳು ಬಂದು
ನೆಲೆ ನಿಂತಿರುತ್ತಾಳೆ ಆತನ ಬರಡು
ಬದುಕಿನ ನಿಶ್ಯಬ್ದ ದಾರಿಯಲಿ
ಕೈ ಹಿಡಿದು ನಡೆಸುವವಳೆ ಅವಳು
ಯುಗಾಂತರಗಳ ಆ ಹಿಂದಿನ ಶಬರಿ
ಇಂದಿಗೂ ಎಲ್ಲರಲೂ ಸ್ಥಾಪಿತಳಾಗುತ್ತ
ಮುನ್ನಡೆಸುತ್ತ ಬಂದಿದ್ದಾಳೆ
ಒಂಟಿತನದ ನಿಶ್ಯಬ್ದದ ನಿರೀಕ್ಷೆಯ ಸಂಗಾತಿ
ಆಕೆ ನಮ್ಮೊಳಗಿಂದ ಎದ್ದು ಹೋದಳೋ
ಅಲ್ಲಿ ಸಂಭವನೀಯತೆಯೇನೂ ಇರುವುದಿಲ್ಲ
ಮನ ಬರಿ ಖಾಲಿ ಖಾಲಿ
ಹೊರಗೆಲ್ಲ ಬರಿ ದಟ್ಟ ಕತ್ತಲೆಯೆ ಕತ್ತಲು
ಚುಕ್ಕಿಗಳ ಬೆಳಕೂ ಕೂಡ ಮಂಕು ಮಂಕು
ಅಸಹನೀಯ ಮೌನದಲಿ ಜೀವನದ
ದಾರಿ ಸುಸ್ತಾಗಿ ಪವಡಿಸಿದೆ ಏಕಾಂತದ
ನಿಶ್ಯಬ್ದದಲಿ ಅವ್ಯಕ್ತ ನಿರೀಕ್ಷೆಯೊಂದು
ಕಾತರದಿ ಕಾಯ್ದಿದೆ ಯಾರಾದರಾ ದಾರಿಯಲಿ
ಸಾಗಿ ಬರುವರೆ? ಬದುಕಿಗೊಂದು ಅರ್ಥ
ಕೊಡುವರೆ ಎಂದು ? ನಿರೀಕ್ಷೆ.! ಬರಿ ನಿರೀಕ್ಷೆ..!
ಅರ್ಥಹೀನ ನಿರೀಕ್ಷೆ...!
ಆದರೂ ನಮ್ಮ ನಿರೀಕ್ಷೆಗಳು ಜೀವಂತ
ಅನೇಕ ಸಂಧರ್ಭಗಳಲವು
ಸುಳ್ಳಾಗಲೂ ಬಹುದು ಆದರೂ
ಮೊಂಡು ಹಿಡಿದ ಮನ ಹುಸಿ ನಿರೀಕ್ಷೆಯ
ಸೆರಗು ಹಿಡಿದು ನಿರಪೇಕ್ಷ ಭಾವ ಹೊತ್ತು
ಕಾಯುತ್ತದೆ ಸಂತೈಸುತ್ತದೆ ಜೀವನದ
ಕೊನೆಯ ಗಳಿಗೆಯ ವರೆಗೂ
ಇರಬಹುದೆ ಅದು 'ಶಬರಿಯ ಮನಸ್ಥಿತಿ' ?
ಬಂಡೆಗಲ್ಲುಗಳ ಬೆಟ್ಟಗಳ ದಾರಿಯಲಿ ಒಣಗಿದ
ಬೋರೆ ಹಣ್ಣುಗಳ ಸೆರಗಲಡಗಿಸಿಕೊಂಡು
ಯುಗ ಯುಗಾಂತರಗಳಿಂದ ರಾಮನಿಗಾಗಿ
ಕಾದ ಶಬರಿ ಯಾವಾಗ ಎಂದು ಎಲ್ಲಿ ಎಲ್ಲರ
ಮನವನಾವರಿಸಿದಳು ? ಆಕೆ ಬರಿ ರಾಮಾಯಣದ
ಒಂದು ಪಾತ್ರವಾಗಿ ಮಾತ್ರ ಉಳಿಯಲಿಲ್ಲ.!
ಬರಿ ಶಬರಿಯೆ ಏಕೆ ನಮ್ಮನಾವರಿಸುತ್ತ ಕಾಡುತ್ತ
ಬಂದಿದ್ದಾಳೆ? ಅದೇ ರಾಮಾಯಣದ ಕಾಲದಲಿ
ರಾಮನ ಆಗಮನಕೆ ಕಾದ ಅಹಲ್ಯೆಯಿದ್ದಳು
ಸೀತೆಯಿದ್ದಳು ಆತನ ಕುಟುಂಬ ಪರಿವಾರವಿತ್ತು
ಆದರೆ ಅಹಲ್ಯೆ ಶಬರಿಯಲ್ಲ ಆಕೆ ಇಂದ್ರನ
ಲಂಪಟತನಕ್ಕೆ ಬಲಿಯಾಗಿ ಹುಂಬ ಗಂಡನ
ಕೋಪಕ್ಕೆ ತುತ್ತಾಗಿ ಕಲ್ಲಾದ ಅಮಾಯಕೆಯವಳು
ಆಕೆಯೊಂದು ಕಲ್ಲು ಅದಕೆ ನಿರೀಕ್ಷೆಯಿಲ್ಲ
ಅದು ಯಾರಿಗಾಗಿಯೂ ಕಾಯುವುದಿಲ್ಲ ಮೇಲಾಗಿ
ಅದೊಂದು ಸಾಕ್ಷ್ಯವೂ ಅಲ್ಲ ಚಲನೆಯಿಲ್ಲದೆ
ಬಿದ್ದುಕೊಂಡ ಜಡ ವಸ್ತುವದು ಶ್ರೀ ರಾಮನೆ
ಆ ದಾರಿಯಲಿ ಬಂದು ಎಡವಿ ಮುಗ್ಗರಿಸಿ ಅದಕೆ
ಕಾಲು ತಾಗಿದಾಗ ಅಹಲ್ಯೆಗೆ ಶಾಪ ವಿಮುಕ್ತಿ
ಅಲ್ಲಿಯ ವರೆಗೂ ನಿರೀಕ್ಷೆಯ ಭಾರದಲಿ
ನರಳಿದ ನಿರ್ಜೀವ ಸ್ಥಿತಿ ಆಕೆಯದು
ಆದರೆ ಸೀತೆಯದು ಇನ್ನೊಂದು ಬಗೆಯ ಸ್ಥಿತಿ
ಆಕೆಯ ಎದುರು ಆಯ್ಕೆಗೆ ಮಾರ್ಗಗಳಿವೆ
ಬಿಟ್ಟು ಬಂದ ರಾಮನಿದ್ದಾನೆ ಅಪಹಿರಿಸಿ ತಂದ
ರಾವಣನಿದ್ದಾನೆ ಕಾವಲಿನ ರಾಕ್ಷಸಿಯರಿದ್ದಾರೆ
ನೀರವ ಮೌನದ ಅಶೋಕವನದ ಶೋಕವಿದೆ
ಹನುಮನ ಆಗಮನದ ನಿರೀಕ್ಷೆಯಿದೆ ನೆನಪಿಗೆ
ಬಂದು ಕಾಡಲು ರಾಮನಿದ್ದಾನೆ ಶಪಿಸಲು
ಲಂಕೇಶನಿದ್ದಾನೆ ಲಂಕೆಯಿದೆ ಅಲ್ಲಿಂದ
ಮರಳಿದರೆ ಅಯೋಧ್ಯೆಯಿದೆ
ಆದರೆ ಶಬರಿಗೇನಿದೆ? ಒಂದು ಹಿಡಿ ಬೋರೆಹಣ್ಣು
ಕೊಣೆಗಾಣದ ನಿರೀಕ್ಷೆ ಯಾಕಾಗಿ ಅವಳು
ಎಲ್ಲರಿಗೂ ಇಷ್ಟವಾಗುತ್ತಾಳೆ ? ನಿರಾಶೆ ಮುಪ್ಪು
ನಿಶ್ಯಬ್ದ ಸ್ಥಗಿತ ಕಾಲ ಬೇಸರ ಪಡದ ಮನ
ಎಷ್ಟು ಕಾಲ ಕಾದರೂ ಬಾರದ ಶ್ರೀರಾಮನ
ನಿರೀಕ್ಷೆಯಲಿ ಸಂಯಮದಿಂದ ಕಾಯುತ್ತಲೆ
ಇರುವ ಅವಳ ಸಹನೆಗಾಗಿ ಅವಳ ನಿರೀಕ್ಷೆ
ಮುಗಿದ ನಂತರವೂ ಆಕೆ ಕಾಲ ಗರ್ಭ ಸೇರಲಿಲ್ಲ
ಪುನರಾವತಾರ ಪಡೆದು ನಮ್ಮೆಲ್ಲರೊಳಗೆ
ಅವಿನಾಭಾವವಾಗಿ ಸೇರಿ ಬಿಟ್ಟಿದ್ದಾಳೆ ನಿರೀಕ್ಷೆಯ
ಭಾರದಲಿ ಕಾದು ಮುಪ್ಪಾದ ಆಕೆಗೆ ಮತ್ತೆ ಮುಪ್ಪಿನ
ಭಯವಿಲ್ಲ ಮುಖ್ಯವಾಗಿ ಆಕೆಗೆ ಆಯ್ಕೆಗಳಿಲ್ಲ
ನಿರೀಕ್ಷೆ ತಪ್ಪಲಿಲ್ಲ ಅದು ನಿರಂತರವಾದ ಕಾರಣ
ಆಕೆಗೆ ಸಾವಿರಲಿಲ್ಲ ಎಂದಿಗೂ ಆಕೆಗೆ ಸಾವಿಲ್ಲ
ಆಕೆ ಚಿರಂಜೀವಿ ಆಶೆ ನಿರೀಕ್ಷೆಗಳಲ್ಲಿಯೆ
ಬದುಕು ಮುಗಿದು ಹೋಗುತ್ತದೆ
ನಿರೀಕ್ಷೆಯ ಗೈರತ್ತು ಅದು.! ಆದರೂ ಮೌನದ
ಅಸಹನೀಯ ದಾರಿಯಲಿ ಆಕೆಯ ಆರಾಧ್ಯ ದೈವ
ಬರುವನೆಂದು ನಮ್ಮನಾವರಿಸಿ ಕಾದಿದ್ದಾಳೆ ಶಬರಿ
ಯುಗಗಳಳಿದು ಯುಗಗಳು ಬಂದರೂ
ನಿರೀಕ್ಷೆಯ ಶಬರಿ ಎಲ್ಲಿಗೂ ಹೋಗುವುದಿಲ್ಲ
ಕಾಯುತ್ತಲೆ ಇರುತ್ತಾಳೆ ಸಹನಶೀಲೆ ಎಲ್ಲ ಕಾಲಕ್ಕೂ
***
ಚಿತ್ರ ಕೃಪೆ: ಅಂತರ್ ಜಾಲ
ಪ್ರತಿಕ್ರಿಯೆ (5)