ಸಂಪದದಲ್ಲಿ ಬರುವ / ಬಂದಿರುವ ಎಷ್ಟೋ ರೀತಿಯ ಬರಹ, ಲೇಖನಗಳ ವೈವಿಧ್ಯತೆ ನಿಜಕ್ಕೂ ಅಗಾಧವಾದದ್ದು. ಆದರೆ ಸಂಪದ, ಸಂಪದಿಗ, ಸಂಪದ ಆಡಳಿತದ ನೆನಪಿನ ಕುರುಹಾಗಿ ಬಂದ ಬರಹಗಳು ಹೆಚ್ಚಿರಲಾರದೆಂದು ನನ್ನ ಅನಿಸಿಕೆ. ಪ್ರತಿ ವರ್ಷ ವಾರ್ಷಿಕೋತ್ಸವದ ರೀತಿಯ ಆಚರಣೆಯಿದೆಯೋ ಏನೊ ಗೊತ್ತಿಲ್ಲ. ಕೆಲ ದಿನದ ಹಿಂದೆ ಈ ಅನಿಸಿಕೆ ಮನಸಿಗೆ ಬಂದಾಗ ಹಾಗೆ ಕೆಲವು ಸಾಲುಗಳನ್ನು ಗೀಚಿದ್ದರ ಪರಿಣಾಮ ಈ ಸರಳ ಕವನ. ಸಂಪದ ಸಿದ್ದಾಂತದ ವೈಶಿಷ್ಠ್ಯ , ಸಂಪದಿಗರ ಅಲಿಖಿತ ನೀತಿ ಸಂಹಿತೆ, ಅದರ ಬೆನ್ನೆಲುಬಾಗಿರುವ ಕಾರ್ಯ ನಿರ್ವಾಹಕ ತಂಡ ಮತ್ತು ಆಡಳಿತ ವರ್ಗ, ಸರಳ ಮಾದರಿಯ ನಮೂನೆ, ಭವಿಷ್ಯಾತ್ಮಕ ದೃಷ್ಟಿಕೋನ - ಎಲ್ಲವು ಸ್ಪೂರ್ತಿಯ ಸರಕಾಗಿ ಇಲ್ಲಿ ಸಾಲಾಗಿ ಸೇರಿಕೊಂಡಿದೆ. ಪ್ರಾಯಶಃ ಇಷ್ಟು ವರ್ಷಗಳ ಪುಟ್ಟ ಇತಿಹಾಸದಲ್ಲಿ ಅನೇಕ ಸಿಹಿ-ಕಹಿ ಅನುಭವಗಳಿರಬಹುದಾದರೂ, ಪರಿಮಿತ ಮಟ್ಟ ಮೀರದೆ ತಂತಾನೆ ಸಂತುಲಿಸಿಕೊಂಡು ಮುನ್ನಡೆದಿದೆ ಎನ್ನುವುದಕ್ಕೆ ಸಾಕ್ಷಿ, ಈಗಲೂ ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿರುವುದು. ಹೀಗಾಗಿ ಇದೊಂದು ಯಶಸ್ವಿ ಮಾದರಿ ನಮೂನೆಯೆಂದು ಪರಿಗಣಿಸಲು ಅಡ್ಡಿಯಿಲ್ಲವೆಂದೆ ನನ್ನ ಭಾವನೆ.
.
ಸಂಪದದಲ್ಲಿ ಮೇಲ್ನೋಟಕ್ಕೆ ಕಾಣದ ಹಲವಾರು ವೈಶಿಷ್ಠ್ಯಗಳಿವೆ. ಬೋರಾಗದಂತೆ ಇರಿಸಲು ಬಾಹ್ಯರೂಪ ಸತತ ರೂಪಾಂತರವಾಗುತ್ತಿದ್ದರು ಸಂಪದಿಗರಿಗೆ ಅದರ ಪರಿಣಾಮ ಗಾಢವಾಗಿ ತಟ್ಟದ ಹಾಗೆ ಸಮಾನಾಂತರವಾಗಿ ಸಂಭಾಳಿಸಿಕೊಂಡು ಹೋಗುವುದು ದೊಡ್ಡ ಪಂಥವೆ ಸರಿ (ಐಟಿಯಲ್ಲಿ ಕೆಲಸ ಮಾಡುವವರಿಗೆ ಸಿಸ್ಟಂ ಡೌನ್ ಟೈಮುಗಳ ಪರಿಚಯವಿರುವುದರಿಂದ ಅವರಿಗೆ ಇದನ್ನು ಊಹಿಸಲು ತುಂಬಾ ಸುಲಭ). ಹಾಗೆಯೆ ದಿನೆದಿನೆ ಬೆಳೆಯುತ್ತಿರುವ ಮಾಹಿತಿಯ ಗಾತ್ರವನ್ನು ಸಂಭಾಳಿಸಿಕೊಂಡು ಹೋಗಬೇಕು. ನೇರ ಜಾಹೀರಾತುಗಳ ಹಂಗಿಲ್ಲದೆ ಖರ್ಚು ವೆಚ್ಚ ಭರಿಸಿಲೊಂಡು ತೂಗಿಸಬೇಕು. ಇಪ್ಪತನಾಲ್ಕು ಗಂಟೆಗಳು ಬಳಕೆದಾರನ ಬಳಕೆಗೆ ದೊರಕುವ ಹಾಗೆ ಸಂತುಲಿಸಬೇಕು; ಜತೆಜತೆಯೆ ಕನಿಷ್ಠ ಅಗತ್ಯದ ತಾಂತ್ರಿಕ ಸಹಾಯವನ್ನು ಕೊಡುವ ಕೈಂಕರ್ಯ. ಇದೆಲ್ಲವನ್ನು ನಡೆಸುವ ಶಕ್ತಿಮೂಲ ಬರುತ್ತಿರುವುದು ನಾಡಿನ ಮತ್ತು ಭಾಷೆಯ ಬಗೆಗಿನ ಅಭಿಮಾನ, ಆರಾಧನೆ, ನಿಸ್ವಾರ್ಥತೆ ಮತ್ತು ಸಮೂಹ ಕಾಳಜಿಗಳಂತಹ ಉನ್ನತ ಧ್ಯೇಯೋದ್ದೇಶಗಳಿಂದ. ಇದೆಲ್ಲದರ ಜತೆಗೆ ಈ ಜಾಗತಿಕ ಗೋಮಾಳದಲ್ಲಿ ಕನ್ನಡದ ಹೆಜ್ಜೆ ಗುರುತುಗಳನ್ನು ಸ್ಪಷ್ಟವಾಗಿ, ನಿಖರವಾಗಿ ದಾಖಲಿಸಿಡುವ ಹವಣಿಕೆ. ಇನ್ನೂ ಇಲ್ಲಿ ಬರೆಯದ, ಹೇಳದ ಅದೆಷ್ಟೊ ಕಾರಣಗಳಿರಬಹುದು.
.
ಇಲ್ಲಿ ಇನ್ನೂ ಒಂದು ಪ್ರಮುಖ ಅಂಶವಿದೆ - ಸಂಪದ ಒಂದು ವೇದಿಕೆಯಾಗಿ ಮುಖ್ಯವಾಹಿನಿಯಲ್ಲಾಗಲಿ ಅಥವಾ ಜನಪ್ರಿಯ ಮುದ್ರಣ ಮಾಧ್ಯಮದಲ್ಲಾಗಲಿ ಅವಕಾಶವಿಲ್ಲದೆ ತೊಳಲುತ್ತಿರುವ ಎಷ್ಟೋ ಹಿರಿಯ, ಕಿರಿಯ ಬರಹಗಾರರಿಗೆ ಹಾಗೂ ಈ ಹಾದಿಯಲ್ಲಿ ಪ್ರಯತ್ನಿಸಿ ನೋಡಲು ಹವಣಿಸುತ್ತಿರುವವರಿಗೆ ಒಂದು ಮುಕ್ತ ಮಾಧ್ಯಮವಾಗಿ ಬಾಗಿಲು ತೆರೆದಿಟ್ಟಿದೆ - ಅದೂ ಯಾವ ಅನಗತ್ಯ ನಿಯಂತ್ರಣವೂ ಇರದ ಹೆಬ್ಬಾಗಿಲು. ಸಂಪದಿಗರು ಸಂಪದಿಗರನ್ನು ತಲುಪುವ ಸುಲಭ ಪಥ ತೆರೆದಿಟ್ಟ ಕಾರಣ ಜಾಗತಿಕ ನೆಲೆಯ ಗಣನೆಯಿಲ್ಲದೆ ಎಲ್ಲರೂ ಒಂದೆಡೆ ಸೇರಬಲ್ಲ ಅವಕಾಶ ಒದಗಿಸಿಕೊಟ್ಟಿದೆ. ಇದು ಸಂಪದದ ಒಂದು ಅತ್ಯಮೂಲ್ಯ ಕಾಣಿಕೆ ಎಂದೆ ಹೇಳಬೇಕು. ಇಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತ ಇಡಿ ಪ್ರಕ್ರಿಯೆಯನ್ನು ಜೀವಂತವಾಗಿಟ್ಟಿರುವ ಸಂಪದಿಗರ ಪಾತ್ರವೂ ಅಷ್ಟೆ ಮಹತ್ವದ್ದು.
.
ಅಂತೆಯೆ, ಸಂಪದದಂತಹ ಮಾದರಿ-ಸ್ವರೂಪ ಪ್ರಯೋಗವೆ ಅತ್ಯಂತ ವಿಶೇಷ ತರದ್ದು, ಅಪರೂಪದ್ದು ಹಾಗು ವೈಶಿಷ್ಠ್ಯಪೂರ್ಣವಾದದ್ದು. ವಿಕಸನವಾಗುತ್ತಿರುವ ಜಾಗತಿಕ ಗೋಮಾಳದಲ್ಲಿ ಉಳಿದು ಸೆಣೆಸಲು ಬೇಕಾದ ಹೊಸರೀತಿಯ ಸಂವಹನ, ಸಹಕಾರ, ಇರುವ ಸ್ಥಳದ ತೊಡಕಿಲ್ಲದೆ ಯಾವ ಮೂಲೆಯಿಂದಾದರೂ ಭಾಗವಹಿಸಿ ಕಾಣಿಕೆ ನೀಡುವ ಅಥವಾ ಜ್ಞಾನ ವೃದ್ಧಿಸಿಕೊಳ್ಳುವ ಅವಕಾಶ - ಇಡಿ ಪ್ರಕ್ರಿಯೆಯಲ್ಲಿ ತಮ್ಮ ಅರಿವಿಲ್ಲದೆ ಹೊಸದಾಗಿ ಉದ್ಭವವಾಗುತ್ತಿರುವ, ಆಗಬಹುದಾದ ಹೊಸ ವಾಣಿಜ್ಯ ನಮೂನೆಯ (ಬಿಜಿನೆಸ್ ಮಾಡಲ್) ಭಾಗವಾಗುವ, ಪಾಲ್ಗೊಳ್ಳುವ, ಸಾಕ್ಷೀಭೂತರಾಗುವ ಅವಕಾಶ. ಇದಕ್ಕೆಲ್ಲ ಕೇಂದ್ರ ವೇದಿಕೆಯಾಗಿ, ಸಮಷ್ಟಿಯ ಕೊಂಡಿಯಾಗಿರುವ 'ಸಂಪದಕ್ಕೆ' ಕೃತಜ್ಞತೆಯನ್ನರ್ಪಿಸುವ ಕಿರುಕಾಣಿಕೆಯಾಗಿ ಈ ಬರಹ - ಸಂಪದಿಗರ ಪರವಾಗಿ, ಸಂಪದಿಗರಿಗಾಗಿ ಮತ್ತು ಸಂಪದಿಗರಿಂದ, ಈ ರಾಜ್ಯೋತ್ಸವದ ತಿಂಗಳಿನಲ್ಲಿ :-)
.
ಇನ್ನು ಅದೆಷ್ಟೊ ವಿಷಯಗಳಿರಬಹುದು ಬರೆಯಹೊರಟರೆ - ಅದರ ಅಂತದ್ದೆಲ್ಲ ವಿವರಗಳನ್ನು ಹೆಕ್ಕಿ ದಾಖಲಿಸುವ ಹುನ್ನಾರವನ್ನು ಬದಿಗಿರಿಸಿ, ಸಂಪದ ಬಳಗದ - ಸಂಪದಿಗ ಓದುಗರೂ ಸೇರಿದಂತೆ - ಎಲ್ಲರಿಗು ಕೃತಜ್ಞತೆ, ಅಭಿನಂದನೆ ಹಾಗೂ ನಮನಗಳನ್ನು ಈ ಕವಿತೆಯ ಮೂಲಕ ಸಲ್ಲಿಸೋಣ ಮತ್ತು ಈ ಕನ್ನಡ ಅಭಿಯಾನ ರಥ ಹೀಗೆ ಉರುಳಿರಲಿ ಸತತ ಎಂದು ಮನಸಾರೆ ಹಾರೈಸೋಣ.
.
ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು
.
.
ಈ ಸಂಪದ
________________
.
ಈ ಸಂಪದ
ತೆರೆಸೊಳಗಿನ ಕದ
ಎಳೆದೆಲ್ಲ ಎದೆ ಮಾತು
ಹೊರಗೆ ಹಾಕಿದ್ದಷ್ಟೆ ಗೊತ್ತು ||
ಈಗ ಸಂಪದಿಗ
ತಾನೆ ಲೇಖಕ ಓದುಗ
ವಿಮರ್ಶೆಗೂ ವಿಮರ್ಶಿಸುತ
ಅವನನವನೆ ಸರಿ ಪ್ರಕಟಿಸುತ ||
.
ಬೇಡದು ಅರ್ಜಿ
ಹಿಡಿಯದೆ ಯಾರ ಮರ್ಜಿ
ಬಿಚ್ಚಿದರೆ ಸರಿ ನಿನ್ನಯ ಪ್ರವರ
ಟೀಕೆ ಟಿಪ್ಪಣಿ ಮೆಚ್ಚುಗೆ ಭರಪೂರ ||
.
ಕಾಯುವ ತವಕ
ಪ್ರಕಟಿಸಲಲ್ಲ ಸರಕ
ಕ್ಲಿಕ್ಕೆಷ್ಟು ಕಿಕ್ಕೆಷ್ಟು ನೇರಾ
ಸದ್ದಿದ್ದರೆ ತಂತಾನೆ ಪ್ರಚಾರ ||
ತಂಡವೇ 'ಶೂನ್ಯ'
ಅದೃಶ್ಯ ಜಗ ಮಾನ್ಯ
ಕಾರ್ಯಗಳಾಗಷ್ಟೆ ಬಿತ್ತರ
ಕಾರಣ ನೇಪಥ್ಯದಾ ವಿಸ್ತಾರ ||
.
ಸ್ವನೀತಿ ಸಂಹಿತೆ
ಎಲ್ಲೆ ದಾಟದ ಸಹಿಷ್ಣುತೆ
ನಿಯಂತ್ರಣವಿಲ್ಲದ ಕಡಿವಾಣ
ಅನುಸರಿಸುತ ಸಂಪದಿಗ ಜಾಣ ||
.
ಇಲ್ಲದ ಜಾಹೀರಾತು
ಪುಕ್ಕಟೆ ಹಂಚಿದ ಕನಸು
ನನಸಾಗಿಸಲೆಷ್ಟಿರಬೇಕು ಕಸು
ಹಿಂದಿರುವವರ ನಮಿಸಷ್ಟೇ ಹರಸು ||
.
ಎಚ್ಚರವಿರಲಿ ಸದ
ಈ ಮಾದರಿ ಸಮೃದ್ಧ
ಇದು ಸರಳತೆಯಲಿಹ ಭವ್ಯ
ಸಂಕೀರ್ಣಿಸದೆ ರಥವುರುಳೆ ಕಾವ್ಯ ||
.
ಸಂಪದಿಗರು ನಾವೆಲ್ಲ
ಬೆಳೆಸಬೇಕಿ ಸಸ್ಯಶಾಮಲ
ಅಳಿಲು ಸೇವೆಯಾದರು ಚಿತ್ತ
ಹನಿಹನಿಗೂಡಿದರೆ ತಾನೆ ಮೊತ್ತ ||
.
.
ಧನ್ಯವಾದಗಳೊಂದಿಗೆ
- ನಾಗೇಶ ಮೈಸೂರು
ಪ್ರತಿಕ್ರಿಯೆ (6)
ನಾಚಿಕೆಯನು ಬದಿಗಿತ್ತು
ದುಡಿಯುವೆವು ಕನ್ನಡಕ್ಕೆ,,
ಕನ್ನಡದ ಸಂಪದಕ್ಕೆ, ದಿಕ್ಕು ತೊರಲು ಇಲ್ಲುಂಟು, ನಮ್ಮ ಜನರ ನಂಟು,,
ತಪ್ಪಿದ್ದರೆ ತಿದ್ದುವವರುಂಟು,,
ಸರಿ ಇದ್ದರೆ ಹಿಗ್ಗುವವರುಂಟು,,, ಎಲ್ಲರೆದೆಯಲ್ಲೂ ಬೆಳಕುಂಟು,,,,
ನಿಮ್ಮ ಪ್ರಯತ್ನಕ್ಕೆ ನಮ್ಮೆಲ್ಲರ ಒಲವುಂಟು,,,,
" ಈ ಸಂಪದ " ಸಾಂಧರ್ಭಿಕ ಸಕಾಲಿಕ ಲೇಖನ, ಸಂಪದ ಕನ್ನಡ ಬ್ಲಾಗಿನ ಯಶೋಗಾಥೆಯನ್ನು ಸಾರುವ ಲೇಖನ, ಸಂಪದ ನನ್ನಂತಹ ಶ್ರೀ ಸಾಮಾನ್ಯನೂ ಸಹ ಕನ್ನಡದ ಚಟುವಟಿಕೆಯಲ್ಲಿ ಭಾಗವಹಿಸಬಹುದು ಎಂಬುದನ್ನು ತೋರಿಸಿ ಯಾವುದೇ ಸಾಹಿತ್ಯಿಕ ಹಿನ್ನೆಲೆಯಿಲ್ಲದ ನನ್ನಂತಹವನ ಬರವಣಿಗೆಯ ಹವ್ಯಾಸವನ್ನು ಪ್ರೋತ್ಸಾಹಿಸಿದ ರೀತಿ ಅನನ್ಯ, ನನ್ನನ್ನು ಸಂಪದ ಬ್ಲಾಗಿಗೆ ಪರಚಯಿಸಿದ ರಮೇಶ ಕಾಮತ ರಿಗೂ ನನ್ನ ಎಲ್ಪ ಬರವಣಿಗೆಯನ್ನು ಮೆಚ್ಚಿ ಪ್ರೋತ್ಸಾಹಿಸಿದ ಸಂಪದದ ಆಡಳಿತ ವರ್ಗ ಮತ್ತು ಓದುಗರಿಗೂ ಈ ಕನ್ನಡ ರಾಜ್ಯೋತ್ಸವದ ಸುಸಂಧರ್ಭದಲ್ಲಿ ಧನ್ಯವಾದಗಳನ್ನರ್ಪಿಸುವೆ. ಅತ್ಯುತ್ತಮ ಲೇಖನ ನಾಗೇಶ ರವರೆ ಧನ್ಯವಾದಗಳು.
ನಿಮಗಿರುವ ' ಸಂಪದ 'ದ ಕುರಿತು ಇರುವ ಕಳಕಳಿ ಮೆಚ್ಚುವಂತದ್ದು.ಅಂತಯೇ ನಿರಂತರ ಲೇಖನ, ಕವನ ಗಳನ್ನು ತಾವು ಬರೆದು 'ಸಂಪದ" ಕ್ಕೆ ಇನ್ನಷ್ಟು ಮೆರಗನ್ನು ನೀಡಿ ಸಂಪದ ಓದುಗರಿಗೆ ಹರ್ಷಿತರನ್ನಾಗಿಸಿರುವಿರಿ.ನೀವಂದಂತೆ" ಸಂಪದ"ವನ್ನು ನಮಗೆ ನೀಡಿ ಯಾವ ಪಲಾಪೇಕ್ಷೆಯನ್ನು ಕೇಳದೆ ನಿರ್ವಹಿಸುತ್ತಿರುವ ನಿರ್ವಾಹಕರನ್ನು ಎಷ್ಟು ನೆನೆದರೂ ಸಾಲದು.ನಾನೊಮ್ಮೆ" ಸಂಪದ "ಕ್ಕೆ ಏಳು ವರುಷ ತುಂಬಿ ಎಂಟಕ್ಕೆ ಅಡಿಇಟ್ಟ ಆ ಕ್ಷಣಗಳನ್ನು ನೆನಪಿಸಿಕೊಂಡು ನಿಮ್ಮ ಹಾಗೆ ನಾನೆರಡು ಸಾಲನ್ನು ಬರೆದಿದ್ದೆ. ಅದರ ಲಿಂಕ ಇಲ್ಲಿದೆ. http://sampada.net/blog/ (21/7/2012)
http://sampada.net/blog/%E0%B2%B8%E0%B2%82%E0%B2%AA%E0%B2%A6-%E0%B2%A8%E...
ಗೋಚರಿಸುವುದು ರಾತ್ರಿ ಮಾತ್ರ, ಸದಾ ಮಿನುಗುವ ನಕ್ಷತ್ರ
ಸದಾ ಗೋಚರಿಸುವುದು ಸಂಪದದಲ್ಲಿ ಮಾತ್ರ. ಸಂಪದವನ್ನು ಸಕಾಲ ಪ್ರೋತ್ಸಾಹಿಸಲು
ಪ್ರತಿಕ್ರಿಯಿಸುವರ ಸಂಖ್ಯೆ ಹೆಚ್ಚಬೇಕಿದೆ ಹಾಗಾದರೆ *******ಗಳು ಹೆಚ್ಚುತ್ತವೆ
ಸಂಪದದಲ್ಲು ಅದರ ಪ್ರತಿಕ್ರಿಯೆಯಲ್ಲು. ದನ್ಯವಾದಗಳು ಸರ್
ಸಂಪದದ ಹುಟ್ಟು ಹಬ್ಬ ತಿಳಿಸಿದ್ದಕ್ಕೆ,,,
ಸಂಪದದ ಕುರಿತ ಅರ್ಥಪೂರ್ಣ ಬರಹಗಳಲ್ಲಿ ನಿಮ್ಮದೂ ಒಂದು. ಸಪ್ತಗಿರಿಯವರು ಹೇಳಿದಂತೆ ಇನ್ನೂ ಒಂದು ಅತ್ಯುತ್ತಮವಾದ ವಿಶ್ಲೇಷಣಾತ್ಮಕ ಬರಹವೊಂದನ್ನು ಪಾರ್ಥಸಾರಥಿಗಳು ಬರೆದಿದ್ದರು. ಅದು ಸಂಪದಿಗರ ನಾಡಿ ಮಿಡಿತದ ಕುರಿತಾಗಿ ಇತ್ತು. ಅದರಲ್ಲಿ ಸಂಪದದ ಕುರಿತ ಓದುಗರ ಮತ್ತು ಬರಹಗಾರರ ಕುರಿತ ಮತ್ತು ಬರಹಗಳಿಗೆ ಪ್ರತಿಕ್ರಿಯಿಸುವವರ ಹಾಗೂ ಪ್ರತಿಕ್ರಿಯೆ ನೀಡದೇ ಇರುವವರ ಮನೋಧರ್ಮದ ಕುರಿತಾಗಿಯೂ ಬಹಳ ಸೊಗಸಾದ ವಿವರಣೆಯಿತ್ತು. ಆ ಲೇಖನದ ಕೊಂಡಿ ದೊರೆಯುತ್ತಿಲ್ಲ, ಬಹುಶಃ ಪಾರ್ಥಸಾರಥಿಗಳು ಈ ಪ್ರತಿಕ್ರಿಯೆಯನ್ನು ನೋಡಿದರೆ ಅವರೇ ಕೊಡಬಹುದೆನಿಸುತ್ತದೆ. ಇರಲಿ ಬಿಡಿ, ನನ್ನ ಮಟ್ಟಿಗಂತೂ ಕರ್ನಾಟಕದ ಹೊರಗಿದ್ದುಕೊಂಡೂ ಕರ್ನಾಟಕದಲ್ಲೇ ಇದ್ದೇನೆಂದು ಭಾವಿಸುವಂತೆ ಮಾಡಿರುವುದು ಈ ಸಂಪದವೊಂದೇ. ನೀವೆಂದಂತೆ ಸಂಪದದಿಂದಾಗಿ ಬರವಣಿಗೆಯನ್ನೇ ಕೈಗೊಳ್ಳದ ನನ್ನಂತಹವರು ಇಂದು ಕನ್ನಡದಲ್ಲಿ ನಿಯಮಿತವಾಗಿ ಬರೆಯುವಂತಾಗಿರುವುದು ಸಂಪದದ ಪುಣ್ಯವಿಶೇಷದಿಂದಾಗಿಯೇ; ಇದಕ್ಕಾಗಿ ನಾವು ನಾಡಿಗರಿಗೆ ಕೃತಜ್ಞತೆಗಳನ್ನರ್ಪಿಸೋಣ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ಬಹುಷ ಆ ಬರ್ಹದ ಹೆಸರು ' ಸಂಪದದಲ್ಲಿ ಆರ್ತನಾದಗಳು' ಎಂದು ಎನೋ ಇದ್ದ ಹಾಗೆ ನೆನಪು ..
ಆ ಬರಹವನ್ನು ಇಲ್ಲಿ(ಸಂಪದದಲ್ಲಿ) ಹುಡುಕಬಹುದು ( ಹುಡುಕಿ ಅಪ್ಛನ್ ಉಪಯೋಗಿಸಿ)...
ಅಥವಾ http://sampada.net/blog/partha1059 ಶ್ಹುಭವಾಗಲಿ/.. \|/
ನಾನು ನೀವು ಸೂಚಿಸಿರುವ ಕೊಂಡಿಯಲ್ಲಿ ಜಾಲಾಡಿಸಿದ ನಂತರವೇ ಕೈಚಲ್ಲಿ ಕುಳಿತದ್ದು. ಅದನ್ನು ಯಾವ ಪಾತಾಳ ಗರಡಿ ಹಾಕಿ ಹುಡುಕಬೇಕೋ ತಿಳಿಯದು :) ಅದಕ್ಕೆ ಸೂಕ್ತ ಕೊಂಡಿಯನ್ನು ಆ ಪಾರ್ಥಸಾರಥಿಗಳೇ ಕೊಡಬೇಕಷ್ಟೇ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ