ಒಬ್ಬ ನರಮನುಷ್ಯ ಅರ್ಥಾತ್ ಹುಲುಮಾನವ ಸತ್ತು ಯಮಲೋಕಕ್ಕೆ ಹೋದ. ಅಲ್ಲಿ ಅವನ ಪಾಪ ಪುಣ್ಯಗಳ ಲೆಕ್ಕವನ್ನು ನೋಡಲಾಗಿ ಎರಡೂ ಸಮನಾಗಿ ತೂಗಿದವು. ಇದನ್ನು ನೋಡಿದ ಯಮರಾಜ  ಅವನ ಮುಂದೆ ಹೀಗೆ ಆಯ್ಕೆಯನ್ನಿಟ್ಟ, "ಮಾನವನೇ, ನೀನು ಪಾಪ-ಪುಣ್ಯಗಳೆರಡನ್ನೂ ಸಮನಾಗಿ ಮಾಡಿರುವುದರಿಂದ ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುವ ಆಯ್ಕೆಯನ್ನು ನಿನಗೇ ಬಿಟ್ಟಿದ್ದೇನೆ". ಇದನ್ನು ಕೇಳಿದ ನರಮಾನವ ಮೊದಲು ಅವೆರಡೂ ಲೋಕಗಳನ್ನು ಒಮ್ಮೆ ನೋಡಿ ತಾನು ನಿರ್ಣಯ ಕೈಗೊಳ್ಳುವುದಾಗಿ ಹೇಳಿದಾಗ ಅದಕ್ಕೆ ಯಮ ತನ್ನ ಒಪ್ಪಿಗೆಯನ್ನು ಕೊಟ್ಟ. ಮೊದಲು ಈ ಹುಲುಮಾನವ ಸ್ವರ್ಗದ ಬಾಗಿಲಿಗೆ ಬಂದು ನೋಡಿದ; ಅಲ್ಲೆಲ್ಲಾ ಋಷಿಮುನಿಗಳು ತಪಸ್ಸು ಮಾಡುತ್ತಾ ಧ್ಯಾನಮಗ್ನರಾಗಿ ಕುಳಿತಿದ್ದರು. ಅವನಿಗೆ ತಾನೆಂದುಕೊಂಡ ರಂಭೆ, ಊರ್ವಶಿ, ಮೇನಕೆಯರಾರು ಕಣ್ಣಿಗೆ ಬೀಳಲಿಲ್ಲ. ಸರಿಯೆಂದುಕೊಂಡು ನರಕದ ಬಾಗಿಲಿಗೆ ಬಂದರೆ ಅವನ ಆಶ್ಚರ್ಯಕ್ಕೆ, ಅಲ್ಲಿ ಸುಂದರವಾದ ಸ್ತ್ರೀಯರು ನಾಟ್ಯ ಮಾಡುತ್ತಿದ್ದರು ಮತ್ತು ಉಳಿದವರು ತಿಂದು-ಕುಡಿದು ಮಜಾ ಮಾಡುವ ದೃಶ್ಯ ಅವನ ಕಣ್ಣಿಗೆ ಬಿತ್ತು. ಅದನ್ನು ನೋಡಿದವನೇ ಯಮಕಿಂಕರರಿಗೆ ಹೇಳಿದ, "ಸ್ವರ್ಗಕ್ಕಿಂತ ನರಕವೇ ಬಹಳ ಚೆನ್ನಾಗಿದೆ; ನಾನು ಇಲ್ಲೇ ಇರಲು ಇಷ್ಟ ಪಡುತ್ತೇನೆ". ನಿನ್ನಿಷ್ಟವೆಂದು ಹೇಳಿ ಆ ಯಮಕಿಂಕರರು ಅವನನ್ನು ನರಕದೊಳಕ್ಕೆ ಬಿಟ್ಟು ಹೊರಟು ಹೋದರು. ಈ ಹುಲುಮಾನವ ಒಳಗೆ ಹೋದದ್ದೇ ತಡ, ಅವನು ನರಕದ ಬಗ್ಗೆ ಕೇಳಿ ತಿಳಿದಿದ್ದ ಕುದಿಯುವ ಎಣ್ಣೆ ಕೊಪ್ಪರಿಗೆಯಲ್ಲಿ ಹಾಕಿ ಬೇಯಿಸುವುದು, ಕಾದ ಸಲಾಕೆಯಿಂದ ಚುಚ್ಚುವುದು, ಮುಳ್ಳಿನ ಚಾಟಿಯಿಂದ ಹೊಡೆಯುವುದು ಮುಂತಾದ ಕಠೋರವಾದ ಶಿಕ್ಷೆಗಳು ಕಣ್ಣಿಗೆ ಬಿದ್ದವು. ಕೂಡಲೇ ನರಮನುಷ್ಯ ಚೀರಾಡಲಾರಂಭಿಸಿದ, "ಎಲ್ಲಾ ಮೋಸ, ಬಾಗಿಲಲ್ಲಿ ತೋರಿಸಿದ್ದೇ ಒಂದು ಆದರೆ ಒಳಗೆ ಇರುವುದೇ ಒಂದು". ಅವನನ್ನು ನೋಡಿ, ಶಿಕ್ಷೆ ಜಾರಿ ಮಾಡುವ ಮುಖ್ಯ ಅಧಿಕಾರಿ ಹೇಳಿದ, "ನೀನು ಬಾಗಿಲಲ್ಲಿ ನೋಡಿದ್ದು ನಮ್ಮ ಪಬ್ಲಿಸಿಟಿ ವಿಭಾಗವನ್ನ?!!"