ಓ ಮನಸೆ ಪಾಕ್ಷಿಕದ 103ನೆ ಸಂಚಿಕೆಯಲ್ಲಿ 'ಮುಂಜಾವು' ಎನ್ನುವ ಹೆಸರಿನಲ್ಲಿ ಈ ಕೆಳಗಿನ ಕವಿತೆಯ ಪರಿಷ್ಕೃತ ಅವೃತ್ತಿ ಪ್ರಕಟವಾಗಿತ್ತು. ಆಷಾಢ ಮಾಸದಲ್ಲಿ ಪ್ರಕಟಿಸಲಾಗದ ಕಾರಣಕ್ಕೇನೊ, ಆ ಆಷಾಢದ ಪ್ರಸ್ತಾಪವಿದ್ದ ಸಾಲನ್ನು ತಿದ್ದಿ ಪ್ರಕಟಿಸಲಾಗಿತ್ತು. ಆ ಪದ್ಯದ ಮೂಲ ರೂಪ ಈ ಕೆಳಗಿದೆ 'ಆಷಾಢದ ಮುಂಜಾವು' ಎನ್ನುವ ತಲೆ ಬರಹದಡಿಯಲ್ಲಿ. 

ಆಷಾಡದ ಮುಂಜಾವು..

_________________________________

ಚುಮು ಚುಮು ಬೆಳಕ ಕಿವುಚಿ ಆಷಾಡದ ಕಾಳಿ

ಹಿಪ್ಪೆ ಹಿಂಡಿ ರಸ ತೆಗೆದ ಮಸುಕು ಮಸುಕ ಬೇಲಿ

ಹರಿದಂತೆ ಕನ್ನೆ ಮುಗ್ದತೆಯ ಆವರಣ ಕುಲುಕಿ

ಪಲುಕು ಪಲುಕಾಗರಳುತಿದೆ ಮನದ್ಯುತಿ ಕಲಕಿ ||

ಸಿಲುಕಿ ಹೋದ ಅರೆ ಮಬ್ಬಲಿ ಕಳುವಾದ ಹೊತ್ತು

ಬೆಳಕು ಹರಿವುದೊ ತೊರೆವುದೊ ಯಾರಿಗೆ ಗೊತ್ತು?

ಮುಸುಕಲಿ ಕವಿದ ಮೋಡ ಗಿಡ ಮರವೂ ನಿಗೂಢ

ಭೂತಾಕಾರದಿ ಹೊತ್ತ ಆಕಾರಗಳೆ ಭೀತಿಯ ಗಾಢ ||

ಅಲ್ಲೆಲ್ಲೊ ಮಾಮರ ಯಾತನೆ ಇಲ್ಲೆಲ್ಲೊ ಕಲರವ

ಗಿಡಗಂಟಿಗಳ ಬೆರೆಸಿ ನಿಸರ್ಗದ ಚಿತ್ತಾರ ನಿರ್ಭಾವ

ಹುಡುಕುತಲದರೊಳಗೇನನೊ ನಡೆದಿಹ ಅವನೊಬ್ಬ

ಕವಿಯೊ ಜ್ಞಾನಿ ವಿಜ್ಞಾನಿಯೊ ಕೊಲೆಗಡುಕಗು ಹಬ್ಬ ||

ಸವರಿ ತಂಗಾಳಿ ಚಲನೆ ಮುತ್ತಿಟ್ಟಂತೆ ಪ್ರಿಯ ಲಲನೆ

ಕಚಗುಳಿಯಿಟ್ಟಾಡಿಸುತ ಕುರುಳಿಗೆ ಸ್ವೇಚ್ಛಾ ಸಂಚಲನೆ

ಸುಯ್ದೆ ದಣಿದು ಬೇಸತ್ತು ಬೆವರಿ ಹನಿ ಪೋಣಿಸಿ ಇಬ್ಬನಿ

ಒಡಲ ನೋವೆಲ್ಲ ಧಾರೆ ಹುಲ್ಲುಲ್ಲು ಗರಿಕೆಯಲು ಕಂಬನಿ ||

ಭೀತಿ ನಿರ್ಭೀತಿ ಭಾವ ಕೊಳಚೆ, ಬೆಳಕಾಯ್ತು ಒಗೆಯಾಚೆ

ಅದುರಿಸುವ ಚಳಿಯ ಹೊದ್ದ ಸಖಿಗು ಬಿಡದೆ ಕಂಪಿಸುತೆ

ಮೆಲ್ಲಮೆಲ್ಲನೆ ಕಿರಣ ಅರಳರಳಿ, ಮಳ್ಳಿಯ ಮೈಗಾಭರಣ

ಸರಿದು ಹತ್ತಿರ ಅಪ್ಪುಗೆ, ಚುಂಬನದೆ ಕದಪಲಿ ತೋರಣ ||

------------------------------------------------------- 

ನಾಗೇಶ ಮೈಸೂರು

-------------------------------------------------------