ಸುತ್ತಲೂ ಹಸಿರು ಗಿರಿವನಗಳು... ಮಂಜಿನ ಹೊದಿಕೆ... ಜುಳುಜುಳು ಹರಿಯುವ ನದಿ... ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಸುಂದರ ತಾಣ — ಶಿಶಿಲ.
ಚಳಿಗಾಲದ ಸಮಯದಲ್ಲಿ ಶಿಶಿಲಕ್ಕೆ ಭೇಟಿ ನೀಡಿದರೆ, ಕ್ಷಣಕಾಲ ಹಿಮಾಲಯದ ಯಾವುದೋ ಸುಂದರ ತಾಣಕ್ಕೆ ಬಂದ ಅನುಭವವಾಗುತ್ತದೆ. ಇತ್ತೀಚೆಗೆ ನಾನೂ ಶಿಶಿಲಕ್ಕೆ ಭೇಟಿ ನೀಡಿದ್ದೆ. ಪ್ರಕೃತಿಯ ಸೌಂದರ್ಯ, ನದಿಯ ನಿನಾದ ಮತ್ತು ಇಲ್ಲಿನ ಧಾರ್ಮಿಕ ಮಹತ್ವ ಮನಸ್ಸಿಗೆ ವಿಶಿಷ್ಟವಾದ ಅನುಭವ ನೀಡಿತು.ಈ ಭಾಗದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವೆಂದರೆ ಶಿಶಿಲೇಶ್ವರ ದೇವಸ್ಥಾನ. ಮತ್ಸ್ಯತೀರ್ಥವೆಂದೇ ಪ್ರಸಿದ್ಧವಾಗಿರುವ ಈ ಕ್ಷೇತ್ರದ ಪಕ್ಕದಲ್ಲೇ ಕಪಿಲಾ ನದಿ ಜುಳುಜುಳು ಹರಿಯುತ್ತಾ ಪ್ರವಾಸಿಗರು ಮತ್ತು ಭಕ್ತರನ್ನು ಸ್ವಾಗತಿಸುತ್ತದೆ.ದೇವಸ್ಥಾನದ ಪಕ್ಕದಲ್ಲಿ ಹರಿಯುವ ಕಪಿಲಾ ನದಿಯಲ್ಲಿ ‘ಪೆರುವೋಳ್’ ಜಾತಿಯ ದೊಡ್ಡ ಗಾತ್ರದ ಮೀನುಗಳನ್ನು ಕಣ್ಣಾರೆ ನೋಡಬಹುದು. ನದಿಯ ಸ್ವಚ್ಛ ನೀರಿನಲ್ಲಿ ಗುಂಪು ಗುಂಪಾಗಿ ಸಂಚರಿಸುವ ಈ ಮೀನುಗಳು ಶಿಶಿಲದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿವೆ.ಮೀನುಗಳ ಸಂರಕ್ಷಣೆಯ ದೃಷ್ಟಿಯಿಂದ ಶಿಶಿಲದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವು ದಶಕಗಳಿಂದ ಮೀನುಗಾರಿಕೆಗೆ ನಿರ್ಬಂಧವಿದೆ. ಬ್ರಿಟಿಷರ ಆಡಳಿತಾವಧಿಯಲ್ಲೇ ದೇವಸ್ಥಾನದ ಆಸುಪಾಸಿನ ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೀನುಗಾರಿಕೆಯನ್ನು ನಿಷೇಧಿಸಲಾಗಿತ್ತು ಎಂಬುದು ಇಲ್ಲಿನ ವಿಶಿಷ್ಟ ಇತಿಹಾಸ
ಕಪಿಲಾ ನದಿಯ ಮೇಲ್ಭಾಗದಲ್ಲಿ ಈ ಮೀನುಗಳ ಉಗಮಸ್ಥಾನವೆಂದು ಹೇಳಲಾಗುವ ‘ಮೀನಗುಂಡಿ’ ಎಂಬ ಪ್ರದೇಶವಿದೆ. ಆದರೆ ದಶಕಗಳ ಹಿಂದೆ ದುಷ್ಕರ್ಮಿಗಳು ಮೀನಗುಂಡಿಗೆ ವಿಷ ಹಾಕಿದ ಪರಿಣಾಮ ಸಾವಿರಾರು ಮೀನುಗಳು ಸಾವನ್ನಪ್ಪಿದ ಘಟನೆ ಶಿಶಿಲದ ಇತಿಹಾಸದಲ್ಲೊಂದು ಕರಾಳ ಅಧ್ಯಾಯವಾಗಿದೆ.ಸತ್ತು ಬಿದ್ದ ಮೀನುಗಳ ರಾಶಿಯನ್ನು ಕಂಡು ಸ್ಥಳೀಯರು ಮತ್ತು ಪ್ರವಾಸಿಗರು ಮೂಕವಿಸ್ಮಿತರಾಗಿದ್ದರು. ಆ ದುರಂತದ ನೆನಪಿಗಾಗಿ ನಿರ್ಮಿಸಲಾಗಿರುವ ಸ್ಮಾರಕವೂ ಇಲ್ಲಿ ಇಂದಿಗೂ ಕಾಣಸಿಗುತ್ತದೆ. ಇದು ಪ್ರಕೃತಿಯ ಮೇಲಿನ ನಮ್ಮ ಹೊಣೆಗಾರಿಕೆಯನ್ನು ನೆನಪಿಸುವಂತಿದೆ.ಶಿಶಿಲದ ವಿಶೇಷತೆ ಇಲ್ಲಿಗೇ ಮುಗಿಯುವುದಿಲ್ಲ. ಅಪರೂಪದ ಹಾಗೂ ಔಷಧೀಯ ಗುಣಗಳನ್ನು ಹೊಂದಿರುವ ಅನೇಕ ಸಸ್ಯಗಳು, ಬಳ್ಳಿಗಳು ಈ ಭಾಗದಲ್ಲಿ ಕಂಡುಬರುತ್ತವೆ. ತುಂಬೆ ಗಿಡ ಕೂಡ ಇಲ್ಲಿ ಹೇರಳವಾಗಿ ಬೆಳೆಯುತ್ತದೆ.ಶಿಶಿಲೇಶ್ವರ ದೇವಸ್ಥಾನದ ಎದುರು ನಿಂತು ಸುತ್ತಲೂ ಕಣ್ಣು ಹಾಯಿಸಿದರೆ ಪ್ರಕೃತಿಯ ಮತ್ತೊಂದು ಅದ್ಭುತ ತೆರೆದುಕೊಳ್ಳುತ್ತದೆ.
ಎತ್ತಿನ ಭುಜ ಮತ್ತು ಅಮೇ ದಿಕ್ಕೆಲ್ ಬೆಟ್ಟಗಳ ನಯನ ಮನೋಹರ ದೃಶ್ಯ ಕಣ್ಮನ ಸೆಳೆಯುತ್ತದೆ.ಪ್ರಕೃತಿ, ಧಾರ್ಮಿಕತೆ, ಜೀವವೈವಿಧ್ಯ ಮತ್ತು ಇತಿಹಾಸ — ಇವೆಲ್ಲವನ್ನೂ ತನ್ನೊಳಗೆ ಅಡಗಿಸಿಕೊಂಡಿರುವ ಶಿಶಿಲ ನಿಜಕ್ಕೂ ಒಂದು ಅಪೂರ್ವ ತಾಣ.ಶಿಶಿಲವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿದೆ. ಕೊಕ್ಕಡದಿಂದ ಅರಸಿನಮಕ್ಕಿ ಮಾರ್ಗವಾಗಿ ನೇರವಾಗಿ ಶಿಶಿಲವನ್ನು ತಲುಪಬಹುದು.ಒಮ್ಮೆ ಶಿಶಿಲಕ್ಕೆ ಭೇಟಿ ನೀಡಿ... ಕಪಿಲೆಯ ಜುಳುಜುಳು ನಾದವನ್ನು ಆಲಿಸಿ... ಮತ್ಸ್ಯತೀರ್ಥದ ಮೀನುಗಳನ್ನು ಕಣ್ತುಂಬಿಕೊಳ್ಳಿ... ಹಸಿರು ಬೆಟ್ಟಗಳ ಸೌಂದರ್ಯವನ್ನು ಸವಿಯಿರಿ.ಶಿಶಿಲ ಪ್ರಕೃತಿಯ ಮಡಿಲಲ್ಲಿ ಭಕ್ತಿ, ಬದುಕು ಮತ್ತು ಜೀವವೈವಿಧ್ಯದ ಅಪೂರ್ವ ಸಂಗಮ.
ಪ್ರತಿಕ್ರಿಯೆ (2)
ಕವಿನಾಗರಾಜರೆ, ಧರ್ಮಸ್ಥಳದಿಂದ ಕೇವಲ ೨೫ ಕಿ.ಮೀ. ದೂರ.