ಟಾಮ್ ಅಂಡ್ ಜೆರ್ರಿ ಕಾರ್ಟೂನನ್ನು ಮಕ್ಕಳಿಂದ ಮುದುಕರವರೆಗೆ ಎಲ್ಲರೂ ಕಣ್ಣುಬಾಯಿ ಬಿಟ್ಟು ನೋಡುವರು. ಅದರಲ್ಲಿ ಎಲ್ಲವನ್ನೂ ಹಾಳು ಮಾಡುವ, ಕೀಟಲೆ ಸ್ವಭಾವದ, ಜೆರ್ರಿ (ಇಲಿ) ಎಲ್ಲರಿಗೂ ಇಷ್ಟ. ಆ ಟಾಮ್ ಬೆಕ್ಕಿನ ಬಗ್ಗೆ ಮರುಕಪಡುವವರು ಒಬ್ಬರಾದರೂ ಇದ್ದಾರಾ? ಇದ್ದಾರೆ...

ನನ್ನ ಹಾಗೂ ಇಲಿಯ ನಡುವಿನ ಹೋರಾಟ ೧೫ ವರ್ಷದಿಂದ (ಈಗಿರುವ ಮನೆಗೆ ಬಾಡಿಗೆಗೆ ಬಂದಾಗಿನಿಂದ) ನಡೆಯುತ್ತಿದೆ. ವಡೆ, ಬೋಂಡಾ, ಬೋನು, ಇಲಿಪಾಷಾಣ, ಇತ್ಯಾದಿ ಇತ್ಯಾದಿ ಎಲ್ಲಾ ಆಯುಧಗಳನ್ನು ಬಳಸಿದ್ದೇನೆ. ಪ್ರತೀ ಬಾರಿ ನಾನು ಗೆದ್ದೆ ಎಂದು ನಿಶ್ಚಿಂತೆಯಿಂದ ಮಲಗಿದ ಮರುಗಳಿಗೆ ಇನ್ನೊಂದು ಇಲಿ ಹಾಜರ್! ಬಹುಷಃ ಇಲಿಗಳ ಬಳಿ ಹೈ ಸ್ಪೀಡ್ ನೆಟ್‌ವರ್ಕ್ ಇರಬಹುದು. ಇಲ್ಲದಿದ್ದರೆ ಒಂದು ಇಲಿ ಸತ್ತ ಕೂಡಲೇ ಇನ್ನೊಂದು ಇಲಿ ಡ್ಯೂಟಿಗೆ ಹಾಜರಾಗಲು ಹೇಗೆ ಸಾಧ್ಯ!?

"ಇಲಿಕಾಟದಿಂದ ಸಾಕಾಗಿದೆ. ಬೇರೆ ಮನೆಗೆ ಹೋಗೋಣರೀ" ಎಂಬ ಬೇಡಿಕೆ ಈಡೇರಿಸದಿದ್ದರಿಂದ, " ರ್ರೀಈ....ಇಲೀಈ..." ಎಂಬ ಕೂಗು ಕೇಳಿದಾಕ್ಷಣ, ನಾನು ಅರ್ಧ ಸ್ನಾನದಲ್ಲಿದ್ದರೂ, ಓಡಿ ಬಂದು ಇಲಿಯನ್ನು ಹೊಡೆಯಬೇಕು. ಈ ಬಾರಿ ಆಕೆ ಕರೆದಾಗ ಇಲಿ ಅಡುಗೆ ಕೋಣೆಯ ಕಟ್ಟೆಯ ಮೇಲಿತ್ತು. ಓಡಿ ಬಂದು ಅದು ತಪ್ಪಿಸದಂತೆ ಕಟ್ಟೆಗೆ ಅಡ್ಡವಾಗಿ ನಿಂತೆ. ಹಿಂದೆ ಒಮ್ಮೆ ಇಲಿಗೆ ಹೊಡೆಯಲು ಹೋಗಿ ಸೊಪ್ಪು ಸಾರಲ್ಲಿ ಸ್ನಾನ ಮಾಡಿದ್ದು ನೆನಪಿದ್ದುದರಿಂದ, ಈ ಸಲ ಹೊಸ ಉಪಾಯ ಹೂಡಿದೆ-

ಕಟ್ಟೆಯ ಇನ್ನೊಂದು ಬದಿಗೆ, ಕೆಳಗೆ ಬಕೆಟ್‌ನಲ್ಲಿ ಅರ್ಧದಷ್ಟು ನೀರು ತುಂಬಿಸಿ ಇಟ್ಟು, ನನ್ನ ಬದಿಯಿಂದ ಇಲಿಯನ್ನು ಓಡಿಸಿ, ಬೇರೆಲ್ಲೂ ಜಿಗಿಯದಂತೆ ನೋಡಿಕೊಂಡೆ. ಸಕ್ಸೆಸ್!! ನನ್ನ ಪ್ಲಾನ್‌ನಂತೆ ಇಲಿ ಬಕೆಟ್‌ಗೆ ಬಿದ್ದೇಬಿಟ್ಟಿತು! ವರ್ಲ್ಡ್‌ಕಪ್ ಗೆದ್ದಂತೆ ಖುಷಿಯಲ್ಲಿ ಬೀಗಿದೆ..

ಹತ್ತು ನಿಮಿಷದ ನಂತರ, ಇಲಿ ಸತ್ತಿರಬಹುದಾ ಎಂದು ಬಕೆಟ್ ಬಳಿ ಹೋಗಿ ಬಗ್ಗಿ ನೋಡಿದೆ. ನೀರೊಳಗೆ ಮುಳುಗಿ ಏಳುತ್ತಿದ್ದ ಇಲಿ ಕೈಜೋಡಿಸಿ, ಮುಖ ಎತ್ತಿ, ದೀನವಾಗಿ ಪ್ರಾಣಭಿಕ್ಷೆ ಬೇಡುತ್ತಿರುವಂತೆ ಅನಿಸಿತು. ನನ್ನ ಮೈಯಲ್ಲಿ ಸೂರ್ಯವಂಶದ ರಕ್ತ ಹರಿಯುತ್ತಿದೆಯೋ, ಚಂದ್ರವಂಶದ್ದೋ ಗೊತ್ತಿಲ್ಲ, ಅಂತೂ ಶರಣಾಗತವಾದ ಇಲಿಯನ್ನು ಕೊಲ್ಲುವ ಮನಸಾಗದೇ ಕ್ಷಮಿಸಿದೆ.

ನಂಬಿಕೆ ಇಲ್ಲದಿದ್ದರೂ ಎಲ್ಲರ ಒತ್ತಾಯಕ್ಕೆ ಮಣಿದು ಬೆಕ್ಕು ತಂದೆ. ಇಲಿಯನ್ನು ಅದು ಕಡೆಗಣ್ಣಲ್ಲೂ ನೋಡಲಿಲ್ಲ. ಪಟ್ಟಾಗಿ ಹಾಲು ಕುಡಿದು, ನಾನು ಕುಳಿತುಕೊಳ್ಳುವ ಖುರ್ಚಿಯಲ್ಲಿ ಮಲಗುವುದು. ಈ ಖುರ್ಚಿಗಾಗಿ ದಿನಾ ನಮ್ಮೊಳಗೆ ಕದನ. ಈ ಬೆಕ್ಕು ಮೊದಲಿಗೆ ಯಡ್ಡಿ ಮನೆಯಲ್ಲಿತ್ತು ಕಾಣುತ್ತದೆ, ನಾನು ಖುರ್ಚಿ ಅಡಿಮೇಲು ಮಾಡಿದರೂ,ಅದು ಗಟ್ಟಿಯಾಗಿ ಹಿಡಕೊಂಡ ಖುರ್ಚಿಯನ್ನು ಬಿಡುವುದೇ ಇಲ್ಲಾ... ಖುರ್ಚಿ ಸಹಿತ ಬೆಕ್ಕನ್ನು ಬೇರೆಯವರಿಗೆ ದಾನ ಮಾಡಿದೆ.

"ನೋಡ್ರೀ.. ಅಕ್ಕಪಕ್ಕದ ಮನೆಯವರಿಗೆ ಯಾರಿಗೂ ಇಲಿಕಾಟವಿಲ್ಲ. ನಮಗೆ ಮಾತ್ರ ಯಾಕೆ...."

ಬೇರೆಮನೆ ರಾಗ, ಆದಿಏ ತಾಳದಲ್ಲಿ ಹಾಡಲು ಶುರುಮಾಡಿದಾಗ ಅರ್ಧದಲ್ಲೇ ಕಟ್ ಮಾಡಿ,

" ಅಲ್ವೇ, ಒಂದು ದೊಡ್ಡ ಸ್ಟೀಲ್ ಡಬ್ಬಿಯಲ್ಲಿ ಸಾಂಬಾರ್ ಪುಡಿ ಮಾಡಿಟ್ಟು, ಚಿತ್ರಾನ್ನ, ಪುಳಿಯೊಗರೆ, ಸಾರ್, ಸಾಂಬಾರ್..ಎಲ್ಲದಕ್ಕೂ ಅದನ್ನೇ ಹಾಕಿ, ಯಾವಾಗಲೂ ಒಂದೇ ರುಚಿ, ವಾಸನೆಯ ಅಡುಗೆ ಮಾಡಿದರೆ, ಮೂಗು ಕೆಟ್ಟಿರುವ ಇಲಿ ಮಾತ್ರ ಅಲ್ಲಿ ಹೋಗಲು ಸಾಧ್ಯ! ಅದೇ ನಿನ್ನ ಕೈ ಅಡುಗೆ ರುಚಿ, ಪರಿಮಳ ಆಹಾ........... ಗಣೇಶನೂ, ಜತೆಗೆ ಇಲಿನೂ ಅಡುಗೆ ಕೋಣೆಯಲ್ಲೇ ಠಿಕಾಣಿ ಹೂಡುವರು" ಎಂದೆ. ಹೊಗಳಿಕೆಯ ಪರಿಣಾಮ- ಸಂಜೆ ಬಿಸಿ ಬಿಸಿ ಮಂಗಳೂರು ಬನ್ಸ್!

ಬನ್ಸ್ ಪರಿಮಳಕ್ಕೆ ಇಲಿನೂ ನನ್ನ ಪ್ಲೇಟ್ ಬಳಿ ಬನ್ಸ್‌ತು. ಬನ್ಸ್ ನೆತ್ತಿಗೇರಿತು..ಅಲ್ಲಾ ಕೋಪ....

ಕೂಡಲೇ ಹೋಗಿ ಒಬ್ಬ ಮೇಸ್ತ್ರಿಯನ್ನು ಕರಕೊಂಡು ಬಂದು, ಎಲ್ಲೆಲ್ಲಾ ಸಂಧಿಗೊಂದಿ ಬಿಲಗಳಿತ್ತೋ ಒಂದು ಇರುವೆಯೂ ಹೊರಬರದಂತೆ ಮುಚ್ಚಿಸಿದೆ. ಒಂದು ಕಡೆ ಮೇಸ್ತ್ರಿ ಕರೆದು, "ಇಲ್ಲಿ ದೊಡ್ಡ ಸುರಂಗವಿದೆ. ಮೂರು ಬಾಣಲೆ ಜಲ್ಲಿ ಹಾಕಿದರೂ ತುಂಬಿಲ್ಲ" ಎಂದ. "ಮೂರಲ್ಲ ಹತ್ತು ಬಾಣಲೆಯಾದರೂ ಬಿಡಬೇಡ, ಒಂದು ಇಲಿನೂ ಬರಬಾರದು" ಎಂದು ಜಲ್ಲಿ ಹಾಕಿಸಿ, ಸಿಮೆಂಟು ಸಾರಣೆ ಮಾಡಿಸಿದೆ. ಕೆಲಸ ಮುಗಿದ ಮೇಲೆ ಅವನು ಕೇಳಿದ್ದಕ್ಕಿಂತ ೫೦೦ ರೂ. ಜಾಸ್ತಿನೇ ಕೊಟ್ಟೆ. ಮಾರನೇ ದಿನ ಬೆಳಗ್ಗೆ ಗೊತ್ತಾಯಿತು ಮೇಸ್ತ್ರಿ ಮುಚ್ಚಿದ್ದು ಸುರಂಗವಲ್ಲ, ಸ್ಯಾನಿಟರಿ ಪೈಪ್ ಲೈನ್! ಪುನಃ ತೆಗೆಸಿ ಹೊಸ ಪೈಪ್, ಲೈನ್, ಪರ್ಮಿಷನ್, ಲಂಚ, ಇತ್ಯಾದಿ ಇತ್ಯಾದಿ ೨೦೦೦೦ ರೂ ಕೈಬಿಟ್ಟಿತು. ದುಡ್ಡು ಖರ್ಚಾದರೂ ಪರವಾಗಿಲ್ಲ, ಒಮ್ಮೆಗೆ ಇಲಿಕಾಟ ಮುಗಿಯಿತಲ್ಲಾ ಎಂದು ಮಲಗಿದಾಗ ನನ್ನ ಬೆಡ್ ಪಕ್ಕದ ಗೋಡೆ ಒಳಗಿಂದ "ಕೊರ ಕೊರ.." ಕೊರೆಯುವ ಶಬ್ದ! ಇಲಿ ಹೊಸ ಸ್ಯಾನ್‌ಇಲಿಟರಿ ಪೈಪ್‌ಲೈನ್ ನನ್ನ ಬೆಡ್‌ರೂಂ‌ಗೇ ಕನೆಕ್ಟ್ ಮಾಡಲು ಹೊರಟಿದೆ.

ಸೋತೆ..ಪೂರ್ತಿ ಸೋತೆ.. ಈ ಮನೆ ಬಿಡುವುದೆಂದು ನಿರ್ಧರಿಸಿದೆ.

ಪತ್ರಿಕೆಯಲ್ಲಿ "ಮನೆ ಬಾಡಿಗೆಗಿದೆ" ಕಾಲಂ ನೋಡುತ್ತಾ ಇದ್ದೆ. ೧೬ ನೇ ಪುಟದ ಕೊಟ್ಟಕೊನೆ ಕಾಲಂನಲ್ಲಿ..........

-ಗಣೇಶ

(ಚಿತ್ರ ಕೃಪೆ- ನೆಟ್‌ನಿಂದ)