ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ನಮ್ಮ ಊರಿನ ರಸಿಕರು’ ಕೃತಿಯು ಹಳ್ಳಿಯ ಹಸಿರು ಸೊಗಸು ಮತ್ತು ಅಲ್ಲಿಯ ಜನಜೀವನದ ನೈಜ ಚಿತ್ರಣವನ್ನು ಅತ್ಯಂತ ಸುಂದರವಾಗಿ ಕಟ್ಟಿಕೊಡುತ್ತದೆ. ಕಷ್ಟದ ನಡುವೆಯೂ ಬದುಕನ್ನು ಪ್ರೀತಿಸುವ ಗ್ರಾಮೀಣರ ಗುಣ, ಪರಸ್ಪರ ಸೌಹಾರ್ದತೆ ಮತ್ತು ಸಂಬಂಧಗಳ ಆರ್ದ್ರತೆಯನ್ನು ಇದು ಪರಿಚಯಿಸುತ್ತದೆ. ಇದರೊಂದಿಗೆ ಮನುಷ್ಯನ ಮನಸ್ಸಿನ ಅಹಂ ಹಾಗೂ ವಿಕಾರಗಳನ್ನು ಯಾವುದೇ ಕಹಿಯಿಲ್ಲದೆ, ನವಿರಾದ ಮತ್ತು ನಿಷ್ಕಲ್ಮಷ ಹಾಸ್ಯದ ಮೂಲಕ ತೆರೆದಿಡುವುದು ಈ ಬರವಣಿಗೆಯ ಮತ್ತೊಂದು ವಿಶೇಷ.
ಶಿವರಾಮ ಕಾರಂತರ ‘ಹಳ್ಳಿಯ ಹತ್ತು ಸಮಸ್ತರು’ ಕೃತಿಯ ಸಾಲಿಗೆ ಸೇರುವ ಈ ಪುಸ್ತಕ, ಭಾಷೆಯ ಲಾಲೇತ್ಯದಿಂದ ಮತ್ತಷ್ಟು ಆಕರ್ಷಕವಾಗಿ ಮೂಡಿಬಂದಿದೆ. ಯಾಂತ್ರಿಕ ನಗರ ಜೀವನದಿಂದ ಬೇಸತ್ತು ಹಳ್ಳಿಯ ಮಡಿಲಿಗೆ ಹಂಬಲಿಸುವ ಗುಂಡಣ್ಣನ ಪಾತ್ರದಂತೆ, ಪ್ರತಿಯೊಬ್ಬರ ಮನಸ್ಸು ಸಹ ಇಂತಹ ಶಾಂತಿಯನ್ನು ಇಂದು ಹುಡುಕುತ್ತಿದೆ.
ಈ ಕೃತಿಗೆ ಖ್ಯಾತ ಸಾಹಿತಿ ಡಿ ವಿ ಗುಂಡಪ್ಪ ನವರು ಬಹಳ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರು ಆ ಮುನ್ನುಡಿಯಲ್ಲಿ ಹಾಸ್ಯದ ಬಗ್ಗೆ ಬಹಳ ಚೆನ್ನಾದ ವ್ಯಾಖ್ಯಾನ ಒದಗಿಸಿದ್ದಾರೆ. ಅವರು ಬರೆಯುತ್ತಾರೆ… “ನಗುವು ಅಳುವುಗಳು ಗಂಡಭೇರುಂಡದ ಮುಖಗಳಂತೆ; ಎರಡಕ್ಕೂ ಶರೀರ ಒಂದೇ. ನಿಮ್ಮ ಹೃದಯೇಶ್ವರಿಯ ಮೂಗಿನ ಮೇಲೆ ಅಡಿಗೆ ಮನೆಯ ಮಸಿ ಸ್ವಲ್ಪ ಅಂಟಿಕೊಂಡಿದ್ದರೆ, ನೀವು “ಇದೇನು, ಉಂಡೆಯ ನಶ್ಯವೋ, ಪುಡಿ ನಶ್ಯವೋ?” ಎಂದು ಕೇಳಿ ರೇಗಿಸಿ ನಗುವಿರಿ. ಆದರೆ ಅದೇ ಮುಖದ ಮೇಲೆ ಬಾಣಲೆಯ ತುಪ್ಪ ಸಿಡಿದು ಬಿದ್ದು ಹುಣ್ಣಾದರೆ, ಆಗ ನಿಮ್ಮ ಬಾಯಿಂದ ಹೊರಡುವುದು ನಗುವಾದೀತೆ?
ಜೀವನದ ಸಣ್ಣ ಸಣ್ಣ ವಿಕಾರಗಳು ಚಕ್ಕುಲಗುಲಿಯಿಡುವ ಬೆರಳುಗಳು; ದೊಡ್ಡ ದೊಡ್ಡವು ಶೂಲದ ಮೊನೆಗಳು. ವಿಕಾರವೆಂದರೆ ನಮಗೆ ರೂಢಿಯಾಗಿ ಅಥವಾ ಇಷ್ಟವಾಗಿ ಬಂದಿರುವ ವಸ್ತುಸ್ಥಿತಿಯಲ್ಲಿ ನಡೆಯುವ ವೈಪರೀತ್ಯ, ಅದು ಅತಿದೂರ ವ್ಯಾಪಿಸಿದೆ. ಬಹುಕಾಲ ನಿಲ್ಲುವಂತಿರದೆ, ಸುಲಭವಾಗಿ ತಿದ್ದಿಸಿಕೊಳ್ಳುವ ಹಾಗಿದ್ದರೆ ಅಥವಾ ನಮ್ಮ ಸೌಖ್ಯಕ್ಕೆ ಭಂಗತರುವ ಹಾಗಿದ್ದರೆ ಕೀರಿನಲ್ಲಿ ಸಿಕ್ಕುವ ಬಾದಾಮಿ, ದ್ರಾಕ್ಷಿಗಳಂತೆ ಅದೂ ಇಷ್ಟವೇ. ಒಂದು ಜಾತಿಯ ಸೌಂದರ್ಯವೇ ಆದೀತು. ಈ ಬಗೆಯ ಲಘು ವಿಕಾರವನ್ನು ಸೌಂದರ್ಯ ಸಾಮಗ್ರಿಯ ಒಂದು ಅಪಕ್ವಾವಸ್ಥೆಯೆಂದು ಹೇಳಬಹುದು. ಅದು ನರನನ್ನು ತಯಾರು ಮಾಡಹೊರಟ ಬ್ರಹ್ಮನ ಕೈಯಿಂದ ವಾನರನು ಹೊರಟು ಬಂದ ಹಾಗೆ; ಮಾಗಿ ಬಾಯನ್ನು ಸಿಹಿಮಾಡಬೇಕಾದ ಮಾವಿನಕಾಯಿ ಕಲ್ಲಿನ ಪೆಟ್ಟಿಗೆ ಸಿಕ್ಕಿಬಂದು ಹಲ್ಲಿಗೆ ಹುಚ್ಚು ಹಿಡಿಸುವ ಹಾಗೆ; ಜಗಮ್ಮೋಹಕವಾಗಬೇಕಾಗಿದ್ದ ಭಾವಚಿತ್ರವು ರಾಜನ ಆತುರದಿಂದ ತೆನ್ನಾಲಿ ರಾಮಕೃಷ್ಣನ ವಿಕಟ ಚಿತ್ರವಾದ ಹಾಗೆ; ತುಂಬುರನಂತೆ ಹಾಡುವೆನೆಂದು ತೆರೆದ ಬಾಯಿಂದ ತೇಗು ಹೊರಟಹಾಗೆ. ಈ ತೆರದ ಲಘು ವಿಕಾರವು ಮಮತೆಯ ದೃಷ್ಟಿಗೆ ಗೋಚರಿಸಿದಾಗ ಅಜ್ಜಿಯ ಹಾಡಿನ ಅದಿರು ದನಿಯು ಅಜ್ಜನ ಕಿವಿಗೆ ಸೋಕಿದಾಗ, ಭಾವನ ಹಣೆಯ ಬೊಟ್ಟಿನ ಸೊಟ್ಟು ಅಕ್ಕನ ಕಣ್ಣಿಗೆ ಕಾಣಿಸಿದಾಗ ಅದು ನಿರ್ಮಲ ಹಾಸ್ಯದ ಬುಗ್ಗೆಯಾಗುವುದು. ನಮ್ಮ ಜೀವನಾನುಭವದಲ್ಲಿ ಇಂಥಾ ಮೃದು ವಿಕಾರಗಳೂ ಇಂಥಾ ಮುದ್ದು ಚೇಷ್ಟೆಗಳೂ ಸೀಹಣ್ಣುಗಳ ನಡುವೆ ಇರುವ ಹುಳಿ ದಾಳಿಂಬದಂತೆ ಪ್ರಿಯವೂ ಹೌದು, ಹಿತವೂ ಹೌದು.
ಉತ್ತಮ ಹಾಸ್ಯವು ಆನಂದದ ಒಂದು ಸ್ವರೂಪ; ಜ್ಞಾನಕ್ಕೆ ಒಂದು ಬಾಗಿಲು. ನಮ್ಮ ಪೂರ್ವ ಸಾಹಿತ್ಯದಲ್ಲಿ ಉತ್ತಮ ಹಾಸ್ಯಪ್ರಧಾನವಾದ ಕಾವ್ಯಗಳು ಅಪರೂಪವಾಗಿವೆ. ಹಾಸ್ಯವೇನೋ ಕಾವ್ಯರಸಗಳಲ್ಲಿ ಒಂದೊಂದು ಲಕ್ಷಣವೆಂದು ಶಾಸ್ತ್ರಕಾರರು ಒಪ್ಪಿಕೊಂಡಿದ್ದಾರೆ. ಆದರೆ ಅದರ ಉದಾಹರಣೆಯಾಗಿ ನಮಗೆ ದೊರಕುವ ಪ್ರಹಸನಗಳು ಬಹುಶಃ ಕೊಟ್ಟಡಿಯೊಳಗೆ ಮಾತ್ರವೇ ರಹಸ್ಯವಾಗಿ ಓದಿಕೊಳ್ಳಬಹುದಾದವು. ಅವುಗಳದು ಸಭ್ಯ ಹಾಸ್ಯವಲ್ಲ. ಸಭ್ಯ ಹಾಸ್ಯದಲ್ಲಿ ನವುರೂ, ನಾಜೂಕೂ ಇರಬೇಕು. ಅದರಿಂದ ಯಾರಿಗೂ ನೋವಾಗಲಿ ಅಸಹ್ಯವಾಗಲಿ ಆಗಬಾರದು. ಅದು ಪೂಜ್ಯರಾದವರ ವಿಷಯದಲ್ಲಿ ಕೂಡ ಅನ್ವಯಿಸಲರ್ಹವಾಗಿರಬೇಕು. ಕಾಲಿದಾಸನು ಬ್ರಹ್ಮನನ್ನು “ವೇದಾಭ್ಯಾಸ ಜಡ'ನೆಂದು ಕರೆದು, ರಮಣೀಯ ರೂಪ ನಿರ್ಮಾಣವು, ಆ ಪುರಾಣ ಮುನಿಯಿಂದ ಹೇಗಾದೀತೆಂದು ಶಂಕೆ ಸೂಚಿಸಿ ಪರಿಹಾಸವನ್ನಭಿನಯಿಸಿಲ್ಲವೆ? ಅದು ಮರ್ಯಾದೆಯುಳ್ಳ ಮಧುರವಾದ ಹಾಸ್ಯ.
ಈ ತೆರದ ಹಾಸ್ಯದ ಸಾಹಿತ್ಯವು ಪಾಶ್ಚಾತ್ಯರಲ್ಲಿ ಹೆಚ್ಚಾಗಿ ಬೆಳೆಯುತ್ತಿದೆ. ಬ್ರಿಟಿಷ್ ಜನರ ಹಾಸ್ಯ ದರ್ಶನ ಕುಶಲತೆಯೇ ಅವರ ಜಯಶಾಲಿತೆಗೆ ಮುಖ್ಯ ಸಾಧನವೆಂದು ಹೇಳುವುದುಂಟು. ವಾರವಾರವೂ ಹೊರಡುವ ಅವರ "ಪಂಚ್" ಎಂಬ ವಿಕಟಪತ್ರಿಕೆಯು ಇದಕ್ಕೆ ದೊಡ್ಡ ನಿದರ್ಶನ. ಹಾಸ್ಯದರ್ಶಿತೆಯೆಂದರೆ, ವಿಷಮವೆಂದು ತೋರುವ ಸಂದರ್ಭದಲ್ಲಡಗಿರಬಹುದಾದ ವಿಕಟ ಪ್ರಸಕ್ರಿಯನ್ನು ಕಂಡುಕೊಳ್ಳುವ ಅಭ್ಯಾಸ-ಅಕಾರಣ ರೋಷದಿಂದ ಹಲ್ಲು ಕಡಿಯುತ್ತಿರುವವನಿಗೆ ಕನ್ನಡಿ ತೋರಿಸುವ ಅಭ್ಯಾಸ-ಆಕಾಶಕ್ಕೆ ಕತ್ತೆತ್ತಿ ನಡೆಯುತ್ತಿರುವವನ ಮೇಲೆ ಒಂದೆರಡು ಸಣ್ಣ ಇರುವೆಗಳನ್ನು ಬಿಡುವ ಅಭ್ಯಾಸ-ನಮ್ಮ ಮುಖಕ್ಕೆ ಇನ್ನೊಬ್ಬರು ಕನ್ನಡಿ ಹಿಡಿದಾಗ ನಾವೂ ಅವರೊಡನೆ ಸೇರಿ ನಗುವ ಅಭ್ಯಾಸ. ಈ ಉತ್ತಮ ಹಾಸ್ಯಾಭ್ಯಾಸವು ನಮ್ಮ ಮನಸ್ಸಿನ ವಿಸ್ಕೃತಿ ದುರಾಗ್ರಹಗಳನ್ನು ಕಳೆಯುತ್ತದೆ. ಕಳೆದು ಹೋದ ಸಮಾಧಾನವನ್ನು ಪುನಃ ತಂದುಕೊಡುತ್ತದೆ; ತಾರತಮ್ಮ ವಿವೇಕವನ್ನು ಹುಟ್ಟಿಸುತ್ತದೆ. ಹೀಗೆ ಬರುವ ಉತ್ತಮಾಧಮ ನಿರ್ಣಯ ಶಕ್ತಿಯೇ ಅಲ್ಲವೆ ಕಾರ್ಯ ಸಾಧನೆಗೆ ಬೇಕಾದುದು?”
ಒಟ್ಟಾರೆಯಾಗಿ, ಈ ಕೃತಿಯನ್ನು ಓದುವುದೆಂದರೆ ಹಳ್ಳಿಯ ಜೀವಪರ ಮೌಲ್ಯಗಳನ್ನು ಆಸ್ವಾದಿಸಿದ ತೃಪ್ತಿ. ಗೊರೂರರ ಆಕರ್ಷಕ ಶೈಲಿಯು ಅವರ ಇತರ ಕೃತಿಗಳನ್ನೂ ಓದುವಂತೆ ಸೆಳೆಯುತ್ತದೆ. ನೀವೂ ಒಮ್ಮೆ ಈ ೧೦೮ ಪುಟಗಳ ಪುಟ್ಟ ಸುಂದರ ಕೃತಿಯನ್ನು ಓದಿ ಅನುಭವಿಸಿ.
ಪ್ರತಿಕ್ರಿಯೆ (1)
ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದುದೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಸರ್