ಬಹಳ ಸಮಯದ ಬಳಿಕ ಮಕ್ಕಳಿಗೆ ರಜೆಯ ಓದು ಮಾಲಿಕೆಯಲ್ಲಿ ಹೊಸ ಪುಸ್ತಕಗಳ ವಿಷಯವನ್ನು ತಿಳಿಸಲು ಬಂದಿರುವೆ. ಈಗಾಗಲೇ ದಸರಾ ರಜೆ ಕಳೆದು ಹೋಗಿದೆ. ಆದರೆ ತೊಂದರೆಯಿಲ್ಲ. ನಿಮಗೆ ಬಿಡುವು ಇರುವಾಗ ಈ ಪುಸ್ತಕಗಳನ್ನು ಓದಬಹುದು. ನಿಮಗೆ ಮಾಹಿತಿ ತಂತ್ರಜ್ಞಾನದ ದೈತ್ಯ ಸಂಸ್ಥೆ ‘ಇನ್ಫೋಸಿಸ್’ ಬಗ್ಗೆ ತಿಳಿದೇ ಇದೆ. ನಾರಾಯಣ ಮೂರ್ತಿಯವರು ತಮ್ಮ ಗೆಳೆಯರ ಜೊತೆ ಸೇರಿ ಸ್ಥಾಪಿಸಿದ ಈ ಸಂಸ್ಥೆ ಒಂದು ಜಗತ್ತಿನಾದ್ಯಂತ ತನ್ನ ಬೇರುಗಳನ್ನು ಚಾಚಿಕೊಂಡಿದೆ. ಅಂದು ನಾರಾಯಣ ಮೂರ್ತಿಯವರ ಬಳಿ ಸಾಕಷ್ಟು ಹಣ ಇರಲಿಲ್ಲ. ಆ ಸಂದರ್ಭದಲ್ಲಿ ಅವರಿಗೆ ನೆರವಾದವರು ಅವರ ಧರ್ಮಪತ್ನಿ ಸುಧಾ ಮೂರ್ತಿ (ಕುಲಕರ್ಣಿ). ಅವರು ಮಾಡಿದ ಆ ಸಹಾಯದಿಂದ ಒಂದು ಕೋಣೆಯ ಆಫೀಸು ಈಗ ಬೆಳೆದು ನೂರಾರು ಶಾಖೆಗಳನ್ನು ಹೊಂದಿರುವ ದೈತ್ಯ ಸಂಸ್ಥೆಯಾಗಿ ಬೆಳೆದು ನಿಂತಿದೆ. ಮಕ್ಕಳಿಗೆ ಇವರ ಬದುಕಿನ ಕಥೆಯನ್ನೇ ಓದಿದರೆ ದೊಡ್ಡ ಪ್ರೇರಣೆ ದೊರಕಬಹುದು.
ಸುಧಾ ಮೂರ್ತಿಯವರು ಇನ್ಫೋಸಿಸ್ ಫೌಂಡೇಶನ್ ಎನ್ನುವ ಹೆಸರಿನಲ್ಲಿ ಒಂದು ಸಮಾಜ ಸೇವಾ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಸುಧಾ ಮೂರ್ತಿಯವರು ಉತ್ತಮ ಬರಹಗಾರರು ಹಾಗೂ ಭಾಷಣಗಾರರು. ಇವರು ಪ್ರಸ್ತುತ ರಾಜ್ಯ ಸಭಾ ಸದಸ್ಯರಾಗಿರುವುದರಿಂದ ಸದನದಲ್ಲಿ ಅವರಾಡುತ್ತಿರುವ ವಿದ್ವತ್ ಪೂರ್ಣ ಮಾತುಗಳನ್ನು ಕೇಳಿಯೇ ಇರುತ್ತೀರಿ. ಹಾಗೆಯೇ ಅವರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ. ಅದರಲ್ಲೂ ಮಕ್ಕಳಿಗೆ ಪ್ರೇರಣೆ ನೀಡುವ ಉತ್ತಮ ಮಕ್ಕಳ ಕಥೆ ಪುಸ್ತಕಗಳನ್ನು ಬರೆದು ಪ್ರಕಟ ಮಾಡಿದ್ದಾರೆ. ಇದು ಆಂಗ್ಲ, ಕನ್ನಡ, ಹಿಂದಿ, ತೆಲುಗು ಮೊದಲಾದ ಹಲವು ಭಾಷೆಗಳಲ್ಲಿ ಲಭ್ಯವಿದೆ.
ಸುಧಾ ಮೂರ್ತಿಯವರ ಮಕ್ಕಳ ಕೃತಿಗಳು ೪ ರಿಂದ ೧೨ ವರ್ಷದ ಒಳಗಿನ ಮಕ್ಕಳಿಗೆ ಹೇಳಿ ಮಾಡಿಸಿದ್ದಂತಿವೆ. ಸುಧಾ ಮೂರ್ತಿಯವರು ಬರೆದ ಕೆಲವು ಮಕ್ಕಳ ಪುಸ್ತಕಗಳು ಹೀಗಿವೆ…

ಅಜ್ಜಿಯ ಕಥೆಗಳ ಚೀಲ (Grandma's Bag of Stories), ಮ್ಯಾಜಿಕ್ ಡ್ರಮ್ ಮತ್ತು ಇತರ ಸಣ್ಣ ಕಥೆಗಳು (The Magic Drum and Other Favourite Stories), ನೂನಿಯ ಸಾಹಸಗಳು (The Magic of the Lost Temple), ದಿ ಮ್ಯಾಜಿಕ್ ಆಫ್ ದಿ ಲಾಸ್ಟ್ ಸ್ಟೋರಿ (The Magic of the Lost Story), ಗೋಪಿಯ ದಿನಚರಿ - ೪ ಸರಣಿ (The Gopi Diaries) - (Coming Home, Finding Love, Growing Up) ಹೌ ದಿ ಅರ್ಥ್ ಗಾಟ್ ಇಟ್ಸ್ ಬ್ಯೂಟಿ (How the Earth Got Its Beauty), ಹೌ ದಿ ಮ್ಯಾಂಗೋ ಗಾಟ್ ಇಟ್ಸ್ ಮ್ಯಾಜಿಕ್ (How the Mango Got Its Magic), ಬಿದಿರು ತನ್ನ ಕೊಡುಗೆಯನ್ನು ಪಡೆಯಿತು (How the Bamboo Got Its Bounty), ದಿ ಸೇಜ್ ವಿದ್ ಟು ಹಾರ್ನ್ಸ್ (The Sage With Two Horns), ಸುಕೇಶಿನಿ ಮತ್ತು ಇತರ ಮಕ್ಕಳ ಕಥೆಗಳು, ಮಕ್ಕಳಿಗಾಗಿ ನನ್ನ ಮೆಚ್ಚಿನ ಕಥೆಗಳು (Favorite Stories for Children)
ನೂನಿಯ ಸಾಹಸಗಳು ಎನ್ನುವ ಕಥೆ ಪುಸ್ತಕದಲ್ಲಿ ನಗರದಲ್ಲಿ ಬೆಳೆದ 'ನೂನಿ' ಎನ್ನುವ ಹುಡುಗಿ ರಜೆಯಲ್ಲಿ ತನ್ನ ಅಜ್ಜಿ ಮನೆಗೆ (ಹಳ್ಳಿಗೆ) ಹೋದಾಗ ಅನುಭವಿಸುವ ಸಾಹಸಗಳನ್ನು ಬಹಳ ರೋಚಕವಾಗಿ ವರ್ಣಿಸಲಾಗಿದೆ. ಈ ಪುಸ್ತಕದ ವಿಶೇಷತೆ ಎಂದರೆ ಹಳ್ಳಿಯ ಜೀವನ, ಪ್ರಕೃತಿಯ ಸೌಂದರ್ಯ ಮತ್ತು ಪ್ರಾಚೀನ ದೇವಸ್ಥಾನವೊಂದರ ರಹಸ್ಯವನ್ನು ಹುಡುಕುವ ಕುತೂಹಲಕಾರಿ ಕಥೆಯನ್ನು ಹೊಂದಿದೆ.
ಗೋಪಿ ದಿನಚರಿ ಎಂಬ ಪುಸ್ತಕವು ನಾಲ್ಕು ಪುಸ್ತಕಗಳ ಕಥಾ ಸರಣಿ. ಇದು 'ಗೋಪಿ' ಎಂಬ ನಾಯಿಯ ದೃಷ್ಟಿಕೋನದಲ್ಲಿ ಬರೆದಿರುವ ಸುಂದರ ಕಥಾಸರಣಿ. ನಾಯಿಯೊಂದು ತನ್ನ ಮಾಲೀಕರೊಂದಿಗೆ ಹೊಸ ಮನೆಗೆ ಬಂದಾಗ, ಅಲ್ಲಿನ ವಾತಾವರಣ ಮತ್ತು ಮನೆಯವರನ್ನು ಹೇಗೆ ನೋಡುತ್ತದೆ ಎಂಬುದನ್ನು ಮುದ್ದಾಗಿ ಚಿತ್ರಿಸಲಾಗಿದೆ.
ಮಕ್ಕಳಿಗಾಗಿ ನನ್ನ ಮೆಚ್ಚಿನ ಕಥೆಗಳು ಎಂಬ ಪುಸ್ತಕದಲ್ಲಿ ಸುಧಾ ಮೂರ್ತಿಯವರು ತಮ್ಮ ಜೀವನದಲ್ಲಿ ಕೇಳಿದ ಮತ್ತು ಮಕ್ಕಳಿಗೆ ಹೇಳಲು ಇಷ್ಟಪಡುವ ಜಾನಪದ ಹಾಗೂ ನೀತಿಕಥೆಗಳನ್ನು ಸಂಗ್ರಹಿಸಿದ್ದಾರೆ. ಈ ಕೃತಿಯ ವಿಶೇಷತೆಯೆಂದರೆ ಪ್ರಾಮಾಣಿಕತೆ, ಬುದ್ಧಿವಂತಿಕೆ ಮತ್ತು ಸಹಾನುಭೂತಿಯ ಮಹತ್ವವನ್ನು ತಿಳಿಸುವ ಸಣ್ಣ ಕಥೆಗಳು ಇದರಲ್ಲಿವೆ.
ಸುಕೇಶಿನಿ ಮತ್ತು ಇತರ ಮಕ್ಕಳ ಕಥೆಗಳು ಎಂಬ ಕೃತಿಯಲ್ಲಿ ಮಕ್ಕಳಲ್ಲಿ ನೈತಿಕ ಮೌಲ್ಯ, ಕೌತುಕ ಮತ್ತು ಕಲ್ಪನಾ ಶಕ್ತಿಯನ್ನು ಬೆಳೆಸುವ ವೈವಿಧ್ಯಮಯ ಕಥೆಗಳ ಸಂಗ್ರಹವಿದೆ. ಅಜ್ಜಿಯ ಚೀಲದಿಂದ ಹೆಣೆದ ಕಥೆಗಳು / ಅಜ್ಜಿಯ ಕಥೆಯ ಮೂಟೆ (Grandma's Bag of Stories) ಯು ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಬರುವ ಮಕ್ಕಳಿಗೆ ಅಜ್ಜಿ ಹೇಳುವ ರಸವತ್ತಾದ ಕಥೆಗಳನ್ನು ಹೊಂದಿದೆ. ಇದರ ವಿಶೇಷತೆ ಎಂದರೆ ಇದು ಪ್ರಾಣಿ, ಪಕ್ಷಿ, ರಾಜ-ರಾಣಿಯರ ಕಥೆಗಳ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಪುಸ್ತಕವಾಗಿದೆ.
ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳನ್ನು ನಿಮಗಿಷ್ಟವಾದ ಭಾಷೆಯಲ್ಲಿ ಓದಬಹುದಾಗಿದೆ. ದೇಶದ ಬಹುತೇಕ ಭಾಷೆಗಳಿಗೆ ಈ ಕಥೆ ಪುಸ್ತಕಗಳು ಅನುವಾದಗೊಂಡಿವೆ. ಮಕ್ಕಳ ಜ್ಞಾನಕ್ಕೆ ತಕ್ಕಂತೆ ಸರಳ ಭಾಷೆ, ಸುಲಭವಾಗಿ ಓದಿ ಅರ್ಥ ಮಾಡಿಕೊಳ್ಳುವಂತಹ ಶೈಲಿಯನ್ನು ಹೊಂದಿದೆ. ಕಥೆಗಳಲ್ಲಿ ದಯೆ, ಪ್ರಾಮಾಣಿಕತೆ, ಹಿರಿಯರಿಗೆ ಗೌರವ ನೀಡುವುದು ಮತ್ತು ಪ್ರಕೃತಿ ಪ್ರೇಮದಂತಹ ಮೌಲ್ಯಗಳು ಇರುವುದರಿಂದ ಮಕ್ಕಳ ಭವಿಷ್ಯಕ್ಕೆ ಉತ್ತಮ ಅಡಿಪಾಯ ನೀಡುವ ಕಥೆ ಪುಸ್ತಕಗಳಾಗಿವೆ. ಎಲ್ಲಕ್ಕಿಂತಲೂ ಮಿಗಿಲಾಗಿ ಈ ಪುಸ್ತಕಗಳಲ್ಲಿ ಮಕ್ಕಳನ್ನು ಸೆಳೆಯಲು ಪುಸ್ತಕಗಳಲ್ಲಿ ಸುಂದರವಾದ ಚಿತ್ರಗಳನ್ನು (Illustrations) ಬಳಸಲಾಗಿದೆ. ಇದರಿಂದ ಮಕ್ಕಳಿಗೆ ಬರೇ ಅಕ್ಷರಗಳನ್ನು ಓದಿ ನೀರಸ ಎನಿಸುವುದು ತಪ್ಪುತ್ತದೆ. ಪಾಲಕರು ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳನ್ನು ಮಕ್ಕಳಿಗೆ ತಂದುಕೊಡಿ. ಅವರ ಜ್ಞಾನಾರ್ಜನೆಯಾಗುವುದನ್ನು ನೀವೇ ಗಮನಿಸಬಹುದು.
(ಆಧಾರ)
ಚಿತ್ರ ಕೃಪೆ: ವಿವಿಧ ಅಂತರ್ಜಾಲ ತಾಣಗಳು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!