ಕೆಲವು ದಶಕಗಳ ಹಿಂದಿನ ಒಂದು ಕಾಲದಲ್ಲಿ ಮಕ್ಕಳಲ್ಲಿ ಓದುವ ಅಭ್ಯಾಸದ ಚಟವನ್ನು ಬೆಳೆಸಿದ್ದೇ ‘ಅಮರ ಚಿತ್ರ ಕಥಾ’ ಎನ್ನುವ ಸಚಿತ್ರ ಕಥಾ ಮಾಲಿಕೆ. ಪೌರಾಣಿಕ, ಐತಿಹಾಸಿಕ, ಸ್ವಾತಂತ್ರ್ಯ ವೀರರು, ಖ್ಯಾತ ವ್ಯಕ್ತಿಗಳು ಮೊದಲಾದ ವಿಷಯಗಳಲ್ಲಿ ಮೂಡಿ ಬಂದಿರುವ ಈ ಚಿತ್ರಕಥಾ ಸರಣಿ ಮಕ್ಕಳಿಗೆ ಅಚ್ಚು ಮೆಚ್ಚು. ಮೊಬೈಲ್, ಇಂಟರ್ನೆಟ್ ಮೊದಲಾದುವುಗಳು ಮಕ್ಕಳ ಮನಸ್ಸನ್ನು ಆಕರ್ಷಿಸುವ ಮೊದಲು ಅಮರ ಚಿತ್ರ ಕಥಾದಂತಹ ಕಾಮಿಕ್ ಸರಣಿಗಳು ಮಕ್ಕಳ ಮನಸ್ಸನ್ನು ಗೆದ್ದಿದ್ದವು ಮತ್ತು ಬಹಳ ಬೇಡಿಕೆಯನ್ನೂ ಹೊಂದಿದ್ದವು.
೧೯೬೭ರಲ್ಲಿ ಅನಂತ್ ಪೈ ಎಂಬವರು ಮುಂಬಯಿಯಲ್ಲಿ ಅಮರ ಚಿತ್ರ ಕಥಾ ಸರಣಿಯನ್ನು ಪ್ರಾರಂಭಿಸಿದರು. ಮಕ್ಕಳ ಪಾಲಿಗೆ ‘ಅಂಕಲ್ ಪೈ’ಎಂದೇ ಖ್ಯಾತರಾಗಿರುವ ಇವರು ಮಕ್ಕಳ ಜನಪ್ರಿಯ ಮಾಸಿಕ ‘ಟಿಂಕಲ್’ ನ ಸ್ಥಾಪಕ ಸಂಪಾದಕರೂ ಹೌದು. ಈ ಎರಡು ಪುಸ್ತಕಗಳು ಅನಂತ್ ಪೈ ಅವರಿಗೆ ಬಹಳ ಹೆಸರು ತಂದುಕೊಟ್ಟವು. ಸುಮಾರು ನಾಲ್ಕು ನೂರಕ್ಕೂ ಅಧಿಕ ‘ಅಮರ ಚಿತ್ರ ಕಥಾ’ ಸರಣಿಗಳು ಹೊರ ಬಂದಿವೆ. ಕೆಲವು ವರ್ಷಗಳ ಹಿಂದೆ ಮುದ್ರಣಾಲಯಕ್ಕೆ ತಗುಲಿದ ಬೆಂಕಿಯಿಂದ ಲಕ್ಷಾಂತರ ಪ್ರತಿಗಳು ಉರಿದು ಹೋದವು.
ರಾಮಾಯಣ, ಮಹಾಭಾರತ, ಘಟೋತ್ಕಚ, ವಸಂತಸೇನೆ, ಅಲೆಕ್ಸಾಂಡರ್ ಮತ್ತು ಪುರೂರವ, ಚತುರ ಬೀರಬಲ್, ರಾಮ, ಸುದಾಮ, ಚಿನ್ನದ ಮುಂಗುಸಿ, ಹಕ್ಕ ಮತ್ತು ಬುಕ್ಕ, ರಾಣಿ ಅಬ್ಬಕ್ಕ, ಗರುಡ, ವಾನರ ಕಥೆಗಳು, ಕಾಗೆಗಳು ಮತ್ತು ಗೂಬೆಗಳು, ವಾಲಿ, ಸೂರ್ಯ, ಕೋನಾರ್ಕ್, ಜಿಪುಣರ ಕಥೆಗಳು, ಚಾಣಕ್ಯ, ಅಭಿಮನ್ಯು, ಎಲೆಫೆಂಟಾ ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಅನ್ನುವಂತೆ ಅಮರ ಚಿತ್ರ ಕಥಾ ಸರಣಿಯಲ್ಲಿ ಎಲ್ಲಾ ವಿಷಯಗಳ ಬಗ್ಗೆ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಸಚಿತ್ರವಾಗಿ, ಸರಳ ಭಾಷೆಯಲ್ಲಿ ಮುದ್ರಿತವಾಗಿವೆ. ಭಾರತದ ಬಹುತೇಕ ಭಾಷೆಗಳಲ್ಲಿ ಈಗ ಅಮರ ಚಿತ್ರ ಕಥಾ ಮುದ್ರಣವಾಗುತ್ತಿದೆ. ಕನ್ನಡ ಭಾಷೆಯಲ್ಲೂ ಇದು ಲಭ್ಯವಿದೆ.
ಅಮರ ಚಿತ್ರ ಕಥಾ ಸರಣಿಯಲ್ಲಿ ನಮ್ಮ ಭಾರತದ ಸಂಸ್ಕೃತಿ, ಇತಿಹಾಸ, ಪೌರಾಣಿಕ ಕಥೆಗಳು ಮತ್ತು ಪಾತ್ರಗಳು ಇವುಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಇದಕ್ಕೆ ಕಾರಣವೇನೆಂದರೆ ಇದರ ಸ್ಥಾಪಕರಾದ ಅನಂತ್ ಪೈ ಅವರು ೧೯೬೭ರಲ್ಲಿ ಒಂದು ಕ್ವಿಜ್ ಕಾರ್ಯಕ್ರಮಕ್ಕೆ ಹೋಗಿದ್ದರಂತೆ. ಅಲ್ಲಿನ ಸ್ಪರ್ಧಾಳುಗಳು ಬಹಳ ಸುಲಭವಾಗಿ ಗ್ರೀಕ್ ಮತ್ತು ರೋಮನ್ ಪುರಾಣಗಳ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದರು, ಅದೇ ರಾಮನ ತಾಯಿಯ ಹೆಸರೇನು? ಎನ್ನುವ ವಾಲ್ಮೀಕಿ ರಾಮಾಯಣದ ಸರಳ ಪ್ರಶ್ನೆಗೆ ಸ್ಪರ್ಧಿಗಳಲ್ಲಿ ಉತ್ತರವಿರಲಿಲ್ಲ. ಇದರಿಂದ ನೊಂದು ಕೊಂಡ ಅಂಕಲ್ ಪೈ ಮಕ್ಕಳಿಗೆ ದೇಶದ ಇತಿಹಾಸ, ಸಂಸ್ಕೃತಿಯ ಪಾಠವನ್ನು ಸರಳ ಭಾಷೆಯಲ್ಲಿ ಕಲಿಸಲು ಹೊರಟರು. ಆಗ ಅವರ ಮನಸ್ಸಿಗೆ ಹೊಳೆದದ್ದೇ ಅಮರ ಚಿತ್ರ ಕಥಾ ಎನ್ನುವ ಕಥಾ ಸರಣಿ. ಪ್ರಾರಂಭಿಕ ಹಂತದಲ್ಲಿ ಏಕ ಅಥವಾ ದ್ವಿವರ್ಣದಲ್ಲಿ ಮುದ್ರಿತವಾಗಿ ಹೊರಬರುತ್ತಿದ್ದ ಪುಸ್ತಕಗಳು ಕ್ರಮೇಣ ಬಣ್ಣದ ಲೋಕಕ್ಕೆ ಹೊರಳಿಕೊಂಡವು. ಇದರಿಂದ ಮಕ್ಕಳಿಗೆ ಈ ಸರಣಿಗಳು ಇನ್ನಷ್ಟು ಆಕರ್ಷಣೀಯವಾಗಿ ಕಾಣಿಸತೊಡಗಿದವು. ಈಗಲೂ ಮಾರುಕಟ್ಟೆಯಲ್ಲಿ ಅಮರ ಚಿತ್ರ ಕಥಾ ಸರಣಿಯ ಪುಸ್ತಕಗಳು ಲಭ್ಯ.
ಮಕ್ಕಳಿಗಾಗಿ ಕೆಲವೇ ಕೆಲವು ಅಮರ ಚಿತ್ರ ಕಥಾ ಶೀರ್ಷಿಕೆಗಳು ‘ಸಂಪದ’ ದಲ್ಲಿಯೂ ಲಭ್ಯ. ಸುಮಾರು ೪೦ ವಿಷಯಗಳ ಅಮರ ಚಿತ್ರಕಥಾ ಸಂಪುಟವೂ ಜಾಲತಾಣದಲ್ಲಿ ಮಾರಾಟಕ್ಕಿದೆ. ‘ಪುಸ್ತಕ ಸಂಪದ’ (https://sampada.net/shop) ಕ್ಕೆ ತೆರಳಿ ನಿಮಗೆ ಬೇಕಾದ ಚಿತ್ರ ಕಥೆಯನ್ನು ಆರಿಸಿಕೊಂಡರೆ ನಿಮ್ಮ ಮನೆ ಬಾಗಿಲಿಗೇ ಪುಸ್ತಕಗಳು ರವಾನೆಯಾಗುತ್ತವೆ. ಹಾಗಾದರೆ ಇನ್ನೇಕೆ ತಡ ಆರ್ಡರ್ ಮಾಡಿ ಬಿಡಿ. ಅಮರ ಚಿತ್ರ ಕಥಾ ಸರಣಿಯು ಮುಂದೆಯೂ ಅಮರವಾಗಿಯೇ ಉಳಿಯಲಿ…
(ಆಧಾರ)
ಚಿತ್ರ ಕೃಪೆ ವಿವಿಧ ಅಂತರ್ಜಾಲ ತಾಣಗಳು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!