ಭಗವಾನ್ ಬುದ್ಧರ ಬಾಲ್ಯ, ಅವರಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನ ದೊರೆತ ಕಥೆ, ಅವರು ನೀಡಿದ ಉಪದೇಶಗಳು, ಕಥೆಗಳು ಎಲ್ಲವೂ ಬೇರೆ ಬೇರೆ ಲೇಖಕರಿಂದ ಬರೆಯಲ್ಪಟ್ಟು ಪುಸ್ತಕ ರೂಪದಲ್ಲಿ ಹೊರಬಂದಿವೆ. ಇವೆಲ್ಲವೂ ಮಕ್ಕಳಿಗೆ ಓದಲು ಯೋಗ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಮರ ಚಿತ್ರ ಕಥೆಯವರು ಬುದ್ಧನ ಬಗ್ಗೆ ಇರುವ ಕಥೆಗಳ (ಬೋಧಿಸತ್ವನ ಕಥೆಗಳು) ಬಹಳಷ್ಟು ಪುಸ್ತಕಗಳನ್ನು ಹೊರ ತಂದಿದ್ದಾರೆ. ಚಿತ್ರ ಸಹಿತ ಇರುವ ಈ ಕಥೆಗಳನ್ನು ಓದಲು ಮಕ್ಕಳಿಗೆ ಬಹಳ ಇಷ್ಟವಾಗುತ್ತದೆ.

ನಾನು ಇಲ್ಲಿ ಹೇಳ ಹೊರಟಿರುವುದು ಖ್ಯಾತ ಮಕ್ಕಳ ಸಾಹಿತಿ ಜಿ ಪಿ ರಾಜರತ್ನಂ ಅವರ ‘ಬುದ್ಧನ ಜಾತಕ ಕಥೆಗಳು’ ಎನ್ನುವ ಕೃತಿಯ ಬಗ್ಗೆ. ಜಿ. ಪಿ. ರಾಜರತ್ನಂ ಅವರು ರಚಿಸಿದ 'ಬುದ್ಧನ ಜಾತಕ ಕತೆಗಳು' ಅಥವಾ ಬೋಧಿಸತ್ವನ ಕಥೆಗಳು ಕನ್ನಡದ ಪ್ರಮುಖ ಬಾಲಸಾಹಿತ್ಯ ಹಾಗೂ ಧಾರ್ಮಿಕ-ಸಾಮಾಜಿಕ ಕೃತಿಗಳಲ್ಲಿ ಒಂದಾಗಿದೆ. ಗೌತಮ ಬುದ್ಧನು ತನ್ನ ಪೂರ್ವಜನ್ಮಗಳಲ್ಲಿ ಬೋಧಿಸತ್ವನಾಗಿ ನಡೆಸಿದ ತ್ಯಾಗ, ಕರುಣೆ ಮತ್ತು ಧರ್ಮದ ಹಾದಿಯನ್ನು ಕನ್ನಡಿಗರಿಗೆ ಅದರಲ್ಲೂ ಮಕ್ಕಳಿಗೆ ಸರಳವಾಗಿ ತಲುಪಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.

ಈ ಕೃತಿಯ ಪ್ರಮುಖ ವಿವರಗಳು ಮತ್ತು ವೈಶಿಷ್ಟ್ಯಗಳು:

* ಸರಳ ಹಾಗೂ ಆಕರ್ಷಕ ಭಾಷೆಯ ಕಾರಣದಿಂದಾಗಿ ರಾಜರತ್ನಂ ಅವರ ಈ ಕಥೆಗಳು ವಿಶೇಷವಾಗಿ ಮಕ್ಕಳು ಮತ್ತು ಸಾಮಾನ್ಯ ಓದುಗರಿಗೆ ಅರ್ಥವಾಗುತ್ತವೆ. ರಾಜರತ್ನಂ ಅವರು ಬಹಳ ಸೊಗಸಾಗಿ, ಸರಳವಾದ ಶೈಲಿಯಲ್ಲಿ ಬರೆದಿದ್ದಾರೆ.

* ನೀತಿ ಮತ್ತು ಮೌಲ್ಯಗಳು: ಪ್ರತಿಯೊಂದು ಜಾತಕ ಕಥೆಯು ಕರುಣೆ, ಸತ್ಯ, ಅಹಿಂಸೆ, ತ್ಯಾಗ, ಸೌಹಾರ್ದತೆ ಮತ್ತು ನಿಸ್ಪಾರ್ಥ ಸೇವೆಯಂತಹ ಉನ್ನತ ಮಾನವೀಯ ಮೌಲ್ಯಗಳನ್ನು ಬೋಧಿಸುತ್ತದೆ.

* ಪ್ರಾಣಿ-ಪಕ್ಷಿಗಳ ಪಾತ್ರಗಳು: ಬುದ್ಧನು ತನ್ನ ಹಿಂದಿನ ಜನ್ಮಗಳಲ್ಲಿ ಕೇವಲ ಮನುಷ್ಯನಾಗಿ ಮಾತ್ರವಲ್ಲದೆ ಸಿಂಹ, ಜಿಂಕೆ, ಕೋತಿ, ಹಂಸ ಮುಂತಾದ ಪ್ರಾಣಿ-ಪಕ್ಷಿಗಳಾಗಿ ಹುಟ್ಟಿ ತೋರಿದ ತ್ಯಾಗದ ಕಥೆಗಳು ಓದುಗರನ್ನು ಆಕರ್ಷಿಸುತ್ತವೆ. ಇಲ್ಲಿರುವ ಪ್ರಾಣಿಗಳು ಮಾನವರಂತೆಯೇ ಸಂಭಾಷಣೆ ನಡೆಸುವುದನ್ನು ಓದುವಾಗ ಮಕ್ಕಳಿಗೆ ಖುಷಿ ಕೊಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

* ಸಂಸ್ಕೃತಿಯ ಪರಿಚಯ: ಮೂಲ ಪಾಳಿ ಅಥವಾ ಪಾಲಿ ಭಾಷೆಯಲ್ಲಿದ್ದ ಪ್ರಸಿದ್ಧ ಬೌದ್ಧ ಸಾಹಿತ್ಯದ ಕಥೆಗಳನ್ನು ಕನ್ನಡದ ಮಣ್ಣಿನ ವಾಸನೆಗೆ ಒಗ್ಗಿಸಿ, ಪ್ರತಿಯೊಬ್ಬರಿಗೂ ತಲುಪುವಂತೆ ಮಾಡಿದ್ದು ರಾಜರತ್ನಂ ಅವರ ಬರವಣಿಗೆಯ ವೈಶಿಷ್ಟ್ಯ. ಈ ಕೃತಿಯು ಮಕ್ಕಳಲ್ಲಿ ಸನ್ಮಾರ್ಗ, ಕರುಣೆ ಮತ್ತು ನೈತಿಕ ಚಿಂತನೆಗಳನ್ನು ಬೆಳೆಸಲು ಅತ್ಯುತ್ತಮ ಸಾಹಿತ್ಯವಾಗಿದೆ.

WhatsApp Image 2026-08-21 at 4.38.05 PM.jpeg

ಜಿ ಪಿ ರಾಜರತ್ನಂ ಅವರು ಬುದ್ಧನ ಜಾತಕ ಕಥೆಗಳು ಮಾತ್ರವಲ್ಲದೇ ಪುಟ್ಟ ಮಕ್ಕಳಿಗಾಗಿ ಸೊಗಸಾದ ಕವನಗಳನ್ನೂ ಬರೆದಿದ್ದಾರೆ. ‘ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ’ ಎನ್ನುವ ಪ್ರಾಸಬದ್ಧ ಕವಿತೆ ಯಾರಿಗೆ ತಾನೇ ಗೊತ್ತಿಲ್ಲ? ಇದು ‘ತುತ್ತೂರಿ’ ಎನ್ನುವ ಕವನ ಸಂಕಲನದಲ್ಲಿದೆ. ಕಲ್ಲು ಸಕ್ಕರೆ, ಕಂದನ ಕಾವ್ಯಮಾಲೆ ಮೊದಲಾದ ಕವನ ಸಂಕಲನಗಳನ್ನು ಮಕ್ಕಳು ಅವಶ್ಯವಾಗಿ ಓದಬೇಕು. ಇದರ ಜೊತೆಗೆ ಪುಟಾಣಿ ಪಂಚತಂತ್ರ, ಮೃಗ ಪಕ್ಷಿಗಳ ಕಥೆಗಳು, ಲಿಯೋಟಾಲ್ ಸ್ಟಾಯ್ ಕೃತಿಯ ಆಧಾರಿತ ‘ಬೆಪ್ಪುತಕ್ಕಡಿ ಐವಾನ್’ ಮೊದಲಾದ ಪುಸ್ತಕಗಳನ್ನು ಅವಕಾಶ ಸಿಕ್ಕರೆ ಖಂಡಿತವಾಗಿಯೂ ಓದಿ. ಈಗಲೇ ಈ ಪುಸ್ತಕಗಳ ಹೆಸರುಗಳನ್ನು ಗುರುತು ಮಾಡಿಟ್ಟುಕೊಂಡರೆ ಮುಂದಿನ ದಿನಗಳಲ್ಲಿ ಶಾಲೆಗೆ ರಜೆ ದೊರೆತಾಗ ಪೋಷಕರ ಬಳಿ ಹೇಳಿ ತರಿಸಿಕೊಳ್ಳಬಹುದು. ಹಿರಿಯ ಸಾಹಿತಿಗಳ ಬಗ್ಗೆ ನಿಮಗಿರುವ ಅರಿವೂ ಹೆಚ್ಚಾಗುತ್ತದೆ. ಉತ್ತಮ ಮನರಂಜನೆಯೂ ದೊರೆಯುತ್ತದೆ.  

(ಆಧಾರ)

ಚಿತ್ರ ಕೃಪೆ ವಿವಿಧ ಅಂತರ್ಜಾಲ ತಾಣಗಳು