ನಮ್ಮ ಕರ್ನಾಟಕದಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳು ಬಂದಿತೆಂದರೆ ಕನ್ನಡಿಗರು “ದಸರಾ” ಮತ್ತು “ದೀಪಾವಳಿ” ಗಳ ಧಾರ್ಮಿಕ ಆಚರಣೆಯೊಂದಿಗೆ “ರಾಜ್ಯೋತ್ಸವ” ದ ಸಾಂಸ್ಕೃತಿಕ ಆಚರಣೆಯ ಸಡಗರ ಹಾಗೂ ಸಂಭ್ರಮದಲ್ಲಿ ಪಾಲ್ಗೊಳ್ಳುವ ಸಂತಸದ ಸಮಯ ಎನ್ನುವುದು ನಮ್ಮೆಲ್ಲರಿಗೂ ಅರಿವಿರುವ ಸಾಮಾನ್ಯ ಸಂಗತಿ.
ಆದರೆ, ಈ ವರ್ಷ ಕನ್ನಡಿಗರ ದಸರಾ, ದೀಪಾವಳಿ ಮತ್ತು ರಾಜ್ಯೋತ್ಸವಗಳ ಆಚರಣೆಯ ಉತ್ಸಾಹಕ್ಕೆ ತಣ್ಣೀರು ಎರಚುವಂತಹ ಬೆಳವಣಿಗೆಗಳು ಸಂಭವಿಸಿ,ಇಡೀ ರಾಜ್ಯದ ಜನತೆ ಬೇಸರದಲ್ಲಿ ಮುಳುಗುವಂತಹ ಪರಿಸ್ಥಿತಿಯನ್ನು ನಾವೇ ಬಹುಮತದಿಂದ ಆಯ್ಕೆಮಾಡಿ, ಅಧಿಕಾರ ನೀಡಿದ ನಮ್ಮ ಜನಪ್ರತಿನಿದಿನಗಳ ರಾಜ್ಯ ಸರ್ಕಾರ ನಿರ್ಮಾಣ ಮಾಡಿದೆ ಅದು ತಪ್ಪಾಗಲಾರದು.
ಇದಕ್ಕೆ ಮುಖ್ಯ ಕಾರಣವೆಂದರೆ ನಮ್ಮ ಘನ ಸರ್ಕಾರವು ಕೆ ಎಂ ಎಫ್ ಉತ್ಪನ್ನಗಳು ಹಾಗೂ ಸಾರಿಗೆ ಪ್ರಯಾಣ ದರವನ್ನು ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ದಿನ ನಿತ್ಯದ ವೆಚ್ಚದ ಹೊರೆಯನ್ನು ಮತ್ತಷ್ಟು ಅಧಿಕಗೊಳಿಸಿ, ಅವರನ್ನು ಸಂಕಷ್ಟಕ್ಕೆ ದೂಡುವ ಕಾರ್ಯಕ್ಕೆ ಮುಂದಾಗಿದೆ.
ಯಾವುದೇ ಉತ್ಪನ್ನವಾಗಲೀ ಅಥವಾ ಸೇವೆಯಾಗಲೀ ಅದರ ಉತ್ಪಾದನಾ ವೆಚ್ಚ ಅಥವಾ ನಿರ್ವಹಣಾ ವೆಚ್ಚವು ಹೆಚ್ಚಳವಾದಾಗ ಆಯಾ ಉತ್ಪನ್ನ ಅಥವಾ ಸೇವೆಯ ದರವೂ ಹೆಚ್ಚಾಗುವುದು ಒಂದು ಸಹಜ ಪ್ರಕ್ರಿಯೆ. ಆದರೆ, ಆ ರೀತಿ ಹೆಚ್ಚಳವಾಗುವ ಬೆಲೆಗಳು ಜನಸಾಮಾನ್ಯರಿಗೆ ಒಂದು ಹೊರೆಯಾಗಿ ಅವರ ಬದುಕನ್ನೇ ದುಸ್ತರಗೊಳಿಸುವಂತಾಗಬಾರದು.
ಯಾವುದೇ ರಾಜಕೀಯ ಪಕ್ಷವಾಗಲೀ ಚುನಾವಣೆಗಳ ಸಮಯದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸುವ ಭರವಸೆಗಳನ್ನು ತಾನು ಅಧಿಕಾರಕ್ಕೆ ಬಂದರೆ ಈಡೇರಿಸಬೇಕಾದದ್ದು ಧರ್ಮ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಆದರೆ, ಚುನಾವಣೆಯ ನಂತರ 5 ವರ್ಷದ ಅವಧಿಗೆ ಅಧಿಕಾರದಲ್ಲಿರುವ ಪಕ್ಷಗಳು ಆ ಅವಧಿಗೆ ತಾವು ನೀಡಿದ ಭರವಸೆಗಳನ್ನು ಈಡೇರಿಸಲು ಅಗತ್ಯವಿರುವ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢಿಕರಿಸುವುದು ಅತ್ಯಂತ ಅಗತ್ಯವಾಗಿರುತ್ತದೆ.
2023 ರಲ್ಲಿ ನಮ್ಮ ರಾಜ್ಯ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರ ಗದ್ದುಗೆಗೆ ಏರಿದ ಸರ್ಕಾರವು ಇಂದು ತನ್ನ ಚುನಾವಣಾ ಭರವಸೆಗಳನ್ನು ಈಡೇರಿಸಲು ಪದೇ ಪದೇ ಜನಸಾಮಾನ್ಯರ ಮೇಲೆ ಹೆಚ್ಚಿನ ತೆರಿಗೆ ಹೊರೆ ಹೊರಿಸುವ ಮತ್ತು ಬೆಲೆ ಏರಿಕೆಯನ್ನು ಮಾಡುವ ಮೂಲಕ ಅಗತ್ಯ ವಸ್ತುಗಳನ್ನು ಮತ್ತು ಸೇವೆಗಳನ್ನು ಪಡೆಯಲು ಕೆಳ ಮಧ್ಯಮ ಹಾಗೂ ಮಧ್ಯಮ ವರ್ಗಗಳು ಪರದಾಡಬೇಕಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿರುವುದು ಒಂದು ಖೇದನೀಯ ಸಂಗತಿ.
ಇಂದು ನಮ್ಮ ರಾಜ್ಯದಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಿದ್ದು, ಸರ್ಕಾರವು ಆ ನಷ್ಟವನ್ನು ಸರಿದೂಗಿಸಲು ಬಸ್ ಪ್ರಯಾಣದರಗಳನ್ನು ದುಬಾರಿ ಮಟ್ಟಕ್ಕೆ ಏರಿಸಿ, ಪುರುಷ ಪ್ರಯಾಣಿಕರಿಂದ ಅದನ್ನು ವಸೂಲಿ ಮಾಡುವ ಕ್ರಮಕ್ಕೆ ಮುಂದಾಗಿರುವುದು ಆಂಗ್ಲ ಭಾಷೆಯ ಪ್ರಖ್ಯಾತ ಉಕ್ತಿಯಾದ Rob Peter, pay Paul (ಒಬ್ಬನನ್ನು ದೋಚಿ, ಮತ್ತೊಬ್ಬನಿಗೆ ನೀಡು) ಎನ್ನುವುದಕ್ಕೆ ಒಂದು ಉತ್ತಮ ನಿದರ್ಶನವಾಗಿದೆ ಎಂದರೆ ತಪ್ಪಾಗಲಾರದು. ಇಲ್ಲಿ ಒಂದು ನಿರ್ದಿಷ್ಟ ವರ್ಗವನ್ನು ಓಲೈಸಲು ಮತ್ತೊಂದು ವರ್ಗವನ್ನು ಶೋಷಿಸುವುದು ಎಷ್ಟು ಸಮಂಜಸ? ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.
ಇಲ್ಲಿ ಮತ್ತೊಂದು ಮಹತ್ವದ ಪ್ರಶ್ನೆಯೆಂದರೆ ಚುನಾವಣೆಯ ಸಮಯದಲ್ಲಿ ಮತದಾರರಿಗೆ ಆಮಿಷಗಳನ್ನು ಒಡ್ಡಿ, ಆ ನಂತರ ಅಧಿಕಾರಕ್ಕೆ ಬಂದ ಮೇಲೆ ತೆರಿಗೆ ಹೆಚ್ಚಿಸಿ, ಬೆಲೆ ಏರಿಕೆ ಮಾಡಿ ಅದೇ ಮತದಾರರ ಮೇಲೆ ಆರ್ಥಿಕ ಹೊರೆಯನ್ನು ಹೊರಿಸುವುದು ಮತದಾರರಿಗೆ ಎಸಗುವ ಬಹು ದೊಡ್ಡ ದ್ರೋಹವಲ್ಲವೇ?
ಆದರೆ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರುವ ಒಂದು ನ್ಯೂನ್ಯತೆಯೆಂದರೆ, ಒಮ್ಮೆ ಚುನಾವಣೆಯಲ್ಲಿ ಬಹುಮತವನ್ನು ಪಡೆದು ಸರ್ಕಾರವನ್ನು ರಚಿಸಿದ ಮೇಲೆ ಮುಂದಿನ 5 ವರ್ಷಗಳ ಅವಧಿಗೆ ಆ ಸರ್ಕಾರದ ಆಡಳಿತ ವೈಖರಿ ಹೇಗೆ ಇರಲಿ ಅದನ್ನು ಬದಲಾಯಿಸುವ ಅಧಿಕಾರ ಮತದಾರ ಪ್ರಭುಗಳಿಗೆ ಇಲ್ಲವೆಂಬುದು ವಾಸ್ತವಿಕ ಕಟುಸತ್ಯ.
ಈ ಮೇಲಿನ ಅಂಶವೇ ನಮ್ಮ ರಾಜಕೀಯ ಪಕ್ಷಗಳಿಗೆ ಒಂದು ವರದಾನವಾಗಿ ಪರಿಣಮಿಸಿದ್ದು, ಚುನಾವಣೆಯ ಸಮಯದಲ್ಲಿ ಮತದಾರರಿಗೆ ಆಮಿಷಗಳನ್ನು ಒಡ್ಡಿ, ಆ ನಂತರ ಅವರನ್ನು ಮೂರ್ಖರನ್ನಾಗಿಸುವುದಕ್ಕೆ ರಾಜಕೀಯ ಪಕ್ಷಗಳಿಗೆ ಸಹಕಾರಿಯಾಗಿರುವುದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ದುರಂತ ಎನ್ನಬಹುದು.
ಇಲ್ಲಿ ನಮ್ಮ ಮತದಾರರ ದೌರ್ಬಲ್ಯವೂ ಒಂದು ಕಾರಣವಾಗಿದ್ದು, ರಾಜಕೀಯ ಪಕ್ಷಗಳು ನೀಡುವ ಪ್ರಲೋಭನೆಗೆ ಬಲಿಯಾಗಿ, ಅದರಿಂದ ದೊರಕುವ ಅಲ್ಪಕಾಲಿಕ ಹಾಗೂ ತಾತ್ಕಾಲಿಕ ಲಾಭವನ್ನು ಪರಿಗಣನೆಗೆ ತೆಗೆದುಕೊಳ್ಳದೇ ಪ್ರಬುದ್ಧವಾಗಿ ಯೋಚಿಸಿ ತಮ್ಮ ಮತವನ್ನು ಚಲಾಯಿಸಿದರೆ ರಾಜಕೀಯ ಪಕ್ಷಗಳಿಂದ ವಂಚನೆಗೆ ಒಳಗಾಗುವ ಸಂದರ್ಭಗಳಿಂದ ಪಾರಾಗುವ ಸಾಧ್ಯತೆಗಳಿರುತ್ತವೆ.
ಆದರೆ, ನಮ್ಮ ರಾಜಕೀಯ ಪಕ್ಷಗಳು ಆಂಗ್ಲ ಭಾಷೆಯ ಮತ್ತೊಂದು ಪ್ರಖ್ಯಾತ ಉಕ್ತಿಯಾದ All people can be fooled for sometime & some people can be fooled all the time but all people can not be fooled all the time (ಎಲ್ಲರನ್ನೂ ಕೆಲಕಾಲ ಮೂರ್ಖರನ್ನಾಗಿಸಬಹುದು ಮತ್ತು ಕೆಲವರನ್ನು ಎಲ್ಲಾ ಕಾಲದಲ್ಲಿಯೂ ಮೂರ್ಖರನ್ನಾಗಿಸಬಹುದು, ಆದರೆ ಎಲ್ಲರನ್ನೂ ಎಲ್ಲಾ ಕಾಲದಲ್ಲಿಯೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ) ಎಂಬ ಸತ್ಯವನ್ನು ಅರ್ಥಮಾಡಿಕೊಳ್ಳದಿದ್ದರೆ ಪ್ರಜ್ಞಾವಂತ ಮತದಾರ ಪ್ರಭುಗಳು ಅಂತಹ ರಾಜಕೀಯ ಪಕ್ಷಗಳಿಗೆ ಮುಂಬರುವ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!