ಇಂದು ವಿಶ್ವದಾದ್ಯಂತ ಹಲವಾರು ನೂತನ ತಂತ್ರಜ್ಞಾನಗಳು ಆವಿಷ್ಕಾರಗೊಳ್ಳುತ್ತಿದ್ದು, ಮಾನವ ಸಮಾಜವು ವೈಜ್ಞಾನಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆಯನ್ನು ಮಾಡುವ ಮೂಲಕ ಅಭಿವೃದ್ಧಿ ಪಥದಲ್ಲಿ ದಾಪುಗಾಲುಗಳನ್ನು ಹಾಕುತ್ತಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.

ಮನುಷ್ಯನ ಬುದ್ದಿವಂತಿಕೆ ಉನ್ನತ ಮಟ್ಟಕ್ಕೆ ಏರಿದಂತೆ ಆತನ ನೈತಿಕತೆ ಮಾತ್ರ ಅಧೋಗತಿಗೆ ಕುಸಿಯುತ್ತಿರುವುದು ನಮ್ಮ ಇಂದಿನ ಸಾಮಾಜಿಕ ವ್ಯವಸ್ಥೆಯ ದುರಂತ ಎನ್ನುವುದಕ್ಕೆ ಸಾಕ್ಷಿಯಾಗಿ ಇತ್ತೀಚಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ನಮ್ಮ ರಾಜಕೀಯ ನಾಯಕರು ಹಾಗೂ ಸರ್ಕಾರಿ ಅಧಿಕಾರಿಗಳು ಭ್ರಷ್ಟತೆಯ ಪರಾಕಾಷ್ಠೆಯನ್ನು ಮೆರೆಯುತ್ತಿದ್ದು, ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಮತ್ತು ಭ್ರಷ್ಟಾಚಾರ ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳು ಎಂದರೆ ಅದು ಬಹುಶಃ ಅತಿಶಯೋಕ್ತಿಯಾಗಲಾರದು.

ನಮ್ಮ ಸ್ವಾತಂತ್ರ್ಯಾನಂತರದ  ಆರಂಭಿಕ ಕೆಲವು ದಶಕಗಳಲ್ಲಿ ರಾಜಕೀಯ ಕ್ಷೇತ್ರವನ್ನು ಒಂದು ಸಾರ್ವಜನಿಕ ಸೇವೆ ಎಂದು ಪರಿಗಣಿಸಲಾಗುತ್ತಿತ್ತು ಮತ್ತು ಆ ಕ್ಷೇತ್ರಕ್ಕೆ ಕಾಲಿಟ್ಟವರು ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವದೊಂದಿಗೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು.

ಆದರೆ, ಕಾಲಾನಂತರದಲ್ಲಿ ರಾಜಕೀಯ ಕ್ಷೇತ್ರ ಎನ್ನುವುದು ಅಕ್ರಮವಾಗಿ ಮತ್ತು ತ್ವರಿತವಾಗಿ ಹಣ ಗಳಿಸುವ ಒಂದು ದಂಧೆಯಾಗಿ ಪರಿವರ್ತನೆಗೊಂಡಿದ್ದು ಮಾತ್ರ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಅತೀ ದೊಡ್ಡ ದುರಂತ ಎಂದು ನಿಸ್ಸಂದೇಹವಾಗಿ ಹೇಳಬಹುದು. ನಮ್ಮ ವ್ಯವಸ್ಥೆಯಲ್ಲಿ ರಾಜಕೀಯವಾಗಿ ಅಧಿಕಾರದಲ್ಲಿರುವವರು ಕಾರ್ಯಾಂಗವನ್ನು ನಿಯಂತ್ರಿಸುವುದರಿಂದ ಅಲ್ಲಿನ ಅಧಿಕಾರವರ್ಗವೂ ಸಹ ಭ್ರಷ್ಟತೆಯ ಕೂಪವಾಗಿ ಮಾರ್ಪಟ್ಟಿದ್ದು, ಇಂದು ಸಾರ್ವಜನಿಕ ಜೀವನದಲ್ಲಿ ನೈತಿಕತೆ ಎನ್ನುವುದು ಒಂದು ಸವಕಲು ನಾಣ್ಯವಾಗಿದೆ.

ಆದರೆ, ಒಂದು ಕಾಲದಲ್ಲಿ ನಮ್ಮ ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕ ರಾಜಕೀಯ ನಾಯಕರು ಮತ್ತು ಅಧಿಕಾರಿಗಳು ಇದ್ದರು ಎನ್ನುವುದಕ್ಕೆ ನಮ್ಮ ದ್ವಿತೀಯ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ವಿಶ್ವ ವಿಖ್ಯಾತ ಇಂಜಿನಿಯರ್ ಮತ್ತು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಜ್ವಲಂತ ನಿದರ್ಶನವಾಗಿ ನಿಲ್ಲುತ್ತಾರೆ.

ಸಾರ್ವಜನಿಕ ಜೀವನದಲ್ಲಿ ವಿಶ್ವೇಶ್ವರಯ್ಯನವರು  ಪ್ರಾಮಾಣಿಕತೆಯ ಪ್ರತಿರೂಪವಾಗಿದ್ದರು ಎನ್ನುವುದಕ್ಕೆ ಈ ಕೆಳಗಿನ ಘಟನೆಗಳು ಸಾಕ್ಷಿಯಾಗುತ್ತವೆ.

ಅವರು ದಿವಾನರಾಗಿದ್ದ ಅವಧಿಯಲ್ಲಿ ಒಮ್ಮೆ ಅವರು ಸರ್ಕಾರಿ ಪ್ರವಾಸಿ ಮಂದಿರದಲ್ಲಿ ರಾತ್ರಿಯ ವಾಸ್ತವ್ಯವನ್ನು ಹೂಡಿದ್ದರು. ಆಗ ಪ್ರವಾಸಿ ಮಂದಿರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಾಗ, ವಿಶ್ವೇಶ್ವರಯ್ಯನವರು ಮೇಣದ ಬತ್ತಿಯೊಂದನ್ನು ಹಚ್ಚಿ ತಮ್ಮ ಬರವಣಿಗೆಯಲ್ಲಿ ತೊಡಗಿದ್ದರು. ಸ್ವಲ್ಪ ಸಮಯದ ನಂತರ ಆ ಮೇಣದ ಬತ್ತಿಯನ್ನು ಆರಿಸಿ ಮತ್ತೊಂದು ಮೇಣದ ಬತ್ತಿಯನ್ನು ಹೊತ್ತಿಸಿ ಪುನಃ ತಮ್ಮ ಬರಹವನ್ನು ಮುಂದುವರೆಸಿದರು. ಇದನ್ನು ಗಮನಿಸಿದ ಅವರ ಮಿತ್ರರೊಬ್ಬರು, ಮೊದಲನೇ ಮೇಣದ ಬತ್ತಿಯೇ ಇನ್ನೂ ಕೆಲವು ಗಂಟೆಗಳ ಕಾಲ ಉರಿಯುವಂತ್ತಿದ್ದರೂ, ಅದನ್ನು ನಂದಿಸಿ ಬೇರೆ ಮೇಣದ ಬತ್ತಿಯನ್ನು ಹಚ್ಚಿದ ಔಚಿತ್ಯವೇನು? ಎಂಬುದಾಗಿ ವಿಶ್ವೇಶ್ವರಯ್ಯನವರನ್ನು ಪ್ರಶ್ನಿಸುತ್ತಾರೆ. ಅದಕ್ಕೆ ವಿಶ್ವೇಶ್ವರಯ್ಯನವರು ನೀಡಿದ ಉತ್ತರವೆಂದರೆ, ಮೊದಲನೇ ಮೇಣದ ಬತ್ತಿಯನ್ನು ಹಚ್ಚಿದಾಗ ತಾವು ಸರ್ಕಾರಿ ಕೆಲಸಕ್ಕೆ ಸಂಬಂಧಿಸಿದ ಪತ್ರವೊಂದನ್ನು ಬರೆಯುತ್ತಿದ್ದು, ಅದಕ್ಕೆ ಸರ್ಕಾರದ ವೆಚ್ಚದಲ್ಲಿ ಖರೀದಿಸಿದ ಮೇಣದ ಬತ್ತಿಯನ್ನು ಉಪಯೋಗಿಸಿ, ಆ ನಂತರ ತಮ್ಮ ಸ್ನೇಹಿತರೊಬ್ಬರಿಗೆ ಖಾಸಗಿ ಪತ್ರವೊಂದನ್ನು ಬರೆಯಬೇಕಾದ್ದರಿಂದ, ತಮ್ಮ ವೈಯಕ್ತಿಕ ಹಣದಿಂದ ಖರೀದಿಸಿದ ಮೇಣದ ಬತ್ತಿಯನ್ನು ಬಳಸಿದ್ದಾಗಿ ಹೇಳುತ್ತಾರೆ. ವಿಶ್ವೇಶ್ವರಯ್ಯನವರ ದೃಷ್ಟಿಯಲ್ಲಿ ಸರ್ಕಾರಿ ವೆಚ್ಚದಲ್ಲಿ  ಖರೀದಿಸಿದ ಒಂದು ಮೇಣದ ಬತ್ತಿಯನ್ನು ವೈಯಕ್ತಿಕ ಕೆಲಸಕ್ಕೆ ಬಳಸುವುದು ಸಹ ಅಧಿಕಾರ ಹಾಗೂ ಸರ್ಕಾರೀ ಹಣದ ದುರುಪಯೋಗ ಎಂಬ ಅಭಿಪ್ರಾಯವಾಗಿತ್ತು.

1918 ರಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಜಾತಿ ಆಧಾರದ ಮೇಲೆ ಮೀಸಲಾತಿ ಕಲ್ಪಿಸುವ ವಿಷಯದಲ್ಲಿ ಶ್ರೀಮನ್ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ರವರೊಂದಿಗೆ ವಿಶ್ವೇಶ್ವರಯ್ಯನವರಿಗೆ ಉದ್ಭವಿಸಿದ ಕೆಲವು ಸೈಧ್ದಾ oತಿಕ ಭಿನ್ನಾಭಿಪ್ರಾಯಗಳಿಂದ ಅವರು ತಮ್ಮ ದಿವಾನ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸುತ್ತಾರೆ. ಆ ಸಂಧರ್ಭದಲ್ಲಿ ಅರಮನೆಗೆ ಸರ್ಕಾರಿ ಕಾರಿನಲ್ಲಿ ಬಂದಿಳಿದ ವಿಶ್ವೇಶ್ವರಯ್ಯನವರು, ಶ್ರೀಮನ್ಮಹಾರಾಜರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ ನಂತರ ಸರ್ಕಾರಿ ಕಾರನ್ನು ಅರಮನೆಯ ಆವರಣದಲ್ಲೇ ಬಿಟ್ಟು, ತಮ್ಮ ಸೋದರಸಂಬಂಧಿಯೊಬ್ಬರ ಖಾಸಗಿ ವಾಹನದಲ್ಲಿ ಹಿಂದಿರುಗುತ್ತಾರೆ.

ನಮ್ಮ ಇಂದಿನ ವ್ಯವಸ್ಥೆಯಲ್ಲಿ ಅಧಿಕಾರವನ್ನು ಕಳೆದುಕೊಂಡ ನಂತರವೂ ಧೀರ್ಘ ಕಾಲದವರೆಗೂ ತಮಗೆ ಸರ್ಕಾರ ನೀಡಿದ್ದ ಸವಲತ್ತುಗಳನ್ನು ಬಿಟ್ಟುಕೊಡಲು ನಿರಾಕರಿಸುವ ಭ್ರಷ್ಟ ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಇರುವಾಗ, ವಿಶ್ವೇಶ್ವರಯ್ಯನವರಂತಹ ಪ್ರಾಮಾಣಿಕರನ್ನು ನಾವು ನಮ್ಮ ಕನಸಿನಲ್ಲೂ ಕಾಣವುದು ಸಹ ದುಸ್ತರವಾದ ಸಂಗತಿ ಎಂಬುವುದರಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ ಎಂದರೆ ತಪ್ಪಾಗಲಾರದು.

ಲಾಲ್ ಬಹಾದ್ದೂರ್ ಶಾಸ್ತ್ರಿಜೀಯವರು ಅತ್ಯಂತ ಸಾಧಾರಣ ಕುಟುಂಬದ ಹಿನ್ನೆಲೆಯಿಂದ ಬಂದವರಾದರೂ, ರಾಜಕೀಯವಾಗಿ ಬೆಳೆದು ಉನ್ನತ ಸ್ಥಾನಗಳನ್ನು ಅಲಂಕರಿಸಿದಾಗಲೂ, ತಮ್ಮ ಸರಳತೆ ಮತ್ತು ಸಜ್ಜನಿಕೆಯನ್ನು ಕಾಪಾಡಿಕೊಂಡಿದ್ದರು ಎಂಬುದಕ್ಕೆ ಈ ಕೆಳಗಿನ ಒಂದೆರಡು ಪ್ರಕರಣಗಳು ಜ್ವಲಂತ ನಿದರ್ಶನಗಳಾಗಿದ್ದವು.

ಸ್ವಾತಂತ್ರ್ಯಾನಂತರ ಉತ್ತರ ಪ್ರದೇಶದ ಮುಖ್ಯ ಮಂತ್ರಿಗಳಾಗಿದ್ದ ಗೋವಿಂದ ವಲ್ಲಭ ಪಂತರ ಸಚಿವ ಸಂಪುಟದಲ್ಲಿ ಶಾಸ್ತ್ರಿಯವರು ಸಚಿವರಾಗಿ ನೇಮಕಗೊಂಡಾಗ ಅವರ ಸ್ಥಾನಮಾನಕ್ಕೆ ಅನುಗುಣವಾಗಿ ಅವರ ಸರ್ಕಾರಿ ನಿವಾಸಕ್ಕೆ ಹವಾ ನಿಯಂತ್ರಕಗಳನ್ನು (Air Conditioners) ಅಳವಡಿಸಲಾಯಿತು. ಆದರೆ ಇದರಿಂದ ಮುಜುಗರಕ್ಕೆ ಒಳಗಾದ ಶಾಸ್ತ್ರಿಯವರು ತಮ್ಮ ನಿವಾಸದಲ್ಲಿ ಅಳವಡಿಸಲಾಗಿದ್ದ ಹವಾ ನಿಯಂತ್ರಕಗಳನ್ನು ತೆಗೆಯುವಂತೆ ತಮ್ಮ ಸಿಬ್ಬಂದಿಗಳಿಗೆ ಆದೇಶಿಸುತ್ತಾರೆ. ಶಾಸ್ತ್ರಿಯವರ ಈ ನಿರ್ಧಾರದಿಂದ ಬೇಸರಗೊಂಡ ಅವರ ಮಕ್ಕಳಿಗೆ ಶಾಸ್ತ್ರಿಯವರು ನೀಡಿದ ಸಮಜಾಯಿಷಿ ಹೀಗಿತ್ತು.

"ಇಂದು ನನಗೆ ಸರ್ಕಾರದಲ್ಲಿ ಸಚಿವ ಸ್ಥಾನ ಲಭ್ಯವಾಗಿರುವ ಕಾರಣಕ್ಕೆ ಈ ರೀತಿಯ ಸೌಲಭ್ಯವನ್ನು ನೀಡಲಾಗುತ್ತಿದೆ. ಆದರೆ, ಈ ಅಧಿಕಾರ, ಅಂತಸ್ತು ಮತ್ತು ಸ್ಥಾನಮಾನಗಳು ಶಾಶ್ವತವಲ್ಲ. ಮುಂದೊಮ್ಮೆ ನಾನು ಈ ಅಧಿಕಾರದಿಂದ ನಿರ್ಗಮಿಸುವ ಪ್ರಸಂಗವು ಒದಗಿ ಬಂದರೆ, ಆಗ ಸರ್ಕಾರವು ತಾನು ನೀಡಿದ ಎಲ್ಲಾ ಸವಲತ್ತು ಮತ್ತು ಸೌಲಭ್ಯಗಳನ್ನು ಹಿಂಪಡೆಯುತ್ತದೆ. ನಾವು ಈಗ ಈ ಸರ್ಕಾರಿ ಸವಲತ್ತುಗಳಿಗೆ ಹೊಂದಿಕೊಂಡರೆ ಮುಂದೆ ಅಧಿಕಾರದಿಂದ ನಿರ್ಗಮಿಸಿದಾಗ ಈ ಸವಲತ್ತುಗಳಿಲ್ಲದೇ ಜೀವನ ನಡೆಸುವುದು ಕಷ್ಟವೆನಿಸುತ್ತದೆ. ಆದ್ದರಿಂದ, ಈಗಲೇ ನಾವು ಸರಳವಾಗಿ ಬದುಕುವುದನ್ನು ರೂಢಿಸಿಕೊಂಡರೆ ಮುಂದೆ ನಾವು ಸುಗಮವಾಗಿ ಜೀವಿಸುವುದು ಸಾಧ್ಯವಾಗುತ್ತದೆ ಎಂಬ ಒಂದೇ ಕಾರಣಕ್ಕೆ ನಾನು ಹವಾ ನಿಯಂತ್ರಕಗಳನ್ನು ತೆಗೆಸುವುದು ಅನಿವಾರ್ಯವಾಯಿತು."

ಮುಂದೆ ಶಾಸ್ತ್ರಿಯವರು 1950 ರ ದಶಕದಲ್ಲಿ ಪ್ರಧಾನಿ ನೆಹರು ರವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾಗ ನಡೆದ ಘಟನೆಯೊಂದು ಅವರ ನೈತಿಕತೆಗೆ ಸಾಕ್ಷಿಯಾಗುತ್ತದೆ. ಶಾಸ್ತ್ರಿಯವರ ನಾಲ್ವರು ಪುತ್ರರಲ್ಲಿ ಒಬ್ಬನಿಗೆ ದ್ವಿಚಕ್ರ ವಾಹನದ ಚಾಲನೆಯ ವ್ಯಾಮೋಹ ವಿಪರೀತವಾಗಿತ್ತು. ಆದರೆ ಆತ ಇನ್ನೂ ಅಪ್ರಾಪ್ತ ವಯಸ್ಕನಾಗಿದ್ದುದರಿಂದ ಆತನಿಗೆ ಚಾಲನಾ ಪರವಾನಗಿ (Driving Licence) ದೊರೆತಿರಲಿಲ್ಲ. ಆಗ ಶಾಸ್ತ್ರಿಯವರ ಪುತ್ರ ಅವರ ಆಪ್ತ ಕಾರ್ಯದರ್ಶಿಯ ಬಳಿ ತನ್ನ ಬಯಕೆಯನ್ನು ವ್ಯಕ್ತಪಡಿಸಿ, ತನಗೆ ಚಾಲನಾ ಪರವಾನಗಿ ದೊರೆಯುವಂತೆ ಮಾಡಬೇಕೆಂದು ಕೇಳುತ್ತಾನೆ. ಅದರಂತೆ ಶಾಸ್ತ್ರಿಯವರ ಆಪ್ತ ಕಾರ್ಯದರ್ಶಿ ತನ್ನ ಪ್ರಭಾವವನ್ನು ಬಳಸಿ ಚಾಲನಾ ಪರವಾನಗಿ ದೊರೆಯುವಂತೆ ವ್ಯವಸ್ಥೆ ಮಾಡುತ್ತಾರೆ. ಇದರಿಂದ ಸಂತಸಗೊಂಡ ಶಾಸ್ತ್ರಿಯವರ ಪುತ್ರ ತನಗೆ ದ್ವಿಚಕ್ರ ವಾಹನ ಚಾಲನಾ ಪರವಾನಗಿ ದೊರೆತ ವಿಷಯವನ್ನು ಅತ್ಯಂತ ಹೆಮ್ಮೆಯಿಂದ ಶಾಸ್ತ್ರಿಯವರ ಬಳಿ ಹೇಳುತ್ತಾನೆ. ವಿಷಯ ತಿಳಿದ ಶಾಸ್ತ್ರಿಯವರು ಕೋಪೋದ್ರಿಕ್ತರಾಗಿ ತಮ್ಮ ಆಪ್ತ ಕಾರ್ಯದರ್ಶಿಯನ್ನು ಕರೆದು ಈ ರೀತಿ ಹೇಳುತ್ತಾರೆ.

"ಈಗ ನೀವು ಮಾಡಿರುವುದು ಅಕ್ಷಮ್ಯ ಅಪರಾಧ. ಒಬ್ಬ ಅಪ್ರಾಪ್ತ ವಯಸ್ಕನಿಗೆ ಸರ್ಕಾರಿ ನಿಯಮಗಳಿಗೆ ವಿರುದ್ಧವಾಗಿ ಚಾಲನಾ ಪರವಾನಗಿಯನ್ನು ನೀಡುವುದು ಕಾನೂನುರೀತ್ಯಾ ಅಪರಾಧ. ಅದರಲ್ಲೂ ನಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಇತರರ ಮೇಲೆ ಅನಗತ್ಯ ಒತ್ತಡವನ್ನು ಹೇರಿ ಕಾನೂನುಬಾಹಿರ ಕೆಲಸಗಳಿಗೆ ಪ್ರಚೋದಿಸುವುದು ಸಾರ್ವಜನಿಕ ಜೀವನದಲ್ಲಿ ಅನೈತಿಕ ಕಾರ್ಯವಾಗುತ್ತದೆ. ಮುಂದೆ ಈ ರೀತಿಯ ಆಚಾತುರ್ಯಗಳಾಗದಂತೆ ಎಚ್ಚರಿಕೆವಹಿಸದಿದ್ದರೆ ನಾನು ನಿಮ್ಮ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ"

ಹೀಗೆ ತಮ್ಮ ಆಪ್ತ ಕಾರ್ಯದರ್ಶಿಗೆ ಎಚ್ಚರಿಕೆ ನೀಡಿದ ಶಾಸ್ತ್ರಿಯವರು ತಕ್ಷಣವೇ ಸಂಬಂಧಪಟ್ಟ ಇಲಾಖೆಯನ್ನು ಸಂಪರ್ಕಿಸಿ ತಮ್ಮ ಪುತ್ರನಿಗೆ ಕಾನೂನುಬಾಹಿರವಾಗಿ ನೀಡಲಾಗಿದ್ದ ಚಾಲನಾ ಪರವಾನಗಿಯನ್ನು ರದ್ದುಪಡಿಸುವಂತೆ ಕೋರುತ್ತಾರೆ. ಇಂದು ನಮ್ಮ ಭ್ರಷ್ಟ ವ್ಯವಸ್ಥೆಯಲ್ಲಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಎಲ್ಲಾ ಸರ್ಕಾರಿ ನೀತಿ ನಿಯಮಗಳನ್ನು ಗಾಳಿಗೆ ತೂರಿ, ಸ್ವಜನ ಪಕ್ಷಪಾತವನ್ನು ಬಹಿರಂಗವಾಗಿ ಮೆರೆಯುವ ರಾಜಕಾರಣಿಗಳಿರುವಾಗ ಇದಕ್ಕೆ ತದ್ವಿರುದ್ಧದ ನಡವಳಿಕೆಯಿಂದ ತಮ್ಮ ನೈತಿಕತೆಯನ್ನು ಮೆರೆದ ಶಾಸ್ತ್ರಿಯವರು ಒಬ್ಬ ವಿಭಿನ್ನ ವ್ಯಕ್ತಿಯಾಗಿ ನಿಲ್ಲುತ್ತಾರೆ.

1952 ರ ಚುನಾವಣೆಯ ನಂತರ ನೆಹರುರವರು ತಮ್ಮ ಸಚಿವ ಸಂಪುಟದಲ್ಲಿ ರೈಲ್ವೇ ಹಾಗೂ ಸಾರಿಗೆ ಖಾತೆಗಳ ಜವಾಬ್ದಾರಿಯನ್ನು ಶಾಸ್ತ್ರಿಯವರಿಗೆ ನೀಡಿದರು. ಅವರ ಈ ಅಧಿಕಾರಾವಧಿಯಲ್ಲಿ 1956 ರ ನವೆಂಬರ್ ನಲ್ಲಿ ಅಂದಿನ ಮದ್ರಾಸ್ ರಾಜ್ಯದ ಅರಿಯಲೂರಿನಲ್ಲಿ ಭೀಕರ ರೈಲ್ವೆ ಅಪಘಾತವೊಂದು ಸಂಭವಿಸಿದ್ದರಿಂದ, ಶಾಸ್ತ್ರಿಯವರು ಅದರ ನೈತಿಕ ಹೊಣೆಹೊತ್ತು ತಮ್ಮ ಸಚಿವಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು. ಈ ರೀತಿ ತಮ್ಮ ಖಾತೆಗೆ ಸಂಬಂಧಿಸಿದ ಆವಘಡಕ್ಕೆ ನೈತಿಕ ಹೊಣೆಹೊತ್ತು ಅಧಿಕಾರ ತ್ಯಜಿಸಿದ ವಿರಳಾತಿವಿರಳ ರಾಜಕಾರಣಿಗಳಲ್ಲಿ ಬಹುಶಃ ಶಾಸ್ತ್ರಿಯವರು ಮೊದಲಿಗರು ಎಂದರೆ ತಪ್ಪಾಗಲಾರದು.

ಇಂದಿನ ದಿನಮಾನಗಳಲ್ಲಿ ನಮ್ಮ ನ್ಯಾಯಾoಗ ವ್ಯವಸ್ಥೆಯು ದೂರುಗಳಿಗೆ ಸಂಬಂಧಿಸಿದ ಸಾಕ್ಷಾಧಾರಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಆರೋಪಗಳಲ್ಲಿ ಹುರುಳಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂಬ ಆದೇಶವನ್ನು ನೀಡಿದ ನಂತರವೂ  ನಮ್ಮ ಭ್ರಷ್ಟ ರಾಜಕೀಯ ವ್ಯವಸ್ಥೆಯ ಭಾಗವಾದ ಕೆಲವು ನಾಯಕರು ತಮ್ಮ ಅಧಿಕಾರಕ್ಕೆ ಅಂಟಿಕೊಂಡು ತಾವು ರಾಜೀನಾಮೆ ನೀಡುವುದಿಲ್ಲ ಎಂಬ ಭಂಡತನ ಮತ್ತು ನಾಚಿಕೆಗೇಡಿನ ವರ್ತನೆಯನ್ನು ಪ್ರದರ್ಶಿಸುತ್ತಿರುವುದನ್ನು ನೋಡಿದಾಗ, ತಾಂತ್ರಿಕ ಕಾರಣಗಳಿಂದ ಸಂಭವಿಸಿದ ರೈಲ್ವೆ ಅಪಘಾತಕ್ಕೆ ನೈತಿಕ ಹೊಣೆಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಾಸ್ತ್ರಿಯವರು ಈ ದೇಶದ ರಾಜಕಾರಣದಲ್ಲಿ ಒಬ್ಬ ಸಂಪೂರ್ಣ ವಿಭಿನ್ನ ಹಾಗೂ ಅಪರೂಪದ ನಾಯಕರಲ್ಲೊಬ್ಬರಾಗಿ ಗುರುತಿಸಿಕೊಳ್ಳುತ್ತಾರೆ ಎನ್ನುವ ಸತ್ಯವನ್ನು ಯಾರೂ ಅಲ್ಲಗಳೆಯುವಂತಿಲ್ಲ.