1947 ರಲ್ಲಿ ಭಾರತದ ಸ್ವಾತಂತ್ರ್ಯಾನಂತರ ನಮ್ಮ ದೇಶದ ಸಂವಿಧಾನವನ್ನು ರಚಿಸಲು ಡಾ ಅಂಬೇಡ್ಕರ್ ರವರ ಅಧ್ಯಕ್ಷತೆಯಲ್ಲಿ “ಸಂವಿಧಾನ ಕರಡು ರಚನಾ ಸಮಿತಿ” ಯನ್ನು ನೇಮಕ ಮಾಡಲಾಯಿತು. ಸರಿ ಸುಮಾರು ಎರಡು ವರ್ಷಗಳ ಧೀರ್ಘ ಅಧ್ಯಯನದ ನಂತರ ಸಮಿತಿಯು ನೀಡಿದ ಸಂವಿಧಾನದ ಕರಡನ್ನು 1949 ರ ನವೆಂಬರ್ 26 ರಂದು ಅಂದಿನ ಸಂಸತ್ತಿನಲ್ಲಿ ವಿಧ್ಯುಕ್ತವಾಗಿ ಅಂಗೀಕರಿಸಿ, 1950 ರ ಜನವರಿ 26 ರಿಂದ ನಮ್ಮ ಸಂವಿಧಾನವನ್ನು ಅಧಿಕೃತವಾಗಿ ಅನುಷ್ಠಾನಗೊಳಿಸಲಾಯಿತು ಎಂಬುದನ್ನು ನಮ್ಮ ಇತಿಹಾಸದಿಂದ ನಾವೆಲ್ಲರೂ ತಿಳಿದಿದ್ದೇವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಸಾರ್ವಜನಿಕ ಸೇವೆಯ ಉದ್ಯೋಗಗಳಿಗೆ ಸೂಕ್ತ ಹಾಗೂ ಅರ್ಹ ಅಭ್ಯರ್ಥಿಗಳ ಆಯ್ಕೆಮಾಡಿ ವಿವಿಧ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲು ಕ್ರಮವಾಗಿ ಕೇಂದ್ರ ಲೋಕಸೇವಾ ಆಯೋಗ (Union Public Service Commission - UPSC) ಹಾಗೂ ರಾಜ್ಯಗಳಲ್ಲಿ ಆಯಾ ರಾಜ್ಯ ಲೋಕಸೇವಾ ಆಯೋಗಗಳನ್ನು (State Public Service Commission) ನಮ್ಮ ಸಂವಿಧಾನದ 315 ನೇ ವಿಧಿಯ ಅಡಿಯಲ್ಲಿ ಸ್ಥಾಪಿಸಲಾಯಿತು.
ಸಾರ್ವಜನಿಕ ಸೇವೆಗೆ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಪಾರದರ್ಶಕ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ನಡೆಸಬೇಕು ಎಂಬುದು ನಮ್ಮ ಸಂವಿಧಾನದ ಆಶಯವಾಗಿರುತ್ತದೆ. ಆದರೆ, ವಾಸ್ತವಿಕ ದುರಂತವೆಂದರೆ ನಮ್ಮ ಸಂವಿಧಾನದ ಆಶಯವನ್ನು ಸಂಪೂರ್ಣ ಗಾಳಿಗೆ ತೂರಿರುವ ನಮ್ಮ ಕರ್ನಾಟಕ ಲೋಕಸೇವಾ ಆಯೋಗವು (KPSC) ಒಂದು ಭ್ರಷ್ಟತೆಯ ಕೂಪವಾಗಿ ಪರಿವರ್ತನೆಗೊಂಡಿದ್ದು, ನೇಮಕಾತಿಯ ಹಂತದಲ್ಲಿ ಹುದ್ದೆಗಳು ಹರಾಜಾಗುತ್ತಿದ್ದು, ಲಂಚದ ರೂಪದಲ್ಲಿ ಗರಿಷ್ಠ ಹಣ ಸಂದಾಯ ಮಾಡುವ ಅಭ್ಯರ್ಥಿಗಳಿಗೆ ಹುದ್ದೆಗಳು ಬಿಕರಿಯಾಗುತ್ತಿವೆ.
ಕರ್ನಾಟಕ ಲೋಕಸೇವಾ ಆಯೋಗದ ಈ ಕರ್ಮಕಾಂಡವು ದಶಕಗಳಿಂದ ಅವ್ಯಾಹತವಾಗಿ ನಡೆದು ಬಂದಿದ್ದು, ಪಕ್ಷಾತೀತವಾಗಿ ಎಲ್ಲಾ ಸರ್ಕಾರಗಳೂ ಅದಕ್ಕೆ ತಮ್ಮ ಪ್ರತ್ಯಕ್ಷ ಹಾಗೂ ಪರೋಕ್ಷ ಬೆಂಬಲವನ್ನು ನೀಡುತ್ತಲೇ ಬಂದಿರುವುದು ಒಂದು ದುರ್ದೈವದ ಸಂಗತಿ ಎಂದು ಹೇಳಬಹುದು. ಪ್ರಸ್ತುತ KPSC ಯ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ವಿರುದ್ಧ ಈಗ ಗಂಭೀರ ಸ್ವರೂಪದ ಭ್ರಷ್ಟಾಚಾರದ ಆರೋಪವು ಬೆಳಕಿಗೆ ಬಂದಿದೆ. ಈ ಹಿಂದೆಯೂ ಸಹ KPSC ಯ ಅಧ್ಯಕ್ಷರುಗಳಾಗಿದ್ದ ಡಾ ಎಚ್ ಎನ್ ಕೃಷ್ಣ ಹಾಗೂ ಗೋನಾಳ್ ಭೀಮಪ್ಪ ಎಂಬುವವರ ಅಧಿಕಾರಾವಧಿಯಲ್ಲಿ ಅವರುಗಳ ವಿರುದ್ಧವೂ ಇದೇ ರೀತಿಯ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.
ಇತ್ತೀಚಿಗೆ 400 ಪಶು ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಕೆಲವು ಅಭ್ಯರ್ಥಿಗಳಿಗೆ ಪರೀಕ್ಷೆಗೆ ಮುನ್ನವೇ ಪ್ರಶ್ನೆಪತ್ರಿಕೆ ದೊರೆತಿದೆ ಎಂಬ ಆರೋಪವು ಕೇಳಿಬಂದಿದ್ದು, ತನಿಖೆಯ ಪ್ರಕಾರ ಕೆಲವು ಅಭ್ಯರ್ಥಿಗಳನ್ನು ಪರೀಕ್ಷೆಗೆ ಮುನ್ನ ನಿರ್ದಿಷ್ಟ ಹೋಟೆಲ್/ರೆಸಾರ್ಟ್ ಗಳಲ್ಲಿ ಇರಿಸಿ ಪ್ರಶ್ನೆಪತ್ರಿಕೆ ನೀಡಲಾಗಿತ್ತು ಎಂಬ ಆರೋಪವೂ ಇದೆ.
ಕೆಲವು ಅಭ್ಯರ್ಥಿಗಳು ಪ್ರಶ್ನೆಪತ್ರಿಕೆಗಾಗಿ ₹40 ಲಕ್ಷದಿಂದ ₹80 ಲಕ್ಷದವರೆಗೆ ಹಣ ಪಾವತಿಸಿದ್ದರೆಂಬ ಅಂಶವೂ ಸಹ ತನಿಖೆಯಲ್ಲಿ ಹೊರಬಂದಿದ್ದು, ಈ ಸಂಬಂಧ ಈಗಾಗಲೇ KPSC ಯ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ನನ್ನು ಭ್ರಷ್ಟಾಚಾರದ ಆರೋಪದ ಮೇಲೆ ಅಮಾನತ್ತು ಮಾಡಲಾಗಿದ್ದು, ಅಕ್ಟೋಬರ್ 6 ರಂದು ಜಾರಿ ನಿರ್ದೇಶನಾಲಯವು (ED) ಅವರನ್ನು ಬಂಧಿಸಿದೆ. ಇದರೊಂದಿಗೆ KPSC ಪರೀಕ್ಷಾ ನಿಯಂತ್ರಕರಾಗಿದ್ದ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಮತ್ತು ಇಡೀ ಪ್ರಕರಣದಲ್ಲಿ ಮಧ್ಯವರ್ತಿಯಾಗಿದ್ದ ಬಸವರಾಜ್ ಕನ್ನಾಳೆ ಎಂಬಾತನನ್ನೂ ಸಹ ಬಂಧಿಸಲಾಗಿದ್ದು, ಈ ಎಲ್ಲಾ ಆರೋಪಿಗಳ ವಿರುದ್ಧದ ತನಿಖೆ ಸದ್ಯಕ್ಕೆ ಪ್ರಗತಿಯಲ್ಲಿದೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕರ್ನಾಟಕದ ಆಡಳಿತ ಸೇವೆಗಳ ನೇಮಕಾತಿ ಇತಿಹಾಸದಲ್ಲಿ ಮಹತ್ವದ ಪ್ರಕರಣವಾಗಿರುವ 2011 ರ ಕೆ ಎ ಎಸ್ (KAS) ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿ ವಿವಾದಕ್ಕೆ ನಮ್ಮ ಸರ್ವೋಚ್ಛ ನ್ಯಾಯಾಲಯವು 2026 ರ ಅಕ್ಟೋಬರ್ 29 ರಂದು ಒಂದು ಹೊಸ ತಿರುವನ್ನು ನೀಡಿದೆ.
ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಕೆ ವಿನೋದ್ ಚಂದ್ರನ್ ರವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು, ಕರ್ನಾಟಕ ಸರ್ಕಾರವು 2022 ರಲ್ಲಿ ಜಾರಿಗೆ ತಂದಿದ್ದ ನೇಮಕಾತಿ ಸಕ್ರಮಗೊಳಿಸುವ ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸಿ ರದ್ದುಪಡಿಸಿದೆ.
ಇದರ ಪರಿಣಾಮವಾಗಿ ಆ ಕಾಯ್ದೆಯ ಆಧಾರದ ಮೇಲೆ ನೇಮಕಗೊಂಡಿದ್ದ ಅಭ್ಯರ್ಥಿಗಳ ನೇಮಕಾತಿಗಳೂ ಅಂತ್ಯಗೊಳ್ಳಬೇಕೆಂದು ನ್ಯಾಯಾಲಯ ಆದೇಶಿಸಿದೆ. ಅದೇ ಸಮಯದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಹೊಸದಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಒಂದು ಬಾರಿಯ ವಯೋಮಿತಿ ಸಡಿಲಿಕೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಕರ್ನಾಟಕ ಲೋಕಸೇವಾ ಆಯೋಗ (KPSC) 2011 ರ ನವೆಂಬರ್ 3 ರಂದು ರಾಜ್ಯದ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ವೃಂದಗಳ ಒಟ್ಟು 362 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು.
ನೇಮಕಾತಿಯ ವಿವಿಧ ಹಂತಗಳಲ್ಲಿ ಭಾಗವಹಿಸಿದವರ ಸಂಖ್ಯೆ ಹೀಗಿತ್ತು:
ಹಂತ ಅಭ್ಯರ್ಥಿಗಳ ಸಂಖ್ಯೆ
ಅರ್ಜಿ ಸಲ್ಲಿಸಿದವರು 1,38,307
ಪೂರ್ವಭಾವಿ ಪರೀಕ್ಷೆ ಬರೆದವರು 91,667
ಮುಖ್ಯ ಪರೀಕ್ಷೆ ಬರೆದವರು 6,211
ಸಂದರ್ಶನಕ್ಕೆ ಆಯ್ಕೆಯಾದವರು 1,090
ಭರ್ತಿ ಮಾಡಬೇಕಿದ್ದ ಹುದ್ದೆಗಳು 362
ಪೂರ್ವಭಾವಿ ಪರೀಕ್ಷೆಯು 22 ಏಪ್ರಿಲ್ 2012 ರಂದು ನಡೆದು, ಆ ನಂತರ ಮುಖ್ಯ ಪರೀಕ್ಷೆಯನ್ನು 15 ಡಿಸೆಂಬರ್ 2012 ರಿಂದ ಜನವರಿ 2013 ರವರೆಗೆ ಮತ್ತು ಸಂದರ್ಶನವನ್ನು ಮೇ 2013 ರಲ್ಲಿ ನಡೆಸಲಾಗಿತ್ತು.
ಆರಂಭದಲ್ಲಿ ಸಾಮಾನ್ಯ ನೇಮಕಾತಿ ಪ್ರಕ್ರಿಯೆಯಾಗಿ ಕಂಡುಬಂದಿದ್ದ ಈ ಆಯ್ಕೆ ಪ್ರಕ್ರಿಯೆಯು ನಂತರ ಗಂಭೀರ ವಿವಾದಕ್ಕೆ ಕಾರಣವಾಯಿತು. 2013 ರ ಮೇ 28 ರಂದು ಡಾ ಮೈತ್ರಿ ಎಚ್ ಪಿ ಎಸ್ ಎಂಬ ಅಭ್ಯರ್ಥಿಯು ಅಂದಿನ ಅಡ್ವೊಕೇಟ್ ಜನರಲ್ ಅವರಿಗೆ ದೂರು ಸಲ್ಲಿಸಿದರು.
ನೇಮಕಾತಿ ಪ್ರಕ್ರಿಯೆಯಲ್ಲಿ ಅದರಲ್ಲೂ ಸಂದರ್ಶನದ ಹಂತದಲ್ಲಿ ಅಕ್ರಮಗಳು ನಡೆದಿವೆ ಎಂಬುದು ದೂರಿನ ಮುಖ್ಯ ಆರೋಪವಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ತನಿಖೆಗೆ ಮುಂದಾಯಿತು. ಪ್ರಕರಣದ ತನಿಖೆಯನ್ನು ಕರ್ನಾಟಕ ಅಪರಾಧ ತನಿಖಾ ದಳಕ್ಕೆ (CID) ವಹಿಸಲಾಯಿತು. ತನಿಖೆಯಲ್ಲಿ ಬೆಳಕಿಗೆ ಬಂದ ಕೆಲವು ಪ್ರಮುಖ ಅಂಶಗಳು ಈ ಕೆಳಗಿನಂತಿದ್ದವು.
1 KPSC ಯ ಕೆಲವು ಅಧಿಕಾರಿಗಳು ಮತ್ತು ಸದಸ್ಯರು ಹಾಗೂ ಅಭ್ಯರ್ಥಿಗಳ ನಡುವೆ ಅನುಮಾನಾಸ್ಪದ ದೂರವಾಣಿ ಸಂಪರ್ಕಗಳಿದ್ದವು.
2 ಕೆಲವು ಅಭ್ಯರ್ಥಿಗಳಿಂದ ಲಂಚದ ಬೇಡಿಕೆ ಇಟ್ಟಿರುವ ಆರೋಪಗಳಿದ್ದವು.
3 ಸಂದರ್ಶನ ನಡೆಸಿದ ಆಯೋಗದ ಸದಸ್ಯರು ಅನೇಕ ಅಭ್ಯರ್ಥಿಗಳಿಗೆ ಒಂದೇ ರೀತಿಯ ಅಂಕಗಳನ್ನು ನೀಡಿರುವುದು ಕಂಡುಬಂದಿತ್ತು.
4 ಕನಿಷ್ಠ 566 ಅಭ್ಯರ್ಥಿಗಳ ಸಂದರ್ಶನದ ಅಂಕಗಳಲ್ಲಿ ವಸ್ತುನಿಷ್ಠ ವೈಯಕ್ತಿಕ ಮೌಲ್ಯಮಾಪನ ನಡೆದಿಲ್ಲ ಎಂಬ ಅನುಮಾನ ವ್ಯಕ್ತವಾಗಿತ್ತು.
5 KPSC ಕಚೇರಿಯ ಡಿಜಿಟಲ್ ವಿಡಿಯೋ ರೆಕಾರ್ಡರ್ (DVR) ಬದಲಾಯಿಸಲಾಗಿತ್ತು. ಇದರಿಂದ ಸಾಕ್ಷ್ಯ ನಾಶಪಡಿಸುವ ಪ್ರಯತ್ನ ನಡೆದಿರಬಹುದೆಂಬ ಗಂಭೀರ ಅನುಮಾನ ಉಂಟಾಗಿತ್ತು.
ಇದರೊಂದಿಗೆ ಮುಖ್ಯ ಪರೀಕ್ಷೆಯ ಉತ್ತರಪತ್ರಿಕೆಗಳ ಮೌಲ್ಯಮಾಪನದಲ್ಲಿಯೂ ಅಕ್ರಮಗಳಾಗಿರುವ ಬಗ್ಗೆ ತನಿಖಾ ವರದಿಯಲ್ಲಿ ವಿವರಗಳಿದ್ದವು. ಈ ಅಂಶಗಳು ಆಯ್ಕೆ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿದ್ದವು.
CID ಯ ಮಧ್ಯಂತರ ವರದಿ ಆಧರಿಸಿ ಸರ್ಕಾರವು 2013 ರ ಅಕ್ಟೋಬರ್ 15 ರಂದು ಮುಖ್ಯ ಪರೀಕ್ಷೆಯ ಮೌಲ್ಯಮಾಪನ ಮತ್ತು ಸಂದರ್ಶನ ಪ್ರಕ್ರಿಯೆಯನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿತು. ನಂತರ 2014 ರ ಆಗಸ್ಟ್ 14 ರಂದು ಸರ್ಕಾರವು ಮತ್ತೊಂದು ಆದೇಶ ಹೊರಡಿಸಿ KPSC ಗೆ ನೀಡಿದ್ದ ನೇಮಕಾತಿ ಪ್ರಸ್ತಾವನೆಯನ್ನು ಹಿಂಪಡೆದು, 2011 ರ ಇಡೀ ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತು.
ಇದರಿಂದ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಅಭ್ಯರ್ಥಿಗಳು ನೇಮಕಾತಿ ಪಡೆಯುವ ಅವಕಾಶ ಕಳೆದುಕೊಂಡರು. ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ (KAT - Karnataka Administrative Tribunal) ಮೊರೆ ಹೋದರು. 2016 ರ ಅಕ್ಟೋಬರ್ 19 ರಂದು KAT ಅಭ್ಯರ್ಥಿಗಳ ಪರವಾಗಿ ತೀರ್ಪು ನೀಡಿತು.
KAT ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ಮತ್ತು ಇತರರು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (PIL) ಸಲ್ಲಿಸಿದರು. 2018 ರ ಮಾರ್ಚ್ 9 ರಂದು ಉಚ್ಛ ನ್ಯಾಯಾಲಯವು ಮಹತ್ವದ ತೀರ್ಪು ನೀಡಿತು.
ಉಚ್ಛ ನ್ಯಾಯಾಲಯದ ಅಭಿಪ್ರಾಯದ ಪ್ರಕಾರ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳು ಗಂಭೀರ ಸ್ವರೂಪದ್ದಾಗಿದ್ದವು. ಹೀಗಾಗಿ KAT ನೀಡಿದ್ದ ತೀರ್ಪನ್ನು ರದ್ದುಪಡಿಸಿದ ಘನ ನ್ಯಾಯಾಲಯವು ಸರ್ಕಾರದ ನೇಮಕಾತಿ ರದ್ದತಿ ಆದೇಶವನ್ನು ಎತ್ತಿಹಿಡಿಯಿತು. ಆದರೆ, ಉಚ್ಛ ನ್ಯಾಯಾಲಯದ ಈ ತೀರ್ಪನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು.
ಆ ನಂತರ 2018 ರ ಏಪ್ರಿಲ್ 4 ರಂದು ತನ್ನ ತೀರ್ಪನ್ನು ಪ್ರಕಟಿಸಿದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಆದರ್ಶ್ ಕುಮಾರ್ ಗೋಯಲ್ ಮತ್ತು ರೋಹಿಂಟನ್ ಫಾಲಿ ನಾರಿಮನ್ ರವರು ಕರ್ನಾಟಕ ಉಚ್ಛ ನ್ಯಾಯಾಲಯದ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿ, ಉಚ್ಛ ನ್ಯಾಯಾಲಯವು ಗುರುತಿಸಿದ್ದ ಅಕ್ರಮಗಳನ್ನು ಪರಿಗಣಿಸಿ ನೇಮಕಾತಿ ರದ್ದತಿ ನಿರ್ಧಾರವನ್ನು ಎತ್ತಿಹಿಡಿಯಿತು.
ಇಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಆಯ್ಕೆ ಪಟ್ಟಿಯಲ್ಲಿರುವ ಎಲ್ಲ ಅಭ್ಯರ್ಥಿಗಳೂ ಅಕ್ರಮದಲ್ಲಿ ಭಾಗಿಯಾಗಿರಲಿಲ್ಲ ಹಾಗೂ ಕೆಲವು ಅಭ್ಯರ್ಥಿಗಳು ಮಾತ್ರ ತಪ್ಪಿತಸ್ಥರಾಗಿರುವುದರಿಂದ, ತಪ್ಪಿತಸ್ಥರಲ್ಲದ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ ನೇಮಕಾತಿ ಮುಂದುವರಿಸಬೇಕು ಎಂಬ ವಾದವನ್ನು ಅಭ್ಯರ್ಥಿಗಳ ಪರವಾಗಿ ಮಂಡಿಸಲಾಗಿತ್ತು. ಆದರೆ, ಸರ್ವೋಚ್ಛ ನ್ಯಾಯಾಲಯವು ಆಯ್ಕೆ ಪ್ರಕ್ರಿಯೆಯೇ ಸಂಪೂರ್ಣವಾಗಿ ಕಲುಷಿತಗೊಂಡಿರುವಾಗ ತಪ್ಪಿತಸ್ಥರು ಮತ್ತು ತಪ್ಪಿತಸ್ಥರಲ್ಲದವರನ್ನು ಪ್ರತ್ಯೇಕಿಸುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಸ್ಪಷ್ಟಪಡಿಸಿತು.
ಹೀಗಾಗಿ 2018 ರ ವೇಳೆಗೆ 2011 ರ ನೇಮಕಾತಿ ಪ್ರಕ್ರಿಯೆ ಸಂಪೂರ್ಣವಾಗಿ ರದ್ದಾಗಿತ್ತು. ಆದರೆ, 2022 ರಲ್ಲಿ ಅಂದಿನ ಕರ್ನಾಟಕದ ಆಡಳಿತಾರೂಢ ಬಿ ಜೆ ಪಿ ಸರ್ಕಾರವು ಜಾರಿಗೆ ತಂದ ವಿಶೇಷ ಕಾಯ್ದೆಯು ಈ ಪ್ರಕರಣಕ್ಕೆ ಮತ್ತೊಂದು ಅತ್ಯಂತ ಮಹತ್ವದ ತಿರುವನ್ನು ನೀಡಿತು.
ಕರ್ನಾಟಕ ಸರ್ಕಾರವು The Karnataka Civil Services (Validation of Selection and Appointment of 2011 Batch Gazetted Probationers) Act, 2022 ನ್ನು ಮಂಡಿಸಿ, ಅದಕ್ಕೆ ಫೆಬ್ರವರಿ 2022 ರಲ್ಲಿ ವಿಧಾನಮಂಡಲದಲ್ಲಿ ಅಂಗೀಕಾರವನ್ನು ಪಡೆದು,14 ಮಾರ್ಚ್ 2022 ರಂದು ಅಧಿಸೂಚನೆಯನ್ನು ಹೊರಡಿಸಿ, 2011 ರ ಗೆಜೆಟೆಡ್ ಪ್ರೊಬೇಷನರ್ಸ್ ಆಯ್ಕೆ ಮತ್ತು ನೇಮಕಾತಿಯನ್ನು ಕಾನೂನುಬದ್ಧಗೊಳಿಸಿತು.
ಆದರೆ, 2022 ರ ಕಾಯ್ದೆಯನ್ನು ಪ್ರಶ್ನಿಸಿ ಮತ್ತೆ ಕಾನೂನು ಹೋರಾಟ ಆರಂಭವಾಯಿತು. 2011 ರ ನೇಮಕಾತಿಯಲ್ಲಿ ಭಾಗವಹಿಸಿದ್ದ, ಆದರೆ ನೇಮಕಾತಿಯಾಗಲು ವಿಫಲರಾದ ಅಭ್ಯರ್ಥಿಗಳು ಈ ಕಾಯ್ದೆಯಿಂದ ತಮ್ಮ ಹಕ್ಕುಗಳಿಗೆ ಧಕ್ಕೆಯಾಗಿದೆ ಎಂದು ವಾದಿಸಿದರು. ಇಲ್ಲಿ ಅರ್ಜಿದಾರರು ಎತ್ತಿದ್ದ ಮುಖ್ಯ ಪ್ರಶ್ನೆಯೆಂದರೆ ಈಗಾಗಲೇ ಉಚ್ಛ ನ್ಯಾಯಾಲಯ ಹಾಗೂ ಸರ್ವೋಚ್ಛ ನ್ಯಾಯಾಲಯಗಳು ರದ್ದುಪಡಿಸಿರುವ ನೇಮಕಾತಿಯನ್ನು ರಾಜ್ಯ ವಿಧಾನಮಂಡಲವು ಹೊಸ ಕಾಯ್ದೆ ತರುವ ಮೂಲಕ ಮತ್ತೆ ಸಕ್ರಮಗೊಳಿಸಬಹುದೇ? ಎಂಬುದಾಗಿತ್ತು. ಸರ್ಕಾರದ ಕ್ರಮವನ್ನು ಕುರಿತಾಗಿ ಅರ್ಜಿದಾರರು ಎತ್ತಿದ ಈ ಪ್ರಶ್ನೆಯನ್ನು ಪರಿಗಣಿಸಿದ ಸರ್ವೋಚ್ಛ ನ್ಯಾಯಾಲಯವು 2026 ರ ಅಕ್ಟೋಬರ್ 29 ರಂದು ತನ್ನ ಅಂತಿಮ ತೀರ್ಪಿನಲ್ಲಿ ಈ ಕೆಳಗಿನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.
1 ನ್ಯಾಯಾಲಯದ ತೀರ್ಪನ್ನು ವಿಧಾನಮಂಡಲ ನೇರವಾಗಿ ರದ್ದುಗೊಳಿಸಲು ಸಾಧ್ಯವಿಲ್ಲ. ವಿಧಾನಮಂಡಲಕ್ಕೆ ಕಾನೂನುಗಳನ್ನು ರೂಪಿಸುವ ಅಧಿಕಾರವಿದೆ. ನ್ಯಾಯಾಲಯದ ತೀರ್ಪಿನಲ್ಲಿ ಕಂಡುಬಂದ ಕಾನೂನಿನ ದೋಷ ಅಥವಾ ಮೂಲ ಆಧಾರವನ್ನು ಹೊಸ ಕಾನೂನಿನ ಮೂಲಕ ಸರಿಪಡಿಸಿ, ಹಿಂದಿನ ಕ್ರಮವನ್ನು ಸಕ್ರಮಗೊಳಿಸುವ ಅವಕಾಶವೂ ಇದೆ. ಆದರೆ, ನ್ಯಾಯಾಲಯ ನೀಡಿರುವ ಅಂತಿಮ ತೀರ್ಪನ್ನೇ ನಿಷ್ಪ್ರಯೋಜಕಗೊಳಿಸುವ ಉದ್ದೇಶದಿಂದ ಕಾಯ್ದೆ ರೂಪಿಸುವಂತಿಲ್ಲ.
2 2022 ರ ಕಾಯ್ದೆಯು ಹಿಂದಿನ ನ್ಯಾಯಾಂಗ ತೀರ್ಪುಗಳ ಮೂಲ ಆಧಾರವನ್ನು ಬದಲಿಸಿರಲಿಲ್ಲ. ಉಚ್ಛ ನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯ ಈ ನೇಮಕಾತಿಯನ್ನು ಕೇವಲ ತಾಂತ್ರಿಕ ಲೋಪದ ಕಾರಣಕ್ಕೆ ರದ್ದುಗೊಳಿಸಿರಲಿಲ್ಲ. ಬದಲಾಗಿ, ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದಿಂದ ಇಡೀ ಆಯ್ಕೆ ಪ್ರಕ್ರಿಯೆಯೇ ಕಲುಷಿತಗೊಂಡಿದೆ ಎಂಬ ಕಾರಣಕ್ಕೆ ರದ್ದುಗೊಳಿಸಿದ್ದವು. 2022 ರ ಕಾಯ್ದೆಯು ಈ ಅಕ್ರಮಗಳನ್ನು ನಿವಾರಿಸಿರಲಿಲ್ಲ. ಬದಲಾಗಿ, ಹಿಂದಿನ ರದ್ದತಿ ಆದೇಶಗಳನ್ನೇ ಅಸಿಂಧುಗೊಳಿಸಲು ಪ್ರಯತ್ನಿಸಿತ್ತು.
3 ತಪ್ಪಿತಸ್ಥರಲ್ಲದ ಅಭ್ಯರ್ಥಿಗಳಿಗೂ ನೇಮಕಾತಿಯ ಹಕ್ಕು ದೊರೆಯುವುದಿಲ್ಲ ಮತ್ತು ಅಭ್ಯರ್ಥಿಗಳು ಸ್ವತಃ ಅಪರಾಧಿಗಳೆಂದು ಸಾಬೀತಾಗಿಲ್ಲ ಎಂಬುದು ಅವರ ಪರವಾಗಿ ಮಂಡಿಸಲಾದ ಪ್ರಮುಖ ವಾದವಾಗಿತ್ತು. ಆದರೆ, ಇಲ್ಲಿ ತಪ್ಪಿತಸ್ಥ ಹಾಗೂ ಅಮಾಯಕ ಎಂಬ ವರ್ಗೀಕರಣವನ್ನು ಮಾಡಲು ಸಾಧ್ಯವಿಲ್ಲ.
ಈ ಎಲ್ಲ ಅಂಶಗಳನ್ನು ಪರಿಗಣಿಸಿ ನ್ಯಾಯಾಲಯವು 2022 ರ ಕಾಯ್ದೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿ ರದ್ದುಗೊಳಿಸಿತು. ಈ ತೀರ್ಪಿನ ಅತ್ಯಂತ ಮಹತ್ವದ ಭಾಗವೆಂದರೆ, ಕೇವಲ 2022 ರ ಕಾಯ್ದೆಯನ್ನು ರದ್ದುಪಡಿಸುವುದಷ್ಟೇ ಅಲ್ಲದೆ, ಮುಂದೆ ಸರ್ಕಾರ ಅನುಸರಿಸಬೇಕಾದ ಕ್ರಮಗಳನ್ನೂ ನ್ಯಾಯಾಲಯ ಸ್ಪಷ್ಟಪಡಿಸಿದೆ.
1 2022 ರ ಕಾಯ್ದೆಯ ಆಧಾರದ ಮೇಲೆ ನೇಮಕಗೊಂಡಿರುವ ಅಭ್ಯರ್ಥಿಗಳ ನೇಮಕಾತಿಗಳು ಅಂತ್ಯಗೊಳ್ಳಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
2 ಖಾಲಿ ಇರುವ ಹುದ್ದೆಗಳಿಗೆ ಹೊಸ ನೇಮಕಾತಿ
ಪ್ರಸ್ತುತ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ವೃಂದಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈಗ ಜಾರಿಯಲ್ಲಿರುವ ನೇಮಕಾತಿ ನಿಯಮಗಳ ಪ್ರಕಾರ ಹೊಸದಾಗಿ ನೇಮಕಾತಿ ಅಧಿಸೂಚನೆ ಹೊರಡಿಸಬೇಕು.
ಈ ಪ್ರಕರಣದ ವಿಶೇಷತೆಯೆಂದರೆ, ನೇಮಕಾತಿ ಅಕ್ರಮದಲ್ಲಿ ನೇರವಾಗಿ ಭಾಗಿಯಾಗದ ಅಭ್ಯರ್ಥಿಗಳ ಹಿತಾಸಕ್ತಿಯನ್ನೂ ಪರಿಗಣಿಸುತ್ತಲೇ, ಸಾರ್ವಜನಿಕ ನೇಮಕಾತಿ ಪ್ರಕ್ರಿಯೆಯ ಪಾವಿತ್ರ್ಯ ಮತ್ತು ನ್ಯಾಯಾಂಗದ ಅಂತಿಮ ತೀರ್ಪಿನ ಪ್ರಾಮುಖ್ಯತೆಯನ್ನು ಸರ್ವೋಚ್ಛ ನ್ಯಾಯಾಲಯವು ಎತ್ತಿಹಿಡಿದಿದೆ.
ಒಟ್ಟಾರೆಯಾಗಿ 2011 ರಿಂದ 2026 ರ ವರೆಗೆ 15 ವರ್ಷಗಳ ಸುಧೀರ್ಘ ಅವಧಿಯಲ್ಲಿ ನಡೆದ ವಿವಿಧ ಬೆಳವಣಿಗೆಗಳ ಈ ಪ್ರಕರಣವು ನಮ್ಮ ಚುನಾಯಿತ ಸರ್ಕಾರಗಳಿಗೆ ಒಂದು ಎಚ್ಚರಿಕೆಯ ಕರೆಗಂಟೆಯಾಗಿದ್ದು, ನಮ್ಮ ನ್ಯಾಯಾಂಗ ವ್ಯವಸ್ಥೆಯು ನೀಡುವ ತೀರ್ಪುಗಳನ್ನು ಸಂಪೂರ್ಣ ಬುಡಮೇಲು ಮಾಡುವ ಕಾಯ್ದೆಗಳನ್ನು ಜಾರಿಗೆ ತರುವುದು ಕಾನೂನುಬಾಹಿರ ಕ್ರಮವಾಗುತ್ತದೆ ಎಂಬ ಅಂಶವನ್ನು ಸ್ಪಷ್ಟಪಡಿಸಿದೆ.
ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದ ಕೆ ಎ ಎಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿ ಹುದ್ದೆಗಳಿಗೆ ನೇಮಕಗೊಂಡಿದ್ದ ಒಟ್ಟು 191 ಅಭ್ಯರ್ಥಿಗಳ ಭವಿಷ್ಯ ಹಾಗೂ ಬದುಕು ಈಗ ಅತಂತ್ರವಾಗಿದ್ದು, ಇದರಿಂದ ಕೇವಲ ಅಕ್ರಮವೆಸಗಿದವರಷ್ಟೇ ಅಲ್ಲದೇ ಅಮಾಯಕರೂ ಸಹ ಬಲಿಪಶುಗಳಾಗಿರುವುದು ಒಂದು ದುರಂತ ಎಂದರೆ ಅದು ಅತಿಶಯೋಕ್ತಿಯಾಗಲಾರದು ಮತ್ತು ನಮ್ಮ ಭ್ರಷ್ಟ ವ್ಯವಸ್ಥೆಯಲ್ಲಿ ಸರ್ಕಾರಿ ಉದ್ಯೋಗ ಲಭಿಸಿದ ನಂತರವೂ ಅದಕ್ಕೆ ಯಾವುದೇ ಭದ್ರತೆಯಿಲ್ಲ ಎನ್ನುವುದಕ್ಕೆ ಈ ಇಡೀ ಪ್ರಕರಣವು ಒಂದು ಜ್ವಲಂತ ನಿದರ್ಶನವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯವು ನೀಡಿರುವ ಪ್ರಸ್ತುತ ತೀರ್ಪು ಕೆ ಎ ಎಸ್ ಹುದ್ದೆಗಳಿಗೆ ನಡೆದ ಅಕ್ರಮ ನೇಮಕಾತಿ ಹಾಗೂ ಅದನ್ನು ಸಕ್ರಮಗೊಳಿಸಲು ಕರ್ನಾಟಕ ಸರ್ಕಾರವು ಜಾರಿಗೊಳಿಸಿದ್ದ ಕಾಯ್ದೆಯನ್ನು ಅಸಿಂಧುವೆಂದು ಪರಿಗಣಿಸಿ, ಅದನ್ನು ರದ್ದುಗೊಳಿಸಿದ ಕ್ರಮವು ಸ್ವಾಗತಾರ್ಹವಾದರೂ, ಭ್ರಷ್ಟಾಚಾರದ ಮೂಲಕ ಇಡೀ ನೇಮಕಾತಿ ಪ್ರಕ್ರಿಯೆಯನ್ನು ಕಲುಷಿತಗೊಳಿಸಿ, ಅನಗತ್ಯ ಗೊಂದಲ ಹಾಗೂ ಆ ಸಂಬಂಧಿತ ಸುಧೀರ್ಘ ಕಾನೂನು ಹೋರಾಟಕ್ಕೆ ಕಾರಣಕರ್ತರಾದ KPSC ಯ ಕಡುಭ್ರಷ್ಟರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕು ಎಂಬ ಆದೇಶವನ್ನು ಸಹ ನೀಡಿದ್ದರೆ, ಬಹುಶಃ ನ್ಯಾಯಾಲಯದ ತೀರ್ಪು ಇನ್ನೂ ಹೆಚ್ಚು ಅರ್ಥಪೂರ್ಣವಾಗಿರುತ್ತಿತ್ತು ಎನ್ನಬಹುದು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!