ಇತ್ತೀಚಿನ ದಿನಗಳಲ್ಲಿ ನಮ್ಮ ಕರ್ನಾಟಕದಲ್ಲಿ ಕೇವಲ ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳೇ ಸುದ್ದಿ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದ ಸಂದರ್ಭದಲ್ಲಿ ಈಗ್ಗೆ ಕೆಲ ದಿನಗಳಿಂದ ರಾಜಕೀಯೇತರ ವಿಷಯವೊಂದು ಭಾರೀ ಚರ್ಚೆಗೆ ಗ್ರಾಸವಾಗಿದ್ದನ್ನು ನಾವೆಲ್ಲರೂ ಗಮನಿಸಿದ್ದೇವೆ. ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು ನಗರವು ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ “ನರಮಂಡಲ ಕೇಂದ್ರ” (Nerve Center) ಎಂಬ ಖ್ಯಾತಿಗೆ ಪಾತ್ರವಾಗಿದ್ದು, ಭಾರತದ “ಸಿಲಿಕಾನ್ ವ್ಯಾಲಿ” ಎಂದೇ ಕರೆಯಲ್ಪಡುತ್ತದೆ ಎಂದು ಕನ್ನಡಿಗರಾದ ನಾವೆಲ್ಲರೂ ಹೆಮ್ಮೆಪಡುತ್ತೇವೆ.

ಆದರೆ, ದುರ್ದೈವದ ಸಂಗತಿಯೆಂದರೆ ನೂರಾರು ಐ ಟಿ ಕಂಪನಿಗಳಿಗೆ ತಮ್ಮ ವ್ಯವಹಾರವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಲು ಅವಕಾಶವನ್ನು ನೀಡಿ, ಅವುಗಳಿಗೆ ಅವಶ್ಯವಿರುವ ಮೂಲಭೂತ ಸೌಲಭ್ಯಗಳನ್ನು ಬೆಂಗಳೂರು ನಗರದಲ್ಲಿ ಕಲ್ಪಿಸಿದ್ದರೂ, ಆ ಐ ಟಿ ಕಂಪನಿಗಳು ತಮ್ಮ ಸಿಬ್ಬಂದಿ ನೇಮಕಾತಿಯಲ್ಲಿ ಕನ್ನಡಿಗರನ್ನು ಅಸ್ಪೃಶ್ಯರಂತೆ ಪರಿಗಣಿಸಿ, ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳು ಇಂದು ವ್ಯಾಪಕವಾಗಿ ಕೇಳಿಬರುತ್ತಿವೆ.

ಈ ರೀತಿ ಕರ್ನಾಟಕದಲ್ಲೇ ನಮ್ಮ ಪ್ರತಿಭಾವಂತ ಕನ್ನಡಿಗರು ಅವಕಾಶ ವಂಚಿತರಾಗಿ ಅನ್ಯಾಯಕ್ಕೆ ಒಳಗಾಗುತ್ತಿದ್ದರೂ, ನಮ್ಮ ಘನ ರಾಜ್ಯ ಸರ್ಕಾರವಾಗಲೀ ಅಥವಾ ಕನ್ನಡಿಗರ ಹಾಗೂ ಕನ್ನಡ ನೆಲ,ಜಲ ಮತ್ತು ಭಾಷೆಯ ಹಿತರಕ್ಷಣೆಗೆ ಹೋರಾಡುವುದಾಗಿ ಸ್ವಯಂ ಘೋಷಿಸಿಕೊಂಡಿರುವ “ಕರ್ನಾಟಕ ರಕ್ಷಣಾ ವೇದಿಕೆ” ಹಾಗೂ ಇನ್ನಿತರ ಕನ್ನಡಪರ ಸಂಘಟನೆಗಳು ಈ ವಿಷಯದಲ್ಲಿ ಕನ್ನಡಿಗರ ಪರವಾಗಿ ತಮ್ಮ ಧ್ವನಿಯನ್ನು ಎತ್ತದೇ ಇರುವುದು ಏಕೆ? ಎಂಬ ಯಕ್ಷಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.

ಈ ಸಂದರ್ಭದಲ್ಲಿ ಈಗ್ಗೆ ಎರಡು ವರ್ಷಗಳ ಹಿಂದೆ ಕರ್ನಾಟಕ ರಾಜ್ಯ ಸರ್ಕಾರವು ಕನ್ನಡಿಗರ ಹಿತಾಸಕ್ತಿಯನ್ನು ರಕ್ಷಿಸಲು ಸೂಕ್ತ ಕಾನೂನೊಂದನ್ನು ರೂಪಿಸಲು ಪ್ರಯತ್ನಿಸಿತ್ತು ಹಾಗೂ ಆ ನಂತರದ ಬೆಳವಣಿಗೆಗಳು ಪ್ರಸ್ತಾವಿತ ವಿಧೇಯಕವು ನೆನೆಗುದಿಗೆ ಬೀಳಲು ಕಾರಣವಾದವು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

2024 ರಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಖಾಸಗಿ ವಲಯದ ಕೈಗಾರಿಕೆಗಳು, ಕಂಪನಿಗಳು ಮತ್ತು ಮಾಹಿತಿ ತಂತ್ರಜ್ಞಾನ (IT) ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ The Karnataka State Employment of Local Candidates in the Industries,Factories and Other Establishments Bill, 2024 ಎಂಬ ವಿಧೇಯಕವನ್ನು ರೂಪಿಸಿತ್ತು. ಆದರೆ, ಈ ಪ್ರಸ್ತಾವನೆಯು ರಾಜ್ಯದಲ್ಲಿ ಭಾರೀ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿತ್ತು.

2024 ರ ಜುಲೈ 15 ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ವಿಧೇಯಕಕ್ಕೆ ಅನುಮೋದನೆ ನೀಡಲಾಗಿತ್ತು. ಇದರ ಪ್ರಮುಖ ಉದ್ದೇಶವೆಂದರೆ ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಆದ್ಯತೆ ಕಲ್ಪಿಸುವುದಾಗಿತ್ತು ಮತ್ತು ಪ್ರಸ್ತಾವಿತ ಮೀಸಲಾತಿಯ ಪ್ರಮಾಣವು ಹೀಗಿತ್ತು:

ಆಡಳಿತಾತ್ಮಕ ಮತ್ತು ನಿರ್ವಹಣಾ ಹುದ್ದೆಗಳು (Management) 50%

ಆಡಳಿತೇತರ ಹುದ್ದೆಗಳು (Non-Management) 75%

ಗ್ರೂಪ್ C ಮತ್ತು D ಹುದ್ದೆಗಳು 100% ಎಂದು ಮುಖ್ಯಮಂತ್ರಿಗಳು ಆರಂಭದಲ್ಲಿ ಘೋಷಿಸಿದ್ದರು.

ಈ ಮೀಸಲಾತಿಯ ವ್ಯಾಪ್ತಿಯಲ್ಲಿ IT ಮತ್ತು ITES ಸಂಸ್ಥೆಗಳೂ ಸೇರಿದ್ದವು. ವಿಶೇಷವಾಗಿ IT/ITES ಉದ್ಯೋಗಿಗಳನ್ನು ಆಡಳಿತೇತರ (Non-Management) ವರ್ಗದಲ್ಲಿ ವಿಧೇಯಕವು ಪರಿಗಣಿಸಿತ್ತು.

ಕನ್ನಡಿಗರೆಂದು ಪರಿಗಣಿಸಲು ವಿಧೇಯಕದ ಪ್ರಕಾರ ಸ್ಥಳೀಯ ಅಭ್ಯರ್ಥಿ (Local Candidate)ಎನಿಸಿಕೊಳ್ಳಲು ಈ ಕೆಳಗಿನ ಅರ್ಹತೆಗಳನ್ನು ನಿಗದಿಪಡಿಸಲಾಗಿತ್ತು.

1 ಕರ್ನಾಟಕದಲ್ಲಿ ಜನಿಸಿರಬೇಕು.

2 ಕನಿಷ್ಠ 15 ವರ್ಷಗಳ ಕಾಲ ಕರ್ನಾಟಕದಲ್ಲಿ ನೆಲೆಸಿರಬೇಕು.

3 ಕನ್ನಡವನ್ನು ಮಾತನಾಡಲು, ಓದಲು ಮತ್ತು ಬರೆಯಲು ಸಮರ್ಥರಾಗಿರಬೇಕು.

4 ಪ್ರೌಢಶಾಲಾ ಹಂತದಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು. ಹಾಗಿಲ್ಲದಿದ್ದರೆ ಸರ್ಕಾರದ ಅಧಿಸೂಚಿತ ನೋಡಲ್ ಸಂಸ್ಥೆ ನಡೆಸುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಹಾಗೆಯೇ ಕೈಗಾರಿಕೆಗಳಿಗೆ ವಿಧೇಯಕದಲ್ಲಿ ಕೆಲವು ವಿನಾಯಿತಿಗಳನ್ನು ನೀಡಲಾಗಿತ್ತು.

1 ಸ್ಥಳೀಯ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ:

ಕೈಗಾರಿಕೆಗಳು ಸರ್ಕಾರದ ಸಹಯೋಗದೊಂದಿಗೆ ಮೂರು ವರ್ಷಗಳ ಅವಧಿಯಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ತರಬೇತಿ ನೀಡಿ ಉದ್ಯೋಗಕ್ಕೆ ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕಿತ್ತು.

2 ಸಾಕಷ್ಟು ಸ್ಥಳೀಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಸರ್ಕಾರಕ್ಕೆ ವಿನಾಯಿತಿಗಾಗಿ ಅರ್ಜಿ ಸಲ್ಲಿಸಲು ಅವಕಾಶವಿತ್ತು.

3 ಸರ್ಕಾರವು ಪರಿಶೀಲನೆ ನಡೆಸಿ ವಿನಾಯಿತಿ ನೀಡಬಹುದಾಗಿತ್ತು.

4 ಆದರೆ ವಿನಾಯಿತಿ ನೀಡಿದರೂ ನಿರ್ವಹಣಾ ಹುದ್ದೆಗಳಲ್ಲಿ ಕನಿಷ್ಠ ಶೇ.25 ಮತ್ತು ಆಡಳಿತೇತರ ಹುದ್ದೆಗಳಲ್ಲಿ ಕನಿಷ್ಠ ಶೇ.50 ಸ್ಥಳೀಯ ಅಭ್ಯರ್ಥಿಗಳ ನೇಮಕಾತಿ ಇರಬೇಕೆಂಬ ಷರತ್ತಿತ್ತು.

ಮೇಲಿನ ಪ್ರಸ್ತಾವಿತ ನಿಯಮಗಳನ್ನು ಉಲ್ಲಂಘಿಸಿದರೆ ಕಂಪನಿಗಳಿಗೆ ದಂಡ ವಿಧಿಸಲಾಗುತ್ತದೆ ಎಂಬ ನಿಬಂಧನೆಯನ್ನೂ ಸಹ ವಿಧೇಯಕವು ಒಳಗೊಂಡಿತ್ತು. ಒಂದೊಮ್ಮೆ ಉದ್ಯೋಗದಾತರು, ಸಂಸ್ಥೆಗಳ ನಿರ್ವಹಣಾಧಿಕಾರಿಗಳು ಅಥವಾ ಸಂಬಂಧಪಟ್ಟ ವ್ಯಕ್ತಿಗಳು ನಿಯಮವನ್ನು ಉಲ್ಲಂಘಿಸಿದರೆ ಕನಿಷ್ಠ ₹10,000 ದಂಡ ಹಾಗೂ ಗರಿಷ್ಠ ₹25,000 ದಂಡ.

ಉಲ್ಲಂಘನೆ ಮುಂದುವರಿದರೆ ಪ್ರತಿದಿನ ಹೆಚ್ಚುವರಿಯಾಗಿ ₹100 ದಂಡ ವಿಧಿಸುವ ಅವಕಾಶವಿತ್ತು. ಉದ್ಯೋಗದಾತರು ನೇಮಕಾತಿಯ ವಿವರಗಳನ್ನು ನೋಡಲ್ ಸಂಸ್ಥೆಗೆ ಸಲ್ಲಿಸಬೇಕಿತ್ತು. ಈ ಸಂಸ್ಥೆಯು ವಿವರಗಳನ್ನು ಪರಿಶೀಲಿಸಿ, ಸರ್ಕಾರಕ್ಕೆ ವರದಿ ನೀಡುವ ವ್ಯವಸ್ಥೆಯನ್ನೂ ಸಹ ಪ್ರಸ್ತಾವಿಸಲಾಗಿತ್ತು.

ಆದರೆ, ದುರದೃಷ್ಟವಶಾತ್ ಈ ವಿಧೇಯಕಕ್ಕೆ ಪ್ರಮುಖವಾಗಿ ಐ ಟಿ ಉದ್ಯಮದ ಪ್ರತಿನಿಧಿಗಳು ಮತ್ತು ಉದ್ಯಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರಮುಖವಾಗಿ ಕಿರಣ್ ಮಜುಂದಾರ್ ಷಾರವರು ಉನ್ನತ ಕೌಶಲ್ಯದ ಉದ್ಯೋಗಗಳಿಗೆ ವಿನಾಯಿತಿ ನೀಡಬೇಕೆಂದು ಅಭಿಪ್ರಾಯಪಟ್ಟರು. ಹಾಗೆಯೇ ಮೋಹನದಾಸ್ ಪೈರವರು ಈ ಪ್ರಸ್ತಾವನೆಯನ್ನು ತಾರತಮ್ಯಪೂರಿತ ಮತ್ತು ಹಿಂದುಳಿದ ಚಿಂತನೆಯ ಕ್ರಮ ಎಂದು ಟೀಕಿಸಿದರು.

NASSCOM ಸಂಸ್ಥೆಯು ಈ ವಿಧೇಯಕದಿಂದ ಕರ್ನಾಟಕದ ಐ ಟಿ ಉದ್ಯಮದ ಬೆಳವಣಿಗೆಗೆ ಹಾನಿಯಾಗಬಹುದು, ಕಂಪನಿಗಳು ಬೇರೆ ರಾಜ್ಯಗಳಿಗೆ ಸ್ಥಳಾಂತರಗೊಳ್ಳಬಹುದು ಮತ್ತು ನವೋದ್ಯಮಗಳ ಬೆಳವಣಿಗೆಗೆ ಅಡ್ಡಿಯಾಗಬಹುದು ಎಂದು ಆತಂಕವನ್ನು ವ್ಯಕ್ತಪಡಿಸಿತು. ಈ ವಿರೋಧದ ಹಿನ್ನೆಲೆಯಲ್ಲಿ ಸರ್ಕಾರ ವಿಧೇಯಕವನ್ನು ಪುನರ್ಪರಿಶೀಲನೆಗೆ ಒಳಪಡಿಸಲು ನಿರ್ಧರಿಸಿತು. ಇಲ್ಲಿ ಒಂದು ಮುಖ್ಯವಾದ ಅಂಶವನ್ನು ಗಮನಿಸಬೇಕು.

2024 ರ ಜುಲೈ 15 ರಂದು ಸಚಿವ ಸಂಪುಟವು ಮೇಲಿನ ವಿಧೇಯಕಕ್ಕೆ ತನ್ನ ಅನುಮೋದನೆ ನೀಡಿ, ಜುಲೈ16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ನಿರ್ಧಾರವನ್ನು ಸಾರ್ವಜನಿಕವಾಗಿ ಪ್ರಕಟಿಸಿದರು. ಆದರೆ, ಜುಲೈ 17–18 ರಂದು ಉದ್ಯಮ ವಲಯದಿಂದ ಸರ್ಕಾರದ ಈ ಪ್ರಸ್ತಾವನೆಗೆ ತೀವ್ರ ವಿರೋಧವು ವ್ಯಕ್ತವಾಯಿತು. ಇದೇ ಕಾರಣಕ್ಕೆ ಜುಲೈ 18ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧೇಯಕವನ್ನು ತಾತ್ಕಾಲಿಕವಾಗಿ ತಡೆಹಿಡಿದು, ವಿವಿಧ ಉದ್ಯಮಗಳೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿದ ನಂತರ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ಈ ವಿಧೇಯಕವನ್ನು ವಿಧಾನಮಂಡಲದಲ್ಲಿ ಮಂಡಿಸಲು ಆರಂಭದಲ್ಲಿ ಉದ್ದೇಶಿಸಲಾಗಿತ್ತು. ಆದರೆ, ಅದಕ್ಕೆ ವ್ಯಕ್ತವಾದ ವಿರೋಧದ ಹಿನ್ನೆಲೆಯಲ್ಲಿ ಅದನ್ನು ವಿಧಾನಸಭೆಯಲ್ಲಿ ಅಧಿಕೃತವಾಗಿ ಮಂಡಿಸುವ ಮೊದಲೇ ತಡೆಹಿಡಿಯಲಾಯಿತು. ಒಟ್ಟಾರೆಯಾಗಿ, ಕನ್ನಡಿಗರಿಗೆ ಖಾಸಗಿ ವಲಯದಲ್ಲೂ ಉದ್ಯೋಗಾವಕಾಶ ಕಲ್ಪಿಸುವುದು ಈ ವಿಧೇಯಕದ ಮೂಲ ಉದ್ದೇಶವಾಗಿತ್ತು. ಆದರೆ ಐ ಟಿ ಕ್ಷೇತ್ರ ಸೇರಿದಂತೆ ಖಾಸಗಿ ಉದ್ಯಮಗಳ ನೇಮಕಾತಿ ಸ್ವಾತಂತ್ರ್ಯ, ಕೌಶಲ್ಯದ ಲಭ್ಯತೆ ಮತ್ತು ಸಂವಿಧಾನಾತ್ಮಕ ಕಾನೂನುಬದ್ಧತೆಯ ಕುರಿತಾದ ಪ್ರಶ್ನೆಗಳು ಈ ಪ್ರಸ್ತಾವನೆಯ ಅನುಷ್ಠಾನಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿ, ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಪರಿಸ್ಥಿತಿ ನಿರ್ಮಾಣವಾಗಿದ್ದು ಮಾತ್ರ ಕನ್ನಡಿಗರ ಪಾಲಿಗೆ ಒಂದು ದುರಂತ ಬೆಳವಣಿಗೆಯಾಗಿ ಪರಿಣಮಿಸಿತು.

ಆದರೆ, ನಮ್ಮ ರಾಜ್ಯ ಸರ್ಕಾರವು ನಿಜವಾಗಿಯೂ ಕನ್ನಡಿಗರ ಹಿತಾಸಕ್ತಿಯನ್ನು ರಕ್ಷಿಸುವ ರಾಜಕೀಯ ಇಚ್ಛಾಶಕ್ತಿಯನ್ನು ಹೊಂದಿದ್ದರೆ, ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದವರಿಗೆ, ಅರ್ಹತೆಯ ಆಧಾರದ ಮೇಲೆ ಕನ್ನಡಿಗರ ಉದ್ಯೋಗದ ಹಕ್ಕನ್ನು ಪ್ರತಿಪಾದಿಸಿ, ಅವರ ಕಡೆಗಣನೆಯನ್ನು ಸರ್ಕಾರವು ಸಹಿಸುವುದಿಲ್ಲ ಎಂಬ ತನ್ನ ನಿಲುವನ್ನು ದೃಢವಾಗಿ ಪ್ರದರ್ಶಿಸಿದ್ದರೆ, ಬಹುಶಃ ಪ್ರಸ್ತಾವಿತ ವಿದೇಯಕವನ್ನು ರಾಜ್ಯ ವಿಧಾನ ಮಂಡಲಗಳಲ್ಲಿ ಮಂಡಿಸಿ, ನಂತರ ಒಂದು ಸೂಕ್ತ ಕಾನೂನನನ್ನು ಅನುಷ್ಠಾನಗೊಳಿಸುವ ಮೂಲಕ ಕನ್ನಡಿಗರ ಉದ್ಯೋಗಾವಕಾಶಗಳ ಹಿತಾಸಕ್ತಿಯನ್ನು ಸೂಕ್ತವಾಗಿ ರಕ್ಷಿಸುವ ಎಲ್ಲಾ ಸಾಧ್ಯತೆಗಳು ಇದ್ದವು.

ಆದರೆ, ಕೆಲವೇ ಕೆಲವು ಉದ್ಯಮಿಗಳು ಪ್ರಸ್ತಾವಿತ ವಿಧೇಯಕಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ ಏಕೈಕ ಕಾರಣಕ್ಕೆ ನಮ್ಮ ಘನ ಸರ್ಕಾರವು ಅದನ್ನು ನೆನೆಗುದಿಗೆ ಹಾಕುವ ಮೂಲಕ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ನಾಚಿಕೆಗೇಡಿನ ವರ್ತನೆಯನ್ನು ಪ್ರದರ್ಶಿಸಿದರೂ ಕನ್ನಡದ “ಉಟ್ಟು ಓರಾಟಗಾರ” ರಾದ ವಾಟಾಳ್ ನಾಗರಾಜ್, ಕ ರ ವೇ ನಾರಾಯಣ ಗೌಡ, ಪ್ರವೀಣ್ ಶೆಟ್ಟಿ ಹಾಗೂ ಕನ್ನಡ ಸಂಘಟನೆಗಳ ಇತರೇ ನಾಯಕರು ನಮ್ಮ ಸಹ್ಯಾದ್ರಿ ಪರ್ವತದ ಯಾವ ಗುಹೆಗಳಲ್ಲಿ ಅಡಗಿ ಕುಳಿತಿದ್ದಾರೆ ಎಂದು ಕನ್ನಡಿಗರು ಹುಡುಕಲಾರಂಭಿಸಿದ್ದಾರೆ.

ಇದು ನವೆಂಬರ್ ತಿಂಗಳಾದುದರಿಂದ ನಮ್ಮ ಕನ್ನಡ ನಾಡು,ನುಡಿ, ಸಂಸ್ಕೃತಿ ಹಾಗೂ ಪರಂಪರೆಯ ವೈಭವವನ್ನು ಬಿಂಬಿಸುವ “ಕನ್ನಡ ರಾಜ್ಯೋತ್ಸವ”ವನ್ನು ತಿಂಗಳಿಡೀ ಆಚರಿಸಲು ನಾವೆಲ್ಲರೂ ತಯಾರಿಯನ್ನು ನಡೆಸಿದ್ದು, ಈ ಸಂದರ್ಭದಲ್ಲಿ ಕನ್ನಡದ ಯುವ ಜನತೆಯ ಉದ್ಯೋಗದ ಆಶೋತ್ತರಗಳನ್ನು ಈಡೇರಿಸಲು ಕನ್ನಡಿಗರಿಂದ ಚುನಾಯಿತವಾದ ರಾಜ್ಯ ಸರ್ಕಾರ ಹಾಗೂ ಎಲ್ಲಾ ಕನ್ನಡಪರ ಸಂಘಟನೆಗಳು ಸರ್ವ ಸಾಧ್ಯ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಮಾಡುವ ಸಂಕಲ್ಪವನ್ನು ಮಾಡುವ ಮೂಲಕ ಈ ಬಾರಿಯ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವಂತಾಗಲಿ ಎಂದು ಕನ್ನಡಿಗರಾದ ನಾವೆಲ್ಲರೂ ಆಶಿಸೋಣ.