ನಮ್ಮ ಪುರಾಣಗಳು ಹೇಳುವ ಪ್ರಕಾರ, ಪ್ರತಿಯೊಬ್ಬರ ಪ್ರತಿಯೊಂದು ಪಾಪ, ಪುಣ್ಯ ಕರ್ಮಗಳನ್ನು ನಿರ್ದಿಷ್ಟವಾಗಿ ತನ್ನ ಲೆಡ್ಜರ್ನಲ್ಲಿ ನಮೂದಿಸಿಕೊಳ್ಳುವ ಚಿತ್ರಗುಪ್ತನು ವಾಸವಾಗಿರುವುದು ಯಮಲೋಕದಲ್ಲಿ. ಈ ವಿಷಯವು ನನ್ನ ಅರಿವಿಗೆ ಬಂದಾಗ ನಾನಿನ್ನೂ ಹುಡುಗ. ಆಗ ನನಗೆ ಬಂದ ಯೋಚನೆಯು ಏನೆಂದರೆ - ಈ ಭೂಮಿಯ ಮೇಲೆ ಕೋಟ್ಯಾಂತರ ಜನರಿದ್ದೇವೆ, ಪ್ರತಿಯೊಬ್ಬರೂ ಪ್ರತಿಯೊಂದು ಕ್ಷಣವೂ ಎನನ್ನಾದರೂ ಮಾಡುತ್ತಿರುತ್ತೇವೆ. ಎಷ್ಟೊಂದು ಜನ, ಲೆಕ್ಕವಿಲ್ಲದಷ್ಟು ಘಟನೆಗಳು. ಈ ಎಲ್ಲವನ್ನೂ ಒಬ್ಬ ಚಿತ್ರಗುಪ್ತನು ಹೇಗೆ ತನ್ನ ಕಡತದಲ್ಲಿ ನಮೂದಿಸಿಕೊಳ್ಳಬಲ್ಲ? ದೊಡ್ಡವನಾಗುತ್ತ ಈ ವಿಚಾರವನ್ನು ವೈಜ್ಞಾನಿಕವಾಗಿ ಯೋಚಿಸತೊಡಗಿದೆ. ಯೋಚಿಸದೆಂತೆಲ್ಲ ಒಂದು ವಿಷಯವು ಸ್ಪಷ್ಟವಾಗತೊಡಗಿತು. ಈ ನಮ್ಮ ಬ್ರಹ್ಮಾಂಡದಲ್ಲಿ ಕೋಟಿಗಟ್ಟಲೆ ಗ್ರಹಗಳು ನಕ್ಷತ್ರಗಳಿಂದ ಹಿಡಿದು ಸೂಕ್ಷ್ಮ ಅಣುವಿನವರೆಗೂ ಯಾರ ಹಸ್ತಕ್ಷೇಪವೂ ಇಲ್ಲದೆ ನಿರಂತರವಾಗಿ ಎಲ್ಲವೂ ತಮ್ಮ ತಮ್ಮ ನಿರ್ದಿಷ್ಟವಾದ ಕೆಲಸವನ್ನು ಮಾಡುತ್ತಿವೆ. ನಿಜವಾಗಿಯೂ ನಮ್ಮ ಕರ್ಮಗಳನ್ನು ನಮೂದಿಸುವ ಮಾತು ಸತ್ಯವಿದ್ದರೆ ಅದೂ ಕೂಡ ನಿರಂತರವಾಗಿ ಯಾರ ಹಸ್ತಕ್ಷೇಪವೂ ಇಲ್ಲದೆ ಯಾಂತ್ರಿಕವಾಗಿ ನಡೆದು ಹೋಗುತ್ತಿರಬಹುದು ಎಂಬ ಅಭಿಪ್ರಾಯಕ್ಕೆ ಬಂದೆನು. ಆದರೆ ಅದು ನಿರ್ದಿಷ್ಟವಾಗಿ ಹೇಗೆ ಎನ್ನುವ ವಿಷಯವು ಸ್ಪಷ್ಟವಾಗಿರಲಿಲ್ಲ - ಡಾ|| ದೀಪಕ್ ಛೋಪ್ರಾರವರ ಒಂದು ಲೇಖನವನ್ನು ಓದುವವರೆಗೂ. ಡಾ|| ದೀಪಕ್ ಛೋಪ್ರಾರವರು ವೃತ್ತಿಯಿಂದ ವೈದ್ಯರು ಹಾಗೂ ಹೆಸರಾಂತ ಚಿಂತನಕಾರರು ಮತ್ತು ಲೇಖಕರು. ಅವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವರು ಬರೆದ 'The Maharishi Years - The Untold Story' ಎಂಬ ಲೇಖನದಲ್ಲಿ ನನ್ನ ಪ್ರಶ್ನೆಗೆ ಉತ್ತರವು ದೊರೆಯಿತು. ಈ ಕೆಳಗೆ ಆ ಲೇಖನದ ಆಯ್ದ ಭಾಗವನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ. ನನ್ನ ಹಾಗೆ ಯಾರನ್ನಾದರೂ ಈ ಪ್ರಶ್ನೆಯು ಕಾಡುತ್ತಿದ್ದರೆ ಅದಕ್ಕೆ ಉತ್ತರ ಈ ಲೇಖನದಲ್ಲಿದೆ, ಓದಿ ನೀವೇ ಕಂಡುಕೊಳ್ಳಿ:
ಡಾ. ದೀಪಕ್ ಛೋಪ್ರಾ ಅವರ ಲೇಖನ
ಅಗಸ್ಟ್ 1, 1991ರಂದು 'Perfect Health' ಎಂಬ ನನ್ನ ಪುಸ್ತಕವು ಬಿಡುಗಡೆಯನ್ನು ಕಂಡ ದಿನ. ಇದು ಆಯುರ್ವೇದದ ಬಗೆಗಿನ ಜನಪ್ರಿಯ ಪುಸ್ತಕ. ಆ ದಿನಗಳು ಮಹರ್ಷಿ ಮಹೇಶ್ ಯೋಗಿಯವರೊಡಗಿನ ನನ್ನ ಸಹಯೋಗವು ಉತ್ತುಂಗದಲ್ಲಿದ್ದ ಸಮಯ. ಇತರ TM (Transcendental Meditation) ಧ್ಯಾನಿಗಳು 60ರ ದಶಕದಿಂದಲೂ ಅವರ ಒಡನಾಟದಲ್ಲಿದ್ದರೂ, ಒಂದು ದಶಕಕ್ಕಿಂತಲೂ ಕಡಿಮೆಯ ಸಮಯದಲ್ಲಿ ನನ್ನ ಮತ್ತು ಅವರ ಸಹವಾಸವು ಬೇಗನೆ ವೈಯಕ್ತಿಕ ರೂಪವನ್ನು ಪಡೆಯಿತು. ಅವರು ಇತರ ಭಾರತೀಯರ ಒಡನಾಟವನ್ನು ಬಯಸುತ್ತಿದ್ದರು ಮತ್ತು ವಿಜ್ಞಾನಿಗಳಿಗೆ ಮತ್ತು ವೈದ್ಯರಿಗೆ ಹೆಚ್ಚಿನ ಗೌರವವನ್ನು ಕೊಡುತ್ತಿದ್ದರು. ಅದಕ್ಕೆ ಪ್ರತಿಫಲವಾಗಿ ಮೋಕ್ಷ ಮತ್ತು ಗುರುಗಳ ಅಲೌಕಿಕ ಸ್ಥಿತಿಯ ಬಗ್ಗೆ ನಾನು ಅಪಾರ ಆಕರ್ಷಣೆಯನ್ನು ಬೆಳೆಸಿಕೊಂಡಿದ್ದೆನು. ನನ್ನ ಪುಸ್ತಕದ ಬಿಡುಗಡೆಯ ಕೆಲವು ದಿನಗಳ ಮುಂಚೆ ನಾನು ಐಯೋವಾದ ಫ಼ೇರ್ಫ಼ೀಲ್ಡ್ ಎಂಬ ಊರಿನಲ್ಲಿ ಧ್ಯಾನದ ಬಗೆಗಿನ ಒಂದು ಕೋರ್ಸ್ನಲ್ಲಿ ಪಾಲ್ಗೊಂಡಿದ್ದೆ. ಮಹರ್ಷಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾರತದಿಂದ ದೂರವಾಣಿಯ ಮೂಲಕ ಮಾತನಾಡುವವರಿದ್ದರು. ಆದರೆ ಆ ಸಮಯದಲ್ಲಿ ದೂರವಾಣಿಯ ಸಂಪರ್ಕವು ಸರಿಯಿಲ್ಲದಿದ್ದ ಕಾರಣ ನಾನು ಪಾಲ್ಗೊಳ್ಳಲಾಗಲಿಲ್ಲ.
ಒಂದೆರಡು ಘಂಟೆಗಳ ಅನಂತರ ನಾನು ಧ್ಯಾನದಲ್ಲಿದ್ದಾಗ ನನಗೆ ಮಹರ್ಷಿಯವರು ಆಸ್ಪತ್ರೆಯಲ್ಲಿ IV ಟ್ಯೂಬುಗಳನ್ನು ಚುಚ್ಚಿಸಿಕೊಂಡು ಕೃತಕ ಉಸಿರಾಟದ ಯಂತ್ರದ ಮೂಲಕ ಉಸಿರಾಡುತ್ತಿರುವಂತಹ ಚಿತ್ರವು ಗೋಚರವಾಯಿತು. ನಾನು ಕೂಡಲೆ ಎದ್ದು ದೆಹಲಿಯಲ್ಲಿದ್ದ ನನ್ನ ಮನೆಗೆ ಕರೆಮಾಡಿದೆ. ನನ್ನ ತಾಯಿಯವರು ಆ ಕಡೆಯಿಂದ ಮಾತನಾಡಿ ಮಹರ್ಷಿಯವರು ಖಾಯಿಲೆಯಿಂದ ಬಹಳ ಬಳಲುತ್ತಿದ್ದಾರೆಂದು ತಿಳಿಸಿದರು. "ಅವರಿಗೆ ವಿಷಪ್ರಯೋಗ ಮಾಡಲಾಗಿದೆಯೆಂದು ವಿಚಾರ ಮಾಡಲಾಗುತ್ತಿದೆ, ಬೇಗ ಬಾ" ಎಂದರು. ನಾನು ಹೃದಯ ವೈದ್ಯರಾದ ನನ್ನ ತಂದೆಯವರ ಜೊತೆ ಮಾತನಾಡಲು ಬಯಸಿದೆ. ಆಗ ನಮ್ಮ ತಾಯಿಯವರು "ನಿಮ್ಮ ತಂದೆಯವರು ಮನೆಯಲ್ಲಿಲ್ಲ, ಅವರು ಮಹರ್ಷಿಯವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದಾರೆ" ಎಂದರು. ಈ ವಿಷಯವು ನನ್ನ ಗುರುಗಳ ಬಗೆಗಿನ ನನ್ನ ಅಭಿಪ್ರಾಯ ಮತ್ತು ಅವರ ಈಗಿನ ಸ್ಥಿತಿಯ ಬಗ್ಗೆ ಚಿಂತಿಸುವಂತೆ ಮಾಡಿತು. ಈ ಎರಡೂ ಒಂದಕ್ಕೊಂದು ವ್ಯತಿರಿಕ್ತವಾಗಿರುವ ಸಾಧ್ಯತೆಯು ಕಾಣಿಸಿತು.
ತಕ್ಷಣ ನಾನು ಅಲ್ಲಿಂದ ಚಿಕಾಗೋಗೆ ಪ್ರಯಾಣಬೆಳೆಸಿದೆ. ಅಲ್ಲಿನ ಒಬ್ಬ ಧನಿಕ TM ದಾನಿಯು ನನ್ನ ಪ್ರಯಾಣಕ್ಕಾಗಿ ಸಹಾಯಪೂರ್ವಕವಾಗಿ ವಿಶೇಷ ವಿಮಾನವೊಂದನ್ನು ಒದಗಿಸಿದರು. ನಾನು ದೆಹಲಿಯಲ್ಲಿಳಿದಾಗ ಸಮಯವು ಮಧ್ಯರಾತ್ರಿ ದಾಟಿತ್ತು. ಮೊದಲಿಗೆ ಮನೆಯನ್ನು ತಲುಪಿದೆ. ನಮ್ಮ ತಂದೆಯವರು ಅಲ್ಲಿರಲಿಲ್ಲ. ಅವರು ಇನ್ನೂ ಮಹರ್ಷಿಯವರ ಜತೆ ಗೋಲ್ಫ್ ಲಿಂಕ್ಸ್ ನಲ್ಲಿರುವ ಒಂದು ಖಾಸಗಿ ಸ್ಥಳದಿಲ್ಲಿದ್ದಾರೆಂದು ತಿಳಿಸಿದರು. ಅಲ್ಲಿ ಒಂದು ಕೋಣೆಯನ್ನು ICU ಆಗಿ ಪರಿವರ್ತಿಸಲಾಗಿತ್ತು. ಅಲ್ಲಿ ನಮ್ಮ ತಂದೆಯವರ ಜತೆ ಇತರ ವೈದ್ಯರೂ ಇದ್ದರು. ಅಲ್ಲಿ ಮಹರ್ಷಿಯವರು ಜ್ಞಾನರಹಿತ ಸ್ಥಿತಿಯಲ್ಲಿ ಹಾಸಿಗೆಯ ಮೇಲೆ IV ಟ್ಯೂಬುಗಳು ಮತ್ತು ಕೃತಕ ಉಸಿರಾಟದ ಯಂತ್ರದ ಜತೆ ನನಗೆ ಧ್ಯಾನದ ಸಮಯದಲ್ಲಿ ಗೋಚರಿಸಿದ ಹಾಗೆಯೇ ಮಲಗಿದ್ದರು. ಮಹರ್ಷಿಯವರು ಒಬ್ಬ ʻವಿದೇಶಿ ಶಿಷ್ಯʼನು ಕೊಟ್ಟ ಕಿತ್ತಲೆ ರಸ ಕುಡಿದ ಮೇಲೆ ಅಧಿಕವಾದ ಹೊಟ್ಟೆನೋವು ಅನುಭವಿಸಿ, Pancreas ದಲ್ಲಿ ಉರಿಯೂತ ಉಂಟಾಗಿ, Kidney failure ಆಗಿ, ನಂತರ ಅವರಿಗೆ ಹೃದಯಾಘಾತವಾಯಿತು ಎಂದು ನಮ್ಮ ತಂದೆಯವರು ನನಗೆ ಗೌಪ್ಯವಾಗಿ ತಿಳಿಸಿದರು. ವಿಷಪ್ರಯೋಗವಾಗಿರಬಹುದೆಂಬ ಶಂಕೆಯಿತ್ತು. ಮುಂದೆರಡು ದಿನಗಳಲ್ಲಿ ಅವರ ಅನಾರೋಗ್ಯವು ಇನ್ನೂ ಉಲ್ಬಣ ಸ್ಥಿತಿಯನ್ನು ತಲುಪಿತು. Pancreas ಮತ್ತು kidneyಗಳ ಕಾರ್ಯಕ್ಷಮತೆ ಇನ್ನೂ ಕಡಿಮೆಯಾಗತೊಡಗಿತು ಮತ್ತು ಅವರ ಹೃದಯವು ಚೇತರಿಸಿಕೊಳ್ಳಲಿಲ್ಲ. ನಮ್ಮ ತಂದೆಯವರು ಮಹರ್ಷಿಯವರನ್ನು dialysisಗೋಸ್ಕರ ಇಂಗ್ಲೆಂಡಿಗೆ ಕರೆದೊಯ್ಯುವುದು ಒಳ್ಳೆಯದು ಎಂಬ ಅಭಿಪ್ರಾಯವನ್ನು ತಳೆದರು. ಆದರೆ ಭಾರತದ TM ಕೇಂದ್ರದ ಮುಖ್ಯಸ್ಥರೂ ಹಾಗೂ ಮಹರ್ಷಿಯವರ ಅಣ್ಣತಮ್ಮಂದಿರ ಮಕ್ಕಳಾದ ಪ್ರಕಾಶ್ ಮತ್ತು ಆನಂದ್ ಶ್ರೀವಾಸ್ತವ ಅವರುಗಳು ಬೇರೆ ಯಾರಿಗೂ ಮಹರ್ಷಿಯವರ ಈ ಸ್ಥಿತಿಯ ಅರಿವಾಗಬಾರದು ಎಂದು ಹಠತೊಟ್ಟರು. ಅವರುಗಳು ಭಕ್ತರಿಗೆ ಈ ವಿಷಯವು ತಿಳಿದರೆ ಅವರು ಗುರುಗಳ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಬಹುದೆಂಬ ಅಭಿಪ್ರಾಯವನ್ನು ಹೊಂದಿದ್ದರು.
ನನ್ನ ಮನಸ್ಸು ಜರ್ಝರಿತವಾಗಿತ್ತು. ಏಕೆಂದರೆ ಮಹರ್ಷಿಯವರು ಎಂದೂ ತಮ್ಮನ್ನು ಇತರ ಹಿಂದೂ ಗುರುಗಳ ರೀತಿಯಲ್ಲಿ ಪ್ರದರ್ಶಿತಗೊಳಿಸಿಕೊಂಡಿರಲಿಲ್ಲ. ತಮ್ಮಲ್ಲಿ ದೈವತ್ವವಿದೆ ಎಂದು ಹೇಳಿಕೊಂಡಿರಲಿಲ್ಲ. ತಮ್ಮ ಎಲ್ಲ ಯಶಸ್ಸನ್ನೂ ಅವರು ತಮ್ಮ ಗುರುವರ್ಯರ ದಯೆ ಎಂದು ಹೇಳಿಕೊಂಡಿದ್ದರು. ಅವರು ತಮ್ಮ ಸ್ವಂತ ವರ್ಚಸ್ಸನ್ನು ತೋರಿಸಿಕೊಳ್ಳುವ ಮತ್ತು ತಮ್ಮಲ್ಲಿ ದೈವತ್ವವಿದೆ, ತಾವು ಅತಿಮಾನವರು ಎಂದು ಪ್ರತಿಪಾದಿಸಿಕೊಳ್ಳುವ ಗುರುಗಳನ್ನು ಮೆಚ್ಚುತ್ತಿರಲಿಲ್ಲ. ಆದಕ್ಕಿಂತಲೂ ಮಿಗಿಲಾಗಿ ಮಹರ್ಷಿಯವರು ಧಾರ್ಮಿಕ ಗುರುಗಳಾಗಿರಲಿಲ್ಲ. ಅವರು ಸನ್ಯಾಸವನ್ನು ಸ್ವೀಕರಿಸಿದ್ದರೂ ಅವರು ಪ್ರಪಂಚಕ್ಕೆ ಧ್ಯಾನದ ತಂತ್ರವನ್ನು ತೋರಿಸಿಕೊಟ್ಟವರು, ಅದೇ TM ಅಥವಾ Transcendental Meditation. ಈ ತಂತ್ರವು ಧಾರ್ಮಿಕ ತಳಹದಿಯನ್ನಲ್ಲದೆ ವೈಜ್ಞಾನಿಕ ತಳಹದಿಯನ್ನು ಹೊಂದಿದೆ. ಇವರನ್ನು ಬಹುಶಃ ಒಂದು ಧಾರ್ಮಿಕವಲ್ಲದ ತಂತ್ರದ ಮೂಲಕ ವಿದೇಶಿಯರನ್ನು, ದೇವರಲ್ಲಿ ನಂಬಿಕೆ ಇಲ್ಲದವರನ್ನು, ಕೇವಲ ಭೌತಿಕ ಮತ್ತು ಯಾಂತ್ರಿಕ ಕ್ರಿಯೆಗಳ ಮೂಲಕ ದೇಹ ಹಾಗೂ ಮನಸ್ಸಿಗೆ ಪುಷ್ಟಿಯನ್ನೊದಗಿಸಿ, ಜನರನ್ನು ಜಾಗ್ರತಾವಸ್ತೆಗೆ ಕೊಂಡೊಯ್ಯುತ್ತಿದ್ದರು ಎಂದು ಬಹುಕಾಲದವರೆಗೆ ನೆನಪಿಸಿಕೊಳ್ಳಬಹುದು. ಆದರೆ ನನ್ನ ದೃಷ್ಟಿಯಲ್ಲಿ ಅತಿಮಾನವರನ್ನಾಗಿ ಕಂಡಿದ್ದ ಅವರು ಈಗ ಸಾಮಾನ್ಯ ಮಾನವರಂತೆ ಖಾಯಿಲೆಯಿಂದ ಮಲಗಿರುವುದನ್ನು ಕಂಡು ಮನಸ್ಸಿನಲ್ಲಿ ಬಹಳ ಕಸಿವಿಸಿಯಾಯಿತು.
TM ಸಂಸ್ಥೆಯಲ್ಲಿ ಮಹರ್ಷಿಯವರ ನಂಬಿಕಸ್ಥನಾದ ಮತ್ತು ಅವರೇ ಈತನನ್ನು ಸಂಸ್ಥೆಯ ಮುಖ್ಯ ವಕ್ತಾರರನ್ನಾಗಿ ನಿಯಮಿಸಿದ್ದ ಕೆನಡಾದ ಪ್ರಜೆಯಾದ ನೀಲ್ ಪೀರ್ಸನ್ ಎಂಬ ವ್ಯಕ್ತಿಯೊಬ್ಬರಿದ್ದರು. ನೀಲ್ ತಕ್ಷಣ ಇಂಗ್ಲೆಂಡಿಗೆ ತೆರಳಿ ಹರ್ಲೆ ರಸ್ತೆಯಲ್ಲಿನ ಒಂದು ಖಾಸಗಿ ಆಸ್ಪತ್ರೆಯಲ್ಲಿ ಮಹರ್ಷಿಯವರ ಚಿಕಿತ್ಸೆಗೆ ಬೇಕಾಗುವ ಎಲ್ಲ ಏರ್ಪಾಡುಗಳನ್ನೂ ಮಾಡಿದರು. ನಮ್ಮ ತಂದೆಯವರು ಮತ್ತು ಇತರ ಇಬ್ಬರು ವೈದ್ಯರು ಒಂದು ಖಾಸಗಿ ವಿಮಾನದಲ್ಲಿ ಮಹರ್ಷಿಯವರನ್ನು ಲಂಡನ್ನಿಗೆ ಕೊಂಡೊಯ್ದರು. ನಾನು ಮೊದಲೇ ಅಲ್ಲಿಗೆ ತೆರಳಿ, ಲಂಡನ್ನಿನ ಆಸ್ಪತ್ರೆಯ ಬಳಿ ನಿಂತು ಮಹರ್ಷಿಯವರನ್ನು ತರುತ್ತಿದ್ದ ಆಂಬುಲೆನ್ಸ್ ನಿಬಿಡವಾದ ರಸ್ತೆಯಲ್ಲಿ ಶಬ್ದಮಾಡುತ್ತ ದಾರಿಮಾಡಿಕೊಂಡು ಪ್ರಯಾಸದಿಂದ ಬರುತ್ತಿರುವುದನ್ನು ನೋಡುತ್ತಿದ್ದೆ. ಆಂಬುಲೆನ್ಸ್ ಆಸ್ಪತ್ರೆಯ ಎದುರಿಗೆ ಬಂದಾಗ ಒಳಗಿದ್ದ ವೈದ್ಯರಲ್ಲೊಬ್ಬರು ಮಹರ್ಷಿಯವರು ಇದೀಗ ಮರಣಿಸಿದರು ಎಂಬ ಸುದ್ದಿಯನ್ನು ನೀಡಿದರು. ನಾನು ಆಂಬುಲೆನ್ಸ್ ನತ್ತ ಮುನ್ನುಗ್ಗಿ, ಮಹರ್ಷಿಯವರ ತೆಳ್ಳಗಾದ ದೇಹವನ್ನು ಎತ್ತಿಕೊಂಡು ಲಂಡನ್ ರಸ್ತೆಯ Traffic ಮಧ್ಯೆ ಓಡುತ್ತ ರಸ್ತೆಯನ್ನು ದಾಟಿ ಆಸ್ಪತ್ರೆಯೊಳಗೆ ಬಂದೆ.
ನಾನು ಆಸ್ಪತ್ರೆಯ ಬಾಗಿಲನ್ನು ದಾಟಿ ಒಳಗೆ ಬಂದು ಮಹರ್ಷಿಯವರನ್ನು ನೆಲದ ಮೇಲೆ ಮಲಗಿಸಿ ಸಹಾಯಕ್ಕಾಗಿ ಕೂಗಿಕೊಂಡೆ. ಕೆಲವೇ ನಿಮಿಷಗಳಲ್ಲಿ ಉಸಿರಾಟ ಮತ್ತು ಹೃದಯವನ್ನು ನಿಯಂತ್ರಿಸುವ ಯಂತ್ರಗಳ ವ್ಯವಸ್ಥೆಯನ್ನು ಮಾಡಲಾಯಿತು. Pacemaker ಯಂತ್ರವು ಅವರ ಹೃದಯದ ಬಡಿತವನ್ನು ತನ್ನ ಹತೋಟಿಗೆ ತಗೆದುಕೊಂಡಿತು. ಚಿಕಿತ್ಸೆಗೆ ಮುಂದಾದ ವೈದ್ಯರು ಮಹರ್ಷಿಯವರು 'Clinically Dead' ಎಂಬ ಅಭಿಪ್ರಾಯವನ್ನು ತಳೆದರು. ನಮ್ಮ ತಂದೆಯವರು ಮಹರ್ಷಿಯವರ ಸಂಬಂಧಿಕರು ಬರುವವರೆಗೂ ಯಂತ್ರಗಳ ಸಹಾಯವನ್ನು ತಗೆಯದಿರುವಂತೆ ಸೂಚಿಸಿದರು. ಸುಮಾರು ಒಂದು ದಿನದ ನಂತರ ಅವರನ್ನು ಗಮನಿಸುತ್ತಿದ್ದ ನರ್ಸ್ ಆಶ್ಚರ್ಯಕರವಾದ ಸುದ್ದಿಯನ್ನು ಕೊಟ್ಟರು. ಪವಾಡವೋ ಎನ್ನುವಂತೆ ಮಹರ್ಷಿಯವರ ಆರೋಗ್ಯದಲ್ಲಿ ಅತ್ಯುತ್ತಮ ಸುಧಾರಣೆಯು ಕಾಣಿಸಿತು. ಅವರ ಕಿಡ್ನಿಯು ಹೆಚ್ಚುಕಡಿಮೆ ಸರಿಯಾಗಿ ಕೆಲಸ ಮಾಡತೊಡಗಿತ್ತು. ಹೃದಯವು ಯಂತ್ರದ ಸಹಾಯವಿಲ್ಲದೆ ಆಡತೊಡಗಿತ್ತು ಮತ್ತು ಯಂತ್ರದ ಸಹಾಯವಿಲ್ಲದೆ ಮಹರ್ಷಿಯವರು ಉಸಿರಾಡತೊಡಗಿದ್ದರು! ಕೆಲವೇ ದಿನಗಳಲ್ಲಿ ಅವರು ಹಾಸಿಗೆಯಲ್ಲಿ ಎದ್ದು ಕುಳಿತುಕೊಳ್ಳುವಂತಾದರು, ಮತ್ತು ಜೇನುತುಪ್ಪ ಹಾಕಿದ ಹಾಲನ್ನು ಸೇವಿಸತೊಡಗಿದರು. ವೈದ್ಯರಿಗೆ ಈ ಬೆಳವಣಿಗೆಯನ್ನು ವಿವರಿಸಲಾಗಲಿಲ್ಲ, ಆಸ್ಪತ್ರೆಯಲ್ಲಿ ಎಲ್ಲರೂ ಮೂಕವಿಸ್ಮಿತರಾದರು. ಇದು ಕೇವಲ ಅವರ ಆರೋಗ್ಯವು ಸುಧಾರಿಸಿದ್ದಕ್ಕೆ ಮಾತ್ರವಲ್ಲದೆ ಅವರ ಬಳಿ ಬಂದವರೆಲ್ಲ ಒಂದು ರೀತಿಯ ಅಪೂರ್ವವಾದ ಶಾಂತಿಯನ್ನು ಅನುಭವಿಸುತ್ತಿದ್ದರು.
ಮಹರ್ಷಿಯವರು ನಿಧಾನವಾಗಿ ಚೇತರಿಸಿಕೊಳ್ಳತೊಡಗಿದರು. ಈ ಮಧ್ಯೆ ಅವರನ್ನು ಗಮನಿಸುತ್ತಿದ್ದ ವೈದ್ಯರು ಮಹರ್ಷಿಯವರಿಗೆ ಅತಿಯಾದ ಅನೀಮಿಯ ಇರುವುದರಿಂದ ತಕ್ಷಣ ರಕ್ತ ಕೊಡಬೇಕೆಂದು ಸೂಚಿಸಿದರು. ಅಲ್ಲಿದ್ದವರನ್ನು ಪರೀಕ್ಷಿಸಲಾಗಿ ನನ್ನ ರಕ್ತವು ಸರಿಹೊಂದುವುದೆಂದು ಸೂಚಿಸಿದರು. ಇದರಿಂದ ನನಗೆ ಕಾಣದ ಕೈ ಆಡಿಸುತ್ತಿರುವ ಈ ನಾಟಕದಲ್ಲಿ ನನ್ನ ಪಾತ್ರದ ಪರಿಚಯವಾಗತೊಡಗಿತು. ಮಹರ್ಷಿಯವರಿಗೆ ಈ ವಿಷಯವನ್ನು ತಿಳಿಸಿದಾಗ ಅವರು ನನ್ನ ರಕ್ತವನ್ನು ಸ್ವೀಕರಿಸಲು ನಿರಾಕರಿಸಿದರು. ಅವರು ಕಾಲೇಜಿನಲ್ಲಿ ವಿಜ್ಞಾನವನ್ನು ಓದಿದವರು ಮತ್ತು TM ಅನ್ನು ವೈಜ್ಞಾನಿಕವಾಗಿ ಬೆಳೆಸಿದವರು. ಆದ್ದರಿಂದ ಅವರ ಈ ನಿರ್ಧಾರವು ಅಚ್ಚರಿಯನ್ನು ಮೂಡಿಸಿತು. ಕೂಡಲೆ ನನಗೆ ಒಂದು ವಿಷಯವು ಹೊಳೆಯಿತು. ಅದೇನೆಂದರೆ, ಅವರು ನನ್ನ ರಕ್ತವನ್ನು ನಿರಾಕರಿಸುತ್ತಿರುವ ಕಾರಣ ಅವರು ನನ್ನ ಕರ್ಮವನ್ನು ನಿರಾಕರಿಸುತ್ತಿರುವುದು. ಏಕೆಂದರೆ, ನಾನು ಧೂಮಪಾನ ಮಾಡುವವನು, ಮದ್ಯಪಾನ ಮತ್ತು ಲೈಂಗಿಕತೆಯಲ್ಲಿ ನಿರತನಾದವನು, ಹಾಗೂ ಹಲವಾರು ವರ್ಷಗಳ ಹಿಂದೆ LSDಯ ಪ್ರಯೋಗವನ್ನೂ ಮಾಡಿದವನು. ನಾನು ಮಹರ್ಷಿಯವರ ಬಳಿಗೆ ಹೋಗಿ ನನಗೆ ಬಂದ ಈ ಯೋಚನೆಯನ್ನು ಪ್ರಸ್ತಾಪಿಸಿದೆನು. ನನ್ನ ರಕ್ತದ ಮೂಲಕ ನನ್ನ ಕರ್ಮವನ್ನು ಸ್ವೀಕರಿಸಬೇಕಾಗುವುದೆಂದು ನಂಬಿರುವಿರೇನು ಎಂದು ಕೇಳಿದನು. ಅವರು ಉತ್ತರಿಸಲು ಇಷ್ಟವಿಲ್ಲದಿದ್ದರೂ ʻಹೌದು, ನಿಜ' ಎಂದು ಉತ್ತರಿಸಿದರು. ಆಗ ನಾನು ಅವರಿಗೆ ವಿವರಿಸತೊಡಗಿದೆ - ನಮ್ಮ ರಕ್ತದಲ್ಲಿ Nucleus ಇರುವುದಿಲ್ಲ, ಹಾಗಾಗಿ DNA ಕೂಡ ಇರುವುದಿಲ್ಲ. ಆದ್ದರಿಂದ ನನ್ನ ರಕ್ತವು ಅವರಿಗೆ ಕೇವಲ ಹಿಮೊಗ್ಲೋಬಿನ್ ಕೊಡುವುದಲ್ಲದೆ ನನ್ನ ಕರ್ಮದ ಸೋಂಕು ಅವರಿಗೆ ತಗಲುವುದಿಲ್ಲ ಎಂದು ವಿವರಿಸಿದೆ. ಮೊದಲಿಗೆ ಅವರು ನನ್ನ ಮಾತನ್ನು ನಂಬಲಿಲ್ಲ. ಆಗ ನಾನು ಒಬ್ಬ Hematologistರನ್ನು ಕರೆಯಿಸಿ ಅವರಿಗೆ ವಿವರಿಸಲು ತಿಳಿಸಿದೆ. ಅವರು ರಕ್ತದ ಮೂಲಕ ಯಾವುದೇ ರೀತಿಯ ʻನೆನಪು' ಮತ್ತು ಮನುಷ್ಯನ ಇತರೇ ವಿವರಗಳು (Memory & Information) ಒಬ್ಬರಿಂದ ಒಬ್ಬರಿಗೆ ವರ್ಗಾವಣೆಯಾಗುವುದಿಲ್ಲ ಎಂಬ ವಿಷಯವನ್ನು ವಿವರಿಸಿದರು. ಅನಂತರ ಮಹರ್ಷಿಯವರು ನನ್ನ ರಕ್ತವನ್ನು ಸ್ವೀಕರಿಸಲು ಒಪ್ಪಿಕೊಂಡರು.
(ದೀಪಕ್ ಛೋಪ್ರಾ ಅವರ ಲೇಖನವು ಮುಗಿಯಿತು)
ದೀಪಕ್ ಛೋಪ್ರಾರವರು ವಿವರಿಸಿರುವ ಈ ಕೊನೆಯ ಸಾಲುಗಳ ಪ್ರಕಾರ ನಾವು ಮಾಡುವ ಕರ್ಮದ ವಿವರಗಳು ನಮ್ಮ ದೇಹದ ಪ್ರತಿಯೊಂದು ಜೀವಕೋಶದಲ್ಲಿರುವ Nucleus ನಲ್ಲಿರುವ DNAದಲ್ಲಿ ಮುದ್ರಿತವಾಗುತ್ತದೆ ಎಂದು ತಿಳಿಯಬಹುದು. ಇದು ಚಿತ್ರಗುಪ್ತನ ಕಾರ್ಯವಲ್ಲದೆ ಮತ್ತೇನು? ಈಗ ತಿಳಿಯಿತಲ್ಲವೇ ಚಿತ್ರಗುಪ್ತನ ವಾಸಸ್ಥಾನ? ನಮ್ಮ ಖಾಸಗೀ ಚಿತ್ರಗುಪ್ತರು ನಮ್ಮ ದೇಹದಲ್ಲೇ ವಾಸವಾಗಿದ್ದಾರೆ ಎನ್ನುವುದು ಖಂಡಿತ. ನಮ್ಮ ಪುರಾಣಗಳು ಎಷ್ಟೇ ಕಾಲ್ಪನಿಕ ಪಾತ್ರಗಳನ್ನು ಸೃಷ್ಟಿಸಿ ಕಥೆಯನ್ನು ಹೇಳಿದರೂ ಹೇಳಿದ ವಿಷಯಗಳು ಮಾತ್ರ ಸಂಪೂರ್ಣವಾಗಿ ವೈಜ್ಞಾನಿಕ ಅಲ್ಲವೇ?
ಪ್ರತಿಕ್ರಿಯೆ (2)
ಈ ಚಿತ್ರಗುಪ್ತ ಎಲ್ಲವನ್ನೂ ನೋಡುವ ನಮ್ಮೊಳಗಿನ ಆತ್ಮಸಾಕ್ಷಿಯೇ? ಅಥವಾ, ನಮ್ಮ ಹಿಂದಿನ ಬದುಕಿನ ಚಿತ್ರಣದಿಂದ ನಮಗರಿವಿಲ್ಲದೆ (ಗುಪ್ತ) ಮೂಡುವ ನಮ್ಮ ಭವಿಷ್ಯದ ಚಿತ್ರಣವಾಗಿರಬಹುದೇ?
ನನ್ನ ಲೇಖನದಲ್ಲಿ ತಿಳಿಸಿದಂತೆ ʻಚಿತ್ರಗುಪ್ತʼ ಎನ್ನುವವನು ನಮಗರಿಯದಂತೆ ಗುಪ್ತವಾಗಿ ನಮ್ಮ ಆಲೋಚನೆಗಳನ್ನು ಮತ್ತು ಕಾರ್ಯಗಳನ್ನು ಗಮನಿಸಿ ಅವುಗಳನ್ನು ನಮ್ಮ ಡಿ.ಎನ್.ಎ. ನಲ್ಲಿ ದಾಖಲಿಸುವ ಗುಪ್ತಶಕ್ತಿ ಎನ್ನಬಹುದು.
Dr. Deepak Chopra ಅವರ ಲೇಖನದ ರೂಪದಲ್ಲಿ ಚಿತ್ರಗುಪ್ತನ ಕಥೆಯನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು.