ಮಹಾಭಾರತದಲ್ಲಿ ಗಾಂಧಾರಿಯದು ಒಂದು ಪ್ರಮುಖವಾದ ಪಾತ್ರ. ರಾಜಕುವರಿಯಾಗಿ ಹುಟ್ಟಿ ಹಸ್ತಿನಾಪುರದ ಮಹಾರಾಣಿಯಾದವಳು, ಪಟ್ಟದರಸನ ಏಕೈಕ ಪತ್ನಿ, ನೂರೊಂದು ಮಕ್ಕಳ ತಾಯಿ. ನೂರು ಜನ ಸಹೋದರರನ್ನು ಕೂಡ ಪಡೆದಿದ್ದವಳು. ನೂರು ಮಕ್ಕಳನ್ನು ಕಳೆದುಕೊಂಡು ಪುತ್ರಶೋಕದಲ್ಲಿ ಮಿಂದವಳು. ಆದರೂ ಮಹಾಭಾರತದಲ್ಲಿ ಕಡೆಗಣಿಸಲ್ಪಟ್ಟ ಕೆಲವು ಪಾತ್ರಗಳಲ್ಲಿ ಗಾಂಧಾರಿಯದೂ ಒಂದು. ಜೀವನದುದ್ದಕ್ಕೂ ಸಾಕಷ್ಟು ಕಷ್ಟಗಳನ್ನು ಅನುಭವಿಸಿದರೂ ಆಕೆಯ ಪಾತ್ರವು ಎಂದೂ ಮುನ್ನೆಲೆಗೆ ಬರಲೇ ಇಲ್ಲ ಎನ್ನಿಸುತ್ತದೆ. ಕೊನೆಯವೆರೆಗೂ ಆಕೆ ಕೇವಲ ಧೃತರಾಷ್ಟ್ರನ ನೆರಳಾಗಿಯೇ ಉಳಿದುಬಿಟ್ಟಳು. ತನ್ನ ಪತಿ ಕುರುಡನೆಂದು ತಿಳಿದು, ಆತನು ನೋಡದ ವಿಶ್ವವನ್ನು ತಾನು ಕೂಡ ನೋಡುವುದಿಲ್ಲ ಎಂದು ಘೋಷಿಸಿ ಜೀವನಪೂರ್ತಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬದುಕಿದವಳು, ಸದಾ ಪತಿಯನ್ನು ನೆರಳಿನಂತೆ ಅನುಸರಿಸಿದವಳು. ಆತ ಬೇರೊಂದು ಹೆಣ್ಣಿನ ಸಂಪರ್ಕ ಮಾಡಿದರೂ ಆಕ್ಷೇಪಿಸುವುದಿಲ್ಲ, ಚಕಾರವೆತ್ತುವುದಿಲ್ಲ. ತನ್ನ ಪತಿ ಸಂತೋಷವಾಗಿರುವುದೇ ಅವಳಿಗೆ ಮುಖ್ಯವಾಗಿತ್ತು. ಆದರೂ ಏಕೋ ಆಕೆಗೆ ಮಹಾಸತಿಯ ಪಟ್ಟವು ದೊರಕಲೇ ಇಲ್ಲ! ತನ್ನತನವನ್ನು ಮೆರೆಯಲು ಸಾಕಷ್ಟು ಅವಕಾಶಗಳು ಆಕೆಗೆ ದೊರಕಲಿಲ್ಲ ಎನ್ನಿಸದಿರದು. ಹಾಗಾಗಿ ಗಾಂಧಾರಿಯ ಕೆಲವು ಮುಖಗಳನ್ನು ಹೆಕ್ಕಿ ತೆಗೆದು ಪರಿಚಯಿಸುವ ಪ್ರಯತ್ನ ಈ ಲೇಖನದ್ದು.
ಗಾಂಧಾರಿಯು ಗಾಂಧಾರ ರಾಜ್ಯದ (ಈಗಿನ ಅಫ್ಘಾನಿಸ್ತಾನ) ರಾಜನಾದ ಸುಬಲನ ಪುತ್ರಿ, ಚೆಲುವಿನ ಗಣಿ. ಎಲ್ಲ ರಾಜಕುಮಾರಿಯರ ಹಾಗೆ ಈಕೆ ಕೂಡ ಅರಮನೆಯ ಭೋಗಭಾಗ್ಯಗಳನ್ನು ಅನುಭವಿಸುತ್ತ ಬೆಳೆದವಳು. ತನ್ನ ಭವಿಷ್ಯದ ಬಗ್ಗೆ ಅನೇಕ ಕನಸುಗಳನ್ನು ಕಟ್ಟಿಕೊಂಡಿದ್ದವಳು. ತನ್ನ ನೂರು ಜನ ಸಹೋದರರ ಮುದ್ದಿನ ಸೋದರಿಯಾಗಿದ್ದಳು, ಅದರಲ್ಲೂ ಕೊನೆಯವನಾದ ಶಕುನಿಗೆ ಅಕ್ಕನ ಮೇಲೆ ಎಲ್ಲಿಲ್ಲದ ಪ್ರೇಮ. ಅಕ್ಕನಿಗೂ ಈ ತಮ್ಮನೆಂದರೆ ವಿಶೇಷವಾದ ಅಕ್ಕರೆ. ಗಾಂಧಾರಿಯು ಪ್ರಾಪ್ತ ವಯಸ್ಕಳಾಗುವ ಹೊತ್ತಿಗೆ ತಂದೆ ಸುಬಲನಿಗೆ ಮಗಳ ಮದುವೆ ಮಾಡುವ ಆಲೋಚನೆಯು ಬಂದಿತು. ರಾಜಜ್ಯೋತಿಷಿಯನ್ನು ಕರೆಸಿ ಈ ಬಗ್ಗೆ ವಿಚಾರಿಸಿದಾಗ ಅವರು ಒಂದು ಸಮಸ್ಯೆಯ ಬಗ್ಗೆ ತಿಳಿಸಿದರು. ಅದೇನೆಂದರೆ ಗಾಂಧಾರಿಯ ಜಾತಕದ ಪ್ರಕಾರ ಅವಳ ಮೊದಲ ಪತಿ ದುರ್ಮರಣಕ್ಕೆ ಈಡಾಗುವ ಸಂಭವವಿದೆ ಎಂದು. ಆದಕಾರಣ ಮೊದಲು ಆಕೆಗೆ ಒಂದು ಮೇಕೆಯ ಜೊತೆಗೆ ವಿವಾಹವನ್ನು ಮಾಡಿಸಿ ಆ ಮೇಕೆಯನ್ನು ಬಲಿ ಕೊಡಬೇಕು ಎಂದುಸಲಹೆ ನೀಡಿದರು. ಅವಳ ತಂದೆ ಮತ್ತು ಅಣ್ಣಂದಿರು ಜ್ಯೋತಿಷಿಯು ತಿಳಿಸಿದಂತೆ ಗುಪ್ತವಾಗಿ ಆಕೆಯ ವಿವಾಹವನ್ನು ಒಂದು ಮೇಕೆಯೊಂದಿಗೆ ಮಾಡಿ ಅದನ್ನು ಬಲಿಕೊಟ್ಟರು. ಈ ವಿಷಯವನ್ನು ಅತ್ಯಂತ ಗೌಪ್ಯವಾಗಿ ಇಡಬೇಕೆಂದು ಗಾಂಧಾರಿಗೆ ತಿಳಿಸಿದರು. ಆ ಸುಕೋಮಲ ಮನಸ್ಸಿನ ರಾಜಕುಮಾರಿಗೆ ಇದು ಜೀವನದ ಮೊದಲ ಆಘಾತ. ತನ್ನ ತಂದೆ ಮತ್ತು ಅಣ್ಣಂದಿರ ಮಾತಿಗೆ ಎದುರಾಡಲು ಧೈರ್ಯವಿಲ್ಲದೆ ಆಕೆಯು ಮೇಕೆಯ ಜೊತೆಗೆ ವಿವಾಹಕ್ಕಾಗಿ ಒಪ್ಪಿದಳು. ಇದೆಲ್ಲವೂ ತನ್ನ ಉತ್ತಮ ಭವಿಷ್ಯಕ್ಕಾಗಿ ಮಾಡುತ್ತಿದ್ದಾರೆ ಎನ್ನುವ ಸಮಾಧಾನವಿತ್ತು.
ಇತ್ತ ಹಸ್ತಿನಾಪುರದಲ್ಲಿ ಧೃತರಾಷ್ಟ್ರನು ಕೌರವರ ಹಿರಿಯ ಸಂತಾನವಾಗಿದ್ದರೂ ಅವನು ಹುಟ್ಟುಕುರುಡನಾದ್ದರಿಂದ ಅವನ ತಮ್ಮನಾದ ಪಾಂಡುವಿಗೆ ರಾಜನಾಗಿ ಪಟ್ಟಾಭಿಷೇಕವನ್ನು ಮಾಡಲಾಗಿತ್ತು. ಈಗ ಭೀಷ್ಮನು ಧೃತರಾಷ್ಟ್ರನ ವಿವಾಹಕ್ಕೆ ಅನುರೂಪಳಾದ ವಧುವನ್ನು ಹುಡುಕುತ್ತಿದ್ದನು. ತನ್ನ ಗೂಢಚಾರರಿಂದ ಗಾಂಧಾರ ರಾಜಕುಮಾರಿಯು ಧೃತರಾಷ್ಟ್ರನಿಗೆ ತಕ್ಕ ವಧು ಎಂದು ಕಂಡುಕೊಂಡನು. ಏಕೆಂದರೆ ಆಕೆಯು ಅಪ್ರತಿಮ ಚೆಲುವೆ, ಸುಗುಣಶೀಲೆ, ತಂದೆತಾಯಿ ಮತ್ತು ಗುರುಗಳಲ್ಲಿ ಅಪಾರವಾದ ಗೌರವವನ್ನು ಹೊಂದಿದವಳು, ಕುಟುಂಬವನ್ನು ಪ್ರೀತಿಸುವವಳು ಎನ್ನುವುದನ್ನು ತಿಳಿದುಕೊಂಡನು. ಅನಂತರ ಸುಬಲನನ್ನು ಭೇಟಿ ಮಾಡಿ ವಿವಾಹದ ಬಗ್ಗೆ ಪ್ರಸ್ತಾಪ ಮಾಡಲು ಗಾಂಧಾರಕ್ಕೆ ಒಂದು ನಿಯೋಗವನ್ನು ಕಳಿಸಿದನು. ತನ್ನ ಪುತ್ರಿಯು ಕುರುವಂಶವನ್ನು ಸೇರುವುದು ಸಂತಸದ ವಿಷಯವಾಗಿದ್ದರೂ ವರನು ಒಬ್ಬ ಹುಟ್ಟುಕುರುಡನು ಎನ್ನುವ ವಿಷಯ ಅವನ ಮನಸ್ಸಿಗೆ ಬಹಳ ಕಸಿವಿಸಿ ತಂದುಕೊಟ್ಟಿತು. ತನ್ನ ಮುದ್ದಿನ ಮಗಳನ್ನು ಒಬ್ಬ ಕುರುಡನಿಗೆ ಒಪ್ಪಿಸುವುದು ಸರಿಯೇ? ಆಕೆಯು ಈ ವಿಷಯವನ್ನು ಹೇಗೆ ಅರಗಿಸಿಕೊಳ್ಳಬಹುದು ಎನ್ನುವ ವಿಷಯಗಳು ಅವನನ್ನು ಕಾಡತೊಡಗಿದವು. ಆದರೆ, ಭೀಷ್ಮನ ಪ್ರಸ್ತಾಪವನ್ನು ನಿರಾಕರಿಸಲೂ ಅವನಿಗೆ ಧೈರ್ಯವಿರಲಿಲ್ಲ. ನಿರಾಕರಿಸಿದರೆ ಭೀಷ್ಮನ ವೈರತ್ವವು ಖಚಿತ, ಮುಂದೆ ಭೀಷ್ಮನ ಕೋಪ ತನ್ನನ್ನು ರಾಜ್ಯಭ್ರಷ್ಟನನ್ನಾಗಿ ಮಾಡಬಹುದು ಎನ್ನುವ ಹೆದರಿಕೆ ಇತ್ತು ಅವನಿಗೆ. ಹಾಗಾಗಿ ಭೀಷ್ಮನ ಪ್ರಸ್ತಾಪಕ್ಕೆ ಒಲ್ಲದ ಮನಸ್ಸಿನಿಂದ ಒಪ್ಪಿಗೆಯನ್ನು ಸೂಚಿಸಿದನು. ಎಂತಹವರೇ ಆಗಿರಲಿ ಕೆಲವೊಮ್ಮೆ ಪರಿಸ್ಥಿತಿಯ ಒತ್ತಡಕ್ಕೆ ಬಲಿಯಾಗಿಬಿಡುತ್ತಾರೆ.
ತಾನು ಮದುವೆಯಾಗಲಿರುವ ವರ ಹುಟ್ಟು ಕುರುಡ ಎನ್ನುವ ವಿಚಾರ ಗಾಂಧಾರಿಗೆ ತಿಳಿಯಿತು. ಆಕೆಗೆ ಆದ ಮತ್ತೊಂದು ಆಘಾತ ಇದು. ತನ್ನ ಬಾಳಿನಲ್ಲಿ ಇದೇನಾಗುತ್ತಿದೆ ಎಂದು ಚಿಂತಿಸತೊಡಗಿದಳು. ತನ್ನ ಕನಸುಗಳೆಲ್ಲವೂ ನೀರಿನ ಗುಳ್ಳೆಗಳಂತೆ ಒಡೆಯುತ್ತಿರುವುದನ್ನು ಮನಗಂಡಳು. ತನ್ನನ್ನು ಬಹಳವಾಗಿ ಪ್ರೀತಿಸುವ ತಂದೆಯು ಇಂತಹ ನಿರ್ಧಾರಕ್ಕೆ ಬರಲು ಬಹಳ ಗುರುತರವಾದ ಕಾರಣವೇ ಇರಬೇಕು ಎಂದು ಯೋಚಿಸಿದಳು. ಇದು ಆಕೆಯ ಪಿತೃಭಕ್ತಿಯ ಆಳವನ್ನು ತೋರಿಸುತ್ತದೆ. ತಂದೆಯ ನಿರ್ಧಾರವನ್ನು ಪ್ರಶ್ನಿಸದೆ ಒಬ್ಬ ಹುಟ್ಟು ಕುರುಡನನ್ನು ವರಿಸಲು ಮಾನಸಿಕವಾಗಿ ಸಿದ್ಧಳಾಗುತ್ತಾಳೆ ಈ ರಾಜಕುವರಿ. ರಾಜಕುವರಿಯರೆಲ್ಲರೂ ಅದೃಷ್ಟವಂತರು, ಅವರು ಸುಖದ ಸುಪ್ಪತ್ತಿಗೆಯಲ್ಲಿ ಓಲಾಡುವವರು ಎನ್ನುವುದು ಸಾಮಾನ್ಯ ಜನರ ಅಭಿಪ್ರಾಯ, “ದೂರದ ಬೆಟ್ಟ ನುಣ್ಣಗೆ” ಎನ್ನುವಂತೆ. ಜನರಿಗೇನು ಗೊತ್ತು ಕೆಲವು ರಾಜಕುಮಾರಿಯರು ಪಡುವ ಪಾಡು? ಅನಂತರ ಮದುವೆಯೂ ನಡೆದುಹೋಗುತ್ತದೆ. ತನ್ನ ಪತಿಯು ಕಾಣದ ಈ ಪ್ರಪಂಚವನ್ನು ತಾನೇಕೆ ನೋಡಬೇಕು? ತಾನು ಅವನ ಸಹಧರ್ಮಿಣಿ, ಅವನಿಗೆ ಲಭ್ಯವಿಲ್ಲದ್ದನ್ನು ತಾನು ಅನುಭವಿಸುವುದು ತಪ್ಪು ಎನ್ನುವ ನಿರ್ಧಾರಕ್ಕೆ ಬಂದಳು ಆ ಸತಿಶಿರೋಮಣಿ! ಬಟ್ಟೆಯ ಪದರಗಳಿಂದ ಮಾಡಿದ ಪಟ್ಟಿಯಿಂದ ತನ್ನ ಕಣ್ಣುಗಳನ್ನು ಕಟ್ಟಿಕೊಂಡು ತನಗೂ ಅಂಧತ್ವವನ್ನು ತಂದುಕೊಂಡಳು. ಎರಡೂ ಕೈಗಳಿಂದ ಅಂಧಕಾರವನ್ನು ಬರಸೆಳೆದು ಅಪ್ಪಿಕೊಳ್ಳುತ್ತಾಳೆ, ಸ್ವಇಚ್ಛೆಯಿಂದ, ಜೀವನದ ಕೊನೆಯವರೆಗೆ! ಇದನ್ನು ಪತಿಯ ಮೇಲೆ ಒಬ್ಬ ಸ್ತ್ರೀಗೆ ಇರಬಹುದಾದ ಪರಮೋಚ್ಛ ಪ್ರೀತಿ ಮತ್ತು ಗೌರವ ಎನ್ನಬಹುದೇ? ಸಂಬಂಧಗಳಿಗೋಸ್ಕರ ಈ ರೀತಿಯ ತ್ಯಾಗವನ್ನು ಮಾಡುವವರು ಬಹಳ ವಿರಳ. ಆದ್ದರಿಂದಲೇ ಅವಳು ಒಬ್ಬ ಉದಾತ್ತ ಗುಣವಿರುವ ಪತ್ನಿ ಎನ್ನಿಸಿಕೊಂಡಿದ್ದಾಳೆ. ಇದು ಧೃತರಾಷ್ಟ್ರನಿಗೆ ತನ್ನ ಬಗ್ಗೆ ಇದ್ದ ಕೀಳರಿಮೆಯನ್ನು ಬಹಳವಾಗಿ ಕಡಿಮೆ ಮಾಡಿ ತನ್ನ ಪತ್ನಿಯ ಬಗ್ಗೆ ಗೌರವ ಬೆಳೆಸಿಕೊಳ್ಳಲು ಕಾರಣವಾಯಿತು. ಆದರೆ ತನ್ನ ಮಗಳ ಈ ಸ್ಥಿತಿಯನ್ನು ನೋಡಿ ಅದಕ್ಕೆ ಕಾರಣಕರ್ತನಾದ ತನ್ನನ್ನು ತಾನೇ ಎಷ್ಟು ನಿಂದಿಸಿಕೊಂಡಿರಬಹುದು ತಂದೆಯಾದ ಸುಬಲ? ಗಾಂಧಾರಿಯು ಮದುವೆಯು ಮುಗಿದ ಮೇಲೆ ಗಂಡನೊಡನೆ ಹಸ್ತಿನಾಪುರಕ್ಕೆ ಹೊರಟುನಿಂತಳು. ಪ್ರೀತಿಯ ತಮ್ಮನಾದ ಶಕುನಿಯು ಜೊತೆಗೆ ಹೊರಟು ಅಕ್ಕನಿಗಾಗಿ ಅಪಾರವಾದ ಕಾಣಿಕೆಗಳನ್ನು ಕೊಂಡೊಯ್ದು ಹಸ್ತಿನಾಪುರದಲ್ಲಿ ಅವಳಿಗೊಪ್ಪಿಸಿ ಗಾಂಧಾರಕ್ಕೆ ಹಿಂತಿರುಗಿದನು. ತನ್ನಕ್ಕನನ್ನು ವರಿಸಿದ ಕುರುಡ ಭಾವನ ಮೇಲೆ ಅವನಿಗೆ ಮನಸ್ಸಿನ ಮೂಲೆಯಲ್ಲಿ ಕೋಪವು ಚಿಗುರಿತು.
ಗಾಂಧಾರಿಯ ಸಂಸಾರಚಕ್ರವು ಉರುಳತೊಡಗಿತು. ಪತಿಗೆ ತಕ್ಕ ಪತ್ನಿಯಾಗಿ ತನ್ನ ಕರ್ತವ್ಯವನ್ನು ನಿರ್ವಹಿಸತೊಡಗುತ್ತಾಳೆ. ಆದರೆ ಒಂದು ಅಳುಕು ಅವಳನ್ನು ಕಾಡತೊಡಗುತ್ತದೆ. ತನಗೆ ಮೇಕೆಯೊಡನೆ ನಡೆದ ವಿವಾಹದ ಬಗ್ಗೆ ಯಾರಿಗೂ ತಿಳಿಸದೆ ವಿವಾಹ ಮಾಡಿರುವುದು ಅವಳ ಮನಸ್ಸನ್ನು ಕಾಡುತ್ತಿತ್ತು. ಭಾರವನ್ನು ಇಳಿಸಿಕೊಳ್ಳಲು ತನ್ನ ಪತಿಗಾದರೂ ಈ ವಿಷಯವನ್ನು ತಿಳಿಸಬೇಕೆಂದು ಬಯಸಿತು ಆ ಮುಗ್ಧ ಮನಸ್ಸು. ವಿಷಯವನ್ನು ತಿಳಿದ ಧೃತರಾಷ್ಟನ ಕೋಪವು ಭುಗಿಲೆದ್ದಿತು. ಅವಳಿಗೆ ತಾನು ಎರಡನೆಯ ಪತಿ ಎನ್ನುವ ಸತ್ಯವನ್ನು ಅವನಿಗೆ ಅರಗಿಸಿಕೊಳ್ಳಲಾಗಲಿಲ್ಲ. ವಿಷಯವನ್ನು ತಿಳಿಸದೆ ಮದುವೆ ಮಾಡಿಸಿದ ಸುಬಲನು ತಮ್ಮ ಕುಲಕ್ಕೆ ಮಾಡಿದ ಅಪಮಾನ ಇದು ಎಂದು ಭಾವಿಸಿದನು. ಭೀಷ್ಮನಿಗೆ ಈ ವಿಷಯ ತಿಳಿಸಿದಾಗ ಅವನಿಗೂ ತಮ್ಮ ಪ್ರತಿಷ್ಠೆಗೆ ಭಂಗವುಂಟುಮಾಡಲಾಗಿದೆ ಎನ್ನಿಸಿತು. ಆ ಕೋಪದಲ್ಲಿ ಸುಬಲನನ್ನೂ ಮತ್ತು ಅವನ ನೂರು ಪುತ್ರರನ್ನೂ ಬಂಧಿಸಿ ಕಾರಾಗೃಹದಲ್ಲಿಟ್ಟನು. ವಿಷಯ ತಿಳಿದ ಗಾಂಧಾರಿಯು ತನ್ನ ಪರಿವಾರಕ್ಕಾಗಿ ಮಮ್ಮಲ ಮರುಗಿದಳು. ಆದರೆ ಎನೂ ಮಾಡಲಾಗದ ಸ್ಥಿತಿಯಲ್ಲಿದ್ದಳು. ಅವರನ್ನು ಬಿಡುಗಡೆ ಮಾಡಿಸಿ ಎಂದು ಪತಿಯಲ್ಲಿ ಬಹಳ ಸಲ ಕೋರಿದರೂ ಅದು ಅವನ ಕಿವಿಗೇ ಬೀಳುವುದಿಲ್ಲ. ಆ ಕೋಮಲೆ ಇದಕ್ಕಿಂತ ಹೆಚ್ಚು ಇನ್ನೇನು ತಾನೇ ಮಾಡಿಯಾಳು? “ಬಡವನ ಕೋಪ ದವಡೆಗೆ ಮೂಲ” ಎನ್ನುವಂತಹ ಅಸಹಾಯಕ ಸ್ಥಿತಿ ಅವಳದು.
ಧೃತರಾಷ್ಟ್ರನ ಕೋಪ ಇಷ್ಟಕ್ಕೇ ಮುಗಿಯಲಿಲ್ಲ. ಕಾರಾಗೃಹದಲ್ಲಿ ಇದ್ದ ಈ ನೂರೊಂದು ಜನರಿಗೆ ಕೇವಲ ಒಬ್ಬರಿಗಾಗುವಷ್ಟು ಆಹಾರವನ್ನು ಮಾತ್ರ ನೀಡಲು ಆಜ್ಞಾಪಿಸುತ್ತಾನೆ. ಇದರಿಂದ ಸುಬಲ ಮತ್ತು ಅವನ ಮಕ್ಕಳು ತಮ್ಮ ಭವಿಷ್ಯದ ಬಗ್ಗೆ ಚಿಂತಿಸತೊಡಗಿದರು. ಅವಮಾನದ ಕೋಪದಲ್ಲಿ ಬೇಯುತ್ತಿದ್ದ ಸುಬಲ ತನ್ನ ಮಕ್ಕಳನ್ನೆಲ್ಲ ಕರೆದು ಹೀಗೆ ಹೇಳಿದನು – “ನಮಗೆ ನೀಡುವ ಆಹಾರವನ್ನು ಎಲ್ಲರೂ ಹಂಚಿಕೊಂಡು ತಿಂದರೆ ಕೆಲವೇ ದಿನಗಳಲ್ಲಿ ಒಬ್ಬರೂ ಉಳಿಯದೇ ಸಾಯುವುದು ಖಂಡಿತ. ಆದ್ದರಿಂದ ಈ ಆಹಾರವನ್ನು ಕೇವಲ ಒಬ್ಬನಿಗೆ ಕೊಟ್ಟು ಅವನನ್ನು ಬದುಕಿಸಿ, ಅವನ ಮೂಲಕ ನಮ್ಮ ಸಾವಿನ ಸೇಡನ್ನು ತೀರಿಸಿಕೊಳ್ಳೋಣ”. ಮಕ್ಕಳೆಲ್ಲರೂ ಇದಕ್ಕೆ ಒಪ್ಪಿದರು. ಯಾರನ್ನು ಆಯ್ಕೆ ಮಾಡಿ ಅವನಿಗೆ ಊಟ ಕೊಡುವುದು ಎನ್ನುವ ಪ್ರಶ್ನೆಯು ಬಂದಾಗ ಎಲ್ಲರೂ ಒಕ್ಕೊರಲಿನಿಂದ ತಮ್ಮ ಬುದ್ಧಿವಂತನಾದ ಪ್ರೀತಿಯ ತಮ್ಮ ಶಕುನಿಯನ್ನು ಆರಿಸಿದರು. ಆಗ ಸುಬಲನು ಶಕುನಿಗೆ “ಪುತ್ರಾ, ನೀನೊಬ್ಬನೇ ನಮಗೆ ಸಿಗುವ ಆಹಾರವನ್ನು ಸ್ವೀಕರಿಸಿ ಬದುಕು. ನಿನ್ನ ಬುದ್ಧಿಶಕ್ತಿಯನ್ನು ಉಪಯೋಗಿಸಿ ಕಾರಾಗೃಹದಿಂದ ಹೊರಗೆ ಹೋಗಿ ನಮ್ಮ ಸಾವಿನ ಸೇಡನ್ನು ತೀರಿಸಿಕೋ. ನಾನು ತೀರಿಕೊಂಡ ಮೇಲೆ ನನ್ನ ಮೂಳೆಗಳಿಂದ ನೀನು ಪಗಡೆಯ ದಾಳಗಳನ್ನು ಮಾಡಿಕೋ. ಅವು ನೀನು ಕೋರಿದ ದಾಯವನ್ನು ನೀಡುತ್ತವೆ. ಇದರಿಂದ ಮುಂದೆ ನಿನಗೆ ಉಪಯೋಗವಾಗಬಹುದು”. ಈ ತಂತ್ರದ ಪ್ರಕಾರ ಶಕುನಿಯು ಮಾತ್ರ ಆಹಾರವನ್ನು ಸೇವಿಸಿ ಮಿಕ್ಕವರು ತಮ್ಮ ಸಾವನ್ನು ಎದುರು ನೋಡುತ್ತಿರುತ್ತಾರೆ. ಕೆಲವೇ ದಿನಗಳಲ್ಲಿ ಉಪವಾಸವಿದ್ದವರೆಲ್ಲಾ ಕಣ್ಣುಮುಚ್ಚಿದರು. ಈ ವಿಷಯವು ಗಾಂಧಾರಿಗೆ ತಿಳಿಯಿತು. ಅವಳು ಬಹಳವಾಗಿ ರೋದಿಸುತ್ತ, ಉಳಿದ ತನ್ನ ತಮ್ಮನನ್ನಾದರೂ ಬಿಡುಗಡೆಗೊಳಿಸಿ ಎಂದು ಗಂಡನನ್ನು ಕೋರಿದಳು. ಈಗಾಗಲೇ ತನ್ನ ಪತ್ನಿಯ ಕಣ್ಣಿನಲ್ಲಿ ಕೀಳಾಗಿ ಕಾಣಿಸಿಕೊಂಡಿದ್ದ ಧೃತರಾಷ್ಟ್ರನಿಗೆ ಅವಳ ಈ ಕೋರಿಕೆಯನ್ನು ಇಲ್ಲವೆನ್ನಲಾಗುವುದಿಲ್ಲ. ಬಿಡುಗಡೆಗೊಂಡ ಶಕುನಿಯು ತನ್ನ ಬಳಿಯೇ ಇರಬೇಕೆಂದು ಗಾಂಧಾರಿಯು ಬಯಸಿದಳು. ಮನಸ್ಸಿನಲ್ಲಿ ಧೃತರಾಷ್ಟ್ರನ ಮೇಲೆ ಕತ್ತಿ ಮಸೆಯುತ್ತಿದ್ದ ಶಕುನಿಗೂ ಇದೇ ಬೇಕಿತ್ತು. ಶಕ್ತಿಯಿಂದ ಧೃತರಾಷ್ಟ್ರನಿಗೆ ತೊಂದರೆ ಮಾಡಲು ಆಗುವುದಿಲ್ಲ ಎಂದು ಅವನಿಗೆ ಗೊತ್ತು. ಯುಕ್ತಿಯಿಂದಲೇ ಏನನ್ನಾದರೂ ಮಾಡಲು ಹಸ್ತಿನಾಪುರದಲ್ಲೇ ಉಳಿಯುವುದು ಸೂಕ್ತ ಎಂದು ಅವನಿಗೆ ಅನ್ನಿಸಿತು. ಗಾಂಧಾರಕ್ಕೆ ಹೋಗಿ ತನ್ನ ಪತ್ನಿಗೆ ರಾಜ್ಯದ ಅಧಿಕಾರ ವಹಿಸಿ, ಮಿಕ್ಕ ವ್ಯವಸ್ಥೆಗಳನ್ನು ಮಾಡಿ ಮತ್ತೆ ಹಸ್ತಿನಾಪುರಕ್ಕೆ ಹಿಂದಿರುಗಿದನು.
ಇಷ್ಟರಲ್ಲಿ ಪಾಂಡುವಿಗೆ ಕುಂತಿ ಮತ್ತು ಮಾದ್ರಿಯರ ಜೊತೆ ಮದುವೆಯಾಗಿರುತ್ತದೆ. ಮತ್ತು ಅವನು ಋಷಿಗಳ ಶಾಪದಿಂದ ಹೆಣ್ಣಿನ ಸಹವಾಸ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದನು. ಇಂತಹ ಸ್ಥಿತಿಯಲ್ಲಿ ಅರಮನೆಯ ವಾಸವು ಅವನಿಗೆ ಉಸಿರುಗಟ್ಟಿಸಿತು. ತನ್ನ ಪತ್ನಿಯರೊಂದಿಗೆ ವನವಾಸಕ್ಕೆ ಹೊರಟನು. ಭೀಷ್ಮನು ಬೇರೆ ದಾರಿ ಇಲ್ಲದೆ ಕುರುಡ ಧೃತರಾಷ್ಟ್ರನಿಗೆ ಪಟ್ಟಾಭಿಷೇಕವನ್ನು ಮಾಡಿ ಸಿಂಹಾಸನವನ್ನು ರಕ್ಷಿಸುವ ಭಾರವನ್ನು ತಾನೇ ಹೊತ್ತನು. ಅಷ್ಟರಲ್ಲಿ ಗಾಂಧಾರಿಯು ಗರ್ಭವನ್ನು ಧರಿಸಿದ್ದಳು. ಮಾಹಾರಾಣಿಯಾದ ಗಾಂಧಾರಿಯು ಹಸ್ತಿನಾಪುರದ ಸಿಂಹಾಸನಕ್ಕೆ ಉತ್ತರಾಧಿಕಾರಿಯನ್ನು ನೀಡುವ ಸಡಗರದಲ್ಲಿದ್ದಳು. ಬಹುಶಃ ತನ್ನ ಜೀವನದ ಅತ್ಯಂತ ಸುಖಮಯ, ಸಂತಸಮಯ ಕ್ಷಣಗಳನ್ನು ಕಳೆಯುತ್ತಿದ್ದಳು ಅವಳು. ಆದರೆ ಅವಳ ಸಂತಸದ ದಿನಗಳು ಕೃಷ್ಣಪಕ್ಷದ ಚಂದ್ರನಂತೆ ಕ್ಷೀಣಿಸತೊಡಗಿದವು. ಏಕೆಂದರೆ ನವಮಾಸಗಳು ಕಳೆದರೂ ಆಕೆಗೆ ಪ್ರಸವವಾಗುವ ಚಿನ್ಹೆಗಳೇ ಕಾಣಲಿಲ್ಲ. ರಾಜವೈದ್ಯರುಗಳಿಗೂ ಇದು ಅರ್ಥವಾಗದಾಯಿತು, ಇನ್ನೂ ಸ್ವಲ್ಪ ದಿನ ಕಾಯಬೇಕು ಎನ್ನುವ ಸಲಹೆಯನ್ನಿತ್ತರು. ತಮ್ಮ ಸಂತಾನದ ಆಗಮನವನ್ನು ಕಾತುರದಿಂದ ಕಾಯುತ್ತಿದ್ದರು ರಾಜದಂಪತಿಗಳು, ಇಡೀ ರಾಜ್ಯವೇ ಆ ದಿನಕ್ಕಾಗಿ ಕಾಯುತ್ತಿತ್ತು. ದಿನಗಳು ಕಳೆದಂತೆ ಗಾಂಧಾರಿಯ ಕಾತುರ, ಅಸಹನೆಗಳು ಹೆಚ್ಚಾಗುತ್ತ ಹೋದವು.
ಗಾಂಧಾರಿಯು ಗರ್ಭವನ್ನು ಧರಿಸಿ ಸುಮಾರು ಎರಡು ವರ್ಷಗಳೇ ಕಳೆದವು. ಆದರೂ ಆಕೆಯ ಗಜಗರ್ಭವು ಹಾಗೆಯೇ ನಿಂತಿತ್ತು. ದೈಹಿಕ ಬಾಧೆ ಒಂದು ಕಡೆ ಮತ್ತು ಮಾನಸಿಕ ಯಾತನೆ ಇನ್ನೊಂದು ಕಡೆ ಗಾಂಧಾರಿಯನ್ನು ಹರಿದು ತಿನ್ನುತ್ತಿದ್ದವು. ಇಂತಹ ಮನಃಸ್ಥಿತಿಯಲ್ಲಿ ಆಕೆಯ ಬಳಿ ಹೋಗುವ ಧೈರ್ಯ ಧೃತರಾಷ್ಟ್ರನಿಗೆ ಇರಲಿಲ್ಲ. ಗಾಂಧಾರಿಯ ಸುಂದರ ದಾಸಿಯೊಬ್ಬಳ ಮೇಲೆ ಅವನಿಗೆ ಮನಸ್ಸಾಯಿತು. ಅದರ ಪರಿಣಾಮವಾಗಿ ಆ ದಾಸಿಯು ಗರ್ಭಧರಿಸಿ ಯುಯುತ್ಸು ಎನ್ನುವ ಮಗನಿಗೆ ಜನ್ಮ ನೀಡಿದಳು. ಇದರ ಜೊತೆಗೆ ಕಾಡಿನಲ್ಲಿ ಯಮಧರ್ಮನ ವರಪ್ರಸಾದದಿಂದ ಕುಂತಿಯು ಧರ್ಮರಾಯನಿಗೆ ಜನ್ಮವನ್ನು ನೀಡಿದಳು ಎನ್ನುವ ವಾರ್ತೆಯು ಹಸ್ತಿನಾಪುರವನ್ನು ತಲುಪಿತು. ಈ ಎರಡು ಸುದ್ದಿಗಳು ಗಾಂಧಾರಿಗೆ ಎರಡು ಹರಿತವಾದ ಈಟಿಗಳು ತನ್ನ ದೇಹವನ್ನು ಘಾಸಿಗೊಳಿಸಿದಷ್ಟು ಸಂಕಟವನ್ನು ಕೊಟ್ಟವು. ಇಷ್ಟೆಲ್ಲ ಆಗುತ್ತಿದ್ದರೂ ತನಗೇಕೆ ಇನ್ನೂ ಪ್ರಸವವಾಗಲಿಲ್ಲ ಎಂದು ಕೋಪದಿಂದ ತನ್ನ ಹೊಟ್ಟೆಯನ್ನು ಹಿಂಡಿಕೊಳ್ಳಲಾರಂಭಿಸಿದಳು. ಅದರ ಫಲವಾಗಿ ಆಕಾರವಿಲ್ಲದ ಮಾಂಸದ ಮುದ್ದೆಯೊಂದನ್ನು ಪ್ರಸವಿಸಿದಳು. “ಅಯ್ಯೋ ನನ್ನ ವಿಧಿಯೇ! ನಾನೇನು ತಪ್ಪು ಮಾಡಿದ್ದೇನೆ? ನನಗೇಕೆ ಇಂತಹ ಶಿಕ್ಷೆ? ನಾನು ಯಾರನ್ನೂ ನೋಯಿಸಿಲ್ಲ, ಪತಿಯನ್ನು ದೇವರಂತೆ ಸೇವಿಸಿದ್ದೇನೆ. ಆದರೂ ನನಗೇಕೆ ಇಂತಹ ಶಿಕ್ಷೆ?” ಎಂದು ರೋದಿಸಿದಳು. ವಿಷಯವನ್ನು ಅರಿತ ವ್ಯಾಸರು ಗಾಂಧಾರಿಯ ಅರಮನೆಗೆ ಆಗಮಿಸಿದರು. ಅವರನ್ನು ನೋಡಿದ ಕೂಡಲೇ ಗಾಂಧಾರಿಯು “ಸ್ವಾಮಿ, ಹಿಂದೆ ನಿಮ್ಮ ಸೇವೆಯನ್ನು ಮಾಡಿದಾಗ ನೀವು ಸಂತುಷ್ಟರಾಗಿ, ನಿನಗೆ ನೂರು ಪುತ್ರರು ಹುಟ್ಟಲಿ ಎನ್ನುವ ವರ ನೀಡಿದ್ದಿರಿ. ಆದರೆ ಈಗ ಏನಾಗಿದೆ ನೋಡಿ, ನನಗೆ ಒಬ್ಬ ಪುತ್ರನ ಅದೃಷ್ಟವೂ ಇಲ್ಲ” ಎಂದು ಗೋಳಾಡಿದಳು. ವ್ಯಾಸರು ಅವಳನ್ನು ಸಂತೈಸಿ “ಮಗಳೇ, ಚಿಂತಿಸದಿರು. ನನ್ನ ವರವು ಸುಳ್ಳಾಗುವುದಿಲ್ಲ. ಈ ಮಾಂಸದ ಮುದ್ದೆಯಿಂದ ನಿನಗೆ ನೂರು ಪುತ್ರರು ಹುಟ್ಟುವಂತೆ ಮಾಡುವೆನು” ಎಂದರು. ಗಾಂಧಾರಿಯು ಈಗ ಗೆಲುವಾಗಿ ತನಗೆ ಒಬ್ಬ ಪುತ್ರಿಯು ಕೂಡ ಬೇಕು ಎನ್ನುವ ಬಯಕೆಯನ್ನು ವ್ಯಕ್ತಪಡಿಸಿದಳು. ಅವಳಿಗೆ ತಿಳಿದಿತ್ತು ವ್ಯಾಸರಿಗೆ ಅಸಾಧ್ಯವಾದುದು ಏನೂ ಇಲ್ಲ ಎಂದು. ಈ ಬಯಕೆಯನ್ನು ತಿಳಿದ ವ್ಯಾಸರು ಆ ಮಾಂಸದ ಮುದ್ದೆಯನ್ನು ಮಂತ್ರಿಸಿ ನೀರಿನಲ್ಲಿ ಹಾಕಿದಾಗ ಅದು ಬೆರಳಿನ ಗಾತ್ರದ 101 ಭಾಗಗಳಾಗಿ ವಿಭಜನೆಗೊಂಡವು. ಒಂದೊಂದು ಭಾಗವನ್ನು ಒಂದೊಂದು ಮಡಕೆಯಲ್ಲಿ ತುಪ್ಪ ಮತ್ತಿತರ ಮೂಲಿಕೆಗಳೊಂದಿಗೆ ಇಟ್ಟು ಮಡಕೆಗಳ ಬಾಯಿಯನ್ನು ಮುಚ್ಚಿ ಕಟ್ಟಿಟ್ಟರು. ಕೆಲವು ತಿಂಗಳಲ್ಲಿ ಈ ಮಡಕೆಗಳಿಂದ ನೂರೊಂದು ಮಕ್ಕಳು ಹುಟ್ಟುವರು. ಈ ಮಡಕೆಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳಿ ಎಂದು ಹೇಳಿ ಹೊರಟುಹೋದರು. ಈ ಪ್ರಯೋಗವು ನಿಜವಾಗಿ ನಡೆದಿದ್ದರೆ ಇದು ಇಂದಿನ ವಿಜ್ಞಾನಕ್ಕೂ ಸವಾಲೆಸೆಯುವಂತಹ ಒಂದು ಪ್ರಸಂಗವೇ ಸರಿ. ಮಹಾಭಾರತದಲ್ಲಿ ಇಂದಿನ ವಿಜ್ಞಾನಕ್ಕೆ ಸವಾಲೆಸೆಯುವಂತಹ ಅನೇಕ ಸಂಘಟನೆಗಳ ವಿವರಣೆಗಳಿವೆ. ಇವೆಲ್ಲ ನಿಜವಾಗಿ ನಡೆದಿರುವುದೋ ಅಥವಾ ಮುಂದೆ ಇಂತಹ ವಿಷಯಗಳು ನಡೆಯಬಹುದೆಂಬ ಕಲ್ಪನೆಯೋ ತಿಳಿಯದು. ಇಂತಹ ಸಂಘಟನೆಗಳನ್ನು ಮತ್ತೆ ಮತ್ತೆ ಮಾಡಿ ತೋರಿಸಲು ಸಾಧ್ಯವಾದರೆ ಅದು ವಿಜ್ಞಾನ, ಅದನ್ನು ಮಾಡುವುದು ಹೇಗೆಂದು ತಿಳಿಯದೆ ಹೋದರೆ ಅದೊಂದು ಪವಾಡ!
ತಿಂಗಳುಗಳು ಕಳೆದವು. ಧೃತರಾಷ್ಟನು ತನ್ನ ಸೇವಕನೊಂದಿಗೆ ಹೋಗಿ ದಿನವೂ ಆ ಮಡಕೆಗಳ ಸ್ಥಿತಿಯನ್ನು ಕಂಡುಕೊಳ್ಳುತ್ತಿದ್ದನು. ಒಂದು ದಿನ ಒಂದು ಮಡಕೆಯು ಒಳಗಿನ ಒತ್ತಡದಿಂದ ಸೀಳುತ್ತಿರುವುದು ಕಂಡಿತು. ಸಮಯವು ಆಸನ್ನವಾಯಿತೆಂದು ತಿಳಿದು ಬಹಳ ಜಾಗರೂಕತೆಯಿಂದ ಆ ಮಡಕೆಯನ್ನು ಒಡೆಯಲಾಯಿತು. ಆ ಮಡಕೆಯಿಂದ ಒಂದು ಗಂಡು ಮಗುವು ಹೊರಬಂದಿತು. ಅವನೇ ಗಾಂಧಾರಿಯ ಪ್ರಥಮ ಪುತ್ರ ದುರ್ಯೋಧನ. ಅದೇ ಸಮಯದಲ್ಲಿ ಎಲ್ಲ ದಿಕ್ಕುಗಳಲ್ಲಿಯೂ ಹದ್ದು ತೋಳಗಳ ಅಶುಭ ಘೋರ ಆಕ್ರಂದನಗಳು ಕೇಳಿಬಂದವು. ಇದನ್ನು ಗಮನಿಸಿದ ವಿದುರನು ಜ್ಯೋತಿಷಿಗಳೊಡನೆ ಚರ್ಚಿಸಿ ರಾಜನ ಬಳಿ ಹೀಗೆಂದನು, “ರಾಜನೇ! ಈ ಶಕುನಗಳ ಪ್ರಕಾರ ಈ ಮಗು ನಿನ್ನ ಕುಲಕ್ಷಯಕ್ಕೆ ಕಾರಣವಾಗುವುದು. ಆದ್ದರಿಂದ ಈ ಮಗುವನ್ನು ತ್ಯಾಗ ಮಾಡು, ಮುಂದೆ ಹುಟ್ಟುವ 99 ಪುತ್ರರನ್ನು ನೀನು ಚೆನ್ನಾಗಿ ಬೆಳೆಸಬಹುದು. ಇದು ಕುರುಕುಲಕ್ಕೆ ಕ್ಷೇಮಕರವಾದ ಕಾರ್ಯ”. ಆದರೆ ಪುತ್ರಪ್ರೇಮದಿಂದ ಕುರುಡನಾಗಿದ್ದ ಧೃತರಾಷ್ಟ್ರನು ಯಾರ ಮಾತಿಗೂ ಬೆಲೆಕೊಡಲಿಲ್ಲ. ತನ್ನ ಹಿರಿಯ ಪುತ್ರನನ್ನು ತ್ಯಜಿಸುವುದು ಅವನಿಗೆ ನುಂಗಲಾಗದ ತುತ್ತಾಗಿತ್ತು. ಕೆಲವೇ ದಿನಗಳ ಅಂತರದಲ್ಲಿ ಮಿಕ್ಕ 99 ಜನ ಪುತ್ರರು ಮತ್ತು ಒಬ್ಬಳು ಪುತ್ರಿ ಆ ಮಡಕೆಗಳಿಂದ ಜನಿಸಿದರು. ಗಾಂಧಾರಿಯ ಸಂತೋಷಕ್ಕೆ ಎಣೆಯೇ ಇರಲಿಲ್ಲ. ತನ್ನಷ್ಟು ಭಾಗ್ಯವಂತರು ಯಾರೂ ಇಲ್ಲ ಎಂದು ಸಂಭ್ರಮಿಸಿದಳು. ತನ್ನ ಜನ್ಮ ಸಫಲವಾಯಿತೆಂದು ಹಿಗ್ಗಿದಳು. ಮುಂದೆ ಬರಬಹುದಾದ ಘೋರ ಭವಿಷ್ಯದ ಅರಿವಿರಲಿಲ್ಲ ಅವಳಿಗೆ. ಆ ಮಕ್ಕಳ ಲಾಲನೆ ಪಾಲನೆಗೆ ಸಾಕಷ್ಟು ದಾಸಿಯರನ್ನು ನಿಯೋಜಿಸಿದಳು. ಎಲ್ಲ ಮಕ್ಕಳ ಲಾಲನೆ ಮತ್ತು ಪಾಲನೆಯಲ್ಲಿ ದಿನಗಳು ಉರುಳಿದ್ದೇ ತಿಳಿಯಲಿಲ್ಲ ಆ ಮಹಾಮಾತೆಗೆ.
ಕೆಲವು ವರ್ಷಗಳಲ್ಲಿ ಕಾಡಿನಲ್ಲಿ ಕುಂತಿಗೆ ವಾಯುವಿನಿಂದ ಬಲಭೀಮನ ಮತ್ತು ದೇವೇಂದ್ರನಿಂದ ಅರ್ಜುನನ ವರಪ್ರಸಾದವಾಯಿತು. ಮತ್ತು ಮಾದ್ರಿಗೆ ನಕುಲ ಸಹದೇವರ ರೂಪದಲ್ಲಿ ಅಶ್ವಿನಿ ದೇವತೆಗಳ ವರಪ್ರಸಾದವು ದೊರಕಿತು. ಅನಂತರ ಕಾಮಾತುರನಾದ ಪಾಂಡುವಿನ ಮೃತ್ಯುವಾಯಿತು. ಅವನ ಎರಡನೆಯ ಪತ್ನಿಯಾದ ಮಾದ್ರಿಯು ಸಹಗಮನದ ದಾರಿ ಹಿಡಿದಳು. ತನ್ನ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ ಕುಂತಿಯು ಪಾಂಡುವಿನ ಐದೂ ಮಕ್ಕಳನ್ನು ಕರೆದುಕೊಂಡು ಹಸ್ತಿನಾಪುರಕ್ಕೆ ಬಂದಳು. ಧೃತರಾಷ್ಟ್ರನಿಗೆ ಇದು ನುಂಗಲಾಗದ ತುತ್ತಾಗಿತ್ತು. ಆದರೆ ಭೀಷ್ಮರ ಭಯದಿಂದ ಸುಮ್ಮನಿದ್ದನು. ತನ್ನ ಮಗನು ರಾಜನಾಗುವುದಕ್ಕೆ ಧರ್ಮರಾಯನು ಕಂಟಕವಾಗುತ್ತಾನೆ ಎಂದು ಅವನಿಗೆ ತಿಳಿದಿತ್ತು. ಅಲ್ಲದೆ ಇವರು ದೇವತೆಗಳ ವರಪುತ್ರರು, ಪರಾಕ್ರಮದಲ್ಲೂ ಇವರು ತನ್ನ ಪುತ್ರರನ್ನು ಮೀರಿಸಬಹುದು ಎಂಬ ಅಳುಕಿತ್ತು. ಆದ್ದರಿಂದ ಈ ಐವರೂ ಕೌರವರಲ್ಲ ಇವರು ಪಾಂಡವರು ಎನ್ನುವ ಭೇದವನ್ನು ಹುಟ್ಟುಹಾಕಿದನು. ದುರ್ಯೋಧನನಿಗೂ ಇವರು ತನ್ನ ಪ್ರತಿಸ್ಪರ್ಧಿಗಳು ಎನ್ನುವ ಮನೋಭಾವನೆಯಿತ್ತು. ಇದರಿಂದ ಪಾಂಡವರ ಮತ್ತು ಕೌರವರ ನಡುವೆ ಆಗಾಗ ಕಲಹಗಳುಂಟಾಗುತ್ತಿದ್ದವು. ಧೃತರಾಷ್ಟ್ರನು ಯಾರದೇ ತಪ್ಪಿರಲಿ ತನ್ನ ಪುತ್ರನ ಪರವಾಗಿಯೇ ಮಾತನಾಡುತ್ತಿದ್ದನು. ದುರ್ಯೋಧನನಿಗೆ ಸೋದರಮಾವನಾದ ಶಕುನಿಯ ಒತ್ತಾಸೆಯೂ ಇತ್ತು. ಅವನು ತನ್ನ ಮಾವನ ಸೂಚನೆಗಳನ್ನು ಚಾಚೂತಪ್ಪದೆ ಪಾಲಿಸತೊಡಗಿದನು. ಗಂಡನ ಕುರುಡು ಪ್ರೇಮವನ್ನು ಗಮನಿಸಿದ ಗಾಂಧಾರಿಯು ಇದು ತಪ್ಪು, ಮಕ್ಕಳ ತಪ್ಪನ್ನು ತಿದ್ದಿ ಅವರನ್ನು ಸರಿಯಾದ ರೀತಿಯಲ್ಲಿ ಬೆಳಸಬೇಕಿದೆ ಎಂದು ಗಂಡನಿಗೆ ತಿಳಿಹೇಳುತ್ತಿದ್ದಳು. ಆದರೆ ರಾಜನಿಗೆ ಅವಳ ಮಾತುಗಳು ರುಚಿಸಲಿಲ್ಲ. ಪುತ್ರಪ್ರೇಮ ಅವನ ಮನಸ್ಸನ್ನು ಕುರುಡು ಮಾಡಿತ್ತು. ಗಾಂಧಾರಿಯು ಸಾತ್ವಿಕ ಮನೋಭಾವದ ಹೆಣ್ಣು. ಆಕೆಯು ಕುಂತಿಯನ್ನು ಎಂದೂ ತನ್ನ ಪ್ರತಿಸ್ಪರ್ಧಿಯಂತೆ ನೋಡಲಿಲ್ಲ, ತನ್ನ ಸ್ವಂತ ತಂಗಿಯ ಹಾಗೆ ಪ್ರೀತಿಸುತ್ತಿದ್ದಳು. ಕುಂತಿಯ ಮಕ್ಕಳನ್ನೂ ತನ್ನ ಮಕ್ಕಳಂತೆಯೇ ಪ್ರೀತಿಸುತ್ತಿದ್ದಳು. ಕುಂತಿಯು ಕೂಡ ತನ್ನ ಅಕ್ಕನಿಗೆ ಮತ್ತು ಭಾವನಿಗೆ ಪ್ರೀತಿಯಿಂದ ಸೇವೆ ಮಾಡುತ್ತಿದ್ದಳು. ಕಾಲಕ್ರಮೇಣ ಮಕ್ಕಳು ದೊಡ್ಡವರಾಗಿ ದ್ರೋಣರ ಮಾರ್ಗದರ್ಶನದಲ್ಲಿ ವಿದ್ಯೆಯನ್ನು ಕಲಿಯುತೊಡಗಿದರು. ದುರ್ಯೋಧನನ ತಮ್ಮಂದಿರು ಅಣ್ಣನ ವಾಕ್ಯವನ್ನು ವೇದವಾಕ್ಯದಂತೆ ಪಾಲಿಸುತ್ತಿದ್ದರು. ಮತ್ತು ದುರ್ಯೋಧನನು ಮಾವ ಶಕುನಿಯ ಮಾತಿನಂತೆ ನಡೆದುಕೊಳ್ಳುತ್ತಿದ್ದನು. ಇದರಿಂದ ಗಾಂಧಾರಿ ಮತ್ತು ಅವಳ ಮಕ್ಕಳ ನಡುವೆ ಅಂತರವು ಬೆಳೆಯತೊಡಗಿತು. ಆದರೆ ಪಾಂಡವರು ತಮ್ಮ ತಾಯಿ ಕುಂತಿಯ ಅನುಜ್ಞೆಯಂತೆ ವರ್ತಿಸುತ್ತಿದ್ದರು. ಇದನ್ನು ಗಮನಿಸಿದ ಗಾಂಧಾರಿಗೆ ಸಂಕಟವಾದರೂ ಅದನ್ನು ಬಹಿರಂಗವಾಗಿ ಪ್ರಕಟಗೊಳಿಸಲಿಲ್ಲ, ಕುಂತಿಯ ಬಗ್ಗೆ ಈರ್ಷ್ಯೆ ಪಡಲಿಲ್ಲ. ಆಕೆಗಿದ್ದ ಒಂದು ಸಮಾಧಾನವೆಂದರೆ ತನ್ನ ಪುತ್ರರಿಗೆ ತನ್ನ ಸೋದರನಾದ ಶಕುನಿಯ ಮಾರ್ಗದರ್ಶನವಿದೆ ಎನ್ನವುದು. ಆದರೆ ಶಕುನಿಯ ಕಾರಸ್ಥಾನದ ಬಗ್ಗೆ ಯಾವುದೇ ಸೂಚನೆ ಇರಲಿಲ್ಲ.
ಮುಂದೆ ದುರ್ಯೋಧನನ ಮತ್ತು ಶಕುನಿಯ ಕುತಂತ್ರದಿಂದ ಕುಂತಿ ಮತ್ತು ಪಾಂಡವರು ವಾರಣಾವರ್ತದ ಅರಗಿನ ಮನೆಯಲ್ಲಿ ವಾಸಮಾಡತೊಡಗಿದರು. ಅಲ್ಲಿ ಅವರು ಬೆಂಕಿಯ ಅವಗಢದಿಂದ ತಪ್ಪಿಸಿಕೊಂಡು ಯಾರ ಕಣ್ಣಿಗೂ ಬೀಳದೆ ಪಾರಾಗಿ ಗುಪ್ತವಾಗಿ ಜೀವಿಸಲಾರಂಭಿಸಿದರು. ಗಾಂಧಾರಿಯು ತನ್ನ ಪ್ರೀತಿಯ ತಂಗಿ ಮತ್ತು ಆಕೆಯ ಪುತ್ರರು ಬೆಂಕಿಯಲ್ಲಿ ಬೆಂದು ಮರಣಿಸಿದರು ಎಂದು ತಿಳಿದು ಅತೀವವಾದ ದುಃಖಕ್ಕೆ ಒಳಗಾದಳು. ಪಾಂಡವರು ಏಕಚಕ್ರ ನಗರದಲ್ಲಿ ಬ್ರಾಹ್ಮಣರ ವೇಷದಲ್ಲಿ ಜೀವನ ಸಾಗಿಸುತ್ತಿದ್ದರು. ಆಗ ಅಲ್ಲಿಗೆ ಬಂದ ವ್ಯಾಸರು ಪಾಂಚಾಲದಲ್ಲಿ ನಡೆಯಬೇಕಿರುವ ದ್ರೌಪದೀ ಸ್ವಯಂವರದಲ್ಲಿ ಪಾಂಡವರು ಭಾಗವಹಿಸಬೇಕು ಮತ್ತು ಆಕೆಯನ್ನು ಗೆದ್ದು ಆಕೆಯ ಕೈಹಿಡಿಯಬೇಕು ಎಂದು ಸೂಚಿಸಿದರು. ಅದರಂತೆ ಪಾಂಡವರು ಪಾಂಚಾಲಕ್ಕೆ ಬಂದರು. ಅರ್ಜುನನು ಸ್ವಯಂವರದಲ್ಲಿ ಗೆದ್ದ ದ್ರೌಪದಿಯನ್ನು ತಾಯಿಯ ವಾಕ್ಕಿನಂತೆ ಐದೂ ಜನರು ವಿವಾಹವಾರು. ಈ ಸ್ವಯಂವರಕ್ಕೆ ಬಂದಿದ್ದ ದುರ್ಯೋಧನ ಮತ್ತು ಕರ್ಣರಿಗೆ ಪಾಂಡವರು ಇನ್ನೂ ಜೀವಿಸಿರುವ ವಿಷಯವು ಗೊತ್ತಾಗಿ ಕೋಪಗೊಂಡರು. ಪಾಂಡವರು ಬದುಕಿರುವ ವಿಷಯವು ಕಾಳ್ಗಿಚ್ಚಿನಂತೆ ಹಬ್ಬಿತು. ವಿಷಯವನ್ನು ತಿಳಿದ ಗಾಂಧಾರಿಗೆ ಎಲ್ಲಿಲ್ಲದ ಆನಂದವಾಯಿತು. ತನ್ನ ತಂಗಿ ಮತ್ತು ಅವರ ಪುತ್ರರು ಕ್ಷೇಮವಾಗಿರುವುದನ್ನು ಕೇಳಿ ವಿಶೇಷವಾದ ಪೂಜೆಗಳನ್ನು ಮಾಡಿಸಿದಳು. ವಿಷಯವನ್ನು ತಿಳಿದ ವಿದುರ, ದ್ರೋಣ ಮತ್ತು ಭೀಷ್ಮರಿಗೆ ಅತೀವ ಸಂತೋಷವಾಯಿತು. ಅವರೆಲ್ಲರೂ ಧೃತರಾಷ್ಟರನೊಡನೆ ಮಾತನಾಡಿ ಪಾಂಡವರನ್ನು ಕರೆಯಿಸಿ ಅವರಿಗೆ ಅರ್ಧ ರಾಜ್ಯವನ್ನು ನೀಡಲು ಒಪ್ಪಿಸಿದರು. ಪಾಂಡವರು ತಮಗೆ ದೊರೆತ ಪ್ರದೇಶದಲ್ಲಿ ಸುಂದರವಾದ ಇಂದ್ರಪ್ರಸ್ಥವೆಂಬ ಪಟ್ಟಣವನ್ನು ಮತ್ತು ಭವ್ಯವಾದ ಭವನವನ್ನು ಕಟ್ಟಿಸಿಕೊಂಡು ರಾಜ್ಯಭಾರ ಮಾಡತೊಡಗುತ್ತಾರೆ. ದುರ್ಯೋಧನಾದಿಗಳಿಗೆ ಇದು ನುಂಗಲಾಗದ ತುತ್ತಾಯಿತು.
ಮುಂದೆ ಅನೇಕ ಘಟನೆಗಳು ನಡೆದು ಹೋಗುತ್ತವೆ. ಹಸ್ತಿನಾಪುರದ ಸಭೆಯಲ್ಲಿ ತನ್ನ ಪುತ್ರರು ದ್ರೌಪದಿಯ ವಸ್ತ್ರಾಪಹರಣವನ್ನು ಮಾಡಿದ ವಿಷಯವನ್ನು ಕೇಳಿದ ಗಾಂಧಾರಿಯು ಹೌಹಾರಿದಳು. ಒಂದು ಹೆಣ್ಣಿಗೆ ತನ್ನ ಪುತ್ರರು ಮಾಡಿದ ಅಪಮಾನವು ಕ್ಷಮಾರ್ಹವಲ್ಲ ಎಂದು ಕೋಪಗೊಂಡಳು. ತಾನು ಇಂತಹ ಪುತ್ರರಿಗೆ ಜನ್ಮ ನೀಡಿದೆನಲ್ಲ ಎಂದು ತನ್ನನ್ನು ಹಳಿದುಕೊಂಡು ರೋದಿಸಿದಳು. ದ್ರೌಪದಿಯ ಗೋಳಿನಿಂದ ನೊಂದ ಗಾಂಧಾರಿಯು ಕ್ರುದ್ಧಳಾಗಿ “ಹುಟ್ಟಿದಾಗ ಉಂಟಾದ ಅಪಶಕುನಗಳಿಂದ ಇವನು ಕುಲನಾಶಕ ಎಂದು ತಿಳಿದಿತ್ತು. ಇವನನ್ನು ವಿದುರನ ಮಾತಿನಂತೆ ನಾವು ತ್ಯಜಿಸಲಿಲ್ಲವೇಕೆ?” ಎಂದು ಮರುಗಿದಳು. “ಈಗಲೂ ಕುಲಘಾತಕನಾದ ಈ ಪುತ್ರನನ್ನು ಹೊರಗಟ್ಟಿಬಿಡು, ದ್ರೌಪದಿಯ ಸಂಕಟವನ್ನು ಕೊನೆಗಾಣಿಸು” ಎಂದು ಪತಿಗೆ ಹೇಳಿದಳು. ಇವಳ ಮಾತಿನಿಂದ ಹೆದರಿದ ಧೃತರಾಷ್ಟ್ರನು ದ್ರೌಪದಿಗೆ ಒಂದು ವರವನ್ನು ಬೇಡುವಂತೆ ಕೇಳಿದನು. ಆ ವರದಿಂದ ಪಾಂಡವರು ದಾಸ್ಯವಿಮುಕ್ತರಾದರು. ದುರ್ಯೋಧನನು ಮಾತ್ರ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ, ಇನ್ನು ತನ್ನ ತಾಯಿಯ ಮಾತನ್ನು ಕೇಳಿಯಾನೇ? ಪಾಂಡವರು ವನವಾಸಕ್ಕೆ ಹೊರಟುನಿಂತಾಗ, ಧೃತರಾಷ್ಟ್ರನ ಅರಮನೆಯನ್ನು ತ್ಯಜಿಸಿದ ಕುಂತಿಯು ವಿದುರನ ಮನೆಯಲ್ಲಿ ವಾಸಮಾಡತೊಡಗಿದಳು. ಇದರಿಂದ ಗಾಂಧಾರಿಯು ತನ್ನ ಆಪ್ತಗೆಳತಿಯಿಂದ ಮತ್ತೊಮ್ಮೆ ದೂರವಾದಳು.
ಪಾಂಡವರು ವನವಾಸ ಮತ್ತು ಅಜ್ಞಾತವಾಸಗಳನ್ನು ಪೂರೈಸಿದ ಮೇಲೆ ಅವರಿಗೆ ಕೇವಲ ಐದು ಗ್ರಾಮಗಳನ್ನಾದರೂ ನೀಡುವಂತೆ ಕೇಳಲು ಕೃಷ್ಣನು ಸಂಧಾನಕ್ಕಾಗಿ ಹಸ್ತಿನಾಪುರಕ್ಕೆ ಬಂದನು. ಧುರ್ಯೋಧನನಾದರೋ ಒಂದು ಇಂಚು ನೆಲವನ್ನು ಕೂಡ ಪಾಂಡವರಿಗೆ ಕೊಡುವುದಿಲ್ಲ ಎಂದು ಹಠ ಹಿಡಿದನು. ಈ ಮಾತನ್ನು ಕೇಳಿದ ಗಾಂಧಾರಿಯು ತನ್ನ ಮಗನನ್ನು ಕರೆದು ಬುದ್ಧಿವಾದವನ್ನು ಹೇಳಿದಳು “ಸಿಟ್ಟಿನ ಕೈಯಲ್ಲಿ ಬುದ್ಧಿಯನ್ನು ಕೊಟ್ಟು ನೀನು ಹೋರಾಟಕ್ಕೆ ನಿಂತರೆ ಭೀಷ್ಮ, ದ್ರೋಣ, ಕೃಪ, ಕರ್ಣ, ಭೀಮಸೇನ, ಧನಂಜಯ, ಧೃಷ್ಟದ್ಯುಮ್ನ ಮುಂತಾದವರೆಲ್ಲರ ಉಗ್ರಾಸ್ತ್ರಗಳ ಅಮೋಘವರ್ಷದಿಂದ ಇಡಿಯ ಭೂಮಂಡಲವೆಲ್ಲ ನಾಶವಾಗುವುದು ಖಂಡಿತ. ನಿನ್ನೊಬ್ಬನ ಕಾರಣದಿಂದ ವಂಶವೂ, ಪ್ರಜೆಗಳೂ ನಾಶವಾಗುವುದಕ್ಕಿಂತ ಬೇರೆ ಅನರ್ಥವಿದೆಯೇ? ಬಲಿಷ್ಠರಾದ ಆ ಪಾಂಡವರನ್ನು ಮಣಿಸಲು ನೀನು ನಂಬಿ ಕುಳಿತ ಕರ್ಣನಾಗಲೀ ಶೀಘ್ರಕೋಪಿಯಾದ ದುಶ್ಯಾಸನನಾಗಲೀ ಶಕ್ತರಲ್ಲ. ನಿಜವಾಗಿ ಹಾಗೆ ಮಾಡಲು ಸಮರ್ಥರಾದವರು ಭೀಷ್ಮ, ದ್ರೋಣ, ಕೃಪಾದಿಗಳು. ಆದರೆ ಕೈಯಾರೆ ಸಾಕಿದ ಮೊಮ್ಮಕ್ಕಳನ್ನು ತಾತನಾಗಲೀ, ವಿದ್ಯೆಯಿತ್ತ ಗುರುವಾಗಲೀ ಕೊಂದಾರೆಂದು ನೀನೆಣಿಸಬೇಡ. ಆ ವೃದ್ಧವೀರರು ನಿನ್ನ ಅನ್ನದ ಋಣಕ್ಕಾಗಿ ನಿನ್ನ ಕಡೆ ನಿಂತು ಯುದ್ಧ ಮಾಡುವರು. ಆ ತಬ್ಬಲಿಗಳಾದ ಪಾಂಡುಪುತ್ರರನ್ನು ಕೊಲ್ಲುವುದರ ಬದಲು ಆನಂದದಿಂದ ಅವರೆಲ್ಲ ಜೀವವನ್ನೇ ಬಿಟ್ಟಾರು. ಆದ್ದರಿಂದ ಮಗು ನೀನೀಗ ಹದಿಮೂರು ವರ್ಷ ಅವರಿಗೆ ಮೋಸಮಾಡಿ ರಾಜ್ಯವಾಳಿದ್ದೀಯೆ. ಇನ್ನೂ ಅತಿಯಾಸೆ ಮಾಡಬೇಡ. ಅವರ ಅರ್ಧ ರಾಜ್ಯವನ್ನು ಅವರಿಗೆ ಕೊಟ್ಟುಬಿಡು. ನಿನಗೂ ನಿನ್ನ ಸಹೋದರರಿಗೂ, ಮಿತ್ರರಿಗೂ ಸುಖವಾಗಿ ಉಂಡು ಗೌರವದಿಂದ ಬಾಳಲು ವಿಶಾಲವಾದ ಕುರುರಾಜ್ಯದ ಅರ್ಧಭಾಗವೇನೂ ಕಡಿಮೆಯಲ್ಲ. ಅತಿಯಾದ ಆಸೆಯಿಂದ ಸ್ವಾಭಿಮಾನಿಗಳೂ, ಶೂರರೂ, ಸಂಯಮಿಗಳೂ, ಜನಪ್ರಿಯರೂ ಆದ ಪಾಂಡವರ ವಿರುದ್ಧ ಯುದ್ಧವನ್ನು ಹೂಡಬೇಡ. ಅವರ ಜೊತೆಗೆ ಯುದ್ಧವೆಂದರೆ ನಿನಗೆ ಸುಖಭ್ರಂಶ, ಆತ್ಮಧ್ವಂಸ.” ಎಂದಳು. ಆದರೆ ಪಾಂಡವರ ಮೇಲೆ ಕುರುಡು ಹಗೆಯನ್ನು ಸಾಧಿಸುತ್ತಿದ್ದ ದುರ್ಯೋಧನನಿಗೆ ತಾಯಿಯ ಬುದ್ಧಿವಾದವು ರುಚಿಸಲಿಲ್ಲ. ಆಕೆಯ ಮಾತುಗಳೆಲ್ಲ “ನೀರಿನಲ್ಲಿ ಹೋಮ ಮಾಡಿದ ಹಾಗೆ” ವ್ಯರ್ಥವಾಗುತ್ತವೆ. ಅದಕ್ಕೆ ಅವನು ಹೆಚ್ಚಿನ ಪ್ರಾಮುಖ್ಯತೆಯನ್ನೂ ಕೊಡಲಿಲ್ಲ. ಯಾರ ಮಾತನ್ನೂ ಕೇಳದ ಅವನು ಕುರುಕ್ಷೇತ್ರ ಯುದ್ಧವನ್ನು ಮೈಮೇಲೆ ಎಳೆದುಕೊಳ್ಳುತ್ತಾನೆ, “ಸುಮ್ಮನೆ ಇರಲಾರದೆ ಇರುವೆ ಬಿಟ್ಟುಕೊಂಡರು” ಎನ್ನುವ ಹಾಗೆ.
ತನ್ನ ಮಗ ತನ್ನ ಮಾತಿಗೆ ಕಿವಿಗೊಡುವುದಿಲ್ಲ ಎಂದು ಗಾಂಧಾರಿಗೆ ತಿಳಿದಿತ್ತು. ಆದರೆ ಅವಳು ತನ್ನ ಪ್ರಯತ್ನವನ್ನು ಮಾಡದೆ ಸುಮ್ಮನಿರಲಿಲ್ಲ. ತನ್ನ ಮಕ್ಕಳ ಹಿತವನ್ನು ಬಯಸುವ ಎಲ್ಲ ತಾಯಂದಿರು ಕೂಡ ಮಾಡುವುದು ಇದನ್ನೇ. ಅವಳಿಗೊಂದು ಆಶಾಕಿರಣ ಗೋಚರಿಸಿತು. ನನ್ನ ಮಗ ನನ್ನ ಮಾತನ್ನು ಕೇಳದಿರಬಹುದು ಆದರೆ ಅವನು ಖಂಡಿತ ನನ್ನ ತಮ್ಮನ ಮಾತನ್ನು ಮೀರುವುದಿಲ್ಲ ಎನ್ನುವ ಯೋಚನೆಯು ಬಂದು ಶಕುನಿಯನ್ನು ಕರೆಸಿದಳು. ಈ ಯದ್ಧದಿಂದ ತನ್ನ ಮಕ್ಕಳಿಗೆ ಹೆಚ್ಚಿನ ಹಾನಿಯಾಗುವುದರಿಂದ ದುರ್ಯೋಧನನಿಗೆ ತಿಳಿಯ ಹೇಳಿ ಆಗಬಹುದಾದ ಯುದ್ಧವನ್ನು ತಡೆಯುವಂತೆ ಶಕುನಿಯನ್ನು ಕೇಳಿದಳು. ಅದಕ್ಕೊಪ್ಪದ ತಮ್ಮನ ವಿಚಾರಧಾರೆಯನ್ನು ಕೇಳಿ ಆಕೆಗೆ ಒಂದು ಶಂಕೆಯು ಮೂಡಿತು. ಶಕುನಿಯು ತನ್ನ ಮಕ್ಕಳಿಗೆ ಒಳ್ಳೆಯದನ್ನು ಬಯಸುತ್ತಾನೋ ಅಥವಾ ಕೆಡುಕನ್ನು ಬಯಸುತ್ತಾನೋ ಎನ್ನುವ ಗೊಂದಲವು ಮೂಡಿತು. ಸ್ವಲ್ಪ ಅವಲೋಕನ ಮಾಡಿದಾಗ ಪ್ರತಿ ಬಾರಿಯೂ ಶಕುನಿಯು ದುರ್ಯೋಧನನನ್ನು ತಪ್ಪು ದಾರಿಯಲ್ಲೇ ಕರೆದೊಯ್ದಿದ್ದಾನೆ ಎನ್ನುವ ಅಪ್ರಿಯಸತ್ಯವು ಗೋಚರವಾಯಿತು. ಅವಳ ಕಣ್ಣಿಗೆ ಕಟ್ಟಿದ್ದ ತಮ್ಮನ ಮೇಲಿನ ಅಭಿಮಾನದ ತೆರೆಯು ಪಕ್ಕಕ್ಕೆ ಸರಿಯಿತು. ತಮ್ಮನ ಮೇಲೆ ಅತೀವವಾದ ಕೋಪವು ಉಂಟಾಯಿತು. ಆ ಕೋಪದಲ್ಲಿ ಅವಳು ತಮ್ಮನಿಗೆ “ನೀನು ಈ ಯುದ್ಧದಲ್ಲಿ ಮರಣ ಹೊಂದುವಂತಾಗಲಿ. ನಿನ್ನ ಪತ್ನಿ ಮತ್ತು ಪುತ್ರರು ರಾಜ್ಯಭ್ರಷ್ಟರಾಗಲಿ. ನಿನ್ನ ಪ್ರಜೆಗಳಿಗೆ ನೆಮ್ಮದಿ ಇಲ್ಲದಂತಾಗಲಿ” ಎಂದು ಶಾಪವನ್ನು ನೀಡಿದಳು. ಆಕೆಯ ಶಾಪದ ಪರಿಣಾಮವಾಗಿ ಶಕುನಿಯು ಮಹಾಭಾರತ ಯುದ್ಧದಲ್ಲಿ ಸಹದೇವನಿಂದ ಹತನಾಗುತ್ತಾನೆ. ಅತ್ತ ಶಕುನಿಯ ಹೆಂಡಿತಿ ಮತ್ತು ಮಕ್ಕಳು ಶತ್ರು ದಾಳಿಯ ಪರಿಣಾಮವಾಗಿ ರಾಜ್ಯವನ್ನು ಕಳೆದುಕೊಳ್ಳುತ್ತಾರೆ. ರಾಜ್ಯದಲ್ಲಿ ಅರಾಜಕತೆ ಉಂಟಾಗುತ್ತದೆ. ಇಂದಿಗೂ ಅಫಘಾನಿಸ್ತಾನದಲ್ಲಿ ಒಂದಲ್ಲ ಒಂದು ರೀತಿಯ ತೊಂದರೆಗಳಿದ್ದು ಪ್ರಜೆಗಳಿಗೆ ನೆಮ್ಮದಿಯೇ ಇಲ್ಲ! ಒಬ್ಬ ಮಹಾಪತಿವ್ರತೆಯ ಶಾಪ ಎಂದಿಗೂ ವ್ಯರ್ಥವಾಗುವುದಿಲ್ಲ!
ಕುರುಕ್ಷೇತ್ರದ ಮಹಾಸಂಗ್ರಾಮವು ಪ್ರಾರಂಭವಾಗುತ್ತದೆ. ವ್ಯಾಸರಿಂದ ದಿವ್ಯದೃಷ್ಟಿಯನ್ನು ಪಡೆದ ಸಂಜಯನು ಅಂಧ ಧೃತರಾಷ್ಟ್ರನಿಗೆ ಯುದ್ಧದ ಆಗುಹೋಗುಗಳ ಬಗ್ಗೆ ಅರಮನೆಯಲ್ಲಿ ಕುಳಿತೇ ಕಣ್ಣಿಗೆ ಕಟ್ಟುವಂತೆ ತಿಳಿಸುತ್ತಿರುತ್ತಾನೆ. ತಾಯಿಸಹಜ ಕುತೂಹಲದಿಂದ ಗಾಂಧಾರಿಯು ಕೂಡ ಸಂಜಯನ ವೀಕ್ಷಕ ವಿವರಣೆಯನ್ನು ಆಸಕ್ತಿಯಿಂದ ಕೇಳುತ್ತಿರುತ್ತಾಳೆ. ಯುದ್ಧ ಮುಂದುವರೆದಂತೆಲ್ಲ, ತನ್ನ ಮಕ್ಕಳು ಒಬ್ಬಬ್ಬರಾಗಿ ಹತರಾದಂತೆಲ್ಲ ಅವಳಲ್ಲಿ ಪುತ್ರಶೋಕವು ಮಡುಗಟ್ಟುತ್ತಾ ಹೋಯಿತು. ಕೊನೆಗೆ ದುರ್ಯೋಧನನು ಮಾತ್ರ ಉಳಿದಾಗ ತಾಯಿಸಹಜ ಪ್ರೇಮವು ಗರಿಗೆದರಿತು. ಇವನೊಬ್ಬನನ್ನಾದರೂ ಉಳಿಸಿಕೊಳ್ಳಬೇಕು ಎನ್ನುವ ಆಸೆಯು ಚಿಗುರೊಡೆಯಿತು. ಹಿಂದೆ ವ್ಯಾಸರು ತನ್ನ ದೃಷ್ಟಿಯ ಶಕ್ತಿಯ ಬಗ್ಗೆ ತಿಳಿಸಿದ ಮಾತುಗಳು ನೆನಪಾದವು. ಅದನ್ನು ಒಮ್ಮೆ ಮಾತ್ರ ಪ್ರಯೋಗಿಸಬಹುದು ಎಂದು ಅವಳಿಗೆ ತಿಳಿದಿತ್ತು. ಆ ದಿನ ಅವಳು ಕುರುಕ್ಷೇತ್ರದಲ್ಲಿ ಕೌರವರ ತಂಗುದಾಣಕ್ಕೆ ಹೋದಳು. ಅಲ್ಲಿ ದುರ್ಯೋಧನನನ್ನು ಕಂಡು ಗುಪ್ತವಾಗಿ ಒಂದು ಮಾತನ್ನು ಹೇಳಿದಳು. “ಮಗೂ, ನಿನ್ನನ್ನು ಹೆಚ್ಚು ಬಲಶಾಲಿಯನ್ನಾಗಿ ಮಾಡುವ ಒಂದು ತಂತ್ರವು ನನಗೆ ತಿಳಿದಿದೆ. ಅದಕ್ಕಾಗಿ ನೀನು ಈ ರಾತ್ರಿ ಯಾರಿಗೂ ಕಾಣದಂತೆ ಸಂಪೂರ್ಣ ನಗ್ನನಾಗಿ ನನ್ನ ಬಿಡಾರಕ್ಕೆ ಬರಬೇಕು” ಎಂದು ತಿಳಿಸಿದಳು. ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳುವ ಯಾವುದೇ ಅವಕಾಶವನ್ನು ದುರ್ಯೋಧನನು ಕಳೆದುಕೊಳ್ಳಲು ಸಿದ್ಧನಿರಲಿಲ್ಲ. ತಾಯಿಯ ಮಾತಿಗೆ ಆಗಲಿ ಎಂದು ಒಪ್ಪಿಗೆ ನೀಡಿದನು. ಆದರೆ ಸರ್ವಾಂತರ್ಯಾಮಿಯಾದ ಶ್ರೀಕೃಷ್ಣನಿಂದ ಈ ವಿಷಯವು ಹೇಗೆ ಗುಪ್ತವಾಗಿಡಲು ಸಾಧ್ಯ? ದುರ್ಯೋಧನನು ವಜ್ರಕಾಯನಾದರೆ ಅವನನ್ನು ವಧಿಸುವುದು ಬಹಳ ಕಷ್ಟ ಎಂದು ಯೋಚಿಸಿದ ಅವನು ಒಂದು ತಂತ್ರವನ್ನು ಹೂಡಿದನು. ರಾತ್ರಿ ದುರ್ಯೋಧನನು ಗುಪ್ತವಾಗಿ, ಸಂಪೂರ್ಣ ನಗ್ನನಾಗಿ ತಾಯಿಯ ಬಿಡಾರಕ್ಕೆ ಹೋಗುತ್ತಿರುವ ಸಮಯದಲ್ಲಿ ಕೃಷ್ಣನು ಅವನಿಗೆ ಎದುರಾದನು. ಕೃಷ್ಣನು ಸಂಪೂರ್ಣವಾಗಿ ನಗ್ನನಾಗಿರುವ ದುರ್ಯೋಧನನನ್ನು ನೋಡಿ ಪರಿಹಾಸ್ಯಮಾಡಿದನು. ಆಗ ತನ್ನ ತಾಯಿಯ ಮಾತನಂತೆ ಈ ರೂಪದಲ್ಲಿ ಅವಳನ್ನು ಕಾಣಲು ಹೋಗುತ್ತಿದ್ದೇನೆ ಎಂದು ನುಡಿದನು ದುರ್ಯೋಧನ. ಆಗ ಕೃಷ್ಣನು “ನೀನು ಬೆಳೆದುನಿಂತಿರುವ ಯುವಕ. ಈ ಅವಸ್ಥೆಯಲ್ಲಿ ನೀನು ನಿನ್ನ ತಾಯಿಯ ಬಳಿಗೆ ಹೋಗುವುದು ನಾಚಿಕೆಗೇಡಿನ ವಿಷಯ. ಹೋಗಲಿ, ನಿನ್ನ ಗುಪ್ತಾಂಗವನ್ನಾದರೂ ಮುಚ್ಚಿಕೋ” ಎಂದು ಸಲಹೆಯನ್ನು ನೀಡಿದನು. ಅದು ಸರಿಯೆನಿಸಿ ದುರ್ಯೋಧನನು ಒಂದು ಬಾಳೆಯ ಎಲೆಯನ್ನು ಸೊಂಟಕ್ಕೆ ಕಟ್ಟಿಕೊಂಡು ತಾಯಿಯ ಬಿಡಾರಕ್ಕೆ ಹೋಗುತ್ತಾನೆ. ಗಾಂಧಾರಿಯು ದುರ್ಯೋಧನನನ್ನು ತನ್ನ ಎದುರಿಗೆ ನಿಲ್ಲಲು ಹೇಳಿ ತನ್ನ ಕಣ್ಣಿನ ಪಟ್ಟಿಯನ್ನು ತೆಗೆದು ತನ್ನ ಮಗನ ದೇಹವನ್ನು ಅಡಿಯಿಂದ ಮುಡಿಯವರೆಗೂ ನೋಡುತ್ತಾಳೆ. ಬಾಳೆಯ ಎಲೆಯಿಂದ ಮುಚ್ಚಿದ ಭಾಗವನ್ನು ಹೊರತುಪಡಿಸಿ ದುರ್ಯೋಧನನ ಮಿಕ್ಕ ದೇಹವೆಲ್ಲ ವಜ್ರದಷ್ಟು ಕಠಿಣವಾಗುತ್ತದೆ. ಆದರೆ ಅವನ ಸೊಂಟಕ್ಕೆ ಸುತ್ತಿರುವ ಬಾಳೆಯ ಎಲೆಯನ್ನು ನೋಡಿ ಅವಳು ಕಂಗಾಲಾಗುತ್ತಾಳೆ. “ಮಗನೇ, ಹೀಗೇಕೆ ಮಾಡಿದೆ. ನಾನು ನಿನ್ನನ್ನು ಸಂಪೂರ್ಣ ನಗ್ನನಾಗಿ ಬರಲು ತಿಳಿಸಿದ್ದೆ. ತಾಯಿಯ ಬಳಿ ಆ ರೀತಿ ಬರಲು ಸಂಕೋಚವೇಕೆ? ಈಗ ಅನರ್ಥವಾಯಿತು. ನೀನು ಮುಚ್ಚಿಕೊಂಡಿರುವ ಭಾಗವು ನೀನು ಸೋಲಲು ಕಾರಣವಾಗಬಹುದು. ಆದರೆ, ಈಗೇನೂ ಮಾಡುವಂತಿಲ್ಲ. ನನ್ನ ಈ ಶಕ್ತಿ ಮತ್ತೆ ಕೆಲಸ ಮಾಡುವುದಿಲ್ಲ” ಎಂದಳು. ಆಗ ದುರ್ಯೋಧನನಿಗೆ ಕೃಷ್ಣನ ಕುತಂತ್ರವು ಅರ್ಥವಾಗುತ್ತದೆ. ಅವನನ್ನು ಮನಸ್ಸಿನಲ್ಲೇ ಅವನನ್ನು ಹಳಿಯುತ್ತ ತನ್ನ ಬಿಡಾರಕ್ಕೆ ಹೋದನು. ಗಾಂಧಾರಿಯು ಮತ್ತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಳು. ಮುಂದೆ ದುರ್ಯೋಧನನು ಭೀಮನ ಜೊತೆ ಗಧಾಯುದ್ಧವನ್ನು ಮಾಡುತ್ತಿರುವಾಗ ಭೀಮನ ಗಧೆಯ ಏಟುಗಳು ಅವನ ದೇಹದ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಗದಾಯುದ್ಧದಲ್ಲಿ ಸೊಂಟದ ಕೆಳಗೆ ಪ್ರಹಾರ ಮಾಡುವುದು ನಿಷಿದ್ಧ ಎಂದು ತಿಳಿದಿದ್ದರೂ ಕೃಷ್ಣನು ಭೀಮನಿಗೆ ಸನ್ನೆ ಮಾಡಿ ದುರ್ಯೋಧನನ ತೊಡೆಯ ಮೇಲೆ ಪ್ರಹಾರ ಮಾಡುವಂತೆ ಸೂಚಿಸುತ್ತಾನೆ. ಭೀಮನು ಹಾಗೆಯೇ ಮಾಡಲು ದುರ್ಯೋಧನನ ತೊಡೆ ಮುರಿದು ಆತ ಸೋಲನ್ನಪ್ಪುತ್ತಾನೆ. ಹೀಗೆ ಕೃಷ್ಣನು ಗಾಂಧಾರಿಯ ತಂತ್ರವನ್ನು ವಿಫಲಗೊಳಿಸುತ್ತಾನೆ. ತಾನೊಂದು ಬಗೆದರೆ ದೈವವೊಂದು ಬಗೆಯುತ್ತದೆ ಅಲ್ಲವೇ?
ಕೌರವರೆಲ್ಲರೂ ಯುದ್ಧದಲ್ಲಿ ಮರಣಿಸುತ್ತಾರೆ. ಪಾಂಡವರು ವಿಜಯ ಸಾಧಿಸುತ್ತಾರೆ. ತನ್ನ ನೂರು ಮಕ್ಕಳನ್ನು ಮತ್ತು ಅಳಿಯನನ್ನು ಕಳೆದುಕೊಂಡು ಗಾಂಧಾರಿಯು ಅತೀವವಾದ ದುಃಖದಲ್ಲಿ ಮುಳುಗಿದ್ದಳು. ಹಿಂದಿನ ಘಟನೆಗಳ ಬಗ್ಗೆ ಯೋಚಿಸುತ್ತಿದ್ದಾಗ ಆಕೆಗೆ ತನ್ನ ಮಕ್ಕಳ ಸಾವಿಗೆ ಶ್ರೀಕೃಷ್ಣನೇ ಮುಖ್ಯವಾದ ಕಾರಣ ಅನ್ನಿಸಿತು. ಅವನು ಯುದ್ಧವನ್ನು ತಪ್ಪಿಸಲು ಸಂಧಾನಕ್ಕೆ ಬಂದಿದ್ದಾಗ ಸರಿಯಾಗಿ ಮಾತನಾಡಿ ತನ್ನ ಮಗನನ್ನು ಒಲಿಸಬಹುದಿತ್ತು. ಕೃಷ್ಣನಿಗೆ ಆ ಶಕ್ತಿಯು ಇತ್ತು ಎಂದು ಗಾಂಧಾರಿಗೆ ತಿಳಿದಿತ್ತು. ಆದರೆ ಹಾಗೆ ಮಾಡದೆ ಕೃಷ್ಣನು ಯುದ್ಧವಾಗುವಂತೆ ಬೇಕಂದೇ ಮಾಡಿದ್ದಾನೆ ಅನ್ನಿಸಿತು ಅವಳಿಗೆ. ಎರಡನೆಯದಾಗಿ ತಾನು ತನ್ನ ಮಗನ ಸಂಪೂರ್ಣ ದೇಹವನ್ನು ವಜ್ರಕಾಯವನ್ನಾಗಿಸಲು ಮಾಡಿದ ಪ್ರಯತ್ನದಲ್ಲಿ ಹುಳಿಹಿಂಡಿದವನು ಕೃಷ್ಣನೇ ಎಂದು ಅವಳಿಗೆ ತಿಳಿದಿರುತ್ತದೆ. ಕೃಷ್ಣನು ಹಾಗೆ ಮಾಡಿರದಿದ್ದರೆ ತನ್ನ ಒಬ್ಬಪುತ್ರನಾದರೂ ಜೀವಂತವಿರುತ್ತಿದ್ದ. ಅದನ್ನೂ ಕೃಷ್ಣನು ತಪ್ಪಿಸಿದ ಎಂದು ಯೋಚಿಸಿದಳು. ಕೃಷ್ಣನ ಮೇಲೆ ಎಲ್ಲಿಲ್ಲದ ಕೋಪ ಬರುತ್ತದೆ ಅವಳಿಗೆ. ಕೋಪದಿಂದ ಬುಸುಗುಟ್ಟುತ್ತಿದ್ದಳು ಅವಳು. ಅದೇ ದಿನ ಕೃಷ್ಣನೊಂದಿಗೆ ಪಾಂಡವರು ತಮ್ಮ ದೊಡ್ಡಪ್ಪ ದೊಡ್ಡಮ್ಮನನ್ನು ಕಂಡು ಸಾಂತ್ವನವನ್ನು ಹೇಳಲು ಹಸ್ತಿನಾಪುರದ ಅರಮನೆಗೆ ಬಂದರು. ಧರ್ಮರಾಯನು ಮೊದಲಿಗೆ ಗಾಂಧಾರಿಯ ಪಾದಸ್ಪರ್ಶ ಮಾಡಿದನು. ಆಗ ಅವಳ ಕಣ್ಣಿಗೆ ಕಟ್ಟಿದ್ದ ಬಟ್ಟೆಯ ಅಂಚಿನಿಂದ ಧರ್ಮರಾಯನ ಕಾಲಿನ ಹೆಬ್ಬೆಟ್ಟಿನ ಉಗುರು ಕಾಣುತ್ತದೆ. ಅವಳ ಕೋಪಕ್ಕೆ ಆ ಉಗುರು ಸುಟ್ಟು ಕಪ್ಪಾಗುತ್ತದೆ. ಇದನ್ನು ಗಮನಿಸಿದ ಶ್ರೀಕೃಷ್ಣನು ಧರ್ಮರಾಯನ್ನು ಹಿಂದಕ್ಕೆ ಎಳೆದುಕೊಂಡನು. ಕೃಷ್ಣನು ಗಾಂಧಾರಿಯನ್ನು ಶಾಂತಗೊಳಿಸಲು ಕೆಲವು ಸಮಾಧಾನದ ಮಾತುಗಳನ್ನು ಆಡಿದನು. ಆಗ ರೊಚ್ಚಿಗೆದ್ದ ಗಾಂಧಾರಿಯು “ಕೃಷ್ಣಾ, ನೀನು ತಿಳಿದೂ ತಿಳಿದೂ ನಮ್ಮ ವಂಶದ ನಾಶಕ್ಕೆ ಕಾರಣವಾದೆ. ನೀನು ಕ್ಷಮೆಗೆ ಅರ್ಹನಲ್ಲ. ನಮ್ಮ ವಂಶವು ನಮ್ಮ ಕಣ್ಣೆದುರೇ ನಾಶವಾದಂತೆ ನಿನ್ನ ವಂಶವೂ ನಿನ್ನ ಕಣ್ಣೆದುರೇ ನಾಶವಾಗಲಿ” ಎಂದು ಶಪಿಸುತ್ತಾಳೆ. ಕೃಷ್ಣನು ನಸುನಗುತ್ತ ಆ ಶಾಪವನ್ನು ಸ್ವೀಕರಿಸುತ್ತಾನೆ. ಅವನಿಗೆ ಮುಂದೆ ನಡೆಯುವ ವಿಷಯಗಳು ಮೊದಲೇ ತಿಳಿದಿರುತ್ತದೆ. ಆ ಶಾಪದ ಫಲವಾಗಿ ಯಾದವರು ಒಬ್ಬರನ್ನೊಬ್ಬರು ಕೊಲ್ಲುತ್ತಾರೆ. ದ್ವಾರಕೆಯು ಸಮುದ್ರದಲ್ಲಿ ಮುಳುಗುತ್ತದೆ. ಶೀಕೃಷ್ಣನು ಜರ ಎನ್ನುವ ಬೇಡನ ಬಾಣದಿಂದ ಸಾವನ್ನಪ್ಪುತ್ತಾನೆ. ಹೀಗೆ ಕೃಷ್ಣನ ವಂಶವು ನಿರ್ವಂಶವಾಗುತ್ತದೆ. ಅನಂತರ ಕುಂತಿಯು ದ್ರೌಪದಿಯನ್ನು ಗಾಂಧಾರಿಯ ಬಳಿ ಕರೆತಂದಳು. ದ್ರೌಪದಿಯು ತನ್ನ ಐವರು ಪುತ್ರರನ್ನು ಕಳೆದುಕೊಂಡಿರುವ ವಿಷಯವನ್ನು ಕೇಳಿ ಅವಳ ಕರುಳು ಚುರಕ್ಕೆಂದಿತು. “ಮಗಳೇ, ನಿನ್ನ ಶೋಕವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ನಿನ್ನ ಹಾಗೆ ನಾನು ಕೂಡ ನನ್ನ ಎಲ್ಲ ಪುತ್ರರನ್ನೂ ಕಳೆದುಕೊಂಡಿದ್ದೇನೆ. ಯಾರು ಯಾರನ್ನು ಸಂತೈಸಬಲ್ಲರು? ಆಗಿಹೋಗಿರುವ ಘಟನೆಯ ಬಗ್ಗೆ ಚಿಂತಿಸಿ ಫಲವಿಲ್ಲ. ನಾನು ಹಡೆದ ಪುತ್ರರಿಂದಲೇ ಈ ಘೋರ ನಡೆದುಹೋಗಿದೆ” ಎಂದು ದುಃಖದಲ್ಲಿದ್ದ ದ್ರೌಪದಿಯನ್ನು ಸಂತೈಸಲು ಪ್ರಯತ್ನಿಸಿದಳು. ಒಬ್ಬ ತಾಯಿ ಮಾತ್ರ ಇನ್ನೊಬ್ಬ ತಾಯಿಯ ಶೋಕವನ್ನು ಅರ್ಥಮಾಡಿಕೊಳ್ಳಬಲ್ಲಳು ಎನ್ನುವುದಕ್ಕೆ ಗಾಂಧಾರಿಯ ಮಾತುಗಳೇ ಸಾಕ್ಷಿ.
ನಮ್ಮ ಮಕ್ಕಳಿಲ್ಲದ ಅರಮನೆಯ ವಾಸ ನಮಗೆ ಬೇಡ ಎಂದು ನಿರ್ಧರಿಸಿದ ಧೃತರಾಷ್ಟ್ರ ಮತ್ತು ಗಾಂಧಾರಿಯರು ವಾನಪ್ರಸ್ಥಕ್ಕಾಗಿ ಕಾಡಿಗೆ ಹೊರಟು ನಿಂತರು. ಅವರ ನೆರಳಿನಂತಿದ್ದ ಕುಂತಿಯು ಕೂಡ ಅವರ ಸೇವೆ ಮಾಡಲು ಕಂಕಣಬದ್ಧಳಾಗಿ ಹೊರಟು ನಿಂತಳು. ಅವಳಿಗೆ ಕರ್ಣನಿಗೆ ತಾನು ಅನ್ಯಾಯ ಮಾಡಿದೆ ಎನ್ನುವ ವಿಷಯವು ಕುಟುಕುತ್ತಿತ್ತು. ಪಾಂಡವರು ಎಷ್ಟೇ ಕೇಳಿಕೊಂಡರೂ ಈ ಮೂವರೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಗಂಗಾ ನದಿಯ ತೀರದ ಹತ್ತಿರದ ಕಾಡಿನಲ್ಲಿ ಅವರು ಆಶ್ರಮವನ್ನು ಕಟ್ಟಿಕೊಂಡು ವಾಸಿಸತೊಡಗಿದರು. ಒಮ್ಮೆ ವ್ಯಾಸರು ಮತ್ತು ಯುಧಿಷ್ಠಿರನು ಅವರನ್ನು ನೋಡಲು ಬಂದಾಗ ವ್ಯಾಸರ ಕೃಪೆಯಿಂದ ಇವರಿಗೆ ಗತಿಸಿಹೋದ ತಮ್ಮ ನೂರು ಮಕ್ಕಳು ಮತ್ತು ಇತರ ವೀರರನ್ನು ಕೆಲವು ಕ್ಷಣಗಳ ಕಾಲ ಮತ್ತೆ ನೋಡುವ ಅವಕಾಶವು ದೊರಕಿತು. ಇದರಿಂದ ಪುತ್ರಶೋಕದಲ್ಲಿ ಮುಳುಗಿದವರಿಗೆ ಸ್ವಲ್ಪ ನೆಮ್ಮದಿಯು ಮೂಡಿತು. ಈ ಘಟನೆಯಾದ ಕೆಲಕಾಲದ ಮೇಲೆ ಅವರಿರುವ ಕಾಡಿನಲ್ಲಿ ಕಾಡ್ಗಿಚ್ಚು ಹಬ್ಬುತ್ತದೆ. ಆ ಕಾಡ್ಗಿಚ್ಚಿನಲ್ಲಿ ಈ ಮೂವರು ವೃದ್ಧರೂ ಮರಣಿಸುತ್ತಾರೆ. ಅವರ ಸಂಕಟಗಳಿಗೆ ಶಾಶ್ವತ ಪರಿಹಾರ ದೊರಕುತ್ತದೆ.
ಗಾಂಧಾರಿಯ ಜೀವನವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಅವಳು ಒಬ್ಬ ದೊಡ್ಡ ಪತಿವ್ರತೆ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಈ ವಿಷಯನ್ನು ವ್ಯಾಸರೇ ಒಮ್ಮೆ ಗಮನಿಸಿ ಹೇಳುತ್ತಾರೆ. ಮತ್ತು ಆಕೆಯು ಧೃತರಾಷ್ಟ್ರನಂತೆ ಪಕ್ಷಪಾತಿಯಲ್ಲ. ತನ್ನ ಮಕ್ಕಳ ಮತ್ತು ಪಾಂಡವರ ವಿಷಯದಲ್ಲಿ ಎಂದೂ ಭೇದಭಾವವನ್ನು ತೋರಿದವಳಲ್ಲ. ತಮ್ಮ ಮಕ್ಕಳು ಒಳ್ಳೆಯ ದಾರಿ ಹಿಡಿಯಲಿ, ಒಳ್ಳೆ ಬಾಳನ್ನು ಬಾಳಲಿ ಎಂದೂ ಸದಾ ಆಶಿಸುವ ತಾಯಿಯಾಗಿ ಆ ಕನಸು ನನಸಾಗದೆ ಜೀವನವನ್ನು ಮುಗಿಸಿಬಿಟ್ಟಳು. ಬಹುಶಃ ಮುಂದಿನ ಜನ್ಮದಲ್ಲಿ ಅವಳ ಆಶಯ ತೀರಿರಬಹುದು. ಇಂದು ಇಂತಹ ಎಷ್ಟೋ ತಾಯಂದಿರು ತಮ್ಮ ಮಕ್ಕಳ ಏಳಿಗೆಯ ಕನಸನ್ನು ಕಾಣುತ್ತ ಅವರಿಗಾಗಿ ಶ್ರಮಿಸುತ್ತಾರೆ, ಅನಂತರ ಆ ಮಕ್ಕಳೇ ಆಕೆಯನ್ನು ತ್ಯಜಿಸುತ್ತಾರೆ. ಇದು ಕಲಿಯುಗದ ಕಥೆಯಾಗುತ್ತಿದೆ. ಇಂತಹ ಕಥೆಗಳು ಕೊನೆಗಾಣಬೇಕು. ಮಕ್ಕಳ ಏಳಿಗೆಗೆ ಜೀವವನ್ನು ತೇದವರಿಗೆ ನ್ಯಾಯವು ಸಿಗಬೇಕು.
(ಈಲೇಖನವನ್ನು ಎಸ್. ಕೃಷ್ಣಮೂರ್ತಿಯವರ (ಕೃಷ್ಣಕವಿ) ʼಪುರಾಣಪ್ರಸಿದ್ಧ ಪಾತ್ರಗಳುʼ ಎನ್ನುವ ಕೃತಿಯಿಂದ ಆಯ್ದುಕೊಳ್ಳಲಾಗಿದೆ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!